ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ, ಅಡತ್ತವಾರಿಸ್!

Last Updated 3 ನವೆಂಬರ್ 2012, 19:30 IST
ಅಕ್ಷರ ಗಾತ್ರ

1978ರಲ್ಲಿ ಕನ್ನಡ ಚಲನಚಿತ್ರ ಕಲಾವಿದರ ಸಂಘವನ್ನು ಹುಮ್ಮಸ್ಸಿನಿಂದ ಶುರುಮಾಡಿದೆವು. ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಕಾವೇರಿ ಹೋಟೆಲ್ ಇತ್ತು. ಸಂಘ ಪ್ರಾರಂಭವಾದದ್ದು ಅಲ್ಲೇ. ರಾಜ್‌ಕುಮಾರ್ ಅದರ ಅಧ್ಯಕ್ಷರಾದರು.

ಸರೋಜಾದೇವಿ, ವಿಷ್ಣುವರ್ಧನ್ ಉಪಾಧ್ಯಕ್ಷರಾದರು. ನಾನು, ಶಿವರಾಮಣ್ಣ (ಶರಪಂಜರ ಶಿವರಾಂ) ಕಾರ್ಯದರ್ಶಿಗಳಾದೆವು. ಬಹಳ ಉತ್ಸಾಹದಿಂದ ಹಲವು ಕನಸುಗಳನ್ನು ಹೊತ್ತು ಆ ಸಂಘವನ್ನು ಪ್ರಾರಂಭಿಸಿದ್ದೆವು.
 
ನಮ್ಮದೇ ನಿಯಮಾವಳಿಗಳನ್ನು ಮಾಡಿಕೊಂಡೆವು. ಸ್ವಂತ ಕಟ್ಟಡ ಕಟ್ಟಿಕೊಳ್ಳುವ ಉದ್ದೇಶವೂ ಇತ್ತು. ಕ್ಲಬ್, ಅಸೋಸಿಯೇಷನ್, ಕಲಾವಿದರ ನೆರವಿಗಾಗಿ ಯೋಜನೆಗಳು... ಹೀಗೆ ಹಲವಾರು ಚಿಂತನೆಗಳು ನಮ್ಮ ನಡುವೆ ಸುಳಿದುಹೋದವು.

ತಿಂಗಳಿಗೊಮ್ಮೆ ಸಭೆ ಸೇರಿ ಆಗಬೇಕಾದ ಕೆಲಸಗಳ ಕುರಿತು ಚರ್ಚೆ ನಡೆಸುತ್ತಿದ್ದೆವು. ಅಷ್ಟರಲ್ಲಿ ಗೋಕಾಕ್ ಚಳವಳಿ ಪ್ರಾರಂಭವಾಯಿತು. ಕಲಾವಿದರ ಸಂಘದ ಅನೇಕರು ನಿಯಮಾವಳಿಗಳನ್ನು ಮೀರಿ ತಮ್ಮದೇ ಆದ ದಾರಿಯಲ್ಲಿ ನಡೆದುಹೋದರು. ಸಂಘದಲ್ಲಿ ಒಗ್ಗಟ್ಟು ಮೂಡುವುದು ಸಾಧ್ಯವಾಗಲೇ ಇಲ್ಲ.

ಕಲಾವಿದರು ಮನಸ್ಸು ಮಾಡಿದರೆ ಒಂದು ವ್ಯವಸ್ಥಿತವಾದ ಸಂಘವನ್ನು ಕಟ್ಟಿ, ನಿರ್ವಹಿಸುವುದು ಹೆಚ್ಚು ಕಷ್ಟವೇನೂ ಆಗಲಾರದು. ಯಾಕೆಂದರೆ, ಎಲ್ಲರೂ ಒಪ್ಪಿದಲ್ಲಿ ಅದಕ್ಕೆ ಅಗತ್ಯವಿರುವ ಹಣವನ್ನು ಸರ್ಕಾರದ ನೆರವಿಲ್ಲದೇ ಹೊಂದಿಸುವುದು ಸಾಧ್ಯ. ಆದರೂ ಇದುವರೆಗೆ ಕಲಾವಿದರ ಸಂಘ ನಾವು ಆಗ ಹೊತ್ತ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಹೆಣಗಾಡುತ್ತಲೇ ಇದೆ. ಅದು ಅಸಾಧ್ಯವೇನೋ ಎಂಬಂತಾಗಿದೆ. ಅದಕ್ಕೆ ಕಾರಣಗಳೇನು ಎಂಬುದು ಸ್ಪಷ್ಟವಾಗುತ್ತಿಲ್ಲ.
*
ರಜನೀಕಾಂತ್ ಕಾಲ್‌ಷೀಟ್ ಪಡೆದು ತಮಿಳಿನಲ್ಲಿ ಸಿನಿಮಾ ಮಾಡಿದ ಕನ್ನಡದ ಮೊದಲ ನಿರ್ಮಾಪಕ ಬಹುಶಃ ನಾನೇ. ಆಗ ರಜನೀಕಾಂತ್ ನನಗೆ ತುಂಬಾ ಆಪ್ತಸ್ನೇಹಿತನಾದ.
 
1971ರಲ್ಲಿ ನನ್ನ `ಕುಳ್ಳ ಏಜೆಂಟ್~ ಚಿತ್ರವನ್ನು ಬೆಂಗಳೂರಿನ ಸಂಜಯ್ ಚಿತ್ರಮಂದಿರದಲ್ಲಿ ಮೂರು ಸಲ ನೋಡಿದ್ದನ್ನು ರಜನಿ ನನ್ನ ಹತ್ತಿರ ಹೇಳಿಕೊಂಡಿದ್ದ.
ಕಾಲ್‌ಷೀಟ್ ಕೊಟ್ಟ ದಿನವೇ ರಜನೀಕಾಂತ್ ಚಿತ್ರದ ನಿರ್ದೇಶಕ ಯಾರಾಗಬೇಕು ಎಂದು ಚರ್ಚಿಸಿದ. ಎಸ್.ಪಿ.ಮುತ್ತುರಾಮನ್ ಅಲ್ಲಿ ಶೂಟಿಂಗ್ ನಡೆಯುತ್ತಿದ್ದ ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಅವರನ್ನು ನೋಡ್ದ್ದಿದೇ ನಿರ್ದೇಶನಕ್ಕೆ ಅವರೇ ಸೂಕ್ತ ಎನ್ನಿಸಿತು.

ರಜನಿ ಕೂಡ ನನ್ನ ಆಯ್ಕೆಯನ್ನು ಒಪ್ಪಿ ತಕ್ಷಣವೇ ಅವರನ್ನು ಕರೆದು, ನನ್ನ ಸಿನಿಮಾ ನಿರ್ದೇಶನಕ್ಕೆ ಒಪ್ಪಿಸಿದ. ಅವರು ಯಾವ ಕತೆ ಮಾಡುವುದು ಎಂದು ಕೇಳಿದಾಕ್ಷಣವೇ ನನಗೆ ನೆನಪಾದದ್ದು ಆ ಎಂಟು ವರ್ಷಗಳ ಹಿಂದೆ ನಾನು ನೋಡಿದ್ದ `ರಾಜಾ ಜಾನಿ~ ಹಿಂದಿ ಚಿತ್ರ.
 
ಧರ್ಮೇಂದ್ರ, ಹೇಮಾಮಾಲಿನಿ ಅಭಿನಯಿಸಿದ್ದ ಆ ಚಿತ್ರದ ವಸ್ತುವನ್ನೇ ಇಟ್ಟು ಸಿನಿಮಾ ಮಾಡುವುದು ಎಂದು ನಿರ್ಧರಿಸಿದೆವು. ಸಂಗೀತ ನಿರ್ದೇಶಕರಾಗಿ ಆಗ ಇಳಯರಾಜಾ ಅವರದ್ದು ದೊಡ್ಡ ಹೆಸರು. ಅವರಿಂದಲೇ ಹಾಡುಗಳನ್ನು ಮಾಡಿಸೋಣ ಎಂದಾಗ ರಜನಿ ಇನ್ನೊಂದು ಆಯ್ಕೆಯನ್ನು ಹೇಳಲೇ ಇಲ್ಲ.
 
ನಾನು ಹೇಳಿದ ಎಲ್ಲವನ್ನೂ ಒಪ್ಪಿಕೊಂಡ. ಆ ಕಾಲದಲ್ಲಿ ಒಂದೇ ದಿನ ತೆರೆಕಂಡಿದ್ದ ಕಮಲ ಹಾಸನ್ ಅಭಿನಯದ `ಸಕಲಕಲಾವಲ್ಲಭನ್~ ಹಾಗೂ ರಜನಿ ಅಭಿನಯದ `ಎಂಗೆಯೋ ಕೇಟ್ಟ ಕೊರಳ್~ ಚಿತ್ರಗಳ ರೈಟರ್ ಆಗಿದ್ದವರು ಪಂಜು ಅರುಣಾಚಲಂ.

ಎರಡೂ ಚಿತ್ರಗಳು ಸಿಲ್ವರ್ ಜೂಬಿಲಿ ಆಚರಿಸಿದ್ದವು. ನಾನು ಕೂಡ ಅವರಿಂದಲೇ ಚಿತ್ರಕತೆ ಬರೆಸುವುದು ಎಂದು ತೀರ್ಮಾನಿಸಿದೆ. ಹೆಸರಾಂತ ನಿರ್ಮಾಪಕರೂ ಆಗಿದ್ದ ಪಂಜು ಅರುಣಾಚಲಂ ರಜನಿ ಚಿತ್ರಕ್ಕೆ ಬರೆದುಕೊಡಲು ಇಲ್ಲ ಎಂದಾರೆಯೆ? ಸಿನಿಮಾ ಬರಹಗಾರರಾಗಿ ದೊಡ್ಡ ಹೆಸರು ಮಾಡಿದ್ದ ಕಣ್ಣದಾಸನ್ ಗರಡಿಯಲ್ಲಿ ಪಳಗಿದ್ದವರು ಪಂಜು ಅರುಣಾಚಲಂ.

ಚಿತ್ರಕ್ಕೆ ಶ್ರೀದೇವಿ ನಾಯಕಿಯಾದರೆ ಚೆನ್ನ ಎಂಬುದು ನನ್ನ ಭಾವನೆ. ಅವರ ತಾಯಿ ಹಿಂದೆ ನನ್ನ `ಮಮತೆಯ ಬಂಧನ~ ಚಿತ್ರದಲ್ಲಿ ಅಭಿನಯಿಸಿದ್ದರಂತೆ. ಅವರಿಗೆ ಫೋನ್ ಮಾಡಿ ಕೇಳಿದಾಗ, ಶ್ರೀದೇವಿ ಡೇಟ್ಸ್ ಕೂಡ ಸಿಕ್ಕಿತು. ಚಿತ್ರಕ್ಕೆ `ಅಡತ್ತವಾರಿಸ್~ ಎಂದು ನಾನೇ ಹೆಸರಿಟ್ಟೆ. `ಅಡತ್ತವಾರಿಸ್~ ಅಂದರೆ `ಮುಂದಿನ ರಾಜ~. ತಮಿಳುನಾಡಿನ ಮುಂದಿನ ರಾಜ ರಜನೀಕಾಂತ್ ಎಂದು ನಾನು ಅಂದೇ ಅಂದಾಜುಮಾಡಿ ಆ ಹೆಸರು ಇಟ್ಟಿದ್ದೆ.

ಮದ್ರಾಸ್‌ನ ಎವಿಎಂ ಸ್ಟುಡಿಯೋದಲ್ಲಿ `ಅಡತ್ತವಾರಿಸ್~ ಚಿತ್ರದ ಮುಹೂರ್ತ. 250 ಕಾರುಗಳು ನಿಂತಿದ್ದವಂತೆ. ಅದ್ದೂರಿ ಮುಹೂರ್ತ ಸಮಾರಂಭ ಅದು. `ಶಂಕರ್‌ಗುರು~ ಕತೆಯೇ ಇದ್ದ `ಮಹಾನ್~ ಎಂಬ ಹಿಂದಿ ಚಿತ್ರದ ಚಿತ್ರೀಕರಣ ಅಲ್ಲಿಯೇ ನಡೆಯುತ್ತಿತ್ತು.

ಎಸ್.ರಾಮನಾಥ್ ಅದನ್ನು ನಿರ್ದೇಶಿಸುತ್ತಿದ್ದರು. ಅಮಿತಾಭ್ ಬಚ್ಚನ್ ಆ ಚಿತ್ರದ ನಾಯಕ. ನನ್ನ ಸಿನಿಮಾ ಮುಹೂರ್ತಕ್ಕೆ ಅಮಿತಾಭ್ ಅವರನ್ನು ಕರೆತರಬೇಕು ಎಂದು ರಾಮನಾಥ್ ಅವರನ್ನು ಕೇಳಿಕೊಂಡಿದ್ದೆ. ಅಮಿತಾಭ್ ನಮ್ಮ ಚಿತ್ರದ ಮುಹೂರ್ತಕ್ಕೆ ವಿಶೇಷ ಅತಿಥಿಯಾಗಿ ಬಂದರು. ನನ್ನ ಎತ್ತರ ನೋಡಿ `ಛೋಟಾ ಪ್ರೊಡ್ಯೂಸರ್~ ಎಂದು ಕರೆದರು. ಬಹುಶಃ ಶ್ರೀದೇವಿ ಜೊತೆ ಅಮಿತಾಭ್ ಮೊದಲ ಬಾರಿಗೆ ಹೆಚ್ಚು ಹೊತ್ತು ಮಾತನಾಡಿದ್ದು ಅದೇ ದಿನ.

ರಜನೀಕಾಂತ್ ನಟಿಸಿದ್ದ `ಮೂಂಡ್ರುಮುಗಂ~ ಎಂಬ ಸಿನಿಮಾ ನೋಡಿ, ಅದನ್ನು ಕನ್ನಡದಲ್ಲಿ ಮಾಡುವ ಮನಸ್ಸಾಗಿತ್ತು. ಆ ಚಿತ್ರದ ರೀಮೇಕ್ ಹಕ್ಕುಗಳನ್ನು ನನಗೆ ಕೊಡಿಸಿದ್ದೇ ರಜನೀಕಾಂತ್. `ಅಡತ್ತವಾರಿಸ್~ ಚಿತ್ರದ ಮುಹೂರ್ತಕ್ಕೆ ಮೊದಲೇ ಆ ರೀಮೇಕ್ ಚಿತ್ರ `ಗೆದ್ದಮಗ~ ಹೆಸರಿನಲ್ಲಿ ಮದ್ರಾಸ್‌ನಲ್ಲೇ ಸಿದ್ಧವಾಗುತ್ತಿತ್ತು. ಶಂಕರ್‌ನಾಗ್, ಸುಂದರಕೃಷ್ಣ ಅರಸ್, ಸುಧೀರ್, ಸಿಲ್ಕ್‌ಸ್ಮಿತಾ ಚಿತ್ರೀಕರಣದಲ್ಲಿ ತೊಡಗಿದ್ದರು. ಅವರೂ `ಅಡತ್ತವಾರಿಸ್~ ಮುಹೂರ್ತಕ್ಕೆ ಬಂದರು.

ಅಮಿತಾಭ್, ಶ್ರೀದೇವಿ ಒಂದು ಕಡೆ. ತಮಿಳು ಚಿತ್ರರಂಗದವರು ಇನ್ನೊಂದು ಕಡೆ. ಎಲ್ಲರ ಕೇಂದ್ರಬಿಂದುವಾಗಿ ರಜನೀಕಾಂತ್. ಜೊತೆಗೆ ನಮ್ಮ ಕನ್ನಡದ ನಟ-ನಟಿಯರು. ಎಲ್ಲಾ ಸೇರಿ `ಅಡತ್ತವಾರಿಸ್~ ಚಿತ್ರದ ಮುಹೂರ್ತ ಸಮಾರಂಭ ದೊಡ್ಡ ಹಬ್ಬದಂತೆ ಕಳೆಗಟ್ಟಿತ್ತು.

ಜೈಪುರ, ಉದಯಪುರ ಮೊದಲಾದ ಕಡೆ `ಅಡತ್ತವಾರಿಸ್~ಗೆ ಹೊರಾಂಗಣ ಚಿತ್ರೀಕರಣ ನಡೆಸಿದೆವು. ಸಿನಿಮಾ ಮುಗಿದ ಮೇಲೆ ತಮಿಳುನಾಡಿನಲ್ಲಿ ಗುಲ್ಲೋ ಗುಲ್ಲು; ರಜನೀಕಾಂತ್-ದ್ವಾರಕೀಶ್ ಸೇರಿ ಇನ್ನಷ್ಟು ಚಿತ್ರಗಳನ್ನು ಮಾಡಲಿದ್ದಾರೆ ಎಂದು.

ಅಷ್ಟು ಹೊತ್ತಿಗೆ ವಿಷ್ಣುವರ್ಧನ್ ಕೂಡ ಮದ್ರಾಸ್‌ನಲ್ಲಿ ನೆಲೆಸಿದ. 1982ರಿಂದ ಸುಮಾರು ಎಂಟು ವರ್ಷ ಅವನೂ ಅಲ್ಲಿಯೇ ಇದ್ದ. ನನ್ನ-ಅವನ ನಡುವೆ ಮತ್ತೆ ನಂಟು ಬೆಳೆಯಿತು.

ಅವನು ನನ್ನ ಮೇಲೆಯೋ, ನಾನು ಅವನ ಮೇಲೆಯೋ ಮುನಿಸಿಕೊಂಡ ಮೇಲೆ ಶಂಕರ್‌ನಾಗ್‌ನನ್ನು ನಾಯಕನ ಜಾಗದಲ್ಲಿ ನಿಲ್ಲಿಸಿದ್ದೆ. ಮತ್ತೆ ವಿಷ್ಣು ನನ್ನ ಸ್ನೇಹ ಬಯಸಿ ಬಂದಿದ್ದ. ನಾನು ಕೂಡ ಅವನ ಸ್ನೇಹ ಬಯಸಿ ಹಸ್ತ ಚಾಚಿದ್ದೆ. `ಪ್ರಚಂಡ ಕುಳ್ಳ~ ಚಿತ್ರದಲ್ಲಿ ಒಂದು ಪಾತ್ರ ಮಾಡುವಂತೆ ಕೇಳಿದೆ. `ರಜನೀಕಾಂತ್ ಕೇಳಿದಷ್ಟು ದುಡ್ಡನ್ನು ಸಿಂಗಲ್ ಪೇಮೆಂಟ್‌ನಲ್ಲಿ ಕೊಡ್ತೀಯಾ. ನನಗೂ ಕೊಡು~ ಎಂದು ಕಿಚಾಯಿಸಿದ. ಅವನು ಕೇಳಿದಷ್ಟು ಹಣ ಕೊಟ್ಟು ಆ ಚಿತ್ರಕ್ಕೆ ಒಪ್ಪಿಸಿದೆ. ಆರು ದಿನ ಚಿತ್ರೀಕರಣಕ್ಕೆ ಬಂದು, ಅಭಿನಯಿಸಿ ಹೋದ.

ಇಷ್ಟರ ನಡುವೆ ಜೀವಿ ಹಾಗೂ ಫೈನಾನ್ಶಿಯರ್ ಪ್ರಭುದಾಸ್ ಗುರುಮುಖ್ ಸಿಂಗ್ ಅವರ ನೆರವಿನಿಂದ ಟಿ-ನಗರದಲ್ಲಿ ಒಂದು ಮನೆ ಸಿಕ್ಕಿತು. 160 ಅಡಿ ಅಗಲ, ನೂರು ಅಡಿ ಉದ್ದದ ದೊಡ್ಡ ಬಂಗಲೆ ಅದು. ಆ ಮನೆಯಲ್ಲಿಯೇ ಮಹಡಿ ಮೇಲೆ ಒಂದು ದೊಡ್ಡ ಬಾರ್ ಕಟ್ಟಿಸಿದೆ. ಚಿತ್ರರಂಗದ ಅನೇಕರು ಅಲ್ಲಿ ಒಡನಾಡುತ್ತಿದ್ದರು.

ನಾನು ಪ್ರತಿನಿತ್ಯ ತಾಜ್ ಕೋರಮಂಡಲ್ ಹೆಲ್ತ್ ಕ್ಲಬ್‌ಗೆ ಹೋಗುತ್ತಿದ್ದೆ. ಜಿತೇಂದ್ರ, ಮೋಹನ್‌ಲಾಲ್. ಶರತ್‌ಕುಮಾರ್ ಮೊದಲಾದ ಘಟಾನುಘಟಿ ನಟರು ಅಲ್ಲಿ ಸಿಗುತ್ತಿದ್ದರು. ಒಂದು ಕಡೆ ರಜನಿ, ಇನ್ನೊಂದು ಕಡೆ ವಿಷ್ಣು. ನಾವೂ ದಿಗ್ಗಜ ನಟರ ಮಧ್ಯೆ ನಮ್ಮದೇ ಠೀವಿಯಲ್ಲಿ ಇದ್ದೆವು. 1982ರಿಂದ 87ರವರೆಗೆ ತಮಿಳುನಾಡಿನಲ್ಲಿ ನಾನು `ರಾಜ~ ಎಂಬಂತಿದ್ದೆ.

ಆಮೇಲೆ ಕಾಲ ಬದಲಾಯಿತು. ನಾನು ಅಂದುಕೊಂಡೇ ಇರದಂಥ ತಿರುವುಗಳು ಸಂಭವಿಸಿದವು. ಅಷ್ಟರಲ್ಲಿ ರಜನೀಕಾಂತ್ ಜೊತೆ ಮೂರು ಚಿತ್ರಗಳನ್ನು ಮಾಡಿದ್ದೆ. ಬದುಕು ಊಹಾತೀತ ರೀತಿಯಲ್ಲಿ ಸಾಗುತ್ತಾಹೋಯಿತು.
ಮುಂದಿನ ವಾರ: ಪ್ರಚಂಡ ಕುಳ್ಳನ ಮನ್ವಂತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT