ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಾಧನೆ ನಾಯಕನ ಅಳತೆಗೋಲು ಅಲ್ಲ!

Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ
ನಾಯಕನ  ಜನಪ್ರಿಯತೆ ಅಳೆಯುವಾಗ ಆತನ ಸಾಧನೆಗಳಿಗೆ ಎಷ್ಟು ಪ್ರಾಮುಖ್ಯ ನೀಡಲಾಗುತ್ತದೆ? ತರ್ಕದ ನೆಲೆಯಲ್ಲಿ ಹೇಳುವುದಾದರೆ, ತನ್ನ ಪ್ರಜೆಗಳ ಬಾಳಲ್ಲಿ ಸಮೃದ್ಧಿ ತಂದುಕೊಡುವ ನಾಯಕ ಜನಪ್ರಿಯ ಆಗಿರುತ್ತಾನೆ. ಪ್ರಜಾತಂತ್ರದಲ್ಲಿ ಇದು ಅತ್ಯಂತ ಮುಖ್ಯವಾದದ್ದು. ಹಾಗಾಗಿ, ದೇಶ ಅಥವಾ ರಾಜ್ಯ ಹೆಚ್ಚಿನ ಆರ್ಥಿಕ ಬೆಳವಣಿಗೆ ಸಾಧಿಸುವ ಕಾಲದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಪುನಃ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ.
 
ಕಳೆದ ಎರಡು ವರ್ಷಗಳಲ್ಲಿ ಭಾರತ ಕಂಡ ಹಲವು ನಾಯಕರು ಆಡಳಿತ ವಿರೋಧಿ ಅಲೆ ಮೀರಿ ನಿಲ್ಲಲು ಇದೊಂದು ಕಾರಣ ಎಂದು ತಜ್ಞರು ಹೇಳುತ್ತಾರೆ. ಹೀಗೆ ಹೇಳುವಾಗ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೆನಪಿಗೆ ಬರುತ್ತಾರೆ. ಇವರು ತಮ್ಮ ರಾಜ್ಯಗಳು ಬೇರೆ ರಾಜ್ಯಗಳಿಗಿಂತ ಹೆಚ್ಚಿನ ಬೆಳವಣಿಗೆ ಸಾಧಿಸಿದ ಅವಧಿಯಲ್ಲೇ ಅಧಿಕಾರದ ಗದ್ದುಗೆಯಲ್ಲಿದ್ದಾರೆ.
 
ರಾಜಕೀಯವಾಗಿ ಪ್ರಬಲ ಎನ್ನುವಂತಹ ಆಡಳಿತ ವಿರೋಧಿ ಅಲೆಯನ್ನು ಮೀರಲು, ಅಧಿಕಾರಕ್ಕೆ ಮರಳಲು ಇವರಿಗೆ ಆರ್ಥಿಕ ಬೆಳವಣಿಗೆಯ ಕಾರಣದಿಂದ ಸಾಧ್ಯವಾಗಿದೆ. ಇದೇ ತರ್ಕವನ್ನು ಅನ್ವಯಿಸಿ ಹೇಳುವುದಾದರೆ, ಆರ್ಥಿಕ ವಿಚಾರಗಳಲ್ಲಿ ಸಾಧನೆ ತೋರಲು ವಿಫಲವಾಗುವ ನಾಯಕರು ಜನರಿಂದ ಶಿಕ್ಷೆಗೆ ಗುರಿಯಾಗುತ್ತಾರೆ. ನಾಯಕನಾದವನು ಸಮೃದ್ಧಿ ತರಲಿ, ತಮ್ಮ ಬದುಕಿನಲ್ಲಿ ಬದಲಾವಣೆ ತರಲಿ ಎಂದು ಮತದಾರರು ಬಯಸುತ್ತಾರೆ.
 
ಈ ವಾದದಲ್ಲಿ ಇರುವ ಒಂದು ದೋಷವೆಂದರೆ, ಇದನ್ನು ಸಮರ್ಥಿಸಿಕೊಳ್ಳುವ ಅಂಕಿ–ಅಂಶ ಇಲ್ಲ. ಭಾರತ ಐತಿಹಾಸಿಕವಾಗಿ ಅತಿಹೆಚ್ಚಿನ ಆರ್ಥಿಕ ಬೆಳವಣಿಗೆ ಸಾಧಿಸಿದ ಅವಧಿಯಲ್ಲಿ, ಅಂದರೆ 2004ರಿಂದ 2014ರವರೆಗೆ, ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ, 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಕ್ಷರಶಃ ನಜ್ಜುಗುಜ್ಜಾಯಿತು. ಲೋಕಸಭೆಯಲ್ಲಿ ತಾನು ಹಿಂದೆಂದೂ ಕಾಣದಷ್ಟು ಕಡಿಮೆ ಸ್ಥಾನಗಳನ್ನು ಪಡೆಯಿತು. ಆ ಚುನಾವಣೆಯಲ್ಲಿ ಬೇರೆ ವಿದ್ಯಮಾನಗಳೂ ಕೆಲಸ ಮಾಡಿದ್ದವು ಎಂದು ಹೇಳಬಹುದು. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಹೊಂದಿದ್ದ ಭ್ರಷ್ಟಾಚಾರದ ಕಳಂಕ, ನರೇಂದ್ರ ಮೋದಿ ಅವರ ಉಪಸ್ಥಿತಿ ಹಾಗೂ ಅವರ ಆಕ್ರಮಣಕಾರಿ ಚುನಾವಣಾ ಅಭಿಯಾನ ಆ ವಿದ್ಯಮಾನಗಳಲ್ಲಿ ಖಂಡಿತ ಸೇರಿವೆ. ಒಟ್ಟಿನಲ್ಲಿ, 2014ರ ಚುನಾವಣೆಯನ್ನು ನಾವು ಒಂದು ಅಪವಾದ ಎಂದು ಪರಿಗಣಿಸಬಹುದು.
 
ದುರದೃಷ್ಟದ ಸಂಗತಿಯೆಂದರೆ, ಹತ್ತು ವರ್ಷಗಳ ಯುಪಿಎ ಆಡಳಿತದ ಅವಧಿಗಿಂತ ಹಿಂದಿನ ಅಂಕಿ–ಅಂಶಗಳು ಇನ್ನಷ್ಟು ಮಸುಕಾದ ಚಿತ್ರಣ ನೀಡುತ್ತವೆ. ದೇಶ ಈಚಿನ ಕಾಲದಲ್ಲಿ ಎರಡನೆಯ ಅತಿ ಹೆಚ್ಚಿನ ಆರ್ಥಿಕ ಬೆಳವಣಿಗೆ ದರ ದಾಖಲಿಸಿದ್ದು ಅಟಲ್ ಬಿಹಾರಿ ವಾಜಪೇಯಿ ಆಡಳಿತ ಅವಧಿಯಲ್ಲಿ, 2004ಕ್ಕಿಂತ ಹಿಂದಿನ ಐದು ವರ್ಷಗಳಲ್ಲಿ. ಚುನಾವಣೆಯಲ್ಲಿ ಜಯ ಸಾಧಿಸುವ ಬಗ್ಗೆ ವಾಜಪೇಯಿ ಬಹಳ ವಿಶ್ವಾಸ ಹೊಂದಿದ್ದರು. ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಜಾಹೀರಾತು ಅಭಿಯಾನದ ನಂತರ ಕೆಲವೇ ದಿನಗಳಲ್ಲಿ ಅವರು ಚುನಾವಣಾ ಪ್ರಚಾರ ಆರಂಭಿಸಿದರು. ಆದರೆ, ವಾಜಪೇಯಿ ಸೋತರು. ಅದಕ್ಕೆ ನೈಜ ಕಾರಣಗಳು ಏನು ಎಂಬುದು ಯಾರಿಗೂ ಅರ್ಥವಾಗಲಿಲ್ಲ. ಭಾರತದಲ್ಲಿ ಸಮೃದ್ಧಿ ಸೃಷ್ಟಿಯಾಗಿದೆ ಎಂಬ ವಿಶ್ವಾಸವನ್ನು ಬಿಜೆಪಿ ಹೊಂದಿತ್ತು. ಆದರೆ ವಾಸ್ತವದಲ್ಲಿ ಅಂತಹ ಸಮೃದ್ಧಿ ಇರಲಿಲ್ಲ ಎಂಬ ಊಹೆಗಳು ಆ ಸಂದರ್ಭದಲ್ಲಿ ಹರಿದಾಡಿದವು. ವಾಜಪೇಯಿ ಅವರು ನಿಜವಾಗಿಯೂ ಸಾಧಿಸಿ ತೋರಿಸಿದ್ದರೆ, ಗೆಲ್ಲಲು ಆಗುತ್ತಿತ್ತೇ?
‘ಇಲ್ಲ, ಗೆಲ್ಲುತ್ತಿರಲಿಲ್ಲ’ ಎಂದು ನಾನು ಹೇಳುತ್ತೇನೆ. ಏಕೆಂದರೆ ವಾಜಪೇಯಿ ಆಡಳಿತ ಅವಧಿಗಿಂತ ಮೊದಲಿನ ದಶಕಗಳನ್ನು ಅವಲೋಕಿಸಿದರೆ, ಭಾರತ ಉಪಖಂಡದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆರ್ಥಿಕ ಬೆಳವಣಿಗೆ ತೀರಾ ಅನಿವಾರ್ಯವಲ್ಲ ಎಂಬುದು ಗೊತ್ತಾಗುತ್ತದೆ.
 
ಆರ್ಥಿಕ ಬೆಳವಣಿಗೆಯನ್ನು ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಆಧಾರದಲ್ಲಿ ಅಳೆಯುವುದಾದರೆ, 1950 ಮತ್ತು 60ರ ದಶಕಗಳಲ್ಲಿ ಕಾಂಗ್ರೆಸ್ ತೀರಾ ಕಳಪೆ ಆರ್ಥಿಕ ಸಾಧನೆ ತೋರಿತ್ತು. ಆ ಅವಧಿಯಲ್ಲಿ ದೇಶ ಕಂಡ ಅಂದಾಜು ಶೇಕಡ 3ರಷ್ಟು ವಾರ್ಷಿಕ ಬೆಳವಣಿಗೆ ದರವನ್ನು ‘ಹಿಂದೂ ಬೆಳವಣಿಗೆ ದರ’ ಎನ್ನಲಾಗುತ್ತದೆ. ಹೀಗಿದ್ದರೂ, ಆ ಅವಧಿಯ ಚುನಾವಣೆಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು.
 
ಇವತ್ತು ನಾವು ‘ಉತ್ತಮ ಆಡಳಿತ’ ಎಂದು ಯಾವುದನ್ನು ಕರೆಯುತ್ತೇವೆಯೋ, ಅದು ಅಂದಿನ ದಿನಗಳಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿ ಕಾಣುತ್ತಿತ್ತು. ಅದರ ಬಗ್ಗೆ ಚರ್ಚೆ ಆಗುತ್ತಿದ್ದುದೂ ಕಡಿಮೆ. ಹಾಗಾದರೆ, 1960ರ ದಶಕದಲ್ಲಿ ಇದ್ದವರಿಗಿಂತ ಇಂದು ನಾವು ಬಹಳ ಭಿನ್ನರಾಗಿದ್ದೇವೆಯೇ? ಇದಕ್ಕೂ ನಾನು ‘ಇಲ್ಲ’ ಎಂದು ಹೇಳುತ್ತೇನೆ. ಭಾರತದಂತಹ ಪುರಾತನ ರಾಷ್ಟ್ರಗಳು ದಿಢೀರ್‌ ಬದಲಾಗುವುದಿಲ್ಲ. ಹಾಗಾಗಿ, ಉಳಿದೆಲ್ಲವುಗಳಿಗಿಂತ ಹೆಚ್ಚಾಗಿ ಆರ್ಥಿಕ ಸಾಧನೆಗಳ ಆಧಾರದಲ್ಲಿ ನಾವು ಮತ ಚಲಾಯಿಸುತ್ತೇವೆ ಎಂದು ಹೇಳುವುದು ಕಷ್ಟ.
 
ನೋಟು ರದ್ದತಿ ತೀರ್ಮಾನವು ನರೇಂದ್ರ ಮೋದಿ ಅವರ ಪಕ್ಷವನ್ನು 2017ರಲ್ಲಿ ಯಾವ ರೀತಿ ಪ್ರಭಾವಿಸಬಲ್ಲದು ಎಂಬುದನ್ನು ನೋಡಲು ನಾವು ಈ ವಿಚಾರಗಳನ್ನು ಇಲ್ಲಿ ಚರ್ಚಿಸುತ್ತಿದ್ದೇವೆ. ಬಿಜೆಪಿಯು ಉತ್ತರ ಪ್ರದೇಶದಲ್ಲಿ ದೊಡ್ಡ ಚುನಾವಣೆ ಎದುರಿಸಬೇಕಿದೆ. ಪಂಜಾಬ್‌, ಗೋವಾ ಹಾಗೂ ಗುಜರಾತ್‌ ಚುನಾವಣೆಗಳೂ ಇವೆ. ಆರ್ಥಿಕ ಬೆಳವಣಿಗೆ ಅಷ್ಟೇನೂ ಹೆಚ್ಚಿಲ್ಲದಿರುವುದು ಮತ್ತು ನೋಟು ರದ್ದತಿಯ ಅನಾಹುತಗಳು ಮೋದಿ ಅವರಿಗೆ ಸೋಲು ತಂದಿಡುತ್ತವೆ ಎಂಬ ನಿರೀಕ್ಷೆ ಬಿಜೆಪಿಯ ವಿರೋಧಿಗಳಲ್ಲಿ ಇದೆ.
 
ಆದರೆ, ಪರಿಸ್ಥಿತಿ ಅಷ್ಟು ಸರಳವಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಚರಿಷ್ಮಾ, ವಿಶ್ವಾಸಾರ್ಹತೆ ಹಾಗೂ ಸಾಮಾಜಿಕ ವಿದ್ಯಮಾನಗಳು ಈಗಲೂ ಮೋದಿ ಪರವಾಗಿ ಇವೆ. ಕೆಲವು ಮತದಾರರಲ್ಲಿ ಮೂಡಿರುವ ಅವಿಶ್ವಾಸವನ್ನು ಕೋಪವನ್ನಾಗಿ ಪರಿವರ್ತಿಸಲು ವಿರೋಧ ಪಕ್ಷಗಳು ಇನ್ನಷ್ಟು ಕೆಲಸ ಮಾಡಬೇಕು. ನೋಟು ರದ್ದತಿಯ ಪರಿಣಾಮಗಳು ಫೆಬ್ರುವರಿಯವರೆಗೆ ಮುಂದುವರಿದರೆ, ಪರಿಸ್ಥಿತಿ ತಮ್ಮ ಅನುಕೂಲಕ್ಕೆ ತಕ್ಕಂತೆ ಆಗುತ್ತದೆ ಎಂದು ಅವರು ಭಾವಿಸುವಂತಿಲ್ಲ. ನೋಟು ರದ್ದತಿಯ ಪರಿಣಾಮವಾಗಿ ಅರ್ಥ ವ್ಯವಸ್ಥೆಗೆ ಧಕ್ಕೆಯಾಗಿ, ಕೆಲವು ತ್ರೈಮಾಸಿಕಗಳಲ್ಲಿ ಜಿಡಿಪಿ ದರ ಕಡಿಮೆಯಾದಮಾತ್ರಕ್ಕೆ ಮೋದಿ ಅವರ ಜನಪ್ರಿಯತೆ ಕಡಿಮೆ ಆಗುವುದಿಲ್ಲ.
ಆರ್ಥಿಕವಾಗಿ ಯಾವ ನೈಜ ಸಾಧನೆ ತೋರದೆಯೂ ನೆಹರೂ ಮತ್ತು ಅವರ ಮಗಳು ಇಂದಿರಾ ದೇಶದ ಮತದಾರರನ್ನು ಹಿಡಿದಿಟ್ಟುಕೊಂಡಂತೆ, ಪಾಕಿಸ್ತಾನದ ಭುಟ್ಟೊ ಮತ್ತು ಅವರ ಪುತ್ರಿ ಬೆನಜೀರ್ ಅಲ್ಲಿನ ಮತದಾರರನ್ನು ಹಿಡಿದಿಟ್ಟುಕೊಂಡಂತೆ, ಮೋದಿ ಕೂಡ ಆರ್ಥಿಕವಾಗಿ ಯಾವ ನೈಜ ಸಾಧನೆ ತೋರದೆಯೂ ತಮ್ಮ ಮತದಾರರನ್ನು ಹಿಡಿದಿಟ್ಟುಕೊಳ್ಳಬಹುದು.
 
ಹಾಗಾಗಿ, 2017ರಲ್ಲಿಯೂ ಬಿಜೆಪಿಯ ಯಶೋಗಾಥೆ ಮುಂದುವರಿದರೆ, ಅದರಲ್ಲಿ ಆಶ್ಚರ್ಯಪಡುವಂಥದ್ದು ಏನೂ ಇಲ್ಲ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ) 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT