ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಒನ್ ಡೇ ಮ್ಯಾಚ್! ಏಕ್‌ದಂ ರಿಸಲ್ಟ್!

Last Updated 28 ಸೆಪ್ಟೆಂಬರ್ 2016, 12:06 IST
ಅಕ್ಷರ ಗಾತ್ರ

ಯಾರಿಗೂ ಸಿಗದ ‘ಟಾಪ್ ಸ್ಟೋರಿ’ಯೊಂದು ಪತ್ರಿಕೆಯೊಂದರ ವರದಿಗಾರ ಗೆಳೆಯನಿಗೆ ಸಿಕ್ಕಿತ್ತು: ಕಾವೇರಿ ಸಮಸ್ಯೆ ಕುರಿತ ವಿಧಾನಮಂಡಲದ ಅಧಿವೇಶನದ ನಂತರ ಭಾನುವಾರದ ರಜಾ ದಿನ ಮೂರು ರಾಜಕೀಯ ಪಕ್ಷಗಳ ಮೂವರು ರಾಜಕೀಯ ನಾಯಕರು ಬ್ರೇಕ್ ಫಾಸ್ಟ್ ಮೀಟಿಂಗಿಗೆ ಸೇರಿದ್ದರು.

ಕಳೆದ ಶುಕ್ರವಾರ ‘ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಲ್ಲಿ ಸಂಗ್ರಹವಿರುವ ನೀರನ್ನು ಕುಡಿಯುವುದಕ್ಕೆ ವಿನಾ ಬೇರೆ ಉದ್ದೇಶಗಳಿಗೆ ಪೂರೈಸಬಾರದು’ ಎಂಬ ವಿಧಾನಮಂಡಲದ ನಿರ್ಣಯ ಕನ್ನಡಿಗರಿಗೆ ಸಂತಸ ತಂದಿದೆಯೆಂಬುದು ಮೂವರ ಅನುಭವಕ್ಕೂ ಬರತೊಡಗಿತ್ತು. ಈ ಎರಡೂ ದಿನ ತಾವು ಹೋದ ಕಡೆಯೆಲ್ಲ ತಮ್ಮನ್ನು ಜನರು ಮೆಚ್ಚಿದ್ದು, ದಿನಾ ತಮ್ಮನ್ನು ಬೈಯುವ ಚಾನಲ್ಲುಗಳು, ಪತ್ರಿಕೆಗಳು ತಮ್ಮೆಲ್ಲರನ್ನೂ ಮನಸಾರೆ ಹೊಗಳಿದ್ದು… ಇವೆಲ್ಲ ಆ ಮೂವರಿಗೂ ಪವಾಡದಂತೆ ಕಂಡಿದ್ದವು. ಈ ಅಧಿವೇಶನದ ಮಾದರಿಯನ್ನು ಇನ್ನಷ್ಟು ಮುಂದುವರಿಸಬೇಕು;  ಕೆಲವು ಸಮಸ್ಯೆಗಳ ಬಗ್ಗೆಯಾದರೂ ಹೀಗೆ ಒಂದೇ ದನಿಯಲ್ಲಿ ಮಾತಾಡಬೇಕೆಂದು ಮೂವರಿಗೂ ಅನ್ನಿಸತೊಡಗಿತ್ತು. 

‘ನಾನೇ ಮೊದಲು ಹೇಳಿಬಿಡ್ತೀನಿ- ಕೋಮುವಾದಿಗಳು ಯಾವುದೇ ಧರ್ಮದವರಾಗಿರಲಿ, ಮಟ್ಟ ಹಾಕಿ; ಅವರು ಯಾರನ್ನೂ ನೆಮ್ಮದಿಯಾಗಿರಲು ಬಿಡಲ್ಲ’ ಎಂದು ಶುರು ಮಾಡಿದ ಶೆಟ್ಟರ್, ‘ಈ ಬಗ್ಗೆ ನೀವು ಏನಾದರೂ ಮಾಡಿ, ನನ್ನ ಟೋಟಲ್  ಸಪೋರ್ಟ್ ಇದೆ’ ಎಂದವರೇ, ಮತ್ತೆ ಮುಂದುವರಿಸಿದರು: ‘ಒಂದು ವಿಷಯ ಹೇಳಲ? ನನಗೆ ಸಿಕ್ಕಿದ್ದು ಕೆಲವೇ ತಿಂಗಳು.  ಆ ಅವಧಿಯಲ್ಲಿ ಮುಸಲ್ಮಾನರಿಗೆ ವಿಶೇಷವಾಗಿ ಏನೂ ಮಾಡೋಕಾಗಲಿಲ್ಲ. ನೀವು ಹೇಗಾದರೂ ಮಾಡಿ ಯುಪಿಎ ಸರ್ಕಾರದ ಸಾಚಾರ್ ವರದಿಯ  ಕೆಲವು ಅಂಶಗಳನ್ನು ಕರ್ನಾಟಕದಲ್ಲಾದರೂ ಜಾರಿಗೆ ತನ್ನಿ’.

‘ವಂಡರ್‌ಫುಲ್ ಸಲಹೆ! ಈ ಸಲದ ಬಜೆಟ್‌ನಲ್ಲಿ ಸಾಚಾರ್ ವರದಿಯ ಕೆಲ ರೆಕಮೆಂಡೇಷನ್ಸ್ ಸೇರಿಸೋಣ. ಮುಂದಿನ ವಾರ ನಿಮ್ಮ ಮನೆಗೆ ಬರ್ತೀನಿ, ಮಾತಾಡೋಣ. ಹಾಂ! ಕಳೆದ ಮೂರು ಅಧಿವೇಶನದಲ್ಲಿ ನೀವು ಎತ್ತಿರುವ ಅನೇಕ ಪ್ರಶ್ನೆಗಳನ್ನು ತರಿಸಿ, ಹೋದ ವಾರ ಕೇರ್‌ಫುಲ್ಲಾಗಿ ಓದಿದೆ ಕಣ್ರೀ. ಅಲ್ಲಿ ಕೆಲವು ಬಹಳ ಇಂಪಾರ್ಟೆಂಟ್ ಪ್ರಶ್ನೆಗಳಿವೆ. ನಾನೇ ಅಲ್ಲ, ಯಾರೇ ಸಿ.ಎಂ. ಆದರೂ ಅವನ್ನು ಕನ್ಸಿಡರ್ ಮಾಡಲೇಬೇಕು, ಥ್ಯಾಂಕ್ಯೂ?’ ಎಂದರು ಸಿ.ಎಂ.
ಕುಮಾರಸ್ವಾಮಿ ‘ಕರೆಕ್ಟ್! ರಾಜಕೀಯ ಯಾವಾಗಲೂ ಇದ್ದದ್ದೇ. ಅವನ್ನೆಲ್ಲ ಬಿಟ್ಟು ಕೆಲವು ಪ್ರಾಬ್ಲಂಗಳನ್ನ ಚರ್ಚೆ ಮಾಡಬೇಕಾಗುತ್ತೆ. ರಾಜಕಾಲುವೆ ಮೇಲೆ ಮನೆ ಕಟ್ಟಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತಗೊಳ್ಳಿ. ಆದರೆ ಅಲ್ಲಿ ನೆಲೆ ಕಳೆದುಕೊಂಡ ಬಡವರಿಗೆ ಬೇಗ ಒಂದು ಹೊಸ ಬಡಾವಣೆ ಮಾಡಿ ನೆಲೆ ಮಾಡಿಕೊಡಬೇಕು, ಬ್ರದರ್’.

‘ಶೂರ್! ಇದನ್ನೂ ಮುಂದಿನ ಅಧಿವೇಶನದಲ್ಲಿ ಒಂದು ಸಾಲಿನ ನಿರ್ಣಯದಲ್ಲೇ ಮುಗಿಸಿಬಿಡೋಣ! ಒನ್ ಡೇ ಮ್ಯಾಚ್! ಕ್ವಿಕ್ ರಿಸಲ್ಟ್!’ ಎಂದ ಸಿ.ಎಂ, ‘ಆ ಡಿನೋಟಿಫಿಕೇಷನ್…’ ಎಂದು ರಾಗ ಎಳೆದು ನಿಲ್ಲಿಸಿದರು.

‘ಇನ್ನು ಮುಂದೆ ಡಿನೋಟಿಫಿಕೇಷನ್ ತಂಟೆಗೆ ಯಾವ ಮುಖ್ಯಮಂತ್ರಿಯೂ ಹೋಗಬಾರದೂಂತ ರೂಲ್ ಮಾಡಿಬಿಡೋಣ. ಅದೇ ಪರಿಹಾರ’ ಎಂದ ಶೆಟ್ಟರ್, ‘ಗಣಿಗಾರಿಕೆ ಬಗೆಗೂ ಅಷ್ಟೇ- ಎಲ್ಲ ತಜ್ಞರ ಜೊತೆ ಚರ್ಚಿಸಿ ಒಂದು ಪಕ್ಕಾ ಪಾಲಿಸಿ ಮಾಡಿಬಿಡಬೇಕು’ ಎಂದರು. ‘ಅದನ್ನೇ ಹೇಳಬೇಕೂಂತಿದ್ದೆ. ಇನ್ನು ಮುಂದೆ ಈ ಖಾಸಗಿ ಗಣಿಗಾರಿಕೆ ಕರ್ನಾಟಕದ ಮಟ್ಟಿಗಂತೂ ಮುಗಿದ ಅಧ್ಯಾಯ ಅಂತ ಘೋಷಿಸಿಬಿಡೋಣ’ ಎಂದರು ಕುಮಾರಸ್ವಾಮಿ. 

‘ಇನ್ನು ಮುಂದೆಯಾದರೂ ನೀರು, ವಿದ್ಯುತ್ ಎರಡನ್ನೂ ಸರಿಯಾಗಿ ಮ್ಯಾನೇಜ್ ಮಾಡದಿದ್ದರೆ ಕರ್ನಾಟಕಕ್ಕೆ ದೊಡ್ಡ ಸಂಕಷ್ಟ ಕಾದಿದೆ. ಈ ಬಗ್ಗೆ ನಾವು ಮೂರೂ ಪಕ್ಷಗಳ ಲೀಡರುಗಳು ರಾಜ್ಯಾದ್ಯಂತ ಟೂರ್ ಮಾಡಿ ಜನರಿಗೆ ಅಪೀಲು ಮಾಡಿಕೊಳ್ಳಲೇಬೇಕು. ಬೇಕಿದ್ರೆ ದೇವೇಗೌಡರ ಲೀಡರ್‌ಶಿಪ್ಪಿನಲ್ಲೇ ಈ ಅಪೀಲು ಮಾಡಿಕೊಳ್ಳೋಣ’ ಎಂದ ಸಿ.ಎಂ., ‘ಹಂಗೇ ಆ ಮೂಢನಂಬಿಕೆ ವಿರುದ್ಧದ ಕಾನೂನೂ…’ ಎಂದು ರಾಗ ಎಳೆದರು.

‘ಅಯ್ಯೋ, ಅದರಾಗೇನಿದೆ ತಗೋರೀ! ನಮ್ಮ ಬಸವಣ್ಣಾರು ಹೇಳಿದ್ದೇ ತಾನೇ ಅದೂನೂ! ಮಾಡೋಣು ತಗೋರೀ’ ಎಂದ ಶೆಟ್ಟರ್, ‘ಹಂಗಾ ಆ ಹಾದಿಬೀದೀಲಿ ದನಾ, ಕರಾ ಹಿಡಿದು ರಂಪಾ ಮಾಡೋರಿಗೆ ‘ಇನ್ನು ಮುಂದ ಬ್ಯಾರೇ ಉದ್ಯೋಗ ಹುಡುಕ್ಕೋರೀ’ ಅಂತಾನೂ ಹೇಳಬೇಕ್ರೀ!’ ಎಂದು ನಕ್ಕರು.

‘ಒಂದು ಸಣ್ಣ ಡಿಸಿಷನ್ ತಗೊಳೋಕೆ ನೀವು ನೂರಾರು ದಿನ ಮೀನ ಮೇಷ ಎಣಿಸಿದರೆ ಯಾವ ಕೆಲಸಾನೂ ಆಗಲ್ಲ ಬ್ರದರ್’ ಎಂದು ಕುಮಾರಸ್ವಾಮಿ ನಗುತ್ತಾ ಸಿ.ಎಂ. ಕಡೆ ನೋಡಿದರು. ‘ನೋಡ್ತಾ ಇರಿ. ಎಲ್ಲರ ಹತ್ರ ಕ್ವಿಕ್ಕಾಗಿ ಚರ್ಚೆ ಮಾಡಿ, ತಕ್ಷಣ ಡಿಸಿಷನ್ ತಗೊಂತೀನಿ…’ ಎಂದರು ಸಿ.ಎಂ.

ವರದಿಗಾರ ಗೆಳೆಯನ ವರದಿ ಹೀಗೇ ಮುಂದುವರಿದಿತ್ತು…  ಈ ಸಂಭಾಷಣೆ ಓದುತ್ತಾ ನಗುತ್ತಿದ್ದ ಆ ಸಂಪಾದಕರು ಒಂದು ಘಟ್ಟದಲ್ಲಿ ರೇಗಿಬಿಟ್ಟರು: ‘ಈ ಥರ ಕಾಲ್ಪನಿಕ ಸ್ಟೋರಿ ಬರಕೊಂಡು ಬಂದರೆ ನಿನ್ನ ಕೆಲಸದಿಂದ ಓಡಿಸಿಬಿಡ್ತೀನಿ!’

ವರದಿಗಾರ ಮುಗ್ಧವಾಗಿ ಹೇಳಿದ: ‘ಹಿಂದೆ ಹೆಗಡೆಯವರ ಕಾಲದಲ್ಲಿ ಲಂಕೇಶ್ ಮೇಷ್ಟ್ರು ಇಂಥದೊಂದು ಕಾಲ್ಪನಿಕ ಸಂಭಾಷಣೆ ಬರೆದಾಗ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಓದಿ ನಕ್ಕು, ಎಚ್ಚರವಾದರಂತಲ್ಲಾ ಸಾರ್! ಅದೇ ಥರ ಒಂದು ಕಚಗುಳಿ ರಿಪೋರ್ಟ್ ಮಾಡೋಣ ಅಂತ…’ 

-ಮೇಲ್ಕಂಡ ದೃಶ್ಯದಲ್ಲಿರುವ ಸಂಭಾಷಣೆಗಳು ಈ ಅಂಕಣಕಾರನ ಹಗಲುಗನಸಿನ ಫಲ ಎಂಬುದು ಜಾಣ ಓದುಗರಿಗೆ ಇಷ್ಟು ಹೊತ್ತಿಗಾಗಲೇ ಹೊಳೆದಿರುತ್ತದೆ. ಆದರೂ ಈಚಿನ ವರ್ಷಗಳಲ್ಲಿ ವಿಧಾನಸಭೆಯ ಭಾಷಣಗಳ ಮಟ್ಟ ನೋಡಿ ಕಂಗೆಟ್ಟು ಹೋಗಿದ್ದವರಿಗೆ ಮೊನ್ನಿನ ವಿಧಾನಸಭೆಯಲ್ಲಿ ಕೆಲವು ನಾಯಕರು ಮಾಡಿಕೊಂಡು ಬಂದಿದ್ದ ಸಿದ್ಧತೆ, ಶ್ರಮ, ಒಗ್ಗಟ್ಟು ನೋಡಿ ಇಂಥದೊಂದು ಕನಸು ಸಾಧ್ಯವಿದೆ ಎನ್ನಿಸತೊಡಗಿತ್ತು; ಶಾಸನಸಭೆಗಳ ಬಗ್ಗೆ ಒಂದಿಷ್ಟಾದರೂ ಭರವಸೆ ಮೂಡತೊಡಗಿತ್ತು.

ಮೈ ಬಗ್ಗಿಸಿ ಹೋಂವರ್ಕ್ ಮಾಡಿಕೊಂಡು ಬಂದರೆ ಸಮರ್ಥ ಸಂಸದೀಯ ಪಟುಗಳಾಗುವ ಶಕ್ತಿ ನಮ್ಮಲ್ಲಿ ಅನೇಕರಿಗೆ ಇದೆ ಎಂಬುದು ಖಾತ್ರಿಯಾಗತೊಡಗಿತ್ತು. ಅದರಲ್ಲೂ, ಸರ್ವಪಕ್ಷ ಸಭೆ ಬಹಿಷ್ಕರಿಸಿ ಗೊಂದಲ ಮಾಡಿಕೊಂಡಿದ್ದ ಬಿಜೆಪಿಯೂ ಸೇರಿದಂತೆ ಎಲ್ಲ ಪಕ್ಷಗಳೂ ಶುಕ್ರವಾರದ ಅಧಿವೇಶನಕ್ಕೆ ಹಾಜರಾಗಿ ಒಕ್ಕೊರಲಿನಿಂದ ಈ ನಿರ್ಣಯ ಅನುಮೋದಿಸಿದ್ದು ಕಂಡು ಕರ್ನಾಟಕದ ಎಲ್ಲ ಸಮಸ್ಯೆಗಳ ಬಗೆಗೂ ಶಾಸನಸಭೆ ಈ ಬಗೆಯ ಕಾಳಜಿ ತೋರಬಹುದಲ್ಲವೆ ಎಂಬ ನಿರೀಕ್ಷೆ ಜನರಲ್ಲಿ ಮೂಡತೊಡಗಿದ್ದರೆ ಅಚ್ಚರಿಯಲ್ಲ. ಜನರ ಈ ಹೊಸ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವುದು ನಮ್ಮ ರಾಜಕಾರಣಿಗಳಿಗೆ ಅಷ್ಟು ಕಷ್ಟವಾಗಲಿಕ್ಕಿಲ್ಲ; ಸ್ವಂತದ ಕಷ್ಟಗಳು ಮನುಷ್ಯನನ್ನು ಮಾಗಿಸಿದಂತೆ, ನಾಡಿನ ಕಷ್ಟಗಳು ಮನಸ್ಸಿನ ಆಳಕ್ಕಿಳಿದಾಗ ರಾಜಕಾರಣಿಗಳೂ ಮಾಗಬಲ್ಲರಲ್ಲವೇ?

ಎಲ್ಲದರ ಬಗೆಗೂ ಸ್ಟ್ರ್ಯಾಟಿಜಿಯಿಂದ ಮಾತಾಡುವ, ತಮ್ಮ ಲಾಭವನ್ನಷ್ಟೇ ಗಮನದಲ್ಲಿಟ್ಟುಕೊಂಡು ಪ್ರತಿ ಹೆಜ್ಜೆಯನ್ನೂ ಇಡುವ ವ್ಯಕ್ತಿಗಳು ಉದ್ಯಮ, ಸಾಹಿತ್ಯಲೋಕ, ವಿಶ್ವವಿದ್ಯಾಲಯ, ರಿಯಲ್ ಎಸ್ಟೇಟ್ ಮುಂತಾದ ಎಲ್ಲ ರಂಗಗಳಲ್ಲೂ ಇರುವಂತೆ ರಾಜಕೀಯದಲ್ಲೂ ಇರುತ್ತಾರೆ. ಇಂಥವರ ಸಂಖ್ಯೆ ರಾಜಕೀಯದಲ್ಲಿ ಹೆಚ್ಚು ಇರುವಂತೆ ಕಾಣುವುದರಿಂದ ಜನ ರಾಜಕಾರಣಿಗಳ ಬಗ್ಗೆ ಅನುಮಾನ ಬೆಳೆಸಿಕೊಳ್ಳುತ್ತಾರೆ. ಆದರೆ ಜನರಿಗೆ ಒಂದಲ್ಲ ಒಂದು ಹಂತದಲ್ಲಿ ಜವಾಬು ನೀಡಲೇಬೇಕಾದ ರಾಜಕೀಯ ನಾಯಕರು ಇನ್ನಿತರ ವಲಯಗಳ ವ್ಯಕ್ತಿಗಳಂತೆ ಸದಾ ‘ಸ್ಟ್ರ್ಯಾಟಿಜಿಕ್’ ಆಗಿರಲು ಸಾಧ್ಯವಿಲ್ಲ. ಅವರಿಗೆ ಒಳ್ಳೆಯ ಮುತ್ಸದ್ದಿಯಾಗಬೇಕೆಂಬ ಹಂಬಲವೂ ಇರುತ್ತದೆ.

ಜಿ.ಕೆ.ಗೋವಿಂದರಾವ್ ತಮ್ಮ ಲೇಖನವೊಂದರಲ್ಲಿ ರಾಜಕಾರಣಿ ಹಾಗೂ ಮುತ್ಸದ್ದಿಗಳ ನಡುವಣ ವ್ಯತ್ಯಾಸವನ್ನು  ಗುರುತಿಸುತ್ತಾ, ‘ರಾಜಕಾರಣಿಗೆ ಹಲವು ನಾಲಗೆಗಳು; ಮುತ್ಸದ್ದಿಗೆ ಒಂದೇ ನಾಲಗೆ’ ಎನ್ನುತ್ತಾರೆ. ರಾಜಕಾರಣಿಯೊಬ್ಬ (ಪಾಲಿಟೀಷಿಯನ್) ಮುತ್ಸದ್ದಿ (ಸ್ಟೇಟ್ಸ್‌ಮನ್) ಆಗಬಹುದೆಂಬ ನಂಬಿಕೆಯೇ ಜನರಲ್ಲಿ ಕುಸಿದುಹೋಗಿರುವ ಈ ಕಾಲದಲ್ಲೂ ‘ಮುತ್ಸದ್ದಿ’ಯಾಗಬೇಕು; ಒಳ್ಳೆಯ ಕೆಲಸ ಮಾಡಿ ಹೆಸರು ಗಳಿಸಬೇಕು ಎಂಬ ಆಸೆ ರಾಜಕಾರಣಿಯಲ್ಲಿ ಬತ್ತಿರುವುದಿಲ್ಲ. ಎಂಥ ಕಳ್ಳನಲ್ಲೂ ನೆಮ್ಮದಿಯಾಗಿ ನಿದ್ರಿಸುವ ಬಯಕೆ ಮಾಯವಾಗಿರುವುದಿಲ್ಲ; ಆ ಬಯಕೆಯೇ ಅವನನ್ನು ಕಳ್ಳತನ ಬಿಡುವಂತೆ ಒಳಗೊಳಗೇ ಪ್ರೇರೇಪಿಸುತ್ತಿರಬಲ್ಲದು.

ಹಾಗೆಯೇ ಮುತ್ಸದ್ದಿಯಾಗುವ ಬಯಕೆ ಕೆಟ್ಟ ರಾಜಕಾರಣಿಯನ್ನೂ ಸರಿದಾರಿಗೆ ತರಬಲ್ಲದು. ಸ್ವಂತದ ಲಾಭ, ನಷ್ಟದ ಹಂಗು ತೊರೆದು, ಅಧಿಕಾರದ ದುರಾಸೆ ಮೀರಿ ನಾಡಿನ ಹಿತ ಕುರಿತು ಯೋಚಿಸುವ ಗುಣ ಮುತ್ಸದ್ದಿಗಳಲ್ಲಿರುತ್ತದೆಯೇ ಹೊರತು ರಾಜಕಾರಣಿಯಲ್ಲಲ್ಲ. ಚಂದ್ರಶೇಖರ್, ವಿ.ಪಿ.ಸಿಂಗ್, ದೇವೇಗೌಡ ಮೊದಲಾದವರು ಪ್ರಧಾನಿಗಳಾದಾಗ ದೇಶದ ಕೆಲವು ಹಳೆಯ ಸಮಸ್ಯೆಗಳನ್ನು ಬಗೆಹರಿಸಲು ಮುಕ್ತ ಮನಸ್ಸಿನಿಂದ ಹೊರಟು ನಿಜಕ್ಕೂ ಮುತ್ಸದ್ದಿಗಳಾಗಲೆತ್ನಿಸಿದ್ದುದು ನೆನಪಾಗುತ್ತದೆ.

ಮೊನ್ನೆ ಕಾವೇರಿ ಗಲಾಟೆಯಲ್ಲಿ ಪುಂಡರು ನಮ್ಮ ರಾಜ್ಯಕ್ಕೇ ಬೆಂಕಿ ಹಚ್ಚುತ್ತಿದ್ದಾಗ, ನಮ್ಮ ರಾಜಕೀಯ ನಾಯಕರೆಲ್ಲರೂ ಒಂದು ದಿನದ ಮಟ್ಟಿಗಾದರೂ ಮುತ್ಸದ್ದಿಗಳಾಗಿ ವರ್ತಿಸಿದ್ದರೆ ಅಷ್ಟೊಂದು ನಷ್ಟವಾಗುತ್ತಿರಲಿಲ್ಲ. ಇನ್ನಿತರ ಪಕ್ಷಗಳ ನಾಯಕರಿರಲಿ, ಕಾಂಗ್ರೆಸ್ ನಾಯಕರೇ ಜನರಿಗೆ ಅಪೀಲು ಮಾಡಿಕೊಳ್ಳಲಿಲ್ಲ. ಕೆಟ್ಟ ಹೆಸರು ಬರುವುದಿದ್ದರೆ ಮುಖ್ಯಮಂತ್ರಿಗೆ, ಗೃಹಮಂತ್ರಿಗೆ ಬರಲಿ ಎಂದು ಅವರೆಲ್ಲ ಕಾಯುತ್ತಿದ್ದಂತಿತ್ತು. ಅವತ್ತು ಪಕ್ಷಭೇದ ಮರೆತು ಎಲ್ಲ ಪಕ್ಷಗಳೂ ಒಟ್ಟಾಗಿ ಜನರಿಗೆ ಅಪೀಲು ಮಾಡಿಕೊಂಡಿದ್ದರೆ, ಪೊಲೀಸರಲ್ಲಿ ಸ್ಥೈರ್ಯ ತುಂಬಿದ್ದರೆ, ಅಷ್ಟೊಂದು ಹಾನಿಯಾಗುತ್ತಿರಲಿಲ್ಲ.

ಆಡಳಿತ ಪಕ್ಷವಾದ್ದರಿಂದ ನಾವು ಯಾರ ಮಾತನ್ನೂ ಕೇಳುವಂತಿಲ್ಲ ಎಂಬ ಠೇಂಕಾರ; ವಿರೋಧಪಕ್ಷವಾದ್ದರಿಂದ ನಾವು ಎಲ್ಲವನ್ನೂ ವಿರೋಧಿಸಬೇಕೆಂಬ ಮೊಂಡುತನ- ಇವೆರಡೂ ಇವತ್ತು ಗುಜರಿ ಮಾಡೆಲ್ ರಾಜಕೀಯಗಳಾಗಿವೆ. ಮೊನ್ನೆ ಶುಕ್ರವಾರ ವಿಧಾನಸಭೆಯಲ್ಲಿ ಏನಾಗುತ್ತದೆ ಎಂದು ನೋಡುತ್ತಿದ್ದ ಜನರಲ್ಲಿ ಅವತ್ತು ಶಾಸಕರ ನಡವಳಿಕೆಯ ಬಗ್ಗೆ ಕೊಂಚವಾದರೂ ನಂಬಿಕೆ ಮರಳಿದ್ದನ್ನು ಮರೆಯಬಾರದು. ಈ ಅಂಕಣ ಅಚ್ಚಿಗೆ ಹೋಗುವ ಗಳಿಗೆಯಲ್ಲಿ  ಮತ್ತೆ ನೀರು ಬಿಡುವಂತೆ ಸುಪ್ರೀಂ ಕೋರ್ಟಿನ ಆದೇಶ ಬಂದಿದೆ. ಮೊನ್ನಿನ ಅಧಿವೇಶನದ  ಏಕದನಿ ಹಾಗೂ ಗಂಭೀರ ಚಿಂತನೆಗೆ ಮತ್ತೆ ಕರ್ನಾಟಕ ಸಜ್ಜಾಗಲೇಬೇಕಾದ ಕಾಲ ಬಂದಿದೆ.  

ಕೊನೆ ಟಿಪ್ಪಣಿ: ಹರಿವ ನೀರಿಗೆ ಯಾವ ನಿಯಮ?
ಮೇ ತಿಂಗಳಲ್ಲಿ ಕೇಂದ್ರ ಸರ್ಕಾರದ ‘Draft National Water Framework Bill 2016’ ಬಂದಿದೆ. ನೀರಿನ ನಿರ್ವಹಣೆ ಕುರಿತ ಈ ಕರಡಿನ ಪ್ರಸ್ತಾವಗಳು ಕೇಂದ್ರದ ಕಾನೂನಿನ ಕುಣಿಕೆಯಾಗಿ ರಾಜ್ಯದ ಕೊರಳು ಸುತ್ತಿಕೊಳ್ಳುವ ಮುನ್ನ ನಮ್ಮ ತಜ್ಞರು, ರಾಜಕಾರಣಿಗಳು ಈ ಕರಡನ್ನು ಆಳವಾಗಿ ಚರ್ಚಿಸಬೇಕು. ಜೊತೆಗೆ, ಕಾವೇರಿ ಸಮಸ್ಯೆಗೆ ಕಾಯಂ ಪರಿಹಾರಗಳನ್ನು ಹುಡುಕಲೆತ್ನಿಸಿರುವ ಚಿಂತಕರ ಮಾತುಗಳನ್ನೂ ಕೇಳಿಸಿಕೊಳ್ಳಬೇಕು. 

‘ರಾಜಕೀಯದ ಹುಳಗಳೆಲ್ಲ ಕೊಡಗು ಜಿಲ್ಲೆಯನ್ನು ನಾಶ ಮಾಡಿ, ಕಾವೇರಿ ನದಿಯ ಕಾರಂಜಿಗಳು, ತೊರೆಗಳು, ಜಲವಾಹಿನಿಗಳು ಬತ್ತಿ ಹೋಗಿ ಇನ್ನು ಕೇವಲ ಹತ್ತು  ವರ್ಷದಲ್ಲಿ ಕಾವೇರಿಯಿಂದ ಕರ್ನಾಟಕಕ್ಕೆ ಕುಡಿಯಲು ಕೂಡ ನೀರು ದೊರೆಯುವುದಿಲ್ಲ’ ಎಂದು ಲಂಕೇಶರು 1991ರಲ್ಲೇ ಹೇಳಿದ್ದರು.
ಪ್ರೊ.ಎಂ.ಡಿ. ನಂಜುಂಡಸ್ವಾಮಿ ‘ಕರ್ನಾಟಕ, ತಮಿಳುನಾಡಿನವರಿಬ್ಬರೂ ಕಾವೇರಿ ನೀರನ್ನು ವೈಜ್ಞಾನಿಕವಾಗಿ ಬಳಸುತ್ತಿಲ್ಲ; ತಮಿಳುನಾಡಿನಲ್ಲಿ ಹೆಚ್ಚು ನೀರು ಪೋಲಾಗುತ್ತಿದೆ’ ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ‘ಕೋರ್ಟುಗಳು, ನ್ಯಾಯಮಂಡಲಿಗಳು ಇದನ್ನು ಬಗೆಹರಿಸಲು ಸಾಧ್ಯವಿಲ್ಲ’ ಎಂದಿದ್ದ ಎಂಡಿಎನ್, ಎಫ್.ಜೆ. ಬರ್ಬರ್ ‘Rivers in International Law’ ಪುಸ್ತಕದಲ್ಲಿ ಜಲವಿವಾದಗಳು ನ್ಯಾಯಸಂಸ್ಥೆಗಳಿಂದ ಬಗೆಹರಿಯಲಾರವೆಂಬುದನ್ನು ಉದಾಹರಣೆಗಳ ಮೂಲಕ ತೋರಿಸಿರುವುದನ್ನು ಓದಿಹೇಳಿದ್ದರು.

ಈ ಥರದ ಮೊಕದ್ದಮೆಗಳಲ್ಲಿ ಅಮೆರಿಕದ ಶ್ರೇಷ್ಠ ನ್ಯಾಯಾಲಯ, ‘ಇಂಥ ಜಗಳಗಳಲ್ಲಿ ಪ್ರವೇಶಿಸುವ ಅಧಿಕಾರವ್ಯಾಪ್ತಿ ನಮಗೆ ಇದ್ದರೂ… ರಾಜ್ಯಗಳ ನಡುವಣ ಜಗಳಗಳನ್ನು ಪರಸ್ಪರ ಕೊಡುಕೊಳ್ಳುವ ಹಾಗೂ ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಬೇಕು’ ಎಂದು ಮತ್ತೆಮತ್ತೆ ಹೇಳಿರುವುದನ್ನೂ ಎಂಡಿಎನ್ ಉಲ್ಲೇಖಿಸಿದ್ದರು. ಇವತ್ತಿನ ಬಿಕ್ಕಟ್ಟಿನ ಗಳಿಗೆಯಲ್ಲಿ ಕಾವೇರಿ ಸಮಸ್ಯೆಯ ಆಳವಾದ ಜ್ಞಾನ, ಅದನ್ನು ಕೇಂದ್ರಕ್ಕೆ ಹಾಗೂ ಕೋರ್ಟಿಗೆ ಮನವರಿಕೆ ಮಾಡಿಕೊಡುವ ಮಾರ್ಗ ಎರಡೂ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT