ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಥವರೂ ಇರುತ್ತಾರೆ!

Last Updated 25 ಜೂನ್ 2011, 19:30 IST
ಅಕ್ಷರ ಗಾತ್ರ

ಪೊಲೀಸರಂತೆಯೇ ಪತ್ರಕರ್ತರು ಕೂಡ ಖಾಸಗಿ ಬದುಕಿನ ಸುಖ ಮೀರಿ ಕೆಲಸ ಮಾಡುತ್ತಾರೆ. ನಮ್ಮ ಕೆಲಸಕ್ಕೆ ಪತ್ರಕರ್ತರಿಂದ ಅನೇಕ ಉಪಯೋಗಗಳಾಗಿವೆ.ಅಂತೆಯೇ ಕೆಲವರಿಂದ ತೊಂದರೆಗಳನ್ನು ಅನುಭವಿಸಿದ ಪ್ರಸಂಗಗಳೂ ಇವೆ.

ಕಳೆದ ದಶಕದ ಮಧ್ಯಭಾಗದಲ್ಲಿ ಬೆಂಗಳೂರಿನಲ್ಲಿ ಲೈವ್‌ಬ್ಯಾಂಡ್ ಹಾವಳಿ ಜೋರಾಗಿತ್ತು. ನಡುರಾತ್ರಿವರೆಗೆ ಲೈವ್‌ಬ್ಯಾಂಡ್‌ಗಳಲ್ಲಿ ಕುಣಿದು, ಒಣಕಲು ಖಿಚಡಿ ತಿಂದು ತೂಕಡಿಸುತ್ತಾ ಕೂರುವ ಹೆಣ್ಣುಮಕ್ಕಳ ಬದುಕಿನ ನರಕಯಾತನೆಯ ಕುರಿತು ನಾನು ಇದೇ ಅಂಕಣದಲ್ಲಿ ಈ ಹಿಂದೆ ವಿವರವಾಗಿ ಬರೆದಿದ್ದೆ. ರಾತ್ರಿ ಲೈವ್‌ಬ್ಯಾಂಡ್ ಪ್ರದರ್ಶನ ಸಾಲದೆಂಬಂತೆ `ವಾಕಿಂಗ್ ಶೋಸ್~ ಹೆಸರಿನಲ್ಲಿ ಬೆಳಗಿನ ಜಾವ 4.30ರ ನಂತರ ಅದೇ ರೀತಿಯ ನರ್ತನ ಪ್ರಾರಂಭವಾಯಿತು.

ರಾತ್ರಿ ಕುಣಿದು ಕುಣಿದು ಸುಸ್ತಾಗಿ ಸಿಕ್ಕ ಜಾಗದಲ್ಲೇ ಮಲಗುವ ಲೈವ್‌ಬ್ಯಾಂಡ್ ಹೆಣ್ಣುಮಕ್ಕಳ ನಿದ್ದೆಯ ಅವಧಿ ಕಡಿಮೆಯಾಯಿತು. ನಿದ್ದೆಯ ಮಂಪರಿನೆಲ್ಲಾ ಕೆಲವರು ಎದ್ದು ಹಲ್ಲು ಉಜ್ಜಿ `ವಾಕಿಂಗ್ ಶೋಸ್~ಗೆ ಮೇಕಪ್ ಹಾಕಿಕೊಳ್ಳುತ್ತಿದ್ದರು.

ರಾತ್ರಿ ಬೇಗ ಮನೆ ಸೇರಿಕೊಳ್ಳುವ ಅನೇಕ ಆಷಾಢಭೂತಿಗಳಿಗೆ ಬೆಳಗಿನ ಜಾವ ಕೂಡ ಲೈವ್‌ಬ್ಯಾಂಡ್ ನೋಡಬಹುದೆಂಬುದು ಆಕರ್ಷಣೆಯಾಗಿ ಕಂಡಿತು. ವಾಕಿಂಗ್‌ಗೆ ಹೊರಡುವವರಂತೆ ಮನೆ ಬಿಡುತ್ತಿದ್ದ ಅವರಲ್ಲಿ ಅನೇಕರು ಬೆಳಗಿನ ಜಾವದ ಲೈವ್‌ಬ್ಯಾಂಡ್ ನೋಡಲು ಹೋಗುತ್ತಿದ್ದರು. ಅನೇಕ ವಿಶೇಷ ಅತಿಥಿಗಳೂ `ವಾಕಿಂಗ್ ಶೋ~ ದರ್ಶನಕ್ಕೆಂದು ನಾಮುಂದು ತಾಮುಂದು ಎಂಬಂತೆ ನುಗ್ಗತೊಡಗಿದರು.

ಲೈವ್‌ಬ್ಯಾಂಡ್‌ನ ಈ ಹೊಸ ಅವತಾರವನ್ನು ಕಮಿಷನರ್ ಮರಿಸ್ವಾಮಿ ಹಾಗೂ ಜಾಯಿಂಟ್ ಕಮಿಷನರ್ ಅಲೋಕ್ ಮೋಹನ್ ಸಹಿಸಲಿಲ್ಲ. `ವಾಕಿಂಗ್ ಶೋ~ ನಡೆಸುವೆಡೆ ರೇಡ್ ಮಾಡಬೇಕೆಂದು ಅವರು ತೀರ್ಮಾನಿಸಿದರು.

ಪೊಲೀಸ್ ಇಲಾಖೆಯಲ್ಲಿ ಆ ಕೆಲಸಕ್ಕೆಂದೇ ನಿಯೋಜಿತರಾದವರಿಗೆ ರೇಡ್ ಮಾಡುವ ಅವಕಾಶವನ್ನು ಮರಿಸ್ವಾಮಿಯವರು ನೀಡಲಿಲ್ಲ. ಅವರೆಲ್ಲಿ ಕೆಲವರಾದರೂ ಶಾಮೀಲಾಗಿಯೇ ಇಂಥ ದಂಧೆ ನಡೆಸಲು ಕಾರಣರಾಗಿದ್ದಾರೆಂಬ ಅನುಮಾನ ಅವರಿಗಿತ್ತು. ಅದಕ್ಕೇ ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನನ್ನಂಥ ಕೆಲವು ಸಿಬ್ಬಂದಿಗೆ ರೇಡ್ ಮಾಡುವ ಕೆಲಸ ಒಪ್ಪಿಸಿದರು.

ರೇಡುಗಳು ನಡೆಯತೊಡಗಿದ ನಂತರ ಮಾಧ್ಯಮದಲ್ಲಿ ಇದು ಸುದ್ದಿಯಾಯಿತು. ಆಗ ಒಬ್ಬ ಪತ್ರಕರ್ತರು ನನ್ನ ಬಳಿಗೆ ಬಂದರು. `ಲೈವ್‌ಬ್ಯಾಂಡ್ ಆರ್ಟಿಸ್ಟ್‌ಗಳ ಬಗ್ಗೆ ಬರೀತಿದೀನಿ. ನಿಮ್ಮ ಸಹಕಾರ ಬೇಕು~ ಎಂದು ನನ್ನನ್ನು ಕೇಳಿಕೊಂಡರು.
 
ನಾನು ಲಭ್ಯವಿರುವ ಮಾಹಿತಿಯನ್ನು ಹೇಳಲು ಮುಂದಾದೆ. ಆದರೆ, ಅವರು ಅದರಿಂದಷ್ಟೇ ಸಮಾಧಾನಿತರಾಗಲಿಲ್ಲ. `ನನಗೆ ವಿಶೇಷ ಅನುಭವ ಬೇಕು. ಹಾಗಾಗಿ ಲೈವ್‌ಬ್ಯಾಂಡ್ ಹುಡುಗಿಯರಲ್ಲಿ ಕೆಲವರ ಮನೆಯಲ್ಲಿಯೇ ಕೆಲವು ದಿನ ಇರಬೇಕು.ಆಗಷ್ಟೇ ಅವರ ಬದುಕನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯ~ ಎಂದರು.

ಲೈವ್‌ಬ್ಯಾಂಡ್ ಹುಡುಗಿಯರಾಗಲೀ ಅಥವಾ ವೇಶ್ಯಾವಾಟಿಕೆಯಲ್ಲಿ ತೊಡಗಿರುವವರಾಗಲೀ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ ಎಂದರೆ ಏನೂ ಮಾತನಾಡುವುದಿಲ್ಲ. ಆ ಪತ್ರಕರ್ತರಿಗೂ ಈ ಸಂಗತಿಯನ್ನು ಹೇಳಿದೆ. `ನೀವು ನಿಮ್ಮ ಕಾಂಟಾಕ್ಟ್ ಉಪಯೋಗಿಸಿ ಅವರ ಮನೆ ಸೇರಿಕೊಳ್ಳುವ ದಾರಿ ತೋರಿಸಿ,  ಸಾಕು.

ನೀವು ಕಳಿಸಿಕೊಟ್ಟಿರಿ ಎಂದು ನಾನು ಹೇಳುವುದೇ ಇಲ್ಲ. ನಾಲ್ಕು ರಾತ್ರಿ ನಾನು ಅವರ ಮನೆಯಲ್ಲಿ ತಂಗಬೇಕಷ್ಟೆ~ ಎಂದ ಆ ಪತ್ರಕರ್ತರ ಉತ್ಸಾಹ ಅಗತ್ಯಕ್ಕಿಂತ ಹೆಚ್ಚೇ ಇದ್ದಂತೆ ಕಂಡಿತು. ಕೆಲವು ಲೈವ್‌ಬ್ಯಾಂಡ್ ಹುಡುಗಿಯರನ್ನು ಠಾಣೆಗೇ ಕರೆಸಿ ಮಾತನಾಡಿಸುವ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದರೂ ಅವರು ಒಪ್ಪದೆ, ಅವರ ಮನೆಗೇ ಹೋಗಬೇಕೆಂದು ಪಟ್ಟುಹಿಡಿದಿದ್ದರ ಹಿಂದೆ ಯಾವುದೋ ದುರುದ್ದೇಶದ ವಾಸನೆ ಇತ್ತು. ನೋಡೋಣ ಎಂದು ಹೇಳಿ ಅವರನ್ನು ಸಾಗಹಾಕಿದೆ.

ಬೇರೆ ಪತ್ರಕರ್ತ ಮಿತ್ರರಲ್ಲಿ ಈ ವಿಷಯ ಪ್ರಸ್ತಾಪಿಸಿದೆ. ಲೈವ್‌ಬ್ಯಾಂಡ್ ಹುಡುಗಿಯರ ಮನೆಯಲ್ಲಿ ವಾಸ್ತವ್ಯ ಹೂಡುವ ಆ ಪತ್ರಕರ್ತರದ್ದು ದುರುದ್ದೇಶವೆಂಬುದು ಸ್ಪಷ್ಟವಾಯಿತು. ಆಮೇಲೆ ನಾನು ಹುಷಾರಾದೆ. ಅವರ ಬೇಡಿಕೆ ಈಡೇರಿಸುವುದು ಸಾಧ್ಯವಿಲ್ಲವೆಂಬುದನ್ನು ಖಡಾಖಂಡಿತವಾಗಿ ಹೇಳಿಬಿಟ್ಟೆ. ಅಷ್ಟಕ್ಕೇ ಸುಮ್ಮನಾಗದೆ ಅವರು ತಮ್ಮ ಬೇಡಿಕೆ ಈಡೇರಿಸಬೇಕೆಂದು ಕಮಿಷನರ್ ಮೂಲಕ ಕೂಡ ಹೇಳಿಸಿದ್ದರು.

ಪತ್ರಕರ್ತರೂ ನಮ್ಮಂತೆಯೇ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರಿಗೂ ಸಾಮಾಜಿಕ ಕಳಕಳಿ ಇರುತ್ತದೆ. ನ್ಯಾಯಾಲಯ ಹಾಗೂ ಪತ್ರಿಕಾರಂಗದ ಬೆಂಬಲದಿಂದಲೇ ಪೊಲೀಸರ ಎಷ್ಟೋ ಕಾರ್ಯಗಳಿಗೆ ನೈತಿಕ ಬೆಂಬಲ ಸಿಗುವುದು.

ಒಂದು ವೇಳೆ ಪೊಲೀಸರು ನಿಯಮದ ಚೌಕಟ್ಟಿನಿಂದಾಚೆ ಕೆಲಸ ಮಾಡಿದರೆ ಎಚ್ಚರಿಸುವುದು ಮಾಧ್ಯಮ. ಸಾಧನೆ ಮಾಡಿದಾಗ ಬೆನ್ನುತಟ್ಟುವುದೂ ಅದೇ ಮಾಧ್ಯಮ. ಈ ಭಾವನೆಯಿಂದಲೇ ನಾನು ಸದಾ ಕೆಲಸ ಮಾಡುತ್ತಿದ್ದೆ.

ಆದರೆ, ದಿಢೀರನೆ ಹೀಗೆ ದುರುದ್ದೇಶ ಇರುವವರು ಎದುರಾಗಿ, ವಿಚಿತ್ರವಾದ ಬೇಡಿಕೆಗಳನ್ನು ಇಟ್ಟಾಗ ಅಚ್ಚರಿಯ ಜೊತೆಗೆ ಬೇಸರವೂ ಆಗುತ್ತದೆ. ಕೆಲವರಿಂದಾಗಿ ಇಡೀ ಪತ್ರಕರ್ತ ಸಮುದಾಯಕ್ಕೇ ಕೆಟ್ಟ ಹೆಸರು ಬರಕೂಡದಲ್ಲವೇ? ನಾನೇನಾದರೂ ಆ ಪತ್ರಕರ್ತರ ಬೇಡಿಕೆ ಈಡೇರಿಸಿದ್ದರೆ ನಾನೂ ತಲೆಹಿಡುಕರ ಪಟ್ಟಿ ಸೇರುತ್ತಿದ್ದೆನಲ್ಲ ಎಂದು ಅನೇಕ ಸಲ ಅಂದುಕೊಂಡಿದ್ದೇನೆ.

ಪೊಲೀಸ್ ಇಲಾಖೆಯಲ್ಲಿ ಕೆಲಸದ ಒತ್ತಡವಿಲ್ಲದಂತೆ, ತನಿಖಾ ಒತ್ತಡವಿಲ್ಲದಂತೆ ಇಡೀ ಸೇವಾವಧಿ ಮುಗಿಸಿ ಮನೆಗೆ ಹೋಗುವವರನ್ನು ನಾನು ಕಂಡಿದ್ದೇನೆ. ಹಿರಿಯ ಅಧಿಕಾರಿಗಳನ್ನು ಹೇಗಾದರೂ ಓಲೈಸಿಕೊಂಡೋ, ಯಾವುದಾದರೂ ಅಳಲನ್ನು ಮುಂದಿಟ್ಟುಕೊಂಡೋ ಅವರೆಲ್ಲಾ ಸುರಕ್ಷಿತವಾಗಿಯೇ ಇದ್ದುಬಿಡುತ್ತಾರೆ. ಅಂಥವರಿಂದ ಪೊಲೀಸ್ ಇಲಾಖೆಗೆ ಏನೇನೂ ಲಾಭವಿಲ್ಲವೆಂದೇ ನನ್ನ ಭಾವನೆ. ಇನ್ನು ಕೆಲವರಿರುತ್ತಾರೆ; ಅವರದ್ದು ಪ್ರಕರಣಗಳನ್ನು ದುರ್ಬಲಗೊಳಿಸುವುದರಲ್ಲಿ ಎತ್ತಿದ ಕೈ.

ಕಳ್ಳತನವನ್ನು ಕಳೆದುಹೋಗಿದೆ ಎಂದು ತೋರಿಸುವ ನಿಸ್ಸೀಮರಿವರು. ಯಾರೋ ಕಳ್ಳ ನಡುದಾರಿಯಲ್ಲಿ ಮಹಿಳೆಯ ಸರ ಕಿತ್ತುಕೊಂಡು ಹೋಗಿರುತ್ತಾನೆ ಎಂದಿಟ್ಟುಕೊಳ್ಳೋಣ. ಅದು ದರೋಡೆ ಪ್ರಕರಣವೇ ಹೌದು. ಆದರೆ, ಮೊದಲೇ ಗಾಬರಿಗೊಂಡ ಮಹಿಳೆ ಪೊಲೀಸ್ ಠಾಣೆಗೆ ಹೋದಾಗ ಇನ್ನಷ್ಟು ಒತ್ತಡದಲ್ಲಿರುತ್ತಾರೆ.
 
ಅವರನ್ನು ಸಮಾಧಾನ ಪಡಿಸಿ, ಸರಿಯಾದ ಪ್ರಕರಣ ದಾಖಲಿಸಿಕೊಂಡರೆ ಆತ ದಕ್ಷ ಪೊಲೀಸ್. ಕೆಲವರು ಹಾಗೆ ಮಾಡುವುದಿಲ್ಲ. `ಸರ ಕಳೆದುಹೋಗಿದೆ~ ಎಂದು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಸರ ದರೋಡೆಯಾದ ಸಂದರ್ಭದಲ್ಲಿ ಎಷ್ಟೋ ಅಮಾಯಕರಿಗೆ ದೂರು ಬರೆಯುವ ಮಾನಸಿಕ ಸಾಮರ್ಥ್ಯವೂ ಇರುವುದಿಲ್ಲ.ಅವರೆಲ್ಲಾ ಪೊಲೀಸರನ್ನೇ ದೂರು ಬರೆದುಕೊಳ್ಳುವಂತೆ ಗೋಗರೆಯುತ್ತಾರೆ. ಇಂಥ ಸಂದರ್ಭಗಳನ್ನು ದುರುಪಯೋಗ ಪಡಿಸಿಕೊಳ್ಳುವ ಪೊಲೀಸರು ಇರುತ್ತಾರೆ. ಈ ಎಚ್ಚರ ಜನರಿಗೆ ಇರಬೇಕು.

ತನಿಖೆ ಮಾಡುವ ಛಾತಿ ಇರುವ ಪೊಲೀಸರ ಸಂಖ್ಯೆ ಮೊದಲಿನಿಂದಲೂ ಕಡಿಮೆಯೇ.ಜನರೂ ಅವರನ್ನು ಪ್ರಶ್ನಿಸದೇ ಹೋದರಂತೂ ಅವರಾಡಿದ್ದೇ ಆಟ.ಯಾಕೆಂದರೆ, ಅಪಹರಣ ಆದರೆ ಸಾಮಾನ್ಯವಾಗಿ `ಐಪಿಸಿ (ಭಾರತೀಯ ದಂಡ ಸಂಹಿತೆ) 365~ ಅಡಿಯಲ್ಲಿ ಕೇಸು ದಾಖಲಿಸಿಕೊಳ್ಳಬೇಕು.

ಮಕ್ಕಳನ್ನು ಒತ್ತೆ ಇಟ್ಟುಕೊಂಡು, ಹಣ ಕೊಡುವಂತೆ ಒತ್ತಾಯಿಸಿದರೆ ಅದು `ಐಪಿಸಿ 364 ಎ~ ವ್ಯಾಪ್ತಿಗೆ ಬರುತ್ತದೆ. ಇದು ಘೋರ ಅಪರಾಧ. ಮರಣದಂಡನೆಗೆ ಒಳಪಡಿಸಬಹುದಾದ ಪ್ರಕರಣವಿದು. ತನಿಖೆ ಮಾಡುವ ಹುಮ್ಮಸ್ಸು ಇಲ್ಲದ ಕೆಲವು ಪೊಲೀಸರು ಬೇಕೆಂದೇ ಕೇಸುಗಳನ್ನು ದುರ್ಬಲಗೊಳಿಸುತ್ತಾರೆ.

ಬ್ಲ್ಯಾಂಕ್ ಚೆಕ್ ಕೊಟ್ಟು ಗೋಜಲಿಗೆ ಸಿಲುಕುವುದು, ಕಾರನ್ನು ಮಾರಿಯೂ ಸಂಬಂಧಪಟ್ಟ ದಾಖಲೆಗಳಿಗೆ ಸಹಿ ಹಾಕದೆ ಇಕ್ಕಟ್ಟಿಗೆ ಸಿಲುಕುವುದು, ಖಾಲಿ ಪತ್ರಕ್ಕೆ ಸಹಿ ಹಾಕಿಕೊಟ್ಟು ಒತ್ತಡದಲ್ಲಿ ಬೀಳುವುದು- ಇಂಥ ಪ್ರಕರಣಗಳು ಸಾಮಾನ್ಯ.
 
ಜನರ ಅಮಾಯಕತೆಯಿಂದ ಆಗುವ ಇಂಥ ಪ್ರಕರಣಗಳನ್ನು ಸೂಕ್ತ ಕೇಸಿನ ರೂಪದಲ್ಲಿ ದಾಖಲಿಸಿಕೊಳ್ಳುವಲ್ಲಿ ಪೊಲೀಸರು ಎಡವಿರುವ ಅನೇಕ ಉದಾಹರಣೆಗಳುಂಟು.

ನನ್ನ ಪ್ರಕಾರ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ದಾಖಲಿಸಿಕೊಳ್ಳದಿರುವುದು ಪೊಲೀಸರ ಬೇಜವಾಬ್ದಾರಿತನ. ಆ ರೀತಿ ಮಾಡುವ ಪೊಲೀಸರು ನಿಜಕ್ಕೂ ಕೆಟ್ಟವರೆಂದೇ ನನ್ನ ಭಾವನೆ. ಕೇಸು ಪತ್ತೆಯಾಗುತ್ತದೋ ಬಿಡುತ್ತದೋ ಅದು ಮುಂದಿನ ವಿಷಯ. ಪ್ರಕರಣವನ್ನು ಸೂಕ್ತ ರೀತಿಯ್ಲ್ಲಲಿ ದಾಖಲು ಮಾಡಿದರೆ ಪೊಲೀಸರೇ ಸುರಕ್ಷಿತರಾಗುತ್ತಾರೆಂಬುದೇ ಸತ್ಯ.

ಇದು ಕೆಲವು ಪೊಲೀಸರಿಗೂ ಗೊತ್ತಿಲ್ಲ. ಅಪಹರಣ ಪ್ರಕರಣವನ್ನು `ಕಾಣೆಯಾಗಿದ್ದಾರೆ~ ಎಂದು ದಾಖಲಿಸಿಕೊಳ್ಳುತ್ತಾರೆ ಎಂದಿಟ್ಟುಕೊಳ್ಳೋಣ. ಮುಂದೆ ಅದು ನಿಜಕ್ಕೂ ಅಪಹರಣ ಎಂಬುದು ಮಾಧ್ಯಮದ ಮೂಲಕ ಬಯಲಾದರೆ ಪೇಚಿಗೆ ಸಿಲುಕುವುದು ಅದೇ ಪೊಲೀಸ್. ಅಪಹರಣ ಪ್ರಕರಣಗಳು ಹತ್ಯೆಯಲ್ಲಿ ಅಂತ್ಯಗೊಂಡರಂತೂ ತಪ್ಪು ಕೇಸು ದಾಖಲಿಸಿಕೊಂಡ ಪೊಲೀಸರ ಪರಿಸ್ಥಿತಿ ಕೆಟ್ಟದಾಗುತ್ತದೆ.

ದೂರು ಕೊಡುವ ವಿಷಯದಲ್ಲಿ ನಮ್ಮ ಜನರಲ್ಲಿ ಕೂಡ ಅರಿವಿನ ಕೊರತೆ ಇದೆ. ಇದಕ್ಕೆ ಕೆಲವು ಪೊಲೀಸರ ಉಡಾಫೆ ಧೋರಣೆಯೂ ಸೇರಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಅನೇಕ ಪ್ರಕರಣಗಳಿವೆ. ಪೊಲೀಸರೇ ದಾರಿ ತಪ್ಪಿಸಿದ ಅಂಥ ಕೆಲವು ಪ್ರಕರಣಗಳನ್ನು ನಾನು ಮುಂದಿನ ಕಂತಿನಲ್ಲಿ ವಿವರವಾಗಿ ಹೇಳುತ್ತೇನೆ.

ಶಿವರಾಂ ಅವರ ಮೊಬೈಲ್ ನಂಬರ್:
94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT