ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಥ ಬೇಂದ್ರೆ ಹುಚ್ಚರುಎಲ್ಲಾದರೂ ಇದ್ದಾರೆಯೇ?

Last Updated 29 ಜನವರಿ 2011, 18:30 IST
ಅಕ್ಷರ ಗಾತ್ರ

ಇದು ಎತ್ತಣ ಮಾಮರ, ಎತ್ತಣ ಕೋಗಿಲೆಯ ಕಥೆ. ಐದು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಪರಪ್ಪನ ಅಗ್ರಹಾರದ ಸಾರಿಗೆ ಕಚೇರಿಗೆ ಹೋಗಿದ್ದೆ. ಅಲ್ಲಿ ಕುಳಿತಿದ್ದ ಸಹಾಯಕ ಸಾರಿಗೆ ಅಧಿಕಾರಿಯವರಿಗೆ ನನ್ನ ಕಾರ್ಡ್ ಕೊಟ್ಟು ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಕೋರಿಕೊಂಡೆ. ಅವರು ನನ್ನ ಕೈ ಹಿಡಿದುಕೊಂಡು ನಮ್ಮ ಕಚೇರಿಯಲ್ಲಿ ತಮಗೆ ಪರಿಚಯ ಇರುವ ನನ್ನ ಸಂಪಾದಕರೂ ಸೇರಿದಂತೆ ಎಲ್ಲರ ಹೆಸರು ಹೇಳತೊಡಗಿದರು. ಅವರ ಮೇಜಿನ ಮೇಲೆ ಇದ್ದ ಹೆಸರಿನ ಫಲಕದಲ್ಲಿ ಡಾ.ಜಿ.ಕೃಷ್ಣಪ್ಪ ಎಂದು ಇದ್ದುದನ್ನು ನೋಡಿ ‘ನೀವು ಎಂಥ ಡಾಕ್ಟರು’ ಎಂದು ಕೇಳಿದೆ. ಅವರು, ‘ನಾನು ಕವಿ ಬೇಂದ್ರೆ ಅವರ ಮೇಲೆ ಪಿಎಚ್.ಡಿ ಮಾಡಿರುವೆ’ ಎಂದಾಗ ಕನ್ನಡ ಎಂ.ಎ ಮಾಡಿದ ನನಗೇ ಗಲಿಬಿಲಿ. ನಾನು ಅಷ್ಟು ಪ್ರಶ್ನೆ ಕೇಳಿದ್ದು ಸಾಕಿತ್ತು. ಡಾ.ಕೃಷ್ಣಪ್ಪ ನನ್ನ ಕೈ ಹಿಡಿದುಕೊಂಡು ಒಂದು ಗಂಟೆ ಮಾತನಾಡಿದರು. ಅತ್ತ ನನ್ನ ಲೈಸೆನ್ಸ್‌ಗೆ ಸಂಬಂಧಪಟ್ಟಂತೆ ಕೆಲಸ ಸಾಗಿತ್ತು. ಆಗೀಗ ಕಾಗದ ಪತ್ರಗಳು ಬರುತ್ತಿದ್ದುವು ಅದಕ್ಕೆ ಅವರು ಸಹಿ ಹಾಕುತ್ತಿದ್ದರು. ಆದರೆ, ಬೇಂದ್ರೆ ಕವನಗಳನ್ನು ಕಂಠೋದ್ಗತವಾಗಿ ಕೃಷ್ಣಪ್ಪ ಹೇಳುತ್ತಿದ್ದ ರೀತಿ, ಕವಿತೆಗಳನ್ನು ಅರ್ಥೈಸುತ್ತಿದ್ದ ರೀತಿ ನನ್ನನ್ನು ದಂಗು ಬಡಿಸಿತು. ‘ಹೀಗೂ ಉಂಟೇ? ಇವರ ಹಾಗೆ ಎಷ್ಟು ಜನ ಕನ್ನಡ ಅಧ್ಯಾಪಕರು, ವಿದ್ಯಾರ್ಥಿಗಳು ಬೇಂದ್ರೆಯವರನ್ನು ಓದಿಕೊಂಡಿದ್ದಾರೆ’ ಎಂದು ಮನಸ್ಸಿನಲ್ಲಿಯೇ ಉದ್ಗರಿಸಿದೆ.

ಕೃಷ್ಣಪ್ಪ ಹುಟ್ಟಿದ್ದು ಬೆಂಗಳೂರಿನಲ್ಲಿ. ಮನೆಯಲ್ಲಿ ಕಡುಬಡತನ. ತಂದೆ, ಲಕ್ಷ್ಮೀಶನ ಜೈಮಿನಿ ಭಾರತವನ್ನು ಪಠಿಸುತ್ತಿದ್ದರು. ತಾಯಿಗೆ ಕಥೆ ಹೇಳುವುದರಲ್ಲಿ ಅದಮ್ಯ ಆಸಕ್ತಿ. ಕೃಷ್ಣಪ್ಪ ಅವರಿಗೆ ಕಲಿಸಿದವರು ಜಿ.ಶಂ.ಪರಮಶಿವಯ್ಯ, ಕೋಣಂದೂರು ಲಿಂಗಪ್ಪ ಅವರಂಥ ಶ್ರೇಷ್ಠ  ಶಿಕ್ಷಕರು. ಬೇಂದ್ರೆಯವರ ‘ಇಳಿದು ಬಾ ತಾಯಿ,’ ‘ಕುಣಿಯೋಣು ಬಾರಾ’ ಕವಿತೆಗಳ ಪಾಠ ಕೇಳಿದ ಕೃಷ್ಣಪ್ಪ ಅವರಿಗೆ ಬೇಂದ್ರೆ ಕಾವ್ಯದ ಬಗ್ಗೆ ಆಸಕ್ತಿ ಬೆಳೆಯತೊಡಗಿತು. ಇನ್ನಷ್ಟು ಮತ್ತಷ್ಟು ಬೇಂದ್ರೆ ಕವಿತೆಗಳನ್ನು ಓದಬೇಕು ಎಂದರೆ ಪುಸ್ತಕ ಕೊಳ್ಳಲು ಹಣ ಇರಲಿಲ್ಲ. ಯಾರೋ ಹೇಳಿದರು ಸೆಂಟ್ರಲ್ ಲೈಬ್ರರಿಗೆ ಹೋದರೆ ಅಲ್ಲಿ ಪುಸ್ತಕಗಳು ಸಿಗುತ್ತವೆ ಎಂದು. ಕೃಷ್ಣಪ್ಪ ಹಳೆಯ ನೋಟುಪುಸ್ತಕದ ಹಾಳೆಗಳನ್ನು ತೆಗೆದುಕೊಂಡು ಲೈಬ್ರರಿಗೆ ಹೋಗಿ ಬೇಂದ್ರೆ ಕವಿತೆಗಳನ್ನು ಬರೆದುಕೊಂಡು ಬಂದರು. ಮನೆಯಲ್ಲಿ ಕುಳಿತು ಓದಿದರು.

ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಗಾಂಧಿ ಸಾಹಿತ್ಯ ಸಂಘದಲ್ಲಿ ಕೃಷ್ಣಪ್ಪ ಮತ್ತು ಅವರ ತಂಗಿ, ಜಿ.ಪಿ.ರಾಜರತ್ನಂ ಹಾಗೂ ಸಿದ್ದವನಹಳ್ಳಿ ಕೃಷ್ಣಶರ್ಮರ ತರಗತಿಗಳಿಗೆ ತಪ್ಪುದೇ ಹಾಜರಾಗುತ್ತಿದ್ದರು. ರಾಜರತ್ನಂ ಕನ್ನಡದ ದೊಡ್ಡ ಪರಿಚಾರಕ. ಅವರು ಕೃಷ್ಣಪ್ಪ ಮತ್ತು ಅವರ ತಂಗಿಗೆ, ‘ಕನ್ನಡದ ಕೆಲಸವನ್ನು ನಿಮಗೆ ಸರಿಕಂಡ ರೀತಿಯಲ್ಲಿ ಮಾಡಿರಿ’ ಎಂದು ಸೂಚಿಸಿದ್ದರು. ರಾಜರತ್ನಂ ಒಂದು ಕಡೆ ಬುದ್ಧನಂತೆ, ಇನ್ನೊಂದು ಕಡೆ ಮಹಾವೀರನಂತೆ ಕಾಣುತ್ತಿದ್ದ ಸಂತ. ಅವರು ಹೇಳಿದ ಮಾತು ಕೃಷ್ಣಪ್ಪನವರ ಮನದಲ್ಲಿ ಆಲದ ಮರದ ಹಾಗೆ ಬೇರು ಬಿಟ್ಟಿತು. ಅದು ಹೆಮ್ಮರವಾಗಿ ಬೆಳೆಯಲು ಹೆಚ್ಚು ಕಾಲ ಹಿಡಿಯಲಿಲ್ಲ. ಕನ್ನಡ ಓದಿದರೆ ನೌಕರಿ ಸಿಗುವುದಿಲ್ಲ ಎಂದು ಎಸ್.ಜೆ.ಪಾಲಿಟೆಕ್ನಿಕ್‌ನಲ್ಲಿ ಆಟೊಮೊಬೈಲ್ ಡಿಪ್ಲೊಮಾಕ್ಕೆ ಸೇರಿಕೊಂಡರು. ಅಲ್ಲಿ ಇಲ್ಲಿ ಕೆಲಸ ಮಾಡಿ ನಂತರ 1978ರಲ್ಲಿ ಸಾರಿಗೆ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇರಿಕೊಂಡರು.

86ರಲ್ಲಿ ಬೆಳಗಾವಿಗೆ ವರ್ಗವಾದಾಗ ಗೋಕಾಕಿನಲ್ಲಿ ನಿಂಗಣ್ಣ ಸಣ್ಣಕ್ಕಿ ಮತ್ತು ಕೃಷ್ಣಪ್ಪ ಸೇರಿಕೊಂಡು ಶಾಲಾ ಮಕ್ಕಳಿಗೆ ಮೊದಲ ಬೇಂದ್ರೆ ಗೀತ ಗಾಯನ ಸ್ಪರ್ಧೆ ಏರ್ಪಡಿಸಿದರು. ಆಗಿನಿಂದ ಈಗಿನ ವರೆಗೆ ಕೃಷ್ಣಪ್ಪ ಇಂಥ ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿದ್ದಾರೆ. ತಮ್ಮದೇ ಹಣ ಹಾಕಿಕೊಂಡು ಊರೂರು ಸುತ್ತಿದ್ದಾರೆ. ಸಭೆ, ಸಮಾರಂಭದ ಏರ್ಪಾಡಿಗೆಂದು ಅವರು ಎಂದೂ ಹಣ ಖರ್ಚ ಮಾಡಿಲ್ಲ. ಒಂದು ಶಾಲೆ, ಅಲ್ಲಿ ಒಂದು ಮೇಜು, ಒಂದೆರಡು ಕುರ್ಚಿ, ಮೇಜಿನ ಮೇಲೆ ಬೇಂದ್ರೆ ಫೋಟೊ. ಅದರ ಮುಂದೆ ಒಂದು ದೀಪ. ಶಾಲೆಯ ಶಿಕ್ಷಕರೇ ಗಾಯನ ಸ್ಪರ್ಧೆಯ ತೀರ್ಪುಗಾರರು. ವಿದ್ಯಾರ್ಥಿಗಳಿಗೆ ಬೇಂದ್ರೆ ಪುಸ್ತಕಗಳೇ ಬಹುಮಾನ. ಅದಕ್ಕೆ ಕೃಷ್ಣಪ್ಪನವರದೇ ದುಡ್ಡು. ಈ ಸ್ಪರ್ಧೆಗಳು, ಬೇಂದ್ರೆ ಕಾವ್ಯದ ದೊಡ್ಡ ಗುಣವಾದ ಉತ್ತರ ಕರ್ನಾಟಕದ ಗಂಡುಮೆಟ್ಟಿನ ಭಾಷೆಯ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕೆ.ಜಿ.ಎಫ್ ಗಡಿಯಲ್ಲಿನ ದೊಡ್ಡಪೆನ್ನಾಂಡಹಳ್ಳಿಯಂಥ ತೆಲುಗು ಪ್ರಧಾನ ಊರಿನಲ್ಲಿಯೂ ಅದು ಯಶಸ್ಸು ಕಂಡಿತು. ಉರ್ದು ಪ್ರಾಬಲ್ಯದ ಬೀದರ್‌ನ ಗಡಿ ಹಳ್ಳಿಗಳಲ್ಲೂ ವಿಜೃಂಭಿಸಿತು. ಗುಂಡ್ಲುಪೇಟೆಯ ಕೆ.ಎಸ್.ನಾಗರತ್ನಮ್ಮ ಪ್ರೌಢಶಾಲೆಯ ಸ್ಪರ್ಧೆಯಲ್ಲಿ ಮುಸ್ಲಿಂ ಮಕ್ಕಳೇ ಬಹುಮಾನ ಬಾಚಿಕೊಂಡರು! ‘ಬೇಂದ್ರೆಗೆ ಭಾಷೆಯ ಗಡಿಯಿಲ್ಲ ಸರ್’ ಎಂದ ಕೃಷ್ಣಪ್ಪ ಅವರ ಕಣ್ಣಂಚಿನಲ್ಲಿ ಮಿಂಚು, ತುದಿ ಒದ್ದೆ ಮಾಡಿದ ಹನಿ.

ಮೈಸೂರಿನಲ್ಲಿ ಕೆಲಸ ಮಾಡುತ್ತಲೇ ಬಾಹ್ಯವಾಗಿ ಬಿ.ಎ, ಎಂ.ಎ ಮಾಡಿಕೊಂಡ ಕೃಷ್ಣಪ್ಪ ಅವರು ‘ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ’ ಎಂಬ ವಿಷಯದಲ್ಲಿ, ಪ್ರೊ.ಹರಿಶಂಕರ್ ಮಾರ್ಗದರ್ಶನದಲ್ಲಿ ಪಿಎಚ್.ಡಿಗೆ ನೋಂದಾಯಿಸಿಕೊಂಡರು. ಆದರೆ, ಬೇಂದ್ರೆ ಪದ್ಯಗಳಲ್ಲಿನ ಉತ್ತರ ಕರ್ನಾಟಕದ ಭಾಷೆ ಅರ್ಥವಾಗಬೇಕಾದರೆ ಧಾರವಾಡಕ್ಕೇ ಹೋಗಬೇಕು ಎಂದು ಅನಿಸತೊಡಗಿತು. ಆ ವೇಳೆಗಾಗಲೇ ಕೃಷ್ಣಪ್ಪ ಅವರಿಗೆ ಬೇಂದ್ರೆ ಒಂದು ಉನ್ಮಾದವಾಗಿ ಕಾಡತೊಡಗಿದ್ದರು. ಪ್ರತಿ ಶಬ್ದ, ಸಾಲು, ಅದರಲ್ಲಿನ ಲಯ, ಛಂದಸ್ಸು ಅವರ ನಿದ್ದೆಗೆಡಿಸಿತ್ತು. ಮೂರೂ ಹೊತ್ತು ಅದೊಂದೇ ಧ್ಯಾನ. ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಾಪಕರು ಕೃಷ್ಣಪ್ಪ ಅವರ ಪ್ರಶ್ನೆಗಳಿಗೆ ಉತ್ತರ ಹೇಳಲಾಗದೆ ಸಾಗಹಾಕತೊಡಗಿದರು.

ಡಾ.ಸಿ.ಡಿ. ನರಸಿಂಹಯ್ಯ ಅವರ ‘ಧ್ವನ್ಯಾಲೋಕ’ದಲ್ಲಿ ಬೇಂದ್ರೆ ಕಾವ್ಯ ಕುರಿತ ವಿಚಾರ ಸಂಕಿರಣದಲ್ಲಿ ಬೇಂದ್ರೆ ಬಗ್ಗೆ ಲಘುವಾಗಿ ಮಾತನಾಡಿದ ವಿಮರ್ಶಕರೊಬ್ಬರನ್ನು ವೇದಿಕೆಯ ಮೇಲಿಂದಲೇ ಕೃಷ್ಣಪ್ಪ ತರಾಟೆಗೆ ತೆಗೆದುಕೊಂಡರು. ಕಾರ್ಯಕ್ರಮ ದಿಢೀರ್ ಬರ್ಖಾಸ್ತಾಯಿತು. ಕೃಷ್ಣಪ್ಪ ಧಾರವಾಡದ ಹಾದಿ ಹಿಡಿದರು. ಬೇಂದ್ರೆ ಅಧ್ಯಯನ ಮತ್ತು ಅವರ ಜತೆಗಿನ ‘ವಾಗ್ವಾದ’ ಮುಗಿದಿರಲೇ ಇಲ್ಲ. ಬೇಂದ್ರೆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೀರ್ತಿನಾಥ ಕುರ್ತಕೋಟಿಯವರನ್ನೇ ಕೃಷ್ಣಪ್ಪ ತಡವಿದರು. ಬೇಂದ್ರೆಯವರ ‘ಅಲೌಕಿಕ’ ಕವಿತೆಯಲ್ಲಿ ತಾಯಿ ತನ್ನ ಮಗನನ್ನು ‘ನನ್ನ ಮಾನಸದ ಮದಗವೇ’ ಎಂದು ಕರೆದಿದ್ದಳು. ಅದನ್ನು ಕುರ್ತಕೋಟಿಯವರು ‘ಮದಗಜವೇ’ ಎಂದು ಓದಿಕೊಂಡು ಅರ್ಥೈಸಿದ್ದರು. ಕೃಷ್ಣಪ್ಪ ಮದಗ ಶಬ್ದದ (ಕೆರೆತುಂಬಿ ಹರಿದು ಹೊರಚೆಲ್ಲಿದ ತೂಬಿನ ನೀರು-ಇಲ್ಲಿನ ಕೆರೆ, ತೂಬಿನ ಶಬ್ದಗಳ ಶ್ಲೇಷೆ ಅದ್ಭುತವಾದುದು) ಅರ್ಥ ತಿಳಿದುಕೊಂಡು ನೀವು ಅರ್ಥೈಸಿದ ರೀತಿ ತಪ್ಪಲ್ಲವೇ ಎಂದು ಪತ್ರ ಬರೆದರು. ಕುರ್ತಕೋಟಿ ತಪ್ಪು ಒಪ್ಪಿಕೊಂಡರು. ಯಾರಿಂದಲೂ ಕಾವ್ಯಕ್ಕೆ ಅಪಚಾರವಾಗಬಾರದು ಎಂದರು. ನಾವೆಲ್ಲ ಬೇಂದ್ರೆ ಕಾವ್ಯದ ವಿದ್ಯಾರ್ಥಿಗಳು ಎಂದು ವಿನಯ ತೋರಿದರು.

ಬೇಂದ್ರೆ ಬಗ್ಗೆ ಅಷ್ಟೇ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದ ಶಂಕರ ಮೊಕಾಶಿ ಪುಣೇಕರ್, ಕೃಷ್ಣಪ್ಪನವರ ‘ಹೂತದ ಹುಣಸಿ’ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತ, ‘ಈ ಪುಸ್ತಕ ಓದಿದ ನಂತರ ಬೇಂದ್ರೆಯವರನ್ನು ನಾನು ತಿಳಿದುಕೊಳ್ಳಬಲ್ಲೆ ಎಂಬ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ’ ಎಂದು ಪ್ರಾಂಜಲವಾಗಿ ಒಪ್ಪಿಕೊಂಡರು. ‘ಇಂಥ ಪುಸ್ತಕಕ್ಕಾಗಿ 50 ವರ್ಷಗಳಿಂದ ಕಾಯುತ್ತಿದ್ದೆ’ ಎಂದು ನಮ್ರವಾಗಿ ನುಡಿದರು. ಸಾರಿಗೆ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಅವರಿಗೆ ಜೀವನದಲ್ಲಿ ಸಾರ್ಥಕತೆ ತಂದ ಮಾತುಗಳು ಇವು. ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ನಾಕು ತಂತಿ’ ಸಂಕಲನವನ್ನು ಗೇಲಿ ಮಾಡಿದವರೇ ಹೆಚ್ಚು. ಆ ಸಂಕಲನದ ಬಗ್ಗೆ ಕೃಷ್ಣಪ್ಪ ಬರೆದ ಒಂದು ಪುಟ್ಟ ಪುಸ್ತಕ ಸಂಕಲನದ ಅರ್ಥ ತಿಳಿಯದೇ ‘ಗಳಹುತ್ತಿದ್ದ ವಿದ್ವಾಂಸರ’ ಬಾಯಿ ಮುಚ್ಚಿಸಿತು.

ಅದೇ  ಕೃತಿಯ ಬಗ್ಗೆ ಖ್ಯಾತ ವಿದ್ವಾಂಸ ಸಿ.ಪಿ.ಕೆ ‘ನಾನೂ ನಾಕು ತಂತಿಯ ಬಗ್ಗೆ ಬರೆದಿದ್ದೇನೆ, ಆದರೆ ನಿಮ್ಮಷ್ಟು ಆಳಕ್ಕೆ ಇಳಿಯದೆ’ ಎಂದು ಮೆಚ್ಚು ಮಾತು ಆಡಿದರು. ಬೇಂದ್ರೆ ಪದ್ಯಗಳಲ್ಲಿನ ಪದಗಳ ಅರ್ಥಕ್ಕಾಗಿ ಕೃಷ್ಣಪ್ಪ ಊರೂರು ಸುತ್ತಿದರು. ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾದ ಬೇಂದ್ರೆ ಕಾವ್ಯಕ್ಕೆ ಅಲ್ಲಿಯೇ ಅರ್ಥ ಸಿಕ್ಕಿತು. ‘ನಾಕು ತಂತಿ’ಯ ವಿಮರ್ಶೆಗಾಗಿ ಅವರು ಓದದ ಸಾಹಿತ್ಯವೇ ಇಲ್ಲ. ಈಗಲೂ ‘ನಾಕು ತಂತಿ’ಯ ಅರ್ಥ ಕೃಷ್ಣಪ್ಪ ಅವರಿಗೆ ಕಂಠೋದ್ಗತ. ಅರ್ಥ ಮಾಡಿಕೊಂಡು ಮಾತನಾಡುವುದಕ್ಕೂ ಅರ್ಥ ಮಾಡಿಕೊಳ್ಳದೇ ಮಾತನಾಡುವುದಕ್ಕೂ ಇರುವ ವ್ಯತ್ಯಾಸವೇ ಅದು. ಅದರ ಹಿಂದಿನ ಶ್ರಮಕ್ಕೆ ಬೆಲೆ ಕಟ್ಟುವುದು ಕಷ್ಟ. ಇಂಥ ನಿರ್ವಾಜ್ಯ ಕಾವ್ಯ ಪ್ರೀತಿಯನ್ನು ಬೇರೆಡೆ ಹುಡುಕುವುದೂ ಕಷ್ಟ. ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟು ಕೃಷ್ಣಪ್ಪ ಅವರ ‘ಬರೆಹದಲ್ಲಿ ಬೇಂದ್ರೆ ಬದುಕು’ ಪುಸ್ತಕವನ್ನು ಪ್ರಕಟಿಸಿದ್ದರೆ ಟ್ರಸ್ಟ್‌ನ ಮೊದಲ ಫೆಲೋಶಿಪ್ (ರೂ.25,000) ಪಡೆದ ಶ್ರೇಯಸ್ಸಿನ ಕೃಷ್ಣಪ್ಪ ‘ಅಂಬಿಕಾತನಯದತ್ತರ ಬಾಲ್ಯಕಾಂಡ’ ಕುರಿತು ಪುಸ್ತಕ ಬರೆದರು.

ನಿವೃತ್ತಿಯ ನಂತರ, ಕಳೆದ ಐದು ವರ್ಷಗಳಿಂದ ಕೃಷ್ಣಪ್ಪ ಮತ್ತು ಗೆಳೆಯರು ದ.ರಾ.ಬೇಂದ್ರೆ ಕಾವ್ಯಕೂಟ ಮಾಡಿಕೊಂಡು ವಿದ್ಯಾರ್ಥಿಗಳಿಗಾಗಿ ‘ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ’ ಏರ್ಪಡಿಸುತ್ತಿದ್ದಾರೆ. ಈಚಿನ ಸ್ಪರ್ಧೆಯ ಫಲಿತಾಂಶ ಮೊನ್ನೆ ಪ್ರಕಟವಾಗಿದೆ. ನಾಳೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಆಗಲಿದೆ. ಇಷ್ಟು ವರ್ಷ ಒಬ್ಬ ಕವಿಯನ್ನು ಮುಂದಿಟ್ಟುಕೊಂಡು ಇಷ್ಟೊಂದು ಕಾರ್ಯಕ್ರಮ ಮಾಡಿದ ಕೃಷ್ಣಪ್ಪ ಒಂದೇ ಒಂದು ದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೋಗಿ ಹಣ ಕೇಳಲಿಲ್ಲ. ‘ನಿಮ್ಮ ಬಳಿ ಹಣ ಇರುವಷ್ಟು ದಿನ ಕಾರ್ಯಕ್ರಮ ಮಾಡಿ. ಇಲ್ಲವಾದ ದಿನ ನಿಲ್ಲಿಸಿಬಿಡಿ’ ಎಂದು ಹೆಂಡತಿ ಸರೋಜಮ್ಮ ಹೇಳಿದ ಮಾತನ್ನೇ ಅನುಸರಿಸಿಕೊಂಡು ಬಂದಿದ್ದಾರೆ. ‘ಬೇಂದ್ರೆಯವರನ್ನು ಒಬ್ಬ ಅವಧೂತ ಎನ್ನುತ್ತಾರೆ. ಯಾವತ್ತೂ ನನಗೆ ಯಾವ ಕಾರ್ಯಕ್ರಮ ಮಾಡಲೂ ಹಣದ ಅಡಚಣೆ ಆಗಿಲ್ಲ. ಹೇಗೋ ಅದು ಕೂಡಿ ಬಂದಿದೆ. ಕೆಲವು ಕಡೆ ಜನ ಸ್ವತಃ ತಾವೇ ದುಡ್ಡು ಹಾಕಿ ಪೆಂಡಾಲ್ ಹಾಕಿದ್ದಾರೆ’ ಎಂದು ಹೇಳುತ್ತ ಕೃಷ್ಣಪ್ಪ ಮತ್ತೆ ಕಣ್ಣಂಚಿನಲ್ಲಿ ಮಿಂಚಾಗುತ್ತಾರೆ.

ನಾಳೆ ಬೇಂದ್ರೆಯವರ ಜನ್ಮದಿನ. ಧಾರವಾಡದಲ್ಲಿ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ ಪ್ರತಿಷ್ಠಿತ ಪ್ರಶಸ್ತಿ ಪ್ರದಾನವಾಗುತ್ತಿದೆ. ನಿಮಗೆ ಈ ಪ್ರಶಸ್ತಿ ಸಿಗಬೇಕಿತ್ತಲ್ಲವೇ ಎಂದು ಕೃಷ್ಣಪ್ಪ ಅವರನ್ನು ಸುಮ್ಮನೇ ಕೆಣಕಿದೆ. ‘ಆಶೆಗಳ ಕೆಣಕದಿರು... ಪಾಶಗಳ ಬಿಗಿಯದಿರು...’ ಎಂದು ಅವರು ನನಗೆ ಮಂಕುತಿಮ್ಮನ ಕಗ್ಗದ ಪಾಠ ಹೇಳಿದರು. ‘ಆಸೆ ಪಟ್ಟರೆ ಮನಸ್ಸು ಕಹಿಯಾಗುತ್ತದೆ. ಆಸೆಯೇ ಇಲ್ಲದಿದ್ದರೆ ಸಮಸ್ಯೆಯೇ ಇಲ್ಲ’ ಎಂದರು. ‘ತಾವು ಸಂಪಾದಿಸಿದ ಬೇಂದ್ರೆ ಲೇಖನಗಳ ‘ಸಾಹಿತ್ಯ ಯೋಗ’ ಎಂಬ ಕೃತಿಯನ್ನು ವಾಮನ ಬೇಂದ್ರೆಯವರು 1995ರಲ್ಲಿಯೇ ನನ್ನ ಮತ್ತು ನನ್ನ ಕುಟುಂಬಕ್ಕೆ ಅರ್ಪಿಸಿದ್ದಾರೆ.
 
ಅದಕ್ಕಿಂತ ಹೆಚ್ಚಿನ ಪ್ರಶಸ್ತಿ ಇನ್ನೇನಿದೆ’ ಎಂದು ಕೃಷ್ಣಪ್ಪ ಮತ್ತೆ ಪ್ರಶ್ನೆ ಹಾಕಿದರು. 2005ರ ಸುಮಾರಿಗೆ ನಾನು ಕೃಷ್ಣಪ್ಪ ಅವರನ್ನು ಮೊದಲ ಬಾರಿ ಭೇಟಿ ಮಾಡಿದಾಗ ಖಾಸಗಿ ವಾಹಿನಿಯೊಂದರಲ್ಲಿ ಬೇಂದ್ರೆ ಕುರಿತು ಕವಿಯೊಬ್ಬರು ಒಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ನಿಮ್ಮನ್ನು ಕರೆಯಬಹುದಿತ್ತಲ್ಲವೇ ಎಂದು ಆಗ ಕೇಳಿದ್ದೆ. ‘ನನ್ನನ್ನು ಹೇಗೆ ಕರೆಯುತ್ತಾರೆ?’ ಎಂದು ಕೃಷ್ಣಪ್ಪ ಮತ್ತೆ ಪ್ರಶ್ನೆ ಹಾಕಿದ್ದರು. ಆಗಲೂ ಅವರ ಮನಸ್ಸಿನಲ್ಲಿ ಕಹಿ ಇರಲಿಲ್ಲ. ಅಥವಾ ಎಲ್ಲ ಕಹಿಯನ್ನು ನುಂಗುವ ವಿದ್ಯೆಯನ್ನು ಅವರಿಗೆ ಬೇಂದ್ರೆಯವರೇ ಕಲಿಸಿಕೊಟ್ಟಿರುವರೋ ಗೊತ್ತಿಲ್ಲ. ಯಾವುದೋ ಸಮ್ಮೇಳನದಲ್ಲಿ ಒಂದೇ ಒಂದು ಸಾರಿ ಭೇಟಿ ಮಾಡಿದ ಒಬ್ಬ ಕವಿಯ ಬಗ್ಗೆ ಹೀಗೆ ಹುಚ್ಚು ಹಚ್ಚಿಕೊಂಡು ಯಾವ ಅಪೇಕ್ಷೆಗಳೂ ಇಲ್ಲದೆ ಕೆಲಸ ಮಾಡಿದ ನಿದರ್ಶನ ನನಗಂತೂ ನೆನಪಿಲ್ಲ. ಇದಕ್ಕಿಂತ ದೊಡ್ಡ ಸಾಹಿತ್ಯ ಪರಿಚಾರಿಕೆ ಯಾವುದಾದರೂ ಇರಲು ಸಾಧ್ಯ ಎಂದೂ ಅನಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT