ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಅಪ್ಪಟ ಭಾರತೀಯ ಫೋನ್ : ಸ್ಮಾರ್ಟ್ರೋನ್ ಎಸ್‌ಆರ್‌ಟಿ.ಫೋನ್

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದಿನ ಸ್ಮಾರ್ಟ್ರೋನ್ ಎಂಬ ಕಂಪೆನಿ ಸ್ವಲ್ಪ ಸುದ್ದಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಈ ಕಂಪೆನಿಗೆ ಸಚಿನ್ ತೆಂಡೂಲ್ಕರ್ ಹಣ ಹೂಡಿರುವುದು. ಸ್ಮಾರ್ಟ್ರೋನ್ ಕಂಪೆನಿ ಇದು ತನಕ ಮೂರು ಉತ್ಪನ್ನಗಳನ್ನು ಹೊರತಂದಿದೆ. ಲ್ಯಾಪ್‌ಟಾಪ್ ಆಗಿಯೂ ಟ್ಯಾಬ್ಲೆಟ್ ಆಗಿಯೂ ಬಳಸಬಹುದಾದ 2-ಇನ್-1 ಟಿ.ಬುಕ್, ಸ್ಮಾರ್ಟ್‌ಫೋನ್ ಟಿ.ಫೋನ್ ಮತ್ತು ಈ ವಾರ ನಾವು ವಿಮರ್ಶೆ ಮಾಡುತ್ತಿರುವ ಎಸ್‌ಆರ್‌ಟಿ.ಫೋನ್ (Smartron srt.Phone).

ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳಲ್ಲಿ ಲೋಹದ ದೇಹವಿದೆ. ಆದರೆ ಇದು ಸಂಪೂರ್ಣ ಪ್ಲಾಸ್ಟಿಕ್ಕಿನದು. ಬಲಗಡೆ ವಾಲ್ಯೂಮ್ ಬಟನ್‌ ಇದೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಆನ್/ಆಫ್ ಬಟನ್ ಇವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ನಮೂನೆಯ ಕಿಂಡಿಯಿದೆ. ಹಿಂದುಗಡೆಯ ಪ್ಲಾಸ್ಟಿಕ್ ಕವಚ ತೆಗೆಯಬಹುದು. ಆಗ ಎರಡು ಮೈಕ್ರೊ ಸಿಮ್ ಹಾಕುವ ಜಾಗಗಳು ಕಂಡುಬರುತ್ತವೆ. ಮೆಮೊರಿ ಕಾರ್ಡ್ ಹಾಕುವ ಸವಲತ್ತು ಇಲ್ಲ.

ಬ್ಯಾಟರಿ ತೆಗೆಯುವಂತಿಲ್ಲ. ಕವಚ ತುಂಬ ದೊರಗೂ ಅಲ್ಲ, ತುಂಬ ನಯವೂ ಅಲ್ಲ ಎಂಬಂತಿದ್ದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಹಿಂಭಾಗದಲ್ಲಿ ಎಡಗಡೆ ಮೇಲಿನ ಮೂಲೆಯಲ್ಲಿ ಕ್ಯಾಮೆರಾ ಇದೆ. ಎಲ್ಲ ಐಫೋನ್‌ಗಳಲ್ಲಿ ಇದೇ ರೀತಿ ಇದೆ. ಆದರೆ ನನಗೆ ಈ ಸ್ಥಳದಲ್ಲಿ ಕ್ಯಾಮೆರಾ ಇರುವುದು ಇಷ್ಟವಿಲ್ಲ. ಕ್ಯಾಮೆರಾವನ್ನು ಹಿಡಿದುಕೊಂಡು ಫೋಟೊ ತೆಗೆಯುವಾಗ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಎಡಗೈಯ ಬೆರಳು ಕ್ಯಾಮೆರಾಕ್ಕೆ ಅಡ್ಡಬರುತ್ತದೆ.

ನನ್ನ ಪ್ರಕಾರ ಹಿಂಭಾಗದ ಮಧ್ಯ ಭಾಗದಲ್ಲಿ ಕ್ಯಾಮೆರಾವನ್ನು ಅಳವಡಿಸುವುದೇ ಸರಿಯಾದ ವಿನ್ಯಾಸ. ಹಿಂಭಾಗದ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚ ಮತ್ತು ದೇಹದ ನಡುವೆ ಚಿಕ್ಕ ಸಂದಿ ಉಳಿದುಕೊಂಡು ಕೆಟ್ಟದಾಗಿ ಕಾಣಿಸುತ್ತದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸ ಕಡಿಮೆ ಬೆಲೆಯ ಫೋನಿನಂತಿದೆ. ಉತ್ತಮ ರಚನೆ ಮತ್ತು ವಿನ್ಯಾಸ ನಿಮ್ಮ ಪ್ರಥಮ ಆದ್ಯತೆಯಾಗಿದ್ದಲ್ಲಿ ಈ ಫೋನ್ ನಿಮಗಲ್ಲ.

ಇದರಲ್ಲಿರುವುದು ಬಹುತೇಕ ಶುದ್ಧ ಆಂಡ್ರಾಯ್ಡ್‌. ಇವರು ತಮ್ಮದೇ ಹೊದಿಕೆ ಸೇರಿಸಿಲ್ಲ. ಮೂರು ಸಾಫ್ಟ್ ಬಟನ್‌ಗಳು ಪರದೆಯ ಕೆಳಗೆ ಪ್ರತ್ಯೇಕ ಇವೆ. ನನಗೆ ವೈಯಕ್ತಿಕವಾಗಿ ಹೀಗೆ ಮೂರು ಪ್ರತ್ಯೇಕ ಬಟನ್‌ಗಳೇ ಇಷ್ಟ.

ತಕ್ಕಮಟ್ಟಿಗೆ ವೇಗದ ಎನ್ನಬಹುದಾದ ಪ್ರೊಸೆಸರ್ ಮತ್ತು ಗ್ರಾಫಿಕ್ಸ್‌ ಪ್ರೊಸೆಸರ್ ಇರುವುದರಿಂದ ಇದರ ಕೆಲಸ ವೇಗ ಚೆನ್ನಾಗಿದೆ. ಎಲ್ಲ ನಮೂನೆಯ ಆಟಗಳನ್ನು ಸರಾಗವಾಗಿ ಆಡಬಹುದು. ಮೂರು ಆಯಾಮಗಳ ಆಟ, ಕ್ಲಿಷ್ಟವಾದ ಪ್ರತ್ಯನುಕರಣೆಗಳು (simulation), ಎಲ್ಲ ಚೆನ್ನಾಗಿ ಕೆಲಸ ಮಾಡುತ್ತವೆ. ಇದರ ಅಂಟುಟು ಬೆಂಚ್‌ಮಾರ್ಕ್ 79,879 ಇದೆ ಅಂದರೆ ತಕ್ಕ ಮಟ್ಟಿನ ವೇಗದ ಫೋನ್ ಎನ್ನಬಹುದು. ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡಬಹುದು. ಕೆಲಸದ ವೇಗ ಅಂದರೆ performance ನಿಮ್ಮ ಪ್ರಥಮ ಆದ್ಯತೆಯಾಗಿದ್ದಲ್ಲಿ ನೀವು ಈ ಫೋನ್ ಕೊಳ್ಳಬಹುದು.

ಎಲ್ಲ ನಮೂನೆಯ ವಿಡಿಯೊಗಳು ಸರಾಗವಾಗಿ ಪ್ಲೇ ಆಗುತ್ತವೆ. 4k ವಿಡಿಯೊ ಕೂಡ ಪ್ಲೇ ಆಗುತ್ತದೆ. ಪರದೆಯ ಗುಣಮಟ್ಟ ತೃಪ್ತಿದಾಯಕವಾಗಿದೆ.
ಅಂದರೆ ಸಿನಿಮಾ ವೀಕ್ಷಿಸುವ ಅನುಭವ ಚೆನ್ನಾಗಿದೆ ಎನ್ನಬಹುದು. ಆಡಿಯೊ ಇಂಜಿನ್ ಅಲ್ಲಿಂದಲ್ಲಿಗೆ ತೃಪ್ತಿದಾಯಕವಾಗಿದೆ. ಉತ್ತಮ ಎನ್ನುವಂತಿಲ್ಲ. ಇಯರ್‌ಫೋನ್ ನೀಡಿಲ್ಲ. ಫೋನಿನಲ್ಲೇ ಇರುವ ಸ್ಪೀಕರ್‌ನ ಧ್ವನಿ ಜೋರಾಗಿದೆ!

ಕ್ಯಾಮೆರಾದ ವಿಷಯಕ್ಕೆ ಬಂದಾಗ ಫಲಿತಾಂಶ ಸ್ವಲ್ಪ ನಿರಾಶಾದಾಯಕ ಎಂದು ಅನ್ನಿಸಿತು. ಅತಿ ಹತ್ತಿರದ ವಸ್ತುಗಳ (ಉದಾ– ಜೇಡ, ಹೂವು, ಇತ್ಯಾದಿ) ಫೋಟೊ ಪರವಾಗಿಲ್ಲ. ಸೂರ್ಯಾಸ್ತದ ದೃಶ್ಯಗಳೂ ಪರವಾಗಿಲ್ಲ. ಇತರೆ ಪ್ರಕೃತಿ ದೃಶ್ಯಗಳ (scenery) ಫೋಟೊಗಳು ತುಂಬ ಚೆನ್ನಾಗಿ ಮೂಡಿ ಬಂದವು. ಇಂತಹ ಫೋಟೊಗಳಲ್ಲಿ ಬಣ್ಣಗಳು ತುಂಬ ಶ್ರೀಮಂತವಾಗಿದ್ದವು. ವಿಡಿಯೊ ಚಿತ್ರೀಕರಣ ಪರವಾಗಿಲ್ಲ. ಆದರೆ ಆಪ್ಟಿಕಲ್ ಸ್ಟೆಬಿಲೈಸೇಶನ್ ಇಲ್ಲದಂತಿದೆ. ಕ್ಯಾಮೆರಾ ವಿಭಾಗದಲ್ಲಿ ಈ ಫೋನಿಗೆ ಪಾಸ್ ಮಾರ್ಕು ನೀಡುವಂತಿಲ್ಲ. ಕ್ಯಾಮೆರಾ ನಿಮ್ಮ ಪ್ರಥಮ ಆದ್ಯತೆಯಾಗಿದ್ದಲ್ಲಿ ಈ ಫೋನ್ ನಿಮಗಲ್ಲ.

ಬ್ಯಾಟರಿ ಶಕ್ತಿದಾಯಕವಾಗಿದೆ. ಆದರೆ ಫೋನ್ ಬ್ಯಾಟರಿ ಸ್ವಲ್ಪ ಜಾಸ್ತಿಯೇ ತಿನ್ನುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರಾಗಿ ಒಂದು ದಿನ ಬಾಳಿಕೆ ಬರುತ್ತದೆ. ಕ್ವಿಕ್ ಚಾರ್ಜ್ ಇರುವುದರಿಂದ ಅವರೇ ನೀಡಿದ ಚಾರ್ಜರ್ ಜೋಡಿಸಿದರೆ ಸುಮಾರು ಒಂದೂವರೆ ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಈ ಫೋನಿನ ಇನ್ನೊಂದು ತೊಡಕು ಎಂದರೆ ಇದು ಸ್ವಲ್ಪ ಜಾಸ್ತಿಯೇ ಬಿಸಿಯಾಗುತ್ತದೆ.

ಹಾಗೆಂದು ಹೇಳಿ ಯಾವಾಗಲೂ ಬಿಸಿಯಾಗುತ್ತದೆ ಎಂದಲ್ಲ. ಹೆಚ್ಚು ಶಕ್ತಿಯನ್ನು ಬೇಡುವ ಆಟಗಳನ್ನು ಆಡುವಾಗ (ಉದಾ– ಆಸ್ಫಾಲ್ಟ್ 8), ವಿಡಿಯೊ ಚಿತ್ರೀಕರಣ ಮಾಡುವಾಗ ಬಿಸಿಯಾಗುತ್ತದೆ. ಹಾಗೆಂದು ಹೇಳಿ ಕೈಯಲ್ಲಿ ಹಿಡಿದುಕೊಳ್ಳಲು ಸಾಧ್ಯವಿಲ್ಲದಷ್ಟು ಬಿಸಿಯಾಗುವುದಿಲ್ಲ. ಈ ಫೋನಿನಲ್ಲಿ ಕನ್ನಡದ ಸಂಪೂರ್ಣ ಬೆಂಬಲ ಇದೆ. ಅಂದರೆ ಕನ್ನಡದಲ್ಲೇ ಮೆನು, ಆದೇಶಗಳು (ಯೂಸರ್ ಇಂಟರ್‌ಫೇಸ್) ಇದೆ.

ಉತ್ತಮ ವೇಗದ ಫೋನ್ ಬೇಕು ಎನ್ನುವವರಿಗಾಗಿ ಭಾರತದ್ದೇ ಕಂಪೆನಿ ಸ್ಮಾರ್ಟ್ರೋಟ್‌ ಎಸ್‌ಆರ್‌ಟಿ.ಫೋನ್

***

ವಾರದ ಆ್ಯಪ್ :  ನಮ್ಮ ರೇಡಿಯೊ
ಅಂತರಜಾಲದ ಮೂಲಕ ಕಾರ್ಯಕ್ರಮ ಪ್ರಸಾರ ಮಾಡುವ ರೇಡಿಯೊ ಕೇಂದ್ರಗಳು ಹಲವಾರಿವೆ. ಅಂದ ಮೇಲೆ ನಮ್ಮ ಕನ್ನಡವೂ ಇರಬೇಕಲ್ಲವೇ? ಹೌದು. ಅದೂ ಇದೆ. ಅದನ್ನು ಆಲಿಸಲು ಕಿರುತಂತ್ರಾಂಶ (ಆ್ಯಪ್) ಇರಬೇಕಲ್ಲವೇ? ಹೌದು. ಅದೂ ಇದೆ. ಅದು ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ NammRadio Kannada Radio ಎಂದು ಹುಡುಕಬೇಕು ಅಥವಾ bit.ly/gadgetloka284 ಜಾಲತಾಣಕ್ಕೆ ಭೇಟಿ ನೀಡಬೇಕು. ಕನ್ನಡ ಮಾತ್ರವಲ್ಲ ಹವ್ಯಕ, ಸಂಕೇತಿ, ತುಳು ಭಾಷೆಗಳ ಪರಿಚಯವೂ ಈ ರೇಡಿಯೊದಲ್ಲಿದೆ. ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನೂ ಸವಿಯಬಹುದು. ಕನ್ನಡದ ಪೂಜಾರಿ ಎಂದೇ ಖ್ಯಾತರಾಗಿರುವ ಹಿರೇಮಗಳೂರು ಕಣ್ಣನ್ ಅವರ ಹರಟೆ ಕಾರ್ಯಕ್ರಮವೂ ಇದೆ.
***
ಗ್ಯಾಜೆಟ್ ಸುದ್ದಿ: ಒನ್‌ಪ್ಲಸ್ 5 ಬಿಡುಗಡೆ

ಜೂನ್ 22, 2017ರಂದು ತುಂಬ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಒನ್‌ಪ್ಲಸ್ 5 ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. 16 ಮೆಗಾಪಿಕ್ಸೆಲ್ ಮತ್ತು 20 ಮೆಗಾಪಿಕ್ಸೆಲ್‌ನ ಎರಡು ಪ್ರಾಥಮಿಕ ಕ್ಯಾಮೆರಾಗಳು, 16 ಮೆಗಾಪಿಕ್ಸೆಲ್‌ನ ಸ್ವಂತಿ ಕ್ಯಾಮೆರಾಗಳು ಇದರಲ್ಲಿವೆ. ಸ್ನಾಪ್‌ಡ್ರಾಗನ್ 835 ಪ್ರೊಸೆಸರ್ ಇದೆ. ಈ ಫೋನ್ ಎರಡು ಮಾದರಿಗಳಲ್ಲಿ ಲಭ್ಯ. 6 + 64 ಗಿಗಾಬೈಟ್ ಮೆಮೊರಿ (₹32,999) ಮತ್ತು 8+128 ಗಿಗಾಬೈಟ್ (₹37,999). ಈ ಫೋನಿಗೋಸ್ಕರ ಜನ ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತಿದ್ದರು. ಐಫೋನ್‌ಗೋಸ್ಕರ ಜನ ದಿನಮುಂಚೆಯೇ ಉದ್ದುದ್ದ ಸಾಲಿನಲ್ಲಿ ನಿಲ್ಲುವುದು ಅಮೆರಿಕದಲ್ಲಿ ಸಾಮಾನ್ಯ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬಹುಮಟ್ಟಿಗೆ ಇದೇ ಮಾದರಿಯಲ್ಲಿ ಜನ ಗಂಟೆಗಟ್ಟಲೆ ಸಾಲುನಿಲ್ಲುವಂತೆ ಒನ್‌ಪ್ಲಸ್ ಮಾಡಿದೆ.

***

ಗ್ಯಾಜೆಟ್ ಸಲಹೆ
ಅಭಿಷೇಕ್ ಅವರ ಪ್ರಶ್ನೆ: ಕಳೆದ ವಾರದ ಅಂಕಣದಲ್ಲಿ ನೀವು ಎಮ್ಐ ನೋಟ್ 3 ಮೊಬೈಲ್ ಫೋನ್‌ನಲ್ಲಿ ಎಕ್ಸ್‌ಪ್ಲೋರರ್ ಓಪನ್ ಮಾಡಿದರೆ Unfortunately Explorer has stopped ಎಂದು ಬರುತ್ತದೆ ಎಂಬ ಸಮಸ್ಯೆಗೆ ES File Explorer ಅಥವಾ X-plore ಬಳಸಿ ನೋಡಿ ಎಂದು ಸಲಹೆ ನೀಡಿದ್ದಿರಿ. ಆದರೆ ಫೋನಿನ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಿದರೆ ಸಾಕಿತ್ತು ಎಂದು ನನ್ನ ಅನಿಸಿಕೆ.

ಉ:  ನನ್ನಲ್ಲಿ ಆ ಮಾದರಿಯ ಫೋನ್ ಇಲ್ಲ. ಶಿಯೋಮಿಯವರ ಚರ್ಚಾ ವೇದಿಕೆಗಳಲ್ಲಿ ಹಲವು ಜನ ಇದೇ ಸಮಸ್ಯೆಯನ್ನು ದಾಖಲಿಸಿದ್ದಾರೆ. ಅವರೆಲ್ಲರೂ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವ ಮೂಲಕ ಸಮಸ್ಯೆ ಪರಿಹಾರವಾಗಲಿಲ್ಲ ಎಂದೇ ಬರೆದಿದ್ದಾರೆ. ಕೆಲವರು ಸದ್ಯಕ್ಕೆ ಪ್ರತ್ಯೇಕ ಫೈಲ್ ಎಕ್‌ಪ್ಲೋರರ್ ಹಾಕಿಕೊಂಡು ಬಳಕೆ ಮಾಡುತ್ತಿದ್ದೇನೆ ಎಂದು ಬರೆದಿದ್ದಾರೆ. ನಾನೂ ಅಂತೆಯೇ ಸಲಹೆ ನೀಡಿದೆ.

***

ಗ್ಯಾಜೆಟ್ ತರ್ಲೆ

ಗ್ಯಾಜೆಟ್ ಅಧ್ಯಾತ್ಮ ಈ ಗ್ಯಾಜೆಟ್ ನನ್ನದಲ್ಲ. ಇದು ಕೆಲವು ದಿನ/ವಾರಗಳ ಮಟ್ಟಿಗೆ ಮಾತ್ರ ನನ್ನಲ್ಲಿ ಇರುವುದು. ಇದು ನಿನ್ನೆ ಯಾರದೋ ಆಗಿತ್ತು. ಇಂದು ನನ್ನದಾಗಿದೆ. ನಾಳೆ ಇನ್ಯಾರದ್ದೋ ಆಗುತ್ತದೆ. ಈ ಗ್ಯಾಜೆಟ್‌ ಜೊತೆ ನಾನು ಭಾವನಾತ್ಮಕವಾಗಿ ಅಂಟಿಕೊಳ್ಳಬಾರದು. ಗ್ಯಾಜೆಟ್‌ಗಳು ಬರುತ್ತವೆ, ಹೋಗುತ್ತವೆ. ಈ ಪ್ರಪಂಚದಲ್ಲಿ ಯಾವ ಗ್ಯಾಜೆಟ್ಟೂ ಶಾಶ್ವತವಲ್ಲ. (ಇದು ಗ್ಯಾಜೆಟ್ ವಿಮರ್ಶೆ ಬರೆಯುವ ನನ್ನಂಥವರು ಹೇಳುವುದು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT