ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಆರ್ಥಿಕ ಭಯೋತ್ಪಾದನೆ

Last Updated 29 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಕಳೆದ ವಾರ ಮುಕ್ತಾಯಗೊಳಿಸಿದ್ದ ವಿಷಯದಿಂದಲೇ ಈ ವಾರದ ಅಂಕಣವನ್ನು ಆರಂಭಿಸುತ್ತಿದ್ದೇನೆ. ಅಪಾರ ನೈಸರ್ಗಿಕ ಸಂಪತ್ತಿನ ನಡುವೆಯೂ ಬಡತನದಲ್ಲಿ ನರಳುವ ದೇಶಗಳ ಅಜ್ಞಾನವನ್ನೂ, ಆ ಬಡದೇಶಗಳ ಭ್ರಷ್ಟ ನಾಯಕರ ಅನೈತಿಕ ಕಪ್ಪು ಹಣದ ಬಡ್ಡಿ ಹಣದಿಂದ ಬದುಕುವ ಸ್ವಿಟ್ಜರ್ಲೆಂಡ್‌ನಂಥ ದೇಶಗಳ ಜಾಣತನವನ್ನೂ ಹೋಲಿಸಿದ್ದೆ.

ಇದೀಗ ಹಣಕಾಸು ಸಚಿವ ಚಿದಂಬರಂ ಸ್ವಿಟ್ಜರ್ಲೆಂಡ್ ಮೇಲೆ ಬುಸುಗುಟ್ಟಿದ್ದಾರೆ. ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ಭ್ರಷ್ಟರು ಅಕ್ರಮವಾಗಿ ಇರಿಸಿರುವ ಖಾತೆಗಳ ಮಾಹಿತಿಯನ್ನು ಭಾರತ ಸರ್ಕಾರಕ್ಕೆ ಕೂಡಲೇ ಒದಗಿಸಿ ಎಂದು ಆಗ್ರಹಿಸಿದ್ದಾರೆ. ಹಿಂದೆ ಹಲವು ಬಾರಿ ಕೇಳಿದ್ದರೂ ಮಾಹಿತಿಯನ್ನು ಒದಗಿಸಿಲ್ಲ. ಈ ಬಾರಿಯೂ ಕೊಡದಿದ್ದಲ್ಲಿ ಜಿ -೨೦ ವ್ಯಾಪ್ತಿಯ ಬಹುರಾಷ್ಟ್ರೀಯ ವೇದಿಕೆಗಳ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಅವರು ಸ್ವಿಸ್ ಹಣಕಾಸು ಸಚಿವ ಎವಿಲೆನ್ ಮಿಡ್‌ಮಿರ್ ಶ್ಲೆಂಪ್‌ಗೆ ಎರಡು ಪುಟಗಳ ದೀರ್ಘ ಪತ್ರ ಬರೆದಿದ್ದಾರೆ. ಈ ಪತ್ರದ ಮುಖ್ಯವಾದ ಅಂಶವೆಂದರೆ ಜಿ-೨೦ ರಾಷ್ಟ್ರಗಳ ನಾಯಕರ ಸಭೆಯಲ್ಲಿ ಕೈಗೊಂಡ ಬ್ಯಾಂಕ್ ಗೌಪ್ಯತೆಯ ಯುಗ ಕೊನೆಗೊಂಡಿದೆ ಎಂಬ ಘೋಷಣೆಯನ್ನು ನೆನಪಿಸಿರುವುದು. ಬ್ಯಾಂಕ್‌ಗಳು ತೆರೆದ ಪುಸ್ತಕದಂತಿರಬೇಕು ಎಂಬುದು ಇತ್ತೀಚಿನ ಆರೋಗ್ಯಕರವಾದ ಜಾಗತಿಕ ನಿಲುವು. ಹಣ ಎನ್ನುವುದು ವ್ಯಕ್ತಿಯೊಬ್ಬನ ಖಾಸಗಿ ಸಂಪಾದನೆ, ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದರೂ ಅದು ಅಂತಿಮವಾಗಿ ಒಂದು ದೇಶದ ಆರ್ಥಿಕ ಸ್ವರೂಪಕ್ಕೆ ಒಳಪಡುತ್ತದೆ.

ಚುನಾವಣೆಗೆ ಸ್ಪರ್ಧಿಸಿದವರು ನೀಡುವ ಲೆಕ್ಕ, ಕಾಗದದ ಮೇಲಷ್ಟೇ ನಿಜವಾಗಿರುತ್ತದೆ. ಆ ಮಾಹಿತಿ ಅವರ ಕಪ್ಪು ಹಣಕ್ಕೆ ಸಂಬಂಧಿಸಿರುವುದಿಲ್ಲ. ಕಪ್ಪು ಹಣದ ಇನ್ನೊಂದು ಹೆಸರಿನಂತಿರುವ ಸ್ವಿಟ್ಜರ್ಲೆಂಡ್ ತನ್ನ ಶ್ವೇತದುಕೂಲದಲ್ಲಿ ಕಪ್ಪು ಹಣವೆಂಬ ಕೆಂಡವನ್ನು ಬಚ್ಚಿಟ್ಟುಕೊಂಡಿದೆ. ಸ್ವಿಟ್ಜರ್ಲೆಂಡ್‌ನ ಅಸಹಕಾರ ಮುಂದುವರೆದಲ್ಲಿ ಹಲವು ನಿರ್ಬಂಧಗಳನ್ನು ಹೇರಬಹುದು, ನಿಜ. ಆದರೆ ಬಡದೇಶಗಳು ಹೇರುವ ನಿರ್ಬಂಧಗಳಿಗೆ ಶ್ರೀಮಂತ ಸೊಕ್ಕಿನ ರಾಷ್ಟ್ರಗಳು ಸೊಪ್ಪು ಹಾಕುವುದಿಲ್ಲ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಒಂದು ವಿದೇಶಾಂಗ ನೀತಿ ಎಂದು ಅವು ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಂಡರೆ ಅವರ ಶ್ರೀಮಂತಿಕೆಗೇ ಮುಳುವು.  ಅವರ ಅಸ್ತಿತ್ವಕ್ಕೇ ಧಕ್ಕೆ.  ಕಾರಣ ಇದೇನೂ ಸಣ್ಣಪುಟ್ಟ ಮೊತ್ತವಲ್ಲ.

ಮೂರು ಥಿಂಕ್ ಟ್ಯಾಂಕುಗಳಾದ NCAER (National Council for Applied Economic Research), NIPFP (National Institute of Public Finance and Policy) ಮತ್ತು NIFM (National Institute of Financial Management)ಗಳ ಶೋಧನೆಯ ಪ್ರಕಾರ ಇಪ್ಪತ್ತೈದು ಲಕ್ಷ ಕೋಟಿ ರೂಪಾಯಿಗಳು! ಈ ಹಣ ಭಾರತ ಸರ್ಕಾರದ ಖಜಾನೆಗೆ ಮರಳಿ ಬಂದರೆ ಭಾರತದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಿತ್ರವೇ ಬದಲಾಗಬಲ್ಲದು. ಭಾರತ ಮೈಕೊಡವಿ ನಿಲ್ಲಲು ಸಾಧ್ಯವಾಗುತ್ತದೆ. ಭಾರತ ಒಂದೇ ಅಲ್ಲ; ಭ್ರಷ್ಟಾಚಾರದಿಂದ ನರಳುತ್ತಿರುವ ಅನೇಕ ದೇಶಗಳಿಗೆ ಲಾಭವಾಗುತ್ತದೆ. ಬಹುಶಃ ಸಮಾಜವಾದದ ಹೊಸ ಸ್ವರೂಪವು ಜಾಗತಿಕ ನೆಲೆಯಲ್ಲಿ ಮೈದಾಳಬಹುದು. ಇದು ಭಯಂಕರ ಆಶಾವಾದದಂತೆ ಕಂಡರೂ ಸಂಪತ್ತಿನ ಸಮಾನ ಹಂಚಿಕೆಗೆ ನಾಂದಿಯಾಗುತ್ತದೆ. ಆದರೆ ಸ್ವಿಟ್ಜರ್ಲೆಂಡ್ ತಲೆ ಬಾಗೀತೆ?

ಇದು ಹೇಗಿದೆ ಎಂದರೆ ತಾಲಿಬಾನಿಗಳನ್ನು ನಿಮ್ಮ ಆದಾಯದ ಮೂಲ ಮತ್ತು ನಿಮ್ಮ ಬಳಿ ಇರುವ ಆಯುಧಗಳ ಲೆಕ್ಕ ಕೊಡಿ ಎಂದು ಕೇಳಿದಂತೆ. ಸ್ವಿಟ್ಜರ್ಲೆಂಡ್ ಮಾಡುತ್ತಿರುವುದು ನಿಸ್ಸಂಶಯವಾಗಿ ಒಂದು ಬಗೆಯ ಆರ್ಥಿಕ ಭಯೋತ್ಪಾದನೆ. ತಾಲಿಬಾನಿಗಳು ನಕಲಿ ನೋಟನ್ನು ಮುದ್ರಿಸಿ ಭಾರತದೊಳಕ್ಕೆ ಚಲಾವಣೆಗೆ ಬಿಟ್ಟಂತೆಯೇ ಸ್ವಿಟ್ಜರ್ಲೆಂಡ್‌ನ ಈ ತಣ್ಣನೆಯ ಕ್ರೌರ್ಯ. ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಪರಿಣಾಮಗಳಲ್ಲೇನೂ ವ್ಯತ್ಯಾಸವಿಲ್ಲ.

ತನ್ನ ಅನೈತಿಕತೆಯಿಂದ ಬಿಳಿಯರ ಚಿಕ್ಕ ದೇಶವೊಂದು, ಅಪಾರ ಜನಸಂಖ್ಯೆಯ ತೃತೀಯ ಬಡರಾಷ್ಟ್ರಗಳ ಮೇಲೆ ನಡೆಸುತ್ತಾ ಬಂದಿರುವ ಈ ಆರ್ಥಿಕ ಭಯೋತ್ಪಾದನೆ ಶಿಷ್ಟ ಜಗತ್ತಿನ ಒಳವ್ಯಾಪಾರವಾಗಿರುವುದರಿಂದ ತಾಲಿಬಾನಿಗಳ ಹಸಿ ಕ್ರೌರ್ಯದಂತೆ ನಿತ್ಯಸುದ್ದಿಯಾಗುವುದಿಲ್ಲ. ಎದ್ದು ಕಾಣುವುದಿಲ್ಲ. ದೇಶದ ಸಂಪತ್ತು ಕೊಳ್ಳೆಯಾಗುವುದು ತಿಳಿಯುವುದಿಲ್ಲ. ತನ್ನ ಗ್ರಾಹಕನಿಗೆ ರಹಸ್ಯ ಕಾಪಾಡುವ ನಿಯತ್ತನ್ನು ತೋರುತ್ತಾ ಅವನ ಹಿತ ಕಾಯುವುದರಿಂದ ಆ ಕಪ್ಪು ಹಣದ ಪ್ರಮಾಣ ಅಧಿಕೃತವಾಗಿ ಹೊರಜಗತ್ತಿಗೆ ತಿಳಿಯುವುದಿಲ್ಲ.

ರಹಸ್ಯ ಕಾಪಾಡುವ ಭರವಸೆಯನ್ನು ಬ್ಯಾಂಕ್ ತನ್ನ ಗ್ರಾಹಕನಿಗೆ ನೀಡುವುದೇನೋ ಸರಿ. ಆದರೆ ಅದು ವ್ಯಕ್ತಿ-ವ್ಯಕ್ತಿಗಳ, ಸಂಸ್ಥೆ-ಸಂಸ್ಥೆಗಳ ನಡುವೆ ಮಾತ್ರ. ಆದರೆ ಅದು ತನ್ನ ತೆರಿಗೆ ಇಲಾಖೆಗೆ, ಸರ್ಕಾರಕ್ಕೆ ಮತ್ತು ಜನರಿಂದ ಚುನಾಯಿತವಾದ ಯಾವುದೇ ದೇಶದ ಸರ್ಕಾರಕ್ಕೆ ತೆರೆದ ಪುಸ್ತಕದಂತಿರಬೇಕು. ಇದು ಈ ಕಾಲದ ಅಗತ್ಯ ಆರ್ಥಿಕ ನೀತಿ ಕೂಡ. ಈ ಅರ್ಥದಲ್ಲಿ ಸ್ವಿಟ್ಜರ್ಲೆಂಡ್ ತಾಲಿಬಾನಿಗಳಿಗಿಂತ ಅವೈಜ್ಞಾನಿಕವಾಗಿ ಮತ್ತು ಕ್ರೂರವಾಗಿ ನಡೆದುಕೊಳ್ಳುತ್ತಿದೆ.

ನಾವು ಕಪ್ಪು ಹಣದ ಖದೀಮರನ್ನಷ್ಟೇ ಟೀಕಿಸಿ ಸುಮ್ಮನಾಗುತ್ತಿದ್ದೇವೆ. ಆ ಕಪ್ಪು ಹಣವನ್ನು ಕ್ಷೇಮವಾಗಿ ಕಾದಿರಿಸಿ, ಭ್ರಷ್ಟರಿಂದ ಅಧಿಕ ಬಡ್ಡಿಯನ್ನು ವಸೂಲು ಮಾಡಿ, ತನ್ನ ಈ ಭೂಗತ ಅವ್ಯವಹಾರವನ್ನು ಜಗತ್ತಿನ ಆರ್ಥಿಕ ಚಟುವಟಿಕೆಯಿಂದ ಮುಚ್ಚಿಟ್ಟು, ಹೊರ ಜಗತ್ತಿಗೆ ತಾನು ಶ್ರೀಮಂತ ದೇಶ - ಸ್ವಚ್ಛ ದೇಶ, -ಅಪರಾಧಗಳಿಲ್ಲದ ದೇಶ ಎಂದು ತೋರಿಸಿಕೊಳ್ಳುವ ಸ್ವಿಟ್ಜರ್ಲೆಂಡ್‌ನ ಮುಖವಾಡವನ್ನು ಕಳಚಲು ಇದು ಸಕಾಲ.

ಎಲ್ಲ ದೇಶಗಳ ಒಳ- ಹೊರ ಕಾನೂನುಗಳು ಏಕರೂಪದಲ್ಲಿ ಇರಬೇಕಾಗಿಲ್ಲ. ಇರುವುದು ಸಾಧ್ಯವೂ ಇಲ್ಲ. ಕಾನೂನು ಎಂಬುದು ಆಯಾ ದೇಶಗಳ ಹಲವಾರು ಸನ್ನಿವೇಶಗಳನ್ನಾಧರಿಸಿ ರಚನೆಯಾಗುವ ನೀತಿಸಂಹಿತೆ. ಅಮೆರಿಕಾದಲ್ಲಿ ರಾಜ್ಯಗಳ ಕಾನೂನು ಒಂದು ಬಗೆಯಾದರೆ ಫೆಡರಲ್ ಕಾನೂನುಗಳೇ ಮತ್ತೊಂದು ಬಗೆ. ಒಂದು ರಾಜ್ಯ, ವಾಹನಗಳ ಹಿಂಭಾಗದಲ್ಲಿ ನಂಬರ್ ಪ್ಲೇಟ್ ಇದ್ದರೆ ಸಾಕು ಎನ್ನುತ್ತದೆ.

ಇನ್ನೊಂದು ರಾಜ್ಯ, ಎರಡೂ ಕಡೆ ಖಡ್ಡಾಯ ಎನ್ನುತ್ತದೆ. ಆಯುಧಗಳನ್ನು ಆತ್ಮರಕ್ಷಣೆಗೆ ಇಟ್ಟುಕೊಳ್ಳಬಹುದು ಎನ್ನುತ್ತದೆ ಒಂದು ರಾಜ್ಯ. ಇಟ್ಟುಕೊಳ್ಳಿ, ಆದರೆ ಸಾಗಣೆ ಮಾಡುವಂತಿಲ್ಲ ಎನ್ನುತ್ತದೆ ಮತ್ತೊಂದು ರಾಜ್ಯ. ಮದ್ಯಪಾನ, ವೇಶ್ಯಾವಾಟಿಕೆ, ಸಲಿಂಗಕಾಮ, ವೇಗಮಿತಿ ಇತ್ಯಾದಿ ವಿಷಯಗಳಲ್ಲಿ ಒಂದೊಂದು ರಾಜ್ಯದ್ದು ಒಂದೊಂದು ಕಾನೂನು. ಬ್ಯಾಂಕಿಂಗ್ ಪಾಲಿಸಿ ಯಲ್ಲೂ ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯ, ಒಂದು ದೇಶಕ್ಕಿಂತ ಮತ್ತೊಂದು ದೇಶ ಭಿನ್ನ.

ಆದರೆ ಒಂದು ದೇಶದ ಹಿತದೃಷ್ಟಿಯಿಂದ ಅಲ್ಲಿನ ಕಾನೂನುಗಳು ಎಲ್ಲ ಪ್ರಜೆಗಳಿಗೆ ಸಮಾನವಾಗಿರಬೇಕಾಗುತ್ತದೆ. ಇದು ದೇಶದ ಆಂತರಿಕ ವಿಷಯವಾಯಿತು. ಬೇರೆ ದೇಶಗಳ ಭದ್ರತೆ, ಆರ್ಥಿಕ ಸುರಕ್ಷತೆಗೆ ಅಪಾಯ ತರುವ ಕಾನೂನುಗಳನ್ನು ಈಗ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಅಂಥ ಕಾನೂನುಗಳನ್ನು ಯಾವ ಪ್ರಜಾಪ್ರಭುತ್ವವಾದಿ ಅಂತರ ರಾಷ್ಟ್ರೀಯ ವೇದಿಕೆಯೂ ಒಪ್ಪುವುದಿಲ್ಲ. 

ನಮ್ಮ ದೇಶದ ಕೊಲೆಗಡುಕನಿಗೆ ಆಶ್ರಯ ಕೊಡುವುದು ಎಷ್ಟು ದೊಡ್ಡ ಅಪರಾಧವೋ ಹಾಗೆಯೇ ನಮ್ಮ ದೇಶದ ಭ್ರಷ್ಟರ ಕಪ್ಪು ಹಣಕ್ಕೆ ಆಶ್ರಯ ಕೊಡುವುದೂ ಅಷ್ಟೇ ದೊಡ್ಡ ಅಪರಾಧ. ಮುಂದುವರಿದ ದೇಶಗಳ ಪಟ್ಟಿಯಲ್ಲಿರುವ ಸ್ವಿಟ್ಜರ್ಲೆಂಡ್‌ಗೆ ಈ ಸತ್ಯ ಗೊತಿಲ್ಲವೆಂದೇನೂ ಇಲ್ಲ.  ಅಂತರ ರಾಷ್ಟ್ರೀಯ ವೇದಿಕೆಯಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಅಂಥ ನಿರ್ಣಯ ಅಂಗೀಕಾರವಾಗಿದೆ. ೨೦೦೯ರ ಏಪ್ರಿಲ್‌ನಲ್ಲಿ ಜಿ-೨೦ ದೇಶಗಳ ಪ್ರತಿನಿಧಿಗಳು ಕೈಕೈ ಹಿಡಿದು “Era of bank secrecy is over” ಎಂದು ಘೋಷಿಸಿದ್ದಾರೆ. ಈ ಸತ್ಯ ಗೊತ್ತಿದ್ದರೂ ಸ್ವಿಟ್ಜರ್ಲೆಂಡ್ ಜಾಣಮರೆವು ನಟಿಸುತ್ತಿದೆ.

ಮಿಲಿಟರಿ, ಭಯೋತ್ಪಾದನೆ, ಬಾಹ್ಯಾಕಾಶ, ಶಸ್ತ್ರಾಸ್ತ್ರ ಸರಬರಾಜು, ಆಳ ಕಡಲಿನಲ್ಲಿ ಸಂಶೋಧನೆ ಮುಂತಾದ ವಿಷಯಗಳಲ್ಲಿ ಶ್ರೀಮಂತ ರಾಷ್ಟ್ರಗಳು ಉದ್ಧಟತನದಿಂದ ನಡೆದುಕೊಳ್ಳುವ ಪರಿಪಾಠ ಹಳೆಯದೇನಲ್ಲ. ತಮಗೆ ಬೇಕಾದ ಕಾನೂನುಗಳನ್ನು ಸೃಷ್ಟಿಸಿಕೊಂಡು ಚೀನಾ ಮತ್ತು ಜಪಾನ್‌ಗಳು ದ್ವೀಪವೊಂದರ ಮಾಲೀಕತ್ವಕ್ಕೆ ಈಗಲೂ ಕಿತ್ತಾಡುತ್ತಿವೆ.

ಉಕ್ರೇನ್‌ನ ಭಾಗವಾದ ಕ್ರಿಮಿಯಾವನ್ನು ರಷ್ಯಾದ ಪುಟಿನ್ ಕಬಳಿಸಿದ್ದು ಹೀಗೆಯೇ. ಅಮೆರಿಕಾದ ಸಾಮ್ರಾಜ್ಯಷಾಹಿ ನೀತಿಯನ್ನು ವಿವರಿಸುವ ಅಗತ್ಯವೇ ಇಲ್ಲ. ಇಂಥ ಉಲ್ಲಂಘನೆಗಳು ಜಾಗತಿಕ ಶಾಂತಿಗೆ ಬಹಳ ಅಪಾಯಕಾರಿ. ಇಷ್ಟೇ ಅಥವಾ ಇದಕ್ಕಿಂತ ಅಪಾಯಕಾರಿಯಾದುದು ಆರ್ಥಿಕ ಭಯೋತ್ಪಾದನೆ. ಬಹುಕಾಲದಿಂದ ಈ ಆರ್ಥಿಕ ಭಯೋತ್ಪಾದನೆಯಲ್ಲಿ ತೊಡಗಿರುವ ಸ್ವಿಟ್ಜರ್ಲೆಂಡ್‌ನ ಧೋರಣೆ ಸರ್ವಥಾ ಖಂಡನೀಯ.

ಒಂದು ಕಾನೂನಿನ ವ್ಯಾಖ್ಯಾನ ಮತ್ತು ವಿವರಣೆ ಪರಸ್ಪರ ವಿರೋಧದ ಅರ್ಥವನ್ನು ಧ್ವನಿಸಿದಾಗ ಜಗಳ, ಜಿಜ್ಞಾಸೆ ಸಹಜ. ಇದಕ್ಕೆ ಇತ್ತೀಚಿನ ಉದಾಹರಣೆ ಅಮೆರಿಕಾದಲ್ಲಿದ್ದ ಭಾರತೀಯ ರಾಯಭಾರಿ ಕಛೇರಿಯ ಉನ್ನತ ಅಧಿಕಾರಿ ದೇವಯಾನಿ ಖೋಬ್ರಗಡೆಯ ಪ್ರಕರಣ. ಈ ಪ್ರಕರಣದಲ್ಲಿ ಸರಿ-ತಪ್ಪುಗಳ ನಿರ್ಣಯ ಬಹಳ ಕಷ್ಟ. ನಾವು ನಮ್ಮ ದೇಶದಲ್ಲಿ ನಡೆಸಿಕೊಳ್ಳುವುದೇ ಹೀಗೆ ಎನ್ನುತ್ತಾರೆ ಅವರು. ಪ್ರತಿ ಅಧಿಕಾರಿ ಮತ್ತು ಗಣ್ಯರನ್ನು ಕಾನೂನಿಗಿಂತ ಹೆಚ್ಚು ಭಾವನಾತ್ಮಕವಾಗಿ ಪರಿಗಣಿಸುವ ಭಾರತದ ನಿಲುವೇ ಬೇರೆ.

ಇವರು ನಮ್ಮ ಸೂಪರ್ ಸ್ಟಾರ್, ಮಾಜಿ ರಾಷ್ಟ್ರಪತಿ, ಸಚಿವರ ನೆಂಟ, ಮಾಜಿ ಮಂತ್ರಿಯ ಮಗ, ಪದ್ಮಭೂಷಣ ವಿಜೇತ ಆದ್ದರಿಂದ ಇವರಿಗೆ ವಿಮಾನ ನಿಲ್ದಾಣದಲ್ಲಿ ಹೆಚ್ಚು ಭದ್ರತಾ ತಪಾಸಣೆ ಮಾಡಬೇಡಿ.  ವಿಶೇಷ ರಿಯಾಯಿತಿಗಳನ್ನು ಕೊಡಿ ಎನ್ನುವುದು ನಮ್ಮವರ ನಿಲುವು. ಅದೆಲ್ಲಾ ನಿಮ್ಮ ದೇಶದಲ್ಲಿ. ನಮ್ಮಲ್ಲಿ ಎಲ್ಲರೂ ಒಂದೇ. ರಾಜಮನೆತನದವರೂ ಪಬ್ಲಿಕ್ ಮೆಟ್ರೋದಲ್ಲಿ ಓಡಾಡುತ್ತಾರೆ.

ಅಧ್ಯಕ್ಷನೂ ಕೂಡಾ ಲಾಂಡ್ರಿ ಮಾಡುತ್ತಾನೆ. ಮನೆಯಂಗಳ ಸ್ವಚ್ಛ ಮಾಡುತ್ತಾನೆ ಎನ್ನುವುದು ಅವರ ನಿಲುವು. ಔಪಚಾರಿಕತೆ, ಆತಿಥ್ಯ, ಸತ್ಕಾರ, ಮನುಷ್ಯ- ಮನುಷ್ಯನನ್ನು ನಡೆಸಿಕೊಳ್ಳುವ ರೀತಿ ಈ ವಿಷಯಗಳಲ್ಲಿ ಪ್ರತಿ ದೇಶವೂ ಭಿನ್ನವಾಗಿರಲು ಸಾಧ್ಯ. ಎಲ್ಲವನ್ನೂ ಕಾಗದದ ಮೇಲೆ ದಾಖಲಿಸಿ ಸ್ಪಷ್ಟಗೊಳಿಸಿಕೊಳ್ಳುವುದು ಕಷ್ಟ.

ಚಿದಂಬರಂ ಅವರು  ಸ್ವಿಟ್ಜರ್ಲೆಂಡ್ ಮೇಲೆ ಬುಸುಗುಟ್ಟಿ, ಎರಡು ಪೇಜಿನ ಕಾಗದವನ್ನೂ ಬರೆದಿದ್ದಾರೆ. ಇದಕ್ಕಾಗಿ ಅವರು ಅಭಿನಂದನಾರ್ಹರು. ಆದರೆ ಅವರಿಗೊಂದು ಚಿಕ್ಕ ಪ್ರಶ್ನೆ ಇದೆ. ಲೋಕಸಭಾ ಚುನಾವಣಾ ಪೂರ್ವದಲ್ಲೇ ಅವರಿಗೆ ಈ ಜ್ಞಾನೋದಯ ಉಂಟಾದದ್ದು ಏಕೆ? ಇದೊಂದು ಪ್ರಾಮಾಣಿಕ ಪ್ರಯತ್ನವೋ? ಅಥವಾ ಚುನಾವಣೆಯ ಸ್ಟಂಟುಗಳಲ್ಲೊಂದೋ? ಒಂದು ವೇಳೆ ಸ್ವಿಟ್ಜರ್ಲೆಂಡ್, ಭ್ರಷ್ಟರ ಹೆಸರು ಮತ್ತು ಹಣದ ಮಾಹಿತಿಯನ್ನು ಬಿಡುಗಡೆ ಮಾಡಿದರೆ, ಅದರಲ್ಲಿ ತಮ್ಮ ಸಹೋದ್ಯೋಗಿಗಳ ಹೆಸರೂ ಇದ್ದರೆ, ಮತ್ತೆ ಇದೇ ಸರ್ಕಾರ ಅಧಿಕಾರಕ್ಕೆ ಬಂದರೆ, ಅವರ ವಿರುದ್ಧ ನಿಜಕ್ಕೂ ಕ್ರಮ ಜರುಗಿಸುತ್ತೀರಾ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT