ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವರನ್ನು ಅಭಿನಂದಿಸುತ್ತಾ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಆ ಆಹ್ವಾನ ಪತ್ರಿಕೆ ನೋಡಿಯೇ ಗಾಬರಿಯಾಯಿತು. ಇಪ್ಪತ್ನಾಲ್ಕು ಪುಟಗಳು. ಅದೂ ಸಣ್ಣ ಅಕ್ಷರಗಳಲ್ಲಿ. ಓದಿ ಅರಗಿಸಿಕೊಳ್ಳಲು ಅರ್ಧಗಂಟೆ ಬೇಕು. ಇಪ್ಪತ್ತೊಂದು ಪೋಷಕರು, ಮುವ್ವತ್ತಾರು ಗೌರವಾಧ್ಯಕ್ಷರು, ಐವತ್ತೇಳು ಉಪಾಧ್ಯಕ್ಷರು, ಐವತ್ತೆಂಟು ಘಟಕಗಳ ಅಧ್ಯಕ್ಷರು, ನಲವತ್ತು ಕಾರ್ಯದರ್ಶಿಗಳು, ನಲವತ್ಮೂರು ಜನ ಕಾರ್ಯಕಾರಿ ಸಮಿತಿ ಸದಸ್ಯರು, ಒಂಬತ್ತು ವೇದಿಕೆಗಳು, ನೂರಾರು ಉಪನ್ಯಾಸ, -ಪ್ರದರ್ಶನಗಳು, ಇಪ್ಪತ್ತೊಂದು ಜನರಿಗೆ ಸನ್ಮಾನ, ಎಪ್ಪತ್ತು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡ ಬೃಹತ್ ಸಮಾವೇಶ. ಪ್ರತಿ ದಿನ ಒಂದು ಲಕ್ಷ ಜನರಿಗೆ ವಸತಿ. ನಾಲ್ಕು ದಿನಗಳ ಕಾಲ ಸಾಹಿತ್ಯ–ಸಂಗೀತ–-ಜನಪದ-– ಕೃಷಿ- –ನಾಟಕ-–ಪುಸ್ತಕ ಮಾರಾಟ... ಹೀಗೆ ಹತ್ತಾರು ಸಡಗರ.

ಮಳೆಯಿಲ್ಲದ ಮಾಗಿಯ ವರ್ಷಾಂತ್ಯದಲ್ಲಿ ಎಂದಿನಂತೆ ಡಾ. ಮೋಹನ್ ಆಳ್ವರ ನುಡಿಸಿರಿ ಪ್ರತ್ಯಕ್ಷವಾಗಿದೆ. ಸಾಹಿತ್ಯದ ನುಡಿಸಿರಿ ಜತೆಗೆ ಸಂಗೀತದ ವಿರಾಸತ್ ಕೂಡಾ ಜೊತೆಯಾಗಿದೆ. ಪ್ರತಿ ವರ್ಷ ದುಪ್ಪಟ್ಟಾಗುತ್ತಿದ್ದುದು ಈ ಸಲ ಹತ್ತುಪಟ್ಟಾಗಿದೆ. ಆಳ್ವರಿಗೆ ಕನ್ನಡವನ್ನು ವಿಶ್ವಕ್ಕೆ ನಂಟುಹಾಕುವ ಉತ್ಸಾಹ. ದೊಡ್ಡದನ್ನು ಮಾಡುವ ಹಂಬಲ. ಇದಕ್ಕೆ ಎಷ್ಟೊಂದು ಪೂರ್ವಸಿದ್ಧತೆ, ಶ್ರಮ, ಹಣ, ಸಂಯೋಜನೆ, ಮಾನವ ಸಂಪನ್ಮೂಲ, ದೂರದೃಷ್ಟಿ, ಸಮಯಪ್ರಜ್ಞೆ, ಶ್ರದ್ಧೆ ಬೇಕು ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ. ಈ ಸಲ ಎಡಪಂಥೀಯರು, ಬಲಪಂಥೀಯರು, ನಡುಪಂಥೀಯರು, ಬಲದಲ್ಲಿದ್ದು ಎಡವನ್ನು ಮೆಚ್ಚುವವರು, ಎಡದಲ್ಲಿದ್ದು ಬಲವನ್ನು ನೆಚ್ಚುವವರು, ಯಾವ ದಿಕ್ಕಿಗೆ ಹೋಗಲಿ ಎಂದು ಗೊಂದಲದ ಕ್ರಾಸ್‌ರೋಡ್‌ನಲ್ಲಿ ನಿಂತ ಕಿರಿಯರು ಎಲ್ಲರೂ ಕಾಣಿಸುತ್ತಿದ್ದಾರೆ.

ಎಲ್ಲರ ಮುಕ್ತ ಚಿಂತನೆಗೆ ತೆರೆದುಕೊಂಡಿರುವುದು ಆರೋಗ್ಯಕರ. ಇಲ್ಲಿರುವ ಕಾರ್ಯಕ್ರಮ ವೈವಿಧ್ಯಗಳನ್ನು ಕಂಡರೆ ನಿಭಾಯಿಸಲು ನಾಲ್ಕು ಜನ ಸಮ್ಮೇಳನಾಧ್ಯಕ್ಷ­ರಾ­ದರೂ ಬೇಕು. ಸದ್ಯ ಎಲ್ಲಕ್ಕೂ ಒಬ್ಬರೇ ಸಮ್ಮೇಳನಾಧ್ಯಕ್ಷರು! ಡಾ. ಬಿ.ಎ. ವಿವೇಕ್ ರೈಗಳು ಸಮರ್ಥರು. ಕೈಯ್ಯಲ್ಲಿ ಆಹ್ವಾನ ಪತ್ರಿಕೆ ಇಟ್ಟುಕೊಂಡು, ವೇಳಾಪಟ್ಟಿ ನೆನಪಿಟ್ಟುಕೊಂಡು ನಾವು ಚಿತ್ರೋತ್ಸವಗಳಲ್ಲಿ ಓಡಾಡುವ ಸನ್ನಿವೇಶ ನೆನಪಾಗುತ್ತಿದೆ. ಏಕಕಾಲಕ್ಕೆ ಸಂಭವಿಸುವ ಹಲವು ಪ್ರಮುಖ ಕಾರ್ಯಕ್ರಮಗಳು.

ಯಾವುದನ್ನು ನೋಡುವುದು? ಯಾವುದನ್ನು ಬಿಡುವುದು? ಡಾ. ಮೋಹನ್ ಆಳ್ವರ ಅಪಾರ ಶ್ರಮವನ್ನು ಅಭಿನಂದಿಸುತ್ತಲೇ ಹುಟ್ಟುತ್ತಿರುವ ಒಂದು ಪ್ರಶ್ನೆ. ಇಷ್ಟೊಂದು ದೊಡ್ಡದು ಬೇಕಾ? ದೊಡ್ಡದಾದಷ್ಟೂ ಸಣ್ಣ ಸೂಕ್ಷ್ಮಗಳು ಕಳೆದುಹೋಗುವುದಿಲ್ಲವಾ? ತುಂಬಾ ಊದಿದರೆ ಬಲೂನು ಒಡೆದುಹೋಗುವುದಿಲ್ಲವಾ?

ನನ್ನ ಹಳ್ಳಿ -ನನ್ನ ಜಗತ್ತು ಎಂಬ ವಿಷಯ­ವನ್ನಿಟ್ಟು­ಕೊಂಡು ಕಳೆದ ಸಲ ನುಡಿಸಿರಿಯಲ್ಲಿ ಮಾತನಾಡಿದ್ದೆ. ಉಪನ್ಯಾಸಗಳಲ್ಲಿ ನಾನು ಮೂಡಿ. ಮೈದುಂಬಿ ಬಂದರೆ ಆಸಕ್ತಿದಾಯಕವಾಗಿರುತ್ತದೆ. ಇಲ್ಲವಾದರೆ ಮಹಾನ್ ನೀರಸ. ಎಂದೋ ಕಂಡ ಮುಖ, ಎಂದೋ ನಕ್ಕ ನಗುವಿನಂತೆ, ಎಂದೋ ಮಾಡಿದ ಉಪನ್ಯಾಸ ಕೂಡಾ ನೆನೆಯಲು ಯೋಗ್ಯ. ಚೆನ್ನಾಗಿ ಭಾಷಣ ಮಾಡುವುದೂ ಅಪಾಯ. ಎಲ್ಲರೂ ಕರೆಯುತ್ತಾರೆ ಎಂದು ಊರೂರು ತಿರುಗುತ್ತ ಭಾಷಣಕೋರರಾಗಿಬಿಡುತ್ತೇವೆ. ಇದಕ್ಕಿಂತ ಸಭಿಕನಾಗುವುದು ಸೌಭಾಗ್ಯ.

ನುಡಿಸಿರಿಯ ಕಳೆದ ವರ್ಷದ ನನ್ನ ಮಾತುಗಳಲ್ಲಿ ಸಾರ್ವಕಾಲಿಕತೆ ಇರಬಹುದೆಂಬ ಆಸೆ ಮತ್ತು ಗುಮಾನಿಯಿಂದ ಅದರ ಸಂಕ್ಷಿಪ್ತರೂಪವನ್ನು ಇಲ್ಲಿರಿಸಿದ್ದೇನೆ :

ನಮ್ಮ ಹಳ್ಳಿ ಬಗ್ಗೆ ಪೂರ್ವಿಕರು ಒಂದೆರಡು ಕಥೆಗಳನ್ನು ಹೇಳುತ್ತಿದ್ದರು. ಏನೆಂದರೆ ನಮ್ಮ ಪೂರ್ವಿಕರೆಲ್ಲಾ ಶ್ರೀಕೃಷ್ಣದೇವರಾಯನ ಆಸ್ಥಾನದಿಂದ ಬಂದವರು. ಇದು ನನಗೆ ಯಾವಾಗಲೂ ತಮಾಷೆಯಾಗಿ ಕಾಣಿಸುತ್ತಿತ್ತು. ಜನರಿಗೆ ಸಾಮಾನ್ಯವಾಗಿ ಒಂದು ಶ್ರೀಮಂತ ಪ್ರಭುತ್ವದ ಜೊತೆಗೆ ಗುರುತಿಸಿಕೊಳ್ಳುವ ಆಸೆ. ನನ್ನ ಪ್ರಶ್ನೆ ಏನೆಂದರೆ, ಶ್ರೀಕೃಷ್ಣದೇವರಾಯನ ಆಸ್ಥಾನದಿಂದ ಬಂದರೆ ಇಷ್ಟೊಂದು ಬಡತನ  ಏಕೆ ಇದೆ? ಎರಡು ಚಿನ್ನದ ನಾಣ್ಯ ತಂದಿದ್ದರೂ ಶ್ರೀಮಂತರಾಗಿರಬಹುದಾಗಿತ್ತಲ್ಲ? ಹಿರಿಯರು ಹೇಳುತ್ತಿದ್ದ ಈ ಕಥೆಗಳಲ್ಲಿ ವಾಸ್ತವಾಂಶ ಎಷ್ಟು ಗೊತ್ತಿಲ್ಲ.

ಯಾಕೆಂದರೆ ಸತ್ಯದ ದಾಖಲೆ ನಮ್ಮಲ್ಲಿರಲಿಲ್ಲ. ಇಲ್ಲಾ ಉತ್ಪ್ರೇಕ್ಷೆಗಳಿರುತ್ತೆ, ಇಲ್ಲಾ ಸುಳ್ಳುಗಳಿರುತ್ತೆ. ನಮ್ಮಲ್ಲಿ ಸರಿಯಾದ ವಸ್ತು ಸಂಗ್ರಹಾಲಯ, ಪುಸ್ತಕ ರೂಪದಲ್ಲಿಯಾಗಲಿ, ವಸ್ತು ರೂಪದಲ್ಲಾಗಲಿ ಬಹಳ ಕಡಿಮೆ. ನಾವು ಜನರ ನಂಬುಗೆ ಮೇಲೆ ಬದುಕನ್ನು ಕಲ್ಪಿಸಿಕೊಳ್ಳುತ್ತಾ ಹೋಗುತ್ತೇವೆ. ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಏನಾಗಿದ್ರು? ಯಾರಾಗಿದ್ರು? ಯಾಕಾಗಿದ್ರು? ಅಲ್ಲಿ ಅಡುಗೆ ಮಾಡುತ್ತಿದ್ರೋ? ಕುದುರೆ ಮೇಯಿಸು­ತ್ತಿದ್ರೋ? ಕತ್ತೆಗಳನ್ನು ಕಾಯುತ್ತಿದ್ರೋ ಗೊತ್ತಿಲ್ಲ.

*

ಆಮೇಲೆ ಇನ್ನೊಂದು ಕಥೆ. ಅವರು ಬೇಟೆಗಾಗಿ ಬಂದ್ರಂತೆ. ನಮ್ಮ ಹಳ್ಳಿ ಇದ್ದ ಜಾಗದಲ್ಲಿ ಕಾಡು ಇತ್ತಂತೆ! ಎಲ್ಲಾ ಹಳ್ಳಿಗಳು ಇದ್ದ ಜಾಗದಲ್ಲಿ ಒಂದು ಕಾಡು ಇರುತ್ತೆ. ಅಲ್ಲಿದ್ದ ಮೊಲಗಳ ಮೇಲೆ ತಾವು ತಂದಿದ್ದ ನಾಯಿಗಳನ್ನು ಬೇಟೆಗೆ ಛೂ ಬಿಟ್ಟರಂತೆ. ಆಗ ಆ ಮೊಲಗಳೇ ಹಿಂತಿರುಗಿ ಪ್ರತಿಭಟಿಸಿ ನಾಯಿಗಳನ್ನು ಕೊಂದು ಹಾಕಿಬಿಟ್ಟವಂತೆ. ಇದು ಇನ್ನೊಂದು ರಂಜಿತವಾದ ಉತ್ಪ್ರೇಕ್ಷೆಯ ಕಥೆ.  ನಾಯಿಗಳು ಸತ್ತು ಹೋದದ್ದರಿಂದ ನಾಯಿಗತಿ ಹಳ್ಳಿ ಆಯಿತು.

ಕ್ರಮೇಣ ಯಿ ಅಕ್ಷರ ಲುಪ್ತವಾಗಿ ನಾಗತಿಹಳ್ಳಿ ಆಯಿತು ಅನ್ನುವಂಥ ಒಂದು ಜಾಣ ಕಥೆಯನ್ನು ಒಬ್ಬ ಜಾಣ ಮನುಷ್ಯ ನಿರೂಪಿಸಿಬಿಟ್ಟಿದ್ದಾನೆ. ಹೀಗಾಗಿ ನಮ್ಮೂರಲ್ಲಿ ಗಂಡಸರು ಸ್ವಲ್ಪ ವೀಕು. ಹೆಂಗಸರು ಸ್ವಲ್ಪ ಸ್ಟ್ರಾಂಗು. ಮೊಲಗಳು ಹೆಂಗಸರ ಸಂಕೇತಗಳಾಗಿ ಇರಬಹುದು. ಈ ನಾಯಿಗಳು ಗಂಡಸರ ಸಂಕೇತವಾಗಿ ಇದ್ದಿರಬಹುದು ಅಂತ ಅಂದುಕೊಂಡಿದ್ದೇನೆ. ಹೆಂಗಸರು ಸ್ಟ್ರಾಂಗ್ ಅನ್ನೋದಕ್ಕೆ ನಾನು ಯಾವಾಗಲೂ ಉದಾಹರಣೆ ಕೊಡುವುದು ನನ್ನ ತಾಯಿಯನ್ನೇ. ನಮ್ಮ ತಾಯಿಯ ಆರ್ಭಟಕ್ಕೆ ನಮ್ಮ ತಂದೆ ಮಾತು ಕಳಕೊಂಡಿದ್ದರು ಅಂತ ನನ್ನ ಕಣ್ಣಾರೆ ನೋಡಿದ್ದೇನೆ. ಬಹುಶಃ ಪಾರ್ವತಮ್ಮ ಅನ್ನೋ ಹೆಸರಿನವರೆಲ್ಲಾ ಹಾಗೆ ಇರ್ತಾರೇನೋ.

ಇತ್ತೀಚಿಗೆ ನಮ್ಮ ಹಳ್ಳಿಯಲ್ಲಿ ಇದ್ದಕ್ಕಿದ್ದ ಹಾಗೆ ಹೊರಗಿನ ನಾಯಿಗಳ ಪ್ರವಾಹ ಶುರುವಾಯಿತು. ಒಂದಕ್ಕೊಂದು ಕಚ್ಚಿ ಯುದ್ಧ ನಡೆಯೋಕೆ ಶುರು ಆಯ್ತು. ನಮ್ಮ ಗೆಳೆಯನನ್ನು ಕೇಳಿದೆ. ಏನಾಯ್ತು  ಅಂತ. ಅವನು ಹೇಳಿದ : ಬೆಂಗಳೂರು ಕಾರ್ಪೊರೇಷನ್‌­­ನವರು ಕಸ ಮತ್ತು ನಾಯಿಗಳನ್ನು ತುಂಬಿಕೊಂಡು ಬಂದು ಹತ್ತಿರದ ಹಳ್ಳಿಯಲ್ಲಿ ಸುರೀತಾ ಇದ್ದಾರೆ. ಈಗ ಬೆಂಗಳೂರಿನ ಮನುಷ್ಯರನ್ನ ತಿನ್ನೋ ನಾಯಿಗಳು ಸುತ್ತಲ ಹಳ್ಳಿಗಳಿಗೆ ಬಂದು ದಾಳಿ ಮಾಡಿ, ಜನರನ್ನೂ ಕಚ್ಚಿ ತಮ್ಮ ಸರೀಕ ನಾಯಿಗಳನ್ನೂ ಕಚ್ಚಿ ಗಲಾಟೆ ಮಾಡ್ತಾ ಇರೋದನ್ನು ನೋಡ್ತಿದ್ದೇವೆ. ಇದನ್ನು ರಾಜಕೀಯ ಪ್ರತೀಕವಾಗಿ ನಾನು ಹೇಳ್ತಾ ಇಲ್ಲ. ನಿಜವಾದ ನಾಯಿಗಳೇ! ಅದನ್ನ ಸಂಕೇತ, ಮೆಟಾಫರ್ ಅಂತ ಎಲ್ಲ ದಯವಿಟ್ಟು ತೊಗೋ­ಬೇಡಿ. ಯಾಕೆಂದರೆ, ನಗರದಲ್ಲಿನ ಗಲೀಜುಗಳು, ಕ್ರೌರ್ಯಗಳು ಹಳ್ಳಿಯನ್ನು ಆವರಿಸುತ್ತಾ ಇರೋದನ್ನು ನಾವು ಗಮನಿಸುತ್ತಾ ಇದ್ದೀವಿ.
*

ಜಾತಿ ಪ್ರಜ್ಞೆ ಕೂಡ ಹಳ್ಳಿಗಳಿಂದ ಬರುತ್ತದೆ. ನಮ್ಮದು ಸಣ್ಣ ಜಮೀನ್ದಾರರ ಕುಟುಂಬ. ನಮ್ಮ ತೋಟಕ್ಕೆ ಒಬ್ಬ ದಲಿತರ ಹುಡುಗ ಕೆಲಸಕ್ಕೆ ಬರುತ್ತಿದ್ದ. ಅವನಿಗೆ ಅಮ್ಮ ಹೊಟ್ಟೆ ತುಂಬ ರೊಟ್ಟಿ, ಹಿಟ್ಟು ಎಲ್ಲಾ ಕೊಟ್ಟು ಕೂಲಿ ಎಲ್ಲಾ ಕೊಡುತ್ತಿದ್ದರು. ತೋಟದಲ್ಲಿ ಕೆಲಸಕ್ಕೆ ಹೋಗಿದ್ದಾಗ ನನ್ನ ಹತ್ತಿರ ಊಟ ಕಳುಹಿಸುತ್ತಿದ್ದರು. ಆದರೆ ಒಂದು ಎಚ್ಚರಿಕೆ ಕೊಡುತ್ತಿದ್ದರು, ಊಟ ಕೊಡು ತಂಬಿಗೆ ಮುಟ್ಟಿಸಬೇಡ ಎಂದು. ನನಗೆ ಎಷ್ಟು ಕೋಪ ಬರುತ್ತಿತ್ತು ಅಂದರೆ ಮನುಷ್ಯರು ಮನುಷ್ಯರನ್ನು ಮುಟ್ಟಿಸಿಕೊಳ್ಳಬಾರದ್ದು ಎಂತಹ ದರಿದ್ರ ಸ್ಥಿತಿ ಅಂತ ಹೇಳಿ ರೆಬೆಲ್ ಆದೆ. ನಾನು ಹೋಗಿ ಅವನ ಕೈಗೆ ಪಾತ್ರೆ ಕೊಟ್ಟು ಇದನ್ನು ತೆಗೆದುಕೊಂಡು ಹೋಗಿ ನಮ್ಮ ಅಮ್ಮನಿಗೆ ತಲುಪಿಸು ಅಂತ ಹೇಳಿದೆ. ಮನೆಯಲ್ಲಿ ಒಂದು ದೊಡ್ಡ ಕೋಲಾಹಲ ಆಗಿತ್ತು. ಇಂತಹ ಕ್ರೌರ್ಯ ಇನ್ನೊಂದು ಮನಸ್ಸಿನ ಮೇಲೆ ಆಗುವಂಥ ಹಿಂಸೆ ಎಷ್ಟು ಭಯಾನಕ ಎನ್ನುವುದನ್ನು ನಾನು ಕೊಟ್ರೇಶಿ ಕನಸು ಚಿತ್ರ ಮಾಡುವಾಗ ಒಂದು ದೃಶ್ಯದಲ್ಲಿ ಪ್ರತಿಬಿಂಬಿಸಿದ್ದೇನೆ.

ಅನಂತರ ಬೆಳ್ಳೂರಿಗೆ ಬಿಎಂಶ್ರೀ ಸ್ಮಾರಕ ಚರ್ಚಾಸ್ಪರ್ಧೆಗೆ ಹೋದಾಗ ಮೇಲು ಜಾತಿ ಹುಡುಗ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ನನಗೆ ಬಾಳೆ ಎಲೆ ಹಾಕಿ ಹೊರಗೆ ಊಟ ಹಾಕಿದ. ಆಗ ಗೊತ್ತಾಯಿತು, ನನ್ನನ್ನು ಮುಟ್ಟಿಸಿಕೊಳ್ಳದವರೂ ಇದ್ದಾರೆ ಅಂತ! ಅಂದ್ರೆ  ಒಂದು ಕಡೆಗೆ ಒದೆಯುವ ಕಾಲುಗಳನ್ನು, ಇನ್ನೊಂದು ಕಡೆಗೆ ಮುಗಿಯುವ ಕೈಗಳನ್ನು, ಇಟ್ಟುಕೊಂಡು ನಾವು ಹೇಗೆ ಬದುಕು­ತ್ತೀವಿ! ನನಗೆ ಮೊಟ್ಟ ಮೊದಲು ಜಾತ್ಯತೀತ ಅನುಭವ­­­ಗಳನ್ನು ಜಾತ್ಯತೀತ ಮನಸ್ಸುಗಳನ್ನು ರೂಪಿಸಿ­ಕೊಳ್ಳುವುದಕ್ಕೆ- ನನ್ನ ಬರವಣಿಗೆಯಲ್ಲಿ, ಸಿನಿಮಾ­­ದಲ್ಲಿ, ಬದುಕಿನಲ್ಲಿ- ಸಾಧ್ಯವಾಗಿದ್ದು ಈ ಜಾತಿ ಪ್ರಜ್ಞೆಯ ಅನುಭವಗಳಿಂದ. ಮನುಷ್ಯ ಇದನ್ನು ಮೀರಬೇಕು ಅಂತ ಹಳ್ಳಿಯ ಪರಿಸರವೇ ಕಲಿಸಿದ್ದು.
*

ಹಳ್ಳಿಗಳನ್ನು ಒಂದು ಕಲ್ಚರಲ್ ಸೆಂಟರ್ ಅನ್ನುವ  ಕಾನ್‌ಸೆಪ್ಟ್ ಇಟ್ಟುಕೊಳ್ಳದೆ ಹೋದರೆ ನಾವು ಹಳ್ಳಿಗಳನ್ನು ಸ್ಮಶಾನ ಮಾಡಿಕೊಳ್ಳುತ್ತೇವೆ. ಕನ್ನಡ ಶಾಲೆಯನ್ನು ಉಳಿಸಿಕೊಳ್ಳಬೇಕೆಂದರೆ ವಿದ್ಯಾವಂತರು ಹಳ್ಳಿಗಳಿಗೆ ಹೋಗಿ ಚಮತ್ಕಾರವನ್ನು, ಚಿಕ್ಕ ಪುಟ್ಟ ಚೋದ್ಯಗಳನ್ನು ಮಾಡಬೇಕು. ಅವರಿಗೆ ಇಂಗ್ಲಿಷ್ ಬೇಕಾದರೆ ಕಲಿಸಿ, ಕಂಪ್ಯೂಟರ್ ಕಲಿಸಿ, ಏನನ್ನು ಬೇಕಾದರೆ ಕಲಿಸಿ. ಮೋಹನ್ ಆಳ್ವರವರ ಹಿಂದೆ ಸಾವಿರಾರು ಯುವಸೈನಿಕ ಪಡೆ ಇದ್ದರೆ, ನಮ್ಮ ಹಳ್ಳಿಗಳಲ್ಲಿ ಬೆರಳೆಣಿಕೆಯ ಜನರು ಸಿಕ್ಕಾರು.

ನಾವು ಸದಾ ಮೂಡಬಿದಿರೆಯ ಬಗ್ಗೆ ಬೆರಗುಪಡುತ್ತಾ ಕೂತರೆ ಸಾಲದು. ಸಣ್ಣ ಪ್ರಮಾಣದಲ್ಲಿಯಾದರೂ ನಮ್ಮ ನಮ್ಮ ಗ್ರಾಮಗಳಲ್ಲಿ ಕಾಯಕಲ್ಪ ಮಾಡಬೇಕು. ಮತ್ತು ಇದು ಪಕ್ಷರಾಜಕಾರಣದಿಂದ ಹೊರತಾಗಿರಬೇಕು. ಕೆಟ್ಟು ಹೋಗಿದೆ ಸಾರ್ ಹಳ್ಳಿಗಳು, ರಾಜಕೀಯ ಬಂದಿದೆ ಸಾರ್, ಪಕ್ಷಗಳ ಒಳಜಗಳ ಸಾರ್, ಎಂದು ಗೊಣಗುವುದು ಸುಲಭ. ಇದು ಎಲ್ಲ ಹಳ್ಳಿಯಲ್ಲಿರುವ ಚಿತ್ರ. ಆದರೆ ನಮ್ಮ ಸಮಾಜದಲ್ಲಿ ಇನ್ನೂ ಒಳ್ಳೆಯವರು ಇದ್ದಾರೆ, ಒಳ್ಳೆಯದು ಇದೆ ಅನ್ನುವಂಥ ಒಂದು ಭ್ರಮೆಯನ್ನಾದರೂ ಇಟ್ಟುಕೊಳ್ಳಬೇಕು.

ನಿಮಗೆ ಕಟ್ಟುವ ಕೆಲಸದಲ್ಲಿ ನಂಬಿಕೆ ಇದ್ರೆ ಕೆಸರಲ್ಲಿ ಹೂತ ಕಲ್ಲಿನ ಈ ದೊಡ್ಡ ರಥದ ಚಕ್ರವನ್ನು ಒಂದು ಇಂಚು ಮುಂದೆ ತಳ್ಳುವಂಥ ಕೆಲಸ ಮಾಡಲಿಕ್ಕೆ ಸಾಧ್ಯ. ಹಳ್ಳಿಗಳು ಅಂದರೆ ಈ ಚಕ್ರಗಳು.  ಮೂಡುಬಿದಿರೆಯೂ ಒಂದು ಹಳ್ಳಿ, ಮೂಡುಬಿದಿರೆ ಅಂದರೆ ನಾಗತಿಹಳ್ಳಿ. ನಾಗತಿಹಳ್ಳಿ ಅಂದರೆ ಮೂಡುಬಿದಿರೆ. ಇಂತಹ ಅನೇಕ ಹಳ್ಳಿಗಳಿಂದ ಬಂದಿರುವ ನನ್ನ ಎಲ್ಲಾ ಗೆಳೆಯರಿಗೆ ಹಳ್ಳಿಗಳನ್ನು ಸಾಂಸ್ಕೃತಿಕ ಕೇಂದ್ರ ಮಾಡೋಣ ಮತ್ತು ಅವುಗಳ ಮೂಲಕ ಜಾತ್ಯತೀತತೆಯನ್ನು, ಸಮಾನತೆಯನ್ನು ಎತ್ತಿ ಹಿಡಿಯೋಣ, ಭಾರತದ ಭವಿಷ್ಯ ಹಸಿರಾಗೋ ಹಾಗೆ ಮಾಡೋಣ; ಆ ಬಗ್ಗೆ ಕಾರ್ಯೋನ್ಮುಖ­ರಾಗೋದು ಮಾತನಾಡೋದಕ್ಕಿಂತ ಹೆಚ್ಚು ಅಗತ್ಯ ಎಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ. ಎಲ್ಲರಿಗೂ ನಮಸ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT