ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ ಕುಮಾರಸ್ವಾಮಿ

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ದೆಹಲಿಯ ರೂಪ ಪಬ್ಲಿಷರ್ಸ್ 2012ರಲ್ಲಿ ಪ್ರಾರಂಭ ಮಾಡಿದ ಆಂಟಿಕ್ವಿಟೀಸ್ ಎಂಬ ಹೆಸರಿನ ಪುಸ್ತಕ ಸರಣಿ ಮೊನ್ನೆ ಕಣ್ಣಿಗೆ ಬಿತ್ತು. ಆಕರ್ಷಕವಾದ ಈ ಸರಣಿಯಲ್ಲಿ ಪ್ರಕಟಗೊಂಡ ಆನಂದ ಕುಮಾರಸ್ವಾಮಿ ಅವರ `ಡಾನ್ಸ್ ಆಫ್ ಶಿವ' ಎಂಬ ಪುಸ್ತಕ ಕೊಂಡೆ. ನಾನು ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ಈ ಪುಸ್ತಕ ವ್ಯಾಸಂಗ ಪಟ್ಟಿಯಲ್ಲಿತ್ತು. ವಿದ್ವತ್ತು, ಪ್ರೀತಿಯಿಂದ ಬರೆದ ಪುಸ್ತಕವಿದು. ಪ್ರಾಚೀನ ಭಾರತೀಯ ಕಲೆ, ಧರ್ಮ, ಸಂಗೀತ, ಸೌಂದರ್ಯ ಶಸ್ತ್ರ, ತತ್ವಜ್ಞಾನದ ಬಗ್ಗೆ ವಿಸ್ತಾರವಾಗಿ ಬರೆದ ಕುಮಾರಸ್ವಾಮಿ 1948ರಲ್ಲಿ ತೀರಿಕೊಂಡರು.   

ಆನಂದ ಕೆಂಟಿಶ್ ಕುಮಾರಸ್ವಾಮಿ ಅವರ ಪೂರ್ಣ ಹೆಸರು. ಅವರ ವಿಚಾರಗಳು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿವೆ. ಗಾಂಧೀಜಿಯವರಂತೆ ಕುಮಾರಸ್ವಾಮಿ ಅವರೂ ವರ್ಣ ವ್ಯವಸ್ಥೆಯನ್ನು ಅನುಮೋದಿಸುವ ದನಿಯಲ್ಲಿ ಬರೆದಿದ್ದಾರೆ. ಪರಂಪರೆಯ ಎಲ್ಲವನ್ನೂ ವೈಭವೀಕರಿಸುತ್ತಾರೆ ಎಂಬ ಆರೋಪ ಅವರ ಮೇಲಿದೆ. ಜಾತಿ ಪದ್ಧತಿ ಏಕೆ ಉನ್ನತ ನಾಗರಿಕತೆಯ ಕುರುಹು ಎಂದು ವಾದಿಸುವ ಒಂದು ಪ್ರಬಂಧ ಈ ಪುಸ್ತಕದಲ್ಲಿದೆ. ಸ್ವತಂತ್ರ ಭಾರತದ ವಿಶ್ವವಿದ್ಯಾಲಯಗಳು ಈ ಕಾರಣಕ್ಕೆ ಅವರನ್ನು ಅನುಮಾನದಿಂದ ಕಂಡಿವೆ.

ಕುಮಾರಸ್ವಾಮಿ ಅವರು ಶ್ರೀಲಂಕಾದವರು. ಅವರ ತಂದೆ ಆ ದೇಶದ ಸಂಸತ್ತಿನ ಸದಸ್ಯರಾಗಿದ್ದರು. ಕುಮಾರಸ್ವಾಮಿಯವರಿಗೆ ಎರಡು ವರ್ಷವಿದ್ದಾಗ ತಂದೆಯನ್ನು ಕಳೆದುಕೊಂಡರು. ತಾಯಿ ಬ್ರಿಟಿಷರಾಗಿದ್ದರಿಂದ ಆ ದೇಶಕ್ಕೆ ಇವರನ್ನು ಕರೆದೊಯ್ದರು. ಪಶ್ಚಿಮದ ಅತ್ಯುತ್ತಮ ವಿದ್ಯಾಕ್ಷೇತ್ರಗಳಲ್ಲಿ ಕಲಿತ ಕುಮಾರಸ್ವಾಮಿ ತಮ್ಮ ದೇಶಕ್ಕೆ ಹಿಂತಿರುಗಿದರು. ಭೂಗರ್ಭಶಾಸ್ತ್ರದ ಇಲಾಖೆಯ ದೊಡ್ಡ ಹುದ್ದೆಯಲ್ಲಿ ಕೆಲಸಕ್ಕೆ ಸೇರಿದ ಅವರಿಗೆ ತಮ್ಮ ದೇಶದ ಧರ್ಮ, ಕಲೆ, ಸಂಸ್ಕೃತಿಯ ಬಗ್ಗೆ ಅಪಾರ ಕುತೂಹಲವಿತ್ತು. ಪ್ರವಾಸ ಮಾಡಿದಷ್ಟೂ ಅವರ ಗಮನ, ಒಲವು ಈ ವಿಷಯಗಳ ಕಡೆ ವಾಲಿತು.

ಲಂಕೆಯ ಜನಜೀವನಕ್ಕೂ ಭಾರತದ ಜನಜೀವನಕ್ಕೂ ಇರುವ ಸಾಮ್ಯವನ್ನು ಗುರುತಿಸಿ ಹಲವು ಪ್ರಬಂಧಗಳನ್ನು ಕುಮಾರಸ್ವಾಮಿ ಬರೆದರು. ನಂತರ ಅಮೆರಿಕದ ಬಾಸ್ಟನ್‌ನ `ಮ್ಯೂಸಿಯಂ ಆಫ್ ಇಂಡಿಯನ್ ಆರ್ಟ್'ನಲ್ಲಿ ಕ್ಯುರೇಟರ್ ಆಗಿದ್ದುಕೊಂಡು ಅವರು ಮಾಡಿದ ಕೆಲಸ ಭಾರತೀಯ ಸೌಂದರ್ಯ ಶಾಸ್ತ್ರದ ಬಗ್ಗೆ ಪಾಶ್ಚಾತ್ಯರಲ್ಲಿ ವಿಶೇಷ ಆಸಕ್ತಿ ಕೆರಳಿಸಿತು. ಚೋಳರ ಕಾಲದ ನಟರಾಜನ ವಿಗ್ರಹದ ಬಗ್ಗೆ ಅವರು ಬರೆದ ಲೇಖನ ಜಗತ್ತಿನ ಮಹಾನ್ ವಿಜ್ಞಾನಿಗಳನ್ನು ಸೆಳೆಯಿತು. ತಾಂಡವವನ್ನು ನಿರೂಪಿಸುವ ವಿಗ್ರಹದ ವಿನ್ಯಾಸಕ್ಕೂ ಅಣುಶಾಸ್ತ್ರದ ಸಿದ್ಧಾಂತಗಳಿಗೂ ಇರುವ ಸಂಬಂಧವನ್ನು ಕುಮಾರಸ್ವಾಮಿ ಗುರುತಿಸಿ ಬರೆದ ಪ್ರಬಂಧ ಸುಮಾರು ಒಂದು ಶತಮಾನದ ನಂತರವೂ ಪ್ರಭಾವಿಯಾಗಿ ಉಳಿದಿದೆ. `ದೇವಕಣ' ಅಧ್ಯಯನ ನಡೆಯುತ್ತಿರುವ ಜಿನೀವಾದಲ್ಲಿ ನಟರಾಜನ ಒಂದು ವಿಗ್ರಹವನ್ನು ಸರ್ನ್ ಸಂಸ್ಥೆಯವರು ಪ್ರತಿಷ್ಠಾಪಿಸಿದ್ದಾರೆ.  
  
ಕುಮಾರಸ್ವಾಮಿಯವರ ಬರವಣಿಗೆ ಸುಲಭ ಬೆಲೆಗೆ ಸಿಗುತ್ತಿರುವ ಸಂತಸದಲ್ಲಿ ಈ ಟಿಪ್ಪಣಿ ಬರೆಯುತ್ತಿದ್ದೇನೆ. ನನ್ನ ವಾರಿಗೆಯವರು ಓದುವ ಕಾಲಕ್ಕೆ ಇಂಥ ಪುಸ್ತಕಗಳು ತುಂಬ ದುಬಾರಿಯಾಗಿದ್ದು, ಸಾಮಾನ್ಯ ವಿದ್ಯಾರ್ಥಿಗಳು ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ವಿದೇಶಿ ಪ್ರಕಾಶಕರು ಇಂಥ ಪುಸ್ತಕಗಳನ್ನು ಹೊಳಪಿನ ಕಾಗದದ ಮೇಲೆ ಮುದ್ರಿಸಿ ಹೊರತರುತ್ತಿದ್ದರು. ರೂಪ ಪ್ರಕಾಶಕರು ಇಂಥ ಹಲವು ಪುಸ್ತಕಗಳನ್ನು ಈಗ ಕಡಿಮೆ ಬೆಲೆಗೆ  ಪ್ರಕಟ ಮಾಡಿದ್ದಾರೆ. ದಿ ಡಾನ್ಸ್ ಆಫ್ ಶಿವ ಪುಸ್ತಕದ ಮುದ್ರಿತ ಬೆಲೆ 195. ಬ್ರಿಗೇಡ್ ರಸ್ತೆಯ ಬುಕ್ ವರ್ಕ್ ಅಂಗಡಿಯಲ್ಲಿ ಇದರ ರಿಯಾಯತಿ ಬೆಲೆ ರೂ. 160. ಇಂಟರ್ನೆಟ್ ಅಂಗಡಿಗಳಲ್ಲಿ ಇದರ ಬೆಲೆ ಇನ್ನೂ ಕಡಿಮೆ. ನಿರಾಸೆಯ ಒಂದೇ ಸಂಗತಿಯೆಂದರೆ ಫೋಟೊಗಳು ಆರ್ಟ್ ಪೇಪರ್ ಮೇಲೆ ಕಂಡಷ್ಟು ಚೆನ್ನಾಗಿ ಇಲ್ಲಿ ಕಾಣುವುದಿಲ್ಲ.

ಈಗ ನಡೆಯುತ್ತಿರುವ ಎರಡು ಸಿನಿಮಾ
ರಾಂಝನಾ ಎಂಬ ಹಿಂದಿ ಚಿತ್ರದಲ್ಲಿ ಧನುಶ್ ನಾಯಕ. ರಜನಿಕಾಂತ್ ಅಳಿಯನಾದ ಈತ ತೆಳ್ಳಗೆ, ಹಂಚಿಕಡ್ಡಿ ಅನ್ನುತ್ತಾರಲ್ಲ, ಹಾಗೆ ಕಾಣುತ್ತಾನೆ. ಕೊಲವೇರಿ ಡಿ ಹಾಡಿನಿಂದ ಜನಪ್ರಿಯತೆ ಗಳಿಸಿದ ಈತನಿಗೆ ಹಿಂದಿ ನಿರರ್ಗಳವಾಗಿ ಮಾತಾಡಲು ಬರುವುದಿಲ್ಲ.

ಹಿಂದಿ ಚಿತ್ರದಲ್ಲಿ ಈತ ನಟಿಸುವುದರ ಬಗ್ಗೆ ಆಕ್ಷೇಪದ ಮಾತುಗಳು ನಿಮ್ಮ ಕಿವಿಗೆ ಬಿದ್ದಿರುತ್ತವೆ. ಸಿನಿಮಾ ಹೀರೊಗಳು, ಅದರಲ್ಲೂ ಹಿಂದಿ ಚಿತ್ರದ ಹೀರೊಗಳು, ಬೆಳ್ಳಗೆ, ಎತ್ತರವಾಗಿರಬೇಕು ಎನ್ನುವ ನಿರೀಕ್ಷೆ ಇಂಥ ಮಾತಿನ ಹಿಂದೆ ಇರುತ್ತದೆ. 

`ರಿಕ್ಷಾ ಓಡಿಸುವವನ ಥರ ಕಾಣುತ್ತಾನೆ, ಹೀರೊ ಹೇಗೆ ಆದ?' ಎಂದು ಕೆಲವರು ಹೇಳುತ್ತಿದ್ದರು. ಇಂಥ ಮಾತುಗಳು ಎಷ್ಟು ಅಗ್ಗ ಮತ್ತು ಅಮಾನವೀಯ ಎಂದು ಹರಟೆಯ ವರಸೆಯಲ್ಲಿ ಮರೆತುಹೋಗುತ್ತಾರೆ. ನೋಡಲು ಸ್ಫುರದ್ರೂಪಿಯಾದವರಿಗೆ ಮಾತ್ರ ಪ್ರೀತಿ, ಸಾಹಸದಲ್ಲಿ ತೊಡಗಲು ಅರ್ಹತೆ ಇದೆ ಎಂದು ನಂಬಿರುವ ಇಂಥವರಿಗೆ ಒಂದು ವಿಷಯ ಮರೆತುಹೋಗಿರುತ್ತದೆ. ಇಂದು ಹೆಸರು ಮಾಡಿರುವ ಎಷ್ಟೋ ಹೀರೊಗಳು ಬಿಳಿ ಚರ್ಮ, ಎತ್ತರ ಮೈಕಟ್ಟು ಇರುವವರಲ್ಲ. ದಕ್ಷಿಣ ಭಾರತದಲ್ಲಂತೂ ರಾಜ್‌ಕುಮಾರ್, ರಜನಿಕಾಂತ್ ಮೊದಲ್ಗೊಂಡು ಹಲವು ನಾಯಕನಟರು ಇಂಥ ಮೂಢ ನಿರೀಕ್ಷೆಯನ್ನು ಹುಸಿಗೊಳಿಸಿ ಸೂಪರ್ ಸ್ಟಾರ್‌ಗಳಾಗಿದ್ದಾರೆ. ಸಿನಿಮಾ ರಸಿಕರಿಗೆ ಅವರಲ್ಲಿ ಕಾಣುವ ಎನರ್ಜಿ, ಲವಲವಿಕೆ ತುಂಬ ಮುಖ್ಯವಾಗಿರುತ್ತದೆ. ಧನುಶ್, ಜಗ್ಗೇಶ್, ವಿಜಿ, ಯೋಗಿಯಂಥ ನಟರು ಯಶಸ್ವಿಯಾಗುವುದು ಆರೋಗ್ಯಕರ ಬೆಳವಣಿಗೆ ಅಲ್ಲವೇ? ಇನ್ನು ಹೀಗೆ ನಿರೀಕ್ಷೆ ಮಾಡುವವರು ನೋಡಲು ಹೀರೊ ಮೆಟೀರಿಯಲ್ ಆಗಿಲ್ಲದಿದ್ದರೆ ಸೂಕ್ಷ್ಮ ಭಾವನೆ, ಯಶಸ್ಸು ತಮಗಲ್ಲ ಎಂದು ಬಿಟ್ಟು ಬಿಡುತ್ತಾರೆಯೇ?

ರಾಂಝನಾ ಸಿನಿಮಾ ನನಗೆ ಅಷ್ಟೇನೂ ಇಷ್ಟ ಆಗಲಿಲ್ಲ. ಆದರೂ ಧನುಶ್ ನಂಥ ಹೀರೊ ಸೋನಮ್ ಕಪೂರ್‌ಳಂಥ ನಾಜೂಕು ಸುಂದರಿಯ ಎದುರಿಗೆ ನಟಿಸುವುದೇ ಖುಷಿಯಾಯಿತು.

ಸೂರ್ಯ ಎಂಬ 'ಹ್ಯಾಂಡ್ಸಮ್' ಹೀರೊ ನಟಿಸಿದ ತಮಿಳು ಚಿತ್ರ 'ಸಿಂಗಂ 2' ಕೂಡ ನೋಡಿದೆ. ಪೋಲಿಸ್ ಅಧಿಕಾರಿಯೊಬ್ಬನ ಧೈರ್ಯದ ಕಾಮಿಕ್ ಬುಕ್ ಅಡ್ವೆಂಚರ್ ನಂತಿರುವ ಚಿತ್ರ ಇದು.

ಸುಮಾರು ಮೂರು ಗಂಟೆ ಚಿತ್ರಮಂದಿರದಲ್ಲಿ ಕೂತು ಈ ಅತಿ ಉತ್ಪ್ರೇಕ್ಷೆಯ ಚಿತ್ರ ನೋಡಿ ಬೋರ್ ಆಯಿತು. ಕೊನೆಯಾಯಿತು ಎಂದುಕೊಂಡರೆ ಮತ್ತೆ ಇನ್ನೊಂದಿಷ್ಟು ಹಿಗ್ಗುತ್ತಿತ್ತು. `ಸಿಂಗಂ' ಅನ್ನೋ ಬದಲು ಈ ಚಿತ್ರಕ್ಕೆ `ಚೂಯಿಂಗ್ ಗಮ್' ಎಂದು ಹೆಸರು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು!

ಬ್ಯೂಟಿಪಾರ್ಲರ್ ಅವಘಡಗಳು
ಬೆಂಗಳೂರಿನ ಬ್ಯೂಟಿಪಾರ್ಲರ್‌ಗಳಲ್ಲಿ  `ಕೆಮಿಕಲ್ ಫೇಸ್ ಪೀಲ್' ಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರನೇಕರಿಗೆ ಮುಖ ಸುಟ್ಟಂತೆ ಆಗಿ ವೈದ್ಯರ ಬಳಿ ಧಾವಿಸುತ್ತಿದ್ದಾರೆ. ಸೌಂದರ್ಯದ ವ್ಯಾಪಾರ ವಿಸ್ತಾರವಾಗುತ್ತಲೇ ಇಂಥ ಕೆಲವು ಅಕ್ರಮಗಳು ಕೂಡ ಸಾಮಾನ್ಯವಾಗುತ್ತಿವೆ.

ಬ್ಯೂಟಿಶಿಯನ್ಸ್ ಇಂಥ ಚಿಕಿತ್ಸೆ ಕೊಡುವುದು ಕಾನೂನಿನ ದೃಷ್ಟಿಯಲ್ಲಿ ತಪ್ಪು. ಡರ್ಮಟಾಲಜಿಸ್ಟ್ಸ್, ಅಂದರೆ  ಚರ್ಮದ ವೈದ್ಯರು, ಮಾತ್ರ ನೀಡಬೇಕಾದ ಟ್ರೀಟ್ಮೆಂಟ್ ಬ್ಯೂಟಿ ಪಾರ್ಲರ್‌ಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದರಿಂದ ಸುಟ್ಟ ಗಾಯಗಳಲ್ಲದೆ ಅಲರ್ಜಿ, ಇನ್ಫೆಕ್ಷನ್ ಮತ್ತಿತ್ತರ ಬಾಧೆಗಳೂ ಕಾಣಿಸಿಕೊಳ್ಳುತಿವೆ.

ಬೆಂಗಳೂರಿನ ಆಸ್ಪತ್ರೆಗಳ ಚರ್ಮ ರೋಗ ವಿಭಾಗಗಳು ಹೀಗೆ ತೊಂದರೆಗೆ ಒಳಗಾದ ಹೆಂಗಸರನ್ನು ಟ್ರೀಟ್ ಮಾಡುತ್ತಿವೆ. ಪತ್ರಕರ್ತೆ ಮಾರಿಯಾ ಲವೀನ ಮಾತಾಡಿಸಿದ ಪ್ರತಿ ವೈದ್ಯರೂ ತಿಂಗಳಿಗೆ ನಾಲ್ಕೈದು ಇಂಥ ಕೇಸ್‌ಗಳನ್ನೂ ನೋಡುತ್ತಿದ್ದಾರಂತೆ.

ಗ್ಲೈಕೊಲಿಕ್ ಎಂಬ ರಾಸಾಯನಿಕ ಬಳಸಿ ಕೊಡುವ ಚರ್ಮದ ಚಿಕಿತ್ಸೆಗೆ ಅಡ್ಡ ಪರಿಣಾಮಗಳು ಇರುತ್ತವೆ ಎನ್ನುವುದನ್ನು ಬ್ಯೂಟಿಪಾರ್ಲರ್‌ಗಳು ಮರೆಮಾಚುತ್ತವೆ ಎಂದು ವೈದ್ಯರು ದೂರುತ್ತಿದ್ದಾರೆ. ಚರ್ಮದ ವೈದ್ಯರ ಹತ್ತಿರ ಹೋಗಿ ಇದೇ ಚಿಕಿತ್ಸೆ ಪಡೆದರೆ ಖರ್ಚೂ ಕಡಿಮೆ, ರಿಸ್ಕೂ ಕಡಿಮೆ ಎಂದು ಹೇಳುತ್ತಿದ್ದಾರೆ.

ಆಮೆ ವೇಗದ ಟೆಲಿಗ್ರಾಂ
ಜುಲೈ 12ಕ್ಕೆ ಕೊನೆಗೊಂಡ ಟೆಲಿಗ್ರಾಂ ಸೇವೆಗೆ ಭಾರತದಲ್ಲಿ ಒಂದೂವರೆ ಶತಮಾನದ ಇತಿಹಾಸವಿದೆ. ಇಮೇಲ್, ಮೊಬೈಲ್ ಬಂದ ಮೇಲೆ ಮೂಲೆಗುಂಪಾದ ಈ ಸೇವೆ ಹೇಗೆ ಕೆಲಸ ಮಾಡುತ್ತಿರಬಹುದು ಎಂದು ತಿಳಿಯಲು ಮೊನ್ನೆ ಒಂದು ಟೆಲಿಗ್ರಾಂ ನಮ್ಮ ಕಚೇರಿಗೆ ನಾವೇ ಕಳಿಸಿಕೊಂಡೆವು. ಟೆಲಿಗ್ರಾಂ ಕಚೇರಿಯಿಂದ ಮೂರು ಕಿಲೋಮೀಟರು ದೂರವಿರುವ ನಮ್ಮ ಆಫೀಸಿಗೆ ಆ ತಂತಿ ತಲುಪಲು ಒಂದು ವಾರಕ್ಕಿಂತ ಹೆಚ್ಚು ಸಮಯ ಹಿಡಿಯಿತು! ಟೆಲಿಗ್ರಾಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ ಒಬ್ಬಾತ ಹೇಳಿದ ಒಳ ಮರ್ಮ: ಸಾವು, ನೋವಿನ ಸಂಗತಿಯ ಟೆಲಿಗ್ರಾಂಗಳನ್ನು ಮಾತ್ರ ತಪ್ಪದೆ ತಲುಪಿಸುತ್ತಿದ್ದರಂತೆ. ಇನ್ನು ಮದುವೆ, ಹಬ್ಬ, ಹರಿದಿನಕ್ಕೆ ಕಳಿಸಿದ ಶುಭಾಶಯಗಳನ್ನು ಸೀರಿಯಸ್ ಆಗಿ ಪರಿಗಣಿಸುತ್ತಿರಲಿಲ್ಲವಂತೆ. ಮದುವೆ ಮನೆಗೆ ಬೆಳಿಗ್ಗೆ ಹೋಗಿ ಒಂದು ಶುಭಾಶಯ ಡೆಲಿವರಿ ಮಾಡಿದರೆ ಅಲ್ಲಿ ಒಳ್ಳೆ ತಿಂಡಿ ಆಗುತ್ತಿತ್ತಂತೆ. ಮತ್ತೆ ಊಟದ ಸಮಯಕ್ಕೆ ಇನ್ನೊಂದು ತಂತಿ ಡೆಲಿವರಿ ಮಾಡಿ ಊಟ ಮುಗಿಸುತ್ತಿದ್ದರಂತೆ. ಮಿಕ್ಕ ಟೆಲಿಗ್ರಾಂಗಳು ತಲುಪಿದರೆ ಕಳಿಸಿದವರ ಪುಣ್ಯ!


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT