ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಮತ್ತು ವಾಸ್ತವ

Last Updated 7 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ದಾರಿ ಸವೆದಷ್ಟೂ ದೂರ ಸರಿಯುವಂತೆ ಭಾಸವಾಗುವ ಊರಿನ ಹೆಸರು ಆದರ್ಶ. ಅದು ಮುಟ್ಟಲಾಗದ ಗುರಿ; ತಲುಪಲಾಗದ ಊರು. ಕೆಲವರು ಆದರ್ಶದ ಹಟಕ್ಕೆ ಬಿದ್ದು ದುರ್ಗಮ ಹಾದಿಯಲ್ಲಿ ಪ್ರಯಾಣಿಸಲು ಹೊರಡುತ್ತಾರೆ. ಈ ಕಲ್ಲುಮುಳ್ಳಿನ ಹಾದಿಯಲ್ಲಿ ಬೆಂದು ಬಸವಳಿಯುತ್ತಾರೆ. ಅದಕ್ಕಾಗಿ ವರ್ತಮಾನದ ಕ್ಷೇಮದ ನೆಲೆಯನ್ನು ಕೂಡಾ ತ್ಯಜಿಸುತ್ತಾರೆ. ಆದರ್ಶವಾದಿಯೊಬ್ಬ ತನ್ನ ಗುರಿ ಹುಡುಕಿ ಎಷ್ಟು ದೂರ ಪಯಣಿಸಿದ ಎಂದು ಚರ್ಚಿಸಬಹುದೇ ಹೊರತು ಅವನು ತಲುಪಿದ ಬಗ್ಗೆ ಖಾತರಿ ಇಲ್ಲ. ಆದರ್ಶವೆಂಬ ಸತ್ಯಕ್ಕೆ ಎಷ್ಟು ಹತ್ತಿರವಿದ್ದ ಎಂಬುದಷ್ಟೇ ಲೆಕ್ಕಾಚಾರ.

ಇನ್ನೇನು ಆದರ್ಶದ ಪೂರ್ಣ ಸ್ಥಿತಿಯನ್ನು ಮುಟ್ಟಿದ ಅನ್ನುವಷ್ಟರಲ್ಲಿ ಅವನ ಬದುಕಿನ ಯಾತ್ರೆ ಮುಗಿದಿರುತ್ತದೆ. ಆ ಜೀವಕ್ಕೆ ಶೇಷವಾಗಿ ದಕ್ಕುವುದೊಂದೇ ಸಮಾಧಾನ; ಅದು, ನಾನು ಇರುವಷ್ಟು ದಿನ ಯಾವುದರತ್ತ ಪಯಣಿಸುತ್ತಿದ್ದೆ; ಏನನ್ನು ಹುಡುಕಿ ಹೊರಟಿದ್ದೆ; ಯಾವುದನ್ನು ಪ್ರತಿನಿಧಿಸುತ್ತಿದ್ದೆ ಎಂದು. ಈ ಹುಡುಕಾಟವನ್ನು ಸತ್ಯದ, ಸಾಕ್ಷಾತ್ಕಾರದ, ಮುಕ್ತಿಯ, ಸಾಧನೆಯ, ಧನ್ಯತೆಯ ಅನ್ವೇಷಣೆ ಇತ್ಯಾದಿ ಕಠಿಣ ಪದಗಳಿಂದ ಕರೆಯುತ್ತಾರೆ. ನಿತ್ಯದ ಗೋಳಿನಲ್ಲಿ ಮೂಗುಬ್ಬಸಪಡುವ ಸಾಮಾನ್ಯ ಮನುಷ್ಯ ಈ ಪದಗಳನ್ನು ಕೇಳಿದ ಕೂಡಲೇ ಓಟ ಕೀಳುತ್ತಾನೆ. ಇವು ತನಗೆ ಆಗಿ ಬರುವುದಿಲ್ಲ, ಇವುಗಳಿಂದ ನನ್ನ ಸುಖಕ್ಕೆ ಸಂಚಕಾರ ಎಂದು ದೂರ ಸರಿಯುತ್ತಾನೆ.

ಇವುಗಳನ್ನು ಅಪ್ಪಟ ಲೌಕಿಕ ನೆಲೆಯಲ್ಲೂ, ಅರ್ಥವಾಗದ ಅಲೌಕಿಕ ನೆಲೆಯಲ್ಲಿಯೂ ಅರ್ಥೈಸಬಹುದು. ಅಲೌಕಿಕತೆಯ ಬಣ್ಣ ಬಳಿದ ಹುಸಿ ಮತ್ತು ಹಸಿ ಲೌಕಿಕ ಆದರ್ಶಗಳಿವೆ. ಲೌಕಿಕರಂತೆ ಕಾಣುವ ಅಮಾಯಕರಲ್ಲಿ ಆಳವಾದ ಅಲೌಕಿಕ ಆದರ್ಶದ ಹುಡುಕಾಟವಿರಬಹುದು. ಅರಮನೆಯಿಂದಲೂ, ಗುಡಿಸಲಿನಿಂದಲೂ ಆದರ್ಶ ಹುಡುಕಿ ಹೊರಟವರಿದ್ದಾರೆ. ಹೀಗೆ ಹೊರಟವನಿಗೂ ಸಾವುಂಟು, ಸೋಲುಂಟು. ಆದರೆ ಆದರ್ಶಗಳಿಗೆ ಸಾವಿಲ್ಲ. ಅವು ಇನ್ನೊಬ್ಬನ ಖಾಲಿ ಹೆಗಲ ಮೇಲೇರಿ ಪಯಣ ಮುಂದುವರಿಸುತ್ತವೆ. ಇದನ್ನು ತಿಳಿಯದೆ ನಾವು ಆದರ್ಶಗಳಿಗೆ ಸೋಲಾಯಿತು ಎಂದು ಪಲಾಯನವಾದಿಗಳಂತೆ ಮಾತನಾಡುತ್ತೇವೆ. ಸೋತವನು ಮನುಷ್ಯ ಜೀವಿಯೇ ಹೊರತು ಸಿದ್ಧಾಂತಗಳಲ್ಲ. ಕಾಲದ ಅಗತ್ಯಕ್ಕೆ ತಕ್ಕಂತೆ ಅವು ಹೊಸ ಪರಿವೇಷ ಧರಿಸಿ ಹೊಸ ಮನುಷ್ಯರ ಹೆಗಲೇರಲು ಅಣಿಯಾಗುತ್ತವೆ.

ಆದರ್ಶ ಮತ್ತು ವಾಸ್ತವಗಳೆರಡೂ ವಿರುದ್ಧ ದಿಕ್ಕಿನ ಬಿಂದುಗಳು. ತಾನಿರುವ ವರ್ತಮಾನ ವಾಸ್ತವ. ತಲುಪಬೇಕೆನ್ನುವ ಭವಿಷ್ಯವು ಆದರ್ಶ. ಒಂದೇ ಒಂದು ಹೆಜ್ಜೆಯನ್ನು ಎತ್ತಿಡಲಾರೆ ಅನ್ನುವ ಆಲಸಿಗೆ ಆದರ್ಶವು ಅಪರಿಚಿತ. ಅವನ ವಾಸ್ತವದ ಸೈಟು ಕಿರಿದು. ಅಲ್ಲೇ ಅಡುಗೆ ಮನೆ, ಬಚ್ಚಲುಮನೆ ಕಟ್ಟಿಸಿಕೊಂಡು ಸುಖ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಆಲಯವನ್ನು ದಾಟಿ ಬಯಲಿಗೆ ಬರಲು ಸಣ್ಣ ಕುತೂಹಲವಾದರೂ ಬೇಕು. ಕಿಟಕಿ-ಬಾಗಿಲಿನ ಕಿಂಡಿಯಿಂದ ನೋಡುವವನಿಗೆ ಬಯಲು ಭಯ ಹುಟ್ಟಿಸುತ್ತದೆ. ಕಾರಣ ಬಯಲು ಎಂದರೆ ಶೂನ್ಯತೆ. ಆದರೆ ಎಲ್ಲವನ್ನೂ ಸೃಷ್ಟಿಮಾಡಬಲ್ಲ ಶಕ್ತಿ, ಶೂನ್ಯತೆಯ ಬಯಲಿಗಿದೆ. ಅದಕ್ಕಾಗಿ ಮನುಷ್ಯ ಬಂಡವಾಳ ತೊಡಗಿಸಬೇಕಾಗುತ್ತದೆ. ಆದರೆ ಶೂನ್ಯದ ಮೇಲೆ ಬಂಡವಾಳ ಹೂಡಲು ನಾವು ಸುತಾರಾಂ ತಯಾರಿಲ್ಲ. ತಮ್ಮ ದೇಹ, ಮನಸ್ಸಿಗೆ ಅಪಾರ ಶಕ್ತಿ ಸಾಧ್ಯತೆ ಇದ್ದರೂ ಈ ಮೂಲ ಬಂಡವಾಳದ ಮೇಲೆ ನಂಬಿಕೆ ಇರುವುದಿಲ್ಲ. ಜೀವಮಾನವಿಡೀ ಆ ಬಂಡವಾಳದ ನಿಜಮೌಲ್ಯವೇ ತಿಳಿದಿರುವುದಿಲ್ಲ. ಇದಕ್ಕೆ ಆಲಸ್ಯ ಮಾತ್ರ ಕಾರಣವಲ್ಲ. ಇರುವ ನೆಮ್ಮದಿ ಕೂಡಾ ಕಳೆದುಹೋದೀತೆಂಬ ಅಂಜಿಕೆ.

ಅಂಜಿಕೆ ಮತ್ತು ಆಲಸ್ಯಗಳು ಆದರ್ಶದ ಶತ್ರುಗಳು. ಅವು ಪಿಳ್ಳೆ ನೆವಗಳೂ ಕೂಡಾ. ಆದರ್ಶದ ಕನಸುಗಳು ಕೈ ಬೀಸಿ ಕರೆದಾಗಲೆಲ್ಲಾ ಅವು ಹಿಂದಕ್ಕೆ ಜಗ್ಗುತ್ತವೆ. ಕ್ರಿಯಾಶೀಲತೆ, ದೂರದೃಷ್ಟಿ, ಹಟಮಾರಿತನ, ಕಠಿಣ ಪರಿಶ್ರಮ, ಉತ್ಸಾಹ, ಕೊಂಚ ಮಟ್ಟಿನ ಹುಂಬತನ ಇವುಗಳೆಲ್ಲ ಆದರ್ಶದ ಸನ್ಮಿತ್ರರು. ಈ ಗುಣಗಳು ಎಷ್ಟು ಗಟ್ಟಿಯಾಗಿ ವ್ಯಕ್ತಿಯನ್ನು ಆವರಿಸಿಕೊಂಡಿರುತ್ತವೋ ಅಷ್ಟು ದೃಢವಾಗಿ ಅವನು ಆದರ್ಶಗಳತ್ತ ಹೆಜ್ಜೆ ಇರಿಸಬಲ್ಲ. ಕೆಲವರು ಕಂಫರ್ಟ್ ಝೋನ್‌ನ ಅಂಚಿನವರೆಗೆ ಮಾತ್ರ ಬರಬಲ್ಲರು. ನಡುರಾತ್ರಿ ಎದ್ದು ಸತ್ಯವನ್ನು ಹುಡುಕಿ ಹೋಗಬೇಕೆಂದು ಅಲಾರಾಂ ಇಡುತ್ತಾರೆ. ಆದರೆ ಅಲಾರಾಂ ಬಡಿದುಕೊಂಡಾಗ ಅದರ ತಲೆ ಮೇಲೆ ಕುಟ್ಟಿ ಮುಸುಗಿಕ್ಕಿ ಮಲಗುತ್ತಾರೆ. ಮುಂದಿನ ಯಾತ್ರೆ ನನ್ನಿಂದಾಗದು, ಎಂಬ ವಾಸ್ತವದ ವರ್ತಮಾನಕ್ಕೆ ಮರಳುತ್ತಾರೆ.

ಪರಿಸ್ಥಿತಿ ಸರಿಯಾಗಿದ್ದರೆ ನಾನೂ ಒಳ್ಳೆಯವನಾಗುತ್ತಿದ್ದೆ ಎಂದು ಗೊಣಗುತ್ತಾರೆ. ಅವರೇ ಪರಿಸ್ಥಿತಿ ಸರಿಯಾಗಿಲ್ಲದಂತೆ ನೋಡಿಕೊಳ್ಳುತ್ತಾರೆ. ಒಳ್ಳೆಯತನ ಎಂಬುದು ಸಾಪೇಕ್ಷ. ಒಳ್ಳೆಯವನಾಗಬೇಕೆಂಬ ಆದರ್ಶ ಅತ್ಯುನ್ನತವಾದದ್ದು. ಪೂರ್ತಿ ಒಳ್ಳೆಯವನಾಗಲು ಸಾಧ್ಯವಿರದಿದ್ದರೂ ಒಳ್ಳೆಯವನಾಗಲು ಪ್ರಯತ್ನಿಸುವುದು ಸಾಧ್ಯ. ಅಂಥ ಪ್ರಯತ್ನಗಳ ಮೊತ್ತವೇ ಬದುಕು. ಕೆಲವರು ಪ್ರಾಮಾಣಿಕತೆ ಎಂಬ ಆದರ್ಶವಾದದ ಹುಸಿ ಭಾರ ಹೊತ್ತಂತೆ ನಟಿಸುತ್ತಲೇ ವೃತ್ತಿಗಾಗಿ ಅಪ್ರಮಾಣಿಕತೆ ಮತ್ತು ಲಂಚಗುಳಿತನದ ಅಪಾರ ಸಾಧ್ಯತೆ ಇರುವ ಕ್ಷೇತ್ರ ಅಥವಾ ಇಲಾಖೆಯನ್ನೇ ಆರಿಸಿಕೊಳ್ಳುತ್ತಾರೆ. ಯಾಕೆಂದು ಕೇಳಿದರೆ ಜನಸೇವೆಗಾಗಿ ಎಂಬ ಉತ್ತರ ರೆಡಿ. ನಿರೀಕ್ಷಿಸಿದ್ದಂತೆ ಭ್ರಷ್ಟರಾಗುತ್ತಾರೆ.

ಈ ಕ್ಷೇತ್ರದಲ್ಲಿ, ಇಲಾಖೆಯಲ್ಲಿ ಒಳ್ಳೆಯವನಾಗಿ ಉಳಿಯಲು ಸಾಧ್ಯವೇ ಇಲ್ಲ ಎಂಬ ಷರಾ ಬರೆದು ಸಮಾಧಾನಪಟ್ಟುಕೊಳ್ಳುತ್ತಾರೆ. ಮನುಷ್ಯನ ಮೂಲಭೂತ ಒಳ್ಳೆಯತನದಲ್ಲಿ ನಂಬಿಕೆ ಇದ್ದರೆ ಮಾತ್ರ ಆದರ್ಶವಂತನಾಗಲು ಸಾಧ್ಯ. ಒಳ್ಳೆಯತನ ಅಂದರೆ ಮನುಷ್ಯ ಮನುಷ್ಯನಿಗೆ ಕೊಡಬಲ್ಲ ಪ್ರೀತಿ. ಧರ್ಮಗಳು ಏಕೆ ಗೊಡ್ಡು ಬೀಳುತ್ತವೆ? ಉತ್ತರ ಸುಲಭ. ಅವು ಪ್ರೀತಿ ಮತ್ತು ಮಾನವೀಯತೆಯನ್ನು ತೊರೆದು ಬರಿಯ ಗೊಡ್ಡು ಆಚರಣೆಗಿಳಿದು ಆದರ್ಶಗಳ ಅನುಷ್ಠಾನದಿಂದ ದೂರ ಉಳಿಯುವುದರಿಂದ. ಈಗ ಯಾರನ್ನಾದರೂ ಧಾರ್ಮಿಕ ಮನುಷ್ಯ ಎಂದು ತೋರಿದರೆ ಅವನು ಅಪಾಯಕಾರಿ ಯಾದ, ಕ್ರೂರಿಯಾದ ಕೆಟ್ಟ ಮನುಷ್ಯ ಎಂಬ ಅರ್ಥ ಧ್ವನಿಸುವಂತಾಗಿದೆ. ಲಂಚಕೋರನೊಬ್ಬ ಧಾರ್ಮಿಕ ಮನುಷ್ಯನಾಗಿರುವುದೇ ಹೆಚ್ಚು. ತಿಪ್ಪೆಯ ವಾಸನೆಯನ್ನು ಮಂಕರಿಯಿಂದ ಮುಚ್ಚುವವನಂತೆ ಭ್ರಷ್ಟ ಮನುಷ್ಯ ಧರ್ಮ, ದೇವರುಗಳನ್ನು ಹೊರಗವಚಗಳಾಗಿ ಬಳಸುತ್ತಾನೆ. ಒಂದು ಧರ್ಮದ ಮೂಲ ಆದರ್ಶವನ್ನು ಪ್ರಜ್ಞಾಪೂರ್ವಕವಾಗಿ ಬದಿಗಿಟ್ಟು ವ್ಯಾವಹಾರಿಕ ವಾಸ್ತವದಲ್ಲಿ ತೊಡಗಿಕೊಂಡವರು ಇತ್ತೀಚಿಗೆ ಎಲ್ಲ ಧರ್ಮಗಳಲ್ಲೂ ಹೆಚ್ಚುತ್ತಿದ್ದಾರೆ.

ಬದುಕಿನ ಲೋಲಕವು ಆದರ್ಶ ಮತ್ತು ವಾಸ್ತವ ಎಂಬೆರಡು ಬಿಂದುಗಳ ನಡುವೆ ತೂಗುತ್ತಿರುತ್ತದೆ. ಒಮ್ಮೆ ಅತ್ತ, ಒಮ್ಮೆ ಇತ್ತ. ತಾರುಣ್ಯದಲ್ಲಿ ಅತಿ ಆದರ್ಶವಾದದ ಅಮಲಿನಲ್ಲಿ ತಲೆದೂಗುವ ಅನೇಕರು ಮದುವೆಯಾದ ಕೂಡಲೇ ಅಪ್ಪಟ ವಾಸ್ತವವಾದಿಗಳಾಗಿ ಕಳೆದು ಹೋಗುತ್ತಾರೆ. ಮತ್ತೆ ಕೆಲವರು ತಾರುಣ್ಯದಲ್ಲಿ ವಿಪರೀತ ಜೀವನಾಸಕ್ತರಾಗಿ, ಉತ್ತರಾರ್ಧದಲ್ಲಿ, ಇಳಿಗಾಲದಲ್ಲಿ ಸೇವಾ ಆದರ್ಶವೊಂದಕ್ಕೆ ಅಂಟಿಕೊಳ್ಳುತ್ತಾರೆ. ಬದುಕಿನ ಯಾವ ಕಾಲಘಟ್ಟದಲ್ಲಿ ಎಂಥ ಬದಲಾವಣೆಗಳಾಗುತ್ತವೆ ಎಂದು ಹೇಳುವುದು ಕಷ್ಟ. ಡಕಾಯಿತನೊಬ್ಬ ಸಂತನಾಗುತ್ತಾನೆ. ಪುಕ್ಕಲನೊಬ್ಬ ರೌಡಿಯಾಗುತ್ತಾನೆ. ಬೇಡನೊಬ್ಬ ಮಹಾಕಾವ್ಯ ಬರೆಯುತ್ತಾನೆ. ಕಮ್ಯುನಿಸ್ಟನೊಬ್ಬ ಧಾರ್ಮಿಕನಾಗುತ್ತಾನೆ. ನಾಸ್ತಿಕನೊಬ್ಬ ಆಸ್ತಿಕನಾಗುತ್ತಾನೆ. ಸಿರಿವಂತ ಕೃಪಣನೊಬ್ಬ ವೈರಾಗ್ಯ ತಾಳಿ ತಂಬೂರಿ ಹಿಡಿದು ಹೊರಟುಬಿಡುತ್ತಾನೆ. ಬಲದಲ್ಲಿದ್ದವನು ಎಡಕ್ಕೂ, ಎಡದಲ್ಲಿದ್ದವನು ಬಲಕ್ಕೂ ವಾಲುತ್ತಾನೆ. ಇವೆಲ್ಲ ಆದರ್ಶಗಳ ಕಣ್ಣಾಮುಚ್ಚಾಲೆ. ಈ ಕ್ಷಣಕ್ಕೆ ಇದು ಸರಿ. ಆ ಕ್ಷಣಕ್ಕೆ ಅದು ಸರಿ. ಎಲ್ಲಾ ಕಾಲಕ್ಕೂ ಸರಿಯಾದ್ದು ಒಂದೇ ಎಂಬುದು ಇದೆಯೋ? ಇಲ್ಲವೋ? ಇರಬೇಕೋ ? ಚರ್ಚಾಸ್ಪದ. ಆದರ್ಶವೆಂಬುದು ಅನಾಗತ. ಅದು ಒದಗಿ ಬಂದಾಗ ಅತ್ತಿತ್ತ ನೋಡದಂತೆ ತನಗೆ ಅಂಟಿಕೊಳ್ಳುವಂತೆ ಮಾಡುವ ಉಪಾದಾನ.

ಆದರ್ಶ ಶುಷ್ಕಗೊಳ್ಳುವುದು ಉಪದೇಶಾತ್ಮಕವಾದಾಗ. ಜೀವ ತುಂಬಿಕೊಳ್ಳುವುದು ಅದನ್ನು ಅನುಸರಿಸಿದಾಗ. ಅಲ್ಲಿನ ಚೆಗುವಾರ, ಮಂಡೇಲಾ, ಲಿಂಕನ್ ಇಲ್ಲಿನ ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ ಜೀವಂತವಾಗಿರುವುದು ಅವರ ಉಪದೇಶದಿಂದಲ್ಲ; ಆದರ್ಶಗಳನ್ನು ಅವರು ಅನುಸರಿಸಿ ನಡೆದದ್ದರಿಂದ. ಸ್ವಾತಂತ್ರ್ಯಪೂರ್ವದಲ್ಲಿ ಆದರ್ಶ ಎಂಬುದು ನಡೆಯಲ್ಲೂ ನುಡಿಯಲ್ಲೂ ಉತ್ಕರ್ಷವಾಗಿತ್ತು. ಸಾಹಿತ್ಯ, ನಾಟಕ ಮತ್ತು ಸಿನಿಮಾಗಳು ಆದರ್ಶಮಯ ಪಾತ್ರಗಳಿಂದ, ಮಾತುಗಳಿಂದ ತುಂಬಿ ತುಳುಕುತ್ತಿದ್ದವು. ಕುವೆಂಪು ಸೃಷ್ಟಿಸಿದ ಹೂವಯ್ಯ ಎಂದೂ ಮರೆಯಲಾಗದ, ಇಂದಿನವರ ಕಲ್ಪನೆಗೂ ಸಿಗದ, ವ್ಯಕ್ತಿಯೊಬ್ಬ ಅಂಥ ಪರಿಸರದಲ್ಲಿ ಹೀಗಿರಲು ಸಾಧ್ಯವೇ ಎಂದು ಅನುಮಾನ ಹುಟ್ಟಿಸುವ ಆದರ್ಶ. ಪ್ರಸಿದ್ಧ ಲೇಖಕ, ವಿಮರ್ಶಕ ಪ್ರೊ. ಎನ್. ಬೋರಲಿಂಗಯ್ಯ ನಲವತ್ಮೂರು ವರ್ಷಗಳ ಹಿಂದೆ ಬರೆದಿರುವ ‘ಕಾನೂರು ಹೆಗ್ಗಡಿತಿ: ವಿವೇಚನೆ’ ಎಂಬ ವಿಮರ್ಶಾಕೃತಿಯಲ್ಲಿ ಹೂವಯ್ಯ ಯಾವುದೇ ಪಾತ್ರದ ಮೇಲೂ ತನ್ನ ಆದರ್ಶಗಳನ್ನು ಹೇರುವುದಕ್ಕಾಗಲೀ ಮತ್ತಾವುದೇ ಬಗೆಯ ಉಪದೇಶಗಳನ್ನು ಕೊಡುವುದಕ್ಕಾಗಲೀ ತೊಡಗುವುದಿಲ್ಲ. ಹಾಗೆ ತೊಡಗುವ ಮನೋಧರ್ಮ ಹೂವಯ್ಯನದಾಗಿದ್ದ ಪಕ್ಷದಲ್ಲಿ ರಾಮಯ್ಯನ ದುರಂತ ಒಂದು ದೃಷ್ಟಿಯಿಂದ ಅಸಂಭವವಾಗುತ್ತಿತ್ತೇನೋ. ಹೂವಯ್ಯನ ನಿಕಟವರ್ತಿಗಳ ಮೇಲೆ ಅವನ ವ್ಯಕ್ತಿತ್ವದ ಪ್ರಭಾವವಿದೆಯೇ ಹೊರತು ಆದರ್ಶದ ಉಪದೇಶದ ಛಾಯೆಯೂ ಇಲ್ಲ.

ಆದರ್ಶಶೀಲತೆ ಮತ್ತು ಭಾವುಕತೆ ಹೂವಯ್ಯನ ವ್ಯಕ್ತಿತ್ವದ ವಿಶಿಷ್ಟ ಲಕ್ಷಣಗಳಾಗಿದ್ದು, ಬರಿಯ ಪಾತ್ರಗತವಾಗಿ ಬರುತ್ತವೆಯೇ ಹೊರತು ರೂಢಿಗಳ ನಂಬಿಕೆಯ ಮೇಲೆ ನಿಂತಿರುವ ಸಾಮಾಜಿಕ ವ್ಯವಹಾರಗಳನ್ನು ಸುಧಾರಿಸುವ ಮಟ್ಟದಲ್ಲಿ ಎದ್ದುಕಾಣುವಂತೆ ಕ್ರಿಯಾಶೀಲವಾಗಿರುವುದಿಲ್ಲ ಎನ್ನುತ್ತಾರೆ. ಹೂವಯ್ಯ ಆದರ್ಶಗಳನ್ನು ಜೀವಿಸುತ್ತಾನೆ. ಆದರೆ ಉಪದೇಶಿಸುವುದಿಲ್ಲ. ಇದು ಆದರ್ಶದ ವಿಸ್ತರಣೆ. ಹಳ್ಳಿಗಾಡಿನಲ್ಲಿ, ಅಗೋಚರ ಕೊಂಪೆಗಳಲ್ಲಿ ತಮ್ಮ ಪಾಡಿಗೆ ತಾವು ಒಂದು ಘನವಾದ ಆದರ್ಶವನ್ನು ಧ್ಯಾನಿಸಿಕೊಂಡು ಬದುಕುವ ಅನೇಕರಿದ್ದಾರೆ. ಖ್ಯಾತನಾಮರಷ್ಟೇ ಈ ಸಮಾಜಕ್ಕೆ ಇವರೂ ಮುಖ್ಯವಾದವರು.

ಅವರು ಪದ್ಮಶ್ರೀ, ಪದ್ಮಭೂಷಣರಾಗಿರುವುದಿಲ್ಲ. ಗೌರವ ಡಾಕ್ಟರೇಟುಗಳನ್ನು ನೇತುಹಾಕಿಕೊಂಡಿರುವುದಿಲ್ಲ. ಆದರೆ ಇರುವ ಕಡೆ ಮರಿಸೂರ್ಯರಂತೆ ಬೆಳಗುತ್ತಾ ಅನೇಕರನ್ನು ಪ್ರಭಾವಿಸುತ್ತಿರುತ್ತಾರೆ. ನಮ್ಮ ದೇಶ ನೈತಿಕ ಎಚ್ಚರದಿಂದ ಸೌಹಾರ್ದಯುತವಾಗಿ ಬಾಳುತ್ತಿದ್ದರೆ ಅದಕ್ಕೆ ದೊಡ್ಡವರು ಮಾತ್ರ ಕಾರಣರಲ್ಲ ; ತೆರೆಯ ಮರೆಯಲ್ಲಿ ಸಜ್ಜನರಾಗಿ ಬದುಕುತ್ತಿರುವ ಸಹಸ್ರಾರು ಅನಾಮಿಕರು. ಕೋಟಲೆಗಳನ್ನು ನುಂಗಿಕೊಂಡು ತಮ್ಮ ತಾಳ್ಮೆ, ಔದಾರ್ಯ, ತೃಪ್ತಭಾವ ಮತ್ತು ಆತ್ಮಸಂತೋಷಗಳಿಂದ ಎಲ್ಲರನ್ನೂ ಮುನ್ನಡೆಸುವವರು.

ನಾನು ಚಿಕ್ಕವನಿದ್ದಾಗ ಶಾಲಾ ಇನ್ಸ್‌ಪೆಕ್ಟರು ‘ಮುಂದೆ ಏನಾಗುತ್ತಿ’ ಎಂದು ಕೇಳಿದ್ದಕ್ಕೆ ‘ಲಾರಿ ಡ್ರೈವರ್ ಆಗುತ್ತೀನಿ’ ಎಂದಿದ್ದೆ. ಊರಾಚೆಯ ಹೈವೇನಲ್ಲಿ ಆಲ್ ಇಂಡಿಯಾ ಪರ್ಮಿಟ್ ಎಂದು ಬರೆಸಿಕೊಂಡ ಲಾರಿಗಳನ್ನು ನೋಡಿದ್ದೆ. ಅವುಗಳಲ್ಲಿ ದೇಶವನ್ನೆಲ್ಲಾ ನೋಡಬಹುದೆಂಬ ನನ್ನ ಅಲೆಮಾರಿತನದ ಹುಚ್ಚಿನಿಂದ ವ್ಯಕ್ತವಾಗಿದ್ದ ಹುಡುಗಾಟಿಕೆಯ ಅಭಿವ್ಯಕ್ತಿಯಾಗಿತ್ತು ಅದು. ಆದರ್ಶಗಳೆಂದರೆ ಖಾಸಗಿಯಾದ ಕ್ಷುಲ್ಲಕ ಆಸೆಗಳಲ್ಲ; ಸ್ವಂತಕ್ಕೆ ಹುಟ್ಟಿಕೊಳ್ಳುವ ಇರಾದೆಗಳಲ್ಲ. ಅಪ್ರಬುದ್ಧ ಆಕಾಂಕ್ಷೆಗಳಲ್ಲ. ಇತರರಿಗಾಗಿ ತೇದುಕೊಳ್ಳುವ ತ್ಯಾಗ. ತಾನು ಬೆಳೆಯುತ್ತ ಸಮುದಾಯವನ್ನೂ ಬೆಳೆಸುವ ಮೌಲ್ಯನಿರ್ದೇಶನದ ಪ್ರತ್ಯಯ. ಆದರ್ಶವಾದಿಗಳೆಂದು ಘೋಷಿಸದೆ ಆದರ್ಶಗಳನ್ನು ಪಾಲಿಸುವ ಬಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT