ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಾಲಿಯಾ ಅಂದು-ಇಂದು-2: ರೋಮಾದ ಸುತ್ತಮುತ್ತ

Last Updated 7 ಜೂನ್ 2012, 19:30 IST
ಅಕ್ಷರ ಗಾತ್ರ

ವೆನಿಸಿಯಾದಿಂದ ರೋಮಾಕ್ಕೆ ಬಂದ ಕೂಡಲೆ ಒಂದು ಭಾವಗೀತೆಯಿಂದ ಮಹಾಕಾವ್ಯಕ್ಕೆ ಬಂದಂಥ ಅನುಭವವಾಗುತ್ತದೆ. ವೆನಿಸಿಯಾದಷ್ಟೇ ಚೆಲುವು ರೋಮಾದಲ್ಲೂ ಇದೆ. ಆದರೆ ರೋಮಾಗೆ ವೆನಿಸಿಯಾದಲ್ಲಿ ಕಾಣಸಿಗದ ವಿಸ್ತಾರ-ವೈವಿಧ್ಯಗಳಿವೆ.

ಚಾರಿತ್ರಿಕವಾಗಿ ಪ್ರಾಚೀನ, ಕ್ರಿಸ್ತಪೂರ್ವ, ಮಧ್ಯಯುಗೀಯ ಮತ್ತು ಆಧುನಿಕ ಘಟ್ಟಗಳನ್ನು ನಿಡುಗಾಲ ಹಾದುಬಂದಿರುವ ಈ ನಗರದಲ್ಲಿ  ಆ ಎಲ್ಲ ಘಟ್ಟಗಳ ನಿಶಾನೆಗಳು ನೋಡನೋಡಿದಲ್ಲಿ ಕಾಣುತ್ತವೆ. ಇಲ್ಲಿ ಚರಿತ್ರೆ ಬರೀ ನೆನಪಲ್ಲ; ಜೀವಂತ ಅನುಭವ. ರೋಮಾದ ಪ್ರಸಿದ್ಧ ಸ್ಮಾರಕಗಳಾದ ಕೊಲೇಸಿಯಂ ಅಥವಾ ಸ್ಪ್ಯಾನಿಶ್ ಸೋಪಾನಗಳಂಥ ಪ್ರಾಚೀನ ಕಟ್ಟಡಗಳು ಮೇಲ್ಕಂಡ ಎಲ್ಲ ಹಂತಗಳನ್ನು ತಮ್ಮ ಮೈಯಲ್ಲಿ ಅಡಗಿಸಿಕೊಂಡಿವೆ.

ಹಲವು  ಕಡೆ ಪ್ರೇಕ್ಷಣೀಯವಾಗಿ ಇನ್ನೂ ಉಳಿಸಿಕೊಳ್ಳಲಾಗಿರುವ ಜಂತೆ, ಅಥವಾ ಗೋಡೆ ಬಿದ್ದ ಭಗ್ನ ಭವ್ಯ ಭವನಗಳು ಆಧುನಿಕ ನಗರವೊಂದರಲ್ಲಿ  ನಿಂತು ಆಕಾಶಕ್ಕೆ ತಮ್ಮ ಕತೆಯನ್ನು ಮೌನವಾಗಿ ಹೇಳುವಂತೆ ಭಾಸವಾಗುತ್ತದೆ.

ರೋಮಾ ಅಮೋಘವಾದ ಚರ್ಚುಗಳ ನಗರ. ಜಗತ್ತಿನಲ್ಲೇ ಅತ್ಯಂತ ಕಿರಿಯ ಸ್ವತಂತ್ರ ರಾಷ್ಟ್ರವಾಗಿರುವ ವ್ಯಾಟಿಕನ್ ರೋಮಾದ ನಡುವೆ ವಿರಾಜಮಾನವಾಗಿದೆ. ರೋಮಾದ ಮೇಲೆ ವಿಮಾನದಲ್ಲಿ  ಹಾರುವಾಗ ಸಂತ ಪೀಟರನ ಚೌಕ ಇಡೀ ನಗರದ ನಡುಬಿಂದುವಿನಂತೆ ಕಾಣುತ್ತದೆ.

ಅಲ್ಲಿನ ಪ್ರಧಾನ ವೈಭವವಾದ ಸಿಸ್ಟೈನ್ ಚೇಪಲ್ ಜಗತ್ತಿನ ಅತ್ಯಂತ ಸುಂದರವಾದ ಧಾರ್ಮಿಕ ರಚನೆಗಳಲ್ಲೊಂದಾದ ಜಪಾನಿನ ನಾರಾದ ಬುದ್ಧ ದೇಗುಲಕ್ಕೆ ಸರಿಸಾಟಿಯಾಗಿದೆ. ಮಿಷಾಲ್ ಏಂಜಲೋನ ಅದ್ಭುತ ಜಂತೆಚಿತ್ರಗಳು ಮತ್ತು ಅತ್ಯಂತ ಪ್ರಸಿದ್ಧ ಶಿಲ್ಪ ಕೃತಿಯಾದ ಪಈತಾಗಳು ಇಂದಿಗೂ ಇಲ್ಲಿ ನಮ್ಮ ಕಣ್ಮನಗಳನ್ನು ಸೆಳೆಯುತ್ತವೆ.

ರೋನ್ ಕ್ಯಾಥೋಲಿಕ್ ಧರ್ಮದ ಅತ್ಯಂತ ಪ್ರಸಿದ್ಧ ಸಂತ ಫ್ರಾಂಚೆಸ್ಕಾ. ಆತ ಮೂಲತಃ ಅಸಿಸಿ ಎಂಬ ಊರಿಂದ ಬಂದವನು. ಆದರೆ ರೋಮಿನಲ್ಲೂ ಅವನ ಹೆಸರಿನ ಅತಿ ಸುಂದರ ಚರ್ಚು ತೀರ್ಥಯಾತ್ರಿಗಳನ್ನು ಮತ್ತು ಪ್ರವಾಸಿಗಳನ್ನು ಇಂದಿಗೂ ಬಹು ದೊಡ್ಡ ಸಂಖ್ಯೆಯಲ್ಲಿ ಸೆಳೆಯುತ್ತದೆ. ಇವಲ್ಲದೆ ಲೆಕ್ಕವಿರದಷ್ಟು ಚರ್ಚುಗಳು ರೋಮಾದಲ್ಲಿ  ಕಿಕ್ಕಿರಿದಿವೆ. ಅವೆಲ್ಲವೂ ವಾಸ್ತುಶಿಲ್ಪ ಮತ್ತು ಚಿತ್ರಕಲೆಗಳ ತವರುಗಳು.

ರೆನೈಸನ್ಸ್‌ನ ಮಹಾನ್ ಕಲಾವಿದರ ಚಿತ್ರಗಳು ಚರ್ಚುಗಳ ಗೋಡೆಗಳನ್ನು ಅಲಂಕರಿಸಿವೆ. ಉದಾಹರಣೆಗೆ ಸಂತ ಅಗಸ್ತೀನೊ ಚರ್ಚಿನಲ್ಲಿರುವ ಕ್ಯಾರವಾಗಿಯೋನ ಒಂದು ಚಿತ್ರ. ಅದು ಕ್ರಿಸ್ತನ ಹುಟ್ಟನ್ನು ಕುರಿತದ್ದು. ತನ್ನ ಮನೆಬಾಗಿಲಲ್ಲಿ ಮರಿಯಾ ದಿವ್ಯಪ್ರಭಾವಳಿಯ ಶಿಶುಕ್ರಿಸ್ತನನ್ನು ಎತ್ತಿಕೊಂಡು ನಿಂತಿದ್ದಾಳೆ.

ಬಾಗಿಲ ಹೊರಗೆ ಬೀದಿಯಲ್ಲಿ ಶಿಶು ಕ್ರಿಸ್ತನ ದರ್ಶನ ಪಡೆಯಲು ಬಂದ ಪೂರ್ವದೇಶದ ಅರಸರಾದ ಮಜಾಯಿಗಳು ಮಂಡಿಯೂರಿ ಕೂತು ದೇವಶಿಶುವಿಗೆ ನಮಿಸುತ್ತಿದ್ದಾರೆ. ಈ ಧಾರ್ಮಿಕ ಚಿತ್ರವನ್ನು ದೀರ್ಘಕಾಲ ಚರ್ಚಿನೊಳಗಿಡಲು ಕಟರ್ ಕ್ರೈಸ್ತಧರ್ಮೀಯರು ಅವಕಾಶ ಕೊಡಲಿಲ್ಲವಂತೆ. ಅವರ ವಿರೋಧಕ್ಕೆ ಎರಡುಕಾರಣಗಳಿದ್ದವಂತೆ.

ಮರಿಯಾಳನ್ನು ಚಿತ್ರಿಸುವಾಗ ಕಲಾವಿದ ಆ ಕಾಲದಲ್ಲಿ ರೋಮಾದ ಪ್ರಸಿದ್ಧ ವೇಶ್ಯೆಯೊಬ್ಬಳನ್ನು ತನ್ನ ಮಾದರಿಯಾಗಿ ಬಳಸಿದ್ದ. ಎರಡನೆಯದಾಗಿ ಆ ಚಿತ್ರದಲ್ಲಿ ಮಂಡಿಯೂರಿ ಕೂತಿರುವ ಮಜಾಯಿಗಳ ಬರಿಗಾಲಿನ ಪಾದಗಳು ಪ್ರೇಕ್ಷಕರ ಕಡೆಗೆ ತಿರುಗಿದ್ದು ಅವು ಬಹಳ ಕೊಳಕಾಗಿ ಚಿತ್ರಿತವಾಗಿವೆ.  ಆದರೆ ಚಿತ್ರದ ಧಾರ್ಮಿಕ ತೀವ್ರತೆ ಮತ್ತು ಕಲಾತ್ಮಕ ಸೌಂದರ್ಯ ಈ ವಿರೋಧಗಳನ್ನು ಜಯಿಸಿಕೊಂಡು ಸುಂದರ ಚರ್ಚಿನಲ್ಲಿ  ಇಂದು ಶೋಭಿಸುತ್ತಿದೆ.

ಈ ಚಿತ್ರವನ್ನು ನನಗೆ ತೋರಿಸಿ ಇದರ ಕತೆಯನ್ನು ಹೇಳಿದವರು ರೋಮಾ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಪ್ರೊಫೆಸರ್ ರಫೇಲ್ ತೊರಿಲ್ಲಾ ಅವರು. ಜಗತ್ತಿನ ಅತಿದೊಡ್ಡ ಸಂಸ್ಕೃತ ವಿದ್ವಾಂಸರಲ್ಲಿ  ಒಬ್ಬರಾಗಿರುವ ಅವರು ಇತಾಲಿಯಾ ಕುರಿತ ಒಂದು ಜೀವಂತ ವಿಶ್ವಕೋಶ.
 
ಅಂಥವರ ಜೊತೆಯಲ್ಲಿ ರೋಮಾದಲ್ಲಿ ತಿರುಗಾಡಿದಾಗ ಅಲ್ಲಿನ ಕಲ್ಲಗೋಡೆಗಳು ವಿಶೇಷ ಅರ್ಥಗಳಿಂದ ಹೊಳೆಯತೊಡಗುತ್ತವೆ. ಎರಡು ವರ್ಷಗಳ ಹಿಂದೆ ರೋಮಾಕ್ಕೆ ಹೋದಾಗ ಆ ನಗರದ ಸಾವಿರ ವರ್ಷ ಹಳೆಯ ಯಹೂದಿ ಕುಟುಂಬದ ವಂಶದವರಾದ ಇತಾಲಿಯಾದ ಕವಿ ರಾಬರ್ತೋ ಅವರು ಇದೇ ರೀತಿ ನನ್ನನ್ನು ಬೀದಿಬೀದಿ ಸುತ್ತಾಡಿಸಿ ಕಲ್ಲು ಕಲ್ಲುಗಳ ಕತೆ ಹೇಳಿದ್ದರು.

ಅವರ ಮನೆಯ ಮಹಡಿ ಮೇಲಿಂದ ನೋಡಿದಾಗ ರೋಮಿನ ಬಹತೇಕ ಇಮಾರತಿಗಳು ಸುತ್ತಾ ಕಾಣುತ್ತವೆ. ಅಲ್ಲಿಂದ ಅನತಿ ದೂರದಲ್ಲಿ ತೈಬರ್ ನದಿ. ಅದರೊಳಗಿನ ಒಂದು ನಡುಗಡ್ಡೆ ಇಂದಿನ ರೋಮಾನಗರದ ಮೂಲ. ರೋಮಾಕ್ಕೆ ಸಂತ ಪೀಟರ್ ಬಂದಾಗ ಅಲ್ಲಿಯೇ ನೆಲಸಿದ್ದನಂತೆ.

ನಾನು ಹಿಂದಿನ ಯಾತ್ರೆಗಳಲ್ಲಿ ರೋಮಾ ನಗರವನ್ನು ಸಾಕಷ್ಟು ನೋಡಿದ್ದೆ. ಆದ್ದರಿಂದ ಈ ಬಾರಿ ನನ್ನ ಅತಿಥೇಯರಾಗಿದ್ದ ತೊರಿಲ್ಲಾ ಅವರು ನನಗೆ ರೋಮಾದ ಸುತ್ತಲ ರಮ್ಯ ಪ್ರದೇಶಗಳನ್ನು ತೋರಿಸಲು ತೀರ್ಮಾನಿಸಿದರು. ರೋಮದ ನಾಕೂ ದಿಕ್ಕಿನಲ್ಲಿ ಐತಿಹಾಸಿಕ ಮಹತ್ವದ ಹಲವು ತಾಣಗಳಿವೆ. ಅಗ್ನಿಪರ್ವದ ತಾಣವಾಗಿರುವ ಪಾಂಪೆ ರೋಮಾದಿಂದ ಅಷ್ಟೇನೂ ದೂರವಿಲ್ಲ.

ತೊರಿಲ್ಲೋ ಅವರು ವಾಸವಾಗಿರುವ ರೊಕೊ ಪ್ರಯರಾ ರೋಮಾದಿಂದ ಐವತ್ತು ಕಿ.ಮೀ. ದೂರದಲ್ಲಿದೆ. ಇದೊಂದು 6000 ಅಡಿ ಎತ್ತರದಲ್ಲಿರುವ ಪರ್ವತ. ಅದರ ನೆತ್ತಿಯ ಮೇಲೊಂದು ಹಳೆಯ ಪಟ್ಟಣ. ಅಲ್ಲೊಂದು ಸಾವಿರವರ್ಷ ಹಳೆಯ ಕೋಟೆ. ಅಲ್ಲಿನ ಹಳೆಯ ಕಲ್ಲು ರಸ್ತೆಗಳ ಮೇಲೆ ನಿಂತಿರುವ ಮನೆಗಳು ನೂರಾರು ವರ್ಷ ಹಳೆಯವು. ಆಧುನಿಕ ಸಂಸ್ಕೃತಿಯ ಎಲ್ಲ ಅನುಕೂಲಗಳನ್ನು ಹೊಂದಿದ್ದರೂ ರೋಕೊ ಪ್ರಯರಾ ತನ್ನ ಹಳ್ಳಿಯ ಗುಣವನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಬಹುತೇಕ ಮನೆಗಳು ಕಲ್ಲಿನ ಕಟ್ಟಡಗಳು. ಬಾಗಿಲುಗಳು, ಕಿಟಕಿಗಳು ಶತಮಾನಗಳ ಕತೆ ಹೇಳುವಂತಿವೆ.

ಊರೊಳಗಿನ ಇಕ್ಕಟ್ಟಾದ ರಸ್ತೆಗಳು ಕಡಿದಾದ ಏರುತಗ್ಗುಗಳಿಂದ ಕೂಡಿದ್ದು ಹಿಮಾಲಯದ ನಡುವಿನ ಹಳ್ಳಿಗಳನ್ನು ಜ್ಞಾಪಿಸುತ್ತವೆ. ಊರಿನ ಸ್ವಚ್ಛ ಹವಾದಲ್ಲಿ  ತೇಲುವ ಉರಿವ ಸೌದೆಗಳ ಗಮಲೂ ನಮ್ಮ ಹಳ್ಳಿಗಳನ್ನೇ ನೆನಪಿಸುತ್ತಿವೆ. ರೋಮಾ ನಗರದಿಂದ ಇಲ್ಲಿ  ಬಂದಾಗ ಗಡಿಬಿಡಿಯ ಮಹಾನ್ ನಗರದ ವಾತಾವರಣದಿಂದ ಮುಕ್ತರಾಗಿ ಒಂದು ಪ್ರಶಾಂತ ವಲಯವನ್ನು ಪ್ರವೇಶಿಸುತ್ತೇವೆ.
 
ಮಹಾನಗರದಲ್ಲಿ  ಕಾಣೆಯಾಗಿರುವ ಆತ್ಮೀಯತೆ, ಸೌಹಾರ್ದತೆಗಳು ಇಲ್ಲಿನ್ನ್ನೂ ಚಾಲ್ತಿಯಲ್ಲಿವೆ. ಇಲ್ಲೊಂದು ಬೇಕರಿಗೆ ನಾನು ತೊರಿಲ್ಲಾ ಅವರ ಜೊತೆ ಹೋದೆ. ಬ್ರೆಡ್ಡು ಕೊಂಡಬಳಿಕ ಸೀದಾ ಹೊರಟು ನಿಂತೆ. ಬ್ರೆಡ್ ಅಂಗಡಿಯ ಹುಡುಗಿಗೆ ತುಂಬಾ ಕಸಿವಿಸಿಯಾಯಿತು.

ತೊರಿಲ್ಲಾ ಹೇಳಿದರು:  ಇಲ್ಲಿ ಹೊರಗೆ ಹೋಗುವಾಗ ನಕ್ಕು ಹೋಗಿಬರುತ್ತೇನೆ ಅನ್ನಬೇಕು. ಇಲ್ಲದಿದ್ದರೆ ಹಳ್ಳಿಜನ ನಿಮ್ಮನ್ನು ಅನಾಗರೀಕ ಅಂದುಕೋತಾರೆ  ಅಂತ ಎಚ್ಚರಿಸಿದರು. ನಾನು ಹೋಗಿಬರುತ್ತೇನೆಂದು ಹೇಳಿದಾಗ ಆ ಹುಡುಗಿ ನಗುನಗುತ್ತಾ  ಚೋ  ಎಂದು ಇತಾಲಿಯಾ ಭಾಷೆಯಲ್ಲಿ ನಮ್ಮನ್ನು ಬೀಳ್ಕೊಟ್ಟಳು.

ತೊರಿಲ್ಲಾ ಅವರ ಮನೆಯೇ ಒಂದು ವಸ್ತುಸಂಗ್ರಹಾಲಯ. ಇಲ್ಲಿ  ಸಂಸ್ಕೃತದ ಹಲವು ಹಸ್ತಪ್ರತಿಗಳು ಹಳೆಯ ಪುಸ್ತಕಗಳ ಜೊತೆಗೆ ಇತಾಲಿಯಾ, ಫ್ರೆಂಚ್, ಸ್ಪ್ಯಾನಿಷ್ ಮತ್ತು ಇಂಗ್ಲಿಷಿನ ಅಸಂಖ್ಯಾತ ಪುಸ್ತಕಗಳು ಇಟ್ಟಾಡುತ್ತಿವೆ. ಅವರ ಮನೆಯ ಕುರ್ಚಿ, ಮೇಜುಗಳು ಕಡೇಪಕ್ಷೆ ನೂರಿನ್ನೂರು ವರ್ಷ ಹಳೆಯವು. ಅವರು ಅಡಿಗೆಗೆ ಬಳಸುವ ಚಾಕು ಮುನ್ನೂರು ವರ್ಷ ಹಳೆಯದು. ಈಜಿಪ್ಟಿನದಂತೆ. ಗ್ರೀಸ್ ಮತ್ತು ಭಾರತದಿಂದ ತಂದ ಚಿಕ್ಕಚಿಕ್ಕ ಸುಂದರ ಕಲಾಕೃತಿಗಳು, ಚಿತ್ರಪಟಗಳು ಅವರ ಮನೆಯನ್ನಲಂಕರಿಸಿವೆ.

ಅವರು ನನಗೆ ಕೊಟ್ಟ ಕೋಣೆಯಲ್ಲೊಂದು ಕರೀಮರದ ಸುಂದರ ಮೇಜೊಂದಿತ್ತು. ಅದಕ್ಕೆ ವಿಶೇಷ ಮಹತ್ವವಿದೆ. ತೊರಿಲ್ಲಾ ಅವರ ಗುರುಗಳಾದ ಸಂಸ್ಕೃತ ವಿದ್ವಾಂಸ ಪ್ರೊ. ನಾಲಿ ಅವರು ಇದೇ ಮೇಜಿನ ಮೇಲೆಯೇ ಆಚಾರ್ಯ ಅಭಿನವಗುಪ್ತರ  ತಂತ್ರಾಲೋಕ  ಎಂಬ ಮಹತ್ಕೃತಿಯನ್ನು ಅನುವಾದಿಸಿ ಮುಗಿಸಿದರಂತೆ.

ಈ ಮಹತ್ಕೃತಿ ಇಂಗ್ಲಿಷಿಗೆ ಇನ್ನೂ ಪೂರ್ಣವಾಗಿ ತರ್ಜುಮೆಯಾಗಿಲ್ಲ. ಅದರ ಹಿಂದಿ ಅನುವಾದ ಬಂದದ್ದು ತೀರ ಇತ್ತೀಚೆಗೆ. ಆದರೆ ಅದೇ ಗ್ರಂಥ ಇತಾಲಿಯ ಭಾಷೆಗೆ ಅರ್ಧ ಶತಮಾನದಷ್ಟು ಹಿಂದೆಯೇ ಅನುವಾದವಾಯಿತು. ಇತಾಲಿಯಾದ ಸಂಸ್ಕೃತ ವಿದ್ವತ್ತಿನ ಒತ್ತು ವಿಶೇಷವಾಗಿ ತಂತ್ರ ಮತ್ತು ಆಗಮಗಳ ಬಗೆಗೆ. ಅದರಲ್ಲೂ ಕಾಶ್ಮೀರದ ಶೈವದರ್ಶನದ ಬಗ್ಗೆ ವಿದ್ವತ್ತು ತುಂಬಾ ಬೆಳೆದಿದೆ. ತೊರಿಲ್ಲಾ ಅವರ ಗುರು ನೋಲಿ ಮತ್ತು ಅವರ ಗುರು ತುಚ್ಚಿ ಈ ಕ್ಷೇತ್ರಕ್ಕೆ ವಿಶೇಷ ಗಮನ ನೀಡಿದರು. 

ಈಶ್ವರಪ್ರತ್ಯಭಿಜ್ಞಾ ವಿಮರ್ಶಿನಿ ಯನ್ನು ಇತಾಲಿಯ ಮತ್ತು ಇಂಗ್ಲಿಷ್‌ಗೆ ಅನುವಾದಿಸಿರುವ ತೊರಿಲ್ಲಾ ಈಗ ಕಾಶ್ಮೀರ ದರ್ಶನದ ಇನ್ನೊಂದು ಮಹತ್ಕೃತಿಯಾದ ಸೋಮಾನಂದನ  ಶಿವದೃಷ್ಟಿ ಯ ಅನುವಾದಕ್ಕೆ ಮುಂದಾಗಿದ್ದಾರೆ, ಮ್ಯೋಕ್ಸ್ ಮುಲ್ಲರ್ ಸಂಸ್ಕೃತದ ಜ್ಞಾನಭಂಡಾರವನ್ನು ಮೊಟ್ಟಮೊದಲಿಗೆ ಪಡುವಣದವರಿಗೆ ತೆರೆದಿಟ್ಟನೆಂದು ನಾವು ನಂಬಿದ್ದೇವೆ.
 
ಆದರೆ ತೊರಿಲ್ಲಾ ಅವರ ಪ್ರಕಾರ ಅದಕ್ಕೂ ಮುನ್ನೂರು ವರ್ಷ ಮೊದಲು ಇತಾಲಿಯಾದಲ್ಲಿ ಸಂಸ್ಕೃತದ ಬಗೆಗಿನ ಜ್ಞಾನದಾಹ ಸುರುವಾಯಿತು. ಹತ್ತೊಂಬತ್ತನೆ ಶತಮಾನದ ಹೊತ್ತಿಗೆ ಒಬ್ಬ ಕ್ಯಾಥೊಲಿಕ್ ಪಾದ್ರಿ ಇತಾಲಿಯಾದವರಿಗೆ ಸಂಸ್ಕೃತ ಕಲಿಸುವ ಸರಳ ವ್ಯಾಕರಣ ಪುಸ್ತಕವೊಂದನ್ನು ರಚಿಸಿದನಂತೆ. ಆ ಗ್ರಂಥವನ್ನಾಧರಿಸಿ ತೊರಿಲ್ಲಾ ಅವರು ರಚಿಸಿರುವ ಸಂಸ್ಕೃತ ಕಲಿಸುವ ಪುಸ್ತಕ ಈಗಾಗಲೇ ಇತಾಲಿಯಾದಲ್ಲಿ ಬಹಳ ಜನಪ್ರಿಯವಾಗಿದ್ದು, ಅದರ ಇಂಗ್ಲಿಷ್ ಆವೃತ್ತಿಯೂ ಈಚೆಗೆ ಕೆನಡಾದಲ್ಲಿ ಅಚ್ಚಾಗಿದೆ.

ಸಂಸ್ಕೃತ ಭಾಷೆ ಮತ್ತು ದರ್ಶನಕ್ಕೆ ತನ್ನನ್ನು ಸಮರ್ಪಿಸಿಕೊಂಡಿರುವ ತೊರಿಲ್ಲಾ ಅವರಿಗೆ ಸಂಸ್ಕೃತ ಕಾವ್ಯದ ಬಗೆಗೆ ಅಷ್ಟು ಪ್ರೀತಿಯಿಲ್ಲ. ತೊರಿಲ್ಲಾ ಅವರು ಭಾರತೀಯ ದರ್ಶನಗಳ ಬಗೆಗೆ ಬರೆದಿರುವ ಪುಸ್ತಕ ಇತಾಲಿಯಾ ಭಾಷೆಯಲ್ಲಿ ತುಂಬಾ ಜನಪ್ರಿಯವಾಗಿದ್ದು, ಈಚೆಗೆ ಇಂಗ್ಲಿಷಿಗೂ ತರ್ಜುಮೆಗೊಂಡು ಪ್ರಕಟವಾಗಿದೆ.

ಈ ಪುಸ್ತಕ ಭಾರತದ  ವಿವಿಧ ದಾರ್ಶನಿಕ ಪಂಥಗಳ ಕುರಿತ ತೊರಿಲ್ಲಾ ಅವರ ಅಗಾಧ ವಿದ್ವತ್ತಿಗೆ ದ್ಯೋತಕ. ಆದರೆ ಸಂಸ್ಕೃತಕಾವ್ಯ ಅವರಿಗೆ ಕೃತಕವಾಗಿ ಕಾಣುತ್ತದಂತೆ. ಆದರೆ ಇತಾಲಿಯಾದ ಕಾವ್ಯವೆಂದರೆ ಅವರಿಗೆ ಪ್ರಾಣ. ದಾಂತೆ ಅವರ ಮೆಚ್ಚಿನ ಕವಿ. ಅವನನ್ನು ಬಿಟ್ಟರೆ ಹತ್ತೊಂಬತ್ತನೆ ಶತಮಾನದ ಲಿಯೋಪರ್ದಿ ಅವರ ಅಚ್ಚುಮೆಚ್ಚಿನ ಕವಿ.

ತೊರಿಲ್ಲಾ ತಮ್ಮ ಬರವಣಿಗೆಯಲ್ಲಿ ಕಾವ್ಯಾತ್ಮಕತೆಯನ್ನು ಎಷ್ಟು ಮೈಗೂಡಿಸಿ ಕೊಂಡಿದ್ದಾರೆಂದರೆ ದರ್ಶನಶಾಸ್ತ್ರದಂಥ ಶುಷ್ಕ ವಿಷಯದ ಬಗ್ಗೆಯೂ ಕಾವ್ಯಾತ್ಮಕವಾಗಿ ಬರೆಯಬಲ್ಲರು,ಹೀಗೆ ಪೂರ್ವ ಮತ್ತು ಪಶ್ಚಿಮಗಳ, ಕಾವ್ಯ ಮತ್ತು ದರ್ಶನಗಳ, ಜೀವನೋತ್ಸಾಹ ಮತ್ತು ವಿದ್ವತ್ತುಗಳ ಸಂಗಮವಾಗಿರುವ ತೊರಿಲ್ಲಾ ಅವರು ರೋಮಾದ ಆಸುಪಾಸಿನ ಸನಾತನ ನಗರಗಳನ್ನು ನನಗೆ ತೋರಿಸುವ ಹಟ ಮಾಡಿದರು.ಇಂಥ ಒಂದು ನಗರ ಪಾಲಿಸ್ತ್ರೀನಾ.

ಎರಡು ಸಾವಿರ ವರ್ಷಗಳ ಹಿಂದೆ ಬಹು ದೊಡ್ಡ ವಾಣಿಜ್ಯ ಕೇಂದ್ರವಾಗಿ ಬೆಳೆದು ನಿಂತು ಅತ್ಯಂತ ಸಂಪದ್ಭರಿತವಾಗಿದ್ದ ಈ ನಗರ ಆಮೇಲೆ ರೋಮಾದ ವಿಕಾಸದ ನಂತರ ಮಂಕಾಯಿತು. ರೋಮಾದ ಪ್ರಸಿದ್ಧ ಬಾರ್ಬೇನಿ ಮನೆತನದವರು ಇಲ್ಲಿ  ಪೃಥ್ವೀದೇವತೆಯ ಪ್ರಾಚೀನ ದೇಗುಲವನ್ನು ತಮ್ಮರಮನೆಯಾಗಿಸಿದರು, ಈಗ ಆ ಅರಮನೆ ಒಂದು ಅದ್ಭುತ ವಸ್ತು ಸಂಗ್ರಹಾಲಯ.

ಇನ್ನೂ ಪ್ರಾಚೀನವಾದುದು ಸನಾತನ ನಗರ ತುಸ್ಕೋಲಾ. ರೋಮ ಉಚ್ಛ್ರಾಯ ಸ್ಥಿತಿಗೆ ಬಂದ ಮೇಲೂ ಅದಕ್ಕೆ ಸೆಡ್ಡು ಹೊಡೆಯುತ್ತಾ ಶರಣಾಗದ ಹೆಮ್ಮೆಯ ನಗರ. ಎರಡು ಸಾವಿರ ವರ್ಷಗಳ ಹಿಂದೆ ರೋಮಾದವರು ಈ ನಗರವನ್ನು ತಮ್ಮ ಮಿತ್ರನಗರವನ್ನಾಗಿ ಮಾಡಿಕೊಂಡರು. ಈಗ ಈ ನಗರದ ಒಂದು ಕುಸಿದ ಅರಮನೆ, ಒಂದು ಜೀರ್ಣವಾದ ಗ್ರೀಕ್ ರಂಗಭೂಮಿ ಎರಡೇ ಸ್ಮಾರಕಗಳಾಗಿ ಉಳಿದಿದ್ದು, ನಗರದ ಬಹುಭಾಗ ಅದರ ಮುಂದಿರುವ ಬೆಟ್ಟದಡಿಯಲ್ಲಿ ಹುದುಗಿದೆಯಂತೆ.

ಅದರ ಉತ್ಖಲನ ಇನ್ನೂ ನಡೆಯಬೇಕಾಗಿದ್ದು ಇತಾಲಿಯಾ ಆರ್ಥಿಕ ಗೊಡವೆಗಳ ಕಾರಣ ಸ್ಥಗಿತಗೊಂಡಿದೆ.ತೊರಿಲ್ಲಾ ಹೇಳಿದರು:  ಇತಾಲಿಯಾದ ಮಣ್ಣೇ ಹಾಗೆ. ಎಲ್ಲಿ  ಅಗೆದರೂ ಒಂದು ನಿಧಿ ಸಿಗುತ್ತದೆ.  ಇಂಥ ಹೂತ ನಿಧಿಗಳು, ಲೆಕ್ಕವಿರದಷ್ಟು ಸ್ಮಾರಕಗಳು, ಇಮಾರತಿಗಳು ಇತಾಲಿಯಾದಲ್ಲಿ ರ್ತ್ಯದ ನಶ್ವರತೆಯನ್ನೂ ಆ ನಶ್ವರತೆಯ ಸೊಬಗನ್ನೂ ಸದಾ ಸಾರುತ್ತಿವೆ.

(ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT