ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆ ಚಿಗುರಿಸಿದ ಕರ್ತವ್ಯಗಳ ವ್ಯಾಖ್ಯಾನ

Last Updated 25 ಜನವರಿ 2017, 10:06 IST
ಅಕ್ಷರ ಗಾತ್ರ

ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆ ಬಂದಾಗ ದೇಶಭಕ್ತಿ ಉದ್ದೀಪನಗೊಳ್ಳುವುದನ್ನು ಕಾಣುತ್ತೇವೆ. ರಾಜಧಾನಿ ನವದೆಹಲಿಯ ರಾಜಪಥದಲ್ಲಿ ನಡೆಯುವ ಪಥಸಂಚಲನವನ್ನು ಅಥವಾ ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಲಕ್ಷಾಂತರ ಜನ ಕಣ್ತುಂಬಿಸಿಕೊಳ್ಳುತ್ತಾರೆ.

ಆದರೆ, ವರ್ಷದ ಇನ್ನುಳಿದ ದಿನಗಳಲ್ಲಿ ವಾದಪ್ರಿಯ ಭಾರತೀಯ ವಾದ–ಪ್ರತಿವಾದದ ಕೆಲಸವನ್ನು ಚೆನ್ನಾಗಿಯೇ ಮಾಡುತ್ತಿರುತ್ತಾನೆ. ಪ್ರತಿ ವಿಚಾರದ ಬಗ್ಗೆಯೂ ತೀವ್ರ ರಾಜಕೀಯ ಚರ್ಚೆ ನಡೆದಿರುತ್ತದೆ. ತ್ರಿವರ್ಣ ಧ್ವಜದಂತಹ ರಾಷ್ಟ್ರ ಲಾಂಛನ ಮತ್ತು ರಾಷ್ಟ್ರಗೀತೆ ಕೂಡ ಈ ಚರ್ಚೆಗಳ ವ್ಯಾಪ್ತಿಯಿಂದ ಹೊರತಾಗಿರುವುದಿಲ್ಲ.

ವಿಶ್ವದ ಅತಿದೊಡ್ಡ ಜಾತ್ಯತೀತ, ಪ್ರಜಾತಂತ್ರ ರಾಷ್ಟ್ರವು ಒಪ್ಪಿಕೊಂಡಿರುವ ರಾಷ್ಟ್ರಾಭಿಮಾನದ ದ್ಯೋತಕಗಳು ತೀವ್ರ ಸ್ವರೂಪದ ವಿವಾದಗಳ ಕೇಂದ್ರ ಬಿಂದು ಆಗುವುದು, ದೇಶವನ್ನು ಒಗ್ಗೂಡಿಸುವ ಶಕ್ತಿಗಳನ್ನು ಆ ಮೂಲಕ ದುರ್ಬಲಗೊಳಿಸುವುದು  ನಿಜಕ್ಕೂ ವಿಷಾದದ ವಿಚಾರ. ಆದರೆ ಈ ಬಾರಿಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಒಂದು ಸಮಾಧಾನದ ಸಂಗತಿ ಇದೆ. ರಾಷ್ಟ್ರಗೀತೆಗೆ ಸುಪ್ರೀಂ ಕೋರ್ಟ್‌ ಉನ್ನತ ಸ್ಥಾನವೊಂದನ್ನು ನೀಡಿದೆ. ಅಂಥದ್ದೊಂದು ಸ್ಥಾನಕ್ಕೆ ರಾಷ್ಟ್ರಗೀತೆ ಅರ್ಹವಾಗಿತ್ತು.

ಸಿನಿಮಾ ಮಂದಿರಗಳಲ್ಲಿ ಚಲನಚಿತ್ರ  ಪ್ರದರ್ಶನಕ್ಕೂ ಮೊದಲು ರಾಷ್ಟ್ರಗೀತೆ ನುಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ಆದೇಶವು ನ್ಯಾಯಶಾಸ್ತ್ರ ಪರಿಣತರು ಮತ್ತು ರಾಜಕೀಯ ವಿಶ್ಲೇಷಕರ ವಲಯದಲ್ಲಿ ವಿಸ್ತೃತ ಚರ್ಚೆಗೆ ಕಾರಣವಾಯಿತು. ನ್ಯಾಯಾಲಯ ತನ್ನ ವ್ಯಾಪ್ತಿಯನ್ನು ಮೀರಿ ಈ ಆದೇಶ ನೀಡಿದೆ ಎಂದು ಇವರಲ್ಲಿ ಕೆಲವರು ವಾದಿಸಿದರು.

ನ್ಯಾಯಾಲಯ ಇಷ್ಟೊಂದು ಮುಂದೆ ಹೋಗಬೇಕಾದ ಅಗತ್ಯ ಇರಲಿಲ್ಲ ಎಂದು ಕೆಲವರು ಹೇಳಿರುವುದರಲ್ಲಿ ಅರ್ಥವಿರಬಹುದು. ಆದರೆ, ಭಾರತವನ್ನು ‘ತಾಯ್ನಾಡು’ ಎಂದು ಒಪ್ಪಿಕೊಳ್ಳಲು ಹಾಗೂ ರಾಷ್ಟ್ರಗೀತೆ ಹಾಡಲು ತಮ್ಮ ಧಾರ್ಮಿಕ ನಂಬಿಕೆಗಳು ತಡೆಯುತ್ತವೆ ಎಂದು ದೇಶದ ಕೆಲವು ವರ್ಗಗಳು ಹೇಳಿದ್ದನ್ನು ಆಧರಿಸಿ ನಡೆದ ತೀವ್ರ ರಾಜಕೀಯ ವಾಗ್ವಾದಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ನೋಡಬೇಕು.

‘ರಾಷ್ಟ್ರದ ಅಸ್ಮಿತೆ, ರಾಷ್ಟ್ರೀಯ ಭಾವೈಕ್ಯ ಮತ್ತು ಸಂವಿಧಾನ ಹೇಳಿದ ದೇಶಪ್ರೇಮ’ವನ್ನು ಮೂಲಸೆಲೆಯನ್ನಾಗಿಸಿಕೊಂಡು, ರಾಷ್ಟ್ರಗೀತೆ ಹಾಡಬೇಕು ಎಂಬ ಶಿಷ್ಟಾಚಾರ ರೂಪಿಸಲಾಗಿದೆ ಎಂದು ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ. ರಾಷ್ಟ್ರಗೀತೆ ಮತ್ತು ತ್ರಿವರ್ಣ ಧ್ವಜಕ್ಕೆ ಗೌರವ ಸೂಚಿಸುವುದು ‘ತಾಯ್ನಾಡನ್ನು ಪ್ರೀತಿಸುವುದು ಹಾಗೂ ತಾಯ್ನಾಡಿಗೆ ಗೌರವ ಸೂಚಿಸುವುದನ್ನು’  ತೋರಿಸುತ್ತದೆ ಮತ್ತು ಇದು ‘ದೇಶಭಕ್ತಿ ಹಾಗೂ ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸುತ್ತದೆ’.

ಈ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಹೇಳಿರುವ ಕೆಲವು ಅಂಶಗಳು, ರಾಷ್ಟ್ರಗೀತೆಗೆ ಗೌರವ ತೋರಿಸುವ ವಿಚಾರದಲ್ಲಿ ಮೊದಲು ನೀಡಿದ್ದ ಒಂದು ಆದೇಶದಲ್ಲಿ ಹೇಳಿರುವುದಕ್ಕಿಂತ ಭಿನ್ನವಾಗಿವೆ. ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದಕ್ಕೆ  ‘ಯಹೋವನ ಸಾಕ್ಷಿಗಳು’ ಪಂಥಕ್ಕೆ ಸೇರಿದ ಮೂವರು ವಿದ್ಯಾರ್ಥಿಗಳನ್ನು ಕೇರಳದ ಶಾಲೆಯೊಂದರಿಂದ 1985ರಲ್ಲಿ ಹೊರಹಾಕಲಾಗಿತ್ತು.

ಈ ಮೂವರು ವಿದ್ಯಾರ್ಥಿಗಳು, ಇತರರು ರಾಷ್ಟ್ರಗೀತೆ ಹಾಡುತ್ತಿದ್ದಾಗ ಗೌರವದಿಂದ ಮೌನವಾಗಿ ನಿಂತಿದ್ದರು. ಆದರೆ, ‘ಧಾರ್ಮಿಕ ನಂಬಿಕೆ, ತತ್ವಗಳಿಗೆ ವಿರುದ್ಧ’ ಎಂಬ ಕಾರಣಕ್ಕೆ ರಾಷ್ಟ್ರಗೀತೆಯನ್ನು ಹಾಡಿರಲಿಲ್ಲ.

ಈ ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ಫಲ ನೀಡದಿದ್ದಾಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು. ‘ಶುದ್ಧ ಅಂತಃಕರಣದಿಂದ ನಂಬಿಕೊಂಡು ಬಂದಿರುವ ಧಾರ್ಮಿಕ ನಂಬಿಕೆಗಳ ಕಾರಣ ಈ ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಹಾಡಲು ಸಾಧ್ಯವಾಗಲಿಲ್ಲ. ಇವರನ್ನು ಶಾಲೆಯಿಂದ ಹೊರಹಾಕಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ’ ಎಂದು ಈ ಪ್ರಕರಣದಲ್ಲಿ (ಬಿಜು ಇಮ್ಯಾನ್ಯುಯೆಲ್ ಮತ್ತು ಇತರರು ಹಾಗೂ ಕೇರಳ ಸರ್ಕಾರ ನಡುವಣ ಪ್ರಕರಣ) ಸುಪ್ರೀಂ ಕೋರ್ಟ್‌ ಹೇಳಿತು.

ಯಹೋವನ ಸಾಕ್ಷಿಗಳು ಪಂಥವು ಇಂಥದ್ದೊಂದು ನಿಲುವು ತಾಳಿರುವುದು ಭಾರತಕ್ಕೆ ಮಾತ್ರ ಸೀಮಿತವಾಗಿದ್ದಲ್ಲ. ಈ ಪಂಥಕ್ಕೆ ಸೇರಿದವರು ಬೇರೆ ದೇಶಗಳಲ್ಲಿ ಮತ ಚಲಾಯಿಸಲು, ಸಾರ್ವಜನಿಕ ಸೇವೆಯಲ್ಲಿರಲು ಹಾಗೂ ಸಶಸ್ತ್ರ ಪಡೆ ಸೇರಲು ನಿರಾಕರಿಸುತ್ತಾರೆ. ಬೇರೆ ದೇಶಗಳಲ್ಲಿ ಇವರು ರಾಷ್ಟ್ರಧ್ವಜಕ್ಕೆ ನಮಿಸುವುದಿಲ್ಲ,  ರಾಷ್ಟ್ರಗೀತೆ ಹಾಡುವಾಗ ಎದ್ದುನಿಲ್ಲುವುದಿಲ್ಲ, ದೇಶಕ್ಕೆ ತಮ್ಮ ನಿಷ್ಠೆ ಎಂದು ಪ್ರಮಾಣ ಮಾಡುವುದಿಲ್ಲ.

ಏಕೆಂದರೆ ಹಾಗೆ ಮಾಡಲು ಅವರ ಧಾರ್ಮಿಕ ನಂಬಿಕೆಗಳು ಅವಕಾಶ ನೀಡುವುದಿಲ್ಲ. ನಗಣ್ಯ ಎನ್ನುವಷ್ಟಿರುವ ಅಲ್ಪಸಂಖ್ಯಾತರೂ ದೇಶದ ಸಂವಿಧಾನದ ವ್ಯಾಪ್ತಿಯಡಿ ತಮ್ಮದಾದ ಅಸ್ಮಿತೆಯೊಂದನ್ನು ಕಂಡುಕೊಳ್ಳುವಂತೆ ಮಾಡುವುದೇ ಪ್ರಜಾತಂತ್ರ ವ್ಯವಸ್ಥೆಯೊಂದು ಎದುರಿಸಬೇಕಾದ ನೈಜ ಪರೀಕ್ಷೆ ಎಂದು ಈ ಪ್ರಕರಣದಲ್ಲಿ ಕೋರ್ಟ್‌ ಹೇಳಿತು.

ಆದರೆ, ಮೂಲಭೂತ ಕರ್ತವ್ಯಗಳ ಬಗ್ಗೆ ಈಚೆಗೆ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಸಂವಿಧಾನದ 51(ಎ) ವಿಧಿಯನ್ನು ಉಲ್ಲೇಖಿಸಿದೆ. ಆ ವಿಧಿಯಲ್ಲಿ ಹೀಗೆ ಹೇಳಲಾಗಿದೆ: ‘ಸಂವಿಧಾನವನ್ನು, ಅದು ಪ್ರತಿಪಾದಿಸುವ ಆದರ್ಶಗಳನ್ನು, ಸಾಂವಿಧಾನಿಕ ಸಂಸ್ಥೆಗಳನ್ನು, ರಾಷ್ಟ್ರಧ್ವಜವನ್ನು ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿ ಭಾರತೀಯನ ಕರ್ತವ್ಯ’ ಎನ್ನುತ್ತದೆ ಈ ವಿಧಿ.

ಹಾಗಾಗಿ, ಸಂವಿಧಾನದಲ್ಲಿ ಅಂತರ್ಗತವಾಗಿರುವ ಮೌಲ್ಯಗಳಿಗೆ ಬದ್ಧತೆ ತೋರುವುದು ಪ್ರತಿ ಪ್ರಜೆಯ ಪವಿತ್ರ ಕರ್ತವ್ಯ ಎಂಬುದು ಇದರಿಂದ ಸುಸ್ಪಷ್ಟವಾಗುತ್ತದೆ – ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ಸೂಚಿಸುವುದು ಅಂತಹ ಮೌಲ್ಯಗಳಲ್ಲೊಂದು ಎಂದು ಕೋರ್ಟ್‌ ಹೇಳಿದೆ. ‘ಇದರಲ್ಲಿ ಬೇರೆ ಅಭಿಪ್ರಾಯಕ್ಕೆ ಅಥವಾ ವ್ಯಕ್ತಿಯ ಹಕ್ಕುಗಳಿಗೆ ಜಾಗವಿಲ್ಲ. ಅಂಥದ್ದೊಂದು ವಿಚಾರಕ್ಕೆ ಸಾಂವಿಧಾನಿಕವಾಗಿ ಅವಕಾಶ ಇಲ್ಲ’ ಎಂದೂ ಅದು ಹೇಳಿತು.

ಭಾರತವು ವಿಶ್ವದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರ ಮಾತ್ರವೇ ಅಲ್ಲ. ಜಗತ್ತಿನಲ್ಲೇ ಅತ್ಯಂತ ವೈವಿಧ್ಯಮಯ ಸಮುದಾಯಗಳನ್ನೂ ಹೊಂದಿದೆ ಈ ದೇಶ. ದೇಶದ ಅಷ್ಟೂ ಪ್ರಜೆಗಳನ್ನು ಒಂದೆಡೆ ಸೇರಿಸಬಹುದಾದ ಜಾತ್ಯತೀತ ಬಿಂದುಗಳೆಂದರೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನ. ಇವು ಮೂರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಧ್ವಜ, ಗೀತೆ ಮತ್ತು ಗ್ರಂಥಗಳು ನಿರ್ದಿಷ್ಟ ಗುಂಪುಗಳು, ಸಮುದಾಯಗಳಿಗೆ ಸೀಮಿತ.

ಅಲ್ಲದೆ, ಈ ಧ್ವಜ, ಗೀತೆ, ಗ್ರಂಥಗಳು ವಿಭಜನಕಾರಿಯೂ ಆಗಬಲ್ಲವು. ಹಾಗಾಗಿ, ಧಾರ್ಮಿಕ ಅಥವಾ ಇನ್ಯಾವುದೇ ಕಾರಣ ಮುಂದೊಡ್ಡಿ ರಾಷ್ಟ್ರದ ಲಾಂಛನಗಳಿಗೆ ಅಗೌರವ ತೋರಿಸುವ, ಕಡಿಮೆ ಗೌರವ ತೋರಿಸುವ ವ್ಯಕ್ತಿ ಅಥವಾ ಗುಂಪು ದೇಶದ ಏಕತೆಯ ಬೇರುಗಳ ಮೇಲೇ ಆಘಾತ ನಡೆಸುತ್ತಿದ್ದಾನೆ/ ನಡೆಸುತ್ತಿದೆ ಎಂದರ್ಥ. ಇಂಥ ಪ್ರವೃತ್ತಿಗೆ ಉತ್ತೇಜನ ನೀಡಬಾರದು.

ವ್ಯಕ್ತಿಗತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳು ಜಾತ್ಯತೀತ ಕೇಂದ್ರಬಿಂದುಗಳ ಕಡೆ ಸಾಗಬೇಕಾದ ಕರ್ತವ್ಯ ನಿಭಾಯಿಸದಂತೆ ತಡೆಯುತ್ತವೆ ಎಂದಾದರೆ, ಅವು ವೈವಿಧ್ಯಮಯ ನಾಡನ್ನು ಒಗ್ಗೂಡಿಸುವ ಪ್ರಕ್ರಿಯೆಗೆ ಧಕ್ಕೆ ತರುತ್ತವೆ ಎಂದು ಅರ್ಥಮಾಡಿಕೊಳ್ಳಬೇಕು.

ಮೂಲಭೂತ ಕರ್ತವ್ಯಗಳನ್ನು ಒತ್ತಾಯದಿಂದ ಹೇರುವಂತಿಲ್ಲ, ಹಾಗಾಗಿ ಅವುಗಳಿಗೆ ಅಷ್ಟೇನೂ ಮೌಲ್ಯ ಇಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ, ದೇಶದ ವೈವಿಧ್ಯ ಹಾಗೂ ನಮ್ಮನ್ನು ಒಂದಾಗಿ ಇಟ್ಟಿರುವ ಸಂಸ್ಥೆಗಳು ಮತ್ತು ಚಿಂತನೆಗಳಿಂದ ವಿಮುಖವಾಗುವಂತೆ ಮಾಡುವ ಶಕ್ತಿಗಳನ್ನು ಪರಿಗಣನೆಯಲ್ಲಿ ಇಟ್ಟುಕೊಂಡು ಇಂಥ ವಾದಗಳನ್ನು ಪ್ರಶ್ನಿಸಬೇಕಾಗುತ್ತದೆ.

ಸಾಂವಿಧಾನಿಕ ಮೌಲ್ಯಗಳು ನಮ್ಮನ್ನೆಲ್ಲ ಒಟ್ಟಾಗಿ ಇಟ್ಟಿವೆ. ಇಂಥ ಮೌಲ್ಯಗಳ ಮೇಲೆ ಹಲವು ಧಾರ್ಮಿಕ ಮತ್ತು ಸಾಮಾಜಿಕ ಗುಂಪುಗಳು ದಾಳಿ ನಡೆಸುತ್ತಿವೆ. ಹಾಗಾಗಿ, ನಮ್ಮ ರಾಷ್ಟ್ರೀಯ ಏಕತೆ ಅಪಾಯದಲ್ಲೇ ಇದೆ. ಈ ಕಾರಣಕ್ಕಾಗಿಯೂ ಇಂಥ ವಾದಗಳನ್ನು ಹೊರತಳ್ಳಬೇಕು.

ಈಚೆಗೆ ನೀಡಿದ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಮೂಲಭೂತ ಕರ್ತವ್ಯಗಳ ಬಗ್ಗೆ ಮಾತನಾಡಿರುವುದನ್ನು ನಾವು ಸ್ವಾಗತಿಸಬೇಕು. ಏಕೆಂದರೆ ಮೂಲಭೂತ ಕರ್ತವ್ಯಗಳ ಅಧ್ಯಾಯಕ್ಕೆ ಕೋರ್ಟ್‌ ಜೀವ ನೀಡುತ್ತದೆ ಎಂಬ ಹೊಸ ಭರವಸೆಯೊಂದು ಮೂಡಿದೆ.

ಮೂಲಭೂತ ಕರ್ತವ್ಯಗಳು ರಾಷ್ಟ್ರದ ಗುರಿ ಈಡೇರಿಸಲು ಜನರನ್ನು ಒಗ್ಗೂಡಿಸುತ್ತವೆ. ವಿಶ್ವದ ಅತ್ಯಂತ ವೈವಿಧ್ಯಮಯ ದೇಶವನ್ನು ಒಟ್ಟಾಗಿ ಹಿಡಿದಿಡುವ ಶಕ್ತಿ ನೀಡುತ್ತವೆ. ಇಮ್ಯಾನ್ಯುಯೆಲ್ ಪ್ರಕರಣದಲ್ಲಿ ಕೋರ್ಟ್‌ ಹೇಳಿದ್ದ ಸೂತ್ರಗಳನ್ನು ಪುನರ್‌ ಪರಿಶೀಲನೆಗೆ ಒಳಪಡಿಸಬೇಕಾದ ಸಂದರ್ಭ ಬಂದಿರುವಂತಿದೆ.
ಲೇಖಕ ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT