ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ದಿನನಿತ್ಯದ ‘ತಾರತಮ್ಯ’ ರಗಳೆ ...

Last Updated 4 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ವಿಶ್ವ ಟ್ವೆಂಟಿ- 20 ಟೂರ್ನಿಯಲ್ಲಿ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿಯನ್ನು ‘ಟೂರ್ನಿ ಶ್ರೇಷ್ಠ’ ಎಂದು ಹೆಸರಿಸಲಾಗಿದೆ. ವಿಶ್ವ ಟ್ವೆಂಟಿ- 20 ಟೂರ್ನಿಯಲ್ಲಿ ಕೊಹ್ಲಿ ಒಟ್ಟು 273 ರನ್  ದಾಖಲಿಸುವ ಮೂಲಕ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿ ಅಭಿಮಾನಿಗಳ ಹೃದಯಗಳಲ್ಲಿ ಸ್ಥಾನ ಪಡೆದಿದ್ದಾರೆ. ಈ ಟೂರ್ನಿಯ ಸಂದರ್ಭದಲ್ಲಿ ಮತ್ತೊಂದು ವಿಷಯದಲ್ಲೂ ಕೊಹ್ಲಿ ದೊಡ್ಡ ಸುದ್ದಿ ಮಾಡಿದರು. ಹೆಣ್ಣುಮಕ್ಕಳ ವಿರುದ್ಧ ಮಾಮೂಲೆಂಬಂತೆ ಸಮಾಜದಲ್ಲಿ ವ್ಯಕ್ತಪಡಿಸಲಾಗುವ ಪೂರ್ವಗ್ರಹ ಭಾವನೆ ಹಾಗೂ ಭಾಷಾ ಬಳಕೆ  (ಸೆಕ್ಸಿಸಂ) ವಿರುದ್ಧ ವಿರಾಟ್ ಕೊಹ್ಲಿಯ ಕೆಲವೇ ಮಾತುಗಳು ಮೂಡಿಸಿದ ಸಂಚಲನ ಮುಖ್ಯವಾದದ್ದು.  

ಮಾಜಿ ಗರ್ಲ್ ಫ್ರೆಂಡ್ ಅನುಷ್ಕಾ ಶರ್ಮಾ ವಿರುದ್ಧ  ಟ್ವಿಟರ್‌ನಲ್ಲಿ ಹರಿದಾಡುತ್ತಿದ್ದ ಸೆಕ್ಸಿಸ್ಟ್ (ಲಿಂಗ ತಾರತಮ್ಯ ಧ್ವನಿಸುವಂತಹದ್ದು) ಮಾತುಗಳಿಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ನೀಡಿದ ಉತ್ತರ ಸಮಾಜಕ್ಕೆ ಸರಿಯಾದ  ಸಂದೇಶ ಸಾರುವಂತಹದ್ದಾಗಿತ್ತು ಎಂಬುದು ಹೆಗ್ಗಳಿಕೆ. ವಿಶ್ವ ಟ್ವೆಂಟಿ- 20  ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ, ಟೀಮ್ ಇಂಡಿಯಾವನ್ನು ಸೆಮಿ ಫೈನಲ್‌ಗೆ ತಲುಪಿಸಿದ್ದರು.  ಆ ಸಂದರ್ಭದಲ್ಲಿ  ಟ್ವಿಟರ್‌ನಲ್ಲಿ ‘ಕೊಹ್ಲಿಯನ್ನು ಮತ್ತೆ ನಮಗೆ ವಾಪಸ್ ನೀಡಿದ್ದಕೆ ಥ್ಯಾಂಕ್ಸ್’ ಎಂಬಂತಹ ಮಾತುಗಳನ್ನು ಹರಿಬಿಡಲಾಗಿತ್ತು.

ಇದಕ್ಕೂ ಮುಂಚೆ ಕಳೆದ ವರ್ಷ ಆಸ್ಟ್ರೇಲಿಯಾ ಹಾಗೂ  ಭಾರತದ ಮಧ್ಯೆ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ಸಿಡ್ನಿಯಲ್ಲಿ ನಡೆದಿದ್ದಾಗ ಅನುಷ್ಕಾ ಶರ್ಮಾ ವಿರುದ್ಧ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮಾತುಗಳು ಅವಮಾನಕರವಾದ ಆಯಾಮ ಪಡೆದುಕೊಂಡಿದ್ದವು. ತನ್ನ ಪ್ರಿಯಕರನಿಗೆ ಬೆಂಬಲ ನೀಡಲು ಕ್ರೀಡಾಂಗಣದಲ್ಲಿದ್ದ  ಈ ಬಾಲಿವುಡ್ ತಾರೆಯ ಬಗ್ಗೆ ನಿಂದನಾತ್ಮಕ ನುಡಿಗಳನ್ನೂ ಬಳಸಲಾಗಿತ್ತು. ವಿರಾಟ್ ಆಟದ ರೀತಿಗೆ ಅನುಷ್ಕಾಅವರನ್ನು  ಹೊಣೆಯಾಗಿಸಿ ದೂಷಿಸಲಾಗಿತ್ತು. ಈ ವರ್ಷ ಅನುಷ್ಕಾ ಶರ್ಮಾ ವಿರಾಟ್‌ಗೆ ಉತ್ತೇಜಿಸುತ್ತಾ ಕ್ರೀಡಾಂಗಣದಲ್ಲೇನೂ ಇರಲಿಲ್ಲ. ಹೀಗಾಗಿ ಈ ಬಾರಿ ವಿರಾಟ್ ಕೊಹ್ಲಿ ಚೆನ್ನಾಗಿಯೇ ಆಟ ಆಡಿದ್ದಾರೆ.

ಅನುಷ್ಕಾ ಆತನಿಂದ ಬೇರೆಯಾದದ್ದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಆಟದ ಮೇಲೆ ವಿರಾಟ್‌ಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು ಎಂಬಂತಹ ನುಡಿಧಾರೆಗಳನ್ನು ಹರಿಯಬಿಡಲಾಯಿತು. ಆದರೆ ತಮ್ಮ ಆಟದ  ಪ್ರದರ್ಶನ ಉತ್ತಮವಾಗಿರಲೀ  ಕಳಪೆಯಾಗಿರಲೀ ಅದಕ್ಕೆ ಅನುಷ್ಕಾ ಶರ್ಮಾಳನ್ನೇ ಹೊಣೆ ಮಾಡುವ ಮನಸ್ಥಿತಿಯನ್ನು ತೀವ್ರ ನುಡಿಗಳಲ್ಲಿ ವಿರಾಟ್ ಕೊಹ್ಲಿ ಟೀಕಿಸಿದ್ದು  ಮಾತ್ರ ಸರಿಯಾದದ್ದೇ ಆಗಿತ್ತು. ‘ಅನುಷ್ಕಾ ಶರ್ಮಾಳನ್ನು ಎಡೆಬಿಡದೆ ಟ್ರೋಲ್ ಮಾಡುತ್ತಿರುವ ನಿಮಗೆ ನಾಚಿಕೆಯಾಗಬೇಕು. ಸ್ವಲ್ಪವಾದರೂ ಸಹಾನುಭೂತಿ ಇರಲಿ. ಆಕೆ ನನಗೆ ಯಾವತ್ತೂ ಧನಾತ್ಮಕ ಸಹಕಾರವನ್ನೇ ನೀಡಿದ್ದಾಳೆ’ ಎಂದು ಕೊಹ್ಲಿ ಕಳೆದ ವಾರ ಟ್ವೀಟ್ ಮಾಡಿದ್ದರು.

ಹಾಗೆಯೇ ಇನ್ಸ್‌ಟ್ರಾಗ್ರಾಮ್‌ನಲ್ಲಿ ‘ಷೇಮ್’ (SHAME) ಎಂದು ಬರೆದಿರುವ ಫೋಟೊ ಹಾಕಿ ಕೊಹ್ಲಿ ಬರೆದಿರುವ ಮಾತುಗಳಂತೂ ಮಾರ್ಮಿಕವಾಗಿದ್ದು ಲಕ್ಷಾಂತರ ಜನ ಲೈಕ್ ಮಾಡಿದ್ದಾರೆ. ‘ಸುಮಾರು ದಿನಗಳಿಂದ ಎಲ್ಲಾ ನಕಾರಾತ್ಮಕ ಸಂಗತಿಗಳಿಗೆ ಅನುಷ್ಕಾ ಜೊತೆ ಕೊಂಡಿ ಹಾಕಿ ಆಕೆಯನ್ನು ಕಾಡುತ್ತಿರುವ ಜನರಿಗೆ ನಾಚಿಕೆಯಾಗಬೇಕು. ತಮ್ಮನ್ನು ತಾವು ವಿದ್ಯಾವಂತರೆಂದುಕೊಳ್ಳಲು ಅವರಿಗೆ ನಾಚಿಕೆಯಾಗಬೇಕು. ನಾನಾಡುವ ಆಟದ ಮೇಲೆ ಆಕೆಗೆ ಯಾವುದೇ ನಿಯಂತ್ರಣ ಇಲ್ಲದಿದ್ದರೂ ಆಕೆಯನ್ನು  ದೂಷಿಸಿ, ಪರಿಹಾಸ್ಯ ಮಾಡುವವರಿಗೆ ನಾಚಿಕೆಯಾಗಬೇಕು. ಆಕೆ ಸದಾ ನನ್ನನ್ನು ಹುರಿದುಂಬಿಸಿ ಸಕಾರಾತ್ಮಕತೆಯನ್ನೇ ನೀಡಿದ್ದಾಳೆ… ನಿಮ್ಮ ಸೋದರಿ, ನಿಮ್ಮ ಗರ್ಲ್ ಫ್ರೆಂಡ್ ಅಥವಾ ನಿಮ್ಮ ಪತ್ನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರಾದರೂ ನಿಂದಿಸಿದರೆ ನಿಮಗೆ ಏನನಿಸಬಹುದು ಎಂಬುದನ್ನು ಯೋಚಿಸಿ’.

ವಿರಾಟ್ ಕೊಹ್ಲಿಯವರ ಈ ಪೋಸ್ಟ್  ಸಮಾಜದಲ್ಲಿ ಅಂತರ್ಗತವಾಗಿಹೋಗಿರುವ ‘ಸೆಕ್ಸಿಸಂ’(ಲಿಂಗ ತಾರತಮ್ಯ) ಬಗ್ಗೆ ಜಾಗೃತಿ ಮೂಡಿಸುವಲ್ಲಿ ಜನರನ್ನು ಒಂದಿಷ್ಟಾದರೂ ಆಲೋಚನೆಗೆ ಹಚ್ಚುವುದೇ ಎಂಬುದು ನಿರೀಕ್ಷೆ. ಸಮಾಜದಲ್ಲಿ ಬೇರೂರಿರುವ ಮಹಿಳೆ ಕುರಿತಂತಹ  ಇಂತಹ ಸೆಕ್ಸಿಸ್ಟ್ ದೃಷ್ಟಿಕೋನ ಪದೇಪದೇ ಅನಾವರಣಗೊಳ್ಳುತ್ತಲೇ ಇರುತ್ತದೆ. ಕಳೆದ ವಾರ ‘ಪ್ರಜಾವಾಣಿ’ ಕಚೇರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಕಕ್ಷೆ ಮಂಜುಳಾ ಮಾನಸ ಭೇಟಿ ನೀಡಿದ್ದರು. ಮಹಿಳೆ ಕುರಿತಂತೆ ಆಡಳಿತ ವಲಯದಲ್ಲಿ ಜಡ್ಡುಗಟ್ಟಿರುವ ದೃಷ್ಟಿಕೋನಗಳ ಬದಲಾವಣೆಯೇ ದೊಡ್ಡ ಸವಾಲು ಎಂದು ಅವರು ಹೇಳುತ್ತಿದ್ದರು. ನಮ್ಮ ಶಾಸನಸಭೆಗಳಲ್ಲಿ ಈ ಕುರಿತಂತೆ ಬದಲಾವಣೆಯಾಗಲು ಇನ್ನೂ ಬಹಳಷ್ಟು ಕಾಲ ಕಾಯಬೇಕೇನೊ.

2011ರಲ್ಲಿ ವಿಮಲಾ ಗೌಡ ಅವರು ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದ ಸಂದರ್ಭವನ್ನು ನೆನಪಿಸಿಕೊಳ್ಳಬಹುದು. ಆಗ ಅವರನ್ನು ಅಭಿನಂದಿಸಿದಾಗ ಬಳಕೆಯಾದ ‘ಸೆಕ್ಸಿಸ್ಟ್’ ಭಾಷೆಯನ್ನು ಮಾಧ್ಯಮಗಳು ವರದಿ ಮಾಡಿದ್ದವು. ಆಭರಣ ಹಾಗೂ ಸೀರೆಗಳ ಬಗ್ಗೆ ವಿಮಲಾ ಜೊತೆ ನಡೆಸುತ್ತಿದ್ದ ದೀರ್ಘ ಚರ್ಚೆಗಳನ್ನು ಗಣೇಶ್ ಕಾರ್ಣಿಕ್ ನೆನಸಿಕೊಂಡಿದ್ದರು. ದಿನಾ ಕನಿಷ್ಠ 20 ನಿಮಿಷ ಸೀರೆ ಬಗ್ಗೆ ವಿಮಲಾ ಅವರು ಚರ್ಚೆ ಮಾಡುತ್ತಾರೆ. ತಾವೂ ಕೂಡ ಬಟ್ಟೆ ವ್ಯಾಪಾರಿಯಾದ್ದರಿಂದ ಅದು  ಆಸಕ್ತಿದಾಯಕವಾಗಿರುತ್ತಿತ್ತು ಎಂದು ಶಶಿಲ್‌ ನಮೋಶಿ ನೆನಪಿಸಿಕೊಂಡಿದ್ದರು. ಹಾಗೆಯೇ ಅವರ ದೇಹ ತೂಕದ ಬಗ್ಗೆ  ತಮಾಷೆ ಮಾಡುವ ಮಾತುಗಳೂ ಬಂದಿದ್ದವು. ಆದರೆ ಈ ಎಲ್ಲಾ ಮಾತುಗಳನ್ನು ವಿಮಲಾ ಅವರು ನಗೆಯಲ್ಲಿ ತೇಲಿಸಿಬಿಟ್ಟಿದ್ದರು ಎಂಬುದು ಬೇರೆ ಮಾತು. 

ರಾಘವೇಶ್ವರ ಶ್ರೀಗಳ ವಿರುದ್ಧ ಪ್ರೇಮಲತಾ ಶಾಸ್ತ್ರಿ ಅವರು ಮಾಡಿದ್ದ ಅತ್ಯಾಚಾರ  ಆರೋಪ ಖುಲಾಸೆಗೊಳಿಸುವ ಸಂದರ್ಭದಲ್ಲಿ ಬೆಂಗಳೂರಿನ 54ನೇ ಎಸಿಎಂಎಂ ಸೆಷನ್ಸ್ ನ್ಯಾಯಾಧೀಶರು ನೀಡಿರುವ ಆದೇಶದಲ್ಲಿ ಈ ಮಾತುಗಳಿವೆ: ಪ್ರೇಮಲತಾ ಒಬ್ಬ ಹೈಟೆಕ್ ಹೆಣ್ಣು. ಜೀನ್ಸ್ ಪ್ಯಾಂಟ್, ಶರ್ಟ್ ತೊಟ್ಟು ದೇಶ ವಿದೇಶಗಳಲ್ಲಿ ಸುತ್ತಾಡಿಕೊಂಡು ಮಧುರವಾಗಿ ಭಕ್ತಿಗೀತೆ ಹಾಡಿಕೊಂಡು ಸಾರ್ವಜನಿಕ ಸಮಾರಂಭ, ಟಿ.ವಿ. ಸೀರಿಯಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಾ ಪ್ರಸಿದ್ಧಿ ಪಡೆದ ಗಾಯಕಿ. (ಒತ್ತು ನನ್ನದು). ಹೆಣ್ಣಿನ ವೈಯಕ್ತಿಕ ವೇಷಭೂಷಣಗಳ ಕುರಿತಾದ ಮಾತುಗಳಲ್ಲಿ ಬಿಂಬಿತವಾಗುವ ಭಾವನೆ ಎಂತಹದ್ದು ಎಂಬುದನ್ನು ಪುನರ್ ವ್ಯಾಖ್ಯಾನಿಸುವ ಅಗತ್ಯವಿಲ್ಲ. ಪುರುಷರು ಹಾಗೂ ಮಹಿಳೆಯರ ಯೋಗ್ಯತೆಯನ್ನು ಸಮಾಜ ವಿಭಿನ್ನವಾಗಿ ಅಳೆಯುವುದು ಇದ್ದೇ ಇದೆ.  ಸಮಾಜದ ದ್ವಿಮುಖ ನೀತಿಗೆ ಇದು ಸ್ಪಷ್ಟ ಉದಾಹರಣೆ. ಅದರಲ್ಲೂ ನೈತಿಕತೆಯ ವಿಚಾರದಲ್ಲಿ ಪುರುಷ ಹಾಗೂ ಮಹಿಳೆಗೆ ಸಂಬಂಧಿಸಿದಂತೆ ಸಮಾಜದ ಪ್ರತಿಕ್ರಿಯೆಯಲ್ಲಿ ಭಾರಿ ವ್ಯತ್ಯಾಸ ಇರುತ್ತದೆ.

ಮಹಿಳೆಯ ಯೋಗ್ಯತೆ ನಿರ್ಣಯಿಸಿ ಆಕೆಯನ್ನು ಶಿಕ್ಷಿಸುವುದರಲ್ಲೂ ದ್ವಿಮುಖ ಧೋರಣೆ ಇದೆ. ಒಂದು ಸಂದರ್ಭದಲ್ಲಿ ಪುರುಷ ಹಾಗೂ ಮಹಿಳೆ ಒಂದೇ ರೀತಿ ನಡೆದುಕೊಂಡಿದ್ದರೂ ಪುರುಷನಿಗೆ ರಿಯಾಯಿತಿ ಇರುತ್ತದೆ ಅಥವಾ ಆತನ ವಿರುದ್ಧ ಅಷ್ಟು ಕಠಿಣವಾಗಿ ಸಮಾಜ ನಡೆದುಕೊಳ್ಳುವುದಿಲ್ಲ. ಇಂತಹ ವಿಚಾರಗಳನ್ನೆಲ್ಲಾ ಚರ್ಚಿಸಲು ಲಾರಾ ಬೇಟ್ಸ್ ಎನ್ನುವ ಬ್ರಿಟಿಷ್ ಸ್ತ್ರೀವಾದಿ ಲೇಖಕಿ 2012ರ ಏಪ್ರಿಲ್ 16ರಂದು Everyday Sexism Project ಎನ್ನುವ ವೆಬ್‌ಸೈಟ್ ಆರಂಭಿಸಿದ್ದಾರೆ. ವಿಶ್ವದಾದ್ಯಂತ ಕಂಡು ಬರುವ ಸೆಕ್ಸಿಸ್ಟ್ ಎನಿಸುವ ಘಟನೆಗಳ ಉದಾಹರಣೆಗಳನ್ನು ಈ ವೆಬ್‌ಸೈಟ್‌ನಲ್ಲಿ ದಾಖಲೀಕರಿಸುವುದು ಇದರ ಉದ್ದೇಶ. ಈ ವೆಬ್‌ಸೈಟ್‌ನಲ್ಲಿನ ದಾಖಲಾತಿಗಳು ವಿವಿಧ ದೇಶಗಳ  ಮಹಿಳೆಗೆ ಸಂಬಂಧಿಸಿದಂತೆ ನೀತಿಗಳ ಸುಧಾರಣೆಗಾಗಿ  ಸಚಿವರು ಹಾಗೂ ಸಂಸತ್ ಸದಸ್ಯರ ಜತೆ ಕೆಲಸ ಮಾಡಲು ಬಳಕೆಯಾಗಿವೆ ಎಂದು ಬೇಟ್ಸ್ ಹೇಳಿಕೊಂಡಿದ್ದಾರೆ.

ಸೆಕ್ಸಿಸಂ ಎನ್ನುವುದು ಮನಸುಗಳಲ್ಲಿ ಎಷ್ಟೊಂದು ಅಂತರ್ಗತವಾಗಿ ಬಿಟ್ಟಿದೆ ಎಂದರೆ  ಅದು ಅರಿವಿಗೇ ಬರದ ಸ್ಥಿತಿ ಇದೆ. ಇನ್ನು ಅದರ ವಿರುದ್ಧ  ಆಲೋಚನೆ ಮಾಡುವುದಾಗಲಿ,ಬದಲಾವಣೆಗೆ ಕೈಜೋಡಿಸುವುದಾಗಲಿ ಹೇಗೆ ಸಾಧ್ಯ? ಅನೇಕ ಸಂದರ್ಭಗಳಲ್ಲಿ ಕೆಲವೊಂದು ವರ್ತನೆ ಅಥವಾ ಮಾತುಗಳನ್ನು ತೀರಾ ಕ್ಷುಲ್ಲಕ ಎಂದು ಕಡೆಗಣಿಸುತ್ತೇವೆ. ಅದಿರುವುದೇ ಹಾಗೆ ಎಂದುಕೊಳ್ಳುತ್ತೇವೆ. ಹೀಗಾಗಿ  ಈ ತಾರತಮ್ಯದ ಸಾಮಾಜಿಕ ಕ್ಯಾನ್ಸರ್ ಬೆಳೆಯಲು ನಾವೂ ಕೂಡ ಪರೋಕ್ಷವಾಗಿ ಕಾರಣರಾಗುತ್ತೇವೆ. ವಾಸ್ತವವಾಗಿ ಲೈಂಗಿಕ ಹಿಂಸಾಚಾರದ ಬೇರುಗಳು ಸಾಮಾಜಿಕ ಅಸಮಾನತೆಗಳ ಜೊತೆ ಹೆಣೆದುಕೊಂಡಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ‘ನೀನು ನನ್ನ ಮಗಳಲ್ಲ ಮಗ’ ಎಂದು ಅನೇಕ ಬಾರಿ  ತಂದೆ ಅಥವಾ ತಾಯಿ ಮಗಳಿಗೆ  ಅಭಿನಂದಿಸುವುದು ಉಂಟು.

ಆದರೆ ಗಂಡು ಮಗನೇ ಶ್ರೇಷ್ಠ ಎಂಬುದನ್ನು ಈ ಮಾತುಗಳು ಧ್ವನಿಸುತ್ತವೆ. ಅನೇಕ ಸಮುದಾಯಗಳಲ್ಲಿ ವಿವಾಹದ ನಂತರ  ಆಕೆಗೆ ಸ್ವಂತ ಹೆಸರೂ ಉಳಿಯದು. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಅನೇಕ ಬಗೆಯ ತಾರತಮ್ಯ ಹಾನಿಕರವಲ್ಲ ಎಂದು ಪರಿಗಣಿಸಿಬಿಡುವುದೂ ಉಂಟು. ಆದರೆ ಇದು ಪ್ರಶ್ನಾರ್ಹ. ಏಕೆಂದರೆ ಮಹಿಳೆಗೆ ಮತದಾನದ ಹಕ್ಕು ಇಲ್ಲದಿರುವುದು ಹಾನಿಕರವಲ್ಲ ಎಂದೇ ಒಂದು ಶತಮಾನಕ್ಕೂ ಹಿಂದೆ, ಪಾಶ್ಚಿಮಾತ್ಯ ಸಮಾಜ ಪರಿಗಣಿಸಿತ್ತು ಎಂಬುದನ್ನು ಅರ್ಥಮಾಡಿಕೊಂಡಲ್ಲಿ ಮುನ್ನಡೆಯ ಹೆಜ್ಜೆಗಳ ಪರಿಕಲ್ಪನೆ ಸಾಕಾರವಾಗುವುದು. ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಲಿಂಗತಾರತಮ್ಯ ಈಗಲೂ ಉಳಿದುಕೊಂಡಿದೆ ಎಂಬುದು ವಿಪರ್ಯಾಸ.

ಆದರೆ ಲಿಂಗತ್ವ ಎಂಬುದು ಬರೀ ಮಹಿಳೆಯರಿಗೆ ಸಂಬಂಧಿಸಿದ್ದಲ್ಲ. ಇಡೀ ಸಮಾಜಕ್ಕೆ ಸಂಬಂಧಿಸಿದ್ದು ಎಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ಲಿಂಗತ್ವ ಹಾಗೂ ಅದರ ನಿರ್ವಹಣೆ ಪುರುಷರ ಹಾಗೂ ಪುರುಷ ನಾಯಕತ್ವವೇ ತುಂಬಿಕೊಂಡಿರುವ ವ್ಯವಸ್ಥೆಯ ಹೊಣೆಗಾರಿಕೆಯೂ ಹೌದು ಎಂಬುದನ್ನು  ಅರಿತುಕೊಳ್ಳಬೇಕಾಗಿದೆ. ಕಳೆದ ವರ್ಷ ಬಾಂಗ್ಲಾ ದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಿ ಷೇಕ್ ಹಸೀನಾ ಅವರನ್ನು ಅಭಿನಂದಿಸಿದ್ದರು. ಆದರೆ ಈ ಸಂದರ್ಭದಲ್ಲಿ ಪ್ರಧಾನಿ ಬಳಸಿದ್ದ ಭಾಷೆಯಾದರೂ ಎಂತಹದ್ದು? ಬಾಂಗ್ಲಾ ಪ್ರಧಾನಿ ಮಹಿಳೆಯಾಗಿದ್ದರೂ ಭಯೋತ್ಪಾದನೆಯನ್ನು ತಾನು ಸಹಿಸುವುದಿಲ್ಲ ಎಂದು ಹೇಳುತ್ತಿರುವುದು ಹೃದಯಸ್ಪರ್ಶಿಯಾಗಿದೆ ಎಂಬಂತಹ ನುಡಿಗಳನ್ನು ಮೋದಿ ಹೇಳಿದ್ದರು.

 ‘ಭಯೋತ್ಪಾದಕರ  ಬೆದರಿಕೆ ವಿರುದ್ಧ ಷೇಕ್ ಹಸೀನಾ ತೋರ್ಪಡಿಸುತ್ತಿರುವ ದೃಢ ನಿಲುವನ್ನು ನಾನು ಅಭಿನಂದಿಸುತ್ತೇನೆ’ ಎಂಬಂತಹ ಮೋದಿಯವರ ಅನುಗ್ರಹಪೂರ್ವಕ ಮಾತುಗಳು ಟೀಕೆಗಳಿಗೆ ಗುರಿಯಾಗಿದ್ದು ಸಾರ್ವಜನಿಕ ಸ್ಮೃತಿಯಲ್ಲಿ ಇದ್ದೇ ಇದೆ. ಹಾಗೆಯೇ ಈ ಬಗೆಯಲ್ಲಿ ತಾರತಮ್ಯ ಧ್ವನಿಸುವ ಭಾಷಾ ಬಳಕೆಯಿಂದ  ಅನೇಕ ರಾಜಕಾರಣಿಗಳು ಟೀಕೆಗೊಳಗಾಗುವುದು ಮುಂದುವರಿದೇ ಇದೆ. ಆದರೆ ರಾಷ್ಟ್ರದ ಆಡಳಿತದ ಎಲ್ಲಾ ಕೊಂಬೆಗಳಲ್ಲೂ ಲಿಂಗತ್ವ ಸಂವೇದನೆ ಚಿಗುರಬೇಕಿರುವುದು ಸದ್ಯದ ಅಗತ್ಯ.ಮಹಿಳೆಯ ಘನತೆಯನ್ನು ಕುಗ್ಗಿಸಿ  ಆಕೆಯನ್ನು ಅಧೀನ ನೆಲೆಗೆ ತಳ್ಳುವಂತಹ ಮಾತುಗಳಿಗಾಗಿ ಸಾರ್ವಜನಿಕವಾಗಿ ಲಜ್ಜೆಗೊಳಪಡಿಸುವ ವಾತಾವರಣ ಸೃಷ್ಟಿಯಾಗಬೇಕು.

ಈ ಎಲ್ಲಾ ಚರ್ಚೆಗಳ ಚೌಕಟ್ಟಿನಲ್ಲಿ  ಕೊಹ್ಲಿ ನುಡಿಗಳು ಪ್ರಸ್ತುತವಾಗುತ್ತವೆ. ಕಳೆದ ತಿಂಗಳು ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನದಂದು ಈ ಕ್ರಿಕೆಟ್ ತಾರೆ ಮಾಡಿದ ಟ್ವೀಟ್ ಸಹ ಗಮನ ಸೆಳೆದುಕೊಂಡಿತ್ತು. ಈ ಟ್ವೀಟ್‌ನಲ್ಲಿ ಕೈಮುಗಿದು ನಿಂತ ಕೊಹ್ಲಿ ಛಾಯಾಚಿತ್ರದ ಮೇಲೆ ಸ್ಸಾರಿ  (SORRY) ಎಂಬ ಪದ ಅಂಟಿಸಲಾಗಿತ್ತು. ‘ಮೈ ಕೈ ತಾಗಿಸುವವರು, ಎಳೆಯುವವರು, ಸೀಟಿ ಹೊಡೆಯುವವರು, ಹಿಂಬಾಲಿಸುವವರಿಂದಾಗಿ ‘‘ಸ್ಸಾರಿ’’.  ಈ ದಿನವನ್ನು  ಹಾಳು ಮಾಡಲು  ಅವರಿಗೆ ಬಿಡಬೇಡಿ. ಹ್ಯಾಪಿ ವಿಮೆನ್ಸ್ ಡೇ’. ಹೆಣ್ಣುಮಕ್ಕಳ ಮೇಲಿನ ಅಪರಾಧ ಹೆಚ್ಚಳವಾಗು ತ್ತಿರುವ ಈ ದಿನಗಳಲ್ಲಿ ಈ ಟ್ವೀಟ್‌ಗೆ ಮಹತ್ವ ಇದೆ. ಯುವಜನರಿಗೆ  ಒಂದು ಆದರ್ಶ ಮಾದರಿಯಾಗಿಯೂ  ಈ ಮಾತುಗಳು ಧ್ವನಿಸುವ ಆಶಯಗಳು ಮುಖ್ಯವಾದದ್ದು. ಕ್ರೀಡಾಂಗಣದಲ್ಲಿ ಮಾತ್ರವಲ್ಲ ಕ್ರೀಡಾಂಗಣದ ಹೊರಗೂ  ಬದುಕಿನ ಬಗ್ಗೆ ನೀಡಿದ  ಈ ಗಟ್ಟಿ ಸಂದೇಶಕ್ಕೆ ಕೊಹ್ಲಿಯನ್ನು  ಎರಡು ಪಟ್ಟು ಅಭಿನಂದಿಸುವುದು ನಮ್ಮ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT