ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭದಲ್ಲೇ ಗಟಾರಕ್ಕಿಳಿದ ಚುನಾವಣಾ ಪ್ರಚಾರ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚುನಾವಣಾ ಪ್ರಚಾರದ ಭರಾಟೆ ತೀವ್ರವಾದ ನಂತರ ರಾಜಕೀಯ ನಾಟಕದ ಪ್ರಮುಖ ಪಾತ್ರಧಾರಿಗಳು ನಾಲಗೆಯ ಮೇಲೆ ಹಿಡಿತ ಕಳೆದುಕೊಳ್ಳುವುದು, ಔಚಿತ್ಯದ ಎಲ್ಲಾ ಎಲ್ಲೆಗಳನ್ನೂ ಮೀರಿ ಆರೋಪ ಪ್ರತ್ಯಾರೋಪಗಳನ್ನು ಮಾಡುವುದು... ಇತ್ಯಾದಿಗಳೆಲ್ಲಾ ಭಾರತದ ರಾಜಕೀಯದಲ್ಲಿ ಮಾಮೂಲಾಗಿ ಹೋಗಿರುವ ವಿಚಾರ.

ವಿಶೇಷವೆಂದರೆ, ಕರ್ನಾಟಕದಲ್ಲಿ ಈ ಬಾರಿ ಇವೆಲ್ಲಾ ಈಗಲೇ ಭರಪೂರ ಕಾಣಿಸಿಕೊಳ್ಳುತ್ತಿವೆ. ಇಲ್ಲಿ ಪ್ರಾರಂಭವಾಗಿರುವುದು ಚುನಾವಣಾ ಪ್ರಚಾರದ ಪೂರ್ವರಂಗ ಮಾತ್ರ. ಮುಂದಿನ ತಿಂಗಳು ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಚುನಾವಣಾ ಫಲಿತಾಂಶ ಬಂದ ನಂತರವಷ್ಟೇ ಕರ್ನಾಟಕದಲ್ಲಿ ಪ್ರಚಾರಕ್ಕೆ ಮೊದಲ ಅಂಕದ ಪರದೆ ಏರುವುದು. ಆದರೆ ಪೂರ್ವರಂಗದಲ್ಲೇ ತಾಳ, ಲಯ, ಶ್ರುತಿ ಎಲ್ಲ ತಪ್ಪುತ್ತಿರುವಂತೆ ತೋರುತ್ತಿದೆ. ನಾಲಗೆಗಳು ಎತ್ತೆಂದರತ್ತ ಹೊರಳುತ್ತಿವೆ.

‘ಯಾರು ಯಾರ ವಿರುದ್ಧವಾದರೂ ಏನೇ ಬೇಕಾದರೂ ಹೇಳಬಹುದು, ಎಂತಹ ಪದಗಳನ್ನಾದರೂ ಬಳಸಬಹುದು’ ಎನ್ನುವುದು ಕರ್ನಾಟಕ ರಾಜಕೀಯದ ಹೊಸ ಉದಾರವಾದ. ಚುನಾವಣೆಗೆ ಇನ್ನೂ ಐದು ತಿಂಗಳಿರುವಾಗಲೇ ಕಾಣಿಸಿಕೊಂಡ ಆರಂಭಿಕ ಪ್ರಚಾರವೇ ರಾಜ್ಯದ, ರಾಷ್ಟ್ರದ ಎಲ್ಲಾ ದಾಖಲೆಗಳನ್ನು ಮೀರಿಸಿ ಗಟಾರದ ತಳಮಟ್ಟ ತಲುಪಿದ ಹಾಗಿದೆ. ಕನ್ನಡ ಜೀವ ಇನ್ನೂ ಏನೇನು ನೋಡಬೇಕೋ, ಇನ್ನೂ ಏನೇನು ಕೇಳಬೇಕೋ?

ಪ್ರಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಪ್ರಮುಖ ಪ್ರತಿಪಕ್ಷ ಪ್ರಚಾರವನ್ನು ಗಟಾರಕ್ಕಿಳಿಸುವುದರಲ್ಲಿಯೂ ಒಂದು ಹೆಜ್ಜೆ ಮುಂದೆ ಇದ್ದಂತಿದೆ. ಆಳುವ ಪಕ್ಷದವರೂ ಅದೇ ಮಟ್ಟದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವೊಮ್ಮೆ ಆಳುವ ಪಕ್ಷದವರೇ ಗಟಾರ ಮಟ್ಟದಿಂದ ಪ್ರಾರಂಭಿಸುತ್ತಾರೆ. ಒಂದು ಪಕ್ಷದ ಮಂದಿ ಗಟಾರದಲ್ಲಿ ಹೆಚ್ಚು ಹೆಚ್ಚು ಆಳಕ್ಕಿಳಿದು ಕೆಸರೆರಚುತ್ತಿದ್ದರೆ, ಇನ್ನೊಂದು ಪಕ್ಷದವರು ‘ಅದು ಅವರ ಸಂಸ್ಕಾರ’ ಎಂದು ಸುಮ್ಮನಿದ್ದುಬಿಟ್ಟರೆ ಅದನ್ನು ಬಲುದೊಡ್ಡ ರಾಜಕೀಯ ಪ್ರಬುದ್ಧತೆ ಎಂದು ಕರೆಯಬಹುದು. ಇದಕ್ಕೆ ಒಂದೋ ಆಳುವ ಪಕ್ಷದಲ್ಲಿ ಪ್ರಬುದ್ಧ ನಾಯಕತ್ವ ಇರಬೇಕು, ಇಲ್ಲವೇ ವಿರೋಧ ಪಕ್ಷದಲ್ಲಿ ಅಂತಹ ನಾಯಕತ್ವ ಇರಬೇಕು. ಕರ್ನಾಟಕದ ಮಟ್ಟಿಗೆ ಎರಡೂ ಕಡೆ ಅದು ಕಾಣಿಸುತ್ತಿಲ್ಲ ಎಂಬಲ್ಲಿಗೆ ದೆಹಲಿಯಲ್ಲಿ ವಾಯು ಮಾಲಿನ್ಯ ಮುಸುಕಿದಂತೆ ಕರ್ನಾಟಕದಾದ್ಯಂತ ನುಡಿ ಮಾಲಿನ್ಯ ಹರಡುತ್ತಿದೆ.

ಕರ್ನಾಟಕದ ಪ್ರಮುಖ ಪ್ರತಿಪಕ್ಷದ ಮಂದಿ ಹೇಳಿ ಕೇಳಿ ಇಡೀ ಭಾರತದ ಸಂಸ್ಕೃತಿಗೆ, ಸಂಸ್ಕಾರಕ್ಕೆ ತಾವು ವಾರಸುದಾರರು ಎಂದು ಹೇಳಿಕೊಳ್ಳುವವರು. ತಾವು ಇತರರಿಗಿಂತ ಯಾವತ್ತೂ ಒಂದು ಹೆಜ್ಜೆ ಮುಂದೆ ಅಂತ ನಂಬಿಸಲು ಯತ್ನಿಸುವವರು. ಹಿಂದೆ ಅವರು ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರ ನಡೆಸಿದಾಗ (2008–13) ದೊಡ್ಡ ಮಟ್ಟಿನ ರಾಜಕೀಯ ಪ್ರಬುದ್ಧತೆ ಅವರಲ್ಲಿ ಇಲ್ಲದೇ ಇದ್ದಿದ್ದನ್ನು ಅರ್ಥ ಮಾಡಿಕೊಳ್ಳಬಹುದು. ಆಗ ಆ ಪಕ್ಷದ ಸರ್ಕಾರದಲ್ಲಿ ವಲಸೆ ಬಂದ ಕೆಲವೇ ಕೆಲವರನ್ನು ಬಿಟ್ಟರೆ ಉಳಿದವರಿಗೆ ಅಧಿಕಾರ ಚಲಾಯಿಸಿ ಆಡಳಿತ ನಡೆ

ಸಿದ ಕನಿಷ್ಠ ಅನುಭವವೂ ಇರಲಿಲ್ಲ. ಕೆಲವರಿಗೆ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ (2006–07) ಪಡೆದ ಅಲ್ಪ- ಸ್ವಲ್ಪ ಅನುಭವವಷ್ಟೇ ಇದ್ದದ್ದು. ಅವರ ಅವಧಿಯಲ್ಲಿ ಆಗಿ ಹೋದ ಮೂವರು ಮುಖ್ಯಮಂತ್ರಿಗಳ ಪೈಕಿ ಒಬ್ಬರಂತೂ ಒಂದೇ ಒಂದು ದಿನವೂ ಮಂತ್ರಿಯಾದ ಅನುಭವವೇ ಇಲ್ಲದೆ ನೇರವಾಗಿ ಮುಖ್ಯಮಂತ್ರಿಯ ಸ್ಥಾನಕ್ಕೇರಿದವರು. ಅದು ಅಂದಿನ ಕತೆ.

ಈಗ ಹಾಗಲ್ಲ. ಸಂಸ್ಕಾರ ಪಕ್ಷದ ಮಂದಿಗೆ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಅನುಭವವಿದೆ. ಸುದೀರ್ಘ ಅವಧಿಗೆ ವಿರೋಧ ಪಕ್ಷವಾಗಿ ಕೆಲಸ ಮಾಡಿದ ಅನುಭವವಿದೆ. ಈಗ ಜನ ಅವರಿಂದ ಹಿಂದೆಂದಿಗಿಂತ ಹೆಚ್ಚು ರಾಜಕೀಯ ಪ್ರಬುದ್ಧತೆಯನ್ನು ಸಹಜವಾಗಿಯೇ ಬಯಸುತ್ತಾರೆ. ಈಗ ಅವರು ಅನನುಭವದ ಹೆಸರು ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಆದರೆ ಆ ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿರುವ ವಿದ್ಯಮಾನಗಳೇ ಬೇರೆ. ಅಲ್ಲಿ ಹೆಚ್ಚು ಹೆಚ್ಚು ಅನುಭವ ಹೊಂದಿದ ಜನ ಗಟಾರದಲ್ಲಿ ಹೆಚ್ಚು ಹೆಚ್ಚು ಆಳಕ್ಕಿಳಿಯಲು ದೀಕ್ಷಾಕಂಕಣ ತೊಟ್ಟವರಂತೆ ತೋರುತ್ತದೆ. ಇದ್ದವರು ಸಾಲದು ಎಂಬಂತೆ ಆ ಪಕ್ಷವು ನಡೆ ನುಡಿಗಳಲ್ಲಿ ಸದಾ ಪ್ರಶ್ನಾರ್ಹವಾಗಿದ್ದ ಒಬ್ಬ ಕಟ್ಟಾಳನ್ನು ಹೊಸದಾಗಿ ರಂಗಕ್ಕೇರಿಸಿದೆ.

ಚುನಾವಣಾ ಪ್ರಚಾರದ ಪೂರ್ವರಂಗದ ಅಂಗವಾಗಿ ಅವರು ನಡೆಸುತ್ತಿರುವ ‘ಪರಿವರ್ತನಾ’ ಪಯಣದಲ್ಲಿ ಜನಮನ ತಟ್ಟುವ, ಜನರನ್ನು ಯೋಚನೆಗೆ ಹಚ್ಚುವ, ಜನರು ಪಕ್ಷದತ್ತ ಭರವಸೆಯಿಂದ ನೋಡುವ ಒಂದೇ ಒಂದು ಮಾತು ಅಪ್ಪಿತಪ್ಪಿಯೂ ಯಾರೊಬ್ಬರ ಬಾಯಿಯಿಂದಾದರೂ ಬಂದದ್ದು ವರದಿಯಾಗಿಲ್ಲ. ಆಳುವ ಪಕ್ಷದವರ ಯೋಚನೆಗಳನ್ನು, ಯೋಜನೆಗಳನ್ನು ರಚನಾತ್ಮಕವಾಗಿ ಪರಿಶೀಲಿಸಿ ತಮ್ಮ ಯೋಚನೆ, ಯೋಜನೆ ಯಾಕೆ ಭಿನ್ನ, ಹೇಗೆ ಭಿನ್ನ ಎನ್ನುವುದನ್ನು ಹೇಳುವುದು ಕೇಳಿಸಲಿಲ್ಲ. ಬದಲಾಗಿ, ವೇದಿಕೆ ಏರಿದಲ್ಲೆಲ್ಲಾ ಅವರು ಮಾತಿನ ಅಸ್ತ್ರ ಬಳಸಿ ಆಳುವ ಪಕ್ಷದ ಮಂದಿಯ ಪುರುಷತ್ವ ಪರೀಕ್ಷೆ, ಪಿತೃತ್ವ ಪರೀಕ್ಷೆ, ಲಿಂಗ ಪರೀಕ್ಷೆ , ರಕ್ತ ಪರೀಕ್ಷೆ, ಡಿ.ಎನ್.ಎ. ಪರೀಕ್ಷೆ ಇತ್ಯಾದಿಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆಡಳಿತ ಪಕ್ಷದವರು ಇದೇ ರೀತಿಯ ಮರುಪರೀಕ್ಷೆ ನಡೆಸುತ್ತಾರೆ.

ಪ್ರತಿಪಕ್ಷದವರು ಐದು ವರ್ಷಗಳ ತಮ್ಮ ಆಡಳಿತದಲ್ಲಿ ಇನ್ಯಾವ ಅನುಭವ ಪಡೆಯದಿದ್ದರೂ ಪೊಲೀಸ್ ಭಾಷೆಯನ್ನು ಚೆನ್ನಾಗಿ ಮೈಗೂಡಿಸಿಕೊಂಡಿದ್ದಾರೆ. ಆ ಪಕ್ಷದ ನಾಯಕರು ಹೋದಲ್ಲಿ ಬಂದಲ್ಲಿ ಪೊಲೀಸ್ ಭಾಷೆ ಬಳಸಿ ಪೊಲೀಸರಿಗೇ ಧಮ್ಕಿ ಹಾಕುತ್ತಾರೆ. ಪೊಲೀಸರನ್ನು ಬೆದರಿಸಲು ಪೊಲೀಸ್ ಭಾಷೆ ಸಪ್ಪೆಯಾಯಿತು ಎನ್ನುವಲ್ಲಿ ‘ನಮ್ಮ ಹುಡುಗರೇ ನಿಮ್ಮನ್ನು ನೋಡಿಕೊಳ್ಳುತ್ತಾರೆ’ ಅಂತ ಅಪ್ಪಟ ರೌಡಿ ಭಾಷೆ ಬಳಸುತ್ತಾರೆ.

‘ಹೊಡಿ-ಮಗ, ಸುಡು ಮಗ’ ಎಂಬಿತ್ಯಾದಿ ಕನ್ನಡ ಸಿನಿಮಾ ಡೈಲಾಗುಗಳು ಅವರ ಮಾಮೂಲಿ ರಾಜಕೀಯ ಪಾರಿಭಾಷಿಕಗಳಾಗಿವೆ. ಇಷ್ಟು ಸಾಲದು ಎಂಬಂತೆ, ಪ್ರತಿಪಕ್ಷದ ರಾಷ್ಟ್ರೀಯ ವಕ್ತಾರರೊಬ್ಬರು ನೀಡಿದ ಹೇಳಿಕೆಯ ಪ್ರಕಾರ, ಮುಂದಿನ ದಿನಗಳಲ್ಲಿ ಅವರ ಪಕ್ಷದ ಶಿಸ್ತಿನ ಸಿಪಾಯಿಗಳು ಆಳುವ ಪಕ್ಷದವರ ಬೆಡ್ ರೂಮ್‌ಗಳಲ್ಲಿ ಚಿತ್ರೀಕರಿಸಿದ ವಿಡಿಯೊ ದಾಖಲಾತಿಯನ್ನು ಸಿ.ಡಿ.ಗಳ ರೂಪದಲ್ಲಿ ಕರ್ನಾಟಕದ ಮಹಾಜನರ ಮುಂದಿಡುತ್ತಾರಂತೆ!

ಇದನ್ನು ಕೇಳಿದ ಆಳುವ ಪಕ್ಷದವರು ಯಾಕೆ ಸುಮ್ಮನಿರುತ್ತಾರೆ. ಸೂಕ್ತವಾಗಿ ಪ್ರತಿಕ್ರಿಯಿಸಲು ಬೇಕಾದ ‘ನೀಲಿ ನೀಲಿ’ ಶಸ್ತ್ರಾಸ್ತ್ರ ಸಂಗ್ರಹಣೆಗೆ ಅವರೂ ತೊಡಗಬಹುದು. ಅಂತೂ ಇಂತೂ ಚುನಾವಣಾ ಪೂರ್ವರಂಗ ಈ ರಾಜ್ಯದಲ್ಲಿ ಈ ಮಟ್ಟಿಗೆ ಯಾವತ್ತೂ ರಂಗೇರಿದ್ದಿಲ್ಲ. ಕರ್ನಾಟಕ ರಾಜಕೀಯದ ಸೃಜನಶೀಲ 2017ನೆಯ ಆವೃತ್ತಿ ವೀಕ್ಷಿಸಲು ನಿಮಗೆ ಸ್ವಾಗತ...

ಈಗ ಮುಖ್ಯ ವಿಚಾರಕ್ಕೆ ಬರೋಣ. ಚುನಾವಣಾ ಪ್ರಚಾರದ ಪೂರ್ವರಂಗದಲ್ಲಿ ಗೋಚರಿಸುತ್ತಿರುವ ಈ ವಿದ್ಯಮಾನಗಳೆಲ್ಲಾ ಕೇವಲ ಲಕ್ಷಣಗಳು. ನಾವು ತಲೆಕೆಡಿಸಿಕೊಳ್ಳಬೇಕಾದದ್ದು ಈ ವಿಲಕ್ಷಣ ಲಕ್ಷಣಗಳ ಬಗ್ಗೆ ಅಲ್ಲ. ನಾವು ಚಿಂತಿಸಬೇಕಾಗಿರುವುದು ಈ ಲಕ್ಷಣಗಳು ಪ್ರತಿನಿಧಿಸುವ ಮೂಲ ರೋಗದ ಬಗ್ಗೆ.

ಮೊದಲನೆಯದಾಗಿ ಈ ಲಕ್ಷಣಗಳು ಸಾರಿ ಹೇಳುತ್ತಿರುವುದು ರಾಜಕೀಯ ನಾಯಕತ್ವದ ದಾರಿದ್ರ್ಯವನ್ನು. ನಿಜವಾದ ನಾಯಕರ ಬಾಯಲ್ಲಿ ಯಾವತ್ತೂ ಈ ಮಟ್ಟದ ಭಾಷೆ ಹುಟ್ಟುವುದಿಲ್ಲ. ನಿಜವಾದ ನಾಯಕರು ಈ ಮಟ್ಟಿಗೆ ವೈಯಕ್ತಿಕ ನಿಂದನೆಗೆ ಇಳಿಯುವುದಿಲ್ಲ. ನಾಯಕತ್ವದ ಗುಣ ಲವಲೇಶವೂ ಇಲ್ಲದೆ ಏನೇನನ್ನೋ ನೆಚ್ಚಿಕೊಂಡು ನಾಯಕರಾಗ ಹೊರಟವರು ಕೆಳಮಟ್ಟದ ಮಾತುಗಳನ್ನಾಡಿಯೇ ಮೇಲೆ ಮೇಲೆ ಏರಲು ಬಯಸುತ್ತಾರೆ.

ಎರಡನೆಯದಾಗಿ, ಈ ವಿದ್ಯಮಾನಗಳು ನಮ್ಮ ಮುಂದೆ ತೆರೆದಿಡುವುದು ರಾಜಕೀಯ ನಾಯಕತ್ವದ ಯೋಚನಾ ದಾರಿದ್ರ್ಯವನ್ನು. ಮಾತೆತ್ತಿದರೆ ಇವರಲ್ಲಿ ಎಲ್ಲರೂ ಅಭಿವೃದ್ಧಿಯ ಮಂತ್ರ ಪಠಿಸುತ್ತಾರೆ. ಮಾತೆತ್ತಿದರೆ ಇವರಲ್ಲಿ ಎಲ್ಲರೂ ತಮ್ಮ ಬಳಿ ರಾಜ್ಯದ ಸಕಲ ಸಮಸ್ಯೆಗಳಿಗೂ ರಾಮಬಾಣವಿದೆ ಎಂದು ಸಾರುತ್ತಾರೆ. ಆದರೆ ವಾಸ್ತವದಲ್ಲಿ ‘ಅಭಿವೃದ್ಧಿ’ ಎನ್ನುವ ಒಂದು ಪದದ ಆಚೆಗೆ ಅಭಿವೃದ್ಧಿಯ ಬಗ್ಗೆ ಮಾತಾಡಬಲ್ಲ ಒಬ್ಬ ನಾಯಕನೂ ಕರ್ನಾಟಕದಲ್ಲಿ ಕಾಣಿಸುತ್ತಿಲ್ಲ. ಒಂದು ವೇಳೆ ಇದ್ದರೆ ಅಂತಹವರು ವೇದಿಕೆ ಏರಿ ಮಾತನಾಡುವುದಿಲ್ಲ. ವೇದಿಕೆ ಏರಿದವರು ಅಕಸ್ಮಾತ್ ಅಭಿವೃದ್ಧಿಯ ಬಗ್ಗೆ, ಸಮಸ್ಯೆಗಳ ಬಗ್ಗೆ ಮಾತನಾಡಲು ಹೊರಟರೆ ಅದು ಟೊಳ್ಳುಟೊಳ್ಳಾಗಿ ಕೇಳಿಸುತ್ತದೆ.

‘ನಾನು ಅದನ್ನು ನೀಡಿದೆ’, ‘ಇದನ್ನು ನೀಡಿದೆ’ ಎಂದೋ, ‘ಮುಂದೆ ಇನ್ನೊಂದಷ್ಟು, ಇನ್ನೊಂದಿಷ್ಟು ನೀಡುತ್ತೇನೆ’ ಎಂದೋ ಹೇಳುತ್ತಾ ಅಭಿವೃದ್ಧಿ ಎಂದರೆ ಮಕ್ಕಳಿಗೆ ಚಾಕೊಲೆಟ್ ಹಂಚುವುದು ಎನ್ನುವ ರೀತಿಯಲ್ಲಿ ನಾಯಕರ ಅಭಿವೃದ್ಧಿ ಮೀಮಾಂಸೆ ಸಾಗುತ್ತದೆ. ಟೊಳ್ಳು ಮತ್ತು ಸುಳ್ಳು ಮಾತುಗಳನ್ನು ಜನ ಒಂದು ಹಂತದ ನಂತರ ಕೇಳಿಸಿಕೊಳ್ಳುವುದಿಲ್ಲ. ಎತ್ತರದ, ತೂಕದ ಮಾತುಗಳನ್ನಾಡಿ ಜನಮನ ಗೆಲ್ಲಲಾರದ ನಾಯಕರು ಸಹಜವಾಗಿಯೇ ಕೆಳಮಟ್ಟಕ್ಕಿಳಿದು ಮಾತನಾಡಲೇಬೇಕಲ್ಲ.

ಇಲ್ಲಿ ಇದಕ್ಕಿಂತಲೂ ಗಂಭೀರವಾದ ಇನ್ನೊಂದು ಪ್ರಶ್ನೆ ಇದೆ. ಸಾರ್ವಜನಿಕ ವೇದಿಕೆಯಲ್ಲಿ ನಿಂತು ಈ ಮಟ್ಟದಲ್ಲಿ ವರ್ತಿಸುವ ಮತ್ತು ಮಾತನಾಡುವ ಮಂದಿ ಕೈಗೆ ಅಧಿಕಾರ ಬಂದಾಗ ಯಾವ ರೀತಿ ವರ್ತಿಸಬಹುದು ಎನ್ನುವ ಪ್ರಶ್ನೆ ಅದು. ಅಧಿಕಾರ ಚಲಾಯಿಸಲು ಒಂದು ರೀತಿಯ ಪ್ರಬುದ್ಧತೆ ಬೇಕಾಗುತ್ತದೆ. ವಿರೋಧ ಪಕ್ಷದಲ್ಲಿದ್ದು ಅಧಿಕಾರ ಚಲಾವಣೆಯನ್ನು ಪ್ರಶ್ನಿಸಲು ಕೂಡಾ ಒಂದು ರೀತಿಯ ಪ್ರಬುದ್ಧತೆ ಬೇಕಾಗುತ್ತದೆ. ಕೆಲವೊಂದು ವಿಷಯಗಳನ್ನು ಸಾರ್ವಜನಿಕವಾಗಿ ಹೇಳಲು ಹೇಸದ, ಕೆಲವೊಂದು ಪದಗಳನ್ನು ಸಾರ್ವಜನಿಕವಾಗಿ ಬಳಸಲು ನಾಚದ ನಾಯಕರ ಪ್ರಬುದ್ಧತೆ ಪ್ರಶ್ನಾರ್ಹ. ಅಂತಹವರ ಕೈಯಲ್ಲಿ ಅಧಿಕಾರವಿರುವುದು ಯಾವತ್ತಿಗೂ ಅಪಾಯಕಾರಿ.

ಚುನಾವಣೆಯಿಂದ ಚುನಾವಣೆಗೆ ನಮ್ಮ ಮುಂದಿರುವ ಆಯ್ಕೆ ಉತ್ತಮವಾಗುತ್ತಾ ಸಾಗಬೇಕಿತ್ತು. ಆದರೆ ಚುನಾವಣೆಯಿಂದ ಚುನಾವಣೆಗೆ ನಮ್ಮ ಮುಂದಿರುವ ನಾಯಕತ್ವದ ಗುಣಮಟ್ಟ ಕಳಪೆಯಾಗುತ್ತಾ ಸಾಗುತ್ತಿದೆ. ಆರ್ಥಿಕವಾಗಿ, ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ ಮತ್ತು ತಾಂತ್ರಿಕ ಪರಿಣತಿಯಲ್ಲಿ ಮುಂದೆ ಮುಂದೆ ಸಾಗಿದಂತೆ ರಾಜಕೀಯ ವ್ಯವಹಾರಗಳಲ್ಲಿ ಭಾರತ ಹಿಮ್ಮುಖವಾಗಿ ಚಲಿಸುವುದೇಕೆ?

2014ರ ಚುನಾವಣೆಯಲ್ಲಿ ಅಭಿವೃದ್ಧಿಯ ಮಂತ್ರದ ಜತೆಜತೆಗೆ ವೈಯಕ್ತಿಕ ಟೀಕೆ, ಕೀಳುಮಟ್ಟದ ಭಾಷೆ ಇತ್ಯಾದಿಗಳ ಯಥೇಚ್ಛ ಬಳಕೆ ಆಯಿತು. ದೊಡ್ಡ ದೊಡ್ಡ ನಾಯಕರೇ ಇದರಲ್ಲೆಲ್ಲಾ ಭಾಗಿಯಾದರು. ಫಲಿತಾಂಶ ಬಂದಾಗ ಭಾರತದಲ್ಲಿ ಜಾತಿ ರಾಜಕಾರಣ, ಧರ್ಮ ರಾಜಕಾರಣ ಎಲ್ಲಾ ಕೊನೆಗೊಂಡು ಇನ್ನೇನಿದ್ದರೂ ನಾಯಕತ್ವದ ಗುಣಮಟ್ಟ, ಅಭಿವೃದ್ಧಿ ವ್ಯಾಖ್ಯಾನ, ವಾಗ್ದಾನಗಳೇ ಚುನಾವಣಾ ವಾಗ್ಬಾಣಗಳು ಎಂಬ ಅಭಿಪ್ರಾಯ
ವೊಂದು ಹುಟ್ಟಿಕೊಂಡಿತ್ತು.

ಪತ್ರಕರ್ತರೂ, ಸಮಾಜ ವಿಜ್ಞಾನಿಗಳೂ ಈ ಕುರಿತು ಉದ್ದುದ್ದ ಭಾಷ್ಯ ಬರೆದದ್ದೇ ಬಂತು. ಈಗ ಮತ್ತೆ ಎಲ್ಲವೂ ಮಾಮೂಲಿ. ಅದೇ ಹಳೆಯ ಚಾಳಿ. ಭಾರತ ಆರ್ಥಿಕವಾಗಿ ಬೆಳೆದಂತೆ ರಾಜಕೀಯವಾಗಿ ಯಾಕೆ ಸೊರಗುತ್ತಿದೆ? ‘ಅಳಿದ ಊರಿಗೆ ಉಳಿದವನೇ ನಾಯಕ’ ಎನ್ನುವ ಸ್ಥಿತಿ ಯಾಕೆ ಬರುತ್ತಿದೆ ಎನ್ನುವುದು ಒಂದು ರಾಷ್ಟ್ರೀಯ ಬಿಕ್ಕಟ್ಟನ್ನು ಪ್ರತಿನಿಧಿಸುವ ಪ್ರಶ್ನೆ.

ಕರ್ನಾಟಕದ ಚುನಾವಣಾ ಪ್ರಚಾರದ ಪೂರ್ವರಂಗದಲ್ಲಿ ತೇಲಿಬರುತ್ತಿರುವ ಕುಸ್ವರದ ಅಲೆಗಳು ಭಾರತದ ಪ್ರಜಾಸತ್ತೆಯನ್ನು ಕಾಡುತ್ತಿರುವ ಹಲವು ಭೀಕರ ರೋಗಗಳ ಇರುವಿಕೆಯನ್ನು ಸಾರಿ ಸಾರಿ ಹೇಳುತ್ತಿವೆ. ಇದು ಸಾರ್ವಜನಿಕ ಚರ್ಚೆಯ ಗುಣಮಟ್ಟ ಕಡಿಮೆಯಾಗುತ್ತಿರುವ ಪ್ರಶ್ನೆ ಮಾತ್ರವಲ್ಲ, ಚುನಾವಣಾ ಭಾಷಣಗಳಲ್ಲಿ ಬಳಕೆಯಾಗುತ್ತಿರುವ ಭಾಷೆ ಮತ್ತು ವಿಚಾರಗಳು ಸಭ್ಯತೆಯ ಎಲ್ಲೆ ಮೀರುತ್ತಿರುವ ಪ್ರಶ್ನೆ ಮಾತ್ರವಲ್ಲ. ನಾವೀಗ ಕಾಣುತ್ತಿರುವುದು, ಕೇಳುತ್ತಿರುವುದು ಎಪ್ಪತ್ತು ವರ್ಷಗಳಲ್ಲಿ ಭಾರತೀಯ ಗಣತಂತ್ರ ವ್ಯವಸ್ಥೆ ಕಂಡ ದೊಡ್ಡ ಪತನದ ಸಂಕೇತಗಳನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT