ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿತ್ಯನಾಥರುಗಳನ್ನು ಹೊರಗಿಡುವ ಬಗ್ಗೆ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ನನ್ನ ತವರು ರಾಜ್ಯ ಕರ್ನಾಟಕ, 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಸೇರಿದೆ. ಸದ್ಯ, ಕಾಂಗ್ರೆಸ್‍ ನಿಯಂತ್ರಣದಲ್ಲಿರುವ ಅತ್ಯಂತ ದೊಡ್ಡ ರಾಜ್ಯ ಕರ್ನಾಟಕವಾಗಿರುವುದರಿಂದ ಆ ಪಕ್ಷಕ್ಕೆ ಈ ಚುನಾವಣೆ ಬಹಳ ಮಹತ್ವದ್ದು. ದಕ್ಷಿಣದಲ್ಲಿ ಬಿಜೆಪಿ ಗಣನೀಯ ಪ್ರಭಾವ ಹೊಂದಿರುವ ಏಕೈಕ ರಾಜ್ಯವಾಗಿರುವುದರಿಂದ ಆ ಪಕ್ಷಕ್ಕೂ ಇದು ಬಹಳ ಮುಖ್ಯ. ಆಂಧ್ರಪ್ರದೇಶದಲ್ಲಿ ನಾಲ್ವರು, ತೆಲಂಗಾಣದಲ್ಲಿ ಐವರು, ಕೇರಳದಲ್ಲಿ ಒಬ್ಬ ಶಾಸಕರನ್ನು ಬಿಜೆಪಿ ಹೊಂದಿದ್ದರೆ, ತಮಿಳುನಾಡಿನಲ್ಲಿ  ಒಬ್ಬರೂ ಇಲ್ಲ. ಆದರೆ ಕರ್ನಾಟಕದಲ್ಲಿ ಬಿಜೆಪಿಯ 40 ಶಾಸಕರಿದ್ದಾರೆ. 2008ರಿಂದ 2013ರವರೆಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಮತ್ತು ಈ ಸಲ ಇಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆಯನ್ನೂ ಇಟ್ಟುಕೊಂಡಿದೆ.

2017ರ ಡಿಸೆಂಬರ್‍ ನಾಲ್ಕನೇ ವಾರದಲ್ಲಿ ಕರ್ನಾಟಕದ ಬಿಜೆಪಿ ಘಟಕವು ‘ಪರಿವರ್ತನಾ ಯಾತ್ರೆ’ ಆರಂಭಿಸಿತು. ವಿಧಾನಸಭೆ ಚುನಾವಣೆಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಸಜ್ಜಾಗಿಸುವುದು ಇದರ ಉದ್ದೇಶ. ಭಾರತದ ಅತ್ಯಂತ ದೊಡ್ಡ ರಾಜ್ಯ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಈ ಯಾತ್ರೆಗೆ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ನಂತರ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕನಾಗಿ ಆದಿತ್ಯನಾಥ ಹೊರಹೊಮ್ಮುತ್ತಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಹನುಮನನ್ನು ಮತ್ತು ವಿಜಯನಗರವನ್ನು ಆರಾಧಿಸುವ ಬದಲಿಗೆ ಟಿಪ್ಪು ಸುಲ್ತಾನ್‍ನನ್ನು ಆರಾಧಿಸುತ್ತಿದೆ… ಕಾಂಗ್ರೆಸ್ಸನ್ನು ಕರ್ನಾಟಕದಿಂದ ಕಿತ್ತೆಸೆದರೆ ಮತ್ತೆ ಟಿಪ್ಪು ಸುಲ್ತಾನ್‍ನನ್ನು ಆರಾಧಿಸುವವರು ಯಾರೂ ಇರುವುದಿಲ್ಲ’ ಎಂದು ಆದಿತ್ಯನಾಥ ತಮ್ಮ ಭಾಷಣದಲ್ಲಿ ಹೇಳಿದರು. ಕರ್ನಾಟಕದ ಜನರಿಗೆ ದನದ ಮಾಂಸ ತಿನ್ನುವುದಕ್ಕೆ ಅವಕಾಶ ಕೊಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದೂ ಅವರು ದೂರಿದರು.

ಕರ್ನಾಟಕದ ಕಾಂಗ್ರೆಸ್‍ ಪಕ್ಷವನ್ನು ಟೀಕಿಸಲು ಆದಿತ್ಯನಾಥ ಅತ್ಯಂತ ಸ್ಪಷ್ಟವಾಗಿ ಕೋಮು ನುಡಿಗಟ್ಟನ್ನು ಬಳಸಿದ್ದಾರೆ ಎಂಬುದು ಗಮನಿಸಬೇಕಾದ ಅಂಶ. ರಾಜ್ಯದ ಪ್ರಗತಿ ಯಂತ್ರವಾಗಿರುವ, ರಾಜ್ಯದ ಆದಾಯದ ಬಹುದೊಡ್ಡ ಪಾಲನ್ನು ಒದಗಿಸುವ ಬೆಂಗಳೂರು ನಗರದ ನಾಗರಿಕ ಮೂಲಕಸೌಕರ್ಯವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೇಗೆ ಶಿಥಿಲಗೊಳಿಸಿದೆ ಎಂಬ ಬಗ್ಗೆ ಅವರು ಮಾತನಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಕರ್ನಾಟಕ ಸರ್ಕಾರದ ‘ಕನ್ನಡವೇ ಮೊದಲು ಮತ್ತು ಪರಮೋಚ್ಚ’ ಎಂಬ ಸಂಕುಚಿತ ಪ್ರವೃತ್ತಿಯು ಮಾಹಿತಿ ತಂತ್ರಜ್ಞಾನ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳನ್ನು ಅಪಾಯಕ್ಕೆ ದೂಡುತ್ತಿದೆ ಎಂದು ಅವರು ಎಚ್ಚರಿಸಬಹುದಿತ್ತು. ಅವರು ಅದನ್ನೂ ಮಾಡಲಿಲ್ಲ. ಕರ್ನಾಟಕದ ಕಾಂಗ್ರೆಸ್‍ ಪಕ್ಷದಲ್ಲಿರುವ ವಂಶಾಡಳಿತ ಸಂಸ್ಕೃತಿಯನ್ನು ಅವರು ಟೀಕಿಸಬಹುದಿತ್ತು (ಹಲವು ಮಾಜಿ ಸಚಿವರ ಮಕ್ಕಳು ಈಗ ಸಚಿವರಾಗಿದ್ದಾರೆ ಮತ್ತು ಮುಖ್ಯಮಂತ್ರಿ ಕೂಡ ತಮ್ಮ ಮಗನನ್ನು ಮುಂದಿನ ಚುನಾವಣೆಯಲ್ಲಿ ಮುನ್ನೆಲೆಗೆ ತರಲು ಯತ್ನಿಸುತ್ತಿದ್ದಾರೆ). ಅದನ್ನೂ ಅವರು ಮಾಡಲಿಲ್ಲ. ಇತ್ತೀಚಿನ ದಶಕಗಳಲ್ಲಿ ಎಲ್ಲ ಮುಖ್ಯಮಂತ್ರಿಗಳು ನಿರ್ಲಕ್ಷಿಸಿದ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಅವರು ಒತ್ತಾಯಿಸಬಹುದಿತ್ತು. ಆ ಒತ್ತಾಯವೂ ಅವರಿಂದ ಬರಲಿಲ್ಲ. ಕರ್ನಾಟಕ ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ನ್ಯಾಯಸಮ್ಮತ ಮತ್ತು ವಿಶ್ವಾಸಾರ್ಹ ಟೀಕೆ ಮಾಡುವುದರ ಬದಲಿಗೆ ಹಿಂದೂಗಳ ವಿರುದ್ಧ ಮುಸ್ಲಿಮರ ಧ್ರುವೀಕರಣಕ್ಕಷ್ಟೇ ಆದಿತ್ಯನಾಥ ಗಮನ ಕೇಂದ್ರೀಕರಿಸಿದರು.

ಕರ್ನಾಟಕದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇರುವ ಬಿ.ಎಸ್‍. ಯಡಿಯೂರಪ್ಪ ಅವರು ಆದಿತ್ಯನಾಥ ಭಾಷಣ ಮಾಡುತ್ತಿದ್ದಾಗ ಪಕ್ಕದಲ್ಲಿ ಕುಳಿತಿದ್ದರು. ಆ ಸಂದರ್ಭದಲ್ಲಿ ಯಡಿಯೂರಪ್ಪ ಈ ಬಗ್ಗೆ ಏನೂ ಹೇಳಲಿಲ್ಲ. ಆದರೆ ಕೆಲದಿನಗಳ ಬಳಿಕ ‘ದ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಅಭಿವೃದ್ಧಿಯ ವಿಚಾರವನ್ನೇ ಇಟ್ಟುಕೊಂಡು ವಿಧಾನಸಭೆ ಚುನಾವಣೆ ಎದುರಿಸುವುದಾಗಿ ಹೇಳಿದರು. ರಾಜ್ಯದಿಂದ ಆಯ್ಕೆಯಾಗಿರುವ ಇಬ್ಬರು ಬಿಜೆಪಿ ಸಂಸದರು ಇತ್ತೀಚೆಗೆ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಬ್ಬರೂ ತಮ್ಮ ನೆಲೆಯರಿತು ವರ್ತಿಸಬೇಕು ಎಂದು ಯಡಿಯೂರಪ್ಪ ಈಗ ಬಯಸುತ್ತಿದ್ದಾರೆ. ‘ದ ಹಿಂದೂ’ ಪತ್ರಿಕೆಯ ಶಿವಮೊಗ್ಗ ವರದಿಗಾರರ ಜತೆ ಇತ್ತೀಚೆಗೆ ಮಾತನಾಡಿದ ಯಡಿಯೂರಪ್ಪ ಅವರು ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಮೈಸೂರು ಸಂಸದ ಪ್ರತಾಪ್‍ ಸಿಂಹ ಅವರಿಗೆ ಆಕ್ರಮಣಕಾರಿ ಹಿಂದುತ್ವವಾದಿ ನಿಲುವು ಮತ್ತು ತೀವ್ರವಾದಿ ಹೇಳಿಕೆ ನೀಡದಂತೆ ಹಲವು ಬಾರಿ ಸಲಹೆ ನೀಡಿದ್ದೇನೆ’ ಎಂದು ಹೇಳಿದ್ದಾರೆ.

‘ಜನಪ್ರತಿನಿಧಿಗಳು ತಮ್ಮ ಮಿತಿ ಮೀರಿ ಹೋಗಬಾರದು ಮತ್ತು ಕಾನೂನಿನ ಚೌಕಟ್ಟಿನಲ್ಲಿಯೇ ತಮ್ಮ ಕರ್ತವ್ಯ ನಿರ್ವಹಿಸಬೇಕು… ಯುವ ಸಂಸದರು ಎಲ್ಲರನ್ನೂ ಒಳಗೊಳ್ಳುವ ಸ್ಫೂರ್ತಿಯಲ್ಲಿ ಕೆಲಸ ಮಾಡಬೇಕು ಮತ್ತು ತಮ್ಮ ಹುದ್ದೆಯ ಘನತೆಯನ್ನು ಕಾಯ್ದುಕೊಳ್ಳಬೇಕು’ ಎಂದು ಯಡಿಯೂರಪ್ಪ ಹೇಳಿದ್ದಾಗಿ ಆ ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿರುವ, ಮತ್ತೆ ಮುಖ್ಯಮಂತ್ರಿಯಾಗಲು ಬಯಸಿರುವ ಅವರು ‘ಸೂಕ್ಷ್ಮ ವಿಚಾರಗಳನ್ನು ಕೆದಕುವ ಮೂಲಕ ವಿಧಾನಸಭೆ ಚುನಾವಣೆ ಗೆಲ್ಲಲು ಬಯಸುವುದಿಲ್ಲ, ಬದಲಿಗೆ ಅಭಿವೃದ್ಧಿ ಕಾರ್ಯಸೂಚಿಯನ್ನೇ ಮುಂದಿಟ್ಟುಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಬೆರಳು ತೋರಿಸಿರುವ ಸಂಸದರು ಕರ್ನಾಟಕದ ಆದಿತ್ಯನಾಥರು. ಉತ್ತರ ಪ್ರದೇಶದ ಮುಖ್ಯಮಂತ್ರಿಯ ರೀತಿಯಲ್ಲಿಯೇ ಈ ಸಂಸದರು ಪೌರುಷದ ನಿಲುವು ತಳೆಯಲು ಬಯಸುತ್ತಾರೆ, ವಿವಾದಾತ್ಮಕವಷ್ಟೇ ಅಲ್ಲದೆ, ವಿಷ ಬಿತ್ತುವ ಪದಗಳಲ್ಲಿ ಮಾತನಾಡುತ್ತಾರೆ ಮತ್ತು ಕಾನೂನು-ಸುವ್ಯವಸ್ಥೆಯ ಬಗ್ಗೆ ಯಾವ ಗೌರವವನ್ನೂ ತೋರುವುದಿಲ್ಲ. ಪೊಲೀಸ್‍ ಬ್ಯಾರಿಕೇಡ್‍ ಮೇಲೆ ಪ್ರತಾಪ್‍ ಸಿಂಹ ಕಾರು ಹತ್ತಿಸಿದ್ದಾರೆ; ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಹೆಗಡೆ ಹೇಳಿದ್ದಾರೆ (ಸಂಸತ್ತು ಮತ್ತು ಸಾಮಾಜಿಕ ಜಾಲತಾಣದಲ್ಲಿ ಖಂಡನೆ ವ್ಯಕ್ತವಾದ ಬಳಿಕ ತಮ್ಮ ಹೇಳಿಕೆಯನ್ನು ಅವರು ಹಿಂದಕ್ಕೆ ಪಡೆದರು). ನಮ್ಮ ಕಾಲದಲ್ಲಿ ಮತ್ತು ದೇಶದಲ್ಲಿ ಈಗ ತುಲನಾತ್ಮಕವಾಗಿ ಸಡಿಲವಾಗಿರುವ ಮಾನದಂಡದಲ್ಲಿ ನೋಡಿದರೂ ಅವರ ವರ್ತನೆ ಜನಪ್ರತಿನಿಧಿಗಳಿಗೆ ತಕ್ಕದ್ದಾಗಿ ಇರಲಿಲ್ಲ.

ಆದಿತ್ಯನಾಥರ ನಡವಳಿಕೆಯೂ ಇದೇ ರೀತಿಯದ್ದಾಗಿದೆ. ಅವರ ವಿರುದ್ಧವೂ ಹಲ್ಲೆ ಮತ್ತು ಗಲಭೆ ಸೃಷ್ಟಿಯ ಹಲವು ಪ್ರಕರಣಗಳಿವೆ; ಅವರು ಅತಿಹೆಚ್ಚು ದ್ವೇಷ ಭಾಷಣಗಳನ್ನು ಮಾಡಿದ್ದಾರೆ ಮತ್ತು ತಮ್ಮದೇ ಖಾಸಗಿ ಪಡೆಯನ್ನು ಹೊಂದಿದ್ದಾರೆ. ವಿಭಜನಕಾರಿ ರಾಜಕಾರಣದ ಬಗ್ಗೆ ಅವರನ್ನು ಯಡಿಯೂರಪ್ಪ ಯಾಕೆ ಎಚ್ಚರಿಸಲಿಲ್ಲ? ಅಭಿವೃದ್ಧಿಯ ವಿಚಾರಕ್ಕೆ ಮಾತ್ರ ಒತ್ತು ಕೊಡಿ ಎಂದು ಪಕ್ಷದ ಮುಖಂಡರಿಗೆ ಯಾಕೆ ಹೇಳಲಿಲ್ಲ? ಪಕ್ಷದ ಶ್ರೇಣಿಯಲ್ಲಿ ಯಡಿಯೂರಪ್ಪ ಅವರಿಗಿಂತ ಆದಿತ್ಯನಾಥ ಬಹಳ ಮೇಲಿದ್ದಾರೆ ಎಂಬುದು ಒಂದು ಕಾರಣ ಆಗಿರಬಹುದು. ದೇಶದ ಅತ್ಯಂತ ದೊಡ್ಡ ರಾಜ್ಯಕ್ಕೆ ಆದಿತ್ಯನಾಥ ಮುಖ್ಯಮಂತ್ರಿ. ಅವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಡಿಯೂರಪ್ಪನವರಿಗೆ ಇಲ್ಲ, ಆದರೆ ರಾಜ್ಯ ರಾಜಕಾರಣದಲ್ಲಿ ತಮಗಿಂತ ಕಿರಿಯರಾದ ಸಂಸದರನ್ನು ತರಾಟೆಗೆ ತೆಗೆದುಕೊಳ್ಳಬಹುದು.

ರಾಜ್ಯದಲ್ಲಿ ಬಿಜೆಪಿಯನ್ನು ನಗಣ್ಯ ಸ್ಥಾನದಿಂದ ಶಕ್ತಿಯುತ ಸ್ಥಾನಕ್ಕೆ ಒಯ್ಯುವಲ್ಲಿ ಯಡಿಯೂರಪ್ಪ ಮಹತ್ವದ ಪಾತ್ರ ವಹಿಸಿದ್ದಾರೆ. ಈ ವರ್ಷದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಅವರು ಬಯಸಿದ್ದಾರೆ. ರಾಜ್ಯದ ಆದಿತ್ಯನಾಥರುಗಳ ಬಹಿರಂಗ ಕೋಮುವಾದಿ ಹೇಳಿಕೆಗಳು ತಮ್ಮ ಅವಕಾಶವನ್ನು ಹಾಳು ಮಾಡಬಹುದು ಎಂಬ ಚಿಂತೆ ಅವರಲ್ಲಿ ಇದೆಯೇ? ಅದು ಒಂದು ಸಾಧ್ಯತೆ. ಇನ್ನೊಂದು, ಸಂಘ ಪರಿವಾರ ಸದಾ ಹಲವು ಧ್ವನಿಗಳಲ್ಲಿ ಮಾತನಾಡುತ್ತದೆ. ತಮ್ಮ ಪಕ್ಷದ ಮುಖಂಡರನ್ನು ಯಡಿಯೂರಪ್ಪ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ವರದಿಯನ್ನು ನಾನು ಟ್ವಿಟರ್‍ನಲ್ಲಿ ಹಾಕಿದಾಗ ಅದಕ್ಕೆ ಒಬ್ಬ ವ್ಯಕ್ತಿ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು: ‘ಸಂಘ ಪರಿವಾರ ಹಲವು ತಲೆಗಳ ಹೈಡ್ರದಂತೆ (ಹೈಡ್ರ ಎಂದರೆ ಗ್ರೀಕ್‍ ಪುರಾಣದಲ್ಲಿ ಬರುವ, ಕತ್ತರಿಸಿ ಹಾಕಿದರೂ ಎದ್ದು ಬರುವ ಹಲವು ತಲೆಗಳ ಸರ್ಪ). ಒಂದೊಂದು ತಲೆ ಒಂದೊಂದು ವೋಟ್‍ಬ್ಯಾಂಕನ್ನು ನಿರ್ವಹಿಸುತ್ತದೆ ಮತ್ತು ಎಲ್ಲ ತಲೆಗಳೂ ಆರ್‍ಎಸ್‍ಎಸ್‍ಗೆ ಜೋಡಣೆಯಾಗಿರುತ್ತವೆ. ಸೌಮ್ಯವಾದಿ ಯಡಿಯೂರಪ್ಪ ಮತ್ತು ‘ಧರ್ಮಾಂಧ’ ಪ್ರತಾಪ್‍ ಸಿಂಹರಿಗೆ ದೊರೆಯುವ ಮತಗಳೆಲ್ಲವೂ ಆರ್‍ಎಸ್‍ಎಸ್‍ಗೇ ಹೋಗುತ್ತವೆ. ಯಾರು ಅಧಿಕಾರದಲ್ಲಿ ಇರಬೇಕು ಎಂಬುದನ್ನು ಆರ್‍ಎಸ್‍ಎಸ್‍ ನಿರ್ಧರಿಸಿ ಅವರ ಮೂಲಕ ತನ್ನ ಸೈದ್ಧಾಂತಿಕ ಕಾರ್ಯಸೂಚಿಯನ್ನು ಜಾರಿಗೆ ತರುತ್ತದೆ’.

2017ರ ಅಂತ್ಯದಲ್ಲಿ ಕರ್ನಾಟಕದ ಬಿಜೆಪಿ ‘ಪರಿವರ್ತನಾ ಯಾತ್ರೆ’ಗೆ ಆದಿತ್ಯನಾಥ ಚಾಲನೆ ಕೊಟ್ಟರು. ದಕ್ಷಿಣದ ಇನ್ನೊಂದು ರಾಜ್ಯ ಕೇರಳದಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸಲು ಬಿಜೆಪಿ ಅಧ್ಯಕ್ಷ ಅಮಿತ್‍ ಷಾ ಮತ್ತು ಆದಿತ್ಯನಾಥ 2017ರಲ್ಲೇ ಮತ್ತೊಂದು ಯಾತ್ರೆಯನ್ನು ನಡೆಸಿದ್ದರು. ಅಲ್ಲಿ ದೊರೆತ ಪ್ರತಿಕ್ರಿಯೆ ಎಷ್ಟು ನೀರಸವಾಗಿತ್ತೆಂದರೆ ಬಂದಷ್ಟೇ ವೇಗವಾಗಿ ಅವರು ತಮ್ಮ ಸ್ಥಾನಕ್ಕೆ ಮರಳಿದರು. ಭಾರತದಲ್ಲಿಯೇ ಅತ್ಯುತ್ತಮ ಆರೋಗ್ಯ ವ್ಯವಸ‍್ಥೆಯನ್ನು ಹೊಂದಿರುವ ರಾಜ್ಯಕ್ಕೆ ಆದಿತ್ಯನಾಥ ಅವರಿಂದ ದುರಾಡಳಿತದ ಬಗ್ಗೆ ಪಾಠ ಬೇಕಿಲ್ಲ- ಗೋರಖಪುರದಿಂದ ಐದು ಬಾರಿ ಸಂಸದರಾಗಿದ್ದರೂ ಆ ಪಟ್ಟಣದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್‍ ಪೂರೈಕೆಯ ಖಾತರಿ ನೀಡುವುದಕ್ಕೂ ಅವರಿಗೆ ಸಾಧ‍್ಯವಾಗಿರಲಿಲ್ಲ. ಹಲವು ಶಿಶುಗಳು ಮತ್ತು ಮಕ್ಕಳ ಸಾವಿಗೆ ಇದು ಕಾರಣವಾಯಿತು. ಈ ಸಾವನ್ನು ತಪ್ಪಿಸಲು ಸಾಧ್ಯವಿತ್ತು.

ಆದಿತ್ಯನಾಥ ಸದ್ಯದಲ್ಲಿ ಕೇರಳಕ್ಕೆ ಮತ್ತೆ ಹೋಗುವ ಸಾಧ್ಯತೆ ಕಡಿಮೆ. ಹಾಗೆಯೇ, ತಮಿಳುನಾಡು, ಆಂಧ್ರಪ್ರದೇಶ ಅಥವಾ ತೆಲಂಗಾಣಕ್ಕೆ ಅವರು ಹೋಗಿ ಭಾಷಣ ಮಾಡುವ ಸಾಧ್ಯತೆಯೂ ಇಲ್ಲ. ಆದರೆ ಅವರು ಕರ್ನಾಟಕಕ್ಕೆ ಮತ್ತೆ ಬರಬಹುದು. ಇಲ್ಲಿ ಆರ್‍ಎಸ್‍ಎಸ್‍ ಮತ್ತು ಬಿಜೆಪಿಗೆ ವ್ಯವಸ್ಥಿತವಾದ ಸಂಘಟನಾ ನೆಲೆ ಇದೆ. ಅವರು ಲಾಭ ಪಡೆದುಕೊಳ‍್ಳಬಹುದಾದ ಕೆಲವು ಕೋಮು ಅಂಶಗಳೂ ಇವೆ. ಚಿಕ್ಕಮಗಳೂರಿನ ಬಾಬಾಬುಡನ್‍ಗಿರಿ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯನ್ನಾಗಿ ಮಾಡಲು ಹಲವು ವರ್ಷದಿಂದ ಅವರು ಯತ್ನಿಸುತ್ತಿದ್ದಾರೆ. ಹಿಂದೂಗಳು ಮತ್ತು ಮುಸ್ಲಿಮರು ಭೇಟಿ ನೀಡುವ ಈ ಸ್ಥಳವನ್ನು ತೀವ್ರವಾದಿ ಹಿಂದೂಗಳ ಆಸ್ತಿಯಾಗಿ ಮಾಡಿಕೊಳ್ಳುವ ಪ್ರಯತ್ನ ಇದು. ಮೂರೂ ಪ್ರಮುಖ ಧರ್ಮಗಳಲ್ಲಿ ಸಾಕಷ್ಟು ಮೂಲಭೂತವಾದಿಗಳಿರುವ ದಕ್ಷಿಣ ಕನ್ನಡದಲ್ಲಿ ಅವರು ಹಿಂದೂಗಳನ್ನು ಒಂದೆಡೆ ಮುಸ್ಲಿಮರ ವಿರುದ್ಧ ಮತ್ತು ಇನ್ನೊಂದೆಡೆ ಕ್ರೈಸ್ತರ ವಿರುದ್ಧ ಎತ್ತಿಕಟ್ಟಬಹುದು.

ತಮ್ಮ ರಾಜ್ಯದ ಸಂಸ್ಕೃತಿ ಮತ್ತು ಸಾಧನೆಗಳ ಬಗ್ಗೆ ಭಾರಿ ಅಭಿಮಾನ ಹೊಂದಿರುವ ನನ್ನ ಕನ್ನಡಿಗ ಗೆಳೆಯರೊಬ್ಬರು ಆದಿತ್ಯನಾಥರು ಬಿಜೆಪಿಯ ಅಭಿಯಾನವನ್ನು ಉದ್ಘಾಟಿಸಿದ ಬಳಿಕ ಒಂದು ಅಂಶದತ್ತ ಗಮನ ಸೆಳೆದಿದ್ದರು. ಪ್ರತಿವರ್ಷ ಹಲವು ಯುವಕ ಯುವತಿಯರು ಕೆಲಸ ಹುಡುಕಿಕೊಂಡು ಲಖನೌದಿಂದ ಬೆಂಗಳೂರಿಗೆ ಬರುತ್ತಾರೆ, ಆದರೆ ಈ ಕಡೆಯಿಂದ ಆ ಕಡೆಗೆ ಹೋಗುವವರ ಸಂಖ್ಯೆ ಬಹಳ ಕಡಿಮೆ. ಆರ್ಥಿಕ ಪ್ರಗತಿ, ಸಾಮಾಜಿಕ ಸಾಮರಸ್ಯ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು, ಮಹಿಳೆಯರ ಸಬಲೀಕರಣ ಎಲ್ಲದರಲ್ಲಿಯೂ ಭಾರತದ ಹಿಂದುಳಿದ ರಾಜ್ಯಗಳಲ್ಲಿ ಉತ್ತರಪ್ರದೇಶ ಒಂದು. ಅದನ್ನು ಇನ್ನಷ್ಟು ಹಿಂದಕ್ಕೆ ಒಯ್ಯಲು ಆದಿತ್ಯನಾಥ ಪ್ರಯತ್ನಿಸುತ್ತಿದ್ದಾರೆ. ಆದಿತ್ಯನಾಥ ಯಾವುದೇ ನುಡಿಗಟ್ಟುಗಳನ್ನು ಬಳಸಲಿ, ಯಾವುದೇ ಧರ್ಮವನ್ನು ಪ್ರತಿಪಾದಿಸಲಿ, ಹೇಗೆ ಬದುಕಬೇಕು ಎಂಬ ಬಗ್ಗೆ ಕರ್ನಾಟಕದ ಜನರು ಅವರಿಂದ ಕಲಿಯಬೇಕಾದದ್ದು ಏನಾದರೂ ಇದೆಯೇ?

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಬಳಿಕ ಬಿಜೆಪಿಯ ಪ್ರಚಾರದಲ್ಲಿ ಆದಿತ್ಯನಾಥ ಅವರ ಪಾತ್ರ ಹೇಗಿರಬಹುದು ಎಂಬುದು ಕುತೂಹಲಕಾರಿ ಅಂಶ. ಹಾಗೆಯೇ, ಸ್ಥಳೀಯ ಆದಿತ್ಯನಾಥರುಗಳಿಗೆ ಪಕ್ಷ ಯಾವ ಹೊಣೆ ವಹಿಸಬಹುದು ಎಂಬುದೂ ಆಸಕ್ತಿಕರ. ಇವರು ಪ್ರಚಾರದಲ್ಲಿ ಭಾಗಿಯಾಗಿ ತಮ್ಮ ಎಂದಿನ ಶೈಲಿಯಲ್ಲಿ ಮಾತಾಡಿದರೆ ಅದಕ್ಕೆ ಯಡಿಯೂರಪ್ಪನವರ ಪ್ರತಿಕ್ರಿಯೆ ಏನಿರುತ್ತದೆ? ಈ ಪ್ರಶ್ನೆಗೆ ಯಡಿಯೂರಪ್ಪ ಮಾತ್ರ ಉತ್ತರಿಸಲು ಸಾಧ್ಯ. ಆದರೆ, ಕರ್ನಾಟಕದ ಸಾಮಾನ್ಯ, ಸಂವೇದನಾಶೀಲ, ಶಾಂತಿಪ್ರಿಯ ಜನರು ತಕ್ಕದಾಗಿ ಪ್ರತಿಕ್ರಿಯೆ ನೀಡುವುದು ಬಹಳ ಮುಖ್ಯ. ಮುಕ್ತ ಮನಸ್ಸು, ಎಲ್ಲ ಹಿನ್ನೆಲೆಯ ಶ‍್ರಮಜೀವಿಗಳಿಗೆ ನೀಡುವ ಆತಿಥ್ಯ, ಹೊಸ ಶೋಧ ಮತ್ತು ಉದ್ಯಮಶೀಲತೆ, ನಿಬ್ಬೆರಗಾಗಿಸುವ ಸಂಸ್ಕೃತಿ ಮತ್ತು ಸಾಹಿತ್ಯದ ಸಿರಿವಂತಿಕೆಗೆ ಹೆಸರಾಗಿರುವ ಕರ್ನಾಟಕವು ಹಿಂದುತ್ವವಾದಿ ದ್ವೇಷ ಮತ್ತು ಧರ್ಮಾಂಧತೆಗೆ ಶರಣಾಗಬಾರದು. ಕರ್ನಾಟಕದ ಜನರು ಆದಿತ್ಯನಾಥ, ಅವರ ಸ್ಥಳೀಯ ಅನುಯಾಯಿಗಳು ಮತ್ತು ಅವರನ್ನು ಅನುಕರಿಸುವವರನ್ನು ಕೂಡ ಸ್ಪಷ್ಟವಾಗಿ ತಿರಸ್ಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT