ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸಚಕ್ರದ ಆದಿಪರ್ವ ಎಲ್ಲಿದೆ?

Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

ಮಹಾಭಾರತವು ಮೂರು ಆವೃತ್ತಿಗಳಲ್ಲಿ – ಮೂರು ಸಂದರ್ಭಗಳಲ್ಲಿ – ಪ್ರಕಟಗೊಂಡ ವಾಙ್ಮಯವಾಗಿದೆ. ಮೊದಲಿಗೆ ಈ ಮಹಾಗ್ರಂಥವನ್ನು ಕೃಷ್ಣದ್ವೈಪಾಯನ ವ್ಯಾಸರು ಹೇಳಿ ಬರೆಯಿಸಿ ತಮ್ಮ ಶಿಷ್ಯನಾದ ವೈಶಂಪಾಯನನಿಗೆ ಓದಿಸಿದರು. ಇದು ಗುರು ಶಿಷ್ಯ ಸಂದರ್ಭ, ಅಥವಾ ಆಧ್ಯಾತ್ಮಿಕ ಸಂದರ್ಭ. ಅಧ್ಯಾತ್ಮವೆಂದರೆ ಮೂಲತಃ ತನ್ನೊಳಗಿನ ಅನುಭವ. ತನ್ನೊಳಗೆ ಕಂಡದ್ದು. ಹೊರಗಣ ಲೋಕಕ್ಕೂ ನಮ್ಮೊಳಗಿನ ಲೋಕಕ್ಕೂ ಪರಸ್ಪರ ಪ್ರತಿಫಲನ ಇದೆ ಎಂದು ತನ್ನ ಅನುಭವದಲ್ಲಿಯೇ ಕಂಡುಕೊಂಡದ್ದು. ಹೊರಲೋಕ ಇನ್ನೊಂದು ರೂಪದಲ್ಲಿ – ಭಾವರೂಪದಲ್ಲಿ – ನಮ್ಮೊಳಗೇ ಇದೆಯಾಗಿ, ಇಲ್ಲಿ ಲೋಕಬಾಹಿರರು ಯಾರೂ ಇಲ್ಲವಾಗಿ, ಎಲ್ಲವನ್ನೂ ತನ್ನೊಳಗಿನ ಭಾಗವಾಗಿ ಕಂಡದ್ದು. ಇದನ್ನೇ ಆಧ್ಯಾತ್ಮಿಕ ಪರಿಭಾಷೆಯಲ್ಲಿ ‘ವಿಶ್ವರೂಪ’ ಎನ್ನುತ್ತಾರೆ, ‘ಕಾಲ–ರೂಪ’ ಎನ್ನುತ್ತಾರೆ.

ಕೃಷ್ಣ ತನ್ನ ವಿಶ್ವ–ರೂಪವನ್ನು ಪ್ರಕಟಿಸಿದ್ದು ಭಗವದ್ಗೀತೆಯ ಸಂದರ್ಭದಲ್ಲಿ ಬರುತ್ತದೆ. ಆ ಭಯಾನಕವಾದ ರೂಪವನ್ನು ನೋಡಲನುವಾಗುವಂತೆ ಕೃಷ್ಣನೇ ಅರ್ಜುನನಿಗೆ ದಿವ್ಯವಾದ ಕಣ್ಣು ಕೊಟ್ಟಿದ್ದರೂ, ಅರ್ಜುನನಿಗೆ ನೋಡಲಾಗಲಿಲ್ಲ ಎಂಬ ಮಾರ್ಮಿಕವಾದ ವಿವರ ಬರುತ್ತದೆ. ಕೊಟ್ಟದ್ದು ದಿವ್ಯವಾದ ಕಣ್ಣು! ಅದು ನೋಡಬೇಕಾಗಿರುವುದು ಮಾತ್ರ ಕಾಲಗತಿಯಲ್ಲಿ ಎಲ್ಲವೂ ಅಳಿಸಿಹೋಗುವ ದುರಂತವನ್ನು!

ಈ ದುರಂತಕ್ಕೂ ಮನುಷ್ಯ ಸ್ವಭಾವದಲ್ಲಿಯೇ ಅಂತರ್ನಿಹಿತವಾಗಿರುವ ಇನ್ನೊಬ್ಬನನ್ನು ಉಳಿಸಲಾರೆನೆನ್ನುವ ಕೇಡಿಗೂ ಇರುವ ಹತ್ತಿರದ ಒಳ–ಸಂಬಂಧವನ್ನು; ಅಂದರೆ ತನ್ನಲ್ಲಿಯೇ ಇರುವ ದುರಂತದ ಬೀಜವನ್ನು ನೋಡಬಲ್ಲ ಕಣ್ಣು– ದಿವ್ಯವಾದ ಕಣ್ಣು! ಅರ್ಜುನನಿಗೆ ನೋಡಲಾಗಲಿಲ್ಲ. ಎಷ್ಟಾದರೂ ಅರ್ಜುನನು ನರ–ಮಾತ್ರನಲ್ಲವೆ? ಈ ಮಾತನ್ನು ಇಡಿಯ ಮಹಾಭಾರತಕ್ಕೂ ಅನ್ವಯಿಸಬಹುದಾಗಿದೆ. ಕುರುಕ್ಷೇತ್ರದ ಘೋರ, ಅಶ್ವತ್ಥಾಮನ ಕ್ರೂರ, ಯಾದವರ ಸಮೂಹ ನಾಶದ ಭೀಕರ – ಇವುಗಳೆಲ್ಲ ಚಿತ್ರಿತವಾಗಿರುವ ಮಹಾಭಾರತದ ಒಳಗಣ ವಿಶ್ವ–ರೂಪವನ್ನು ನೋಡುವುದು ಕೂಡ ಕಷ್ಟವೇ. ಆದರೆ, ನೋಡಲಾಗದಿದ್ದರೆ; ನಾವೇ ಲೋಕ ಬಾಹಿರರಾದಂತೆ. ಏಕೆಂದರೆ ಲೋಕ ಇರುವುದೇ ಹಾಗೆ!
ವ್ಯಾಸರದು ಆಧ್ಯಾತ್ಮಿಕ ಸಂದರ್ಭ ಎನ್ನುವ ಮಾತು ಗ್ರಂಥದಲ್ಲಿಯೇ ಬಂದಿದೆ.

‘ಪುಣ್ಯೇಹಿಮವತಃ ಪಾದೇ ಮೇಧ್ಯೇ ಗಿರಿ ಗುಹಾಲಯೇ / ವಿಶೋಧ್ಯದೇಹಂ ಧರ್ಮಾತ್ಮಾ ದರ್ಭಸಂಸ್ತರಮಾಶ್ರಿತಃ / ಶುಚಿಃಸನಿಯಮೋ ವ್ಯಾಸಃ ಶಾಂತಾತ್ಮಾ ತಪಸಿ ಸ್ಥಿತಃ / ಪ್ರವಿಶ್ಯ ಯೋಗಂ ಜ್ಞಾನೇನ ಸೋsಪಶ್ಯತ್‌ ಸರ್ವಮಂತತಃ||’.

ಪುಣ್ಯಗಿರಿ ಹಿಮವಂತನ ಗುಹಾವಾಸ ಒಂದರಲ್ಲಿ, ಹೊರಗಣ ಶುಚಿಯಲ್ಲಿ, ಒಳಬಗೆಯ ಶಾಂತಿಯಲ್ಲಿ ನೆಲೆನಿಂತ ತಪಸ್ವಿ ವ್ಯಾಸ, ಯೋಗದ ಅರಿವಿನಲ್ಲಿ ನಡೆದುದೆಲ್ಲವನ್ನೂ ತನ್ನೊಳಗೇ ಕಂಡರೆಂಬ ಮಾತು. ವ್ಯಾಸರ ಈ ಧ್ಯಾನಮಗ್ನಸ್ಥಿತಿಗೂ ಅವರು ತಮ್ಮೊಳಗೆ ಕಂಡ ಮಹಾಭಾರತದ ರುದ್ರಚಿತ್ರಕ್ಕೂ ಏನೋ ಒಂದು ವಿ–ಸಂವಾದವಿರುವಂತೆ ಮೇಲ್ನೋಟಕ್ಕೆ ಅನ್ನಿಸಿದರೂ ಇದು ಬದುಕಿನ ರಹಸ್ಯವನ್ನೇ ಬಿಚ್ಚಿಡುತ್ತಿರುವಂತೆ ತೋರುತ್ತದೆ. ಏಕೆಂದರೆ ಒಳಗಿನ ಶಾಂತತೆಯ ಪರೀಕ್ಷೆಯಾಗುವುದೆಲ್ಲಿ? ರುದ್ರಸನ್ನಿವೇಶಗಳ ಸಮ್ಮುಖದಲ್ಲಿಯಲ್ಲವೆ? ಆಗ ಕದಡದ ಶಾಂತಿಯೇ ನಿಜವಾದ ಶಾಂತಿಯಲ್ಲವೆ? ‘ಸ್ಮಶಾನ–ಶಾಂತಿ’ ಎನ್ನುವ ಮಾತು ನಮ್ಮಲ್ಲಿ ವ್ಯಂಗ್ಯವಾಗಿ ಬಳಕೆಯಲ್ಲಿದೆ. ಅದು ಸರಿಯಲ್ಲವೆನಿಸುತ್ತದೆ.

ಉರಿಯುವ ಚಿತೆಯ ಮುಂದೆ ಅನುಭವಿಸಬಲ್ಲ ಶಾಂತಿಯೇ ನಿಜವಾದ ಶಾಂತಿ! ಶಾಂತಿಯನ್ನು ಹೀಗೆ ಅನುಭವಿಸಬೇಕಾದರೆ ರುದ್ರವನ್ನೂ ತನ್ನೊಳಗೇ ಅನುಭವಿಸಬೇಕು; ಹೊರಗಲ್ಲ. ತನ್ನೊಳಗೆ ತಲ್ಲಣಗೊಳ್ಳದೆ, ಆಕ್ರಾಂತಗೊಳ್ಳದೆ, ತನ್ನೊಳಗೇ ಇರುವ ಶಾಂತಿಯ ನೆಲೆ ಸಿಕ್ಕುವುದುಂಟೆ? ಯಾವುದು ಘೋರವನ್ನು ಸೃಜಿಸಿದೆಯೋ ಅದೇ ಶಾಂತಿಯನ್ನೂ ಸೃಜಿಸಿದೆ – ಎನ್ನುವುದು ವೇದದ ಮಾತು. ಘೋರವನ್ನು ಅನುಭವಿಸದೆ ಸಿಕ್ಕಿದ ಶಾಂತಿ – ಹುಸಿ; ಅದು ಜೀವಂತವಲ್ಲ. ಅದನ್ನೇ ಸ್ಮಶಾನ–ಶಾಂತಿ ಎನ್ನುವುದೇನೋ!

ಹಿಮಾಚಲದ ನಿತಾಂತ ಶಾಂತ ಪರಿಸರದಲ್ಲಿ ಮಹಾಭಾರತವನ್ನು ಹೇಳಿದರಂತೆ ವ್ಯಾಸರು. ಪಕ್ಕದಲ್ಲಿ ಸರಸ್ವತೀನದಿ ಭೋರ್ಗರೆಯುತ್ತ ಹರಿಯುತ್ತಿದ್ದಳು. ‘ವ್ಯಾಸಗುಹೆ’ ಎಂದು ಕರೆಯಲ್ಪಡುವ ಈ ನೆಲೆ, ಬದರೀನಾಥದ ಉತ್ತರದಲ್ಲಿದೆ; ‘ಮಾನಾ’ ಎಂಬ ಹೆಸರಿನ ಹಳ್ಳಿಯಲ್ಲಿದೆ. ಪಕ್ಕದಲ್ಲಿ ಸರಸ್ವತಿ ಹರಿಯುತ್ತಿದೆ. ಅದು ದಕ್ಷಿಣಕ್ಕೆ ಹರಿದು ಬದರಿಯ ಸಮೀಪ ಅಲಕನಂದೆ ಎಂಬ ಇನ್ನೊಂದು ನೀರಕವಲನ್ನು ಕೂಡಿಕೊಳ್ಳಬೇಕು. ಕೂಡುವ ಸಂಭ್ರಮದಿಂದಲೇ ಇರಬೇಕು – ನದಿಯ ಭೋರ್ಗರೆತ. ವ್ಯಾಸರು ಹೇಳಿದರಂತೆ: ‘ನಿನ್ನ ಸದ್ದು ಅತಿಯಾಯಿತು. ಸ್ವಲ್ಪ ಮೆಲ್ಲಗೆ ಹರಿಯುವೆಯಂತೆ’. ಮತ್ಸ್ಯಗಂಧಿಯ ಮಗನ ಈ ಮಾತಿಗೆ ನಾಚಿಕೊಂಡು ಸರಸ್ವತಿ ಅಲ್ಲಿಂದ ಗುಪ್ತ–ಗಾಮಿನಿಯಾಗಿ ಬಿಟ್ಟಳಂತೆ. ಅವಳ ಚೆಲುವು ಅವಳಿಗೇ ತಿಳಿದುಬರಲು ಶುರುವಾಯಿತು. ಹೀಗೊಂದು ಕಥೆ ಅಲ್ಲಿ ಹೇಳುವರು.

ಸರಸ್ವತಿ ಎಂದರೆ ಭಾಷೆಯಲ್ಲವೆ! ವಾಙ್ಮಯವಲ್ಲವೆ! ಅದು ಗುಪ್ತ–ಗಾಮಿನಿಯಾದಂತೆ ಅದರ ಧಾರಣಶಕ್ತಿ ಅದ್ಭುತ. ತಣ್ಣಗಿನ ಭಾಷೆಗಿರತಕ್ಕ ‘ಧ್ವನಿಶಕ್ತಿ’ಯ ಬಗೆಯೇ ಬೇರೆ. ಭೋರ್ಗರೆತದ rhetoricಗೆ ಅದು ಇರಲಾರದು. Rhetoricನ ರೀತಿ ಬೇರೆ. ಅಲ್ಲದೆ ರುದ್ರಚಿತ್ರಣವನ್ನು ಮಾಡುವುದಕ್ಕೆ ತಣ್ಣಗಿನ ಭಾಷೆಯೇ ಸರಿ. ಅದು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನ ಸುತ್ತ ಶಾಂತಿ–ಪರ್ವ ಮೆಲ್ಲನೆ ರೂಪುಗೊಂಡಂತೆ!

ಮಹಾಭಾರತವು ಪ್ರಕಟಗೊಂಡ ಎರಡನೆಯ ಸಂದರ್ಭವೆಂದರೆ, ಜನಮೇಜಯನು ನಡೆಸಿದ ದಾರುಣವಾದ ಸರ್ಪಯಾಗದ ನಡುವಿನ ಬಿಡುವಿನಲ್ಲಿ, ವ್ಯಾಸರ ಸೂಚನೆಯಂತೆ ವೈಶಂಪಾಯನನು ಹೇಳಿದ ಭಾರತಸಂಹಿತೆ. ಇದು ಸಾಮಾಜಿಕವಾದ ಸಂದರ್ಭ. ಸರ್ಪಯಾಗದ ವಿಷಮ ಸಂದರ್ಭದ ನಡುವೆಯೇ ನಡೆದ ಕಥನವಿದು; ಕುರುಕ್ಷೇತ್ರದಲ್ಲಿಯೇ ಗೀತೆಯ ಸಂವಾದ ನಡೆದಂತೆ. ಪ್ರಾಯಃ ‘ಕಥನ’ಕ್ಕೆ ಬೇರೆ ಗತಿ ಇಲ್ಲ. ಅದು ನಡುವಿನ ‘ಬಿಡುವಿ’ನಲ್ಲಿಯೇ ಹೇಳಲ್ಪಡಬೇಕು! ಉಳಿದಂತೆ ನಮ್ಮನ್ನು ಸುತ್ತುವರಿದಿರುವುದು ರಾಗ–ದ್ವೇಷ ಕಲುಷಿತವಾದ ಸಂರ್ಭಗಳೇ. ಆದರೆ ಎಂಥ ಸಂದರ್ಭಗಳ ನಡುವೆಯೂ ಇನ್ನೂ ಮಸುಕಾಗದ ಸಾಕ್ಷಿಪ್ರಜ್ಞೆಯಂತೆ ಒಂದು ‘ಬಿಡುವು’ ಇರುತ್ತದೆ ಎನ್ನುವುದೊಂದು ಸುಯೋಗವೇ ಸರಿ. ಕುರುಕ್ಷೇತ್ರದ ನಡುವೆ ‘ಗೀತೆ’ ಹೇಳಲ್ಪಟ್ಟಿತು. ಎರಡೂ ಸೇನೆಗಳ ನಡುವೆ ನಮ್ಮ ರಥವನ್ನು ನಿಲ್ಲಿಸು – ಎನ್ನುತ್ತಾನೆ ಅರ್ಜುನ ಸಾರಥಿಯಾದ ಕೃಷ್ಣನಿಗೆ – ‘ಸೇನಯೋಃ ಉಭಯೋರ್ಮಧ್ಯೇ’. ಎರಡೂ ಸೇನೆಗಳ ನಡುವೆ ಎನ್ನುವ ಮಾತೇ – ಅದು ತನಗೆ ತಿಳಿಯದೇ ಆಡಿದ ಮಾತು – ಒಂದು ಬಿಡುವಿನ ನೆಲೆಯನ್ನು ಸೂಚಿಸುತ್ತದೆ!

ನಿಜಕ್ಕೆ, ಸರ್ಪಯಾಗದ ಸಂದರ್ಭವು ಒಂದು ರೀತಿಯಲ್ಲಿ ಮಹಾಭಾರತೋತ್ತರಕಾಲದಲ್ಲಿ ನಡೆದದ್ದು. ಕೃಷ್ಣನ ಕಾಲ, ಪಾಂಡವರ ಕಾಲ ಕಳೆದಿದೆ. ಅಭಿಮನ್ಯು–ಉತ್ತರೆಯರ ಮಗ ಪರೀಕ್ಷಿದ್ರಾಜನ ಕಾಲವೂ ಸಂದುಹೋಗಿದೆ. ಈಗ, ಪರೀಕ್ಷಿತನ ಮಗ ಜನಮೇಜಯನ ಕಾಲ ನಡೆಯುತ್ತಿದೆ. ಅಂದರೆ ಇದು ವ್ಯಾಸರು ಹೇಳಲುದ್ದೇಶಿಸಿದ ಇತಿಹಾಸದ ಕೊನೆಯ ಘಟ್ಟ, ಅಥವಾ ಕೊನೆಯ ಘಟ್ಟವೂ ಅಲ್ಲ; ವ್ಯಾಸರು ಹೇಳಬೇಕಾದುದನ್ನು ಹೇಳಿ ಆಗಿರುವಂತಿದೆ. ಆದುದರಿಂದಲೇ ವೈಶಂಪಾಯನನಿಗೆ ಹೇಳಲು ವ್ಯಾಸರು ಸೂಚಿಸಿದರೇನೊ ಅಥವಾ ಈ ಭಾಗವನ್ನು ಮಹಾಭಾರತದ ಒಳಗಡೆಯೇ ಇರುವ ‘ಖಿಲ’ ಎನ್ನಬಹುದೇನೋ! ಏನಿದ್ದರೂ ಈ ಕೊನೆಯ ಹಂತ, ವಿಲಕ್ಷಣವೆನ್ನುವಂತೆ, ಮಹಾಭಾರತದ ಪ್ರಾರಂಭದ ಅನ್ವರ್ಥವಾದ ‘ಆದಿಪರ್ವ’ದ ಮುಖ್ಯ ಭಾಗವಾಗಿಬಿಟ್ಟಿದೆ!

ಅಂದರೆ ಆದ್ಯಂತಗಳು ಒಂದೆಡೆ ಸೇರಿಬಿಟ್ಟಿವೆ! ಸೇರಿ, ಹಾಗೆ ಆದ್ಯಂತಗಳು ಪರಸ್ಪರ ಸೇರಲಾರವು ಎಂಬ ನಮ್ಮ ತರ್ಕವನ್ನು ನಾವೇ ಬದಲಿಸಿಕೊಳ್ಳುವಂತೆ ಒತ್ತಾಯಿಸುತ್ತಿವೆ. ಇತಿಹಾಸದ ನಡೆಯೇ ವಿಚಿತ್ರ. ಅದು ನೇರ ನಡೆಯಲ್ಲ; ಗೆರೆ ಎಳೆದಂತೆ ಸಾಗುವುದಲ್ಲ. ನೇರವಲ್ಲ ಎಂದರೆ ಅದು ಆಕ್ಷೇಪವೂ ಅಲ್ಲ. ‘ಇತಿಹಾಸ– ಚಕ್ರ’ ಎನ್ನುತ್ತಾರೆ. ತಾತ್ತ್ವಿಕವಾಗಿ ‘ಕಾಲ–ಚಕ್ರ’ ಎನ್ನುತ್ತಾರೆ. ಚಕ್ರ ಉರುಳುತ್ತ ಹೋಗುತ್ತದೆ. ಉರುಳುತ್ತ ಸಾಗುವುದಕ್ಕೆ ಹಿಂದೆ–ಮುಂದೆ ಎನ್ನುವ ಹಂಗೇನೂ ಇಲ್ಲ. ಹಿಂದೆ ಸರಿದರೂ ಮುಂದೆ ಸರಿದರೂ ಅದು ಚಕ್ರದ ಉರುಳುವಿಕೆಯೇ. ಚಕ್ರವನ್ನೇ ಕೇಳಿದರೆ ಅದು ಉರುಳುವುದಷ್ಟೇ ತನ್ನ ಅನುಭವವೆಂದೀತು! ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ, ಚಕ್ರವು ತನ್ನಲ್ಲೇ ತಾನು ಉರುಳುತ್ತಿದೆ. ಚಕ್ರವು ಹಿಂದೆ–ಮುಂದೆ ಸಾಗುತ್ತಿದೆ ಎಂದೊಪ್ಪಿದರೂ ಅದು ತನ್ನಲ್ಲೇ ತಾನು ಉರುಳದೆ ಮುಂದೆ ಸಾಗಲಾರದು. ತನ್ನಲ್ಲೇ ತಾನು ತಿರುಗುತ್ತಿರುವುದು ಆದ್ಯಂತಗಳೆರಡನ್ನೂ ತನ್ನಲ್ಲೇ ಅನುಭವಿಸುತ್ತಿದೆ. ನಿಜವೆಂದರೆ, ಮೊದಲು–ಕೊನೆ ಸೇರಿಯೇ ಅದು ‘ಚಕ್ರ’ವಾಗಿರುವುದು!

ಇತಿಹಾಸವನ್ನು ನಿರೂಪಿಸುವ ವಾಗರ್ಥಗಳ ನಡೆ ಕೂಡ ನೇರವಲ್ಲ. ಅದು  ನೇರವಾಗಿ ಇರುತ್ತಿದ್ದರೆ ವಾಙ್ಞಯವು ಇಷ್ಟು ಬೆಳೆಯುತ್ತಲೇ ಇರಲಿಲ್ಲ. ಒಂದನ್ನು ಹೇಳುತ್ತ, ಇನ್ನೊಂದನ್ನು; ಇನ್ನೂ ಹಲವನ್ನು ಸೂಚಿಸುತ್ತ, ಸುಲಭದಲ್ಲಿ ತೆಕ್ಕೆಗೆ ಬಾರದುದನ್ನು ತಟ್ಟುವ ವಿನೀತಯತ್ನ ಮಾಡುತ್ತ, ಕಾಣುವುದರಲ್ಲಿ ಕಾಣದುದನ್ನು ಪ್ರತಿಫಲಿಸುತ್ತ, ವರ್ತಮಾನವೆಂದರೆ ವಾಸ್ತವವೂ ಹೌದು; ಕನಸೂ ಹೌದು, ಕನಸೆಂದರೆ ಗತದ ಒತ್ತಡವೂ ಹೌದು; ಭವಿಷ್ಯದ ವಾಚಿಕೆಯೂ ಹೌದು ಎಂದು ಬಿಂಬಿಸುತ್ತ ಸಾಗುವ ವಾಗರ್ಥ ಕೂಡ ತಾನು ನಿರೂಪಿಸುತ್ತಿರುವ ಇತಿಹಾಸದಂತೆಯೇ ಆದ್ಯಂತಗಳೂ ಒಂದೆಡೆ ಬೆರೆತಂಥ ಒಂದು ಅರಿವಿನ ಚಕ್ರವಾಗಿದೆ.

ವ್ಯಾಸರು ಎಲ್ಲವನ್ನೂ ನೋಡಿದರೆನ್ನುವ ಮಾತು – ಅವರು ಆದಿಅಂತ್ಯಗಳು ಬೆರೆತಿರುವುದನ್ನು ಕಂಡರೆಂದು ತಪ್ಪದೆ ಸೂಚಿಸುತ್ತದೆ. ಬೆರೆತಿರುವುದನ್ನು ಕಂಡರೆ, ಆದಿ–ಅಂತ್ಯಗಳೆನ್ನುವ ಲೌಕಿಕ ವ್ಯವಹಾರವೇ ಬಹುಸೀಮಿತವಾಗಿಬಿಡುತ್ತದೆ. ಎಲ್ಲಿಂದ, ಯಾವ ಬಿಂದುವಿನಲ್ಲಿ ನಿಂತು ಹಿಂದೆ ತಿರುಗಿ ನೋಡುವೆವೋ – ಅದೇ ಆದಿಬಿಂದು ಎಂದು ಕರೆಯಬಹುದಾಗಿದೆ. ಹಿಂತಿರುಗಿ ನೋಡುವುದೇ ಇತಿಹಾಸ–ದರ್ಶನದ ಆದಿಯಲ್ಲವೆ! ಜನಮೇಜಯನ ಕಾಲ ನಡೆಯುತ್ತಿದ್ದರೂ ನಿಜಕ್ಕೂ ಕಾಲ ಬದಲಾಗಿಲ್ಲ ಎಂದು ವ್ಯಾಸರಿಗೆ ಸೂಚಿಸಬೇಕಾಗಿದೆ. ಸರ್ಪಯಾಗದ ಪ್ರಕರಣವನ್ನು ನೋಡಿದರೆ ತಿಳಿಯುತ್ತದೆ – ಹಿಂದಿನಂತೆಯೇ ಈಗಲೂ ರಾಗ–ದ್ವೇಷಗಳ ಬೆಂಕಿ ಹೊತ್ತಿ ಉರಿಯುತ್ತಲೇ ಇದೆ. ಅಥವಾ ಇದಕ್ಕೆ ‘ಆದಿ’ ಮಾತ್ರ ಇದೆ; ಅಂತ್ಯವೇ ಇಲ್ಲವೇನೋ?

ನನಗೆ ಸುಕ್ತಂಕರ್ ನೆನಪಾಗುತ್ತದೆ. ಅವರು ಮಹಾಭಾರತದ ಪರಿಷ್ಕೃತಪಾಠದ ಸಂಪಾದಕರಾಗಿ ಕೆಲಸ ಮಾಡಿದ ದೊಡ್ಡ ವಿದ್ವಾಂಸರು. ಪರಿಷ್ಕೃತ ಪಾಠ ಏಕೆಂದರೆ, ಈ ಮಹಾಗ್ರಂಥದಲ್ಲಿ – ಜಗತ್ತಿನಲ್ಲಿ ಇಂಥ ಮಹಾಗ್ರಂಥ ಇದೊಂದೇ – ಅನೇಕ ಪ್ರಕ್ಷೇಪಗಳಾಗಿರುವುದು ಸಾಧ್ಯ. ಅಂದರೆ ಮೂಲಕ್ಕೆ ಸಂಗತವಾಗಿಯೋ ಅಸಂಗತವಾಗಯೋ ಅನೇಕರಿಂದ ನಾನಾರೀತಿಯ ಸೇರ್ಪಡೆಗಳಾಗಿರುವುದು ಸಾಧ್ಯ. ಇಲ್ಲಿರುವುದೇ ಎಲ್ಲೆಡೆ ಇರುವುದು ಮತ್ತು ಇಲ್ಲಿಲ್ಲದಿರುವುದು ಎಲ್ಲೂ ಇಲ್ಲ ಎಂಬ – ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ಕುತ್ರಚಿತ್‌ – ಎಂಬ ತನ್ನ ವಿಶ್ವಕೋಶಸದೃಶವಾದ ಸ್ವರೂಪವನ್ನು ಕುರಿತು ತಾನೇ ಹೇಳಿಕೊಂಡ ಮಾತು, ಮಹಾಭಾರತದಲ್ಲೇ ಇರುವ ಮಾತು, ಎಲ್ಲೆಡೆಯಿಂದಲೂ ತಾನು ಬೇಕಾದುದನ್ನು ಸ್ಚೀಕರಿಸಿದ್ದೇನೆ ಎನ್ನುವುದನ್ನೂ ಸೂಚಿಸಿ, ಇನ್ನೊಂದು ರೀತಿಯಲ್ಲಿ ಪ್ರಕ್ಷೇಪಗಳು ಸಂಭವಿಸುವುದಕ್ಕೆ ಪ್ರಚೋದಕವೂ ಆಗಿದೆ.

ಆದುದರಿಂದ ಇಂಥ ಪ್ರಕ್ಷೇಪಗಳನ್ನೆಲ್ಲ ಬೇರ್ಪಡಿಸಿ, ಮಹಾಭಾರತದ ಶುದ್ಧ ಪಾಠವನ್ನು ಸಂಶೋಧಿಸಬೇಕೆಂಬ ಮಹಾವಿದ್ವತ್‌ ಪ್ರಯತ್ನವೊಂದು ಕಳೆದ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ನಡೆಯಿತು. ಪುಣೆಯ ಸುಪ್ರಸಿದ್ಧ ಭಂಡಾರ್ಕಾಸ್ ಸಂಸ್ಥೆಯವರು ವಿದ್ವನ್ಮಂಡಳಿಯೊಂದರ ಸಂಪಾದಕತ್ತ್ವದಲ್ಲಿ ದಶಕಗಳ ಕಾಲ ಈ ವಿದ್ವತ್‌ ಪರಿಶ್ರಮವನ್ನು ನಡೆಯಿಸಿದರು. ಡಾ. ವಿ.ಎಸ್‌. ಸುಕ್ತಂಕರ್‌ ಸಂಪಾದಕರಾಗಿದ್ದ ಕಾಲದಲ್ಲಿ ಈ ಸಂಶೋಧಿತ ಮಹಾಭಾರತ ಪ್ರಕಟಗೊಂಡಿತು. ಎಲ್ಲರ ಪರಿಶ್ರಮ ಕೃತಾರ್ಥವಾಯಿತು. ಆದರೆ ವ್ಯಾಸರ ಈ ಮಹಾಕೃತಿಯನ್ನು ಕುರಿತು ವಿದ್ವದಿತಿಹಾಸದಲ್ಲಿ ವಿಚಿತ್ರವೊಂದು ಸಂಭವಿಸುವುದಕ್ಕೆ ಮಾತ್ರ ಬಾಕಿ ಇತ್ತು.

ಅದೇನೆಂದರೆ ಸಂಶೋಧಕ ಸಂಪಾದಕರಾಗಿ ಮಹಾಕೀರ್ತಿವಂತರಾದ ಸುಕ್ತಂಕರ್‌ ಅವರು ಆಮೇಲೆ ಮಹಾಭಾರತವನನ್ನು ಕುರಿತಂತೆ ಇದು ಉಪನ್ಯಾಸಗಳನ್ನು ನೀಡಿದರು – On the Meaning of Mahabharata ಎಂಬ ಶೀರ್ಷಿಕೆಯಲ್ಲಿ. ಈ ಉಪನ್ಯಾಸಗಳು ಸುಕ್ತಂಕರ್‌ ಬದುಕಿನ ಕೊನೆಯ ಕಾರ್ಯಕ್ರಮಗಳೂ ಆದುವು. ಈ ಉಪನ್ಯಾಸಗಳಲ್ಲಿ ಮಾತ್ರ, ಮಹಾಭಾರತದ ಅರ್ಥವಂತಿಕೆಯನ್ನು ವಿವರಿಸುವುದಕ್ಕೆ ತಾವು ಪ್ರಕ್ಷೇಪಗಳೆಂದು ಕೈಬಿಟ್ಟ ಭಾಗಗಳಿಂದಲೇ ಧಾರಾಳವಾಗಿ ಉಲ್ಲೇಖಿಸಿದರು. ಮೂಲವನ್ನು ಹುಡುಕುವ ಭರದಲ್ಲಿ ಪ್ರಕ್ಷೇಪಗಳೆಂದು ಗುರುತಿಸುತ್ತ ಅವುಗಳನ್ನು ಕೈಬಿಡುತ್ತ ಸಾಗಿದರೆ ಮತ್ತೆ ನಮಗೆ ಉಳಿಯುವುದೇನು? ಎಂದು ಪ್ರಶ್ನಿಸಿಕೊಂಡರು ಕೂಡ.

‘‘ಪ್ರಕ್ಷೇಪವೋ ಅಲ್ಲವೋ ಆ ಮಾತಿರಲಿ. ನಮ್ಮ ಮುಂದೆ ತನ್ನ ಸಮಗ್ರ ವಿಸ್ತಾರದಲ್ಲಿ ಹರಡಿರುವ ಹಾಡುಗಬ್ಬವೊಂದು ಇದೆ. ಇದು ನೀಡುವ ಅನುಭವ ಆಶ್ಚರ್ಯಕರವಾದದ್ದು. ಇದರ ಅಂತರಾರ್ಥದ ಕುರಿತು ಚಿಂತಿಸಿದಷ್ಟೂ ಸಾಲದು. ಆದುದರಿಂದ ಏಕಾಗ್ರವಾಗಿ ಈ ಗ್ರಂಥವನ್ನು ಅಧ್ಯಯನ ಮಾಡಬೇಕು. ಇದು ಮೂಲತಃ ಕ್ಷತ್ರಿಯರ ನಡುವಣ ಪ್ರೇಮದ ಕಥೆ; ಯುದ್ಧದ ಕಥೆ. ಆದುದರಿಂದ ಅದಕ್ಕೆ ಸಂಬಂಧಪಟ್ಟ ವಿವರಗಳು ಮಾತ್ರ ‘ಮೂಲ’, ಉಳಿದುದೆಲ್ಲ ‘ಪ್ರಕ್ಷೇಪ’ ಎನ್ನುವ, ತಮ್ಮ  ಪರಂಪರೆಯ ಧೋರಣೆಯನ್ನು ಅನುಸರಿಸುವ ಪಾಶ್ಚಿಮಾತ್ಯ ಪಂಡಿತರ ವಾದಗಳನ್ನು ನಮ್ಮ ಜನ ಯಾವತ್ತಿನಿಂದಲೂ ಕಡೆಗಣಿಸಿದ್ದಾರೆ. ಈ ಕ್ಷತ್ರಿಯರ ಪ್ರೇಮ–ಯುದ್ಧದ ಕಥೆಗಳಿಗಿಂತ ಎಷ್ಟೋ ಹೆಚ್ಚು ಬೆಲೆಯುಳ್ಳ, ಮಹತ್ತ್ವದ, ಬಾಳನ್ನು ಉನ್ನತಿಗೆ ಏರಿಸುವ ಮೌಲ್ಯ ಪ್ರತಿಪಾದಕ ಗ್ರಂಥವನ್ನಾಗಿ ಇದನ್ನು ಭಾರತೀಯರು ಕಂಡಿದ್ದಾರೆ. ಈ ಕಾಣ್ಕೆಯನ್ನು ನಾನು ಗೌರವಿಸುತ್ತೇನೆ’’ – ಎಂಬರ್ಥದಲ್ಲಿ ಸುಕ್ತಂಕರ್ ಬರೆದರು.

ಸುಕ್ತಂಕರ್‌ ಮಾತುಗಳು ಒಂದು ರೀತಿಯಲ್ಲಿ ತಪ್ಪೊಪ್ಪಿಗೆಯ ಮಾತುಗಳಂತೆ ಕೇಳಿಸಿದರೆ ಸೋಜಿಗವಿಲ್ಲ. ನಮ್ಮ ಕನ್ನಡದ ಶಂ.ಬಾ. ಜೋಶಿಯವರು ಸುಕ್ತಂಕರ್‌ ಅವರ ಈ  ಬದಲಾದ ನಿಲುವಿನಿಂದ ತಾನು ವಿಚಲಿತಗೊಂಡೆನೆಂದು ಹೇಳಿಕೊಂಡಿದ್ದಾರೆ. ಅದಿರಲಿ. ಸುಕ್ತಂಕರ್‌ ಅವರ ಅನುಭವವು ಒಂದು ರೀತಿಯಲ್ಲಿ anti-climax. ಅಥವಾ ಇದೇ climax ಇರಬಹುದು. ಏಕೆಂದರೆ ಇದು ಮಹಾಭಾರತವು ಕೊಡಮಾಡುವ ಅನುಭವಕ್ಕೆ ಅನುರೂಪವಾಗಿಯೇ ಇದೆ. ಆಧುನಿಕ ಗ್ರಂಥಸಂಪಾದನಶಾಸ್ತ್ರದಲ್ಲಿ ನಿಪುಣರಾಗಿ, ತಮ್ಮ ಬದುಕನ್ನೆ ಮಹಾಭಾರತದ ಅಧ್ಯಯನಕ್ಕೆ ಮೀಸಲು ಮಾಡಿದ ವಿದ್ವಾಂಸರೊಬ್ಬರು ಕೊನೆಯಲ್ಲಿ ಈ ಪಲ್ಲಟವನ್ನು ಅನುಭವಿಸಿದ್ದು – ಯುದ್ಧದಲ್ಲಿ ಗೆದ್ದು ಸಿಂಹಾಸವನ್ನೇರಿ ಚಕ್ರವರ್ತಿಯಾದ ಮೇಲೆ, ಇದು ನಿಜಕ್ಕೂ ಜಯವೋ ಅಥವಾ ಪರಾಜಯವೋ ಎಂದು ಮಹಾಭಾರತದಲ್ಲಿ ಧರ್ಮರಾಯ ವ್ಯಾಕುಲನಾಗಿ ಕೇಳಿದಂತೆಯೇ ಕೇಳಿಸುತ್ತಿದೆ! ಎಂಥ ಸೋಜಿಗ! ಸುಕ್ತಂಕರ್‌ ಅವರ ‘ಆದಿಪರ್ವ’ ಇಲ್ಲಿಂದ ಶುರುವಾದಂತೆ ಅನ್ನಿಸುತ್ತದೆ.

ಆದಿಪರ್ವದ ಮೊತ್ತಮೊದಲ ಕಥೆ ಯಾವುದು ಗೊತ್ತೇನು! ಅದು ಗದ್ಯದಲ್ಲಿದೆ, ಹೀಗಿದೆ: ಅದು ಜನಮೇಜಯನ ಕಾಲ. ಜನಮೇಜಯನು ತನ್ನ ತಮ್ಮಂದಿರೊಡನೆ ದೊಡ್ಡದೊಂದು ಯಾಗವನ್ನು ಶುರುಹಚ್ಚಿಕೊಂಡಿದ್ದಾನೆ. ಯಜ್ಞವೇದಿಕೆಯಲ್ಲಿ ಯಾಗ ನಡೆಯುತ್ತಿದೆ. ವಿಶಾಲವಾದ ಚಪ್ಪರದ ಇನ್ನೊಂದೆಡೆ ಭೋಜನದ ಸಿದ್ಧತೆ ಇತ್ಯಾದಿ ನಡೆಯುತ್ತಿದೆ. ಇವೆಲ್ಲ ಗವುಜಿಯನ್ನು ನೋಡುತ್ತ ನಾಯಿಮರಿಯೊಂದು ಕುತೂಹಲಗೊಂಡು ದೂರದಿಂದಲೇ ಇಣುಕು ಹಾಕಿದೆ. ಇದನ್ನು  ನೋಡುತ್ತಿದ್ದಂತೆ ಜನಮೇಜಯನ ತಮ್ಮಂದಿರು ಉಗ್ರರಾಗಿ ನಾಯಿಮರಿಯನ್ನು ಹೊಡೆದಟ್ಟಿದ್ದಾರೆ. ಅದೇನೂ ಯಜ್ಞಶಾಲೆಯ ಒಳಗೆ ಬಂದಿರಲಿಲ್ಲ. ಮರಿ ಅಳುತ್ತಳುತ್ತ ತನ್ನ ತಾಯಿಯಲ್ಲಿ – ತಾಯಿನಾಯಿಯ ಹೆಸರು ‘ಸರಮಾ’ – ಎಲ್ಲವನ್ನೂ ಹೇಳಿದೆ.

ತಾಯಿ ಕೇಳಿದಳು: ನೀನೇನಾದರೂ ತಪ್ಪು ಮಾಡಿದೆಯೇನು? ಯಾಗ ಶಾಲೆಯೊಳಗೆ ಹೋದೆಯೇನು? ಏನನ್ನಾದರೂ ಮೂಸಿ ಮುಟ್ಟಿ ನೋಡಿದೆಯೇನು?
ಮರಿ ಹೇಳಿದೆ: ನಾನೇನೂ ಹೋಗಬಾರದ ಜಾಗೆಗೆ ಹೋಗಿಲ್ಲ. ಮರ್ಯಾದೆ ದಾಟಿಲ್ಲ. ಏನೂ ತಪ್ಪು ಮಾಡಿಲ್ಲ. ಆದರೂ ನನಗೆ ಹೊಡೆದಿದ್ದಾರೆ.
ಈಗ ತಾಯಿಗೆ ಸಿಟ್ಟು ಬಂದಿದೆ. ಅದು ನೇರವಾಗಿ ಮರಿಯೊಡನೆ ಯಾಗಭೂಮಿಗೆ ಬಂದಿದೆ. ಯಾಗದ ಯಜಮಾನನಾದ ರಾಜ ಜನಮೇಜಯನನ್ನು ನೇರವಾಗಿ ಕೇಳಿದೆ: ‘ಏನೂ ತಪ್ಪು ಮಾಡದ ನನ್ನ ಮರಿಯನ್ನು ಹೊಡೆದುದೇಕೆ?’

ಜನಮೇಜಯನಲ್ಲಿಯೂ ಅವನ ತಮ್ಮಂದಿರಲ್ಲಿಯೂ ಈ ತಾಯಿಯ ಪ್ರಶ್ನೆಗೆ ಉತ್ತರವಿರಲಿಲ್ಲ. ಸರಮೆಗೆ ಇನ್ನಷ್ಟು ಸಿಟ್ಟು ಬಂದಿದೆ. ನಿರಪರಾಧಿಯಾದ ಮಗುವನ್ನು ಹೊಡೆದಿರಿ. ಪ್ರಶ್ನಿಸಿದರೆ ನಿಮ್ಮಲ್ಲಿ ಉತ್ತರವಿಲ್ಲ. ನಿಮ್ಮನ್ನು ಅಜ್ಞಾತವಾದ ಭಯ ಕಾಡಲಿ – ಎಂದು ತಾಯಿ ರಾಜನ್ಯರಿಗೆ ಶಪಿಸಿ, ಮರಿಯೊಂದಿಗೆ ಹೊರಟುಹೋಗುತ್ತಾಳೆ.

ಆಳುವವರ್ಗಕ್ಕೆ ಸದಾ ಅಜ್ಞಾತವಾದ ಭಯ!
ಆಳುವವರ್ಗಕ್ಕೆ ಸದಾ ತಾಯಂದಿರ ಶಾಪ!


ಈ ಕಥೆಯೊಂದಿಗೆ ಪ್ರಾರಂಭಗೊಳ್ಳುವ ಮಹಾಭಾರತ, ಧರ್ಮಜನನ್ನು ಸ್ವರ್ಗದ ಬಾಗಿಲ ತನಕ ಹಿಂಬಾಲಿಸಿದ ನಾಯಿಯ ಕಥೆಯೊಂದಿಗೆ ಕೊನೆಗೊಳ್ಳುತ್ತದೆ! ತನ್ನನ್ನು ಹಿಂಬಾಲಿಸುತ್ತಿರುವುದು ಯಾವುದು ಎಂದು ಹಿಂತಿರುಗಿ ನೋಡಲಾಗುವ ಕ್ಷಣದಲ್ಲಿ ಇತಿಹಾಸದ  ಆದಿಪರ್ವ ಮೈಪಡೆಯುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT