ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‍ಎಸ್‍ಎಸ್‌ ಹಿಡಿತ ಬಿಡಿಸಿಕೊಳ್ಳದ ಮೋದಿ ಸರ್ಕಾರ

Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ

ವೈಯಕ್ತಿಕ ಹಕ್ಕುಗಳು, ಸಾಂಸ್ಥಿಕ ಋಜುತ್ವ ವಿಚಾರದಲ್ಲಿ ಹಿಂದಿನ ಸರ್ಕಾರಗಳಿಗಿಂತ ಕಳಪೆ

**
‘ಮೋದಿ ಸರ್ಕಾರ’  ಅಧಿಕಾರಕ್ಕೆ ಬಂದು ಈ ವಾರಕ್ಕೆ ಎರಡೂವರೆ ವರ್ಷ ಪೂರ್ಣವಾಗುತ್ತದೆ. ಮರು ಆಯ್ಕೆ ಬಯಸಿ ಜನರ ಮುಂದೆ ಹೋಗಲು ಈ ಸರ್ಕಾರಕ್ಕೆ ಇನ್ನು ಎರಡೂವರೆ ವರ್ಷಗಳ ಅವಧಿ ಇದೆ. ನಾನು ಈ ಅಂಕಣ ಬರೆಯುವ ಹೊತ್ತಿಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು, ಮುಖ್ಯವಾಗಿ ₹500 ಮತ್ತು ₹1,000 ಮುಖ ಬೆಲೆಯ ನೋಟುಗಳ ರದ್ದತಿ ಮಾಧ್ಯಮದಲ್ಲಿ ಮುಖ್ಯ ಸುದ್ದಿಯಾಗಿದೆ. ಆದರೆ ನೋಟು ರದ್ದತಿಯ ಬಗ್ಗೆ ಈಗ ಯಾವುದೇ ತೀರ್ಪು ನೀಡುವುದು ಆತುರದ ನಿರ್ಧಾರವಾಗುತ್ತದೆ. ಮೋದಿ ನೇತೃತ್ವದ ಸರ್ಕಾರದ ಇನ್ನೊಂದು ಮುಖ್ಯ ಆರ್ಥಿಕ ಉಪಕ್ರಮವಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯ ಬಗ್ಗೆಯೂ ಇದನ್ನೇ ಹೇಳಬಹುದು. ಇವುಗಳ ಸಕಾರಾತ್ಮಕ ಮತ್ತು ನಕಾರಾತ್ಮಕವಾಗಿರುವ ಪೂರ್ಣ ಪರಿಣಾಮ ಬಹಿರಂಗವಾಗಲು ದಶಕಗಳಲ್ಲದಿದ್ದರೂ ಕೆಲವು ವರ್ಷಗಳಂತೂ ಬೇಕು.
 
ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಇತರ ಕ್ಷೇತ್ರಗಳ ಸಾಧನೆಯ ಮೌಲ್ಯಮಾಪನಕ್ಕೆ ಯಾರೂ ಹಿಂಜರಿಕೆ ತೋರಬೇಕಾದ ಅಗತ್ಯ ಇಲ್ಲ. ಉದಾಹರಣೆಗೆ, ಸಂಸ್ಕೃತಿ ಮತ್ತು ಶಿಕ್ಷಣದ ವಿಷಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಅದರ ಕಾರ್ಯಸೂಚಿಗಳಿಂದ ಮೋದಿ ನೇತೃತ್ವದ ಸರ್ಕಾರ ಬಿಡಿಸಿಕೊಳ್ಳುತ್ತದೆ ಎಂದು ಭಾವಿಸಿದವರ ಯೋಚನೆ ತಪ್ಪಾಗಿದೆ. ಈ ಸರ್ಕಾರ ಮತ್ತು ಅದರ ನೀತಿಗಳ ಮೇಲೆ ಆರ್‍ಎಸ್‍ಎಸ್‌ನ  ಪ್ರಭಾವ ವ್ಯಾಪಕವಾಗಿದೆ. ಜನಾಂಗೀಯವಾದ ಮತ್ತು ಪುರಾತನ ಕಾಲದ ದೃಷ್ಟಿಕೋನವನ್ನು ಆರ್‍ಎಸ್‍ಎಸ್ ಹೊಂದಿದೆ. ಹಾಗಾಗಿ ಆಂತರಿಕ ವೈವಿಧ್ಯವೇ ತನ್ನ ಭವಿಷ್ಯಕ್ಕೆ ನಿರ್ಣಾಯಕವಾಗಿರುವ ದೇಶವೊಂದಕ್ಕೆ ಇದು ಒಳ್ಳೆಯದಲ್ಲ.
 
ವಾಸ್ತವದಲ್ಲಿ, ‘ಸಂಘ ಪರಿವಾರ’ ಎಂದು ಕರೆಸಿಕೊಳ್ಳುವ ಚೌಕಟ್ಟಿನೊಳಗಿನ ಇತರ ಸಂಘಟನೆಗಳೂ ತಮ್ಮ ಪ್ರಭಾವವನ್ನು ಗಣನೀಯವಾಗಿ ಏರಿಸಿಕೊಂಡಿವೆ. ಮೋದಿ ಅಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಎರಡು ರಾಜ್ಯಗಳಾದ ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ‘ಗೋರಕ್ಷಕ’ರ ಚಟುವಟಿಕೆಗಳ ಹಿಂದೆ ವಿಶ್ವ ಹಿಂದೂ ಪರಿಷತ್‌ನ ಕೈ ಇರುವುದು ಸ್ಪಷ್ಟ (ಎರಡೂ ರಾಜ್ಯಗಳು ಇಂತಹ ಚಟುವಟಿಕೆ ನಡೆಸುವುದನ್ನು ಅನುಮೋದಿಸಿವೆ ಮಾತ್ರವಲ್ಲ, ಈ ಉದ್ದೇಶಕ್ಕಾಗಿ ‘ಗುರುತಿನ ಚೀಟಿ’ಗಳನ್ನೂ ನೀಡಿವೆ). ಭಾರತದ ಎರಡು ಅತ್ಯುತ್ತಮ ವಿಶ್ವವಿದ್ಯಾಲಯಗಳಾದ ಹೈದರಾಬಾದ್ ಮತ್ತು ಜವಾಹರಲಾಲ್ ನೆಹರೂ ವಿ.ವಿ.ಗಳನ್ನು ಸಂಘರ್ಷ ವಲಯವಾಗಿಸುವುದರ ಹಿಂದೆ ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ವಿಷಪೂರಿತ ರಾಜಕಾರಣ ಇದೆ.
 
ನರೇಂದ್ರ ಮೋದಿ ಅವರು ತಮ್ಮ ಜನಾಂಗೀಯವಾದಿ ಭೂತಕಾಲದಿಂದ ಬಿಡಿಸಿಕೊಂಡು ವಿಕಾಸ ಪುರುಷನಾಗಿ ಪರಿವರ್ತನೆ ಹೊಂದಿದ್ದಾರೆ ಎಂಬ ಕಾರಣಕ್ಕೆ 2014ರಲ್ಲಿ ಅನೇಕರು ಅವರಿಗೆ ಮತ ನೀಡಿದ್ದಾರೆ. ಗುಜರಾತಿನಲ್ಲಿ  ಆರ್‍ಎಸ್‍ಎಸ್ ಮತ್ತು ವಿಶ್ವ ಹಿಂದೂ ಪರಿಷತ್‌ಗಳನ್ನು ಅವರು ಮೂಲೆಗುಂಪು ಮಾಡಿದ್ದರು. ರಾಷ್ಟ್ರೀಯ ರಾಜಕಾರಣಕ್ಕೆ ಬಂದಾಗ ಅವರ ಬಗೆಗೆ ಇದು ಭರವಸೆಯ ಸಂಕೇತವಾಗಿತ್ತು. ಆದರೆ ಅದಕ್ಕೆ ವಿರುದ್ಧವಾದುದೇ ಈಗ ಆಗಿದೆ.
 
ದೀರ್ಘಾವಧಿಯ ವಿಚಾರಗಳ ಬಗ್ಗೆ ಯೋಚಿಸಬಲ್ಲ ಮತ್ತು ಅದೇ ರೀತಿ ಕಾರ್ಯಾಚರಣೆ ನಡೆಸಬಲ್ಲ ಸಿದ್ಧಾಂತಿಗಳನ್ನು ಆರ್‍ಎಸ್‍ಎಸ್ ಹೊಂದಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಎಬಿವಿಪಿಯಲ್ಲಿ ಇರುವವರು ಅಲ್ಪಾವಧಿ ಕಾರ್ಯಾಚರಣೆಯ ಗೂಂಡಾಗಳು ಮತ್ತು ದುರುಳರು. 2014ರ ಮೇ ನಂತರ ಇವರ ಸಾಮೂಹಿಕ ಪ್ರಭಾವ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ದುರದೃಷ್ಟಕಾರಿ ಪರಿಣಾಮ ಆಡಳಿತದ ಗುಣಮಟ್ಟ ಮತ್ತು ಸಾಮಾಜಿಕ ಶಾಂತಿಯ ಮೇಲೆಯೂ ಆಗಿದೆ.
 
ಸಮಾಜದಲ್ಲಿ ಜನಾಂಗೀಯವಾದ ಬೆಳೆಸಲು ಮೋದಿ ನೇತೃತ್ವದ ಸರ್ಕಾರದ ಮೌನ ಸಮ್ಮತಿ ಇದೆ. ಸಾರ್ವಜನಿಕ ಸಂಸ್ಥೆಗಳನ್ನು ರಾಜಕೀಯ ಆಧಿಪತ್ಯದ ಅಡಿಯಲ್ಲಿ ಇರಿಸುವ ವಿಚಾರದಲ್ಲಿ ಹಿಂದಿನ ಯುಪಿಎ ಸರ್ಕಾರಕ್ಕಿಂತ ಈಗಿನ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಇಂದಿರಾ ಗಾಂಧಿ ಅವರಿಂದ ಆರಂಭಿಸಿ ಅಧಿಕಾರದಲ್ಲಿದ್ದ ಎಲ್ಲ ರಾಜಕಾರಣಿಗಳು ಅಧಿಕಾರಶಾಹಿ, ಪೊಲೀಸ್ ಮತ್ತು ಇತರ ನಿಯಂತ್ರಣ ಸಂಸ್ಥೆಗಳನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ಕುಣಿಯುವಂತೆ ಮಾಡಲು ಯತ್ನಿಸಿದ್ದಾರೆ.  ಅದರಲ್ಲಿ ವಿವಿಧ ಪ್ರಮಾಣದ ಯಶಸ್ಸನ್ನೂ ಸಾಧಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರವೂ ಇದಕ್ಕೆ ಹೊರತಲ್ಲ. ಹೆಸರಿಗೆ ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆ. ಆದರೆ ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡುವ ಉಪಕರಣವಾಗಿ ಆಡಳಿತ ಪಕ್ಷ ಬಳಸಿಕೊಂಡ ಕಾರಣಕ್ಕೆ ಸುಪ್ರೀಂ ಕೋರ್ಟ್ ಸಿಬಿಐಯನ್ನು ‘ಪಂಜರದ ಗಿಣಿ’ ಎಂದು ಬಣ್ಣಿಸಿದ್ದು ಬಹಳ ಕಾಲ ನೆನಪಿನಲ್ಲಿ ಇರುತ್ತದೆ.
 
ಈ ವಿಮರ್ಶೆ ಸಮರ್ಪಕವೇ ಆಗಿತ್ತು ಮತ್ತು ಬಿಜೆಪಿ ಅದನ್ನು ತುಂಬು ಹೃದಯದಿಂದ ಸ್ವಾಗತಿಸಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ, ಸಿಬಿಐಯನ್ನು ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಎಂದೂ ಕರೆದಿತ್ತು. ಆದರೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಸಿಬಿಐಯ ಸ್ವಾಯತ್ತೆಯನ್ನು ಮರಳಿ ಸ್ಥಾಪಿಸಲು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಅಷ್ಟೇ ಅಲ್ಲ, ಅದನ್ನು ತನ್ನ ಇಷ್ಟಕ್ಕೆ ತಕ್ಕಂತೆ ಬಾಗಿಸಲು ಬಯಸಿತು. ಬಾಗಲು ಹೇಳಿದಾಗ ತೆವಳಿದ ಸಿಬಿಐ ಬಿಜೆಪಿಯ ಹಿರಿಯ ರಾಜಕಾರಣಿಗಳ ವಿರುದ್ಧದ ಎಲ್ಲ ಗಂಭೀರ ಆರೋಪಗಳನ್ನು ಕೈಬಿಟ್ಟಿತು. ತರುವಾಯ ಬಿಜೆಪಿಯ ರಾಜಕೀಯ ವಿರೋಧಿಗಳ ಮೇಲೆ ನಡೆದ ದಾಳಿಗಳನ್ನು ಗಮನಿಸಿದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈಗ ಅಧಿಕಾರದಲ್ಲಿರುವ ಪಕ್ಷದ ಇಷ್ಟಾನಿಷ್ಟಗಳಿಗೆ ಕುಣಿಯಲು ಸಿಬಿಐ ಕಾತರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
 
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ ಅವರು ಆರ್‍ಎಸ್‍ಎಸ್ ಮತ್ತು ವಿಶ್ವ ಹಿಂದೂ ಪರಿಷತ್ತನ್ನು ದೂರ ಇರಿಸುತ್ತಾರೆ ಎಂದು 2013-14ರಲ್ಲಿ ಅವರ ಭಾಷಣಗಳನ್ನು ಕೇಳಿದವರು ಭಾವಿಸಿದ್ದರು ಅಥವಾ ಅಂತಹ ಆಶಾಭಾವವನ್ನು ಹೊಂದಿದ್ದರು. ಆದರೆ ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತ ಕಾರ್ಯನಿರ್ವಹಣೆಯನ್ನು ದಮನ ಮಾಡುತ್ತಿರುವುದನ್ನು ಗಮನಿಸುವಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೇ ಮೋದಿ ಅವರನ್ನು ಅಧ್ಯಯನ ಮಾಡಿರುವ ಜನರಿಗೆ ಅಚ್ಚರಿಯೇನೂ ಆಗಿಲ್ಲ. ಗುಜರಾತಿನಲ್ಲಿ ಪೊಲೀಸ್ ಮತ್ತು ಆಡಳಿತಶಾಹಿ, ಮುಖ್ಯಮಂತ್ರಿ ಮತ್ತು ಅವರ ಪಕ್ಷದ ಅಡಿಯಾಳಾಗಿದ್ದವು. ಈಗ ಪ್ರಧಾನಿಯಾಗಿರುವ ಮೋದಿ ಅವರು ನ್ಯಾಯಾಂಗದ ಮೇಲೆಯೂ ತಮ್ಮ ನಿಯಂತ್ರಣ ವಿಸ್ತರಿಸಲು ಬಯಸಿದ್ದಾರೆ. ನ್ಯಾಯಮೂರ್ತಿಗಳನ್ನು ನೇಮಿಸುವ ಸುಪ್ರೀಂ ಕೋರ್ಟಿನ ಅಧಿಕಾರವನ್ನು ಕಸಿದುಕೊಂಡು ಅದನ್ನು ಆಡಳಿತ ಪಕ್ಷದ ರಾಜಕಾರಣಿಗಳಿಗೆ ನೀಡುವ ಪ್ರಯತ್ನ ಅದಕ್ಕೆ ಸ್ಪಷ್ಟ ಪುರಾವೆಯಾಗಿದೆ.
 
ಸಾಮಾಜಿಕ ಬಹುತ್ವ ಮತ್ತು ಸಾಂಸ್ಥಿಕ ಸ್ವಾಯತ್ತೆ ನಮ್ಮ ಗಣರಾಜ್ಯದ ಎರಡು ಕೇಂದ್ರ ಸ್ತಂಭಗಳಾಗಿವೆ ಅಥವಾ ಆಗಿದ್ದವು. ಈ ಎರಡನ್ನೂ ಹಿಂದೆ ಮರಳಿ ಮರಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಗಳು ದುರ್ಬಲವಾಗಿಸಿವೆ. ಕಳೆದ ಎರಡೂವರೆ ವರ್ಷದ ಅನುಭವದಲ್ಲಿ ಹೇಳುವುದಾದರೆ ಮೋದಿ ನೇತೃತ್ವದ ಸರ್ಕಾರ ಇವುಗಳನ್ನು ಇನ್ನಷ್ಟು ಕೊರೆದು ಜೀರ್ಣವಾಗಿಸಲು ಮುಂದಾಗಿರುವುದು ಸ್ಪಷ್ಟವಾಗುತ್ತದೆ.
 
ಅದರ ಜತೆಗೆ, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ರಾಜಕೀಯ ವಾತಾವರಣ ಕರಾಳವಾಗುವುದರೊಂದಿಗೆ ಕುರೂಪಗೊಂಡಿದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಕ್ರಮಗಳು ಸ್ವಜನಪಕ್ಷಪಾತದಿಂದ ಕೂಡಿವೆ ಎಂಬ ಆರೋಪಗಳು ಬಹಳ ಸಾಮಾನ್ಯವಾಗಿದ್ದವು. ಆಪ್ತರನ್ನು ಸಂಪ್ರೀತಗೊಳಿಸುವುದಕ್ಕಾಗಿ ಆಗಿನ ಸರ್ಕಾರ ಇಂತಹ ಕ್ರಮಗಳಿಗೆ ಮುಂದಾಗಿತ್ತು. ಅದು ಕೆಟ್ಟ ನಿಲುವೇ ಆಗಿತ್ತು. ಆದರೆ ಈಗ ದ್ವೇಷ- ಟೀಕಾಕಾರರನ್ನು ದಮನ ಮಾಡುವ ಆಕಾಂಕ್ಷೆ ಸ್ವಜನಪಕ್ಷಪಾತದ ಸ್ಥಾನದಲ್ಲಿ ಆಡಳಿತ ತತ್ವವಾಗಿ ಕೂತಿದೆ.
 
‘ಎನ್‌ಡಿಟಿವಿ ಇಂಡಿಯಾ’ದ ಪ್ರಸಾರವನ್ನು ತಡೆಯುವ ಸರ್ಕಾರದ ಪ್ರಯತ್ನಕ್ಕೆ ಟೀಕೆ ವ್ಯಕ್ತವಾಗಿದೆ. ಸಾಕ್ಷಿಗಳ ಹೇಳಿಕೆಗಳನ್ನು ಮಾರ್ಪಡಿಸಿ ದೇಶದ ಅತ್ಯುತ್ತಮ ವಿದ್ವಾಂಸರ ಮೇಲೆ ಕೊಲೆ ಆರೋಪ ಹೊರಿಸುವ ಛತ್ತೀಸಗಡ ಸರ್ಕಾರದ ಕ್ರಮ ಇನ್ನೂ ಕೆಟ್ಟದ್ದಾಗಿದೆ.  ಟೆಲಿಗ್ರಾಫ್ ಪತ್ರಿಕೆಯ ಸಂಪಾದಕೀಯ ಈ ಕ್ರಮವನ್ನು ಹೀಗೆ ಬಣ್ಣಿಸಿದೆ: ‘ಅತ್ಯಂತ ವಿಷಮಯ ಹಗೆತನ ಲೇಪಿತವಾದ ಕೃತ್ಯ’. ವಿದ್ವಾಂಸರ ವಿರುದ್ಧ ‘ಯಾವುದೇ ಆಧಾರವಿಲ್ಲದ ಆರೋಪಗಳು ಈಗಿನ ಸರ್ಕಾರ ಮತ್ತು ಅದರ ಜತೆಗೆ ಇರುವ ಜನರು ಹೊಂದಿರುವ ಅಸಹಿಷ್ಣುತೆಯ ಆಳವನ್ನು ತೋರಿಸುತ್ತದೆ’ ಎಂದು ಟೆಲಿಗ್ರಾಫ್ ಹೇಳಿದೆ.
 
ಪತ್ರಕರ್ತರು, ವಿದ್ವಾಂಸರು ಮತ್ತು ಸ್ವತಂತ್ರ  ಚಿಂತನೆಯ ಜನರನ್ನು ರಮಣ್ ಸಿಂಗ್ ನೇತೃತ್ವದ ಛತ್ತೀಸಗಡದ ಬಿಜೆಪಿ ಸರ್ಕಾರ ನಡೆಸಿಕೊಳ್ಳುತ್ತಿರುವುದನ್ನು ನೋಡಿದರೆ ಅಲ್ಲಿ ಪೊಲೀಸ್ ರಾಜ್ಯ ಅಸ್ತಿತ್ವದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ರಾಜ್ಯಗಳ ಕಾನೂನುಬಾಹಿರ ಕೃತ್ಯಗಳನ್ನು ಪ್ರಶ್ನಿಸಲಾಗದಷ್ಟು ಪುಕ್ಕಲು ಆಗಿತ್ತು. ಆದರೆ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ಟೀಕಾಕಾರರಿಗೆ ಕಿರುಕುಳ ನೀಡಲು ಛತ್ತೀಸಗಡ ಸರ್ಕಾರಕ್ಕೆ ಪರವಾನಗಿ ನೀಡಿಬಿಟ್ಟಿದೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ‘ಗೋರಕ್ಷಕರು’ ಜನರ ಮೇಲೆ ಹಲ್ಲೆ ನಡೆಸಲು ಕಾರಣ ಆ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದೇ ಆಗಿದೆ.
 
ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದು ಒಳ್ಳೆಯದು ಎಂದು ಪ್ರಧಾನಿಯಾದ ನಂತರ  ಮೋದಿ ಅವರು ವಾದಿಸುತ್ತಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ವಾದವನ್ನು ಅವರು ಮುಂದಿಟ್ಟಿದ್ದರು. ಪಂಜಾಬ್ ಮತ್ತು ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿಯೂ ಇದೇ ವಾದವನ್ನು ಅವರು ಪುನರಾವರ್ತಿಸುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಆರ್ಥಿಕವಾಗಿ ಪ್ರಯೋಜನವಾಗುತ್ತದೆ ಎಂಬುದು ಅವರ ವಾದವಾಗಿದೆ. ಆದರೆ, ಕೋಮು ಸಾಮರಸ್ಯ ಮತ್ತು ನಾಗರಿಕ ಸ್ವಾತಂತ್ರ್ಯದ ವಿಚಾರಕ್ಕೆ ಬಂದರೆ ಇದು ವ್ಯತಿರಿಕ್ತವಾಗುತ್ತದೆ.  
 
2002ರಷ್ಟು ಹಿಂದಕ್ಕೆ ಹೋದರೆ, ಆಗ ಗುಜರಾತಿನಲ್ಲಿ ನಡೆದ ಕೋಮು ಗಲಭೆಗಳ ಕರಿಚುಕ್ಕೆಯನ್ನು ಮರೆಮಾಚಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಪ್ರಯತ್ನಿಸಿತು. ಗುಜರಾತಿನಲ್ಲಿಯೂ ಆಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈಗ, ಛತ್ತೀಸಗಡ, ಹರಿಯಾಣ ಮತ್ತು ಮಹಾರಾಷ್ಟ್ರಗಳಂತಹ ರಾಜ್ಯಗಳಲ್ಲಿ ಪತ್ರಕರ್ತರು, ವಿದ್ವಾಂಸರು ಮತ್ತು ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವುದನ್ನು ಪ್ರೋತ್ಸಾಹಿಸಲಾಗುತ್ತಿದೆ; ಕೇಂದ್ರದಲ್ಲಿರುವ ತಮ್ಮ ಪಕ್ಷದ ಮುಖಂಡರು ‘ರಕ್ಷಣೆ’ ನೀಡುತ್ತಾರೆ ಎಂಬ ಭಾವನೆ ಮುಖ್ಯಮಂತ್ರಿಗಳು ಮತ್ತು ಸಚಿವರಲ್ಲಿ ಇರುವುದೇ ಈ ರೀತಿಯಲ್ಲಿ ಅವರು ಪ್ರೋತ್ಸಾಹ ನೀಡುವುದಕ್ಕೆ ಕಾರಣ.
 
ದ್ವೇಷ ರಾಜಕಾರಣ, ಸರ್ಕಾರದಿಂದ ಬೆದರಿಕೆ ಮತ್ತು ಕಿರುಕುಳ ತಂತ್ರದ ಬಳಕೆಗಳೆಲ್ಲವೂ ‘ಗುಜರಾತ್ ಮಾದರಿ’ಯಲ್ಲಿ ಹಾಸುಹೊಕ್ಕಾಗಿರುವ ಅಂಶಗಳು.  ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಈ ಮಾದರಿಯ ವ್ಯಾಪ್ತಿ ರಾಷ್ಟ್ರ ಮಟ್ಟಕ್ಕೇರಿದ್ದು, ಸಾಮಾಜಿಕ ಜೀವನ ಮತ್ತು ಸಾರ್ವಜನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
 
ಕಾಂಗ್ರೆಸ್ ಅಧಿಕಾರ ಕಳೆದುಕೊಂಡದ್ದಕ್ಕೆ ನನಗೆ ದುಃಖವೇನೂ ಇಲ್ಲ. ಪ್ರಜಾತಂತ್ರವನ್ನು ಬಲಗೊಳಿಸಲು ಏನೂ ಮಾಡದ ಆ ಪಕ್ಷ ಅದನ್ನು ದುರ್ಬಲಗೊಳಿಸಲು ಸಾಕಷ್ಟನ್ನು ಮಾಡಿದೆ. ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ಕೆಲವು ರಾಜ್ಯ ಸರ್ಕಾರಗಳು (ಉದಾಹರಣೆಗೆ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ) ಕಾಂಗ್ರೆಸ್‌ನ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಸಂಸ್ಕೃತಿಯ ಜತೆಗೆ ಬಿಜೆಪಿಯ ಕಾರ್ಯವಿಧಾನವಾದ ದ್ವೇಷ ಮತ್ತು ಪ್ರತೀಕಾರಗಳೆರಡನ್ನೂ ಮೈಗೂಡಿಸಿಕೊಂಡಿವೆ ಎಂಬುದನ್ನು ಇಲ್ಲಿ ಹೇಳಲೇಬೇಕು.
 
2014ರ ಮೇಯಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಭಾರತದ ಪ್ರಜಾಪ್ರಭುತ್ವದ ಆರೋಗ್ಯ ಉತ್ತಮವಾಗಿಯೇನೂ ಇರಲಿಲ್ಲ.  ಪ್ರಧಾನಿ ಅವರು ಆರ್ಥಿಕ ಕ್ಷೇತ್ರದಲ್ಲಿ ಕೈಗೊಂಡಿರುವ ಕ್ರಮ, ದೇಶದ ಜನರು ಭಾವಿಸಿರುವ ಹಾಗೆ ಸಮೃದ್ಧಿ ಮತ್ತು ಪ್ರಗತಿಯ ಯುಗದತ್ತ ಸಾಗುತ್ತದೆ ಎಂದು ಈಗಲೇ ಹೇಳಲಾಗದು. ಆದರೆ ವೈಯಕ್ತಿಕ ಹಕ್ಕುಗಳು ಮತ್ತು ಸಾಂಸ್ಥಿಕ ಋಜುತ್ವಕ್ಕೆ ಸಂಬಂಧಿಸಿ ಮೋದಿ ನೇತೃತ್ವದ ಸರ್ಕಾರ ಯಾವ ದೃಷ್ಟಿಯಲ್ಲೂ ಹಿಂದಿನ ಸರ್ಕಾರ ಅಥವಾ ಸರ್ಕಾರಗಳಿಗಿಂತ ಉತ್ತಮವಲ್ಲ, ಮಾತ್ರವಲ್ಲ ಕೆಲವು ದೃಷ್ಟಿಯಲ್ಲಿ ಅವುಗಳಿಗಿಂತಲೂ ಕಳಪೆ ಎಂದು ಹೇಳುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT