ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್‌: ಭಾಷೆಗೆ ಹೊಸ ಸವಾಲು

Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

ಇಂಟರ್‌ನೆಟ್‌ನ ಭಾಷೆ ಬದಲಾಗುತ್ತಿದೆ. ಇಲ್ಲಿ ಇಂಗ್ಲಿಷ್‌ಗೆ ಇದ್ದ ಪಾರಮ್ಯ ಇಲ್ಲವಾಗುತ್ತಿದೆ. ಇದೇನು ಇದ್ದಕ್ಕಿದ್ದಂತೆಯೇ ನಡೆದ ಬದಲಾವಣೆಯಲ್ಲ.

ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಇಂಟರ್‌ನೆಟ್‌ನ ಶೇಕಡಾ 80ರಷ್ಟು ಇಂಗ್ಲಿಷ್ ಇತ್ತು. ಫ್ರೆಂಚ್, ಜರ್ಮನ್, ಸ್ಪ್ಯಾನಿಶ್, ಚೈನೀಸ್, ರಷ್ಯನ್, ಜಪಾನಿ, ಕೊರಿಯನ್ ಮತ್ತು ಭಾರತೀಯ ಭಾಷೆಗಳು ಇಂಟರ್‌ನೆಟ್‌ನಲ್ಲಿ ಒಂದು ಸ್ಥಾನ ಕಂಡುಕೊಳ್ಳಲು ತೊಡಗಿದ ಮೇಲೆ ಇಂಗ್ಲಿಷ್‌ನ ಪಾರಮ್ಯ ಕುಸಿಯುತ್ತಾ ಬಂತು. 2011ರ ವೇಳೆಗೆ ಇಂಟರ್‌ನೆಟ್‌ನಲ್ಲಿದ್ದ ಇಂಗ್ಲಿಷ್‌ನ ಪ್ರಮಾಣ ಶೇಕಡಾ 27.

ತೀರಾ ಇತ್ತೀಚಿನವರೆಗೆ ಭಾರತದ ಸೈಬರ್ ಜಗತ್ತಿನಲ್ಲಿಯೂ ಇಂಗ್ಲಿಷ್‌ನ ಯಜಮಾನಿಕೆಯೇ ಇತ್ತು. ಎಷ್ಟರ ಮಟ್ಟಿಗೆಂದರೆ ಅನೇಕ ಬಳಕೆದಾರರು ರೋಮನ್ ಅಕ್ಷರಗಳಲ್ಲೇ ಭಾರತೀಯ ಭಾಷೆಗಳನ್ನು ಬರೆಯುವುದು ಉತ್ತಮವಲ್ಲವೇ ಎಂದು ವಾದಿಸುತ್ತಿದ್ದರು.

ಯೂನಿಕೋಡ್ ಶಿಷ್ಟತೆಯ ಜೊತೆಗೆ ಇದು ಬದಲಾಗುತ್ತಾ ಬಂತು. ಆದರೆ ನಿಜವಾದ ಬದಲಾವಣೆ ಬಂದದ್ದು ಮೊಬೈಲ್ ಕ್ರಾಂತಿಯೊಂದಿಗೆ. ಅಲ್ಲಿಯ ತನಕ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಸೀಮಿತವಾಗಿದ್ದ ಇಂಟರ್‌ನೆಟ್‌ ಮೊಬೈಲಿಗೆ ಬಂದದ್ದು ಒಂದರ್ಥದಲ್ಲಿ ಇಂಟರ್‌ನೆಟ್‌ನ ಸಾರ್ವತ್ರೀಕರಣಕ್ಕೆ ಕಾರಣವಾಯಿತು. ಕಳೆದ ಹತ್ತು ವರ್ಷಗಳಲ್ಲಿ ಇಂಟರ್‌ನೆಟ್‌ ಬಳಕೆದಾರರಾದವರಲ್ಲಿ ಹೆಚ್ಚಿನವರು ಅದನ್ನು ಕಂಡದ್ದೇ ಮೊಬೈಲ್ ಮೂಲಕ.

ಇದು ಈಗ ಮತ್ತೊಂದು ತಿರುವನ್ನು ಪಡೆದುಕೊಂಡಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದ ಇಂಟರ್ನೆಟ್ ಬಳಕೆದಾರರಲ್ಲಿ ಶೇಕಡಾ 78ರಷ್ಟು ಮಂದಿ ಅದನ್ನು ಬಳಸುವುದು ತಮ್ಮ ಮೊಬೈಲ್‌ಗಳ ಮೂಲಕ. ಇದಕ್ಕಿಂತ ಕುತೂಹಲಕಾರಿ ವಿಚಾರವೊಂದನ್ನು ಇದೇ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಗೂಗಲ್–ಕೆಪಿಎಂಜಿ ಸಮೀಕ್ಷೆ ಹೇಳಿದೆ.

ಅದರಂತೆ ಹೊಸತಾಗಿ ಸೇರ್ಪಡೆಯಾಗುತ್ತಿರುವ ಪ್ರತೀ 10 ಮಂದಿ ಇಂಟರ್‌ನೆಟ್‌ ಬಳಕೆದಾರರಲ್ಲಿ 9 ಮಂದಿಯೂ ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಸುವವರು. ಈಗಲೂ ಭಾರತದ ಇಂಟರ್‌ನೆಟ್‌ ಬಳಕೆದಾರರಲ್ಲಿ ಹೆಚ್ಚಿನವರು ಇಂಗ್ಲಿಷ್ ಬಳಸುತ್ತಾರೆ. ಆದರೆ 2021ರ ವೇಳೆಗೆ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿ ಇಂಟರ್‌ನೆಟ್‌ನಲ್ಲಿ  ಅತಿ ಹೆಚ್ಚು ಬಳಕೆಯಲ್ಲಿರುವ ಭಾಷೆಯ ಸ್ಥಾನಕ್ಕೆ ಹಿಂದಿ ಬರಲಿದೆ. ಕನ್ನಡ, ತಮಿಳು, ಬಂಗಾಳಿ ಮತ್ತು ಮರಾಠಿ ಭಾಷೆಯಲ್ಲಿ ವ್ಯವಹರಿಸುವವರು ಅತಿ ಹೆಚ್ಚು ಪ್ರಮಾಣದಲ್ಲಿ ಆನ್‌ಲೈನ್ ಸೇವೆಗಳಿಗೆ ಹೊಂದಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ.

ಈ ಅಂಕಿ-ಅಂಶಗಳೇನೋ ಸ್ಫೂರ್ತಿದಾಯಕವಾಗಿವೆ. ಆದರೆ ಇದು ಭಾರತೀಯ ಭಾಷೆಗಳು ನಡೆಸಬೇಕಾದ ಮತ್ತೊಂದು ಹಂತದ ಹೋರಾಟದ ಸೂಚನೆಗಳೂ ಆಗಿವೆ ಎಂಬುದನ್ನು ನಾವು ಮರೆಯುವಂತಿಲ್ಲ. ಫೇಸ್‌ಬುಕ್, ಗೂಗಲ್‌ನಂತಹ ಸಂಸ್ಥೆಗಳೇನೋ ತಮ್ಮ ಸೇವೆಯ ಕರಾರುಗಳನ್ನು ಕನ್ನಡದಂಥ ಭಾಷೆಗಳಲ್ಲಿಯೂ ಒದಗಿಸುತ್ತಿವೆ. ಆ್ಯಪ್ ಸ್ಟೋರ್‌ನಿಂದ ಕ್ಷಣಾರ್ಧದಲ್ಲಿ ಮೊಬೈಲಿಗಿಳಿದು ಇನ್‌ಸ್ಟಾಲ್ ಆಗಿಬಿಡುವ ಎಷ್ಟು ಆ್ಯಪ್‌ಗಳು ನಮಗೆ ಕನ್ನಡದಲ್ಲಿ ಮಾಹಿತಿ ಒದಗಿಸುತ್ತಿವೆ. ಅಥವಾ ಭಾರತೀಯ ಭಾಷೆಗಳಲ್ಲಿ ಒದಗಿಸುತ್ತಿವೆ ಎಂಬ ಪ್ರಶ್ನೆಯನ್ನು ಎತ್ತಿಕೊಂಡರೆ ಸಮಸ್ಯೆ ಅರ್ಥವಾಗುತ್ತದೆ.

ಹೆಚ್ಚಿನ ಆ್ಯಪ್‌ಗಳಲ್ಲಿ ಯೂಸರ್ ಇಂಟರ್‌ಫೇಸ್ ಎಂಬುದು ಅಕ್ಷರಗಳಲ್ಲಿ ಇರುವುದರ ಬದಲಿಗೆ ಸಂಜ್ಞೆಗಳಲ್ಲಿ ಇರುತ್ತದೆ. ಇಲ್ಲಿ ಭಾಷೆಗೆ ಅಂಥಾ ಪ್ರಾಮುಖ್ಯವೇನೂ ಇಲ್ಲ ಎಂದು ವಾದಕ್ಕೆ ಹೇಳಬಹುದು. ಸಮಸ್ಯೆ ಕೇವಲ ಆ್ಯಪ್ ಬಳಸುವ ಸಂಗತಿಯಷ್ಟೇ ಅಲ್ಲ. ಇದು ಆ್ಯಪ್ ಒದಗಿಸುವವರು ಏನೇನು ಷರತ್ತುಗಳ ಅನ್ವಯ ನಮಗೆ ಅದನ್ನು ಒದಗಿಸುತ್ತಿದ್ದಾರೆ. ನಮ್ಮ ಯಾವೆಲ್ಲಾ ಮಾಹಿತಿಗಳನ್ನು ಅವರು ಸಂಗ್ರಹಿಸುತ್ತಿದ್ದಾರೆ ಎಂಬುದನ್ನು ಬಳಕೆದಾರ ತಿಳಿದುಕೊಳ್ಳಬೇಡವೇ?

ಈ ವಿಷಯಕ್ಕೆ ಬಂದರೆ ಭಾರತೀಯ ಭಾಷೆಗಳ ಕೀಲಿಮಣೆಯನ್ನು ಒದಗಿಸುವವರೂ ತಮ್ಮ ಸೇವಾ ಷರತ್ತುಗಳನ್ನೂ ನಮ್ಮಿಂದ ಸಂಗ್ರಹಿಸುವ ಮಾಹಿತಿ ಯಾವುದು ಎಂಬುದನ್ನೆಲ್ಲಾ ಇಂಗ್ಲಿಷ್‌ನಲ್ಲೇ ನೀಡುತ್ತಾರೆ ಎಂಬುದು ಕಟು ವಾಸ್ತವ. ಹೊಸತಾಗಿ ಇಂಟರ್‌ನೆಟ್‌ ಬಳಸುವವರಲ್ಲಿ ಶೇಕಡಾ 90ರಷ್ಟು ಮಂದಿ ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಸುವವರು ಎಂಬುದು ತಿಳಿದನಂತರವೂ ಹೆಚ್ಚಿನ ಆ್ಯಪ್ ತಯಾರಕರು ತಮ್ಮ ಉತ್ಪನ್ನದ ಮಾಹಿತಿಯನ್ನು ಭಾರತೀಯ ಭಾಷೆಗಳಲ್ಲಿ ಒದಗಿಸುತ್ತಿಲ್ಲ ಎಂಬುದನ್ನು ಏನನ್ನು ಹೇಳುತ್ತಿದೆ?

ಈ ಪ್ರಶ್ನೆಗೆ ಉತ್ತರ ಬಹಳ ಸರಳವಾಗಿದೆ. ನಾವು ಅಂಗಡಿಗಳಲ್ಲಿ ಖರೀದಿಸುವ ಎಷ್ಟು ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಮಾಹಿತಿ ಇರುತ್ತದೆ. ನಾವು ದಿನ ನಿತ್ಯ ಬಳಸುವ ಉತ್ಪನ್ನಗಳ ಪ್ರಖ್ಯಾತ ಬ್ರಾಂಡ್‌ಗಳ ಹೆಸರುಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಔಷಧಗಳಂತೂ ನಮ್ಮ ದೇಹದ ಹಿತಕ್ಕೆ ಸಂಬಂಧಿಸಿದವು. ಇವುಗಳ ಬಳಕೆಯ ಷರತ್ತು/ನಿಯಮಗಳಾದರೂ ಗ್ರಾಹಕರಿಗೆ ತಿಳಿದಿರುವ ಭಾಷೆಯಲ್ಲಿ ಇರಬೇಕಲ್ಲವೇ? ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆಗೆ ಹೋಲಿಸಿದರೆ ಈ ಬಗೆಯ ಉತ್ಪನ್ನಗಳನ್ನು ಬಳಸುವ ಭಾರತೀಯ ಭಾಷೆಗಳನ್ನು ಮಾತ್ರ ಬಲ್ಲವರ ಸಂಖ್ಯೆ ಇನ್ನೂ ದೊಡ್ಡದಲ್ಲವೇ? ಇಷ್ಟಾಗಿಯೂ ಇದಕ್ಕೆ ಸಂಬಂಧಿಸಿದ ಕಟ್ಟುನಿಟ್ಟಾದ ನಿಯಮಗಳೇಕಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೆ ಇರುವ ಉತ್ತರವೇ ಮಾಹಿತಿ ತಂತ್ರಜ್ಞಾನಾಧಾರಿತ ಸೇವೆಯನ್ನು ನೀಡುವ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಆದರೆ ನಮ್ಮ ನೀತಿ ನಿರೂಪಕರಿಗೆ ಈ ಪ್ರಶ್ನೆಗಳು ಕಾಡುವುದೇ ಇಲ್ಲ. ಪರಿಣಾಮವಾಗಿ ದಿನ ಬಳಕೆಯ ಅನೇಕ ಉತ್ಪನ್ನಗಳ ಸಂದರ್ಭದಲ್ಲಿ ಅನುಭವಿಸಿದ ಮಾಹಿತಿಯ ಕೊರತೆಯನ್ನೇ ಮಾಹಿತಿ ತಂತ್ರಜ್ಞಾನದ ಉತ್ಪನ್ನಗಳ ವಿಚಾರದಲ್ಲಿಯೂ ಅನುಭವಿಸುತ್ತಿದ್ದೇವೆ.

ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್‌ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ಮಾರುಕಟ್ಟೆ ವಿಸ್ತಾರವಾಗುತ್ತಿದೆ ಎಂದರ್ಥ. ಈ ಮಾರುಕಟ್ಟೆಯಲ್ಲಿ ಪಾಲನ್ನು ಪಡೆಯಲು ಬರುವ ಅನೇಕ ಕಂಪೆನಿಗಳು ಭಾರತೀಯವೇ ಆಗಿರಬೇಕೆಂದೇನೂ ಇಲ್ಲ. ಏಕೆಂದರೆ ಈ ತಂತ್ರಜ್ಞಾನವೇ ವಿಶ್ವವ್ಯಾಪಿಯಾದುದು. ಈ ಕಂಪೆನಿಗಳು ಒಂದು ಭಾಷೆಯಿದ್ದರೆ ತನಗೆ ಅನುಕೂಲ ಎಂದು ಭಾವಿಸುವುದು ಸಹಜ. ನಮ್ಮ ಮಾರುಕಟ್ಟೆಯಲ್ಲಿ ಪಾಲು ಬೇಕಾದರೆ ನಮ್ಮ ಭಾಷೆಯಲ್ಲಿಯೂ ಸೇವೆಯಿರಬೇಕು ಎಂಬುದನ್ನು ಹೇಳುವುದಕ್ಕೆ ಗ್ರಾಹಕರು ಮುಂದಾಗಬೇಕು. ಆದರೆ ಗ್ರಾಹಕರ ಧ್ವನಿಗೆ ಬಲಬರುವುದಕ್ಕೆ ಸರ್ಕಾರ ಕಾನೂನುಗಳನ್ನೂ ರೂಪಿಸಬೇಕು. ಇಲ್ಲಿಯ ತನಕ ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರಗಳಾಗಲೀ ಇಂಥದ್ದೊಂದು ಗ್ರಾಹಕ ಪರ ಕಾನೂನಿನ ಬಗ್ಗೆ ಆಲೋಚಿಸಿರುವಂತೆ ಕಾಣಿಸುವುದಿಲ್ಲ.

‘ಅಮೆಜಾನ್’ ತಯಾರಿಕೆಯ ಕಿಂಡಲ್ ಎಂಬ ಇ-ಪುಸ್ತಕ ಓದುವ ಸಲಕರಣೆಯ ವಿಚಾರದಲ್ಲಿ ನಡೆದ ಚರ್ಚೆ ಎಲ್ಲರಿಗೂ ನೆನಪಿರಬಹುದು. ‘ಅಮೆಜಾನ್’ ಸ್ವಯಂ ಪ್ರಕಾಶನ ಸವಲತ್ತನ್ನು ಬಳಸಿಕೊಂಡು ಲೇಖಕ ಮತ್ತು ಪ್ರಕಾಶಕ ವಸುಧೇಂದ್ರ ಅವರು ಪ್ರಕಟಿಸಿದ್ದ ಪುಸ್ತಕವನ್ನು ಅಮೆಜಾನ್ ಕಿಂಡಲ್‌ನಿಂದ ಕಿತ್ತೊಗೆದಿತ್ತು. ಇದರ ವಿರುದ್ಧ ನಡೆದ ಪ್ರತಿಭಟನೆ ಅಮೆಜಾನ್‌ನಂಥ ಜಾಗತಿಕ ದೈತ್ಯ ಕೂಡಾ ಮೆತ್ತಗಾಗುವಂತೆ ಮಾಡಿತು.

ಭಾರತದಲ್ಲಿ ಮಾರಾಟವಾಗುವ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಭಾರತದ ಸಂವಿಧಾನದ ಅಂಗೀಕರಿಸಿರುವ ಎಲ್ಲಾ ಭಾಷೆಗಳ ಬಳಕೆಯೂ ಸಾಧ್ಯವಿರಬೇಕು ಎಂದು ಕಾನೂನಿದ್ದರೆ ಇಂಥದ್ದೊಂದು ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಕನ್ನಡ ಬಳಸುವವರ ಸಂಖ್ಯೆಯ ಅರ್ಧದಷ್ಟೂ ಇಲ್ಲದ ಭಾಷೆಗಳಲ್ಲಿ ತಮ್ಮ ತಂತ್ರಾಂಶದ ಆವೃತ್ತಿಗಳನ್ನು ಬಿಡುಗಡೆ ಮಾಡುವ ಜಾಗತಿಕ ಮಾಹಿತಿ ತಂತ್ರಜ್ಞಾನ ದೈತ್ಯರು ಭಾರತೀಯ ಭಾಷೆಗಳ ವಿಚಾರ ಬಂದಾಗ ಮಾತ್ರ ಹಿಂದೆಗೆಯುವುದಕ್ಕೆ ಮುಖ್ಯ ಕಾರಣ ನಮ್ಮ ನೀತಿ ನಿರೂಪಕರ ಸೋಮಾರಿತನ. ಇದು ಇನ್ನೂ ಮುಂದುವರೆದರೆ ಅದರ ಪರಿಣಾಮ ಬಹಳ ಭೀಕರವಾಗಿರುವ ಸಾಧ್ಯತೆ ಇದೆ.

ಯೂನಿಕೋಡ್ ಶಿಷ್ಟತೆ ರೂಪುಗೊಳ್ಳುವ ತನಕ ಮಾಹಿತಿ ತಂತ್ರಜ್ಞಾನಾಧಾರಿತ ಸೇವೆಗಳಲ್ಲಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಭಾರತೀಯ ಭಾಷೆಗಳಿಲ್ಲದೇ ಇರುವುದಕ್ಕೆ ತಾಂತ್ರಿಕ ಕಾರಣಗಳಿದ್ದವು. ಈಗ ಆ ಬಗೆಯ ಸಬೂಬುಗಳಿಗೂ ಅವಕಾಶವೇ ಇಲ್ಲದಂಥ ಸ್ಥಿತಿಯನ್ನು ತಂತ್ರಜ್ಞಾನವೇ ಸೃಷ್ಟಿಸಿದೆ. ಇನ್ನು ಮುಂದೆ ಬೇಕಿರುವುದು ಮನುಷ್ಯ ಪ್ರಯತ್ನ. ದಿನಬಳಕೆಯ ವಸ್ತುಗಳ ಮೇಲೆ ಕನ್ನಡವಿಲ್ಲದೇ ಇದ್ದರೆ ಅದನ್ನು ಕಣ್ಣಲ್ಲಿ ನೋಡಿ, ಕೈಯಲ್ಲಿ ಮುಟ್ಟಿ ಖಾತರಿ ಪಡಿಸಿಕೊಂಡು ಖರೀದಿಸಬಹುದು. ಆದರೆ ಮಾಹಿತಿ ತಂತ್ರಜ್ಞಾನಾಧಾರಿತ ಸೇವೆ ಮತ್ತು ಉತ್ಪನ್ನಗಳ ಸ್ವರೂಪವೇ ಬೇರೆ. ಇಲ್ಲಿ ಭಾಷೆಯೂ ಉತ್ಪನ್ನದ ಅವಿಭಾಜ್ಯ ಅಂಗ. ಅಲ್ಲಿ ಒಂದು ಭಾಷೆ ಇಲ್ಲವಾಗುವುದು ಎಂದರೆ ನಮ್ಮ ಭಾಷೆಗಳನ್ನು ನಾವೇ ಅಪ್ರಸ್ತುತಗೊಳಿಸುವುದು ಎಂದರ್ಥ. ಈ ಎಚ್ಚರ ನೀತಿ ನಿರೂಪಕರಲ್ಲಿ ಇಲ್ಲದೇ ಇದ್ದರೆ ಅವರನ್ನು ಎಚ್ಚರಿಸಬೇಕಾದ ಜವಾಬ್ದಾರಿ ಗ್ರಾಹಕರಾಗಿರುವ ನಮ್ಮದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT