ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ ಆದ್ಮಿ- ಹೊಸ ಆವೇಶ

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ತಲೆಗೆ ಬಿಳಿ ಟೋಪಿ, ಕೈಯಲ್ಲಿ ಪೊರಕೆ, ಭಾರತದ ರಾಜಕೀಯದಲ್ಲಿ ಒಂದು ಹೊಸ ಅವತಾರ. ಎರಡು ವರ್ಷಗಳ ಹಿಂದೆ ಆರಂಭವಾದ ಭ್ರಷ್ಟಾಚಾರ ವಿರೋಧಿ ಚಳವಳಿ ಒಂದು ರಾಜಕೀಯ ಪಕ್ಷವನ್ನು ಹುಟ್ಟುಹಾಕಿದೆ. ಅಣ್ಣಾ ಹಜಾರೆ ನೇತೃತ್ವದ ಈ ಹೋರಾಟ ಭಾರತದಾದ್ಯಂತ ಸಂಚಲನವನ್ನು ಹುಟ್ಟು­ಹಾಕಿತು. ಕಡೆಕಡೆಗೆ ‘ದೇವತಾ ಮನುಷ್ಯರು’ ಹೋರಾಟಕ್ಕಿಳಿದು ಜನಲೋಕಪಾಲ ಮಸೂದೆ­ಗಾಗಿ  ಆರ್ಭಟಿಸತೊಡಗಿದಾಗ ಅವರ ಹೋರಾ­ಟದ ಬಗೆಗೆ ಅನುಮಾನ ಹುಟ್ಟುವಂತಾಯಿತು.

ರಾಜಕೀಯ ಪಕ್ಷವಾಗುವುದನ್ನು ವಿರೋಧಿ­ಸಿದ ಅಣ್ಣಾ ಹಜಾರೆ ಅವರಿಂದ  ಬೇರ್ಪಟ್ಟು ಹೊಸತೊಂದು ಪಕ್ಷ ಕಟ್ಟಿ ­ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು ಅರವಿಂದ ಕೇಜ್ರಿವಾಲರ ತೀವ್ರಗತಿಯ ಚಲನೆಯಾಗಿತ್ತು.  ದೆಹಲಿಯಲ್ಲಿ ಹೊಸ ಪಕ್ಷ ಆಡಳಿತ ನಡೆಸ­ಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ.

ಕಳೆದ ಮೂರು ತಿಂಗಳಿಂದ ನರೇಂದ್ರ ಮೋದಿ ಭಾರತದ ಪ್ರಮುಖ ಆಕರ್ಷಣೆಯ ವ್ಯಕ್ತಿಯಾಗಿ ಮೆರೆದಾಗ ಅದನ್ನು ಎದುರಿಸುವುದು ಕಾಂಗ್ರೆಸ್‌ಗೆ ದೊಡ್ಡ ಸವಾಲಿನ ವಿಚಾರವೇ ಆಗಿತ್ತು. ಪರವಾಗಿ ಅಥವಾ ವಿರೋಧವಾಗಿ ಚರ್ಚೆಗೆ ಒಳಗಾದ ಮೋದಿ, ಮಾಧ್ಯಮಗಳ ವಿಸ್ತಾರವಾದ ಜಾಗವನ್ನು ಆವರಿಸಿದ್ದು ಸಾಕಷ್ಟು ಜನರಿಗೆ ನುಂಗಲಾರದ ತುತ್ತಾಗಿತ್ತು. ಧರ್ಮ­ವನ್ನು ಬಿಟ್ಟು ಚಾರಿತ್ರಿಕ ವ್ಯಕ್ತಿ ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಚುನಾವಣೆಯ ಕೇಂದ್ರ ವಿಚಾರವಾಗಿಸಿದ್ದು ಬಿಜೆಪಿಯ ಹೊಸ ರಾಜಕೀಯ ನಾಟಕ. ಬಹುಶಃ ಪಟೇಲರಂತೆ ಮೋದಿ­ಯನ್ನು ಉಕ್ಕಿನ ಮನುಷ್ಯ ಎಂದು ಬಿಂಬಿ­ಸು­ವುದು, ಅಲ್ಲದೇ ಪಟೇಲರ ಇತರ ಗುಣಗ­ಳನ್ನೂ ಮೌನದಲ್ಲಿ ಆರಾಧಿಸುವುದೂ ಇದರ ಉದ್ದೇಶವಾಗಿರಬೇಕು.

ಕಾಂಗ್ರೆಸ್‌ಗೆ ಹಲವು ಗೊಂದಲಗಳು. ಆಳುವ ಪಕ್ಷ ತನ್ನ ಸಾಧನೆಯ ಮೇಲೆ ಮತ ಯಾಚಿಸ­ಬೇಕು. ಇಲ್ಲವೇ ಹೊಸ ಭರವಸೆಗಳನ್ನು ಕಟ್ಟ­ಬೇಕು. ಪ್ರಧಾನಿ ಮನಮೋಹನ್ ಸಿಂಗ್ ಎಂದೂ ಚುನಾವಣಾ ಪ್ರಚಾರದ ಹೊಣೆಯನ್ನು ಇಡಿ­ಯಾಗಿ ನಿಭಾಯಿಸಿದವರಲ್ಲ. ಕಾಂಗ್ರೆಸ್‌ನ ಚುನಾ­ವಣಾ ಪ್ರಚಾರಾಂದೋಲನವನ್ನು ಇಬ್ಬರು ಮೂವರು ಪಕ್ಷದ ಪ್ರತಿನಿಧಿಗಳು ವಹಿಸಿಕೊಂಡು ನಡೆಸುವುದು ಸಾಮಾನ್ಯ ಶೈಲಿ. ಆದರೆ ಈ ಬಾರಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಹೇಳದೆಯೂ ರಾಹುಲ್ ಗಾಂಧಿ ಮುಂಚೂಣಿಯಲ್ಲಿ ಕಾಣಿಸಿ­ಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ಗೆ ಬೀಳುವ ಅರ್ಧ ಭಾಗದ ಮತ ಸಾಂಪ್ರದಾಯಿಕವಾದುದು. ಕಾಂಗ್ರೆಸ್ ಪಕ್ಷಕ್ಕಾಗಿ ಮತ ನೀಡಲಾಗುತ್ತದೆ,  ವ್ಯಕ್ತಿಯನ್ನು ನೋಡು­ವು­ದಿಲ್ಲ. ಅದರಲ್ಲೂ  ಸಂವಿಧಾನಾತ್ಮಕ ರಕ್ಷಣೆ ಬಯ­ಸುವ ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತವೆ. ಕಾಂಗ್ರೆಸ್ ತನ್ನ ಸಿದ್ಧಾಂತಕ್ಕೆ ಸದಾ ಬದ್ಧವಾಗಿದೆಯೆಂದೇನೂ ಅಲ್ಲ. ಅದರ ಆರ್ಥಿಕ ಸಿದ್ಧಾಂತ ಹೊರನೋಟಕ್ಕೆ ಕಾಣುವಂತೆ ಸದಾ ಬಡವರ ಪರವಾಗಿಯೂ ಇಲ್ಲ. ರಾಜ­ಕಾರಣಿ­ಗಳೇ ಬಂಡವಾಳಗಾರರಾಗಿ ರೂಪಿತ­ವಾಗಿರುವ ಈ ಹೊತ್ತಿನಲ್ಲಿ ಬಂಡವಾಳಶಾಹಿಯ ವಿರುದ್ಧವಾಗಿ ಅವರು ನಿಲ್ಲುತ್ತಾರೆಂದು ನಿರೀಕ್ಷಿ­ಸು­ವುದು ಅಸಂಬದ್ಧವಾಗಿದೆ.

ಆರ್ಥಿಕ ನೀತಿಯನ್ನಾಗಲೀ, ಸಾಮಾಜಿಕ ಸುಧಾರಣೆಯನ್ನಾಗಲೀ ಬೋಧಿಸದೆ ಭ್ರಷ್ಟತೆಯ ವಿರೋಧವನ್ನೇ ಘೋಷಣಾ ವಾಕ್ಯವಾಗಿಸಿ­ಕೊಂಡ ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಗೆಲುವನ್ನು ಮಾತ್ರವಲ್ಲ, ಮುಂದಿನ ಸಾಧ್ಯತೆಗಳನ್ನು ಎಲ್ಲರೂ ಚರ್ಚಿಸುವಂತಾಗಿದೆ. ಸದ್ಯಕ್ಕೆ ಆಮ್ ಆದ್ಮಿ ಪಕ್ಷದ ಗೆಲುವು ದೆಹಲಿಗೆ ಸೀಮಿತವಾಗಿದೆ.  ಈ ಚುನಾವಣೆಯ ಫಲಿತಾಂಶ ಮುಂದಿನ ರಾಜಕೀಯ ಮುನ್ನೋಟವನ್ನು ಒದಗಿಸಿದೆ.  ಭಾರತದ ರಾಜಕೀಯ ಲೆಕ್ಕಾಚಾರ­ಗಳನ್ನು ಬದಲಾಯಿಸುವ ಸಾಧ್ಯತೆಯಿದೆ. ಬಿಜೆಪಿ ಪ್ರಬಲ ರಾಷ್ಟ್ರೀಯ ಪಕ್ಷವಾಗಿ ರೂಪಿತವಾದ ಮೇಲೆ ಮೂರನೇ ಶಕ್ತಿಯಾಗಿ ಎಡ ಪಕ್ಷಗಳು ಇಲ್ಲವೇ ಸಮಾಜವಾದಿ ಹಿನ್ನೆಲೆಯ ಪಕ್ಷಗಳು ಒಂದುಗೂಡುತ್ತಿದ್ದವು. ಈಗ ಮೂರನೇ ಶಕ್ತಿಯಾಗಿ ಆಮ್ ಆದ್ಮಿ ತಲೆ ಎತ್ತುವ ಸಾಧ್ಯತೆ­ಯಿದೆ. ಆಮ್ ಆದ್ಮಿ ಪಕ್ಷವಾಗಿ ಪೈಪೋಟಿ ಒಡ್ಡುವುದಕ್ಕಿಂತ ಕೇಜ್ರಿವಾಲ್ ವ್ಯಕ್ತಿಯಾಗಿ ಮೋದಿ, ರಾಹುಲ್‌ ಅವರ ನಡುವಿನ ಪೈಪೋಟಿಗೆ ತ್ರಿಕೋನ ಸ್ಪರ್ಧೆಯ ಸ್ವರೂಪ ನೀಡ­ಬಹುದು. ಈಗಲೇ ಲೋಕಸಭಾ ಚುನಾವಣೆಯ ಪಕ್ಷದ ನಾಯಕನನ್ನು ಗುರುತಿಸಿಕೊಳ್ಳಲು ಸಿದ್ಧವಾಗದಿದ್ದರೂ ಕೇಜ್ರಿವಾಲ್ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಂತಾಗಿದೆ.

ಈವರೆಗಿನ ಭಾರತದ ಎಲ್ಲಾ ರಾಜಕೀಯ ಪಕ್ಷಗಳೂ ಯಾವುದಾದರೊಂದು ಸಿದ್ಧಾಂತದ ಹಿನ್ನೆಲೆಯಲ್ಲಿ ಬಂದವೇ ಆಗಿವೆ. ತನಗೆ ಯಾವುದೇ ಸಿದ್ಧಾಂತ ಮುಖ್ಯವಲ್ಲ  ಎಂದು ಹೇಳುತ್ತಾ ಭ್ರಷ್ಟಾಚಾರ ವಿರೋಧವನ್ನೇ ಸಿದ್ಧಾಂತ­ವಾಗಿಸಿಕೊಂಡು ಕೇಜ್ರಿವಾಲ್  ನೇತೃತ್ವ­ದಲ್ಲಿ ಆಮ್ ಆದ್ಮಿ ಮುನ್ನುಗ್ಗುತ್ತಿದೆ. ಬಿಳಿ ಟೋಪಿ ಸ್ವತಂತ್ರ ಪೂರ್ವದ ಚಿತ್ರಣವನ್ನು ಕಟ್ಟಿ­ಕೊಡು­ತ್ತಿದೆ. ಅದರಲ್ಲೂ ಅದು ರಾಷ್ಟ್ರೀಯ ಕಾಂಗ್ರೆಸ್ ಬಳಸಿದ ಸಂಕೇತವಾಗಿತ್ತು.  21ನೆಯ ಶತಮಾನದಲ್ಲಿ ಅದು ಮತ್ತೆ ಮರುಕಳಿಸುವ ಉದ್ದೇಶವಾದರೂ ಏನು? ಸ್ವಾತಂತ್ರ್ಯಾ­ನಂತರ­ದಲ್ಲಿ ಬಿಳಿ ಟೋಪಿ ರಾಜಕಾರಣಿಗಳ ಉಡುಗೆ­ಯಾಗಿ ಬಳಕೆಯಾಗುತ್ತಿತ್ತು. ಆ ನಂತರದಲ್ಲಿ ಬಿಳಿ ಟೋಪಿ ಅರ್ಥ ಕಳೆದುಕೊಳ್ಳುತ್ತಾ ಬಂದಿದ್ದು ಈಗ ಮತ್ತೊಮ್ಮೆ ಅದರ ಮೊರೆ ಹೋಗು­ವಂತಾಗಿದೆ.

ಚುನಾವಣೆಯ ಸಂಕೇತಗಳನ್ನು ಪಡೆಯು­ವಾಗ, ಬಾವುಟಕ್ಕೆ ಬಣ್ಣ ಬಳಸುವಾಗ ಅದ­ಕ್ಕೊಂದು ಅರ್ಥ ಕೊಟ್ಟುಕೊಳ್ಳುವ ಪ್ರಯತ್ನ ನಡೆದೇ ಇರುತ್ತದೆ. ಪೊರಕೆಯನ್ನು ಹಿಡಿಯು­ವಾಗ ಅದಕ್ಕೊಂದು ಅರ್ಥವಿದೆ. ಸಾಮಾನ್ಯ­ವಾಗಿ ಕರ್ಮಚಾರಿಗಳ ಕೈಯಲ್ಲಿ ಪೊರಕೆ ಕಾಣು­ವುದರಿಂದ ಆ ಸಮುದಾಯವನ್ನೋ ಇಲ್ಲವೇ, ಅವರ ಉದ್ಯೋಗವನ್ನೋ ಪ್ರತಿನಿಧಿಸುವ ಉದ್ದೇಶ­­ವಿರುತ್ತದೆ. ಕರ್ಮಚಾರಿಗಳು ಅವರ ಸಂಕೇತವಾಗುವುದಾದರೆ ವಿಸ್ತಾರದ ನೆಲೆಯಲ್ಲಿ ತಳ ಸ್ತರದ ಸಮಾಜವನ್ನು ಪ್ರತಿನಿಧಿಸುವುದು ಅವರ ಯೋಜನೆಯಾಗಿರಬೇಕು.

ಮಾರ್ಕ್ಸ್‌­ವಾದದ ಬೆನ್ನೆಲುಬಿನಲ್ಲಿ ಇಂತಹ ವಿಚಾರಗಳು ಹುಟ್ಟುತ್ತವೆ. ಇಲ್ಲವೇ ಭಾರತದಲ್ಲಿ ದಲಿತ ಚಳವಳಿಯನ್ನು  ಹುಟ್ಟುಹಾಕಿದ ಅಂಬೇಡ್ಕರ್‌­ವಾದ ಇಂತಹ ಐಡೆಂಟಿಟಿಯನ್ನು ತಂದು­ಕೊಡುತ್ತದೆ. ಆದರೆ ಅಂಬೇಡ್ಕರ್ ವಿಚಾರವನ್ನೇ ಮುಂದುಮಾಡಿಕೊಂಡ ಬಿಎಸ್‌ಪಿ ಸಹ ಸಮು­ದಾಯ ಒಂದರ  ಗುರುತನ್ನು ಇರಿಸಿ­ಕೊಳ್ಳಲಿಲ್ಲ; ಆನೆಯನ್ನು ಪಕ್ಷದ ಚುನಾವಣೆಯ ಗುರುತಾಗಿಸಿ­ಕೊಂಡಿತು. ಆದರೆ ಸಮಾಜವಾದಿಯೆಂದು ನೇರವಾಗಿ ಹೆಸರಿನಲ್ಲೇ ಹೇಳಿಕೊಂಡಿತು.  ಪಕ್ಷ­ಗಳ ಹೆಸರುಗಳೇ ಸಿದ್ಧಾಂತವನ್ನೂ ಸೂಚಿಸು­ತ್ತವೆ. ಬಿಎಸ್‌ಪಿಗೆ ದಲಿತ ಸಮುದಾಯದ ಹಿತ ಕಾಪಾಡು­ವುದು ಬದ್ಧತೆಯಾಗಿರುತ್ತದೆ. ಆಮ್ ಆದ್ಮಿಗೆ ಅದರ ಸಂಕೇತಗಳು ಬೇಕಾಗಿವೆ. ಪೊರಕೆ ಏನಾದರೂ ಕರ್ಮಚಾರಿಯನ್ನು ಬಿಂಬಿಸಿದ್ದರೆ ಅದು ಬದ್ಧತೆಯಲ್ಲ ಬಂಡವಾಳ.

ಕಾಂಗ್ರೆಸ್ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಬಹಳ ವಿಸ್ತಾರದ ನೆಲೆಯಲ್ಲಿ ಭವ್ಯ ಭಾರತದ ಕನಸನ್ನೇ ಕಟ್ಟಿಕೊಂಡಿತ್ತು. ರಾಷ್ಟ್ರೀಯ ಹೋರಾ­ಟದ ಬಹುದೊಡ್ಡ ಕನಸನ್ನು ನಿಭಾಯಿಸುವ ಜವಾ­ಬ್ದಾರಿಯನ್ನು ಹೊತ್ತಿತ್ತು.  ಆದರೆ ಭ್ರಷ್ಟ­ತೆಯೂ ನಿಧಾನವಾಗಿ ಸೇರಿ ಹೋಯಿತು. ದೊಡ್ಡ ಆಲದ ಮರದಲ್ಲಿ ಕಾಣುವ ಪೊಟರೆಯ ಹಾಗೆ.   

ಆಮ್ ಆದ್ಮಿ ಎಂದರೆ ಜನ ಸಾಮಾನ್ಯ; ಜನಸಾಮಾನ್ಯರ ಪಕ್ಷವೆಂದು ಹೇಳಿಕೊಂಡಿರು­ವುದ­ರಿಂದ ಯಾರೆಲ್ಲರು ಜನಸಾಮಾನ್ಯರು-? ಈ ಒಂದು ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಸಾಮಾಜಿಕ ನಿಲುವುಗಳೇನೆಂದು ತಿಳಿಯುತ್ತದೆ. ಅಂಬೇಡ್ಕರ್ ದಲಿತ ಪದವೊಂದನ್ನು ವಿವರಿ­ಸುತ್ತಾ ಶೋಷಿತರೆಲ್ಲರೂ ದಲಿತರೆಂದು ಜಾತಿ ವರ್ಗವನ್ನು ಮೀರಿದ ವ್ಯಾಖ್ಯಾನವನ್ನು ಕಟ್ಟಿ­ಕೊಟ್ಟರು. ಶ್ರೀಸಾಮಾನ್ಯನ ‘ದೀಕ್ಷಾ ಗೀತೆ’ ಕವನದಲ್ಲಿ ಕುವೆಂಪು ಪ್ರಜಾಪ್ರಭುತ್ವ ಬಂದಾಗ ‘ಇನ್ನಿದು ಶ್ರೀಸಾಮಾನ್ಯನ ಕಾಲ’ವೆಂದು ಹೇಳುತ್ತಾ, ‘ಇನ್ನಾಯಿತು ಅಹಂಇಹಂಮಿಕೆಯ ಗರ್ವದ ಕಾಲ. ಇದು ಸರ್ವರ ಕಾಲ’ ಎಂದು ಸರ್ವೋದಯವನ್ನು ಬಯಸುತ್ತಾರೆ.  ಪ್ರಜಾ­ಪ್ರಭುತ್ವ, ಶ್ರೀಸಾಮಾನ್ಯ, ಸರ್ವೋದಯ ಇದಾ­ವುದೂ ಹೊಸ ಪರಿಕಲ್ಪನೆಗಳಲ್ಲ.  

ಆಮ್ ಆದ್ಮಿ ಪಕ್ಷದ ಹೆಸರು ಹಿಂದಿಯಲ್ಲಿರು­ವುದರಿಂದ ಅದು ಉತ್ತರ ಭಾರತದ ಜನರಿಗೆ ಮಾತ್ರ ಸಲ್ಲುವಂತಹದೇ ಎಂದು ದಕ್ಷಿಣದವರಿಗೆ ಅನುಮಾನ ಹುಟ್ಟುತ್ತದೆ. ಬಿಜೆಪಿ ತನ್ನದೇ ಆದ ಭಾಷಾ ಬಳಕೆಯನ್ನು ಹೊಂದಿದೆ. ಸಾಮಾನ್ಯ­ವಾಗಿ ಅವರ ನಾಮಕರಣದಲ್ಲಿ ಸಂಸ್ಕೃತ ಬಳಕೆ ಇರುತ್ತದೆ. ಪರಿಷತ್, ಸಂಘಟನ್, ರಾಷ್ಟ್ರೀಯ, ಸಂಸ್ಕೃತಿ, ಸನಾತನ್ ಇಂತಹ ಪದಪುಂಜಗಳಿಂದ ತುಂಬಿ ಹೋಗಿರುತ್ತದೆ. ಮಾರ್ಕ್ಸ್‌ವಾದಿಗ­ಳಾದಲ್ಲಿ ಊಳಿಗಮಾನ್ಯ, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ಇವುಗಳ ವಿರೋಧ ಮೂಲ­ಮಂತ್ರವಾಗಿರುತ್ತದೆ.  

ಆಮ್ ಆದ್ಮಿ ಒಂದು ಹೊಸ ರಾಷ್ಟ್ರೀಯ ಪಕ್ಷವೇ ಆದಲ್ಲಿ ಅದು ಜನಸಾಮಾನ್ಯರ ಪ್ರತಿ­ನಿಧಿ­ಯಾಗಿ ರೈತ ಹಾಗೂ ಕಾರ್ಮಿಕರ ಪರವಾಗಿ ನಿಲ್ಲಲು ಸಾಧ್ಯವೇ? ಇಂತಹ ವಿಚಾರಗಳಲ್ಲಿ ಸ್ಪಷ್ಟತೆ ಬೇಕಾಗುತ್ತದೆ. ಸಾಮಾನ್ಯನ ಪಕ್ಷ­ವೆಂದಾಗ ಬಂಡವಾಳಶಾಹಿಗಳ ಪರವಲ್ಲ ಎಂದು ಭಾವಿಸಬೇಕೆ? ಈ ಪಕ್ಷ ನಂಬುವ ಆರ್ಥಿಕ ನೀತಿ ಏನು? ನೀರನ್ನು ಪೂರೈಸಿದಾಗ ಇಲ್ಲವೇ ವಿದ್ಯುತ್ ಕೊರತೆ ನೀಗಿಸಿದಾಗ ಜನರಲ್ಲಿ ನಂಬಿಕೆ ಹುಟ್ಟು­ವುದು ನಿಜ. ಅದಕ್ಕೆ ದೀರ್ಘ ಕಾಲದ ಪರಿಹಾರ­ವನ್ನು ಕಂಡುಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಭಾರತಕ್ಕಿರುವ ವಿದ್ಯುತ್ ಕೊರತೆಯನ್ನು ಮುಂದಿಟ್ಟು­ಕೊಂಡು ಅಮೆರಿಕದ ಜೊತೆ ಅಣು ಒಪ್ಪಂದವನ್ನು ಮಾಡಿಕೊಂಡಿತು. ಅದನ್ನು ವಿರೋಧಿಸಿ ಕಮ್ಯುನಿಸ್ಟ್  ಪಕ್ಷ  ಕಾಂಗ್ರೆಸ್ ಮೈತ್ರಿಯಿಂದ  ಹೊರಗುಳಿಯಿತು. ಇಲ್ಲಿ ಅಮೆರಿಕದ ಜೊತೆ­ಗಿನ ಒಪ್ಪಂದ ಅನಿವಾರ್ಯವಾಗಿತ್ತೆ? ಹೊರ­ನೋಟಕ್ಕೆ ಹೌದೆಂದು ಕಾಣುತ್ತದೆ. ಕಡೆಗೂ ಅಮೆರಿಕದ ಹಿಡಿತಕ್ಕೆ ಭಾರತ ಸಿಕ್ಕಿಹಾಕಿ­ಕೊಳ್ಳಲಿಲ್ಲವೇ? ಇಲ್ಲಿ ಭ್ರಷ್ಟತೆಯ ನೆಲೆಗಳು ತಾತ್ವಿಕವಾಗಿರುತ್ತವೆ.

ಲಂಚ ತೆಗೆದುಕೊಳ್ಳುವುದನ್ನು ಭ್ರಷ್ಟತೆ ಎಂದು ಗುರುತಿಸಲಾಗುತ್ತದೆ. ಪ್ರಯಾಣಿಕರಿಗೆ  ಬಸ್‌­ನಲ್ಲಿ ಕಂಡಕ್ಟರ್ ಉಳಿಕೆ ಚಿಲ್ಲರೆ ಕೊಡದೆ ಹೋದಾಗ ಅನ್ಯಾಯ ಎಂದು ಕಾಣುತ್ತದೆ. ಶಾಲೆ­ಯಲ್ಲಿ ಶುಲ್ಕ ಜಾಸ್ತಿಯಾದಾಗ ಶೋಷಣೆ ಎಂದು ಅನಿಸುತ್ತದೆ. ಆದರೆ ಬೌದ್ಧಿಕ ಭ್ರಷ್ಟತೆಯ ವಿರುದ್ಧ ಹೋರಾಡುವುದು ಹೇಗೆ? ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆಟೊ­ರಿಕ್ಷಾ ಚಾಲಕರು ಬೆಂಬಲ ನೀಡಿದರು. ದೆಹಲಿ ಕೊಳೆಗೇರಿವಾಸಿಗಳಿಗೆ ಯಾವುದರ­ಲ್ಲಾದರೂ ರಿಯಾಯಿತಿ ಕೊಡಲು ಸಾದ್ಯವೇ? ಹಾಗೆ ಕೊಟ್ಟ ರಿಯಾಯಿತಿ ಭ್ರಷ್ಟತೆಯಾಗುತ್ತದೆಯೇ?
ತಮ್ಮ ಪಕ್ಷದ ಆದರ್ಶಗಳನ್ನು ಬರೆದ ಕೇಜ್ರಿ­ವಾಲ್ ಅದನ್ನು ‘ಸ್ವರಾಜ್’ ಎಂದು ಕರೆದು­ಕೊಂಡಿದ್ದಾರೆ. ಹಾಗೂ ಗಾಂಧಿ ಕಂಡ ಸ್ವರಾಜ್ಯ ಗುರಿಯಾಗಿಸಿಕೊಂಡಂತೆ ಹೇಳಿಕೊಳ್ಳುತ್ತಾರೆ. ಹಾಗಾದರೆ ಗಾಂಧಿವಾದ ಇವರು ನಂಬುವ ಸಿದ್ಧಾಂತವೇ? ಅದರ ಸಂಕೇತವಾಗಿಯೂ ಟೋಪಿ­­­ಯನ್ನು ಧರಿಸಿರಬಹುದು. ಆಮ್ ಆದ್ಮಿಯ ಆದರ್ಶಗಳ ಪುಸ್ತಕ ಸ್ವರಾಜ್‌ನಲ್ಲಿ ಇಂದಿನ ರಾಜಕೀಯ ವಿಮರ್ಶೆಯನ್ನು ಸೊಗ­ಸಾಗಿ ಮಾಡಲಾಗಿದೆ.  ವ್ಯವಸ್ಥೆ ಬದಲಿಸ­ಬೇಕೆಂಬ ಗುರಿ ಸೊಗಸಾಗಿಯೇ ಇದೆ. ಈವರೆಗಿನ ರಾಜ­ಕೀಯ ಪಕ್ಷಗಳೂ ಅದನ್ನೇ ಹೇಳುತ್ತಾ ಬಂದಿವೆ. 

ಕೇಜ್ರಿವಾಲ್ ಅವರು ತಿಲಕರ ಸ್ವರಾಜ್‌ ಮತ್ತು ಗಾಂಧಿ ಕಲ್ಪನೆಯ ಸ್ವರಾಜ್‌ಗಳ ಉಲ್ಲೇಖ ಮಾಡುತ್ತಾರೆ. ಅವರಿಬ್ಬರ ಸ್ವರಾಜ್‌ ಕಲ್ಪನೆ­ಗಳು ಬೇರೆಬೇರೆ. ಅವು ಸ್ವಾತಂತ್ರ್ಯ ಪೂರ್ವದ  ಕನಸುಗಳು. ಆರು ದಶಕಗಳ ಪ್ರಜಾ­ಪ್ರಭುತ್ವದ ಅನುಭವ ಹೊಸ ಚಿಂತನೆಯನ್ನು ಬೇಡುತ್ತದೆ.
ದೆಹಲಿ ಮುಖ್ಯಮಂತ್ರಿಯಾಗಿ ಬಂದು ಕೇಜ್ರಿವಾಲ್ ಜನರನ್ನು ಉದ್ದೇಶಿಸಿ ಮಾತನಾಡು­ವಾಗ ಮಾತಿನಲ್ಲಿ ಹೆಜ್ಜೆಹೆಜ್ಜೆಗೂ ಭಗವಂತನ ಆಶೀರ್ವಾದವೆಂದು ಹೇಳುವು­ದರ ಅರ್ಥವೇನು? ಜನತೆ ತಮ್ಮನ್ನು  ಗೆಲ್ಲಿಸಿದರೆಂಬ ನಂಬಿಕೆಯೂ ಇಲ್ಲವೇ?  ಆಮ್ ಆದ್ಮಿಯನ್ನು ನಂಬಿದವರು ಜನತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲಿಲ್ಲವೇಕೆ? ಮತ­ದಾರನ ಬಗೆಗೆ ನಂಬಿಕೆ ಇಲ್ಲವೆಂದು ಸಂದೇಶ­ವನ್ನು ಕೊಟ್ಟಂತಾಗ­ಲಿಲ್ಲವೇ? ಮತದಾರನ ಜವಾಬ್ದಾರಿಯನ್ನು ವಿಶೇಷವಾಗಿ ಹೇಳುತ್ತಿರು­ವುದ­ರಿಂದ ಇಂತಹ ಪ್ರಶ್ನೆಗಳು ಏಳುತ್ತವೆ.

ಕಾರ್ಮಿಕರು, ರೈತರು, ಮತದಾರರು, ಈ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿ ತಮ್ಮ ನಿಷ್ಠೆಯನ್ನು ಮೆರೆದ ರಾಜಕಾರಣಿಗಳಿ­ದ್ದಾರೆ. ಕಡೇಪಕ್ಷ ಚುನಾವಣೆ­ಯಲ್ಲಿ ಗೆದ್ದ ಪ್ರಜಾ ಪ್ರತಿನಿಧಿಗಳು ಸಂವಿಧಾನದ ಹೆಸರಿನಲ್ಲಾದರೂ ಪ್ರಮಾಣವಚನ ಸ್ವೀಕರಿಸು­ವುದು ಉತ್ತಮ­ವೆನಿಸು­ತ್ತದೆ. ಇದು ಈ ಸಂದರ್ಭ­ದಲ್ಲಿ ಎದ್ದ ಚರ್ಚೆಯಾದರೂ ಪ್ರಜಾಪ್ರಭುತ್ವದ ಅಡಿಯಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳಿಗೂ ಅನ್ವಯಿ­ಸುವ ವಿಚಾರವೇ ಆಗಿದೆ. ಸಮಾನ ಸಮಾಜ­ದೆಡೆಗೆ ಸಾಗುವುದು ಭಾರತ ಸಂವಿಧಾನದ ಮೂಲಗುರಿಯಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT