ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಧ ಬಿಸುಟದೆ ಶಾಂತಿ ಬರಿಯ ಮಾತಷ್ಟೆ

Last Updated 21 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ಯುದ್ಧ ಯಾವ ಕಾರಣದಿಂದಲೂ ಮೊದಲ ಆಯ್ಕೆಯಾಗಬಾರದು. ಈ ಸ್ಮಾರಕವನ್ನು ನೋಡುವಾಗ ಕರುಳುಹಿಂಡಿದ ಅನುಭವವಾಗುತ್ತದೆ’ ಇದು ಕಳೆದ ವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಹಿರೋಶಿಮಾ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟಾಗ ಆಡಿದ ಮಾತು.

ಎರಡನೇ ವಿಶ್ವ ಸಮರದ ನಂತರದ ಈ 70 ವರ್ಷಗಳಲ್ಲಿ ಹಗೆತನ ಮರೆತು ಅಮೆರಿಕ ಮತ್ತು ಜಪಾನ್ ಒಂದಾಗಿವೆ, ಪರಸ್ಪರ ಸ್ನೇಹ ತಂತುಗಳನ್ನು ಗಟ್ಟಿಯಾಗಿಸಿಕೊಳ್ಳಲು ಪ್ರಯತ್ನ ಮಾಡುತ್ತಲೇ ಇವೆ. ಆದರೂ ಇದುವರೆಗೆ ಅಮೆರಿಕ ತಾನು ಹಿರೋಶಿಮಾ  ಮತ್ತು ನಾಗಸಾಕಿ ನಗರಗಳ ಮೇಲೆ ಅಣು ಬಾಂಬ್ ದಾಳಿ ನಡೆಸಿ, ಇತಿಹಾಸದ ಅತ್ಯಂತ ಕರಾಳ ಮತ್ತು ಹೇಯ ಕೃತ್ಯವೊಂದಕ್ಕೆ ಕಾರಣವಾದದ್ದರ ಬಗ್ಗೆ ಕ್ಷಮೆ ಕೇಳಿಲ್ಲ.

ಅಮೆರಿಕದ ಅಧ್ಯಕ್ಷರು ಹಿರೋಶಿಮ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟಿಲ್ಲ. ಹಾಗಾಗಿ ಕೆರ್ರಿ ಅವರ ಈ ಭೇಟಿ ಸಹಜವಾಗಿ ಮಹತ್ವ ಪಡೆದುಕೊಂಡಿತು. ಜೊತೆಗೆ ಮುಂದಿನ ತಿಂಗಳು ಒಬಾಮರ ಜಪಾನ್ ಪ್ರವಾಸ ನಿಗದಿಯಾಗಿರುವುದರಿಂದ, ಕೆರ್ರಿ ಅವರನ್ನೇ ಅನುಸರಿಸಿ ಒಬಾಮ ಹಿರೋಶಿಮಾ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಬಹುದೇ ಎಂಬ ನಿರೀಕ್ಷೆಯೂ ಗರಿಗೆದರಿದೆ. ಹಾಗೊಮ್ಮೆ ಭೇಟಿ ಸಾಧ್ಯವಾದರೆ, ಹಿರೋಶಿಮಾ  ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟ ಮೊದಲ ಅಮೆರಿಕ ಅಧ್ಯಕ್ಷ ಎಂಬ ಕೀರ್ತಿಗೆ ಒಬಾಮ ಭಾಜನರಾಗುತ್ತಾರೆ.

ಅಮೆರಿಕ ಅಧ್ಯಕ್ಷರಾಗಿ ಒಬಾಮ ಅಧಿಕಾರ ಅವಧಿ ಇನ್ನು ಕೆಲವು ತಿಂಗಳಷ್ಟೇ ಬಾಕಿಯಿದೆ. ಒಬಾಮರ ಈ ಎರಡು ಅವಧಿಯ ಸಾಧನೆಗಳೇನು ಎಂದು ನೋಡುವಾಗ ಅಣ್ವಸ್ತ್ರ ಪ್ರಸರಣ ತಡೆಗೆ ಅವರು ತೋರಿದ ಆಸಕ್ತಿ ಮತ್ತು ರೂಪಿಸಿದ ಯೋಜನೆಗಳು ಮುಖ್ಯವಾಗಿ ಕಾಣುತ್ತವೆ. ಹಿಂದೆ ಕೂಡ ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳಾಗಿದ್ದವಾದರೂ, ಪರಮಾಣು ಅಸ್ತ್ರ ಪ್ರಸರಣ ತಡೆ, ಅಮೆರಿಕದ ರಕ್ಷಣಾ ಕಾರ್ಯ ನೀತಿಯ ಕೇಂದ್ರವಾಗಿದ್ದು ಒಬಾಮ ಅವಧಿಯಲ್ಲೇ.

2009ರಲ್ಲಿ ಒಬಾಮ ಅಧ್ಯಕ್ಷರಾದ ಮೇಲೆ ಪ್ರಪಂಚವನ್ನು ಅಣ್ವಸ್ತ್ರ ಮುಕ್ತವಾಗಿಸುವ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಅದರಲ್ಲೂ ಜೆಕ್ ಗಣರಾಜ್ಯದ ಪ್ರಾಗ್ ನಗರದಲ್ಲಿ 2009ರ ಏಪ್ರಿಲ್ 5ರಂದು ಒಬಾಮ ಆ ಬಗ್ಗೆ ಸುದೀರ್ಘ ಭಾಷಣವನ್ನೇ ಮಾಡಿದ್ದರು. ಆ ಭಾಷಣದಲ್ಲಿ ಅವರು ತಮ್ಮ ಮಾತನ್ನು ಕೇಂದ್ರೀಕರಿಸಿದ್ದು, 21ನೆಯ ಶತಮಾನದಲ್ಲಿ ಪರಮಾಣು ಅಸ್ತ್ರಗಳ ಭವಿಷ್ಯದ ಕುರಿತಾಗಿ.

‘ಶೀತಲ ಸಮರದ ಅವಧಿಯಲ್ಲಿ ಸಾವಿರಾರು ಅಣ್ವಸ್ತ್ರಗಳು ತಯಾರಾದವು. ಶೀತಲ ಸಮರ ಅಂತ್ಯವಾಗಿದೆ ನಿಜ, ಆದರೆ ಪರಮಾಣು ಅಸ್ತ್ರಗಳು ಹಾಗೆಯೇ ಉಳಿದುಕೊಂಡಿವೆ.

ಇದೀಗ ಪರಮಾಣು ಯುದ್ಧ ಘಟಿಸಬಹುದಾದ ಸಾಧ್ಯತೆ ಕ್ಷೀಣಿಸಿದೆ, ಆದರೆ ಅಣ್ವಸ್ತ್ರ ದಾಳಿಯ ಭಯವಂತೂ ಹೆಚ್ಚುತ್ತಿದೆ. ಉಗ್ರರಿಗೆ ಅಣ್ವಸ್ತ್ರಗಳು ಉಪಲಬ್ಧವಾದರೆ ಅನಾಹುತವಾದೀತು ಎಂಬ ಭೀತಿ ಆವರಿಸಿದೆ’ ಎಂದಿದ್ದರು. ಜೊತೆಗೆ ‘ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರವಾಗಿ, ಅಣು ಬಾಂಬ್ ಬಳಸಿದ ಏಕೈಕ ರಾಷ್ಟ್ರವಾಗಿ, ಅಣ್ವಸ್ತ್ರಗಳಿಗೆ ಕಡಿವಾಣ ಹಾಕುವುದು ಅಮೆರಿಕದ ನೈತಿಕ ಜವಾಬ್ದಾರಿ.

ನಾವು ಈ ಕಾರ್ಯಕ್ಕೆ ಚಾಲನೆ ಕೊಡುತ್ತೇವೆ’ ಎಂಬ ಬದ್ಧತೆಯ ಮಾತುಗಳನ್ನೂ ಆಡಿದ್ದರು. ಆ ಹಿನ್ನೆಲೆಯಲ್ಲಿಯೇ ಹಲವು ಯೋಜನೆಗಳನ್ನು ಅಮೆರಿಕ ರೂಪಿಸಿತು. ಮುಖ್ಯವಾಗಿ ಇತರ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಂದಾಗಿ ಹೆಜ್ಜೆ ಇರಿಸುವ ಸಲುವಾಗಿ ದ್ವೈವಾರ್ಷಿಕ ಶೃಂಗಸಭೆಯನ್ನು ಆಯೋಜಿಸುವುದು ಪ್ರಮುಖ ಆದ್ಯತೆಯಾಯಿತು. ಮೊನ್ನೆ ಏಪ್ರಿಲ್‌ 1ರಂದು ವಾಷಿಂಗ್ಟನ್‌ನಲ್ಲಿ ನಡೆದ ಪರಮಾಣು ಭದ್ರತಾ ಶೃಂಗಸಭೆ ಆ ನಿಟ್ಟಿನಲ್ಲಿ ನಾಲ್ಕನೆಯದು.

ಈ ಶೃಂಗಸಭೆಯಲ್ಲಿ ಪಾಲ್ಗೊಂಡ 52 ದೇಶಗಳ ಪ್ರಮುಖರು ಅಣ್ವಸ್ತ್ರ ಪ್ರಸರಣ ತಡೆ, ಅಣ್ವಸ್ತ್ರ ತಯಾರಿಕೆಗೆ ಬೇಕಾದ ಸಂಪನ್ಮೂಲಗಳ ಕಳ್ಳಸಾಗಾಣಿಕೆಯ ನಿಯಂತ್ರಣ, ಅಣ್ವಸ್ತ್ರಗಳನ್ನು ಉಗ್ರಗಾಮಿಗಳಿಂದ ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಆದರೆ ಶೃಂಗಸಭೆಯಲ್ಲಿ ಚರ್ಚಿಸಿದ ವಿಷಯಗಳು, ಪ್ರಕಟಿಸಿದ ನಿರ್ಣಯಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಳ್ಳಬಲ್ಲವು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಕಾರಣವಿಷ್ಟೇ, ಇಂದಿಗೂ ಅಮೆರಿಕದ ನಿಲುವನ್ನು ಇತರ ರಾಷ್ಟ್ರಗಳು ಅನುಮಾನದಿಂದಲೇ ನೋಡುತ್ತವೆ. ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಕುರಿತು ಅಮೆರಿಕ ಮಾತನಾಡಿದರೆ ರಷ್ಯಾ, ಚೀನಾ ನಂಬುವ ಸ್ಥಿತಿಯಲ್ಲಿಲ್ಲ. ಅದಕ್ಕೆ ಕಾರಣವೂ ಇದೆ. ‘World without nuclear weapons’ ಎಂಬ ಮಾತನ್ನು ಒಬಾಮ ಆಡುತ್ತಾ ಬಂದಿದ್ದರೂ, ಆ ಬಗ್ಗೆ ಇಟ್ಟ ಹೆಜ್ಜೆಗಳು ಅಮೆರಿಕದ ಸ್ವಹಿತಾಸಕ್ತಿಯ ಪರಿಧಿಯನ್ನು ದಾಟಲಿಲ್ಲ.

ಮೊದಲಿಗೆ ಅಮೆರಿಕಕ್ಕೆ ಸವಾಲು ಒಡ್ಡುವ ಶಕ್ತಿಗಳ ಕೈಗಳನ್ನು ಕಟ್ಟಿಹಾಕುವ ಒಪ್ಪಂದಗಳಷ್ಟೇ ಕಾರ್ಯರೂಪಕ್ಕೆ ಬಂದವು. ಏಷ್ಯಾದಲ್ಲಿ ಚೀನಾ, ಪಾಕಿಸ್ತಾನ ಪೈಪೋಟಿಗೆ ಬಿದ್ದು ತಮ್ಮ ಅಣ್ವಸ್ತ್ರ ದಾಸ್ತಾನು ಹೆಚ್ಚಿಸಿಕೊಳ್ಳುವಾಗ, ಅಮೆರಿಕ ಮೌನ ವಹಿಸಿತು. ಉಗ್ರರನ್ನು ತನ್ನ ಅಂಗಳದಲ್ಲೇ ಸಾಕುತ್ತಿರುವ ಪಾಕಿಸ್ತಾನಕ್ಕೆ ಯಾವ ಎಚ್ಚರಿಕೆಯನ್ನೂ ರವಾನಿಸಲಿಲ್ಲ.

‘ಇಸ್ರೇಲನ್ನು ನಾಶ ಮಾಡುತ್ತೇವೆ’ ಎನ್ನುತ್ತಿದ್ದ ಇರಾನಿನ ನಿಕಟಪೂರ್ವ ಅಧ್ಯಕ್ಷ ಮೊಹಮದ್ ಅಹ್ಮದಿನೆಜಾದ್ ಅಣ್ವಸ್ತ್ರ ತಯಾರಿಕೆಗೆ ಮುಂದಾದಾಗ, ಅಮೆರಿಕ ಅದಕ್ಕೆ ತಡೆಯೊಡ್ಡುವ ಸರ್ವ ಪ್ರಯತ್ನ ಮಾಡಿತು. ಹಸನ್ ರೌಹಾನಿ ಅಧ್ಯಕ್ಷರಾದ ಮೇಲೆ 2015ರಲ್ಲಿ ಪರಮಾಣು ಒಪ್ಪಂದಕ್ಕೆ ಅಂಕಿತ ಹಾಕುವಂತೆ ಇರಾನ್ ಮನವೊಲಿಸಲು ಅಮೆರಿಕ ಸಾಕಷ್ಟು ಬುದ್ಧಿ ಖರ್ಚು ಮಾಡಿತು. ಅದು ಕೂಡ ಇಸ್ರೇಲನ್ನು ರಕ್ಷಿಸುವ, ತನ್ನ ಸ್ವಹಿತಾಸಕ್ತಿಯನ್ನು ಪೋಷಿಸುವ ನಿಟ್ಟಿನಲ್ಲೇ ಅಮೆರಿಕ ಮಾಡಿದ ಪ್ರಯತ್ನ ಎನಿಸಿಕೊಂಡಿತು.

ಹಾಗೆ ನೋಡಿದರೆ, 2010ರಲ್ಲಿ ಅಮೆರಿಕ ಮತ್ತು ರಷ್ಯಾ ಸಂಯುಕ್ತ ಒಕ್ಕೂಟದ ನಡುವೆ ಏರ್ಪಟ್ಟ ಹತ್ತು ವರ್ಷಗಳ ಅವಧಿಯ ‘ನ್ಯೂ ಸ್ಟಾರ್ಟ್ ಟ್ರೀಟಿ’ ಅಣ್ವಸ್ತ್ರ ಪ್ರಸರಣ ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿತ್ತು. ಅದರನ್ವಯ ರಷ್ಯಾ ಮತ್ತು ಅಮೆರಿಕ ತಮ್ಮ ಬಳಿ ಇರುವ ಆಕ್ರಮಣಕಾರಿ ಅಸ್ತ್ರಗಳ ಸಂಖ್ಯೆಯನ್ನು ಕಡಿತಗೊಳಿಸುವ ಮತ್ತು ಹೊಸ ಅಸ್ತ್ರಗಳ ಅನ್ವೇಷಣೆ, ಉತ್ಪಾದನೆಗೆ ತಡೆಯೊಡ್ಡುವ ಬಗ್ಗೆ ಒಪ್ಪಂದಕ್ಕೆ ಬಂದಿದ್ದವು.  ಆದರೆ ನಂತರ ಆದ ಬೆಳವಣಿಗೆಗಳಿಂದ ಅಮೆರಿಕ- ರಷ್ಯಾ ಸಂಬಂಧ ಹದಗೆಟ್ಟಿತು.

ಆಕ್ರಮಣಕಾರಿ ನಿಲುವಿನ ಪುಟಿನ್ ಪರಮಾಣು ಅಸ್ತ್ರಗಳನ್ನು ಮತ್ತಷ್ಟು ತಗ್ಗಿಸುವ ಪ್ರಸ್ತಾಪಗಳಿಗೆ ಸಮ್ಮತಿ ಸೂಚಿಸಲಿಲ್ಲ. ಒಬಾಮ ಮತ್ತು ಪುಟಿನ್ ನಡುವಿನ ಭಿನ್ನಾಭಿಪ್ರಾಯಗಳು ಬೆಳೆಯುತ್ತಲೇ ಹೋದವು. ಉಕ್ರೇನ್ ವಿಷಯದಲ್ಲಿ ಕಂದರ ಮತ್ತಷ್ಟು ಹಿಗ್ಗಿತು. ಬಹಿರಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಒಬಾಮ ‘Putin is like a bored kid in the back of the classroom’ ಎಂದರು. ಅಮೆರಿಕ ಮುಂದಾಳುವಾಗಿ ಆಯೋಜಿಸಿದ ಸಭೆಗಳಲ್ಲಿ ರಷ್ಯಾ ಪಾಲ್ಗೊಳ್ಳಲು ನಿರಾಕರಿಸಿತು. ಅದು ಮೊನ್ನೆ ಕೂಡ ಮುಂದುವರೆದಿದೆ.

ಇದಿಷ್ಟು ಒಬಾಮ ಅವಧಿಯಲ್ಲಾದ ಬೆಳವಣಿಗೆಗಳಾದರೆ, ಅದಕ್ಕೂ ಮೊದಲೇ, 80ರ ದಶಕದಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಪ್ರಪಂಚವನ್ನು ಅಣ್ವಸ್ತ್ರ ಮುಕ್ತವಾಗಿಸುವ ಬಗ್ಗೆ ಮಾತನಾಡಿದ್ದರು. ರಷ್ಯಾದೊಂದಿಗೆ ಆ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನಗಳೂ ಆದವು. ‘ವಿಶ್ವ ಶಾಂತಿಗಾಗಿ ಅಣ್ವಸ್ತ್ರಗಳನ್ನು ತ್ಯಜಿಸಿ’ ಎಂಬ ಘೋಷಣೆಯೊಂದಿಗೆ ಹಲವು ಚಳವಳಿಗಳು, ಆಂದೋಲನಗಳು ಕಾಲಕಾಲಕ್ಕೆ ರೂಪು ತಳೆದವು.

1958ರಲ್ಲಿ ಅಮೆರಿಕದ ರಸಾಯನ ಶಾಸ್ತ್ರಜ್ಞ ಲಿನಸ್ ಪಾಲಿಂಗ್ ಸುಮಾರು 11 ಸಾವಿರ ವಿಜ್ಞಾನಿಗಳ ಸಹಿ ಸಂಗ್ರಹಿಸಿ, ಅಣ್ವಸ್ತ್ರ ಪ್ರಸರಣ ತಡೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರುವ, ಜನಾಂದೋಲನ ರೂಪಿಸುವ ಪ್ರಯತ್ನ ಮಾಡಿದ್ದರು. ಆ ಕಾರಣದಿಂದಲೇ ನೊಬೆಲ್ ಶಾಂತಿ ಪುರಸ್ಕಾರವನ್ನು ಲಿನಸ್ ಪಾಲಿಂಗ್ ಪಡೆದರು. ಪರಿಣಾಮ ಜಾನ್ ಎಫ್. ಕೆನಡಿ ಮತ್ತು ಕ್ರುಶ್ಚೇವ್ ನಡುವೆ ‘ಆಂಶಿಕ ಪರೀಕ್ಷಾ ನಿಷೇಧ ಒಪ್ಪಂದ’ ಏರ್ಪಟ್ಟಿತ್ತು.

ಭಾರತ ಕೂಡ ಅಣ್ವಸ್ತ್ರ ನಿಷೇಧದ ಪರ ಧ್ವನಿ ಎತ್ತಿತ್ತು. 1954ರಲ್ಲಿ ನಿಕ್ಸನ್ ಭಾರತಕ್ಕೆ ಭೇಟಿ ಕೊಟ್ಟಾಗ ರಾಜಾಜಿ ವಿಶೇಷ ಉಪನ್ಯಾಸ ನೀಡಿ, ಪರಮಾಣು ಅಸ್ತ್ರಗಳು ಹೇಗೆ ಜನಜೀವನಕ್ಕೆ ಮಾರಕ ಎಂಬುದನ್ನು ವಿವರಿಸಿದ್ದರು. ನಂತರ ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ವತಿಯಿಂದ ಅಮೆರಿಕ ಪ್ರವಾಸ ಕೈಗೊಂಡ ರಾಜಾಜಿ, ಆರ್.ಆರ್. ದಿವಾಕರ್ ಮತ್ತು ಬೆನಗಲ್ ಶಿವರಾವ್ 1962ರಲ್ಲಿ ಕೆನಡಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದರು.

ಹೆನ್ರಿ ಕಿಸ್ಸಿಂಜರ್, ರಾಬರ್ಟ್ ಓಪನ್ ಹೈಮರ್ ಅವರನ್ನೂ ನಿಯೋಗ ಭೇಟಿ ಮಾಡಿ ಪರಮಾಣು ಅಸ್ತ್ರ ಪರೀಕ್ಷೆಗಳನ್ನು ಕೈಬಿಡುವಂತೆ ಒತ್ತಾಯಿಸಿತ್ತು. ಭಾರತಕ್ಕೆ ಮರಳಿದ ರಾಜಾಜಿ, ಒಂದೊಮ್ಮೆ ಅಮೆರಿಕ ಅಣ್ವಸ್ತ್ರ ಪರೀಕ್ಷೆಯನ್ನು ಮುಂದುವರೆಸಿದರೆ, ಗಾಂಧಿ ಮಾರ್ಗ ಅನುಸರಿಸಿ ಅಮೆರಿಕ ನೀಡುವ ಎಲ್ಲ ನೆರವುಗಳನ್ನೂ ತಿರಸ್ಕರಿಸಿ ಎಂದು ಸರ್ಕಾರವನ್ನು ಆಗ್ರಹಿಸಿದ್ದರು.

ಈ ಎಲ್ಲ ಪ್ರಯತ್ನಗಳ ನಡುವೆಯೂ ಅಣ್ವಸ್ತ್ರ ಪರೀಕ್ಷೆಗಳು ಮುಂದುವರೆದವು. ಜೊತೆಗೆ ಬಲಾಢ್ಯ ರಾಷ್ಟ್ರಗಳ ನಡುವೆ ಹೊಸದೊಂದು ಪೈಪೋಟಿಯೇ ಏರ್ಪಟ್ಟಿತು. ಬಿಲ್ ಕ್ಲಿಂಟನ್ ಅವಧಿಯಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿದ್ದ ವಿಲಿಯಂ ಪೆರ್ರಿ ‘ಪ್ರಿವೆಂಟಿವ್ ಡಿಫೆನ್ಸ್’ ಎಂಬ ಕಾರ್ಯತಂತ್ರವನ್ನು ರೂಪಿಸಿದವರಲ್ಲಿ ಪ್ರಮುಖರು. ತಮ್ಮ ಅವಧಿ ಪೂರ್ಣಗೊಂಡ ಮೇಲೆ ‘My Journey at the Nuclear Brink’ ಎನ್ನುವ ಕೃತಿಯನ್ನೂ ತಂದರು.

ಅದರಲ್ಲಿ ಪೆರ್ರಿ ‘ಎರಡು ದಶಕಗಳಿಂದ ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಪ್ರಯತ್ನಗಳು ನಡೆದಿವೆಯಾದರೂ, ಪರಮಾಣು ಅಸ್ತ್ರಕ್ಕಾಗಿ ಹೊಸದೊಂದು ಪೈಪೋಟಿ ಹುಟ್ಟಿಕೊಂಡಿರುವುದು ಆತಂಕಕಾರಿ’ ಎಂಬ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ. ಅದು ನಿಜ ಎನಿಸುತ್ತದೆ. ಈಗಲೂ ಅತ್ತ ಚೀನಾ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅತಿವೇಗದ ನುಸುಳು ವಿಮಾನಗಳ ಅಭಿವೃದ್ಧಿಯನ್ನು ಮುಂದುವರೆಸಿದೆ, ಇತ್ತ ರಷ್ಯಾ ‘ಜಲಾಂತರ್ಗಾಮಿ ಡ್ರೋನ್’ ಪರೀಕ್ಷಿಸುತ್ತಿದೆ.

ಎಲ್ಲರಿಗೂ ಬುದ್ಧಿ ಹೇಳುವ ಅಮೆರಿಕ ಒಂದು ಲಕ್ಷ ಕೋಟಿ ಡಾಲರ್ ಮೊತ್ತವನ್ನು ಮುಂದಿನ ಮೂವತ್ತು ವರ್ಷಗಳ ಅವಧಿಯಲ್ಲಿ ತನ್ನ ಅಸ್ತ್ರಗಳನ್ನು ನವೀಕರಿಸಿಕೊಳ್ಳಲು, ಜಲಾಂತರ್ಗಾಮಿ ನೌಕೆ, ಖಂಡಾಂತರ ಕ್ಷಿಪಣಿಗಳನ್ನು ಉನ್ನತೀಕರಿಸಲು ತೆಗೆದಿರಿಸಿದೆ. ಹಾಗಾಗಿ ಈ ಎಲ್ಲ ಶೃಂಗಸಭೆ, ಒಪ್ಪಂದ, ಮಾತುಕತೆಗಳ ನಡುವೆ ದಿಗ್ಗಜ ರಾಷ್ಟ್ರಗಳ ನಡುವಿನ ಪೈಪೋಟಿ ಮಾತ್ರ ನಿಂತಿಲ್ಲ.

ವಿಶ್ವದ ಬಲಾಢ್ಯ ಶಕ್ತಿಗಳ ನಡುವೆ ಬೆಳೆದುನಿಂತ ಅಪನಂಬಿಕೆ ಈ ಪೈಪೋಟಿಗೆ ಕಾರಣ ಎನಿಸುತ್ತದೆ. ಅಪನಂಬಿಕೆ ತೊರೆದು ಅಮೆರಿಕ, ರಷ್ಯಾ, ಚೀನಾ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಒಮ್ಮತದಿಂದ ಮುಂದಡಿಯಿಡದಿದ್ದರೆ ಪ್ರಪಂಚವನ್ನು ಅಣ್ವಸ್ತ್ರದಿಂದ ಮುಕ್ತವಾಗಿಸುವ ಯಾವ ಸಂಕಲ್ಪವೂ ಈಡೇರಲಾರದು. ಅದರಲ್ಲೂ ಶೇಕಡ 90ರಷ್ಟು ಪರಮಾಣು ಅಸ್ತ್ರಗಳನ್ನು ತಮ್ಮಲ್ಲೇ ಹೊಂದಿರುವ ಅಮೆರಿಕ ಮತ್ತು ರಷ್ಯಾ, ಪರಮಾಣು ಅಸ್ತ್ರ ತ್ಯಜಿಸುವ ವಿಷಯದಲ್ಲಿ ಒಮ್ಮತಕ್ಕೆ ಬಾರದೆ ಯಾವ ಶೃಂಗಸಭೆಯೂ ಫಲಕಾರಿಯಾಗಲಾರದು.

ಕೊನೆಯದಾಗಿ ರಾಜಾಜಿ ಅವರಿಗೆ ಸಂಬಂಧಿಸಿದ ಘಟನೆಯೊಂದನ್ನು ನೆನಪಿಸಿಕೊಳ್ಳಬೇಕು. 1962ರಲ್ಲಿ ರಾಜಾಜಿ, ಕೆನಡಿ ಅವರನ್ನು ಭೇಟಿಯಾದ ವಾರದ ಬಳಿಕ, ಅಮೆರಿಕದ ಪತ್ರಕರ್ತ ವಿನ್ಸೆಂಟ್ ಶೀನ್ ನ್ಯೂಯಾರ್ಕ್ ನಗರದಲ್ಲಿ ರಾಜಾಜಿ ಅವರನ್ನು ಭೇಟಿಯಾಗಿದ್ದರು. ಹೊರಡುವ ಮೊದಲು ಶೀನ್, ಅಮೆರಿಕದ ಪೋಸ್ಟಲ್ ಡಿಪಾರ್ಟ್‌ಮೆಂಟ್‌ ಹೊರತಂದಿದ್ದ ಗಾಂಧಿ ಭಾವಚಿತ್ರವಿದ್ದ ಪೋಸ್ಟಲ್ ಸ್ಟಾಂಪ್ ಒಂದನ್ನು ಅಭಿಮಾನದಿಂದ ರಾಜಾಜಿ ಕೈಗಿತ್ತರು.

ಆಗ ರಾಜಾಜಿ ಅದನ್ನು ಶೀನ್ ಅವರಿಗೆ ಮರಳಿಸಿ ‘ಕೆನಡಿ ಅವರಿಗೆ ಅಣು ಬಾಂಬ್ ತ್ಯಜಿಸಿ ಎಂಬ ಪತ್ರವೊಂದನ್ನು ಬರೆದು, ಈ ಸ್ಟಾಂಪ್ ಅನ್ನು ಆ ಲಕೋಟೆಯ ಮೇಲೆ ಲಗತ್ತಿಸು’ ಎಂದಿದ್ದರು. ಇದೀಗ ಪೈಪೋಟಿಗೆ ಇಳಿದಿರುವ ಬಲಾಢ್ಯ ರಾಷ್ಟ್ರಗಳ ಮುಂದಾಳುಗಳಿಗೆ ಮಹಾತ್ಮ ಗಾಂಧಿ ಅವರನ್ನು ನೆನಪಿಸುವುದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT