ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸಕಾರ ಭವಿಷ್ಯ ನುಡಿಯಬಾರದು

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ವೃತ್ತಿಪರರಾಗಿರುವ ಹೆಚ್ಚಿನ ಇತಿಹಾಸಕಾರರು ಭೂತಕಾಲ ಮತ್ತು ಭೂತಕಾಲಕ್ಕೆ ಮಾತ್ರ ಅಂಟಿಕೊಂಡಿರುತ್ತಾರೆ. ಈ ಲೇಖಕನ ಹಾಗೆ ಕೆಲವರು ಆಗೊಮ್ಮೆ ಈಗೊಮ್ಮೆ ಭೂತಕಾಲವನ್ನು ಬಳಸಿಕೊಂಡು ವರ್ತಮಾನದ ಮೇಲೆ ಬೆಳಕು ಚೆಲ್ಲುತ್ತಾರೆ. ಆದರೆ, ಭವಿಷ್ಯದಲ್ಲಿ ಏನು ನಡೆಯಬಹುದು ಎಂಬುದನ್ನು ಇತಿಹಾಸಕಾರ ಹೇಳಬೇಕೇ?  ಈ ದೇಶದಲ್ಲಿ ಸಾಮಾನ್ಯವಾಗಿ ಇತಿಹಾಸಕಾರನಿಗಿಂತ ಜೋತಿಷಿಗೆ ಹೆಚ್ಚಿನ ಹಣ ದೊರೆಯುವುದೂ ಇಂತಹ ಪ್ರಲೋಭನೆಗೆ ಪ್ರಮುಖ ಕಾರಣ. ಅದೇನೇ ಇದ್ದರೂ ಈವರೆಗೆ ನಾನು ಇಂತಹ ಪ್ರಲೋಭನೆಗಳನ್ನು ಮೆಟ್ಟಿ ನಿಂತಿದ್ದೇನೆ. ಒಬ್ಬ ವ್ಯಕ್ತಿಯ ಭವಿಷ್ಯವನ್ನು ಹೇಳುವುದೇ ಕಷ್ಟ, ಹಾಗಿರುವಾಗ ಹಲವು ಜನರು ಸಂಕೀರ್ಣ ರೀತಿಯಲ್ಲಿ ಕೆಲಸ ಮಾಡುವುದರ ಭವಿಷ್ಯವನ್ನು ಊಹಿಸುವುದು ಅಸಾಧ್ಯವೇ ಸರಿ.

ಇತರರು ಹೇಳಿದ ಭವಿಷ್ಯವನ್ನು ಓದಿಕೊಂಡದ್ದು ನನ್ನ ಈ ಭಯವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ‘ಭಾರತ ಒಂದು ದೇಶವಾಗಿ ಉಳಿಯದು, ಬದಲಿಗೆ ಹತ್ತಾರು ಭಾಗಗಳಾಗಿ ಹರಿದು ಹಂಚಿ ಹೋಗಲಿದೆ’ ಎಂದು 1950ರ ದಶಕದ ಉದ್ದಕ್ಕೂ ಹಲವು ವಿದೇಶಿ ವಿಶ್ಲೇಷಣಕಾರರು ಹೇಳಿದ್ದರು. ಇದು ‘ಭಾರತದ ನಾಲ್ಕನೆಯ ಮತ್ತು ಖಚಿತವಾಗಿಯೂ ಕೊನೆಯ ಸಾರ್ವತ್ರಿಕ ಚುನಾವಣೆ’ ಎಂದು ‘ಲಂಡನ್ ಟೈಮ್ಸ್’ ಪತ್ರಿಕೆಯ ವರದಿಗಾರ 1967ರಲ್ಲಿ ಬರೆದಿದ್ದರು. ‘ಇಂದಿರಾ ಗಾಂಧಿ ಅವರ ರಾಜಕೀಯ ಜೀವನ ಕೊನೆಯಾಯಿತು’ ಎಂದು 1977ರ ಸಾರ್ವತ್ರಿಕ ಚುನಾವಣೆ ಬಳಿಕ ಭಾರತದ ಹಲವು ಪತ್ರಕರ್ತರು ಬರೆದಿದ್ದರು. ಭಾರತವು ನಿರಂಕುಶಾಧಿಪತ್ಯ ಮತ್ತು ಬಹುಸಂಖ್ಯಾತವಾದಕ್ಕೆ ಕುಸಿಯಲಿದೆ ಎಂದು 1992ರಲ್ಲಿ ಬಾಬರಿ ಮಸೀದಿಯ ಧ್ವಂಸದ ನಂತರ ಭಾರತದ ಮತ್ತು ವಿದೇಶದ ಹಲವು ಲೇಖಕರು ಭವಿಷ್ಯ ನುಡಿದಿದ್ದರು.

ನುಡಿದ ಭವಿಷ್ಯ ಸುಳ್ಳಾಗಿ ಹೋದದ್ದು ಬಹಳ ಗೌರವಾನ್ವಿತ ಲೇಖಕರೂ ಸೇರಿ ಹಲವರ ವಿಷಾದದ ವಿಧಿಯಾಗಿದೆ. 20ನೇ ಶತಮಾನದಲ್ಲಿ ಬಹುಶಃ ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದ್ದ ಪತ್ರಕರ್ತ ರಿಜಾರ್ಡ್ ಕಪುಸಿನ್‌ಸ್ಕಿ – ಯುರೋಪ್, ರಷ್ಯಾ, ಏಷ್ಯಾ ಮತ್ತು ಆಫ್ರಿಕದ ಬಗ್ಗೆ ಮಹತ್ವದ ಹಲವು ಕೃತಿಗಳನ್ನು ರಚಿಸಿದ್ದಾರೆ. ರೆಜಾ ಪಹ್ಲವಿಯ ಉಚ್ಛ್ರಾಯ ಮತ್ತು ಕುಸಿತದ ಬಗ್ಗೆ ಅವರು ರಚಿಸಿದ ‘ಷಾ ಆಫ್ ಷಾಸ್’ ಬಹಳ ಪ್ರಸಿದ್ಧ ಪುಸ್ತಕ. ಅಯಾತೊಲ್ಲಾ ಖೊಮೇನಿಯ ಕ್ರಾಂತಿಯ ಯಶಸ್ಸಿನ ಬಳಿಕ 1980ರ ದಶಕದ ಆರಂಭದಲ್ಲಿ ಟೆಹರಾನ್ ಮತ್ತು ಇರಾನ್ ಬಗ್ಗೆ ಕಪುಸಿನ್‌ಸ್ಕಿ ಹೀಗೆ ಬರೆದಿದ್ದರು: ‘ಜಗತ್ತಿನಲ್ಲಿ ಇಂಗ್ಲಿಷ್‌ನಲ್ಲಿ ವ್ಯವಹರಿಸುವುದು ಹೆಚ್ಚು ಹೆಚ್ಚು ಕಷ್ಟವಾಗಲಿದೆ ಎಂದು ಆ ಭಾಷೆ ಕಲಿಯುವ ಪ್ರತಿ ವ್ಯಕ್ತಿಯೂ ಅರ್ಥ ಮಾಡಿಕೊಳ್ಳಬೇಕು. ಫ್ರೆಂಚ್ ಭಾಷೆ ಮತ್ತು ಯುರೋಪ್‌ನ ಎಲ್ಲ ಭಾಷೆಗಳಿಗೂ ಇದುವೇ ಅನ್ವಯವಾಗುತ್ತದೆ’.

ತಮ್ಮ ಅಧಿಕಾರಯುತವಾದ ಭವಿಷ್ಯಕ್ಕೆ ಅವರು ಕೊಟ್ಟ ಸಮರ್ಥನೆ ಹೀಗಿತ್ತು: ‘ಒಂದು ಕಾಲದಲ್ಲಿ ಇಡೀ ಜಗತ್ತನ್ನು ಯುರೋಪ್ ಆಳುತ್ತಿತ್ತು. ತನ್ನ ವ್ಯಾಪಾರಿಗಳು, ಯೋಧರು ಮತ್ತು ಧರ್ಮ ಪ್ರಚಾರಕರನ್ನು ಪ್ರತಿ ಖಂಡದ ಮೂಲೆ ಮೂಲೆಗೂ ಕಳುಹಿಸಿ ತನ್ನ ಹಿತಾಸಕ್ತಿ ಮತ್ತು ಸಂಸ್ಕೃತಿಯನ್ನು ಅವರ ಮೇಲೆ ಹೇರುತ್ತಿತ್ತು... ಜಗತ್ತಿನ ಅತ್ಯಂತ ದುರ್ಗಮ ಮೂಲೆಯಲ್ಲಿಯೂ ಯುರೋಪ್‌ನ ಭಾಷೆಯನ್ನು ತಿಳಿದಿರುವುದು ಗೌರವದ ಸಂಕೇತವಾಗಿತ್ತು, ಮಹತ್ವಾಕಾಂಕ್ಷೆಯ ದೃಢೀಕರಣವಾಗಿತ್ತು ಮತ್ತು  ಸಾಮಾನ್ಯವಾಗಿ ಬದುಕಿನ ಅಗತ್ಯವೂ ಆಗಿತ್ತು; ವೃತ್ತಿ ಮತ್ತು ಬಡ್ತಿಗೆ ಇದುವೇ ಆಧಾರವಾಗಿತ್ತು ಮತ್ತು ಕೆಲವೊಮ್ಮೆ ಮನುಷ್ಯ ಎಂಬ ಪರಿಗಣನೆ ದೊರೆಯುವುದಕ್ಕೆ ಇದ್ದ ಕಾರಣವೂ ಆಗಿತ್ತು... ಇಂದಿನ ಜಗತ್ತು ಭಿನ್ನವಾಗಿದೆ. ನೂರಾರು ದೇಶಗಳಲ್ಲಿ ಈಗ ದೇಶಪ್ರೇಮ ಉದಯಿಸಿದೆ. ಪ್ರತಿ ದೇಶವೂ ತನ್ನ ಜನರು, ಪ್ರದೇಶ, ಸಂಪನ್ಮೂಲ ಮತ್ತು ಸ್ಥಳೀಯ ಪರಂಪರೆಗೆ ಅನುಗುಣವಾದ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಲು ಬಯಸುತ್ತಿದೆ’.

ಕಪುಸಿನ್‌ಸ್ಕಿ ಇದನ್ನು ಬರೆದು ಕೆಲವೇ ವರ್ಷಗಳಲ್ಲಿ ಸೋವಿಯತ್ ಒಕ್ಕೂಟ ಪತನವಾಯಿತು. ಈಗ ಜಗತ್ತಿನ ಏಕೈಕ ಸೂಪರ್ ಪವರ್ ಆಗಿರುವ ದೇಶದ ನೇತೃತ್ವದಲ್ಲಿ ಎರಡನೇ ಸುತ್ತಿನ ಜಾಗತೀಕರಣ ಆರಂಭವಾಯಿತು. ಈ ಸೂಪರ್ ಪವರ್ ದೇಶದ ಭಾಷೆ ಇಂಗ್ಲಿಷ್. ಆ ಲೇಖಕನ ಸ್ವಂತ ದೇಶ ಪೋಲೆಂಡ್ ಪ್ರಜಾಪ್ರಭುತ್ವವಾಗಿ ಬದಲಾಯಿತು ಮತ್ತು ಅದು ಐರೋಪ್ಯ ಒಕ್ಕೂಟವನ್ನು ಸೇರಿತು. ಈ ಒಕ್ಕೂಟದ ಪ್ರಧಾನ ಭಾಷೆಯೂ ಇಂಗ್ಲಿಷೇ ಆಗಿದೆ. ಅಂತರ್ಜಾಲದ ಪ್ರಧಾನ ಭಾಷೆ ಇಂಗ್ಲಿಷ್. ಹಿಂದೆ ವಸಾಹತುಗಳಾಗಿದ್ದ ಆಫ್ರಿಕ ಮತ್ತು ಏಷ್ಯಾದ ಹಲವು ದೇಶಗಳಲ್ಲಿ ಇಂಗ್ಲಿಷ್ ಕಲಿಯಬೇಕೆಂಬ ಬಯಕೆ ವ್ಯಾಪಕವಾಗಿದೆ. 1980ರ ದಶಕದಲ್ಲಿ ಕಪುಸಿನ್‌ಸ್ಕಿ  ಭೇಟಿಯಾದ ಇರಾನ್‌ನ ತೀವ್ರಗಾಮಿಗಳ ಮಕ್ಕಳು ಈಗ ಇಂಗ್ಲಿಷ್ ಕಲಿತಿದ್ದಾರೆ ಅಥವಾ ಕಲಿಯುವ ಪ್ರಕ್ರಿಯೆಯಲ್ಲಿದ್ದಾರೆ.

ಆಶ್ಚರ್ಯದ ಸಂಗತಿ ಎಂದರೆ, ಕಪುಸಿನ್‌ಸ್ಕಿ ಅವರು ಹೇಳುವುದಕ್ಕೆ ಬಹಳ ಮೊದಲೇ ನಮ್ಮ ರಾಜ್ಯದ ಲೇಖಕರೊಬ್ಬರು ‘ದೀರ್ಘಾವಧಿಯಲ್ಲಿ ಭಾರತದಲ್ಲಿ ಇಂಗ್ಲಿಷ್ ಉಳಿಯಬಾರದು ಮತ್ತು ಉಳಿಯುವುದಿಲ್ಲ’ ಎಂದಿದ್ದರು. 1965ರಲ್ಲಿ ಅಮೆರಿಕದ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ಲೇಖನದಲ್ಲಿ ಅವರು ಹೀಗೆ ಬರೆದಿದ್ದರು: ‘ಈ ವಿಚಾರದಲ್ಲಿ (ಭಾರತದಿಂದ ಇಂಗ್ಲಿಷ್ ಕಣ್ಮರೆಯಾಗುವುದು) ನನಗೆ ಯಾವ ವಿಷಾದವೂ ಇಲ್ಲ. ಹಾಗೆ ನೋಡಿದರೆ ಇದು ಸಂಪೂರ್ಣವಾಗಿ ಒಳ್ಳೆಯದು ಎಂದೇ ಭಾವಿಸಿದ್ದೇನೆ. ಇಂಗ್ಲಿಷ್ ಮಾತನಾಡುವ ವರ್ಗದ ದೊಡ್ಡಸ್ತಿಕೆ ನಮಗೆ ಸಾಕಾಗಿದೆ’. ಆದರೆ ವಾಸ್ತವದಲ್ಲಿ ಭಾರತದಿಂದ ಇಂಗ್ಲಿಷ್ ಮರೆಯಾಗಲಿಲ್ಲ. ಸಾಮಾಜಿಕ ಸ್ಥಾನಮಾನದ ಗುರುತಾಗಿದ್ದ ಇಂಗ್ಲಿಷ್ 21ನೇ ಶತಮಾನದಲ್ಲಿ ಸೇವಾ ಆರ್ಥವ್ಯವಸ್ಥೆಯಲ್ಲಿ ಉದ್ಯೋಗ ಪಡೆಯುವುದಕ್ಕೆ ಇರುವ ಅನಿವಾರ್ಯತೆಯಾಯಿತು. ಮತ್ತೂ ಒಂದು ಆಸಕ್ತಿದಾಯಕ ತಿರುವು ಎಂದರೆ, ಕೆಳಜಾತಿಯ ಜನರು ತಮ್ಮ ಮಕ್ಕಳಿಗೆ ಇಂಗ್ಲಿಷ್ ವಿದ್ಯಾಭ್ಯಾಸವೇ ಬೇಕು ಎಂದು ಆಗ್ರಹಿಸುತ್ತಿದ್ದಾರೆ. ‘ಒಂದು ಕಾಲದಲ್ಲಿ ಅಧಿಕಾರ ಮತ್ತು ಪ್ರತಿಷ್ಠೆಯ ಭಾಷೆಯಾಗಿದ್ದ ಸಂಸ್ಕೃತವನ್ನು ನಮಗೆ ನೀವು ನಿರಾಕರಿಸಿದಿರಿ. ಈಗ ಭರವಸೆ ಮತ್ತು ಅವಕಾಶದ ಆಧುನಿಕ ಭಾಷೆಯಾದ ಇಂಗ್ಲಿಷ್ ನಮಗೆ ಲಭ್ಯವಾಗದಂತೆ ನೋಡುತ್ತಿದ್ದೀರಿ’ ಎಂದು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಬದಲಿಗೆ ಮಾತೃ ಭಾಷೆಯೇ ಬೋಧನಾ ಮಾಧ್ಯಮವಾಗಬೇಕು ಎಂದು ಪ್ರತಿಪಾದಿಸಿದ ಭಾಷಿಕ ಚಿಂತಕರಿಗೆ ದಲಿತರು ಪ್ರತಿಕ್ರಿಯೆ ನೀಡಿದರು.

ನಾನು ಓದಿದ ಮೂರ್ಖ ಅಥವಾ ಹುಸಿ ಭವಿಷ್ಯಗಳಲ್ಲಿ ನನ್ನ ಮೆಚ್ಚಿನ ರಾಷ್ಟ್ರೀಯವಾದಿ ಚಿಂತಕ ಬಿ.ವಿ. ಕೇಸ್ಕರ್ ಅವರದ್ದೂ ಒಂದು. ಒಮ್ಮೆ ಬ್ರಿಟಿಷರು ಭಾರತವನ್ನು ತೊರೆದರೆ ಕ್ರಿಕೆಟ್ ಆಟ ಕೂಡ ಅವರೊಂದಿಗೆ ಹೋಗಲಿದೆ ಎಂದು ‘ಬ್ಲಿಟ್ಜ್’ ಪತ್ರಿಕೆಯಲ್ಲಿ 1946ರಲ್ಲಿ ಕೇಸ್ಕರ್ ಬರೆದಿದ್ದರು.

ಫ್ರಾನ್ಸ್‌ನಲ್ಲಿ ಓದಿದ್ದ ಕೇಸ್ಕರ್ ಅವರು ಕ್ರಿಕೆಟ್ ‘ಸಂಪೂರ್ಣವಾಗಿ ಇಂಗ್ಲಿಷ್ ಸಂಸ್ಕೃತಿ ಮತ್ತು ಸ್ಫೂರ್ತಿಯನ್ನು ಹೊಂದಿದೆ’, ‘ಇದು ಇಂಗ್ಲಿಷ್ ಗ್ರಾಮ ಪ್ರದೇಶದ ಅಲ್ಲಿನ ವಿಚಿತ್ರ ಹವಾಮಾನ ಮತ್ತು ಸಾಮಾಜಿಕ ಪದ್ಧತಿಗಳ ಭಾಗ’ ಎಂದು ಅವರು ನಂಬಿದ್ದರು. ಇದು ಬ್ರಿಟಟ್‌ನ ‘ನರಿ ಬೇಟೆ ಮತ್ತು ಮೀನಿಗೆ ಗಾಳ ಹಾಕುವಂತಹುದೇ ವಿನೋದ’ ಎಂದು ಅವರು ಭಾವಿಸಿದ್ದರು. ಇದು ಅಲ್ಲಿನ ಶ್ರೀಮಂತ ವರ್ಗದ ಆಟ ಮತ್ತು ಇಲ್ಲಿ ‘ಇದು ಮುಖ್ಯವಾಗಿ ಮಹಾರಾಜರು, ಶ್ರೀಮಂತರು ಮತ್ತು ದೊಡ್ಡಸ್ತಿಕೆಯ ಜನರ ಪೋಷಣೆಯಲ್ಲಿಯೇ ಸದಾ ಉಳಿಯಿತು’ ಎಂದು ಕೇಸ್ಕರ್ ಪ್ರತಿಪಾದಿಸಿದ್ದರು. ಭಾರತದಲ್ಲಿ ಈ ಆಟದ ಅಸ್ತಿತ್ವ ‘ನಮ್ಮ ಗುಲಾಮಗಿರಿಯ ಸಂಕೇತ’ ಎಂದು ಈ ರಾಷ್ಟ್ರೀಯವಾದಿ ತಿಳಿದಿದ್ದರು. ‘ಇಂಗ್ಲಿಷ್ ನಾಗರಿಕತೆಯನ್ನು ಅಂಧವಾಗಿ ಅನುಕರಿಸುವ ಮತ್ತು ಇಂಗ್ಲಿಷ್ ಜಂಟಲ್‌ಮನ್‌ಗಳ ಇಷ್ಟಗಳು ಮತ್ತು ಆದ್ಯತೆಗಳನ್ನು ಅನುಸರಿಸುವ’ ನಮ್ಮ ಪ್ರವೃತ್ತಿಯ ಭಾಗ ಎಂದು ಅವರು ವಾದಿಸಿದ್ದರು.

ಭಾರತದ ಹವಾಮಾನ ಮತ್ತು ಸದ್ಯವೇ ಸ್ವಾತಂತ್ರ್ಯ ಪಡೆಯಲಿರುವ ದೇಶದ ಪ್ರಜಾಸತ್ತಾತ್ಮಕ ಸ್ಫೂರ್ತಿಗೆ ಕ್ರಿಕೆಟ್ ಹೊಂದಿಕೆಯಾಗದು ಎಂದು ಕೇಸ್ಕರ್ ಭಾವಿಸಿದ್ದರು. ಇದರ ಸ್ಥಾನಕ್ಕೆ ದುಬಾರಿಯಲ್ಲದ ಮತ್ತು ಸಹಭಾಗಿಯಾದ ಆಟಗಳಾದ ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್ ಬರಲಿವೆ ಎಂಬುದು ಅವರ ಖಚಿತ ನಂಬಿಕೆಯಾಗಿತ್ತು. ‘ಇಂಗ್ಲಿಷ್ ಸಂಸ್ಕೃತಿಯ ವಾತಾವರಣ, ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷ್ ಆಡಳಿತದಲ್ಲಿ ಮಾತ್ರ ಕ್ರಿಕೆಟ್ ಬೆಳೆಯುತ್ತದೆ. ದೇಶದಿಂದ ಬ್ರಿಟಿಷ್ ಆಡಳಿತ ಮರೆಯಾದ ಆಘಾತದಲ್ಲಿ ಈ ಆಟ ಇಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ಬ್ರಿಟಿಷರು ಅಧಿಕಾರದಿಂದ ನಿರ್ಗಮಿಸುತ್ತಿದ್ದಂತೆಯೇ ಈ ಆಟಕ್ಕೆ ಇರುವ ಗೌರವದ ಸ್ಥಾನ ಕಳೆದು ಹೋಗಲಿದೆ ಮತ್ತು ನಿಧಾನಕ್ಕೆ ಅದು ಅಪ್ರಸ್ತುತವಾಗುತ್ತದೆ’ ಎಂದು ಅವರು ಹೇಳಿದ್ದರು.

ಕೇಸ್ಕರ್ ಅವರು ಬಲವಾದ ಅಭಿಪ್ರಾಯಗಳ ವ್ಯಕ್ತಿಯಾಗಿದ್ದರೇ ಹೊರತು ಅವರಿಗೆ ಪೂರ್ವಗ್ರಹಗಳಿರಲಿಲ್ಲ. ಅವರು ನಿಕೃಷ್ಟವಾಗಿ ಕಂಡ ಜನಪ್ರಿಯ ಪ್ರವೃತ್ತಿ ಕ್ರಿಕೆಟ್ ಮಾತ್ರ ಆಗಿರಲಿಲ್ಲ. ಅವರು ವಾರ್ತಾ ಮತ್ತು ಪ್ರಸಾರ ಸಚಿವರಾದಾಗ ಆಕಾಶವಾಣಿಯಲ್ಲಿ ಸಿನಿಮಾ ಸಂಗೀತ ಪ್ರಸಾರವನ್ನು ನಿಷೇಧಿಸಿದರು ಮತ್ತು ಧ್ವನಿ ಮುದ್ರಣ ಸ್ಟುಡಿಯೊಗಳಲ್ಲಿ ಹಾರ್ಮೋನಿಯಂ ಬಳಸಬಾರದು ಎಂದು ಆದೇಶಿಸಿದರು. ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿಯೂ ಅದನ್ನು ಬಳಸಬಾರದು ಎಂದಿದ್ದರು. ಕೇಸ್ಕರ್ ಅವರ ಈ ಸಾಂಸ್ಕೃತಿಕ ಪೊಲೀಸ್‌ಗಿರಿ ದಯನೀಯವಾಗಿ ವಿಫಲವಾಯಿತು. ಜನರು ಆಕಾಶವಾಣಿ ಕೇಳುತ್ತಿದ್ದುದೇ ‘ವಿವಿಧ ಭಾರತಿ’ಯ ಹಾಡುಗಳಿಗಾಗಿ ಆಗಿತ್ತು. ಸಂಗೀತ ಕಛೇರಿಗಳಲ್ಲಿ ಹಾರ್ಮೋನಿಯಂ ಸರ್ವವ್ಯಾಪಿಯಾಗಿದೆ.

ಕೇಸ್ಕರ್ ಅವರಿಗೆ ಕ್ರಿಕೆಟ್ ಆಟವನ್ನು ನಿಷೇಧಿಸುವ ಅಧಿಕಾರ ಇರಲಿಲ್ಲ. ಆದರೆ ಈ ಆಟದ ಬ್ರಿಟಿಷ್ ಪೋಷಕರು ಇಲ್ಲಿಂದ ಹೋದ ಮೇಲೆ ಆ ಆಟವೂ ಕಣ್ಮರೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ಹೊಂದಿದ್ದರು. ಜಾಗತಿಕ ಕ್ರಿಕೆಟ್‌ನ ಕೇಂದ್ರವಾಗಿ ಭಾರತ ಪರಿವರ್ತಿತವಾಗಿರುವ ಈ ದಿನಗಳಲ್ಲಿ ಕೇಸ್ಕರ್ ಅವರ ಮಾತುಗಳನ್ನು ನೆನಪಿಸಿಕೊಳ್ಳುವುದು ಉಪಯುಕ್ತ. ಬ್ರಿಟಿಷ್ ಮೂಲದ್ದೇ ಆಗಿದ್ದರೂ ಕ್ರಿಕೆಟ್ ಭಾರತದಲ್ಲಿ ಮತ್ತು ಭಾರತೀಯರಲ್ಲಿ ಅನುರಣಿಸಲು ಹಲವು ಕಾರಣಗಳಿವೆ: ದೇಹದಾರ್ಢ್ಯಕ್ಕಿಂತ ತಂತ್ರಕ್ಕೆ ಹೆಚ್ಚಿನ ಅವಕಾಶ, ಪ್ರೇಕ್ಷಕರು ಹೆಚ್ಚು ತೀವ್ರವಾಗಿ ಮತ್ತು ಸಾಮೂಹಿಕವಾಗಿ ಭಾಗವಹಿಸಲು ಅವಕಾಶ ಕೊಡುವ ಆಟದ ಶೈಲಿ, ರಾಷ್ಟ್ರೀಯವಾದಿ ಭಾವನೆಗಳಿಗೆ ಇದು ನೀಡುವ ಒತ್ತು, ಜಾಗತಿಕ ಮಟ್ಟದಲ್ಲಿ ಗೆಲ್ಲಬಲ್ಲ ಆಟಗಾರರನ್ನು ನಿರಂತರವಾಗಿ ಸೃಷ್ಟಿಸಿದ ಏಕೈಟ ಆಟ ಎಂಬ ಸತ್ಯ ಈ ಕಾರಣಗಳು.

ಈ ಲೇಖಕ ಭವಿಷ್ಯದ ಬಗ್ಗೆ ಏನನ್ನೂ ಹೇಳದಿರಲು ಮುಖ್ಯವಾದ ಕಾರಣಗಳಲ್ಲಿ ಕೇಸ್ಕರ್ ಅವರ ಭವಿಷ್ಯದ ವಿಧಿಯೂ ಒಂದು. ಆದರೆ, ಇತ್ತೀಚೆಗೆ ನನ್ನ ಸಾಮಾನ್ಯ ಪ್ರವೃತ್ತಿಯನ್ನು ತೊರೆದು, ‘ಭಾರತದ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತೆ ಪ್ರಬಲ ಸ್ಥಾನಕ್ಕೆ ಬರುವುದು ಅಸಾಧ್ಯವಲ್ಲದಿದ್ದರೂ ಆ ಸಾಧ್ಯತೆ ಕಡಿಮೆ’ ಎಂದು ಬರೆದಿದ್ದೆ. ಈ ಯೋಚನೆ ಹುಸಿ ಅನಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ ಎಂದು ನಾನು ಭಾವಿಸಿದ್ದೇನೆ. ಹಾಗಿದ್ದರೂ ಸದ್ಯಕ್ಕೆ ನಾನು ನುಡಿದ ಕೊನೆಯ ಭವಿಷ್ಯ ಇದಾಗಿರಬಹುದು. ಇಲ್ಲದಿದ್ದರೆ, ಭವಿಷ್ಯದಲ್ಲಿ ಅಂಕಣಕಾರನೊಬ್ಬ ನಾನು ಕಪುಸಿನ್‌ಸ್ಕಿ ಮತ್ತು ಕೇಳ್ಕರ್ ಅವರಿಗೆ ಮಾಡಿದ ಹಾಗೆ ನನ್ನ ಗೋರಿಯ ಮೇಲೆ ನರ್ತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT