ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್ನೆಟ್ ನಿರ್ವಹಣೆಯಲ್ಲೊಂದು ಐತಿಹಾಸಿಕ ಪಲ್ಲಟ

Last Updated 12 ಅಕ್ಟೋಬರ್ 2016, 2:26 IST
ಅಕ್ಷರ ಗಾತ್ರ

ಸೆಪ್ಟೆಂಬರ್ ತಿಂಗಳ ಕೊನೆಯ ದಿನ ಇಂಟರ್ನೆಟ್‌ನ ಇತಿಹಾಸದಲ್ಲಿ ಒಂದು ಮಹತ್ತರ ಪಲ್ಲಟ ಸಂಭವಿಸಿತು. ಏನೀ ಪಲ್ಲಟ? ತಾಂತ್ರಿಕ ಪಾರಿಭಾಷಿಕ ಪದಗಳನ್ನು ಬಳಸದೇ ಹೇಳಬೇಕೆಂದರೆ 2016ರ ಸೆಪ್ಟೆಂಬರ್ 30ಕ್ಕೆ ಇಂಟರ್ನೆಟ್‌ನ ಬೆನ್ನೆಲುಬಾದ ವಿಳಾಸ ಪುಸ್ತಕದ ಮೇಲಿದ್ದ ಅಮೆರಿಕ ಸರ್ಕಾರ ನಿಯಂತ್ರಣ ಕೊನೆಗೊಂಡಿತು. ಇನ್ನು ಮುಂದೆ ಇದನ್ನು ಯಾವುದೇ ಸರ್ಕಾರದ ನಿಯಂತ್ರಣದಿಂದ ಹೊರತಾದ, ಜಾಗತಿಕ ಇಂಟರ್ನೆಟ್ ಬಳಕೆದಾರರ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ಸ್ವತಂತ್ರ ಸಮುದಾಯವೊಂದು ನಿಯಂತ್ರಿಸಲಿದೆ.

ಎಷ್ಟೇ ಸರಳವಾಗಿ ಹೇಳಿದರೂ ಇದೊಂದು ಒಗಟಿನಂತೆ ಕಾಣುವ ವಿಚಾರ. ಇಂಟರ್ನೆಟ್ ಎಂಬುದು ಯಾವುದೋ ಒಂದು ಸರ್ಕಾರ ಅಥವಾ ಒಂದು ಕಂಪೆನಿ ಅಥವಾ ಕಂಪೆನಿಗಳ ಕೂಟವೊಂದು ನಡೆಸುತ್ತಿರುವ ವ್ಯವಸ್ಥೆಯಲ್ಲ. ಇದು ಜಗತ್ತಿನಾದ್ಯಂತ ಹರಡಿರುವ ಕಂಪ್ಯೂಟರ್‌ಗಳ ಜಾಲ. ಇದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಒಂದು ಸರಿಯಾದ ವಿಳಾಸ ವ್ಯವಸ್ಥೆ ಇರಬೇಕು. ಉದಾಹರಣೆಗೆ ವಿಶ್ವದ ಯಾವ ಮೂಲೆಯಲ್ಲಿ ಕುಳಿತು ಇಂಟರ್ನೆಟ್ ಸಂಪರ್ಕವಿರುವ ಯಾವುದೇ ಉಪಕರಣದಲ್ಲಿ ‘prajavani.net’ ಎಂದು ಟೈಪಿಸಿದರೆ ಅದು ‘ಪ್ರಜಾವಾಣಿ’ ಪತ್ರಿಕೆಯ ಅಂತರ್ಜಾಲ ತಾಣವನ್ನು ನಿಮ್ಮ ಎದುರು ತೆರೆದಿಡುತ್ತದೆ.

ಇದು ಸಾಧ್ಯವಾಗುವುದು ಡೊಮೈನ್ ನೇಮ್ ಸಿಸ್ಟಂ ಅಥವಾ ಡಿಎನ್‌ಎಸ್ ಎಂದು ಕರೆಯುವ ವಿಳಾಸ ವ್ಯವಸ್ಥೆಯಿಂದ. ಪ್ರತಿಯೊಂದು ಜಾಲ ತಾಣಕ್ಕೂ ಒಂದು ವಿಶಿಷ್ಟವಾದ ಸಂಖ್ಯಾ ಸಂಜ್ಞೆಯಿರುತ್ತದೆ. ಬಳಕೆದಾರರು ನಿರ್ದಿಷ್ಟವಾದ ವಿಳಾಸವನ್ನು ಬ್ರೌಸರ್‌ನಲ್ಲಿ ಟೈಪಿಸಿದಾಗ ಈ ವ್ಯವಸ್ಥೆ ಆ ನಿರ್ದಿಷ್ಟ ವಿಳಾಸ ಯಾವ ಸರ್ವರ್‌ನಲ್ಲಿದೆ ಎಂದು ಪತ್ತೆ ಹಚ್ಚಿ ಅಲ್ಲಿಗೆ ಕೊಂಡೊಯ್ಯುತ್ತದೆ.

ಈ ವ್ಯವಸ್ಥೆ ಏಕೆ ಬೇಕು? ಒಂದು ಸರಳ ಉದಾಹರಣೆಯೊಂದಿಗೆ ಈ ಪ್ರಶ್ನೆಗೆ ಉತ್ತರ ನೀಡಬಹುದು. ಒಂದು ಊರಿನ ಬೀದಿಗಳ ಹೆಸರು ಮತ್ತು ಮನೆಯ ಸಂಖ್ಯೆಯನ್ನು ಪ್ರತಿಯೊಬ್ಬರೂ ತಮಗೆ ತೋಚಿದಂತೆ ಇಟ್ಟುಕೊಂಡರೆ ಏನಾಗಬಹುದು. ಒಂದೇ ಬೀದಿಯಲ್ಲಿ ಒಂದೇ ವಿಳಾಸವಿರುವ ಹತ್ತಾರು ಜನರು. ಒಂದು ಊರಿನಲ್ಲಿ ಒಂದೇ ಹೆಸರಿನ ಹತ್ತಾರು ಬೀದಿಗಳು ಕಾಣಿಸಿಕೊಂಡು ವಿಳಾಸ ಎಂಬ ಪರಿಕಲ್ಪನೆಯೇ ಅರ್ಥಹೀನವಾಗುತ್ತದೆ. ನಗರಗಳಲ್ಲಿ ಇದನ್ನು ನಗರಾಡಳಿತ ಸಂಸ್ಥೆಗಳು ನಿರ್ವಹಿಸುತ್ತವೆ. 

ಇಂಟರ್ನೆಟ್ ಎಂಬ ಮಹಾಜಗತ್ತಿನಲ್ಲಿ ಇದನ್ನು ನಿಯಂತ್ರಿಸುವುದಕ್ಕೆ ಇರುವ ವ್ಯವಸ್ಥೆಯೇ ಐಕ್ಯಾನ್ (ಐಸಿಎಎನ್ಎನ್=ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಅಂಡ್ ನಂಬರ್‍ಸ್). ಇದರ ಅಂಗ ಸಂಸ್ಥೆಯಾದ ಐಎಎನ್ಎ ಅಥವಾ ಇಂಟರ್ನೆಟ್ ಅಸೈನ್ಡ್ ನಂಬರ್ಸ್ ಅಥಾರಿಟಿ ಎಂಬ ಸಂಸ್ಥೆಯೊಂದು ವಿಳಾಸ ಪುಸ್ತಕದ ನಿರ್ವಹಣೆ ನಡೆಸುತ್ತದೆ.

ಇದಕ್ಕೂ ಮೊದಲು ಈ ಜವಾಬ್ದಾರಿಯನ್ನು ಇಂಟರ್ನೆಟ್‌ನ ಆದಿಮ ರೂಪವಾದ ‘ಅರ್ಪಾನೆಟ್‌’ ಸೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಾನ್ ಪೋಸ್ಟೆಲ್ ಎಂಬ ವಿಜ್ಞಾನಿ ನೋಡಿಕೊಳ್ಳುತ್ತಿದ್ದರು. ಜಾನ್ ಪೋಸ್ಟೆಲ್ ಮೊದಲಿಗೆ ಲಾಸ್ ಏಂಜಲಿಸ್‌ನ  ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಪರವಾಗಿ ಈ ಕೆಲಸ ಮಾಡುತ್ತಿದ್ದರು. ಆಮೇಲೆ ಅಮೆರಿಕದ ರಕ್ಷಣಾ ಇಲಾಖೆಯು ಯೂನಿವರ್ಸಿಟಿ ಆಫ್ ಸದರನ್ ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಿದ್ದ ಮಾಹಿತಿ ವಿಜ್ಞಾನ ಸಂಸ್ಥೆಯ ಪರವಾಗಿ ಈ ಕೆಲಸ ಮಾಡುತ್ತಿದ್ದರು.

ಹಾಗೆ ನೋಡಿದರೆ ಇಂಟರ್ನೆಟ್‌ನ ಪರಿಕಲ್ಪನೆಯೇ ಅಮೆರಿಕದ ರಕ್ಷಣಾ ಇಲಾಖೆಯ ಪ್ರಯೋಗಾಲಯಗಳಲ್ಲಿ ಹುಟ್ಟಿಕೊಂಡದ್ದು. ಇದು ಅರ್ಪಾನೆಟ್ ಆಗಿ ಹೊರಜಗತ್ತಿಗೆ ಬಂದು ಅಲ್ಲಿಂದ ವಿಶ್ವವ್ಯಾಪಿಯಾದ ನಂತರ ಇದನ್ನು ನಿರ್ವಹಿಸುವವರು ಯಾರು ಎಂಬ ಸಮಸ್ಯೆ ಹುಟ್ಟಿಕೊಂಡಿತು. ಮಾಹಿತಿ ವಿನಿಮಯದ ಜಾಲ ವ್ಯಾಪರಕ್ಕಾಗಿಯೂ ಬಳಕೆಯಾಗ ತೊಡಗಿದ ನಂತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂಟರ್ನೆಟ್‌ನ ವಿಳಾಸ ಪುಸ್ತಕವನ್ನು ನಿರ್ವಹಿಸುವ ಹೊಣೆಯನ್ನು ನಿರ್ವಹಿಸುವುದು ಕಷ್ಟವಾಗುತ್ತಿತ್ತು.

ಈ ಎಲ್ಲಾ ಕಾರಣಗಳಿಂದ ಅಮೆರಿಕದ ವಾಣಿಜ್ಯ ಇಲಾಖೆಯ ಅಡಿಯಲ್ಲಿರುವ ನ್ಯಾಷನಲ್ ಟೆಲಿಕಮ್ಯುನಿಕೇಷನ್ ಅಂಡ್ ಇನ್ಫಾರ್ಮೇಷನ್ ಅಡ್ಮಿನಿಸ್ಟ್ರೇಷನ್ ಎಂಬ ಸಂಸ್ಥೆ ಇಂಟರ್ನೆಟ್‌ನ ವಿಳಾಸ ಪುಸ್ತಕವನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಸ್ತಾವನೆಯೊಂದನ್ನು ಮುಂದಿಟ್ಟಿತು. ಇದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಅನುಲಕ್ಷಿಸಿ 1998ರಲ್ಲಿ ಐಕ್ಯಾನ್‌ನ ಸ್ಥಾಪನೆಯಾಯಿತು. ಅಮೆರಿಕದ ವಾಣಿಜ್ಯ ಇಲಾಖೆ ಐದು ವರ್ಷಗಳ ಅವಧಿಗೆ ಇಂಟರ್ನೆಟ್ ವಿಳಾಸ ಪುಸ್ತಕದ ನಿರ್ವಹಣೆಯನ್ನು ಈ ಸಂಸ್ಥೆ ಮಾಡಬಹುದು ಎಂಬ ಕರಾರು ಮಾಡಿಕೊಂಡು ಅನುಮತಿ ನೀಡಿತು.

ಐಕ್ಯಾನ್ ಆಗಲೂ ಮತ್ತು ಈಗಲೂ ಒಂದು ಕ್ಯಾಲಿಫೋರ್ನಿಯಾ ರಾಜ್ಯದ ಕಾನೂನಿನ ಅಡಿಯಲ್ಲಿ ರೂಪುಗೊಂಡಿದ್ದ ಸರ್ಕಾರೇತರ ಸಂಸ್ಥೆ. ಐದು ವರ್ಷಗಳಲ್ಲಿ ಇದು ಜಾಗತಿಕ ಬಹುಪಾಲುದಾರರ ನಿಯಂತ್ರಣವಿರುವ ಸಂಸ್ಥೆಯಾಗಿ ಬದಲಾಗಬೇಕು ಎಂಬುದನ್ನು ಅಂದೇ ನಿರ್ಧರಿಸಲಾಗಿತ್ತಾದರೂ ಅಮೆರಿಕದ ರಾಜಕಾರಣದೊಳಗಿನ ಎಳೆದಾಟಗಳು ಇದನ್ನು ಸಾಧ್ಯ ಮಾಡಲೇ ಇಲ್ಲ.

ಇಂಟರ್ನೆಟ್‌ನ ವಿಳಾಸ ಪುಸ್ತಕವನ್ನು ನಿಯಂತ್ರಿಸುವಲ್ಲಿ ಅಮೆರಿಕದ್ದೇ ಕೊನೆಯ ಮಾತಾಗಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಆಗಿನಿಂದಲೂ ಇತ್ತು. ಇದಕ್ಕೆ ನಿಜವಾದ ವೇಗ ದೊರೆತದ್ದು ಅಮೆರಿಕದ ಗುಪ್ತಚರ ಸಂಸ್ಥೆಗಳು ಹೇಗೆ ಇಂಟರ್ನೆಟ್‌ನಲ್ಲಿ ನಡೆಯುತ್ತಿರುವ ಸಂವಹನದ ಮೇಲೆ ನಿಗಾ ಇಡುತ್ತಿವೆ ಎಂಬ ವಿವರಗಳು ಬಯಲಾದ ನಂತರ. ಎಡ್ವರ್ಡ್ ಸ್ನೋಡೆನ್ ಈ ವಿವರಗಳನ್ನು ಬಹಿರಂಗ ಪಡಿಸಿದ ನಂತರ ಐಕ್ಯಾನ್ ಅಮೆರಿಕ ಸರ್ಕಾರದ ನಿಯಂತ್ರಣದಲ್ಲಿ ಇರಬಾರದು ಎಂಬ ವಾದ ಹೆಚ್ಚು ಪ್ರಬಲವಾಯಿತು.

ಭಾರತ, ಬ್ರೆಝಿಲ್ ಮತ್ತು ಚೀನಾಗಳು ಈ ವಿಷಯದಲ್ಲಿ ಬಹಳ ಕಠಿಣವಾದ ನಿಲುವನ್ನೇ ತಳೆದವು. ಎಲ್ಲಿಯ ತನಕ ಎಂದರೆ ಇಂಟರ್ನೆಟ್‌ನ ಜಾಗತಿಕ ವಿಳಾಸ ಪುಸ್ತಕದ ಪರಿಕಲ್ಪನೆಯನ್ನೇ ಅಡಿಮೇಲು ಮಾಡಿಬಿಡುವ ತನಕ ಈ ವಿರೋಧ ಬೆಳೆಯಿತು. ಈ ಎಲ್ಲಾ ಒತ್ತಡಗಳಿಂದ ಅಮೆರಿಕ ಕೂಡಾ ಬಗ್ಗಬೇಕಾಯಿತು. ಇದೊಂದು ರಾಜತಾಂತ್ರಿಕ ಸಮಸ್ಯೆಯನ್ನೇ ತಂದೊಡ್ಡಬಹುದು ಎಂಬುದರಿಂದ ಐಕ್ಯಾನ್ ಅನ್ನು ಅಮೆರಿಕ ಸರ್ಕಾರದ ನಿಯಂತ್ರಣದಿಂದ ಹೊರ ತರುವ ಪ್ರಕ್ರಿಯೆಗೆ ಸರಿಯಾದ ಚಾಲನೆ ದೊರೆಯಿತು. ಸೆಪ್ಟೆಂಬರ್ 30ರಿಂದ ಐಕ್ಯಾನ್ ಒಂದು ಸ್ವತಂತ್ರ ಸರ್ಕಾರೇತರ ಸಂಸ್ಥೆಯಾಯಿತು.

ಅಂದರೆ ಈಗ ಇಂಟರ್ನೆಟ್ ಸಂಪೂರ್ಣ ಸ್ವತಂತ್ರವೇ? ಈ ಪ್ರಶ್ನೆಗೆ ಸರಳ ಉತ್ತರವಿಲ್ಲ. ತಾಂತ್ರಿಕವಾಗಿ ನೋಡಿದರೆ ಈ ಹಿಂದೆಯೂ ಇಂಟರ್ನೆಟ್ ಬಹುತೇಕ ಸ್ವತಂತ್ರವಾಗಿಯೇ ಇತ್ತು. ಇಂಟರ್ನೆಟ್ ವಿಳಾಸಗಳಿಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರಕ್ಕೆ ಬಹುದೊಡ್ಡ ನಿಯಂತ್ರಣವೇನೂ ಇರಲಿಲ್ಲ. ಐಕ್ಯಾನ್ ಜೊತೆಗೆ ಸರ್ಕಾರದ ಕರಾರೊಂದು ನವೀಕರಣಗೊಳ್ಳುತ್ತಿತ್ತು ಎನ್ನುವುದನ್ನು ಹೊರತು ಪಡಿಸಿದರೆ ಬೇರೇನೂ ಇರಲಿಲ್ಲ. ಅಮೆರಿಕದ ಕೆಲವು ಸೆನೆಟರ್‌ಗಳು ಐಕ್ಯಾನ್ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡುತ್ತಿರುವುದರ ವಿರುದ್ಧ ಇದ್ದರು.

ಅವರು ವಿರೋಧ ಇನ್ನೂ ಮುಂದುವರಿದಿದೆ. ಈ ಕುರಿತಂತೆ ಹಲವು ಮೊಕದ್ದಮೆಗಳನ್ನು ಹೂಡಿ ಇಡೀ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಕೆಲಸವೂ ನಡೆಯಿತು. ಅವರು ಮುಂದಿಡುತ್ತಿರುವ ವಾದದಂತೆ ಐಕ್ಯಾನ್ ಸ್ವತಂತ್ರವಾದರೆ ರಷ್ಯಾ, ಚೀನಾ ಮತ್ತು ಸೌದಿ ಅರೇಬಿಯಾದಂಥ ರಾಷ್ಟ್ರಗಳು ತಮ್ಮ ಬಲವನ್ನು ಉಪಯೋಗಿಸಿ ಇಂಟರ್ನೆಟ್ ಅನ್ನು ನಿಯಂತ್ರಿಸಲು ಹೊರಡುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ

ಇದು ಅನಗತ್ಯ ಭಯ. ಐಕ್ಯಾನ್‌ ನಿರ್ವಹಣೆಗೂ ಇಂಟರ್ನೆಟ್‌ನಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಹೆಚ್ಚಿನ ಸಂಬಂಧವೇನೂ ಇಲ್ಲ. ಚೀನಾ ಈಗಾಗಲೇ ತನ್ನ ಮಹಾಗೋಡೆಯನ್ನು ಇಂಟರ್ನೆಟ್ ಜಗತ್ತಿಗೂ ವಿಸ್ತರಿಸಿಕೊಂಡಿದೆ. ಅದು ಮುಂದುವರಿಯಲಿದೆ. ರಷ್ಯಾ, ಸೌದಿ ಅರೇಬಿಯಾ, ಉತ್ತರ ಕೊರಿಯಾದಂಥ ದೇಶಗಳು ಇದೇ ಕೆಲಸವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಿವೆ. ಐಕ್ಯಾನ್‌ ಆಡಳಿತದ ಬದಲಾವಣೆಯಾದ ಮೇಲೂ ಇದು ಮುಂದುವರಿಯುತ್ತದೆ.

ಹಾಗಾದರೆ ಐಕ್ಯಾನ್ ಸ್ವತಂತ್ರವಾದ್ದರಿಂದ ಏನು ಸಂಭವಿಸಿತು? ಈ ಪ್ರಶ್ನೆಗೆ ಇರುವ ಉತ್ತರ: ಸಾಂಕೇತಿಕ ಎನ್ನುವ ಮಟ್ಟದಲ್ಲಿ ಇಂಟರ್ನೆಟ್ ಅಮೆರಿಕ ಸರ್ಕಾರದ ನಿಯಂತ್ರಣದಿಂದ ದೂರವಾಯಿತು ಎಂಬುದಷ್ಟೇ. ಇದು ಇಂಟರ್ನೆಟ್‌ನ ನಿರ್ವಹಣೆಯನ್ನು ಸ್ವತಂತ್ರವಾದ ಜಾಗತಿಕ ಸಮುದಾಯಕ್ಕೆ ಬಿಟ್ಟು ಕೊಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಐಕ್ಯಾನ್‌ನ ಉತ್ತರದಾಯಿತ್ವ ಮತ್ತು ವ್ಯಾಜ್ಯಗಳನ್ನು ಬಗೆಹರಿಸುವುದಕ್ಕೆ ಸಂಬಂಧಿಸಿದ ನೀತಿಗಳು ಈ ಹಿಂದೆಯೂ ಸ್ಪಷ್ಟವಾಗಿರಲಿಲ್ಲ. ಈಗಲೂ ಸ್ಪಷ್ಟವಾಗಿಲ್ಲ. ಸದ್ಯದ ಮಟ್ಟಿಗೆ ವ್ಯಾಜ್ಯಗಳೂ ಕ್ಯಾಲಿಫೋರ್ನಿಯಾ ರಾಜ್ಯದೊಳಗೆ ಬಗೆಹರಿಸಬೇಕಾಗುತ್ತದೆ. ಹಾಗೆಯೇ ಇಂಥ ವ್ಯಾಜ್ಯಗಳು ಹಾಗೂ ದೂರುಗಳು ಬಂದಾಗ ಅದನ್ನು ಈ ಹಿಂದೆಯೂ ಐಕ್ಯಾನ್ ಸರಿಯಾಗಿ ನಿರ್ವಹಿಸಿರಲಿಲ್ಲ. ಅದೇ ಸ್ಥಿತಿ ಇನ್ನೂ ಮುಂದುವರಿಯಬಹುದು ಎಂಬಂತೆಯೇ ಕಾಣಿಸುತ್ತದೆ.

ತಾಂತ್ರಿಕವಾಗಿ ನೋಡಿದರೆ ಐಕ್ಯಾನ್ ಈಗಲೂ ಅಮರಿಕದ ಕಾನೂನಿನ ಅಡಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ವಿಳಾಸಗಳಿಗೆ ಸಂಬಂಧಿಸಿದ ವ್ಯಾಜ್ಯಗಳೆಲ್ಲವೂ ಅಂತಾರಾಷ್ಟ್ರೀಯ ಸ್ವರೂಪವು. ನಿರ್ದಿಷ್ಟ ವಿಳಾಸಗಳ ಜೊತೆಗೆ ವಿವಿಧ ದೇಶಗಳಲ್ಲಿ ನೋಂದಣಿಯಾಗಿರುವ ಬ್ರಾಂಡ್‌ಗಳು, ವಿವಿಧ ಪೇಟೆಂಟ್‌ಗಳು ಹೀಗೆ ಬಹಳ ಸಂಕೀರ್ಣವಾದ ವಿಚಾರಗಳಿವೆ. ಈಗಾಗಲೇ ಬೃಹತ್ ಬ್ರಾಂಡ್‌ಗಳ ಹೆಸರಲ್ಲಿ ಇಂಟರ್ನೆಟ್ ವಿಳಾಸವನ್ನು ನೋಂದಾಯಿಸಿಕೊಂಡು ಅದನ್ನೇ ಒಂದು ವ್ಯಾಪಾರವನ್ನಾಗಿ ಮಾಡಿಕೊಂಡಿರುವ ವ್ಯವಸ್ಥೆ ಇದೆ. ಇದನ್ನು ಮಟ್ಟ ಹಾಕುವುದಕ್ಕೆ ಸದ್ಯದ ಬದಲಾವಣೆಯಿಂದ ಸಾಧ್ಯವಿಲ್ಲ.

ಇಂಟರ್ನೆಟ್ ವ್ಯವಸ್ಥೆಯೆಂಬುದು ಕಳೆದ ಮೂರು ದಶಕಗಳ ಅವಧಿಯಲ್ಲಿ ನಿರೀಕ್ಷೆಗೆ ಮೀರಿ ಬೆಳೆದಿದೆ. ಅದನ್ನು ನಿರ್ವಹಿಸುವ ವ್ಯವಸ್ಥೆ ಅಷ್ಟೊಂದು ವೇಗದಲ್ಲಿ ಬೆಳೆಯದೇ ಇರುವುದರಿಂದ ಈ ಎಲ್ಲಾ ಸಮಸ್ಯೆಗಳಿವೆ. ಸದ್ಯದ ಬದಲಾವಣೆಯನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿ ಮುಂದಿನ ಬದಲಾವಣೆಗಳಿಗೆ ಒತ್ತಡ ಹೇರುವ ಕೆಲಸ ಇಂಟರ್ನೆಟ್‌ನ ಪಾಲುದಾರರಾಗಿರುವ ಉದ್ಯಮಗಳು, ಬಳಕೆದಾರರು ಮತ್ತು ಸರ್ಕಾರದಿಂದ ನಡೆಯಬೇಕಾಗಿದೆ. ಹಾಗಾದಾಗ ನಿರ್ವಹಣಾ ತಂತ್ರ ಕೂಡಾ ತಂತ್ರಜ್ಞಾನದ ಜೊತೆಗೇ ವಿಕಾಸವಾಗುವಂಥ ಸುಸ್ಥಿರ ಮಾದರಿಯೊಂದನ್ನು ಕಂಡುಕೊಳ್ಳಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT