ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ನೀತಿ ಹೇಳಿಕೆಯಾಗಿ ಉಳಿಯದ ಬಜೆಟ್

Last Updated 2 ಫೆಬ್ರುವರಿ 2017, 19:56 IST
ಅಕ್ಷರ ಗಾತ್ರ

ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತಮ್ಮ ನಾಲ್ಕನೆಯ ಬಜೆಟ್‌ ಅನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು. ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ ಜೊತೆಗೆ ಮಂಡಿಸಿರುವುದು ಈ ಬಾರಿಯ ವಿಶೇಷ. ಮತ್ತೊಂದು ಹೊಸ ಅಂಶವೆಂದರೆ ಬಜೆಟ್ ಮಂಡನೆಯ ಸಾಂಪ್ರದಾಯಿಕ ದಿನಾಂಕವಾದ ಫೆಬ್ರುವರಿ  28ರ ಬದಲಿಗೆ ಫೆಬ್ರುವರಿ 1ರಂದೇ ಕೇಂದ್ರ ಬಜೆಟ್ ಮಂಡನೆಯಾಗಿರುವುದು. ಈ ಹಿನ್ನೆಲೆಯಲ್ಲಿ, ಏಪ್ರಿಲ್‌ನಿಂದ ಮಾರ್ಚ್‌ವರೆಗೆ ನಡೆಯುವ ಆರ್ಥಿಕ ವರ್ಷವನ್ನು ಜಾಗತಿಕ ಆಚರಣೆಯಂತೆ ಜನವರಿಯಿಂದ ಡಿಸೆಂಬರ್ ತನಕದ ಕ್ಯಾಲೆಂಡರ್ ವರ್ಷಕ್ಕೆ ಬದಲಿಸಲು ಮೋದಿ ನೇತೃತ್ವದ ಸರ್ಕಾರವು ಚಿಂತಿಸುತ್ತಿದೆ ಎಂಬ ವದಂತಿಗಳೂ ಕೇಳಿಬರುತ್ತಿವೆ. ಹಾಗೇನಾದರೂ ಆದರೆ 2018- 19ರ ಬಜೆಟ್ ಈ ವರ್ಷದ ನವೆಂಬರ್‌ನಲ್ಲಿಯೇ ಮಂಡನೆಯಾಗಬಹುದು.

ಬಜೆಟ್ ಮಂಡನೆಯ ದಿನಾಂಕದಲ್ಲಿ ಬದಲಾವಣೆಯಾಗುವುದೇನೊ ಸರಿ. ಆದರೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ಬಹುಮುಖ್ಯ ಹೇಳಿಕೆಯಾಗಿ ಬಜೆಟ್ ಉಳಿದಿದೆಯೇ? ಅಂದರೆ ಸರ್ಕಾರದ ಆದಾಯ ಮತ್ತು ಖರ್ಚುಗಳ ದಾಖಲೆಯಾಗಿ, ತೆರಿಗೆ ದರಗಳನ್ನು ಏರಿಳಿಕೆ ಮಾಡುವ ಸಾಧನವಾಗಿ ಬಜೆಟ್ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ. ಆದರೆ ಸರ್ಕಾರದ ಹಲವಾರು ಮುಖ್ಯ ಆರ್ಥಿಕ ನೀತಿಗಳು ಬಜೆಟ್‌ಗೆ ಹೊರತಾಗಿ ವರ್ಷದುದ್ದಕ್ಕೂ ಘೋಷಿತವಾಗುತ್ತಿವೆ. ಉದಾಹರಣೆಗೆ ಕಳೆದ ನವೆಂಬರ್‍‌ನ ನೋಟು ನಿಷೇಧ ಕ್ರಮ  ಅಥವಾ 2015ರ ನವೆಂಬರ್‌ನಲ್ಲಿ ರಕ್ಷಣೆ, ಬ್ಯಾಂಕಿಂಗ್, ನಾಗರಿಕ ವಿಮಾನಯಾನ ಸೇರಿದಂತೆ 15 ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮೇಲಿದ್ದ ಮಿತಿಯನ್ನು ಸಡಿಲಗೊಳಿಸಲಾಗಿತ್ತು. 2017ರ ಹೊಸ ವರ್ಷದ ಸಂದರ್ಭದ ಭಾಷಣದಲ್ಲಿಯೂ ಪ್ರಧಾನಿಯವರು ಕೈಗೆಟಕುವ ದರಗಳಲ್ಲಿ ಗೃಹನಿರ್ಮಾಣ ಮತ್ತು ರೈತಾಪಿ ವರ್ಗಕ್ಕೆ ರಿಯಾಯಿತಿಗಳನ್ನು ಘೋಷಿಸಿದ್ದರು. ಹಿಂದೆ ಇಂತಹ ಸಾರ್ವಜನಿಕ ನೀತಿಯ ನಿರ್ಧಾರಗಳು ಸಾಮಾನ್ಯವಾಗಿ ಬಜೆಟ್‌ನ ಸಂದರ್ಭದಲ್ಲಿ ಘೋಷಿತವಾಗುತ್ತಿದ್ದವು.

ಹೀಗೆ ಇತ್ತೀಚಿನ ವರ್ಷಗಳಲ್ಲಿ ಬಜೆಟ್‌ನ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ ಎನ್ನುವುದಕ್ಕಿಂತಲೂ ಅದರ ಸ್ವರೂಪ ಮತ್ತು ಉದ್ದೇಶಗಳಲ್ಲಿ ಮುಖ್ಯ ಪಲ್ಲಟವಾಗಿದೆ ಎಂಬುದು ನಿಜ. ಹೊಸ ನೀತಿಗಳು ವರ್ಷದುದ್ದಕ್ಕೂ ಘೋಷಿತವಾಗುವುದರಿಂದ, ಆ ಮೂಲಕ ಬಜೆಟ್ ಮೇಲಿದ್ದ ರಾಜಕೀಯ ಒತ್ತಡ ಕಡಿಮೆಯಾಗುತ್ತಿದೆ. ಹಾಗಾಗಿ ಸರ್ಕಾರಗಳು ತಮ್ಮ ಆಯ್ಕೆಯ ಸಮಯದಲ್ಲಿ ಹೊಸ ನೀತಿಗಳನ್ನು ಘೋಷಿಸಿ, ಆ ಕ್ರಮಗಳ ರಾಜಕೀಯ ಪರಿಣಾಮಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದು ಕೆಲವು ಆರ್ಥಿಕ ವಿಶ್ಲೇಷಕರು ಹೇಳುತ್ತಾರೆ. ವರ್ಷದುದ್ದಕ್ಕೂ ತೆಗೆದುಕೊಂಡ ಪ್ರಮುಖ ನೀತಿ ನಿರ್ಧಾರಗಳನ್ನು ಮತ್ತೆ ‘ದೃಢೀಕರಿಸಿ, ವಿಸ್ತರಿಸಿ ಮತ್ತು ಕ್ರೋಡೀಕರಿಸಲು ಈಗ ಬಜೆಟ್ ಒಂದು ಪ್ರಮುಖ ಘಟ್ಟವಾಗಿದೆ’ ಎಂದು ‘ಎಕನಾಮಿಕ್ ಟೈಮ್ಸ್‌’ನಲ್ಲಿ ಪ್ರಣಬ್ ಧಲ್ ಸಾಮಂತ ಬರೆಯುತ್ತಾರೆ. ಉದಾಹರಣೆಗೆ, ಮೋದಿಯವರ ಕೈಗೆಟಕುವ ದರಗಳ ಗೃಹನಿರ್ಮಾಣ ಪ್ರಸ್ತಾವಕ್ಕೆ ಜೇಟ್ಲಿಯವರು ಮೂಲಭೂತ ಸೌಕರ್ಯದ ಸ್ಥಾನಮಾನ ನೀಡಿ, 2019ರೊಳಗೆ 1 ಕೋಟಿ ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ.

ಸಾಮಂತ ಅವರು ಗುರುತಿಸುವ ಒಂದು ಅಪಾಯವನ್ನು ಪ್ರಸ್ತಾಪಿಸಬೇಕು. ಬಜೆಟ್‌ ಅನ್ನು ಸಂಸತ್ತಿನಲ್ಲಿ ವಿಸ್ತೃತವಾಗಿ ಚರ್ಚಿಸಿ, ನಂತರ ಅನುಮೋದಿಸಲಾಗುತ್ತದೆ. ಅಂದರೆ ಕಾರ್ಯಾಂಗದ ಸಾರ್ವಜನಿಕ ನೀತಿಗಳನ್ನು ಶಾಸಕಾಂಗವು ಅನುಮೋದಿಸಬೇಕು. ಆದರೆ ನಾನು ಮೇಲೆ ಗುರುತಿಸಿದ ನೋಟು ನಿಷೇಧ ಇಲ್ಲವೆ ವಿದೇಶಿ ಬಂಡವಾಳ ಹೂಡಿಕೆಯಂತಹ ಮೂಲಭೂತ ಬದಲಾವಣೆಗಳನ್ನು ತರುವ ಕ್ರಮಗಳನ್ನು ಗೋಪ್ಯವಾಗಿ ಕಾರ್ಯಾಂಗವೇ ಅನುಷ್ಠಾನಕ್ಕೆ ತಂದರೆ, ಆಗ ಸಂಸತ್ತಿನಲ್ಲಿ ನಡೆಯಬೇಕಿದ್ದ ಚರ್ಚೆಯನ್ನು ತಪ್ಪಿಸಿಕೊಂಡಂತೆ ಇಲ್ಲವೆ ಮುಂದೂಡಿದಂತೆ ಆಗುತ್ತದೆ. ಅಷ್ಟರ ಮಟ್ಟಿಗೆ ಶಾಸಕಾಂಗಕ್ಕಿರುವ ಸಾಂವಿಧಾನಿಕ ಅಧಿಕಾರಗಳು ಮತ್ತು ಜವಾಬ್ದಾರಿಗಳನ್ನು ಕಡೆಗಣಿಸಿದಂತಾಗುತ್ತದೆ. ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವಿನ ಸಮತೋಲನದಲ್ಲಿ ಹೆಚ್ಚಿನ ಪಲ್ಲಟಗಳಾಗದಂತೆ ಎಚ್ಚರ ವಹಿಸಬೇಕಿರುವುದು ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಮುಖ್ಯವಾದ ವಿಚಾರವೇ.

ಈ ಹಿನ್ನೆಲೆಯಲ್ಲಿ ಜೇಟ್ಲಿಯವರ 2017- 18ರ ಸಾಲಿನ ಬಜೆಟ್ ಅನ್ನು ಹೇಗೆ ನೋಡಬೇಕು? ಮೊದಲಿಗೆ ಇದೊಂದು ಉದಾರವಾದಿ, ಮಾರುಕಟ್ಟೆ ಕೇಂದ್ರಿತ ಅರ್ಥವ್ಯವಸ್ಥೆಯೊಳಗೆ ವ್ಯವಹರಿಸುತ್ತಿರುವ ಸರ್ಕಾರವೊಂದರ ಬಜೆಟ್ ಎನ್ನುವುದನ್ನು ಸ್ಪಷ್ಟಪಡಿಸಿಕೊಂಡು, ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳು ಯಾವ ಬಗೆಯವು ಎಂದು ನೋಡೋಣ. ಇಂದಿನ ಪಕ್ಷ ರಾಜಕಾರಣದ ಸಂಪ್ರದಾಯದಂತೆ ವಿರೋಧ ಪಕ್ಷಗಳಿಗೆ ಯಾವ ಗುಣಾತ್ಮಕ ಅಂಶಗಳೂ ಕಾಣುವುದಿಲ್ಲ. ಆಡಳಿತ ಪಕ್ಷದವರಿಗೆ ಒಳ್ಳೆಯದು ಮಾತ್ರ ಗೋಚರಿಸುತ್ತದೆ. ಇಂತಹ ಆಷಾಢಭೂತಿತನ ಇಂದಿನ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಮಾತ್ರ ಅನ್ವಯವಾಗುವ ಮಾತಲ್ಲ. ಬದಲಿಗೆ ಎಲ್ಲರಿಗೂ ಅನ್ವಯವಾಗುತ್ತದೆ. ಉದಾಹರಣೆಗೆ ಯುಪಿಎ ಸರ್ಕಾರವು ಪ್ರಸ್ತಾಪಿಸಿದ್ದ ಸರಕು ಮತ್ತು ಸೇವಾ ತೆರಿಗೆಯನ್ನು (ಜಿ.ಎಸ್.ಟಿ) ಬಿಜೆಪಿ ವಿರೋಧಿಸಿತ್ತು. ಈಗ ಅದೇ ಕ್ರಮವನ್ನು ಆರ್ಥಿಕ ವ್ಯವಸ್ಥೆಯನ್ನೇ ಬದಲಿಸಬಲ್ಲ ಅನಿವಾರ್ಯ ಕ್ರಮವೆಂದು ಮೋದಿಯವರು ಮತ್ತು ಜೇಟ್ಲಿಯವರು ವಾದಿಸುತ್ತಾರೆ. ರಾಜಕಾರಣಿಗಳ ನಡೆ ಹೀಗಿದ್ದರೆ, ಉದ್ಯಮಿಗಳು ಅವರ ಇಷ್ಟದ ಕ್ಷೇತ್ರಕ್ಕೆ ದೊರಕಿರುವ ಸೌಲಭ್ಯಗಳ ಆಧಾರದ ಅನ್ವಯ ಒಳಿತು- ಕೆಡುಕುಗಳ ಆಧಾರದ ಮೇಲೆ ಪ್ರತಿಕ್ರಿಯಿಸಿದ್ದಾರೆ.

ಆದರೆ ಬಹುಮಟ್ಟಿಗೆ ಯಾವುದೇ ರ್‍ಯಾಡಿಕಲ್ ಪ್ರಸ್ತಾವಗಳಿಲ್ಲದ, ಕಳೆದ ವರ್ಷದ ಆದ್ಯತೆಗಳು ಮತ್ತು ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವ ಸಾಂಪ್ರದಾಯಿಕ (ಕನ್ಸರ್ವೇಟಿವ್) ಬಜೆಟ್ ಒಂದನ್ನು ಜೇಟ್ಲಿಯವರು ಮಂಡಿಸಿದ್ದಾರೆ. ಉತ್ತರ ಪ್ರದೇಶ, ಪಂಜಾಬ್ ಮತ್ತಿತರ ರಾಜ್ಯಗಳ ಚುನಾವಣೆಗಳನ್ನು ಪ್ರಭಾವಿಸುವ ಅಂಶಗಳು ವಿಶೇಷವಾಗಿ ಕಂಡುಬರುತ್ತಿಲ್ಲ. ಮಧ್ಯಮವರ್ಗದ ತೆರಿಗೆದಾರನಿಗೆ ತೆರಿಗೆ ದರವನ್ನು ಕಡಿಮೆ ಮಾಡಿದ್ದಾರೆ. ಇದೊಂದು ಸಣ್ಣ ಪರಿಹಾರದ ರೂಪದಲ್ಲಿದೆಯೆ ಹೊರತು ನಾನು ಕಳೆದ ವಾರದ ಅಂಕಣದಲ್ಲಿ ಚರ್ಚಿಸಿದಂತೆ ಹೆಚ್ಚುತ್ತಿರುವ ಅಸಮಾನತೆಯನ್ನು ಕಡಿಮೆ ಮಾಡುವ ರೀತಿಯ ಕ್ರಮವಲ್ಲ. ಇದಲ್ಲದೆ ಜೇಟ್ಲಿಯವರು ಹೆದ್ದಾರಿಗಳು, ರೈಲ್ವೆ ಮಾರ್ಗಗಳು, ವಿಮಾನ ನಿಲ್ದಾಣಗಳು, ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸೌಕರ್ಯಗಳು ಇತ್ಯಾದಿ ಮೂಲ ಸೌಕರ್ಯಗಳನ್ನು ಸೃಷ್ಟಿಸುವ (ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ) ಯೋಜನೆಗಳಿಗೆ, ಉದ್ಯೋಗ ಖಾತ್ರಿ ಯೋಜನೆಯಂತಹ ಕಲ್ಯಾಣ ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ಒದಗಿಸಿದ್ದಾರೆ. ಆದರೆ ಇವೆಲ್ಲವೂ ಹಳೆಯ ಯೋಜನೆಗಳ ಮುಂದುವರಿಕೆ ಮಾತ್ರ. ಜಾಗತಿಕ ಅರ್ಥವ್ಯವಸ್ಥೆಯ ಸ್ಥಿತಿಗತಿಗಳು ಅಷ್ಟೇನೂ ಉತ್ತೇಜನಕರವಾಗಿಲ್ಲದೆ ಇರುವ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷೆಯ ಹೊಸ ಯೋಜನೆಗಳಾಗಲಿ ಅಥವಾ ಬಂಡವಾಳವನ್ನು ಆಕರ್ಷಿಸುವ ಯೋಜನೆಗಳಾಗಲಿ ಜೇಟ್ಲಿಯವರಿಗೆ ಆದ್ಯತೆಯ ವಿಚಾರವಾಗಿಲ್ಲ. ಅಮೆರಿಕ ಮತ್ತು ಇಂಗ್ಲೆಂಡ್‌ಗಳೂ ಸೇರಿದಂತೆ ಹಲವೆಡೆ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ರಕ್ಷಣಾತ್ಮಕವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಲ್ಲಿನ ಸರ್ಕಾರಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಎರಡು ವಾರಗಳಲ್ಲಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಗಮನಿಸಿದಾಗ, ಜಾಗತಿಕವಾಗಿ ಅನಿಶ್ಚಿತತೆ ಹೆಚ್ಚುವ ಸಾಧ್ಯತೆಗಳು ಗೋಚರಿಸುತ್ತಿವೆ. ಇದೆಲ್ಲವನ್ನೂ ಜೇಟ್ಲಿಯವರು ಲೆಕ್ಕಕ್ಕೆ ತೆಗೆದುಕೊಂಡಿರುವಂತೆ ಕಾಣುತ್ತದೆ.

ಈ ನಡುವೆ ನೋಟು ನಿಷೇಧದ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ಆದ್ಯತೆಗಳು ಮತ್ತು ಆರ್ಥಿಕ ಸುಧಾರಣೆಗಳ ಉದ್ದೇಶ ನಿಧಾನವಾಗಿ ಸ್ಪಷ್ಟವಾಗುತ್ತಿದೆ. ಪ್ರಧಾನಿಯವರು ಮತ್ತು ಜೇಟ್ಲಿಯವರೂ ಸೇರಿದಂತೆ ಅವರ ಮಂತ್ರಿಮಂಡಳದ ಸದಸ್ಯರು ಮತ್ತೆ ಮತ್ತೆ ಸರ್ಕಾರದ ಹೊಸ ಆದ್ಯತೆಯೊಂದರ ಬಗ್ಗೆ ಮಾತನಾಡುತ್ತಿದ್ದಾರೆ. ಅದೇನೆಂದರೆ ನಗದು ಬಳಕೆಯಾಗುವ ಆರ್ಥಿಕ ಚಟುವಟಿಕೆಗಳ ಸಂದರ್ಭದಲ್ಲಿ ಭಾರತೀಯ ನಾಗರಿಕರ ನಡವಳಿಕೆಯನ್ನೇ ಬದಲಿಸುವುದು. ವಿಶೇಷವಾಗಿ ಅಸಂಘಟಿತ ಮತ್ತು ಅನೌಪಚಾರಿಕ ವಲಯಗಳ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಗಮನವಿರುವಂತಿದೆ. ಇದೊಂದು ಅತ್ಯಂತ ಮಹತ್ವಾಕಾಂಕ್ಷಿ ಆದ್ಯತೆಯೆಂದರೆ ತಪ್ಪಾಗಲಾರದು. ಭಾರತದ ಶೇ 90ರಷ್ಟು ಕೆಲಸಗಾರರು ಈ ವಲಯಗಳಲ್ಲಿ ಇರುವವರು. ಅಲ್ಲದೆ ದೇಶದ ಅರ್ಥವ್ಯವಸ್ಥೆಯ ಅರ್ಧದಷ್ಟು, ಅಂದರೆ ಸುಮಾರು ₹ 68 ಲಕ್ಷ ಕೋಟಿಯಷ್ಟು, ಈ ವಲಯಕ್ಕೆ ಸೇರಿದ್ದು. ನಗದು ಮಾತ್ರ ಬಳಕೆಯಾಗುತ್ತಿದ್ದ ಈ ವಲಯವನ್ನು ಔಪಚಾರಿಕ ವ್ಯವಸ್ಥೆಯೊಳಗೆ ತರಬೇಕೆಂಬ ಆಶಯವನ್ನು ಮೋದಿಯವರು ಹೊಂದಿದ್ದಾರೆ.

ಹೀಗೆ ನೋಡಿದಾಗ, ನವೆಂಬರ್ 8ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ ನೋಟು ನಿಷೇಧದ ನೆರಳಿನಲ್ಲಿಯೇ ಜೇಟ್ಲಿಯವರು ತಮ್ಮ ಬಜೆಟ್ ಮಂಡಿಸಿದ್ದಾರೆ. ನೋಟು ನಿಷೇಧದ ಪರಿಣಾಮಗಳು ಭಾರತದ ಅರ್ಥವ್ಯವಸ್ಥೆಯ ಮೇಲೆ ಏನಾಗಿರಬಹುದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಸಂಘಟಿತ ಮತ್ತು ಅನೌಪಚಾರಿಕ ವಲಯಗಳಲ್ಲಿನ ಆರ್ಥಿಕ ಚಟುವಟಿಕೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಇದು ತಾತ್ಕಾಲಿಕವಾದ ಬೆಳವಣಿಗೆಯೆಂಬ ಆಶಾವಾದದ ನಡುವೆಯೇ ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಮೂರು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ವ್ಯವಹಾರಗಳಿಗೆ ನಗದನ್ನು ಬಳಸುವುದನ್ನು ಜೇಟ್ಲಿಯವರು ನಿಷೇಧಿಸಿದ್ದಾರೆ. ಅದರ ಜೊತೆಗೆ 2,500 ಕೋಟಿ ಡಿಜಿಟಲ್ ವ್ಯವಹಾರಗಳ ಮೂಲಕ ಹಣ ಪಾವತಿ ಮಾಡುವ ಗುರಿಯನ್ನು ಜೇಟ್ಲಿಯವರು ಘೋಷಿಸಿದ್ದಾರೆ. ಇದರ ಉದ್ದೇಶ ತೆರಿಗೆದಾರರ ಸಂಖ್ಯೆಯನ್ನು ಹೆಚ್ಚಿಸುವುದು ಎನ್ನುವುದು ಸ್ಪಷ್ಟವಾಗುತ್ತಿದೆ. ಜಿ.ಎಸ್.ಟಿ. ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ ಔಪಚಾರಿಕ ವಲಯದ ವಿಸ್ತರಣೆಯಾಗಬೇಕು ಹಾಗೂ ಆರ್ಥಿಕ ಚಟುವಟಿಕೆಗಳು ಅಧಿಕೃತವಾಗಿ ದಾಖಲಾಗುತ್ತಿದ್ದಂತೆ ತೆರಿಗೆದಾರರ ಸಂಖ್ಯೆಯೂ ಹೆಚ್ಚುತ್ತದೆ. ತೆರಿಗೆಯ ಸಂಗ್ರಹವೂ ಅಧಿಕೃತವಾಗುತ್ತದೆ. ಆ ಮೂಲಕ ಕಪ್ಪುಹಣದ ಪ್ರಮಾಣ ಕಡಿಮೆಯಾಗುತ್ತದೆ ಎನ್ನುವ ನಿರೀಕ್ಷೆ ಇಲ್ಲಿ ಕೆಲಸ ಮಾಡುತ್ತಿದೆ. ಸ್ವತಃ ಜೇಟ್ಲಿಯವರೇ ಭಾರತೀಯ ಸಮಾಜವೇ ತೆರಿಗೆ ವಿಚಾರದಲ್ಲಿ ನಿಯಮಗಳನ್ನು ಅನುಸರಿಸದೆ ಇರುವ ಸಮಾಜ ಎಂದು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಇದೆಲ್ಲ ಸಿದ್ಧಾಂತ. ಈ ಹೊಸ ನೀತಿಗಳ ಅನುಷ್ಠಾನ ಹೇಗಾಗುತ್ತದೆ? ತೆರಿಗೆ ವಂಚನೆಯನ್ನು ತಪ್ಪಿಸುವ, ಸ್ಮಾರ್ಟ್ ನಗರಗಳನ್ನು ಹಾಗೂ ಕೈಗೆಟಕುವ ದರಗಳಲ್ಲಿ ಮನೆಗಳನ್ನು ಕಟ್ಟುವ ದಕ್ಷತೆ ನಮ್ಮ ವ್ಯವಸ್ಥೆಗಿದೆಯೇ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನಮ್ಮ ಇದುವರೆಗಿನ ಅನುಭವದ ಆಧಾರದ ಮೇಲೆ ಊಹಿಸಬಹುದು. ಆದರೆ ಇಡೀ ಸಮಾಜದ ಆರ್ಥಿಕ ನಡವಳಿಕೆಗಳನ್ನು ಸಾರ್ವಜನಿಕ ನೀತಿಯ ಮೂಲಕ ಬದಲಿಸಬಹುದೇ? ಇದು ಮೋದಿಯವರು ಹೂಡಿರುವ ಪಣ. 2017- 18ರ ಬಜೆಟ್ ಸಹ ಈ ಪಣದ ಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT