ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಆಗಬಲ್ಲದೇ ಬಡತನಕ್ಕೆ ದುಃಸ್ವಪ್ನ?

Last Updated 25 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಕೆಲ ವರ್ಷಗಳ ಹಿಂದೆ ನಂಜನಗೂಡಿಗೆ ಸಮೀಪದ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದಾಗ ನನಗೆ ಕೆಂಪಯ್ಯನ ಪರಿಚಯವಾಯಿತು. ಸುಮಾರು 60 ವರ್ಷದವನಂತೆ ಕಾಣುತ್ತಿದ್ದ ಆತ ಒಂದೇ ಸಮನೆ ಕೆಮ್ಮುತ್ತಿದ್ದ. ಅವನೊಡನೆ ಮಾತಿಗಿಳಿದಾಗ, ಅವನು ಒಂಟಿತನ ಮತ್ತು ಖಿನ್ನತೆಯಿಂದ ಬಳಲುತ್ತಿದ್ದುದು ನನಗೆ ತಿಳಿದುಬಂತು.

ಅವನ ಹೆಂಡತಿ ಮತ್ತು ಮಕ್ಕಳು ಕೆಲ ವಾರಗಳ ಹಿಂದೆ ತಾತ್ಕಾಲಿಕವಾಗಿ ಕೊಡಗಿಗೆ ಸ್ಥಳಾಂತರಗೊಂಡಿದ್ದರು. ಅವರಿಗೆಲ್ಲ ಅಲ್ಲಿನ ಕಾಫಿ ತೋಟವೊಂದರಲ್ಲಿ ಕೆಲಸ ಸಿಕ್ಕಿತ್ತು. ಏನಿಲ್ಲವೆಂದರೂ ದಿನಕ್ಕೆ ತಲಾ 500 ರೂಪಾಯಿಯನ್ನಾದರೂ ಅವರೆಲ್ಲ ಸಂಪಾದನೆ ಮಾಡಬಹುದು ಎಂದು ಅವನು ಎಣಿಸಿದ್ದ. ಗರಿಷ್ಠ ದಿನಗೂಲಿಯೇ 150 ರೂಪಾಯಿ ಇರುವ ತನ್ನ ಊರಿನಲ್ಲಿ ಅಷ್ಟು ಹಣವನ್ನು ಪಡೆಯುವುದು ಅವನಿಗೆ ಕನಸಿನ ಮಾತೇ ಆಗಿತ್ತು.

ಅದೂ ಅಲ್ಲದೆ ದುರ್ಬಲ ದೇಹದ ಅವನು ಯಾವುದೇ ಬಗೆಯ ದೈಹಿಕ ಕೆಲಸಕ್ಕೆ ಅಸಮರ್ಥ ಎಂದು ಊರಿನ ಬಹುತೇಕರು ಪರಿಗಣಿಸಿದ್ದರಿಂದ, ಆ 150 ರೂಪಾಯಿ ಪಡೆಯುವುದು ಸಹ ಅವನಿಗೆ ಕಷ್ಟದ ಸಂಗತಿ ಆಗಿತ್ತು. ಹೀಗೆ ಕೈಯಲ್ಲಿ ಕೆಲಸವಿಲ್ಲದೆ, ಜೊತೆಯಲ್ಲಿ ತನ್ನವರೆನ್ನುವವರು ಯಾರೂ ಇಲ್ಲದೆ ಹತಾಶನಾಗಿದ್ದ ಕೆಂಪಯ್ಯ ಏಕಾಂಗಿತನವನ್ನು ಅನುಭವಿಸುತ್ತಿದ್ದ.

ಈಗ ಅವನಿಗೇನಿದ್ದರೂ ತನ್ನ ಜೀವನೋಪಾಯಕ್ಕೆ ಒಂದಷ್ಟು ಹಣ ಕೊಟ್ಟು ಹೋಗಲು ತಿಂಗಳಿಗೊಮ್ಮೆ ಬರುವ ಮಗನಿಗಾಗಿ ಕಾಯುವುದೊಂದೇ ಕೆಲಸವಾಗಿತ್ತು. ಅವನಿಗಿದ್ದ ಮೂವರು ಮಕ್ಕಳಲ್ಲಿ ಹಿರಿಯವನು 9ನೇ ತರಗತಿಗೇ ಓದು ನಿಲ್ಲಿಸಿದ್ದ. ಅವನ ಕುಟುಂಬದಲ್ಲೆಲ್ಲ ಅತಿ ಹೆಚ್ಚು ಬುದ್ಧಿವಂತ ಎನಿಸಿಕೊಂಡಿದ್ದ ಈ ಮಗನಾದರೂ ಮುಂದೆ ಚೆನ್ನಾಗಿ ಓದಿ, ಕನಿಷ್ಠ ಪದವಿಯನ್ನಾದರೂ ಪಡೆಯಲಿ ಎಂದು ಕೆಂಪಯ್ಯ ಆಸೆಪಟ್ಟಿದ್ದ. ಆದರೆ ಬಡತನ ಬೇರೆಯದೇ ಸಂಚು ಹೂಡಿತ್ತು. ಕುಟುಂಬದವರ ಹೊಟ್ಟೆ ತುಂಬಿಸಲು ಕೆಲಸಕ್ಕೆ ಸೇರುವ ಸಲುವಾಗಿ ಅವನು ಶಾಲೆಯನ್ನೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೆಲ್ಲ ಆಗಿ ಅದಾಗಲೇ ಮೂರು ವರ್ಷಗಳು ಸಂದಿದ್ದವು. ಈಗ ಇಡೀ ಕುಟುಂಬದ ಪ್ರಮುಖ ಆದಾಯ ಮೂಲವಾಗಿದ್ದ ಅವನಿಗೆ ಶಿಕ್ಷಣ ಕೇವಲ ಕನಸಾಗಿ ಉಳಿದಿತ್ತು. ಕೆಂಪಯ್ಯ ತಾನು ಮಾತ್ರ ಬಡವನಾಗಿರಲಿಲ್ಲ, ಮಗನನ್ನೂ ಬಡತನದ ಕೂಪಕ್ಕೆ ತಳ್ಳಿದ್ದ. ಮಗನ ಉತ್ತಮ ಭವಿಷ್ಯಕ್ಕೆ ಏಣಿಯಾಗಬಹುದಾಗಿದ್ದ ಶಿಕ್ಷಣ ಕೊಡಿಸಲು ಅವನಿಗೆ ಸಾಧ್ಯವಾಗಿರಲಿಲ್ಲ.

ಪೀಳಿಗೆಯಿಂದ ಪೀಳಿಗೆಗೆ ಹರಿದುಬರುವ ಬಡತನವನ್ನು ಒಂದು ಅಧ್ಯಯನಯೋಗ್ಯ ವಿಷಯವೆಂದು ಪರಿಗಣಿಸಿ ಆ ಬಗ್ಗೆ ಗಂಟೆಗಟ್ಟಲೆ ಚರ್ಚಿಸುವುದು ಸುಲಭ. ಆದರೆ ಅದರಿಂದ ಕೆಂಪಯ್ಯ ಮತ್ತು ಅವನ ಕುಟುಂಬದವರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ.

ಹಾಗಿದ್ದರೆ ಬಡತನದ ಬಲೆಯಿಂದ ಹೊರಬರಲು ಇಂತಹ ಜನರಿಗೆ ಯಾವುದಾದರೂ ಮಾರ್ಗ ಇದೆಯೇ? ಬಡತನ ನಿರ್ಮೂಲನಕ್ಕೆಂದೇ ಇರುವ ಸಬ್ಸಿಡಿ ದರದ ಆಹಾರ ಪೂರೈಕೆ ಅಥವಾ ಎನ್.ಆರ್.ಇ.ಜಿ.ಎಸ್.ನಂತಹ ಕಾರ್ಯಕ್ರಮಗಳು ಈ ಕುಟುಂಬಗಳಿಗೆ ನೆರವಾಗಬಲ್ಲವೇ? ಖಂಡಿತವಾಗಿಯೂ ಅವು ಬಡತನದ ವಿರುದ್ಧ ಸೆಣಸುವ ಶಕ್ತಿಯನ್ನು ಅವರಿಗೆ ಕೊಡಬಹುದು.

ಆದರೆ, ಅವರು ತಾವಿರುವ ಬಡತನದ ಬಲೆಯಿಂದ ಸಂಪೂರ್ಣವಾಗಿ ಹೊರಬರುವ ರೀತಿಯಲ್ಲಿ ನೆರವಾಗಲು ಸಾಧ್ಯವೇ? ಇಂತಹ ಸಮಸ್ಯೆಗಳಿಗೆಲ್ಲ ಏನಾದರೂ ಶಾಶ್ವತ ಪರಿಹಾರ ಇದೆಯೇ? ಹೀಗೆಲ್ಲ ಯೋಚಿಸುವಾಗ ಜಗತ್ತಿನ ಶೇ 25ರಷ್ಟು ಬಡವರು ನಮ್ಮ ದೇಶದಲ್ಲೇ ಇದ್ದಾರೆ ಎಂಬ ವಿಷಯವನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಸಬ್ಸಿಡಿಗಳು ಕ್ರಮೇಣ ಇಲ್ಲವಾಗುತ್ತಿರುವ ಹಾಗೂ ಇದ್ದರೂ ಅನರ್ಹ ಶ್ರೀಮಂತರಿಗೇ ಹೆಚ್ಚು ಅನುಕೂಲ ಮಾಡಿಕೊಡುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ.

ಇದೇ ವೇಳೆ, ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಕೆಲ ನಿಬಂಧನೆಗಳ ಜಾರಿಯಿಂದ ತಮಗೆ ವಿನಾಯಿತಿ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿವೆ. ಈ ಬಗ್ಗೆ ಒಂದಷ್ಟು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೊಂದಿಗೆ ನಾನು ಅನೌಪಚಾರಿಕವಾಗಿ ಮಾತನಾಡಿದಾಗ, ಭಿನ್ನವಾದ ಸಾಮಾಜಿಕ ಮತ್ತು ಆರ್ಥಿಕ ನೆಲೆಯಿಂದ ಬಂದ ಮಕ್ಕಳು ಒಟ್ಟಿಗೇ ಸೇರಿ ಕಲಿಯುವಾಗ ಉಂಟಾಗುವ ಸವಾಲುಗಳ ಬಗ್ಗೆ ತಾವು ಚಿಂತಿತರಾಗಿರುವುದಾಗಿ ಅವರು ಸಮರ್ಥಿಸಿಕೊಂಡರು.

ಬಡ ಮಕ್ಕಳು ಧನಿಕರ ಮಕ್ಕಳೊಟ್ಟಿಗೆ ಬೆರೆಯಬಾರದು ಎಂದು ಯೋಚಿಸುವುದೇ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂತಹ ವಾದದಿಂದ ಕೆಲವರು ಆಕ್ರೋಶ ಮತ್ತು ಚಿಂತೆಗೆ ಒಳಗಾದರೆ, ಸಮಾನತೆ ಒದಗಿಸುವ ನಿಟ್ಟಿನಲ್ಲಿ ಈ ಬಗೆಯ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆಯನ್ನು ಯೋಗ್ಯ ರೀತಿಯಲ್ಲಿ ಅರ್ಥ ಮಾಡಿಕೊಂಡವರೂ ಕೆಲವರಿದ್ದರು.

ಆದರೆ ನಾನು ಮಾತನಾಡಿಸಿದ ಬಹುತೇಕರು ಆರ್‌ಟಿಇಯನ್ನು ಅನಗತ್ಯವಾದ ಕಿರಿಕಿರಿ ಎಂದು ಭಾವಿಸಿ, ಅತ್ಯಂತ ಸಂಕುಚಿತ ಮನೋಭಾವದಿಂದ ಅದನ್ನು ಅರ್ಥೈಸಿಕೊಂಡಿದ್ದರು. ತಲೆತಲಾಂತರದ ಬಡತನವನ್ನು ನಿವಾರಿಸಲು ಇದೊಂದು ಪ್ರಬಲ ಉಪಕರಣ ಆಗಬಲ್ಲದು ಎಂಬುದನ್ನು ಕೆಲವರಷ್ಟೇ ಗ್ರಹಿಸಿದ್ದರು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಹೆಚ್ಚು ಹೆಚ್ಚು ಮಕ್ಕಳು ಅತ್ಯಲ್ಪ ವೆಚ್ಚದಲ್ಲಿ ಅಥವಾ ಉಚಿತವಾಗಿ ಪಡೆಯಲು ಸಾಧ್ಯವಾಗುವುದಾದರೆ, ಆಗ ನಾವು ಅವರ ಬಡತನ ಮುಕ್ತ ಭವಿಷ್ಯದ ನಿರೀಕ್ಷೆ ಮಾಡಲು ಸಾಧ್ಯ.

ವಿಶ್ವವಿದ್ಯಾಲಯದ ಪ್ರಾಥಮಿಕ ಪದವಿಯು ವ್ಯಕ್ತಿಗೆ ಕೆಲಸ ದೊರಕಿಸಿಕೊಟ್ಟು, ಅದರಿಂದ ಅವನು ಅಥವಾ ಅವಳು ಗೌರವಯುತವಾಗಿ ಬದುಕುತ್ತಿರುವ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಅಂತಹ ವ್ಯಕ್ತಿಗಳು ತಾವು ಮಾತ್ರ ಬಡತನದ ಪಾಶದಿಂದ ಪಾರಾಗುವುದಿಲ್ಲ.

ಅವರ ಮಕ್ಕಳು ಮತ್ತು ಕುಟುಂಬ ಸಹ ಬಡತನ ಮುಕ್ತ ಬದುಕನ್ನು ಎದುರು ನೋಡಬಹುದಾಗಿರುತ್ತದೆ. ಶಿಕ್ಷಣ ಹಕ್ಕು ಸರ್ವರಿಗೂ ಶಿಕ್ಷಣ ಒದಗಿಸುವ ಕಾಯ್ದೆಯಷ್ಟೇ ಅಲ್ಲ, ಈಗಿನ ಕಾಲದಲ್ಲಿ ಯಾವುದೇ ಒಂದು ರಾಷ್ಟ್ರ ಜಾರಿಗೆ ತರುವ ಸಾಮಾಜಿಕ ಶಾಸನಗಳಲ್ಲೇ ಅತ್ಯಂತ ಮಹತ್ವದ್ದಾಗಿದೆ. ನಮ್ಮ ದೇಶದಲ್ಲಿ ಅಂತಹದ್ದೊಂದು ಶಾಸನ ಇದೆ ಎಂಬುದು ಪ್ರತಿ ಭಾರತೀಯನಿಗೂ ಹೆಮ್ಮೆ ತರುವ ವಿಷಯ.

ಇದು ಲಕ್ಷಾಂತರ ಭಾರತೀಯರ ಹಕ್ಕುಗಳನ್ನು ಖಾತರಿಪಡಿಸುವುದರ ಜೊತೆಗೆ, ಅವರು ಸಾಮಾಜಿಕ ಮತ್ತು ಆರ್ಥಿಕ ಏಣಿ ಹತ್ತಲು ನೆರವಾಗುವ ಸಾಧನ ಸಹ ಆಗಿದೆ. ಹೀಗಾಗಿ ಅದನ್ನು ಸರ್ವರಿಗೂ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಒದಗಿಸುವ ದೃಷ್ಟಿಕೋನದಿಂದಲೇ ನಾವು ನೋಡಬೇಕಾಗುತ್ತದೆ.

ಈ ಎಲ್ಲ ಮಾತುಗಳೂ ನಗರ ಪ್ರದೇಶಕ್ಕೆ ಹೆಚ್ಚು ಅನ್ವಯ ಆಗುತ್ತವಾದರೂ ಗ್ರಾಮೀಣ ಬಡವರ ದೃಷ್ಟಿಯಿಂದ ನೋಡಿದಾಗ ಬೇರೆಯದೇ ಗೋಚರಿಸುತ್ತದೆ. ಹಳ್ಳಿಗಾಡಿನಲ್ಲಿ ಹೆಚ್ಚಾಗಿ ಸರ್ಕಾರಿ ಶಾಲೆಗಳೇ ಇರುತ್ತವೆ ಮತ್ತು ಅಲ್ಲಿನ ಶೇ 94ರಷ್ಟು ಮಕ್ಕಳು ಈ ಶಾಲೆಗಳಿಗೇ ಹೋಗುತ್ತಾರೆ.

ಹೀಗಾಗಿ, 3.5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದ ಕುಟುಂಬಗಳನ್ನು `ಬಡವರು' ಎಂದು ಪರಿಗಣಿಸುವ ಕರ್ನಾಟಕದ ಇಂದಿನ ಸಂದರ್ಭದಲ್ಲಿ, ಆರ್‌ಟಿಇ ಜಾರಿಯು ನಿಜವಾದ ಬಡವರ ಮೇಲೆ ಮಹತ್ತರವಾದ ಪರಿಣಾಮವನ್ನೇನೂ ಬೀರದು.

ಗ್ರಾಮೀಣ ಪ್ರದೇಶದ ಬಹುತೇಕ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಫಲಾನುಭವಿಗಳು `ಆದಾಯ ಪ್ರಮಾಣಪತ್ರ' ದೊರಕಿಸಿಕೊಳ್ಳಲು ಸಫಲರಾಗುವ ಶ್ರೀಮಂತರು ಮತ್ತು ನಿಗದಿತ 3.5 ಲಕ್ಷ ರೂಪಾಯಿಗಿಂತ ಕಡಿಮೆ ಸಂಬಳ ಪಡೆಯುವ ಸರ್ಕಾರಿ ನೌಕರರ ಮಕ್ಕಳೇ ಆಗಿರುತ್ತಾರೆ.

ಹಾಗಿದ್ದರೆ ಇದಕ್ಕೆಲ್ಲ ಪರಿಹಾರ ಏನು? ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾದ ಸಮುದಾಯಗಳಿಗೆ ಗ್ರಾಮೀಣ ಖಾಸಗಿ ಶಾಲೆಗಳಲ್ಲಿ ಸೀಟುಗಳನ್ನು ಮೀಸಲಿಡಲು ಸಾಧ್ಯವಾದರೆ, ಅಂತಹ ಮೀಸಲಾತಿಗೆ ಸರ್ಕಾರಿ ನೌಕರರ ಮಕ್ಕಳನ್ನು ಅನರ್ಹಗೊಳಿಸಿದರೆ ಮತ್ತು ವಾಸ್ತವದ ನೆಲೆಯಲ್ಲಿ ಬಡತನ ನಿಗದಿಗೆ ಉತ್ತಮ ಮಾನದಂಡಗಳನ್ನು ಅಳವಡಿಸಿಕೊಳ್ಳುವಂತಾದರೆ ಇದು ಸಾಧ್ಯವಾಗುತ್ತದೆ. ಜೊತೆಗೆ ಇತರ ಪ್ರಮುಖ ಪರಿಹಾರಗಳ ಬಗ್ಗೆಯೂ ನಾವು ಯೋಚಿಸಬೇಕಾಗುತ್ತದೆ.

ತನ್ನ ನಾಗರಿಕರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದ ಸಂವಿಧಾನಾತ್ಮಕ ಬದ್ಧತೆ ಸರ್ಕಾರಕ್ಕೆ ಇರುತ್ತದೆ. ಅದು ಈ ಜವಾಬ್ದಾರಿಯಿಂದ ನುಣುಚಿಕೊಂಡು ಅದನ್ನು ಅನುಕೂಲಕರ ರೀತಿಯಲ್ಲಿ ಖಾಸಗಿ ವಲಯದ ಹೆಗಲಿಗೆ ವರ್ಗಾಯಿಸಲು ಸಾಧ್ಯವಿಲ್ಲ. ಸರ್ಕಾರಕ್ಕೆ `ಫಲಶ್ರುತಿ' ಮುಖ್ಯವಾದರೆ, ಖಾಸಗಿ ವಲಯ `ಲಾಭ' ಗಳಿಕೆಯ ಗುರಿಯನ್ನು ಹೊಂದಿರುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ.

ಹೀಗಾಗಿ ತಾನು ನಡೆಸುವ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯದಿಂದ ಸರ್ಕಾರ ಹಿಂದೆ ಸರಿಯಲಾಗದು. ಉತ್ತಮ ಶಿಕ್ಷಕರನ್ನು ನೇಮಿಸುವ, ಅವರಿಗೆ ಒಳ್ಳೆಯ ತರಬೇತಿ ನೀಡುವ, ಗ್ರಾಮೀಣ ಶಾಲೆಗಳಲ್ಲಿ ಬೋಧಿಸುವ ರೀತಿಯಲ್ಲಿ ಅವರನ್ನು ತಯಾರು ಮಾಡುವ ಕಾರ್ಯವನ್ನು ಅದು ಮಾಡಬೇಕಾಗುತ್ತದೆ.

ಜೊತೆಗೆ ಶೈಕ್ಷಣಿಕ ಗುಣಮಟ್ಟದ ಖಾತರಿಗೆ, ಆಯಾಯ ಶಾಲೆಯ ಆಡಳಿತಗಾರರು ಸೇರಿದಂತೆ ಇಡೀ ವ್ಯವಸ್ಥೆಯನ್ನು ಹೊಣೆ ಮಾಡಬೇಕಾಗುತ್ತದೆ. ಈ ಕಾರ್ಯದಲ್ಲಿ ಸ್ಥಳೀಯ ಸಮುದಾಯಗಳು ಮತ್ತು ನಾಗರಿಕ ಸಂಘಟನೆಗಳನ್ನು ಒಳಗೊಳ್ಳಬೇಕಾಗುತ್ತದೆ.

ಆಗ ಆರ್‌ಟಿಇ ಅಂತಹ ಕಾಯ್ದೆಗಳು ಕೇವಲ ಶಿಕ್ಷಣ ನೀಡುವುದಷ್ಟೇ ಅಲ್ಲ, ಬಡತನ ಹಾಗೂ ಅಸಮಾನತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲೂ ದೇಶಕ್ಕೆ ನೆರವಾಗಬಲ್ಲವು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT