ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ! ಎಂಥಾ ವ್ಯಕ್ತಿ, ಎಂಥಾ ಪ್ರಶಸ್ತಿ

ಅಕ್ಷರ ಗಾತ್ರ

ಶ್ರೀಮಾನ್ ಪೆಕರ ಅವರಿಗೆ ಈ ಬಾರಿಯ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆಯೇ ಅವನ ಅಭಿಮಾನಿ ಬಳಗ ಹುಚ್ಚೆದ್ದು ಕುಣಿಯಿತು. ಮತ್ತೆ ಕೆಲವರು ಸಖೇದಾಶ್ಚರ್ಯಗಳಿಂದ ಮೂರ್ಛೆ ಹೋದರು. ನಟಿ ರಂಜಿತಾ ಸನ್ಯಾಸದೀಕ್ಷೆ ಸ್ವೀಕರಿಸಿದ ಸುದ್ದಿ ಕೇಳಿದಾಗಲೂ ಇಷ್ಟು ಶಾಕ್ ಆಗಿರಲಿಲ್ಲವಂತೆ. ಪೆಕರ ವರ್ಷದವ್ಯಕ್ತಿ ಆಗಲು ಹೇಗೆ ಸಾಧ್ಯ? ಏನೋ ಗೋಲ್‌ಮಾಲ್ ಆಗಿದೆ ಎಂದು ಕೆಲವರು ಸಂಶಯಿಸಿದರು.

‘ಜನಟಿವಿ’ ಕಚೇರಿಯಲ್ಲೂ ಇದೇ ಚರ್ಚೆ. ಮನಮೋ­ಹನಜೀ, ಸೋನಿಯಾಜೀ, ರಾಹುಲ್‌ಜೀ, ಅಯ್ಯಾಜೀ ಅವರು­ಗಳೆಲ್ಲಾ ಇರುವಾಗ ಪೆಕರನನ್ನು ಪ್ರತಿಷ್ಠಿತವೆನ್ನಲಾದ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡ್ತಾರೆ ಅಂದ್ರೆ ಏಕೋ ನಂಬಕ್ಕೇ ಆಗ್ತಿಲ್ಲ. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ, ಒಂದು ಬ್ರೇಕಿಂಗ್ ನ್ಯೂಸ್ ದಬಾಯಿಸಿ ಬಿಡೋಣ ಎಂದು ವರದಿಗಾರನನ್ನು ಫೀಲ್ಡ್‌ಗೆ ಅಟ್ಟಿದರು.

ವರದಿಗಾರ ಕ್ಯಾಮರಾಮನ್ ಸಮೇತ ಜನಜಂಗುಳಿ ಇರುವ ಸರ್ಕಲ್‌ನಲ್ಲಿ ನಿಂತು ಜನಾಭಿಪ್ರಾಯ ಸಂಗ್ರಹಿಸಲಾರಂಭಿಸಿದ. ಮಧ್ಯವಯಸ್ಸು ದಾಟುತ್ತಿರುವ, ನಡುಬಾಗಿದ ಮಧ್ಯಮ­ವರ್ಗದ ವ್ಯಕ್ತಿಯೊಬ್ಬರನ್ನೇ ಮೊದಲು ಸಂದರ್ಶನಕ್ಕೆಂದು ಹಿಡಿದಿಟ್ಟುಕೊಳ್ಳಲಾಯಿತು.

‘ನಮಸ್ಕಾರ ಸಾರ್, ನಾವು ಜನಟೀವಿಯವರು, ಸ್ವಲ್ಪ ಮಾತನಾಡೋಣ್ವ?’
‘ಯಾಕೆ? ಬಕರಾ ಮಾಡೋಕಾ?’
‘ಖಂಡಿತಾ ಇಲ್ಲಾ ಸಾರ್, ನಮ್ಮದು ಬಕರಾ ವಿಷಯ ಅಲ್ಲ. ಪೆಕರಾ ವಿಷಯ?’
‘ಏನು ಬೇಗ ಹೇಳಿ’
‘ಈ ವರ್ಷ ಪೆಕರ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಬಂದಿದೆ. ನಿಮ್ಮ ಅಭಿಪ್ರಾಯ ಏನು?’
‘ಅದೂ.......’
‘ನೋಡಿ, ಒಮಾಮಾ ಇದ್ದಾರೆ, ನಮ್ಮ ನಿತ್ಯಾನಂದಾಜೀ ಇದ್ರು, ಶಾರುಖ್‌ಜೀ ಇದ್ರು, ಅವರನ್ನೆಲ್ಲಾ ಬಿಟ್ಟು ಪೆಕರಾ ಅವರಿಗೆ ಈ ಪ್ರಶಸ್ತಿ ಎಷ್ಟು ಸರಿ ಅಂತಾ...?’
‘ನೋಡಿ ಸ್ವಾಮಿ, ನನಗೆ ಪ್ರಶ್ನೆ ಕೇಳಿ, ನೀವೇ ಮಾತನಾಡ್ತಾ ಇದ್ರೆ ಹೇಗೆ?’
‘ಆಯ್ತು ಹೇಳಿ ಸಾರ್, ನೀವೇ ಮಾತನಾಡಿ’

‘ಪೆಕರ ಅವರಿಗೆ ಪ್ರಶಸ್ತಿ ಕೊಟ್ರೆ ನಿಮ್ಗೇನು.. ? ಅವನು ಈ ಶತಮಾನದ ಶ್ರೀ ಸಾಮಾನ್ಯನ ಪ್ರತೀಕ. ಇಡೀ ಜಗತ್ತಿನಲ್ಲಿ ಇದುವರೆಗೆ ಇದ್ದಲ್ಲೇ ಇರುವವನು ಅಂದರೆ ಪೆಕರ ಮಾತ್ರ, ಎಲ್ಲರೂ ಅವನ ತಲೇಮೇಲೆ ಕೈಯಿಟ್ಟು ಅವನ ಮೇಲೆ ಸವಾರಿ ಮಾಡ್ತಾ ಇದ್ದಾರೆ. ರಾಯರಿಗೆ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲವಂತೆ. ನಮ್ಮಂಥ ಮಧ್ಯಮವರ್ಗದವರು ಎಲ್ಲರನ್ನೂ ತಡಕೊಂಡು ಬೇರೆಯವರು ಮೆರೆಯೋದಕ್ಕೆ ಬಿಡ್ತೀವಿ. ಇಂಥ ಹೊರೆಯನ್ನು ಹೊತ್ತಿರುವ ಪೆಕರ, ಶ್ರೀ­ಸಾಮಾ­ನ್ಯ­ರಲ್ಲಿ ಅಸಾಮಾನ್ಯ. ಪ್ರಶಸ್ತಿಗೆ ಅವನೇ ಯೋಗ್ಯ’ ಎಂದು ಆಕ್ರೋ­ಶ­ದಿಂದ ಹೇಳಿದ ಮಧ್ಯವಯಸ್ಕರು ಸರಸರ ಹೊರಟರು.

‘ನೋಡಿ, ವೀಕ್ಷಕರೇ ಇದು ನಮ್ಮ ಶ್ರೀಸಾಮಾನ್ಯನ ಕಥೆ. ಕಳೆದ ೨೦೧೩ರಲ್ಲಿ ಎಷ್ಟೇ ಕಷ್ಟ ಬಂದರೂ ತಡೆದುಕೊಂಡು ಇನ್ನೂ ಬದುಕಿರುವ ಶ್ರೀಸಾಮಾನ್ಯನ ಕತೆ. ಸಿಟಿ ಬಸ್ ಪ್ರಯಾಣದರ ಆಗಾಗ ದಿಢೀರ್ ಅಂತ ಮಧ್ಯರಾತ್ರಿಯಲ್ಲಿ ಹೆಚ್ಚಾಗಿ ಬಿಡುತ್ತೆ, ಮಾಸಿಕ ಬಸ್‌ಪಾಸ್ ದರವೂ ಹೆಚ್ಚಾಗಿ ಬಿಡುತ್ತೆ. ಆದರೂ ಇವನು ಒಂದುಚೂರೂ ಗೊಣಗಲ್ಲ. ಪ್ರತಿಭಟನೆ ಅನ್ನುವ ಸೊಲ್ಲೇ ಅವನ ಗಂಟಲಲ್ಲಿ ಒಣಗಿ­ಹೋಗಿದೆ.

ಆಟೋ ಮೀಟರ್ ಮಿನಿಮಮ್ ಐದೈದು ರೂಪಾಯಿಗೆ ಏರುತ್ತಲೇ ಇದೆ. ಅದೂ ಅಲ್ಲದೆ, ಮೀಟರ್‌­ಮೇಲೆ ಮತ್ತಷ್ಟು ಮಡಗಿ ಎಂದರೂ ಸದ್ದಿಲ್ಲದೆ ಜೇಬುಬರಿದು ಮಾಡಿಕೊಂಡು ತಲೆಬಾಗಿಸಿಕೊಂಡು ಹೋಗುತ್ತಾನೆ. ಹಾಲಿನ ದರ ಎರೆಡೆರಡು ರೂಪಾಯಿ ಏರುತ್ತಲೇ ಇದೆ.ಅಕ್ಕಿ ಗಗನಕ್ಕೇರಿ ಕುಳಿತಿದೆ. ಚಿನ್ನವಂತೂ ತೆಂಗಿನಮರ ಏರಿಕುಳಿತಿದೆ. ಏನೇ ಆದರೂ ಸಂಬಳ ಮಾತ್ರ ಏರಲ್ಲ. ಅದರಲ್ಲೇ ನೀಗಿಕೊಳ್ಳು­ತ್ತಿರುವ ಇವನಲ್ಲವೇ ಭವ್ಯಭಾರತದ ಶ್ರೀಸಾಮಾನ್ಯ.

ಆದುದ­ರಿಂದ ವರ್ಷದ ವ್ಯಕ್ತಿ ಪ್ರಶಸ್ತಿಗೆ ಪೆಕರ ಸೂಕ್ತ ವ್ಯಕ್ತಿ ಎಂದು ನಮ್ಮ ಜನ ಹೇಳ್ತಾ ಇದ್ದಾರೆ’ ಎಂದು ಟಿವಿ ವರದಿಗಾರರು ಉಸಿರು ಬಿಗಿಹಿಡಿದುಕೊಂಡು ಭಾಷಣ ಚಚ್ಚಿದರು. ಅಲ್ಲದೆ, ಬನ್ನಿ, ನಮ್ಮ ಪ್ರತಿಪಕ್ಷ ನಾಯಕ ಮಾರಸ್ವಾಮಿಗಳು ಏನು ಹೇಳ್ತಾರೆ ಕೇಳೋಣ ಎಂದು ಅವರ ಮುಂದೆ ಮೈಕು ಹಿಡಿದರು.

‘ಸೂಕ್ತವಾಗಿದೆ.ಅವನನ್ನು ಏನು ಶ್ರೀಸಾಮಾನ್ಯನ ಪ್ರತಿನಿಧಿ ಅಂತ ಹೇಳ್ತಾರೆ ಅದನ್ನೂ ನಾನು ಮತ್ತು ನನ್ನ ಕುಟುಂಬ ಸಂಪೂರ್ಣ ಅನುಮೋದಿಸುತ್ತೇವೆ.ಬಾಯಿದ್ದೂ ಆಡಲಾರದ ನತದೃಷ್ಟ ಜೀವಿಸ್ವಾಮಿ ಅವನು. ಇವನನ್ನು ಎಲ್ಲ ರಾಜ­ಕಾರಣಿಗಳೂ ಸುಲಭವಾಗಿ ಯಾಮಾರಿಸಬಹುದು. ಪ್ರಜಾ­ಪ್ರಭುತ್ವ ರಕ್ಷಿಸ್ತೀವಿ, ಉದ್ಯೋಗ ಕೊಡ್ತೀವಿ, ಶ್ರೀಸಾಮಾನ್ಯನನ್ನು ರಕ್ಷಿಸ್ತೀವಿ ಅಂತ ಪುಢಾರಿಗಳು ಭಾಷಣ ಬಿಗಿದರೆ ಅದನ್ನು ಸುಲಭವಾಗಿ ನಂಬೋದು ಅವನ ಜಾತಕಗುಣ.

ಹಳೆಯಂಗಿ ಕಳಚಿಹಾಕಿ ಹೊಸದನ್ನು ಧರಿಸುವಷ್ಟೇ ಸುಲಭವಾಗಿ ಪಕ್ಷದಿಂದ ಪಕ್ಷಕ್ಕೆ ಪುಢಾರಿಗಳು ಜಂಪ್ ಹೊಡೀತಿದ್ರೆ, ಅಧಿಕಾರ­ದಾಹದಿಂದ ರಾಜಕೀಯ ಕಾಮಗಾರಿಗಾಗಿ ಬಿಲ್ ಒಂಬತ್ತು ಸಾವಿರ ಕೋಟಿ ರೂಪಾಯಿ ಬಾಕಿಇಟ್ಟು ಪರಾರಿಯಾದ್ರೂ ಮರಳಿಮರಳಿ ಅವರನ್ನೇ ಅಧಿಕಾರಕ್ಕೆ ತರೋದೇ ಶ್ರೀಸಾಮಾನ್ಯನ ಒಳ್ಳೆಯ ಗುಣ. ಅವನನ್ನು ಖರೀದಿ ಮಾಡಿಬಿಡ್ತಾರೆ ಸಾರ್, ರಾಮನಗರ, ಮಂಡ್ಯದಲ್ಲಿ ನನಗಿದು ಅನುಭವಕ್ಕೆ ಬಂದಿದೆ...’

‘ಸಾರ್, ಶಾಸಕ ರತ್ನಮುನಿಯವರು ಲೈನ್‌ನಲ್ಲಿದ್ದಾರೆ, ನಿಮ್ಮತ್ರ ಆಮೇಲೆ ಚರ್ಚೆ ಮಾಡ್ತೀನಿ’ ಎಂದು ಟಿವಿವರದಿಗಾರರು ಹೊರಬಂದರು.
‘ನಮಸ್ಕಾರ ಶಾಸಕರೇ, ಪೆಕರನಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಬಂದಿರೋ ಬಗ್ಗೆ ಏನು ಹೇಳ್ತೀರಾ?’
’ಬರಲಿ ಬಿಡಿ, ಪ್ರಶಸ್ತಿ ಇರೋದೇ ಕೊಡೋಕಲ್ವೇ? ಶ್ರೀ ಸಾಮಾನ್ಯ ಅಂದ್ರೆ ದೇವರ ಸಮಾನ.’
‘ಆದರೆ, ಬೆಂಗಳೂರಲ್ಲಿ ಶ್ರೀಸಾಮಾನ್ಯ ರಸ್ತೆಗುಂಡಿಗಳಲ್ಲಿ ಬಿದ್ದು ಸಾಯ್ತಾ ಇದ್ದಾನೆ. ಕಾಂಪೌಂಡ್‌ಗೋಡೆ ಮೇಲೆ ಬಿದ್ದು ಯುವತಿಯರು ಸಾಯ್ತಾರೆ. ಎಲ್ಲಿದೆ ಸಾರ್ ಶ್ರೀಸಾಮಾನ್ಯನಿಗೆ ರಕ್ಷಣೆ?’

‘ನೋಡಿ, ಹೀಗೆಲ್ಲಾ ಮಾತನಾಡಬಾರದು. ನನ್ನ ಕ್ಷೇತ್ರದಲ್ಲಿ ಕಾಮಗಾರಿ ಮಾಡಿಸಿದ ಜಾಗದಲ್ಲಿ ಯಾರಾದ್ರೂ ಕಳಪೆಕಾಮಗಾರಿಯಿಂದ ಸತ್ತರೆ, ಒಂದು ಕೋಟಿ ರೂಪಾಯಿ ಕೊಡ್ತೇನೆ. ನಾನು ಶ್ರೀಸಾಮಾನ್ಯನ ರಕ್ಷಕ...ಈಗ ಟೈಮಿಲ್ಲ... ಎರಡೂವರೆ ಕೋಟಿ ರೂಪಾಯಿ ಕೊಟ್ಟು, ವಿದೇಶಿ ಫಿಲಂ ತೋರಿಸ್ತಿದ್ದಾರೆ. ಸ್ವಲ್ಪ ಹೋಗಿಬರ್ತೀನಿ, ಆಮೇಲೆ ಫೋನ್‌ಮಾಡಿ...’ಶಾಸಕರು ಲಗುಬಗೆಯಿಂದ ನಿರ್ಗಮಿಸಿದರು.

ಟಿವಿ ವರದಿಗಾರರು ನಮ್ಮ ಸಿನಿಮಾ ನಿರ್ದೇಶಕ ರಾಗರಾಜಭಟ್ಟರ ಬಳಿ ಬಂದರು. ‘ಪೆಕರನಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಬಂದಿದೆ ಅದು ಸರಿ, ನನಗೆ ಮಾತನಾಡಕ್ಕೆ ಟೈಮಿಲ್ಲ. ಒಂದು ಕವನ ಗೀಚಿ ಕೊಡ್ತೇನೆ, ತಕ್ಕೊಂಡು ರೈಟ್ ಹೇಳಿ ’ಎಂದರು.

ಓ, ದ್ರಾವ್ರೆ, ಲೈಫು ಇಷ್ಟೇನೆ
ಈರುಳ್ಳಿ, ಚಿನ್ನ ಏರಿದ್ರೂ ಅಷ್ಟೇ
ಪೆಟ್ರೋಲ್, ಉಪ್ಪು ಇಳಿದ್ರೂ ಅಷ್ಟೇ
ರೈತಸತ್ರು ಅಷ್ಟೇ, ರಪ್ಪ ಏನಾದ್ರೇನಂತೆ
ಡಾಲರ್ ಗಗನಕ್ಕೇರಿದ್ರೆ ಏನಂತೆ
ಕ್ವಾಟ್ರು ಬಾಟ್ಲು ಸಾಕಂತೆ
ದುಡ್ಡೇ ದೊಡ್ಡಪ್ಪ, ಪೆಕರ ಅವರಪ್ಪ

ರಾಜ್ಯದಲ್ಲಿ ಸಚಿವರು/ಶಾಸಕರು ಅರಣ್ಯಭೂಮಿ ಒತ್ತುವರಿ ಮಾಡಿದ್ದಾರೆ. ಮಾಜಿಸಿಎಂಗಳೆಲ್ಲಾ  ನಗರಗಳ ಬೆಲೆಬಾಳುವ ಭೂಕಬಳಿಸಿ ತೇಗುತ್ತಿದ್ದಾರೆ. ಗಣಿಅಕ್ರಮ ಅವ್ಯಾಹತವಾಗಿ ಸಾಗುತ್ತಿದೆ. ಬರ ಕಾಡುತ್ತಿದ್ದರೂ ಶಾಸಕರೆಲ್ಲಾ ವಿದೇಶದಲ್ಲಿ ಮಜಾ ಟೂರ್ ಮಾಡಲು ರೆಡಿಯಾಗ್ತಾ ಇದ್ದಾರೆ. ಯಾರೇ ಏನೇ ಅಂದರೂ ನಮ್ಮ ಪೆಕರ ವೈರಾಗ್ಯವೇ ಮೂರ್ತಿವೆತ್ತಂತೆ ಕುಳಿತಿದ್ದಾನೆ. ಏನೇ ಹೇಳಿದರೂ ‘ಮನಮೋಹಕ’ ನಗೆ ಬೀರುತ್ತಾ ನಿಂತಿದ್ದಾನೆ. ಇಂಡಿಯಾದಲ್ಲಿ ವರ್ಷದ ವ್ಯಕ್ತಿ ಆಗಲು ಇವನಿಗಿಂತ ಸೂಕ್ತವಾದವರು ಇನ್ಯಾರು ಸಿಗುತ್ತಾರೆ ಹೇಳಿ? ಎಂಬ ಪ್ರಶ್ನೆಯೊಂದಿಗೆ ಟಿವಿ ಚಾನೆಲ್ ವರದಿಗಾರರು ಸಮೀಕ್ಷೆ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT