ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮೀಯರ ಬಿರುಮಾತಿನ ಪ್ರಯೋಜನ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಆರ್ಯ ಸಮಾಜದ ಪ್ರಮುಖ ಕಾರ್ಯಕರ್ತರಲ್ಲಿ ಸ್ವಾಮಿ ದರ್ಶನಾನಂದರು ಪ್ರಮುಖರು. ಅವರು ಅತ್ಯಂತ ಉದಾರ ಸ್ವಭಾವದವರು, ಸ್ನೇಹಮಯಿ. ಆದರೆ ಅವರು ತಮ್ಮ ಮನಸ್ಸಿನ ಭಾವನೆಗಳನ್ನು ನೇರವಾಗಿ ಹೇಳುವವರು. ಕೆಲವೊಮ್ಮೆ ಆ ಮಾತುಗಳು ಅವರನ್ನು ಚೆನ್ನಾಗಿ ಬಲ್ಲದಿದ್ದವರಿಗೆ ಸ್ವಲ್ಪ ಕಠಿಣವೇ ಎನ್ನಿಸಬಹುದಿತ್ತು.

ಒಂದು ಬಾರಿ ಯಾವುದೋ ದೊಡ್ಡ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಸ್ವಾಮಿ ದರ್ಶನಾನಂದರು ಕಾಶಿಗೆ ಬಂದಿದ್ದರು. ಅಲ್ಲಿ ಅನೇಕ ಹಿರಿಯರ, ಕಾರ್ಯಕರ್ತರ ಭೆಟ್ಟಿಯಾಯಿತು, ಚರ್ಚೆಗಳು ನಡೆದವು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಇನ್ನೊಬ್ಬ ಹಿರಿಯರಾದ ಸ್ವಾಮಿ ಶ್ರದ್ಧಾನಂದರೂ ಬಂದಿದ್ದರು.

ಬಹಳ ದಿನಗಳ ನಂತರ ಇಬ್ಬರೂ ಭೆಟ್ಟಿಯಾದದ್ದರಿಂದ ದೀರ್ಘಕಾಲದ ವರೆಗೆ ಮಾತುಕತೆಗಳು ನಡೆದವು. ಆದರೆ ಯಾವುದೋ ಒಂದು ವಿಷಯದ ಮೇಲೆ ಭಿನ್ನಾಭಿಪ್ರಾಯ ಬಂದಿತು. ಮಾತುಗಳು ಬಿಸಿಯಾದವು.

ಸುತ್ತಮುತ್ತಲಿದ್ದ ಜನ ಇದನ್ನು ಗಮನಿಸಿದರು. ಆ ಹೊತ್ತಿನಲ್ಲಿ ಸ್ವಾಮಿ ದರ್ಶನಾನಂದರ ಒಂದು ಮಾತು ಶ್ರದ್ಧಾನಂದರನ್ನು ಕೆರಳಿಸಿತು. ಅವರಿಗೆ ಕೋಪ ಬಂತು. ಕಣ್ಣಿನಲ್ಲಿ ಕೆಂಪು ಕಾಣಿಸಿತು. ಅವರು ದರ್ಶನಾನಂದರನ್ನು ಕುರಿತು ಬಿರುಸು ಮಾತುಗಳ ಬಾಣಗಳನ್ನೇ ಬಿಟ್ಟರು. ಅಷ್ಟು ಮೃದುಭಾಷಿಗಳೂ, ಎಂದಿಗೂ ಯಾರ ಮನಸ್ಸನ್ನು ನೋಯಿಸದ ಶ್ರದ್ಧಾನಂದರು ಈ ರೀತಿ ಒರಟು ಮಾತನಾಡಿದ್ದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಅದರಲ್ಲೂ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಸ್ವಾಮಿ ದರ್ಶನಾನಂದರಿಗೆ ಈ ರೀತಿ ನುಡಿದದ್ದು ಅನುಚಿತ ಎನ್ನಿಸಿತು. ದರ್ಶನಾನಂದರೂ ಕೋಪದಿಂದ ಪ್ರತಿ ನುಡಿಯಬಹುದೆಂದು ಭಾವಿಸಿದರು.

ಆದರೆ ಅಂಥಹದ್ದೇನೂ ಆಗಲಿಲ್ಲ. ಮರುದಿನ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ನಡೆದರು. ಶ್ರದ್ಧಾನಂದರು ತಮ್ಮ ಸ್ಥಳಕ್ಕೆ ಸೇರಿದ ಮೇಲೆ ಅವರಿಗೆ ಬಹಳ ಕಸಿವಿಸಿಯಾಯಿತು. ತಾವು ಅಂತಹ ಹಿರಿಯರಿಗೆ ಅಷ್ಟು ಜನರ ಮುಂದೆ ಮಾತನಾಡಿದ್ದು ಉದ್ಧಟತನವಾಯಿತೆಂದು ಭಾಸವಾಯಿತು. ತಕ್ಷಣವೇ ಅವರೊಂದು ದೀರ್ಘವಾದ ಪತ್ರ ಬರೆದು ಸ್ವಾಮಿ ದರ್ಶನಾನಂದರಿಂದ ಕ್ಷಮೆ ಯಾಚಿಸಿದರು.

ಅದನ್ನು ಓದಿ ದರ್ಶನಾನಂದರು ಮುಗುಳ್ನಕ್ಕು ಮಾರುತ್ತರವನ್ನು ಹೀಗೆ ಬರೆದರು,  `ಪರಮ ಮಿತ್ರರಾದ ಶ್ರದ್ಧಾನಂದರೇ, ತಾವು ಆಡಿದ ಮಾತಿನಿಂದ ನನಗೆ ಯಾವ ಬೇಸರವೂ ಆಗಿಲ್ಲ. ಭತ್ತವನ್ನು ಚೆನ್ನಾಗಿ ಬಡಿದರೆ ತಾನೇ ಹೊಟ್ಟು ಹಾರಿ ಶುದ್ಧವಾದ ಅಕ್ಕಿ ದೊರಕುವುದು? ಹಾಲನ್ನು ಚೆನ್ನಾಗಿ ಮಥಿಸಿದರೆ ತಾನೇ ಶುದ್ಧವಾದ, ಪುಷ್ಟಿಯಾದ ತುಪ್ಪ ದೊರಕುವುದು?

ಕಪ್ಪು ಎಳ್ಳನ್ನು ನೆನೆಸಿ ಕಲ್ಲ ಮೇಲೆ ಹಾಕಿ ಉಜ್ಜಿದಾಗ ತಾನೇ ಮೇಲಿನ ಸಿಪ್ಪೆ ಹೋಗಿ ಹೊಳೆಯುವ ಬಿಳಿ ಎಳ್ಳು ದೊರಕುವುದು? ಹಾಗೆಯೇ ತಮ್ಮಂತಹ ಆತ್ಮೀಯ, ಸಜ್ಜನ ಮಿತ್ರರ ಗಟ್ಟಿಯಾದ ಮಾತಿನಿಂದ ನನ್ನ ಚಿಂತನೆಯಲ್ಲಿಯ ಕಸರು ತೊಳೆದು ಹೋಗಿ ಮನಸ್ಸು ಶುದ್ಧಿಯಾಯಿತು. ಅದಕ್ಕೆ ತಮಗೆ ನನ್ನ ಕೃತಜ್ಞತೆಗಳು. ನನಗೆ ಸಾರ್ಥಕತೆ ದೊರಕಿತು.~

ಇದು ಶ್ರೇಷ್ಠರ ಗುಣ. ಆತ್ಮೀಯರಾದವರ ಬಿರುಮಾತು ಕೂಡ ಮನಸ್ಸನ್ನು ಕೆಡಿಸದೇ ಸಂಪನ್ನವಾಗಿಸುತ್ತದೆ. ಆದರೆ ಅದನ್ನು ಅರ್ಥಮಾಡಿಕೊಳ್ಳುವ ತಾಳ್ಮೆ, ಸಂಯಮ ಬೇಕು. ಅದಿಲ್ಲದೇ ಹೋದಾಗ ಪ್ರಯೋಜನಕಾರಿಯಾದ ಮಾತು ಕೂಡ ಅಪಥ್ಯವಾಗಿ ಮನಸ್ಸು ಒಡೆದು ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT