ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಗ್ರಿ ಯಂಗ್ ಮ್ಯಾನ್ ಬಂದಾಯ್ತು!

Last Updated 29 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟವಾಗಿದೆಯಂತೆ, ಹೋಗಿ ಅದೇನಾಗಿದೆ ಅಂತ ನೋಡಿ’ ಎಂದು ಸಂಪಾದಕರು ಹೇಳಿದಾಗ ಪೆಕರ ಬೆಚ್ಚಿ ಬಿದ್ದ. ‘ನಾನೂ ಬಾಂಬ್ ಸ್ಫೋಟ ಎಂದೇ ತಿಳಿದುಕೊಂಡಿದ್ದೇ ಸಾರ್, ಅದರೆ ಅದೆಲ್ಲಾ ನಮ್ಮ ಆ್ಯಂಗ್ರಿ ಯಂಗ್ ಮ್ಯಾನ್ ಕೆಲಸ.

‘ಸುಮ್ನಿರಲಾರದೆ ಇರುವೆ ಬಿಟ್ಕೊಂಡ್ರು’ ಅನ್ನೋ ಹಾಗೆ ಕಾಂಗ್ರೆಸ್ ಪಾರ್ಟಿಯೊಳಗೇ ಬಾಂಬ್ ಹಾಕಿ ಎಲ್ಲರೂ ತರಗುಟ್ಟುವಂತೆ ಮಾಡಿದ್ದಾರೆ. ‘ಈ ದೇಶದ ಪ್ರಧಾನಿಯಾಗಲು ರಾಹುಲ್ ಕೂಡ ಯೋಗ್ಯರಲ್ಲ’ ಎಂದು ಬೆಂಗಳೂರಿನಲ್ಲಿ ನಮ್ಮ ನೆಚ್ಚಿನ ಸಾಹಿತಿಗಳು ಹೇಳಿದ ಮೇಲೆ ಹೀಗೆ ರೆಬೆಲ್ ಆದ್ರಾ ಅಂತ ನನಗೆ ಅನುಮಾನ ಸಾರ್’ ಎಂದು ಪೆಕರ ತನ್ನ ವಿಶ್ಲೇಷಣೆಯನ್ನು ಹರಿಯಬಿಟ್ಟ.

‘ಸಾಹಿತಿಗಳ ವಿಷಯವನ್ನು ಸ್ವಲ್ಪ ಸೈಡ್‌ಗಿಡಿ, ಚುನಾವಣೆ ಹತ್ರ ಬರ್ರತಾ ಇರೋ ಟೈಂನಲ್ಲಿ ಇದು ಇಂಪಾರ್ಟೆಂಟ್ ಟರ್ನಿಂಗ್ ಪಾಯಿಂಟ್. ಪಿಎಂ ರಿಯಾಕ್ಷನ್ ಏನು ಅನ್ನೋದು ಮೊದಲು ತಿಳ್ಕೊಳ್ಳಿ’ ಎಂದು ಸಂಪಾದಕರು ಸಲಹೆ ಮಾಡಿದರು. ದೆಹಲಿಯಲ್ಲಿ ಬಾಂಬ್ ಸಿಡಿಯುವ ಟೈಂಗೆ ಸರಿಯಾಗಿ, ನಮ್ಮ ಪಿಎಂಜೀ ವೈಟ್‌ಹೌಸ್‌ ನಲ್ಲಿದ್ದರು ಸಾರ್.

ಗಡಗಡ ನಡುಗ್ತಾ ಇದ್ರಂತೆ. ಒಬಾಮಾಜೀ ಅವರು, ಏಕೆ ಮನಮೋಹನ್‌ಜೀ ಹುಷಾರಿಲ್ವೇ? ಕೈಕಾಲು ಏಕೆ ಶೇಕ್ ಆಗ್ತಾ ಇದೆ? ಮೊದಲೇ ನೀವು ಮಾತನಾಡೋದು ನಮ್ಮ ಕಿವಿಗೆ ಕೇಳೋದೇ ಇಲ್ಲ. ಈಗ ನಡುಗ್ತಾ ಮಾತನಾಡಿದ್ರೆ ಹೇಗೆ ಕೇಳುತ್ತೆ? ಎನಿ ಪ್ರಾಬ್ಲಮ್ ಇನ್ ಇಂಡ್ಯಾ?’ ಎಂದು ಕೇಳಿದರಂತೆ.

ಅದಕ್ಕೆ ಸದಾ ಸೈಲೆಂಟಾಗಿರೋ ಪಿಎಂಜೀ, ‘ನೋ ಪ್ರಾಬ್ಲಮ್ ಒಬಾಮಾಜೀ. ನಾನು ರಾಹುಲ್ ನಾಯಕತ್ವದಲ್ಲಿ ಕೆಲಸ ಮಾಡಲು ಸಿದ್ಧ. ಆಗಲೂ ಬಾಯಿ ಮುಚ್ಚಿಕೊಂಡೇ ಇರ್ರತೀನಿ. ತಾಯಿ-ಮಗ ಹೇಳಿದಂತೆ ಕೇಳ್ತೀನಿ ಅಂತ ಕ್ಲಿಯರ್ರಾಗಿ ಹೇಳಿದ್ದೇನೆ. ಆದರೂ ಈಗ ಬಾಂಬ್ ಹಾಕಿದ್ದಾರೆ. ಸ್ವಲ್ಪ ಅರ್ಜಂಟ್‌ನಲ್ಲಿದ್ದೇನೆ ಹೋಗ್ಲಾ?’ ಎಂದು ಕೇಳಿದರಂತೆ.

‘ಡೋಂಟ್‌ವರಿ ಮನಮೋಹನ್‌ಜೀ, ಇಂಡಿಯಾದಲ್ಲಿ ಟೆರರಿಸ್ಟ್ ಕಾಟ ಜಾಸ್ತಿಯಾಗಿದೆ ಅಂತ ನನಗೆ ಚೆನ್ನಾಗಿಯೇ ಗೊತ್ತು. ಇನ್ನೈದು ವರ್ಷ ನೀವೇ ಇಂಡ್ಯಾ ಪಿಎಂ ಆದ್ರೆ ಅಮೆರಿಕಕ್ಕೆ ಒಳ್ಳೆಯದಾಗುತ್ತೆ. ಹೆದರಿಕೋ ಬೇಡಿ. ಅದ್ಯಾರು ಬಾಂಬ್ ಹಾಕ್ತಾರೆ ಹೇಳಿ, ಡ್ರೋನ್‌ ಕಳಿಸಿ ಪತ್ತೆ ಹಚ್ತೀನಿ. ಹತ್ತು ವರ್ಷದಿಂದ ನಾನು ಹೇಳಿದಂತೆ ಕೇಳಿಕೊಂಡು ತಲೆ ಆಡಿಸಿಕೊಂಡಿರುವ ನಿಮ್ಮಂತ ‘ತಮ್ಮ’ನನ್ನು ಪಡೆಯಲು ಏಳೇಳು ಜನ್ಮದಲ್ಲಿ ಪುಣ್ಯ ಮಾಡಿರಬೇಕು’ ಎಂದು ದೊಡ್ಡಣ್ಣಾಜೀ ಅವರು ಭರವಸೆ ಕೊಟ್ಟರಂತೆ.

‘ಜೋರಾಗಿ ಮಾತನಾಡಬೇಡಿ ಸಾರ್, ದೆಹಲಿ ಮೇಡಂಗೆ ಗೊತ್ತಾದೀತು’ ಎಂದು ಹೇಳಿದ ಪಿಎಂಜೀ ಈಗ ದೆಹಲಿಗೆ ವಿಮಾನ ಹತ್ತುತ್ತಾ ಇದ್ದಾರಂತೆ. ‘ಕಳಂಕಿತ ಸಚಿವರು ಹಾಗೂ ಸಂಸದರನ್ನು ಅನರ್ಹತೆಯಿಂದ ರಕ್ಷಿಸುವ ಸುಗ್ರೀವಾಜ್ಞೆ ಯಾರನ್ನು ರಕ್ಷಿಸಲು ಸ್ವಲ್ಪ ತಿಳ್ಕೊಳ್ಳಿ’
‘ರಷೀದ್ ಮಸೂದ್ ಕಳಂಕಿತರು ಅನ್ನೋದು ಪ್ರೂವ್ ಆಗಿದೆ.

ಅವರು ರಾಜ್ಯಸಭೆಯಿಂದ ಮೊದಲು ಎಗರಿ ಹೋಗ್ತಾರೆ, ನಮ್ಮ ಲಾಲೂಜೀ ೯೫೦ ಕೋಟಿ ತಿಂದು ಮುಖ ಬಾಯಿಗೆಲ್ಲಾ ಮೇವು ಅಂಟಿಸಿಕೊಂಡಿದ್ದಾರೆ. ಇವತ್ತು ತೀರ್ಪು ಬಂದರೆ ಅವರು ಮನೆಗೆ ಹೋಗೋದು ಗ್ಯಾರಂಟಿ. ಹೀಗೆ ಅನರ್ಹರಾಗುವವರ ಪಟ್ಟಿ ದೊಡ್ಡದೇ ಇದೆ. ಎಲ್ಲರೂ ಕಿಕ್‌ಔಟ್ ಅದರೆ ಯಾರನ್ನು ನಂಬಿಕೊಂಡು ಯುಪಿಎ–-೩ ಸರ್ಕಾರ ರಚನೆ ಮಾಡೋದು?’ ‘ಲಾಲೂ ರಿಯಾಕ್ಷನ್ ತಗೋ ಬೇಕಿತ್ತು’ ಎಂದು ಸಂಪಾದಕರು ಸಲಹೆ ಮಾಡಿದರು. ‘ಲಾಲೂ ಮನೆಗೂ ಹೋಗಿದ್ದೆ ಸಾರ್, ಹಸುಗಳು ಮೈದಡವುತ್ತಾ ಹಾಡ್ತಾ ಇದ್ದರು:

ಆಡಿಸಿ ನೋಡು, ಬೀಳಿಸಿ ನೋಡು
ಉರುಳಿ ಹೋಗೆನು, ರಾಹುಲೇ ಬರಲಿ,
ಸಿಬಿಐನೇ ಇರಲಿ, ಉಳಿದು ಆಳ್ವೆನು...’
‘ಏನ್ಸಾರ್ ಇವತ್ತು ತೀರ್ಪು ಬರ್ರತಾ ಇದೆ. ನಾಳೆಯಿಂದ ನಿಮ್ಮ ಲೋಕಸಭಾ ಸೀಟು ಕಿತ್ಕೊಂಡು ಹೋಗುತ್ತೆ. ಇನ್ಮುಂದೆ ಎಲೆಕ್ಷನ್‌ಗೂ ನಿಲ್ಲುವಂತಿಲ್ಲ. ಆದ್ರೆ ನೀವು ನೋಡಿದ್ರೆ ಜಾಲಿಯಾಗಿ ಹಾಡ್ತಾ ಇದೀರಲ್ಲಾ ಸಾರ್’ ಎಂದು ಕೇಳಿದೆ.

‘ಜೋರಾಗಿ ನಕ್ಕರು. ನನ್ನನ್ನು ದೂರ ತಳ್ಳಿ ಮುಂದೆ ಕಾಂಗ್ರೆಸ್‌ಗೆ ಸರ್ಕಾರ ರಚನೆ ಮಾಡೋಕೆ ಸಾಧ್ಯವಾಗುತ್ತೇನ್ರಿ? ನನ್ನ ಭ್ರಷ್ಟಾ ಚಾರದ ಬಗ್ಗೆ ಮಾತನಾಡೋಕೆ ಕಾಂಗ್ರೆಸ್‌ನ ವರಿಗೆ ಪವರ್ ಆಫ್ ಅಟಾರ್ನಿ ಕೊಟ್ಟವರಾರು? ಕಾಂಗ್ರೆಸ್ಸಿನಲ್ಲಿ ಭ್ರಷ್ಟಾಚಾರಿಗಳಿಲ್ಲವೇ?’ ಎಂದು ಕೇಳಿದ ಲಾಲೂ ಒಂದು ಕ್ಷಣ ಮಾತು ನಿಲ್ಲಿಸಿ
‘ನಿಮ್ದು ಯಾವ ರಾಜ್ಯ’ ಎಂದು ಕೇಳಿದರು.

‘ಕರ್ನಾಟಕ’
‘ಓಹ್! ಅಯ್ಯ ಹೇಗಿದ್ದಾರೆ? ಕಾಂಗ್ರೆಸ್ ರೂಲಿಂಗ್ ಇರುವ ರಾಜ್ಯಗಳಲ್ಲಿ ಕಳಂಕಿತರ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ರಾಹುಲ್ ಮೊದಲು ಮಾತನಾಡಲಿ. ಕಳಂಕಿತ ಅನ್ನುವ ಕಾರಣಕ್ಕೆ ಡಿಕುಶಿಮಾರ ಅವರನ್ನು ಸಚಿವ ಸಂಪುಟದಿಂದ ದೂರ ಇಟ್ಟರು. ಈಗ ಅವರನ್ನೇ ಅಯ್ಯ ಅವರಿಗೆ ಮೂಗುದಾರ ಹಾಕುವ ಸಮನ್ವಯ ಸಮಿತಿ ಸದಸ್ಯರನ್ನಾಗಿ ಮಾಡಿದ್ದಾರೆ.

ಗಣಿ ಅಕ್ರಮದಲ್ಲಿ ಸಂಲಾಡ್ ಇದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅವರನ್ನು ಸಂಪುಟದೊಳಗೇ ಇಟ್ಟುಕೊಂಡು ‘ಕೈ’ ಬಿಡಲ್ಲ ಅಂತಿದ್ದಾರೆ, ಅದರ ಬಗ್ಗೆ ಏನಾದರೂ ತೀರ್ಮಾನ ತೆಗೆದುಕೊಳ್ಳ ಬೇಡವೇ? ಅದು ಬಿಟ್ಟು, ಈ ಆ್ಯಂಗ್ರೀ ಯಂಗ್ ಮ್ಯಾನ್  ಸುಗ್ರೀವಾಜ್ಞೆ ಅಸಂಬದ್ಧ, ಈ ದೇಶದಲ್ಲಿ ಭ್ರಷ್ಟಾಚಾರ ಮಟ್ಟಹಾಕಬೇಕಿದ್ದರೆ ಎಲ್ಲ ರಾಜಕೀಯ ಪಕ್ಷಗಳು ಹುಚ್ಚುತನ ಬಿಡಬೇಕು’ ಅಂತ ಹೇಳ್ತಾ ಇರೋದು ಸರಿಯಲ್ಲ. ಲಾಲೂಜಿ ಭಾಷಣ ಕುಟ್ಟುವುದನ್ನು ಸ್ವಲ್ಪ ನಿಲ್ಲಿಸಿದರು.

ಅಷ್ಟರಲ್ಲಿ ಒಂದು ಚೊಂಬು ಬಿಸಿಬಿಸಿ ಹಾಲು ಬಂತು. ‘ಕುಡೀರಿ, ನಾನೇ ಸಾಕಿದ ಹಸುವಿನ ಹಾಲು. ಬಹಳ ರುಚಿ. ಕೆಎಂಎಫ್ ಹಾಲಿನ ತರ ಅಲ್ಲ’ ಎಂದು ಲಾಲೂಜಿ ವರ್ಣಿಸಿದರು. ‘ಇಲ್ಲಾ ಸಾರ್, ನಾನು ಹಾಲು ಕುಡಿಯಲ್ಲ. ಇದು ೯೫0 ಕೋಟಿ ರೂಪಾಯಿ ಮೇವು ಹಗರಣದಲ್ಲಿ ತಂದ ಹಸುಗಳಿಂದ ಬಂದದ್ದು. ‘ಭ್ರಷ್ಟಾಚಾರದ ಹಾಲು’ ನಾನು ಕುಡಿಯುವುದಿಲ್ಲ. ಕೆಎಂಎಫ್‌ನಲ್ಲಿ ಆದದ್ದು ಕಡಿಮೆ ಭ್ರಷ್ಟಾಚಾರ’ ಎಂದು ಪೆಕರ ಹಾಲು ಕುಡಿಯಲು ನಯವಾಗಿ ನಿರಾಕರಿಸಿದ.

‘ಕ್ಯಾ ಪೆಕರಾಜೀ ಐಸಾ ಬೋಲ್ತಾ ತುಮ್’ ಎಂದು ಜೋರಾಗಿಯೇ ಗದರಿದ ಲಾಲೂಜಿ, ಭ್ರಷ್ಟಾಚಾರದ ಇತಿಹಾಸ ನಿಮಗೆ ಗೊತ್ತಿಲ್ಲ ಅನ್ನಿಸುತ್ತೆ, ನೀವು ಹುಟ್ಟೋದಕ್ಕಿಂತ ಮುಂಚಿನಿಂದ ಅದು ಇದೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಇರಲಿಲ್ಲವೇ? ಬಿಜೆಪಿ ಸರ್ಕಾರ ನಡೆಸಿದ ಹಗರಣ ಯಾವುದಕ್ಕೆ ಕಮ್ಮಿ? ರಪ್ಪ ಅವರು ಹಲವು ಕಂಪೆನಿಗಳಿಂದ ನೇರವಾಗಿ ರೊಕ್ಕ ತಕ್ಕೊಂಡು ಈಗ್ಲೂ ಒದ್ದಾಡ್ತಾ ಇಲ್ಲವೇ? ಆಗ ಸುಮ್ನಿದ್ರಿ? ಕಾಂಗ್ರೆಸ್ ಸರ್ಕಾರಗಳನ್ನೇ ತಗೊಳ್ಳಿ, ಕಡಿಮೆ ಭ್ರಷ್ಟಾಚಾರ ನಡೆದಿದೆಯೇ? ಪಾಪ! ದೇವರಾಜ ಅರಸೂಜೀ ಅವರನ್ನೇ ಕಾಂಗ್ರೆಸ್ ಶಾಸಕರು ಕಂಗೆಡಿಸಲಿಲ್ಲವೇ? ‘ಸರ್ಕಾರ ಉಳಿಸಿಕೊಳ್ಳಲು ನಾನು ಶಾಸಕರನ್ನು ಸಾಕಬೇಕಾಯಿತು’ ಎಂದು ಅರಸೂಜೀ ಅವರೇ ಬಹಿರಂಗವಾಗಿ ಅತ್ತುಕೊಂಡು ಹೇಳಿರಲಿಲ್ಲವೇ? ಇವೆಲ್ಲಾ ‘ಅನಿವಾರ್ಯ ಭ್ರಷ್ಟಾಚಾರ’ ಇಂಥವನ್ನು ನೋಡಿಯೂ ನೋಡದಂತೆ ಇರಬೇಕು.

ಗಾಂಧೀಜೀನೇ ಹೇಳಿಲ್ಲವೇ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿರಬೇಕು ಅಂತ. ಅದೆಲ್ಲಾ ಆ್ಯಂಗ್ರಿ ಯಂಗ್‌ಮ್ಯಾನ್‌ಗೆ ಹೇಗೆ ಗೊತ್ತಾಗಬೇಕು? ನೀವು ಹಾಲು ಕುಡೀರಿ’ ಎಂದು ಲಾಲೂಜೀ ಪೆಕರನಿಗೆ ಸುದೀರ್ಘ ಉಪನ್ಯಾಸವನ್ನೇ ನೀಡಿದರು. ಇನ್ನೂ ಇಲ್ಲೇ ಇದ್ದರೆ ಕರ್ನಾಟಕದಲ್ಲಿರುವ ಎಲ್ಲ ರಾಜಕಾರಣಿಗಳ, ಅದರಲ್ಲೂ ಅಪ್ಪ ಮಕ್ಕಳ ಜಾತಕವನ್ನೇ ತೆರೆದಿಡುತ್ತಾರೆ ಎಂದು ಭಯಭೀತ ನಾದ ಪೆಕರ ಅಲ್ಲಿಂದ ಕಳಚಿಕೊಂಡ. ಲಾಲೂ ಬಲು ಚಾಲು ಎಂದು ಮನದಲ್ಲೇ ಹೇಳಿಕೊಂಡ.

ದಾರಿಯಲ್ಲಿ ಆಮ್ ಆದ್ಮಿ ಕಚೇರಿ ಕಂಡಿತು. ಪೆಕರ ಅಲ್ಲಿಗೆ ನುಗ್ಗಿದ. ಅದಾಗಲೇ ಅಲ್ಲಿ ಪತ್ರಿಕಾಗೋಷ್ಠಿ ಆರಂಭವಾಗಿತ್ತು. ‘ಹಾಲೀ ೧೬೨ ಎಂಪಿಗಳು ಕಳಂಕಿತರು. ಎಲ್ಲ ಪಕ್ಷದಲ್ಲೂ ಕ್ರಿಮಿನಲ್‌ಗಳಿದ್ದಾರೆ, ಇಂಥ ಗೂಂಡಾಗಳನ್ನಿಟ್ಟು ಕೊಂಡು ದೇಶ ಉದ್ದಾರ ಮಾಡಕ್ಕೆ ಆಗುತ್ತಾ?’ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ತುಂಬಿ ತುಳುಕುತ್ತಿತ್ತು.

‘ಹಾಗಾದ್ರೆ, ಸುಗ್ರೀವಾಜ್ಞೆ ಅಸಂಬದ್ಧ ಎಂದು ಹೇಳಿರುವ ರಾಹುಲ್‌ಜೀಗೆ ನಿಮ್ಮ ಬೆಂಬಲಾನಾ?’
‘ಹೀಗೆಲ್ಲಾ ತಂತ್ರಗಾರಿಕೆ ಪ್ರಶ್ನೆ ಕೇಳ್ಬೇಡಿ ಪೆಕರಾಜೀ, ಸುಗ್ರೀವಾಜ್ಞೆ ತಪ್ಪು ಅಷ್ಟೇ’
‘ಹಾಗಾದ್ರೆ ಮುಂದೆ ರಾಹುಲ್ ಏನ್ ಮಾಡಬೇಕು?’
‘ವಾಧ್ರಾ ಅವರ ಹಗರಣಗಳ ಬಗ್ಗೆ ವಿವರ ಪಡೀಬೇಕು’
ಪೆಕರ ಅಲ್ಲಿಂದ ಹೊರಬಿದ್ದು ಕಾಂಗ್ರೆಸ್ ಕಚೇರಿ ಕಡೆ ಹೆಜ್ಜೆ ಹಾಕಿದ. ಅಲ್ಲಿ ಯುವಜನ ಪಟಾಕಿ ಸಿಡಿಸಿ ಕುಣಿದಾಡುತ್ತಿದ್ದರು.

‘ಏನು? ಏಕೆ? ಏನಾಯ್ತು?’ ಎಂದು ಪೆಕರ ಪ್ರಶ್ನಿಸಿದ. ‘ನಮ್ಮ ಮುಂದಿನ ಪ್ರಧಾನಿ ಸಿಕ್ಕಾಯ್ತು’ ಎಂದು ಯುವಕರು ಪೆಕರನ ಮುಖಕ್ಕೆ ಹೋಲಿ ರಂಗು ಬಳಿದರು. ‘ಕಚೇರಿಯೊಳಗೆ ಹಾಗೂ ಹೀಗೂ ಪ್ರವೇಶ ಪಡೆದ ಪೆಕರ, ‘ಮುಂದೆ ನಿಮ್ಮ ಯೋಜನೆ ಏನು?’ ಎಂದು ಕಾರ್ಯದರ್ಶಿಯನ್ನು ಪ್ರಶ್ನಿಸಿದ.

‘ಇನ್ನು ಮುಂದೆ ನಮೋನಮೋ ಆಟ ಬಂದ್. ನಮ್ಮ ಪಕ್ಷದೊಳಗೆ ಆ್ಯಂಗ್ರಿ ಯಂಗ್‌ಮ್ಯಾನ್ ಎಂಟ್ರಿ ಕೊಟ್ಟಾಗಿದೆ. ಇನ್ನುಮುಂದೆ ರಾಹುಲ್‌ಜೀ ಭಾಷಣ ಕೇಳಲು ೧೫ ರೂಪಾಯಿ ಟಿಕೆಟ್ ಇಡ್ತೇವೆ’.
ಪೆಕರ ಸೈಲೆಂಟಾಗಿ ಜಾಗ ಖಾಲಿ ಮಾಡಿದ.

-ಜಿಎಮ್ಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT