ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧ್ಮಾತ್ಮಿಕತೆ, ಜಾತಿ ಪದ್ಧತಿ ಮತ್ತು ಸ್ಪಷ್ಟೀಕರಣ

Last Updated 29 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ವರ್ಷದ  ಕಡೆಯ ಅಂಕಣದಲ್ಲಿ ಹಿಂದಿನ ವಾರಗಳಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ, ಸ್ಪಷ್ಟೀಕರಣ ನೀಡುವ ಅವಕಾಶ ಕಲ್ಪಿಸಿಕೊಳ್ಳುತ್ತಿದ್ದೇನೆ. ನಿರ್ದಿಷ್ಟವಾಗಿ ಅಕ್ಟೋಬರ್ 28ರಂದು ‘ಬುದ್ಧಿಜೀವಿಗಳನ್ನು ದೂರುವುದರಿಂದ ಹೊಸ ಚಿಂತನೆ ಮೂಡುವುದೇ?’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಅಂಕಣದ ಒಂದು ವಾಕ್ಯವನ್ನು ತಿದ್ದಿಕೊಳ್ಳಬೇಕಿದೆ.

ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ‘ಬುದ್ಧಿಜೀವಿಗಳು ಹಿಂದೂ ವಿರೋಧಿಗಳು’ ಎಂದುದಕ್ಕೆ ಪ್ರತಿಕ್ರಿಯಿಸುವ ಉದ್ದೇಶದಿಂದ ಬರೆದ ಅಂಕಣವದು.

ಅದರಲ್ಲಿ ಹಿಂದೂ ಧರ್ಮದ ಬಗ್ಗೆ ಮೂರು ಬಗೆಯ ನಿಲುವುಗಳನ್ನು ಭಾರತೀಯ ಚಿಂತಕರು ತಳೆಯುತ್ತಾರೆ ಎಂದು ಗುರುತಿಸುತ್ತ, ಮೂರನೆಯ ಗುಂಪಿನವರು ‘ಹಿಂದೂ ಧರ್ಮ ಮತ್ತು ಜಾತಿ ಪದ್ಧತಿಗಳ ಅಳಿವಾಗದೆ ನವಭಾರತದ ನಿರ್ಮಾಣ ಸಾಧ್ಯವಿಲ್ಲ ಎನ್ನುವ ಸ್ಪಷ್ಟ ನಿಲುವನ್ನು ತಳೆಯುತ್ತಾರೆ. ಇಂತಹ ಅಭಿಪ್ರಾಯ ಹೊಂದಿರುವವರಲ್ಲಿ ಡಾ. ಲೋಹಿಯಾ ಮತ್ತು ಡಾ. ಅಂಬೇಡ್ಕರ್ ಪ್ರಮುಖರು’ ಎಂದು ಬರೆದಿದ್ದೆ. ಜೊತೆಗೆ ಈ ಗುಂಪಿನ ಚಿಂತಕರ ಚರ್ಚೆಯನ್ನು ಮಾಡುವಾಗ, ‘ಹಿಂದೂ ಧರ್ಮದ ನಾಶ’ ಎಂಬ ಪದಪುಂಜವನ್ನೂ ಬಳಸಿದ್ದೆ.

ಹಿರಿಯ ಸಮಾಜವಾದಿ ಚಿಂತಕ ಡಿ.ಎಸ್. ನಾಗಭೂಷಣ ಅವರು ಲೋಹಿಯಾರನ್ನು ಈ ಗುಂಪಿಗೆ ಸೇರಿಸಿರುವುದು ಸಮಂಜಸವಲ್ಲ ಎಂದು ನನ್ನನ್ನು ಎಚ್ಚರಿಸಿ ಈ ಕುರಿತಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದರು. ತಕ್ಷಣವೇ ಡಾ. ಮಸ್ತರಾಮ್ ಕಪೂರ್ ಅವರು ಸಂಪಾದಿಸಿರುವ ಲೋಹಿಯಾರ ಸಂಪೂರ್ಣ ಬರಹಗಳ ಎಲ್ಲ ಸಂಪುಟಗಳ ಪದಸೂಚಿಯನ್ನು ಗಮನಿಸಿದಾಗ, ಅವರ ಆಕ್ಷೇಪಣೆ ನನಗೂ ಸರಿಯೆನಿಸಿತು. ಈಗ ಹಿಂತಿರುಗಿ ನೋಡಿದಾಗ, ನನ್ನ ಆ ವಾಕ್ಯ ಅವಸರದ ಬರವಣಿಗೆ ಮತ್ತು ಸೋಮಾರಿತನದ ಚಿಂತನೆಯ ಫಲವೆನಿಸುತ್ತಿದೆ. ಇದರ ಬಗ್ಗೆ ನನಗೆ ಅಪಾರವಾದ ವಿಷಾದವಿದೆ.

ಡಾ. ಲೋಹಿಯಾ ಅವರು ಹಿಂದೂ ಧರ್ಮವು ನಾಶವಾಗದೆ ಭಾರತಕ್ಕೆ ಉಳಿವಿಲ್ಲ ಎಂದು ಹೇಳಿರಲಿಲ್ಲ. ಈ ಸ್ಪಷ್ಟೀಕರಣ ಮುಖ್ಯವಾದುದು ಮತ್ತು ಅಗತ್ಯವಾದುದು. ನನ್ನ ಆ ವಾಕ್ಯದಲ್ಲಿ ಲೋಹಿಯಾರ ಬದಲು ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಮತ್ತು ಡಾ. ಅಂಬೇಡ್ಕರ್ ಎಂದಿದ್ದರೆ ಅದು ಹೆಚ್ಚು ನಿಖರವಾದ ಹೇಳಿಕೆಯಾಗುತ್ತಿತ್ತು.

ತಮಿಳುನಾಡಿನಲ್ಲಿ ‘ಸೆಲ್ಫ್‌- ರೆಸ್ಪೆಕ್ಟ್’ ಚಳವಳಿ ಮತ್ತು ‘ದ್ರಾವಿಡ ಕಳಗಮ್’ ಪಕ್ಷವನ್ನು ಸ್ಥಾಪಿಸಿದ ಪೆರಿಯಾರ್, ಹಿಂದೂ ಧರ್ಮದ ವಿರುದ್ಧ ಉಗ್ರವಾದ ನಿಲುವನ್ನು ತಳೆದರು. ಅಂಬೇಡ್ಕರ್ ಅವರ ನಿಲುವುಗಳು ಮತ್ತಷ್ಟು ಸೂಕ್ಷ್ಮವಾದವು. ಅವರೂ ಹಿಂದೂ ಧರ್ಮವು ಉಳಿದಿರುವ ತನಕ ಜಾತಿ ಪದ್ಧತಿ ಅಳಿಯುವುದು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ.

ಇದಕ್ಕೆ ಕಾರಣವೆಂದರೆ, ಜಾತಿ ಪದ್ಧತಿಯ ಸಮರ್ಥನೆಗಳು ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳಲ್ಲಿ (ಸೇಕ್ರೆಡ್ ಟೆಕ್ಸ್ಟ್) ಇರುವುದು. ಆದರೆ ಬಾಬಾಸಾಹೇಬರು ಆಧುನಿಕತೆಯಿಂದ ರೂಪುಗೊಂಡ ಚಿಂತಕರಾದರೂ, ಪೆರಿಯಾರ್ ಅವರಿಗಿಂತ ಒಂದು ಬಹಳ ಮುಖ್ಯವಾದ ವಿಚಾರದಲ್ಲಿ ಭಿನ್ನರಾಗುತ್ತಾರೆ.

ಪಶ್ಚಿಮದ ‘ರ‍್ಯಾಶನಲಿಸ್ಟ್‌’ ಪರಂಪರೆಯಿಂದ ಹೆಚ್ಚಾಗಿ ಪ್ರಭಾವಿತರಾದ ಪೆರಿಯಾರ್ ಧರ್ಮ ಮತ್ತು ಸಂಸ್ಕೃತಿಗಳ ನಡುವಣ ಸಂಬಂಧವನ್ನು ಸೂಕ್ಷ್ಮವಾಗಿ ಚಿಂತಿಸಲಿಲ್ಲ.ಇನ್ನೂ ಮುಖ್ಯವಾಗಿ ಆಧ್ಯಾತ್ಮಿಕತೆ (ಸ್ಪಿರಿಚ್ಯುಯಾಲಿಟಿ) ಎನ್ನುವುದು ಅವರಿಗೆ ಮುಖ್ಯವಾಗಲಿಲ್ಲ. ಕುತೂಹಲದ ವಿಷಯವೆಂದರೆ, ಕನ್ನಡದ ಪ್ರಗತಿಪರ ಚಿಂತನೆಯ ಮೇಲೆ ಪೆರಿಯಾರರ ಈ ಚಿಂತನೆಗಳ ಪ್ರಭಾವ ಒಂದು ಮಟ್ಟದವರೆಗೆ ಆಗಿದೆ.

ಅಂಬೇಡ್ಕರ್ ಅವರು ಹಿಂದೂ ಧರ್ಮದ ಸುಧಾರಣೆಯ ಹೋರಾಟವನ್ನು 1930ರ ದಶಕದ ಮಧ್ಯಭಾಗದ ವೇಳೆಗೆ ಬಿಟ್ಟುಕೊಟ್ಟರು. ಜಾತಿ ವಿನಾಶಕ್ಕೆ ಮತಾಂತರವು ದಾರಿಯೆಂದು, ತಮಗೆ ಬೇಕಿರುವ ಧಾರ್ಮಿಕ ಪರ್ಯಾಯಗಳ ಹುಡುಕಾಟದಲ್ಲಿ ತೊಡಗಿದರು. ಈ ಹುಡುಕಾಟದಲ್ಲಿ ಅವರ ಆಧ್ಯಾತ್ಮಿಕ ಬದ್ಧತೆ ಸ್ಪಷ್ಟವಾಗುತ್ತದೆ. ಇಪ್ಪತ್ತು ವರ್ಷಗಳ ಚರ್ಚೆ, ಅಧ್ಯಯನ, ಬರವಣಿಗೆಗಳ ನಂತರ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅವರ ಆಯ್ಕೆ ಆಧ್ಯಾತ್ಮಿಕ ನೆಲೆಯಿಂದಲೇ ಪ್ರೇರಿತವಾದುದು.

ಆಧ್ಯಾತ್ಮಿಕತೆಯ ಮಹತ್ವವನ್ನು ಗುರುತಿಸುವ ಮೂಲಕ ಪೆರಿಯಾರ್ ಅವರಿಗಿಂತ ಅಂಬೇಡ್ಕರ್ ಭಿನ್ನರಾಗುತ್ತಾರೆ. ಈ ಆಯಾಮವೇ ಲೋಹಿಯಾ ಅವರನ್ನು ಸಹ ಅಂಬೇಡ್ಕರರಿಗೆ ಹತ್ತಿರವಾಗಿಸುತ್ತದೆ. ಲೋಹಿಯಾ ಮತ್ತು ಅಂಬೇಡ್ಕರ್ ಇಬ್ಬರೂ ಹಲವು ಸಾಮ್ಯತೆಗಳಲ್ಲಿ ಪ್ರಮುಖವಾದುದು ಇಬ್ಬರಿಗೂ ಆಧ್ಯಾತ್ಮಿಕತೆಯ ಬಗ್ಗೆ ಇದ್ದ ನಂಬಿಕೆ.

ಲೋಹಿಯಾ ಮತ್ತು ಅಂಬೇಡ್ಕರ್ ಚಿಂತನೆಗಳ ಅರ್ಥಪೂರ್ಣ ತೌಲನಿಕ ಅಧ್ಯಯನವನ್ನು ಯೋಗೇಂದ್ರ ಯಾದವ್ ಅವರು ತಮ್ಮ ‘ಅಂಬೇಡ್ಕರ್ ಅಂಡ್ ಲೋಹಿಯಾ: ಎ ಡಯಲಾಗ್ ಆನ್ ಕಾಸ್ಟ್’ (ಅಂಬೇಡ್ಕರ್ ಮತ್ತು ಲೋಹಿಯಾ: ಜಾತಿಯ ಮೇಲೊಂದು ಸಂಭಾಷಣೆ) ಎಂಬ ಲೇಖನದಲ್ಲಿ ಮಾಡಿದ್ದಾರೆ. ಲೋಹಿಯಾ ಮತ್ತು ಅಂಬೇಡ್ಕರ್ ಇಬ್ಬರ ಬಗ್ಗೆಯೂ ಆಸಕ್ತಿ ಇರುವ ಓದುಗರು ಓದಲೇಬೇಕಿರುವ ಲೇಖನವದು.

ಯಾದವ್ ಗುರುತಿಸುವ ಮತ್ತೊಂದು ಮುಖ್ಯ ಸಾಮ್ಯತೆಯೆಂದರೆ, ಅಂಬೇಡ್ಕರ್ ಮತ್ತು ಲೋಹಿಯಾ ಇಬ್ಬರೂ ಜಾತಿಯನ್ನು ಭಾರತೀಯ ಸಮಾಜದೊಳಗೆ ಮಹತ್ವವಾದ ಮತ್ತು ಸ್ವಾಯತ್ತವಾದ ಅಸಮಾನತೆಯ, ಅನ್ಯಾಯದ ಮತ್ತು ಶೋಷಣೆಯ ಆಯಾಮ ಎಂದು ಎತ್ತಿಹಿಡಿದರು. ಜಾತಿವಿನಾಶ ಆಗಬೇಕು ಎನ್ನುವುದರ ಬಗ್ಗೆ ಅವರಿಬ್ಬರಲ್ಲಿ ಒಮ್ಮತವಿತ್ತು.

ಆದರೆ ಅಂಬೇಡ್ಕರರ ಮತಾಂತರದ ಪರ್ಯಾಯ ಲೋಹಿಯಾರ ಆಯ್ಕೆಯಾಗಲಿಲ್ಲ. ಇಲ್ಲಿ ಯಾದವ್ ಸಹ ಇಬ್ಬರ ಸಾಂಸ್ಕೃತಿಕ ರಾಜಕಾರಣದಲ್ಲಿ ಮುಖ್ಯವಾದ ವ್ಯತ್ಯಾಸವೊಂದನ್ನು ಗುರುತಿಸುತ್ತಾರೆ. ಅದೇನೆಂದರೆ ಅಂಬೇಡ್ಕರ್ ಅವರು ಹಿಂದೂ ಧರ್ಮದ ಶಾಸ್ತ್ರಗ್ರಂಥಗಳ ಗಂಭೀರ ಅಧ್ಯಯನದಲ್ಲಿ ತೊಡಗಿಸಿಕೊಂಡರೆ, ಲೋಹಿಯಾರ ಆಸಕ್ತಿಯಿದ್ದುದು ಹಿಂದೂ ಪುರಾಣಗಳು, ರಾಮಾಯಣ ಹಾಗೂ ಮಹಾಭಾರತಗಳಂತಹ ಪಠ್ಯಗಳಲ್ಲಿ.

ಅವರು ಇಲ್ಲಿನ ಕಥೆ, ಪಾತ್ರ ಮತ್ತು ಮೌಲ್ಯಗಳ ಮರುಕಥನೀಕರಣದತ್ತ ಹೆಚ್ಚು ಗಮನ ನೀಡಿದರು. ಉದಾಹರಣೆಗೆ ರಾಮ ಮತ್ತು ಕೃಷ್ಣ, ದ್ರೌಪದಿ ಮತ್ತು ಸಾವಿತ್ರಿಯರ ಕುರಿತಾದ ಲೋಹಿಯಾರ ಬರಹಗಳನ್ನು ಗಮನಿಸಿ. ಒಟ್ಟಾರೆ ಜಾತಿ ಪದ್ಧತಿಯ ಮೇಲೆ ಲೋಹಿಯಾರ ಬರಹಗಳು ಗಣನೀಯ ಸಂಖ್ಯೆಯಲ್ಲಿ ಇದ್ದರೂ, ಅಂಬೇಡ್ಕರರಂತೆ ವ್ಯವಸ್ಥಿತವಾಗಿ ಧರ್ಮಶಾಸ್ತ್ರಗಳನ್ನು ಅವರು ಅಧ್ಯಯನ ಮಾಡಲಿಲ್ಲ. ಈ ಅಂಶವೇ ಲೋಹಿಯಾರ ಬರಹಗಳನ್ನು ಮತ್ತೆ ಗಮನಿಸುವಾಗ ನನಗೆ ಕುತೂಹಲದ ವಿಷಯವೆನಿಸಿದ್ದು.

ನಾನಿಲ್ಲಿ ಲೋಹಿಯಾರ ಬಗ್ಗೆ ಹೇಳಬೇಕಿರುವುದು ಇಷ್ಟು. ಅವರು ವೈಯಕ್ತಿಕವಾಗಿ ನಿರೀಶ್ವರವಾದಿಯಾದರೂ (ಏಥಿಯಿಸ್ಟ್) ಆಗಿದ್ದರೂ, ಆಧ್ಯಾತ್ಮಿಕ ಮತ್ತು ಕಥನ ಪರಂಪರೆಗಳ ಬಗ್ಗೆ ಶ್ರದ್ಧೆ ಮತ್ತು ಮೆಚ್ಚುಗೆಗಳನ್ನು ಹೊಂದಿದ್ದರು. ಹಾಗೆಂದ ಮಾತ್ರಕ್ಕೆ ಈ ಪರಂಪರೆಗಳ ಮರುವ್ಯಾಖ್ಯಾನ ಮತ್ತು ಪ್ರಶ್ನೆ ಮಾಡುವುದನ್ನು ನಿಲ್ಲಿಸಲಿಲ್ಲ. ಆದರೆ ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ಮತ್ತು ಹಿಂದೂ ಧರ್ಮಗಳ ನಡುವಿನ ಸಂಬಂಧವನ್ನು ಅನ್ವೇಷಿಸಿದ ರೀತಿಯಲ್ಲಿ ಲೋಹಿಯಾರವರು ಮಾಡಲಿಲ್ಲ. ಈ ಮಾತನ್ನು ಹೇಳುವಾಗ ಯಾರ ದಾರಿ, ವಿಶ್ಲೇಷಣೆಗಳು ಸರಿ ಎನ್ನುವುದಕ್ಕಿಂತ ಇಬ್ಬರ ನಡುವಿನ ಭಿನ್ನತೆಯೇನು ಎನ್ನುವುದು ನಮಗೆ ಇಲ್ಲಿ ಸ್ಪಷ್ಟವಾಗುತ್ತಿದೆ.

ಭಾರತದ ಬಗ್ಗೆ ಬರೆದ ಪಾಶ್ಚಾತ್ಯ ಚಿಂತಕರ ಸಂದರ್ಭದಲ್ಲಿಯಾಗಲಿ, ಇಲ್ಲವೆ ಆಧುನಿಕತೆಯೊಡನೆ ಅನುಸಂಧಾನ ಮಾಡಬೇಕಾದ ಭಾರತೀಯ ಚಿಂತಕರಾಗಲಿ ಜಾತಿ ಪದ್ಧತಿ ಮತ್ತು ಹಿಂದೂ ಧರ್ಮದ ನಡುವಿನ ಸಂಬಂಧವನ್ನು ಗಂಭೀರವಾಗಿಯೇ ಅನ್ವೇಷಿಸಿದರು.

ಪಾಶ್ಚಾತ್ಯರು ಜಾತಿ ವ್ಯವಸ್ಥೆ ಮತ್ತು ಹಿಂದೂ ಧರ್ಮಗಳೆರಡೂ ಭಾರತೀಯ ನಾಗರಿಕತೆಯ ‘ಸಾರ’ (ಎಸ್ಸೆನ್ಸ್) ಎಂದು ನಂಬಿದ್ದರು. ಹಿಂದೊಮ್ಮೆ ಈ ಅಂಕಣದಲ್ಲಿ ಬರೆದಿದ್ದ ಅಂಶವನ್ನು ಮತ್ತೆ ಹೇಳಬಯಸುತ್ತೇನೆ: ಫ್ರೆಂಚ್ ಸಮಾಜಶಾಸ್ತ್ರಜ್ಞ ಲೂಯಿ ಡ್ಯೂಮೊ ಹೇಳುವಂತೆ, ಯಾವ ಪಾಶ್ಚಾತ್ಯ ವ್ಯಕ್ತಿಯೂ ಜಾತಿ ಪದ್ಧತಿಯ ಅಂತ್ಯವಾಗಬೇಕು ಎಂದು ವಾದಿಸಲಿಲ್ಲ. ಅದಕ್ಕೆ ಡ್ಯೂಮೊ ನೀಡುವ ಕಾರಣವೆಂದರೆ, ಪಾಶ್ಚಾತ್ಯರಿಗೆ ಭಾರತೀಯ ಸಮಾಜ ಮತ್ತು ನಾಗರಿಕತೆಗಳ ಕೇಂದ್ರದಲ್ಲಿ ಜಾತಿಯಿದೆ ಎನ್ನುವ ಅರಿವಿತ್ತು.

ಜಾತಿ ವ್ಯವಸ್ಥೆಯ ಬಗೆಗಿನ ಇತ್ತೀಚಿನ ಚರ್ಚೆಗಳು ಹಲವು ಹೊಸ ಆಯಾಮಗಳನ್ನು ಪಡೆದುಕೊಂಡಿವೆ. ಜಾತಿಯೆನ್ನುವುದು ವಸಾಹತುಶಾಹಿ ಬೌದ್ಧಿಕತೆ ಭಾರತದ ಬಗ್ಗೆ ಸೃಷ್ಟಿಸಿದ ಕಥನ ಎನ್ನುವವರೂ ಕಾಣಸಿಗುತ್ತಾರೆ.

ಇಷ್ಟಾದರೂ ಆಧುನಿಕ ಭಾರತದ ಸಾರ್ವಜನಿಕ ಜೀವನದಲ್ಲಿದ್ದ ಯಾವ ಪ್ರಮುಖ ವ್ಯಕ್ತಿತ್ವವೂ ಜಾತಿಯ ಪ್ರಶ್ನೆಯನ್ನು ನಿರ್ಲಕ್ಷಿಸುವಂತಿರಲಿಲ್ಲ. ಹಾಗೆಯೇ ಜಾತಿ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯವೆ? ಜಾತಿ ವಿನಾಶ ಅಗತ್ಯವೆ? ಇದು ಹಿಂದೂ ಧರ್ಮದ ಚೌಕಟ್ಟಿನೊಳಗೆ ಮಾಡಲು ಸಾಧ್ಯವೆ? ಈ ಎಲ್ಲ ಪ್ರಶ್ನೆಗಳಿಗೂ ಸರಳವಾದ, ನೇರವಾದ ಉತ್ತರಗಳನ್ನು ನಮ್ಮ ಭಾರತೀಯ ಚಿಂತಕರು ನೀಡಿರಬಹುದು. ಆದರೆ ಅವು ಸೂಕ್ತವಾದ ಪರಿಹಾರಗಳೇ ಎನ್ನುವುದನ್ನು ಕಾಲ ಮಾತ್ರ ಉತ್ತರಿಸುತ್ತದೆ, ಅದು ಸಹ ಆಂಶಿಕವಾಗಿ ಮಾತ್ರ.

ಈ ಕಡೆಯ ಅಂಶಕ್ಕೆ ನಿದರ್ಶನವನ್ನು ನೀಡಿ, ಈ ತಪ್ಪೊಪ್ಪಿಗೆ- ಸ್ಪಷ್ಟೀಕರಣ ಟಿಪ್ಪಣಿಯನ್ನು ಮುಗಿಸುತ್ತೇನೆ. ಪೂನಾ ಒಪ್ಪಂದದ ಸುತ್ತಲೂ ಇಂದಿಗೂ ದಲಿತ ಚಳವಳಿ ಹಾಗೂ ಹಲವು ದಲಿತ ರಾಜಕಾರಣಿಗಳಿಗೆ ಇರುವ ಅಸಮಾಧಾನವನ್ನು ಗಮನಿಸಿ.

ದಲಿತ ಸಮುದಾಯಗಳಿಗೆ ಪ್ರತ್ಯೇಕ ಎಲೆಕ್ಟೊರೇಟ್ ನೀಡಿದ್ದರೆ ಭಾರತೀಯ ರಾಜಕಾರಣದ ಸ್ವರೂಪವೇ ಬದಲಾಗುತ್ತಿತ್ತು, ದಲಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಸವರ್ಣ ಹಿಂದೂ ಮತದಾರನನ್ನು ಓಲೈಸಬೇಕಾಗಿರಲಿಲ್ಲ ಎನ್ನುವ ನಿಲುವು ಅವರದು. ಮುಂದಿನ ವಾರ ಬಿಜೆಪಿಯನ್ನು ಸೇರುತ್ತಿರುವ ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಅವರೂ ಅತ್ಯಂತ ವಿಷಾದದ ದನಿಯಲ್ಲಿ ಈ ಮೇಲಿನ ಮಾತುಗಳನ್ನು ಹೇಳುತ್ತ, ಡಾ. ಅಂಬೇಡ್ಕರ್ ಅವರು ಪೂನಾ ಒಪ್ಪಂದವನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಸಾರ್ವಜನಿಕವಾಗಿಯೇ ವಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT