ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಸಂಖ್ಯೆಯೂ ಬಡವರ ನಿಖರ ಗುರುತಲ್ಲ

Last Updated 26 ಅಕ್ಟೋಬರ್ 2016, 3:39 IST
ಅಕ್ಷರ ಗಾತ್ರ

ಇ–ಆಡಳಿತಕ್ಕಾಗಿ ಸರ್ಕಾರ ಬಳಸುತ್ತಿರುವ ಸಾಫ್ಟ್‌ವೇರ್ ಮತ್ತು ಪ್ರತಿ ವ್ಯಕ್ತಿಯ ವಿಶಿಷ್ಟ ಗುರುತಾದ ಆಧಾರ್ ಸಂಖ್ಯೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂಥ ಹಗರಣವೊಂದು ಅಕ್ಟೋಬರ್ 12ರಂದು ಬಯಲಾಯಿತು. ಇದನ್ನು ಬಯಲಿಗೆಳೆದದ್ದು ರಾಜಕಾರಣಿಗಳಲ್ಲ. ಸರ್ಕಾರೇತರ ಸಂಘಟನೆಗಳಲ್ಲ.

ಇದನ್ನು ಬಯಲಿಗೆ ತಂದದ್ದು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ. ದಿನಪತ್ರಿಕೆಗಳಲ್ಲೇನೋ ಇದು ತಕ್ಕ ಮಟ್ಟಿಗೆ ದೊಡ್ಡ ಸುದ್ದಿಯೇ ಆಯಿತು. ಆ ದಿನವೇ ಅದರ ಆಯಸ್ಸೂ ಮುಗಿದು ಹೋಯಿತು.

ಬಡತನ ರೇಖೆಯ ಕೆಳಗಿರುವವರ ಪಡಿತರಕ್ಕೆ ಕನ್ನ ಹಾಕುವ ಈ ಹಗರಣದ ಕುರಿತಂತೆ ಮಾತನಾಡಲು ಯಾವ ರಾಜಕಾರಣಿಗೂ ಸಮಯವಿರಲಿಲ್ಲ. ಭಾವನೆಗಳನ್ನು ಕೆರಳಿಸುವ ಯಾವ ಅವಕಾಶವೂ ಇರಲಿಲ್ಲವಾದ್ದರಿಂದ ತಥಾಕಥಿತ ದೇಶಭಕ್ತರ ಸಂಘಟನೆಗಳಿಗೂ ಈ ಹಗರಣ ಆಸಕ್ತಿ ಹುಟ್ಟಿಸಲಿಲ್ಲ. ಇಷ್ಟಕ್ಕೂ ಬಡವನ ಕಷ್ಟ ಯಾರಿಗೆ ಮುಖ್ಯ....?

ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪಡಿತರವನ್ನು ಅರ್ಹರಿಗೆ ಮಾತ್ರ ವಿತರಿಸಬೇಕು ಎಂದು ಪಣತೊಟ್ಟು ದಶಕಗಳೇ ಉರುಳಿದವು.ಕಂಪ್ಯೂಟರ್ ಬಳಸಿ ಬಡವರನ್ನು ನಿಖರವಾಗಿ ಗುರುತಿಸುವ ಪ್ರಯತ್ನಕ್ಕಂತೂ ಒಂದೂವರೆ ದಶಕದ ಇತಿಹಾಸವಿದೆ.

ಈ ಅವಧಿಯ ಉದ್ದಕ್ಕೂ ‘ನಕಲಿ ಪಡಿತರ ಚೀಟಿ’ ಅಥವಾ ‘ಅಕ್ರಮ ಪಡಿತರ ಚೀಟಿ’ಗಳನ್ನು ರದ್ದು ಪಡಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. 2009ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರ ಪರಿಣಾಮವಾಗಿ 20 ಲಕ್ಷ ಅಕ್ರಮ ಪಡಿತರ ಚೀಟಿಗಳು ಪತ್ತೆಯಾಗಿದ್ದವು. ಈ ಸಂಖ್ಯೆ ಕೆಲವೇ ದಿನಗಳಲ್ಲಿ ದುಪ್ಪಟ್ಟಾಯಿತು. ಆಗಲೂ ಪಡಿತರ ಚೀಟಿ ವಿತರಣೆಗೆ ಸಾಫ್ಟ್‌ವೇರ್ ಬಳಕೆಯಾಗಿತ್ತು. ಪ್ರತೀ ಮನೆಯ ಪ್ರತಿಯೊಬ್ಬ ಸದಸ್ಯನ ಭಾವಚಿತ್ರವನ್ನು ತೆಗೆಸುವುದೂ ಕಡ್ಡಾಯವಾಗಿತ್ತು.

ಅಕ್ರಮ ಪಡಿತರ ಚೀಟಿಗಳ ಹಾವಳಿಯನ್ನು ತಪ್ಪಿಸುವುದಕ್ಕೆ ಆಗಿನ ಸರ್ಕಾರ ಹಲವು ಉಪಾಯಗಳನ್ನು ಮಾಡಿತು. ಮೊದಲನೆಯದ್ದು ಮನೆಯ ವಿದ್ಯುತ್ ಸಂಪರ್ಕದ ಆರ್ ಆರ್ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಿಸುವುದು. ಇದನ್ನು ಎಲ್‌ಪಿಜಿ ಸಂಪರ್ಕಗಳಿಗೂ ಅನ್ವಯಿಸಿದ್ದರಿಂದ ಅನೇಕ ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಲು ಸಾಧ್ಯವಾಯಿತು.

ಈ ಅವಧಿಯಲ್ಲಿ ಅಕ್ರಮ ಪಡಿತರ ಚೀಟಿಗಳು ವಿತರಣೆಯಾದುದರ ಹಿಂದೆ ಅದಕ್ಕಾಗಿ ಬಳಸುತ್ತಿದ್ದ ಸಾಫ್ಟ್‌ವೇರ್‌ನಲ್ಲಿದ್ದ ಸಮಸ್ಯೆಯನ್ನು ಕಾರಣವಾಗಿ ನೀಡಲಾಯಿತು. ಇದನ್ನು ಅಭಿವೃದ್ಧಿ ಪಡಿಸಿದ್ದ ಸಂಸ್ಥೆ ಈಗಯೇ ಮುಚ್ಚಿ ಹೋಗಿದೆ. ಈ ಕುರಿತ ತನಿಖೆಯಲ್ಲಿ ಏನನ್ನು ಕಂಡುಕೊಳ್ಳಲಾಯಿತು ಎಂಬುದನ್ನು ಆಗಿನ ಸರ್ಕಾರವೂ ಹೇಳಲಿಲ್ಲ. ಆಮೇಲೆ ಬಂದ ಸರ್ಕಾರವೂ ಮೌನ ವಹಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ದಿನವೇ ‘ಅನ್ನ ಭಾಗ್ಯ’ ಯೋಜನೆಯನ್ನು ಘೋಷಿಸಿದರು. ಈ ಹೊತ್ತಿಗಾಗಲೇ ಪಡಿತರ ಚೀಟಿಯನ್ನು ವಿತರಿಸುವುದಕ್ಕಾಗಿ ಸರ್ಕಾರಿ ಸ್ವಾಮ್ಯದ ಅಷ್ಟೇ ಅಲ್ಲ ಸರ್ಕಾರದ ಬಹುತೇಕ ಇ–ಆಡಳಿತ ವೇದಿಕೆಗಳನ್ನು ಅಭಿವೃದ್ಧಿ ಪಡಿಸಿರುವ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ರೂಪಿಸಿದ್ದ ತಂತ್ರಾಂಶವನ್ನು ಬಳಸಲಾಗುತ್ತಿತ್ತು.

ಪಡಿತರ ಚೀಟಿ ವಿತರಣೆಯಲ್ಲಿ ಅಕ್ರಮ ಸಂಭವಿಸದೇ ಇರಲಿ ಎಂಬ ಕಾರಣಕ್ಕಾಗಿ ವಿದ್ಯುತ್ ಸಂಪರ್ಕದ ಆರ್ ಆರ್ ಸಂಖ್ಯೆಯ ಜೊತೆಗೆ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನೂ ಪಡಿತರ ಚೀಟಿಗೆ ಜೋಡಿಸುವ ಪ್ರಕ್ರಿಯೆ ಆರಂಭವಾಯಿತು. ಮೊಬೈಲ್ ನಂಬರ್ ಸರ್ಕಸ್ ಮೂಲಕ ಅಕ್ರಮ ಪತ್ತೆಯ ಪ್ರಹಸನ ಕೆಲವು ಕಾಲ ನಡೆಯಿತು. ಈ ಹೊತ್ತಿಗೆ ಕೇಂದ್ರ ಸರ್ಕಾರ ವಿಶಿಷ್ಟ ಗುರುತು ಸಂಖ್ಯೆ ‘ಆಧಾರ್’ ಜಾರಿಗೊಳಿಸಿತು.

‘ಆಧಾರ್’ ಯೋಜನೆಯನ್ನು ಬಹಳ ಆಸಕ್ತಿಯಿಂದ ಕಾರ್ಯರೂಪಕ್ಕೆ ತಂದ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಇದು ಕಾಂಗ್ರೆಸ್ ನೇತೃತ್ವದ ಯುಪಿಎ ರೂಪಿಸಿದ ಯೋಜನೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಕೇಂದ್ರದಲ್ಲಿ ಯುಪಿಎ ಅಧಿಕಾರ ಕಳೆದುಕೊಂಡ ನಂತರ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಕೂಡಾ ಆಧಾರ್ ಕುರಿತ ತನ್ನ ಹಳೆಯ ವಿರೋಧವನ್ನು ಬದಿಗಿರಿಸಿ ಅದನ್ನು ಇನ್ನಷ್ಟು ತೀವ್ರತೆಯೊಂದಿಗೆ ಕಾರ್ಯರೂಪಕ್ಕೆ ತರಲು ಮುಂದಾಯಿತು.

ರಾಜ್ಯ ಸರ್ಕಾರ ಪಡಿತರ ಚೀಟಿ ಅಕ್ರಮಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಂಡ ಉತ್ಸಾಹದಲ್ಲಿ ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಕ್ರಿಯೆ ಆರಂಭಿಸಿತು. ಇದೇ ಆರ್ಥಿಕ ವರ್ಷದ ಆರಂಭದಲ್ಲಿ ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಪೈಲೆಟ್ ಯೋಜನೆ ಆರಂಭಗೊಂಡಿತು.

ಮೇ ತಿಂಗಳಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಆಗಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಂತ್ರಿ ರಾಜ್ಯದ ಒಂದು 1.08 ಕೋಟಿ ಪಡಿತರ ಚೀಟಿಗಳಲ್ಲಿ ಶೇಕಡಾ 70ರಷ್ಟಕ್ಕೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಕೆಲಸ ಮುಗಿದಿದೆ ಎಂದಿದ್ದರು. ಆಧಾರ್ ಜೋಡಿಸಿ ಫಲಾನುಭವಿಗಳನ್ನು ಗುರುತಿಸುವುದಕ್ಕೆ ನ್ಯಾಯಬೆಲೆ ಅಂಗಡಿಗಳಲ್ಲೇ ಬೆರಳಚ್ಚನ್ನು ಪರೀಕ್ಷಿಸುವ ಯಂತ್ರಗಳನ್ನಿಡಲಾಯಿತು. ಇದರೊಂದಿಗೆ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದುಕೊಂಡರೆ ಆಗಿತ್ತು ಮತ್ತೊಂದು.

ಅಂಗಡಿಗಳಲ್ಲಿರುವ ಯಂತ್ರಗಳು ಸರಿಯಾಗಿ ಕೆಲಸ ಮಾಡಲಿಲ್ಲ. ಇದನ್ನು ಪರಿಹರಿಸುವುದಕ್ಕಾಗಿ ಆಧಾರ್ ದತ್ತಸಂಚಯಕ್ಕೆ ಹೋಗಿ ಪ್ರತಿಯೊಬ್ಬರ ಗುರುತನ್ನು ಖಾತರಿ ಪಡಿಸುವ ಕೆಲಸವನ್ನು ಒಮ್ಮೆಗೇ ಮುಗಿಸಿಬಿಡುವ ಪರಿಕಲ್ಪನೆಯನ್ನು ಇಲಾಖೆ ಜಾರಿಗೆ ತಂದಿತು. ಇದೆಲ್ಲಾ ಬೆಟ್ಟ ಅಗೆದು ಇಲಿ ಹಿಡಿವ ಕೆಲಸ ಎಂಬುದು ನಾಲ್ಕೇ ತಿಂಗಳಲ್ಲಿ ಸಾಬೀತಾಯಿತು. ಅಕ್ಟೋಬರ್ 12ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಗಳೇ ಬಹಿರಂಗ ಪಡಿಸಿದಂತೆ ಬೆಂಗಳೂರಿನ ವೀರಪುರದಲ್ಲಿರುವ ಒಂದು ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲೇ 708 ಪಡಿತರ ಚೀಟಿಗಳಿಗೆ ಒಂದೇ ಒಂದು ಆಧಾರ ಸಂಖ್ಯೆಯನ್ನು ಜೋಡಿಸಲಾಗಿದೆ!

ಇದು ಹೇಗೆ ಸಂಭವಿಸಲು ಸಾಧ್ಯ? ಈ ಪ್ರಶ್ನೆಗೆ ಇಲಾಖೆಯ ಕಾರ್ಯದರ್ಶಿಗಳ ವಿವರಣೆಯಲ್ಲಿ ಉತ್ತರವಿಲ್ಲ. ವ್ಯಕ್ತಿಯ ಬೆರಳಚ್ಚು ಮತ್ತು ಕಣ್ಣಿನ ಪಾಪೆ ವ್ಯಕ್ತಿಗೆ ವಿಶಿಷ್ಟ. ಆಧಾರ್ ಸಂಖ್ಯೆಯ ಜೊತೆಗೆ ಈ ವಿವರಗಳನ್ನೂ ಜೋಡಿಸಿ ಒಂದು ದತ್ತಸಂಚಯವಾಗಿ ಸಂಗ್ರಹಿಸಲಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ವ್ಯಕ್ತಿಯ ಗುರುತನ್ನು ಕಂಡುಕೊಳ್ಳಲು ಈ ವಿವರಗಳನ್ನು ಬಳಸಿಕೊಳ್ಳಬಹುದು.

ಇದರಿಂದಾಗಿ ಒಬ್ಬ ವ್ಯಕ್ತಿ ಎರಡು ಆಧಾರ್ ಸಂಖ್ಯೆಗಳನ್ನು ಪಡೆಯಲು ಸಾಧ್ಯವೇ ಇಲ್ಲ ಎಂಬುದು ಸರ್ಕಾರದ ಸಮರ್ಥನೆ. ಇಂಥ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಿಸುವುದರಿಂದ ಒಬ್ಬ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳಲ್ಲಿ ಇರುವುದು ಸಾಧ್ಯವಿಲ್ಲ. ಅಂದರೆ ಪಡಿತರ ಚೀಟಿಯನ್ನು ವಿತರಿಸುವುದಕ್ಕಾಗಿ ಬಳಸುವ ತಂತ್ರಾಂಶ ಒಂದೇ ಆಧಾರ್ ಸಂಖ್ಯೆಯನ್ನು ಎರಡನೇ ಬಾರಿಗೆ ಸ್ವೀಕರಿಸಬಾರದು. ಆದರೆ ಈಗ ಆಹಾರ ಇಲಾಖೆಯ ಕಾರ್ಯದರ್ಶಿಗಳೇ ಬಹಿರಂಗ ಪಡಿಸಿರುವಂತೆ ಒಂದೇ ಆಧಾರ್ ಸಂಖ್ಯೆಯನ್ನು 708 ಬಾರಿ ಬಳಸಲಾಗಿದೆ.

ಇದು ಹೇಗೆ ಸಾಧ್ಯವಾಯಿತು? ಇದು ತಂತ್ರಾಂಶದಲ್ಲಿರುವ ಯಾವ ಪರೀಕ್ಷೆಯ ಸಂದರ್ಭದಲ್ಲೂ ಕಾಣ ಸಿಗದ ‘ಬಗ್’ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಈ ತಂತ್ರಾಂಶ ಮುಖ್ಯವಾಗಿ ಮಾಡಬೇಕಾಗಿರುವ ಕೆಲಸವೇ ಒಂದು ಆಧಾರ್ ಸಂಖ್ಯೆಯನ್ನು ಎರಡನೇ ಬಾರಿಗೆ ಸ್ವೀಕರಿಸದೇ ಇರುವುದು. ಅಂದರೆ ಪ್ರಾಥಮಿಕ ಪರೀಕ್ಷೆಯಲ್ಲೇ ಎಂತಾ ಮೂರ್ಖ ಸಾಫ್ಟ್‌ವೇರ್ ಪರೀಕ್ಷಕನಿಗೂ ವೇದ್ಯವಾಗುವ ವಿಚಾರ. ಇದು ಇಲ್ಲಿಯ ತನಕ ಬಯಲಿಗೆ ಬಂದಿಲ್ಲ ಎಂದಾದರೆ ಇಲ್ಲೊಂದು ಬೃಹತ್ ಹಗರಣವೇ ಇದೆ ಎಂದರ್ಥ.

ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವ ಹಂತದಲ್ಲೇ ಈ ‘ದೌರ್ಬಲ್ಯ’ವನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಲಾಗಿದೆ. ಇನ್ನು ಅಧಿಕಾರಿಗಳು ಮತ್ತು ಮಂತ್ರಿಗಳು ಈ ಹಿಂದೆ ಹೇಳಿದ್ದ ಮತ್ತೊಂದು ಸಂಗತಿ ಇದೆ. ಅಳವಡಿಸಲಾದ ಪ್ರತೀ ಆಧಾರ್ ಸಂಖ್ಯೆಯನ್ನೂ ಆಧಾರ್ ದತ್ತ ಸಂಚಯದಲ್ಲಿರುವ ವಿವರಗಳ ಜೊತೆ ಹೋಲಿಸಿ ನೋಡಲಾಗುತ್ತದೆ.

ಅಂದರೆ ಪಡಿತರ ಚೀಟಿಯನ್ನು ನೀಡುವ ತಂತ್ರಾಂಶ ಕೂಡ ವ್ಯಕ್ತಿಯ ಬೆರಳಚ್ಚು ಮತ್ತು ಪಾಪೆಯ ವಿವರಗಳನ್ನು ಸಂಗ್ರಹಿಸಿ ಆಧಾರ್ ದತ್ತ ಸಂಚಯದ ವಿವರಗಳ ಜೊತೆ ತಾಳೆ ಮಾಡುವುದು. ಈ ಪ್ರಕ್ರಿಯೆ ಈ ತನಕ ನಡೆದೇ ಇಲ್ಲವೇ? ಈ ಮೊದಲು ಅಂಗಡಿಗಳಲ್ಲೇ ಬೆರಳಚ್ಚು ಪರೀಕ್ಷಕ ಯಂತ್ರಗಳನ್ನು ಇಟ್ಟಿದ್ದಾಗ ಸರ್ಕಾರ ಇದು ವ್ಯಕ್ತಿಯ ಗುರುತನ್ನು ಅನಿರೀಕ್ಷಿತವಾಗಿ ಪರೀಕ್ಷಿಸುವ ವ್ಯವಸ್ಥೆ ಎಂದಿತ್ತು. ಅಂದರೆ ಪಡಿತರ ಚೀಟಿಯ ದತ್ತ ಸಂಚಯದಲ್ಲಿ ಎಲ್ಲರ ಬೆರಳಚ್ಚಿತ್ತು ಎಂದರ್ಥವಲ್ಲವೇ? ಹಾಗಿದ್ದರೂ ಒಂದೇ ಆಧಾರ್ ಸಂಖ್ಯೆಯನ್ನು 708 ಬಾರಿ ಜೋಡಿಸಲು ಸಾಧ್ಯವಾದದ್ದು ಹೇಗೆ?.

ಈ ಎಲ್ಲಾ ಪ್ರಶ್ನೆಗಳೂ ಇ–ಆಡಳಿತ ಎಲ್ಲದಕ್ಕೂ ಪರಿಹಾರವಲ್ಲ ಎಂಬ ಮೂಲಭೂತ ಸಂಗತಿಯೊಂದಿಗೆ ನಮ್ಮನ್ನು ಮತ್ತೆ ಮುಖಾಮುಖಿಯಾಗಿಸುತ್ತಿದೆ. ಆದರೆ ಇದನ್ನು ಎದುರಿಸುವುದಕ್ಕೆ ಯಾವ ಸರ್ಕಾರವೂ ಸಿದ್ಧವಿರುವುದಿಲ್ಲ ಎಂಬುದು ವಾಸ್ತವ. 2010ರಲ್ಲಿ ಕೇರಳದಲ್ಲಿ ಒಬ್ಬನೇ ವ್ಯಕ್ತಿ ಎರಡು ಆಧಾರ್ ಸಂಖ್ಯೆಯನ್ನು ಪಡೆದ ಪ್ರಕರಣವನ್ನು ‘ಮನಿಲೈಫ್’ ಎಂಬ ಅಂತರ್ಜಾಲ ಪತ್ರಿಕೆ ಬಯಲಿಗೆಳೆದಾಗ ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ಮೌನವಾಗಿತ್ತು. ಅಂದಿನ ವಿರೋಧ ಪಕ್ಷ ಈಗ ಆಡಳಿತ ನಡೆಸುತ್ತಿದೆ. ಅಂದಿನ ಆಡಳಿತ ಪಕ್ಷ ಈಗ ವಿರೋಧಿ ಸ್ಥಾನದಲ್ಲಿದೆ. ಜಾಣ ಮೌನವೇ ‘ಈ’ ಆಡಳಿತದ ಮೂಲಾಧಾರ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT