ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನವ ಮಾಧ್ಯಮಗಳ ಕಾಲ

Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ
ಇತ್ತೀಚಿನ ಕೆಲ ವಾರಗಳಿಂದೀಚೆಗೆ ಸಾಮಾಜಿಕ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಟ್ವಿಟರ್‌, ವಾಟ್ಸ್‌ಆ್ಯಪ್‌ಗಳು ಹೊಸ ಶಕ್ತಿಯಾಗಿ ಹೊರಹೊಮ್ಮಿದ್ದು, ಕಾಲಕ್ಕೆ ತಕ್ಕಂತೆ ನಿಜಕ್ಕೂ ಪ್ರಭಾವಶಾಲಿಯಾಗಿ ಬೆಳೆದು ನಿಂತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಮೆಕ್ಸಿಕೊದ ಅಧ್ಯಕ್ಷ ಎನ್ರಿಕ್‌ ಪೆನಾ ನಿಯೆಟೊ ಅವರು ಟ್ವಿಟರ್‌ನಲ್ಲಿ ಪರಸ್ಪರ ಮಾತಿನ ವಾಗ್ಬಾಣ ಪ್ರಯೋಗಿಸಿ, ಮನುಕುಲದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ವ್ಯಾಪಾರ ಒಪ್ಪಂದವಾಗಿರುವ ಉತ್ತರ ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ (ಎನ್‌ಎಎಫ್‌ಟಿಎ) ನಾಶ ಮಾಡಲು ಹೊರಟಿದ್ದಾರೆ.  ಮೆಕ್ಸಿಕೊ ಗಡಿಗುಂಟ ಅಮೆರಿಕ ನಿರ್ಮಿಸಲಿರುವ ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದ ಗೋಡೆಯ ವೆಚ್ಚ ಯಾರು ಭರಿಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ, ವಿಶ್ವದ ಬಲಿಷ್ಠ  ಮತ್ತು ಜನಸಂಖ್ಯಾ ಬಾಹುಳ್ಯದ ನೆರೆ ಹೊರೆ ದೇಶಗಳ ಮುಖಂಡರಿಬ್ಬರು ಕೇವಲ 280 ಅಕ್ಷರಗಳ ಟ್ವೀಟ್‌ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದರು ಅಥವಾ  ಇತಿಹಾಸವನ್ನು ಅಳಿಸಿ ಹಾಕಿದ್ದಾರೆ.
 
ಅಮೆರಿಕದಿಂದ ನೋಟ ಬದಲಿಸಿ ಸ್ವದೇಶದಲ್ಲಿನ ತಮಿಳುನಾಡಿನತ್ತ ಗಮನ ಹರಿಸಿದರೆ ಜಲ್ಲಿಕಟ್ಟುವಿಗೆ ಸಂಬಂಧಿಸಿದಂತೆ ಸಮೂಹ ಚಳವಳಿ ಹುರಿದುಂಬಿಸಿ, ಬೇಡಿಕೆ ಈಡೇರುವಲ್ಲಿ ಸಾಮಾಜಿಕ ಮಾಧ್ಯಮ ಯಶಸ್ವಿ ಪಾತ್ರ ನಿರ್ವಹಿಸಿದೆ. ಜಲ್ಲಿಕಟ್ಟುವಿಗೆ ಸಂಬಂಧಿಸಿದ ಪ್ರತಿಭಟನೆಯು ಸಂಪೂರ್ಣವಾಗಿ ಟ್ವಿಟರ್‌, ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ತಾಣಗಳ ಮೂಲಕವೇ ವ್ಯಾಪಕವಾಗಿ ಹಬ್ಬಿತ್ತು. ವಿವಿಧ ಕ್ಷೇತ್ರಗಳ ಖ್ಯಾತನಾಮರೆಲ್ಲ ಈ ಸಾಮಾಜಿಕ ಜಾಲತಾಣಗಳ ಮೂಲಕವೇ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜನರನ್ನು ಹುರಿದುಂಬಿಸಿದ್ದರು. ಪ್ರಮುಖವಾಗಿ ಕೇಳಿಬಂದ ಹೆಸರುಗಳಲ್ಲಿ ಚೆಸ್‌ ಚಾಂಪಿಯನ್‌ ವಿಶ್ವನಾಥ್‌ ಆನಂದ್‌, ಕ್ರಿಕೆಟಿಗ ರವಿಚಂದ್ರನ್‌ ಅಶ್ವಿನ್‌, ಮೆಗಾಸ್ಟಾರ್‌ ಕಮಲ ಹಾಸನ್‌ ಮತ್ತು ಇವರೆಲ್ಲರಿಗಿಂತ ಹೆಚ್ಚು ಅಚ್ಚರಿ ಮೂಡಿಸಿದವರು ಎ.ಆರ್.ರೆಹಮಾನ್‌ ಅವರು. ಈ ಚಳವಳಿಗೆ ಯಾರೊಬ್ಬರೂ ಮುಂದಾಳತ್ವ ವಹಿಸಿರಲಿಲ್ಲ. ಯಾವ ವಕ್ತಾರರೂ ಇದ್ದಿರಲಿಲ್ಲ.  ಯಾರೊಬ್ಬರೂ ಮುಂಚೂಣಿಗೆ ಬಂದು ನಿಂತು ಸಂಧಾನವನ್ನೂ ನಡೆಸಲಿಲ್ಲ.  ಅದೊಂದು ಜನಾಭಿಪ್ರಾಯದ ಜನಪ್ರಿಯ ಆಂದೋಲನವಾಗಿತ್ತು. ತನ್ನಷ್ಟಕ್ಕೆ ತಾನೇ ವಿದ್ಯುತ್‌ ಸಂಚಾರದಂತೆ ಜನಮಾನಸದಲ್ಲಿ ಹರಿದಿತ್ತು. ಅರಬ್‌ ದೇಶಗಳಲ್ಲಿ ಕಂಡು ಬಂದಿದ್ದ ಪ್ರತಿಭಟನೆಗೂ ಜಲ್ಲಿಕಟ್ಟು ಪರ ಪ್ರತಿಭಟನೆಗೂ ಸಾಕಷ್ಟು ಸಾಮ್ಯತೆಗಳಿದ್ದವು.
 
ಇದೇ ಅವಧಿಯಲ್ಲಿ ಭಾರತ ಮತ್ತು ಅಮೆಜಾನ್‌ ಮಧ್ಯೆ ನಡೆದ ಬೆಳವಣಿಗೆಗಳೂ ಕುತೂಹಲಕಾರಿಯಾಗಿದ್ದವು. ಭಾರತದಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿರುವ ಮತ್ತು ವಿಶ್ವದ ಅತಿದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಒಂದಾಗಿರುವ ಇ–ಕಾಮರ್ಸ್‌ ಸಂಸ್ಥೆ ಅಮೆಜಾನ್‌, ತನ್ನ ಕೆನಡಾದ ಘಟಕವು ಕಾಲೊರಸುಗಳ ಮೇಲೆ ಭಾರತದ ತ್ರಿವರ್ಣ ಧ್ವಜ ಮುದ್ರಿಸಿದ್ದಕ್ಕೆ ದೇಶದ ಕ್ಷಮೆ ಕೇಳುವಂತಾಯಿತು. ಈ ಕೃತ್ಯಕ್ಕೆ ಅಮೆಜಾನ್‌ ಕ್ಷಮೆ ಕೇಳಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಒತ್ತಾಯಿಸಿದ್ದರು. ಇದರಲ್ಲಿ ಭಾರತಕ್ಕೆ ಗೆಲುವೂ ಸಿಕ್ಕಿತು.  ಒಟ್ಟಾವಾದಲ್ಲಿನ ಭಾರತದ ರಾಯಭಾರಿ ಕಚೇರಿಯು ಅಮೆಜಾನ್‌ ಸಂಸ್ಥೆ ಜತೆ ಈ ಬಗ್ಗೆ ಚರ್ಚಿಸಬೇಕು ಎಂದೂ ಸುಷ್ಮಾ ಟ್ವಿಟರ್‌ನಲ್ಲಿಯೇ ತಾಕೀತು ಮಾಡಿದ್ದರು. 
 
ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಸಾಂಪ್ರದಾಯಿಕ ರಾಜತಾಂತ್ರಿಕ ನೀತಿ ಪಾಲಿಸುತ್ತಲೇ ಬಂದಿರುವ ಸಚಿವಾಲಯಗಳು ನಯ ನಾಜೂಕಿಗೆ ಆದ್ಯತೆ ನೀಡುವುದರ ಜತೆಗೆ ವಿವೇಚನೆ ಮತ್ತು ಆತ್ಮವಿಶ್ವಾಸದಿಂದ ವರ್ತಿಸಿರುವುದು ಹೊಸ ಬೆಳವಣಿಗೆಯಾಗಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ವಿದೇಶಾಂಗ ಇಲಾಖೆಯ ಮುಖ್ಯಸ್ಥರು ಸಂಬಂಧಿಸಿದ ದೇಶದ ರಾಯಭಾರ ಕಚೇರಿಗೆ ಎಚ್ಚರಿಕೆಯ ಸಂದೇಶ ರವಾನಿಸಿ ಕೈತೊಳೆದುಕೊಳ್ಳುತ್ತಿದ್ದರು. ಈ ವಿಷಯದಲ್ಲಾಗಿದ್ದರೆ ಅಮೆರಿಕದ ವಿದೇಶಾಂಗ ಇಲಾಖೆಯ ಜಂಟಿ ಕಾರ್ಯದರ್ಶಿಯ ಗಮನಕ್ಕೆ ತರುತ್ತಿದ್ದರು. ಆದರೆ, ಈ ಬಾರಿ ಹಾಗೆ ಆಗಲಿಲ್ಲ. ನಮ್ಮ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಗಳು ಕೂಡ,  ‘ಕುತ್ತೆ ಮೈ ತೇರಾ ಖೂನ್‌ ಪೀ ಜಾವುಂಗಾ’ ಎಂಬರ್ಥದ ಕಟು ಮಾತಿನ ಕ್ಷಿಪಣಿಗಳನ್ನು ಬಳಸಲಿಲ್ಲ. ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದ   ಅಧಿಕಾರಶಾಹಿಯ ಪಾಲಿಗೆ ಇದೊಂದು ತೀವ್ರ ಬದಲಾವಣೆಯ ಧೋರಣೆಯಾಗಿತ್ತು. 
 
ವಾಷಿಂಗ್ಟನ್‌, ಮೆಕ್ಸಿಕೊ, ಚೆನ್ನೈ ಮತ್ತು ದೆಹಲಿಯಲ್ಲಿ ನಡೆದ ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದರೆ ನಾವೆಲ್ಲ ಒಂದು ಖಚಿತ ನಿರ್ಧಾರಕ್ಕೆ ಬರಬಹುದಾಗಿದೆ. ಸಾಮಾಜಿಕ ಮಾಧ್ಯಮಗಳು ಸಂವಹನ, ಚರ್ಚೆ, ಬೈಗುಳಕ್ಕಷ್ಟೇ ಸೀಮಿತವಾಗದೆ ಅದರಿಂದ ಹೊರಬಂದು ಪ್ರಬುದ್ಧತೆ ಮೈಗೂಡಿಸಿಕೊಂಡಂತೆ ಭಾಸವಾಗುತ್ತಿದೆ. ಆಡಳಿತ, ಸಮೂಹ ರಾಜಕೀಯ ಮತ್ತು ರಾಜತಾಂತ್ರಿಕ ನೀತಿಯ  ಹೊಸ ಮಾಧ್ಯಮವಾಗಿ ಬೆಳೆಯುತ್ತಿರುವುದು ಅನುಭವಕ್ಕೆ ಬರುತ್ತಿದೆ.
 
ಇವುಗಳು ಆಡಳಿತಶಾಹಿಯ ಸಹನೆ, ರಾಜತಾಂತ್ರಿಕರ ಸಂಧಾನ ಪ್ರಕ್ರಿಯೆ,  ಹಿಂಬಾಗಿಲ ಸಂಧಾನ ಪ್ರಕ್ರಿಯೆ ಮತ್ತು ಸಮೂಹ ರಾಜಕೀಯದ ವಿಶ್ವಾಸಾರ್ಹತೆಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿವೆ.
 
ತಮಿಳುನಾಡಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯು ಒಂದು ವೇಳೆ ನಿಜವಾಗಿಯೂ ಕೈಮೀರಿ ಹೋಗಿದ್ದರೆ ಅದಕ್ಕೆ ಯಾರು ಹೊಣೆಯಾಗುತ್ತಿದ್ದರು? ವಿಶ್ವದ ಅತ್ಯಂತ ಬಲಾಢ್ಯ ದೇಶದ ಅಧ್ಯಕ್ಷ, ಹಳೆಯ ಆದಿವಾಸಿ ಮುಖಂಡ ಅಥವಾ ಅರಸನಂತೆ ಎದುರಾಳಿಗಳ ವಿರುದ್ಧ ಯುದ್ಧ ಘೋಷಿಸಿ ನೆರೆಹೊರೆ ದೇಶದ ರಾಯಭಾರಿಯನ್ನು ವಾಪಸ್‌ ಕಳುಹಿಸಿಕೊಟ್ಟಿದ್ದರೆ ಅಥವಾ ಅತ್ಯಂತ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ  ಸಾಗರೋತ್ತರ ಮಾರುಕಟ್ಟೆಯ ದೇಶವೊಂದರ ಉನ್ನತ ಅಧಿಕಾರಿಗಳು ವಿಶ್ವದ ಅತಿ ದೊಡ್ಡ ಇ–ಕಾಮರ್ಸ್‌ ದೈತ್ಯ ಸಂಸ್ಥೆಯ ವಿರುದ್ಧ ಸಾರ್ವಜನಿಕವಾಗಿ ಕಟು ಮಾತುಗಳಲ್ಲಿ ಟೀಕಿಸಿದ್ದರೆ ಉದ್ಭವವಾಗಲಿದ್ದ ಪರಿಸ್ಥಿತಿಯನ್ನು ನಾವು ಹೇಗೆ ನಿಭಾಯಿಸುತ್ತಿದ್ದೆವು ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಸಾಮಾಜಿಕ ಮಾಧ್ಯಮಗಳಿಂದಾಗಿ ಗಂಡಾಂತರಕ್ಕೆ ಸಿಲುಕುವಂತಹ ಹೊಸ ಜಾಗತಿಕ ವ್ಯವಸ್ಥೆ ಮತ್ತು ರಾಜಕೀಯ ಪರಿಸ್ಥಿತಿಯೂ ನಿರ್ಮಾಣವಾಗಿದೆ.
 
ಪ್ರಬುದ್ಧ ಜನರು, ಸರ್ಕಾರಿ ಮುಖ್ಯಸ್ಥರು, ರಾಜತಾಂತ್ರಿಕರು ಮತ್ತು ಸಾರ್ವಜನಿಕ ವ್ಯಕ್ತಿಗಳು ಈ ಸಾಮಾಜಿಕ ಮಾಧ್ಯಮಗಳ ಬಿರುಗಾಳಿಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಮಾಧ್ಯಮಗಳೂ ಅದೇ ಬಗೆಯ ಧೋರಣೆ ಅಳವಡಿಸಿಕೊಂಡಿಲ್ಲ ಎಂದು ದೂರುವುದು ಸಮಂಜಸ ಎನಿಸದು.
 
ವಿಶ್ವದಾದ್ಯಂತ ಮನ್ನಣೆಗೆ ಪಾತ್ರವಾಗಿರುವುದರಲ್ಲಿ, ಸಾಮಾಜಿಕ ಮಾಧ್ಯಮಗಳು ಗೂಗಲ್‌ ನಂತರದ ಸ್ಥಾನದಲ್ಲಿ ಇವೆ. ಬಹುಸಂಖ್ಯಾತ ವೀಕ್ಷಕರು ಟಿ.ವಿ ನೋಡುವ (ಪ್ರೈಮ್‌ ಟೈಂ) ಸಮಯದಲ್ಲಿ ನಿಮ್ಮ ಮೆಚ್ಚಿನ ಚಾನೆಲ್‌, ಡಿಜಿಟಲ್‌ ಸುದ್ದಿ ತಾಣಗಳು ಮತ್ತು ಬೇಸರ ಮೂಡಿಸುವ ದಿನಪತ್ರಿಕೆಗಳನ್ನು ಹೋಲಿಸಿ ನೋಡಿದರೆ ಸಾಮಾಜಿಕ ಮಾಧ್ಯಮಗಳು ಅದೆಷ್ಟರ ಮಟ್ಟಿಗೆ ಸಕ್ರಿಯವಾಗಿವೆ ಎನ್ನುವುದು ಅನುಭವಕ್ಕೆ ಬರುತ್ತದೆ.
 
ದಿನಪೂರ್ತಿ ಯಾರೋ ಒಬ್ಬರು ಏನನ್ನೋ ಹೇಳಿದ್ದು, ಅದಕ್ಕೆ ಇನ್ನೊಬ್ಬರು ಪ್ರತಿಕ್ರಿಯಿಸಿದ್ದು ಸೇರಿದಂತೆ ಹಲವಾರು ಘಟನೆಗಳು, ಅಂಕಿ ಅಂಶ ಆಧರಿಸಿದ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಟ್ರಂಪ್‌ ಅವರು ಈಗ ತಮ್ಮ ಅಧಿಕಾರ ಚಲಾಯಿಸಲು ಟ್ವಿಟರ್‌ ಮಾಧ್ಯಮವನ್ನೇ ಬಳಸಲು ಆರಂಭಿಸಿರುವುದರಿಂದ ಟ್ವಿಟರ್‌ ಅನ್ನು ಪ್ರತಿಯೊಬ್ಬರೂ ಹೆಚ್ಚು ಗಂಭೀರವಾಗಿ ಪರಿಗಣಿಸುವಂತಾಗಿದೆ.  ಇಲ್ಲಿ ಉಲ್ಲೇಖಿಸಿರುವ ಪ್ರಮುಖ ವಿದ್ಯಮಾನಗಳ ಬಗ್ಗೆ ಇತ್ತೀಚಿನ ಕೆಲ ದಿನಗಳಲ್ಲಿ ನಾನು ಈ ಬಗ್ಗೆ ಹೆಚ್ಚು ಆಳವಾಗಿ ಆಲೋಚಿಸಿರುವೆ. ಲೆಬನಾನ್‌ನ ಸ್ವಿಟ್ಜರ್ಲೆಂಡ್‌ ವ್ಯಂಗ್ಯಚಿತ್ರ ಕಲಾವಿದನೊಬ್ಬ ಟ್ರಂಪ್‌ ಅವರ ಬಗ್ಗೆ ಬರೆದ ಅರ್ಥಪೂರ್ಣವಾದ ಕಾರ್ಟೂನ್‌ ಅನ್ನೂ ನಾನು ಗಮನಿಸಿರುವೆ. ಶ್ವೇತಭವನದಲ್ಲಿ ಮೇಜಿನ ಮೇಲೆ ಕುಳಿತಿರುವ ಟ್ರಂಪ್‌ ಎದುರಿಗೆ, ‘ಟ್ವೀಟ್‌’ ಮತ್ತು ಅಣ್ಣಸ್ತ್ರ ಹೆಸರಿನ ಎರಡು ಒತ್ತು ಗುಂಡಿಗಳು ಇರುವುದನ್ನು ಆ ಕಾರ್ಟೂನ್‌ನಲ್ಲಿ ಚಿತ್ರಿಸಿರುವುದು ಹೆಚ್ಚು ಅರ್ಥಪೂರ್ಣವಾಗಿದೆ.
 
ಕಳೆದ ಶುಕ್ರವಾರ ಬೆಳಿಗ್ಗೆ ಬಯೊಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ಮತ್ತು ನಾನು, ಸುಸ್ತಿದಾರರು ಮತ್ತು ದೇಶದಿಂದ ಪಲಾಯನ ಮಾಡುವುದರ ಬಗ್ಗೆ ಟ್ವಿಟರ್‌ನಲ್ಲಿ ನಮ್ಮ ನಮ್ಮ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೆವು. ಮಧ್ಯಾಹ್ನದ ಹೊತ್ತಿಗೆ ಮೂರು ಟೆಲಿವಿಷನ್‌ ಚಾನೆಲ್‌ಗಳು ನನ್ನನ್ನು ಸಂಪರ್ಕಿಸಿ, ಟ್ವಿಟರ್‌ ಚರ್ಚೆಯನ್ನು ಚಾನೆಲ್‌ ಮೂಲಕ ಮುಂದುವರೆಸಲು ಕೇಳಿಕೊಂಡಿದ್ದವು. ಈಗಾಗಲೇ ನಡೆಯುತ್ತಿರುವ ಚರ್ಚೆಗೆ ನಾವು ನಮಗೇ ಗೊತ್ತಿಲ್ಲದಂತೆ ಈ ಟ್ವಿಟರ್‌ ವೇದಿಕೆಯನ್ನೂ  ಬಳಸಿಕೊಂಡಿರುವುದು ನಮ್ಮ ಅನುಭವಕ್ಕೆ ಬಂದಿತು.
 
ಪರಸ್ಪರರ ಅನಿಸಿಕೆಗಳನ್ನು ಬೆಂಬಲಿಸಿ ಪುನರಾವರ್ತಿಸುವ ಬ್ಲಾಗರ್ಸ್‌ಗಳ (ಅಂತರ್ಜಾಲ ಬರಹಗಾರರ) ನಿಲುವನ್ನು ಸಾಮಾಜಿಕ ಮಾಧ್ಯಮಗಳ ವಿಮರ್ಶಕರು ದೀರ್ಘ ಸಮಯದಿಂದ ಟೀಕಿಸುತ್ತಲೇ ಬಂದಿದ್ದಾರೆ. ಸಾರ್ವಜನಿಕರ ಮತ್ತು ವೈಯಕ್ತಿಕ ಅಭಿಪ್ರಾಯಗಳನ್ನು ಪುನರ್‌ ಅಭಿವ್ಯಕ್ತಿಸುವ ಈ ಗುಂಪು ಈಗ ಸರ್ಕಾರ, ರಾಜಕೀಯ, ಜನಾಭಿಪ್ರಾಯ ಮತ್ತು ಚರ್ಚೆಗಳನ್ನು ವ್ಯಾಪಕವಾಗಿ ಪ್ರಭಾವಿತಗೊಳಿಸಿದೆ. ಟ್ರಂಪ್ ಅವರು ಕೆಲ ವಿಷಯಗಳ ಬಗ್ಗೆ ಅಪಾಯಕಾರಿಯಲ್ಲದ ರೀತಿಯಲ್ಲಿ ಟ್ವಿಟರ್‌ನಲ್ಲಿ ದೂರುತ್ತಿರುವುದು ನಿಜಕ್ಕೂ ಅಸಾಮಾನ್ಯ ಸಂಗತಿಯಾಗಿದೆ. 
 
ಹೊಸದರಲ್ಲಿ, ಈ ಸಾಮಾಜಿಕ ಮಾಧ್ಯಮದ ಆಕರ್ಷಣೆ ಬಗ್ಗೆ ನಾನು ಕೂಡ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. 8,618 ಅಕ್ಷರಗಳ ಲೇಖನದಲ್ಲಿ ವಿವರಿಸಿದ್ದನ್ನು ಕೇವಲ 140 ಅಕ್ಷರಗಳಲ್ಲಿ ಬಣ್ಣಿಸಲು ಹೇಗೆ ಸಾಧ್ಯ ಎನ್ನುವುದು ನನ್ನ ವಾದವೂ ಆಗಿತ್ತು. ಹಾಗೆಂದು ಅದೊಂದು ಸಾಮಾಜಿಕ ಮಾಧ್ಯಮದ ಖಂಡನೆಯಾಗಲಿ ಅಥವಾ ಸಂಪ್ರದಾಯವಾದಿಯ ಪ್ರಲಾಪವಾಗಲಿ ಆಗಿರಲಿಲ್ಲ. ಹಾಲಿವುಡ್‌ ನಟ ಜಾರ್ಜ್‌ ಕ್ಲೂನೆ ಅವರ, ‘ನನ್ನ ಇಡೀ ವೃತ್ತಿ ಜೀವನವನ್ನು 140 ಅಕ್ಷರಗಳಲ್ಲಿ ಗಂಡಾಂತರಕ್ಕೆ ದೂಡಲಾರೆ’ ಎಂಬ ಹೇಳಿಕೆಯನ್ನು ನನ್ನ ವಾದದ ಸಮರ್ಥನೆಗೆ ಬಳಸಿಕೊಂಡಿದ್ದೆ. 
 
ಆದರೆ, ನಂತರದ ದಿನಗಳಲ್ಲಿ ಮೂರು ಸಂಗತಿಗಳು ನನ್ನ ಮನೋಭಾವವನ್ನು ಸಂಪೂರ್ಣವಾಗಿ ಬದಲಿಸಿದವು. ನಿಂದನೆ ಕಾರಣಕ್ಕೆ ನೀವು ಸಾಮಾಜಿಕ ಮಾಧ್ಯಮಗಳನ್ನು ತಪ್ಪಿಸಿಕೊಳ್ಳಬಹುದು, ಅದನ್ನು ಮೀರಿ ನೀವು ನಿಮ್ಮ ನಿಲುವನ್ನು ಸ್ಪಷ್ಟಪಡಿಸುವ ಉದ್ದೇಶಕ್ಕಾದರೂ ಈ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರಬೇಕು. ಎರಡನೆಯದಾಗಿ, ತಂತ್ರಜ್ಞಾನವು ಪತ್ರಕರ್ತರಿಗೆ ಹೊಸ ಶಕ್ತಿ ಕೊಟ್ಟಿರುವುದು ನನಗೆ ಮನವರಿಕೆಯಾಯಿತು. ಪತ್ರಿಕೆಗಳನ್ನು ಬದಲಿಸಿದರೂ ಹೊಸ ಸಾಮಾಜಿಕ ಮಾಧ್ಯಮಗಳ ನೆರವಿನಿಂದ ನಾವು ನಮ್ಮ ಅಭಿಮಾನಿಗಳನ್ನು ನಮ್ಮ ಜತೆಯಲ್ಲಿಯೇ  ಕರೆದುಕೊಂಡು ಹೋಗಬಹುದು, ಅವರ ಜತೆ ನಿರಂತರ ಸಂಪರ್ಕದಲ್ಲಿಯೂ  ಇರಬಹುದು. ಸರಕೊಂದರ ಬ್ರ್ಯಾಂಡ್‌ಗಿಂತ ಪ್ರೇಕ್ಷಕರು (ಓದುಗರು) ಹೆಚ್ಚು ಮುಖ್ಯವಾಗಲಿದ್ದಾರೆ. ಮೂರನೆಯದಾಗಿ, ಈ ಮಾಧ್ಯಮಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಖಂಡಿತವಾಗಿಯೂ ಹೆಚ್ಚಿನ ಪ್ರಮಾಣದ ಪ್ರಯೋಜನಗಳು ಇವೆ.
 
ಮೆಲ್ಬರ್ನ್‌ಗೆ ತೆರಳುವಾಗ ದೀರ್ಘ ಸಮಯದ ವಿಮಾನ ಯಾನ ಸಂದರ್ಭದಲ್ಲಿ ನಾನು ಹಾಲಿವುಡ್‌ ಚಲನಚಿತ್ರ ‘ಬರ್ಡ್‌ಮ್ಯಾನ್‌’ ವೀಕ್ಷಿಸಿದ್ದೆ. 2015ರಲ್ಲಿ ಇದು ನಾಲ್ಕು ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿತ್ತು. ಮೈಕಲ್‌ ಕೀಟನ್‌ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸ್ಪೈಡರ್‌ಮ್ಯಾನ್‌ನಂತೆ ನೀತಿಯುತ ಮತ್ತು ಶಕ್ತಿವಂತ ಸೂಪರ್‌ ಹೀರೊ ಬರ್ಡ್‌ಮ್ಯಾನ್‌ ಪಾತ್ರದಲ್ಲಿ ಅವರು ಮನೋಜ್ಞವಾಗಿ ನಟಿಸಿದ್ದರು. ಚಿತ್ರದಲ್ಲಿ ಬರ್ಡ್‌ಮ್ಯಾನ್‌ ಮತ್ತು ಆತನ ಸಿಟ್ಟಿನ ಸ್ವಭಾವದ ಮಗಳ ಮಧ್ಯೆ ನಡೆದ ಚರ್ಚೆ ಸಂದರ್ಭದಲ್ಲಿ... ‘ಅಪ್ಪ, ನಡೆಯುತ್ತಿರುವ ಘಟನಾವಳಿಗಳನ್ನು ನೀನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿರುವೆ. ನೀನು ಆನ್‌ಲೈನ್‌ ಬರಹಗಾರರನ್ನು (ಬ್ಲಾಗರ್ಸ್‌) ದ್ವೇಷಿಸುವೆ. ಟ್ವಿಟರ್‌ ಬಗ್ಗೆ ತಮಾಷೆ ಮಾಡುವೆ. ನೀನು ಫೇಸ್‌ಬುಕ್‌ ಪುಟವನ್ನೂ ಹೊಂದಿಲ್ಲ. ಈ ಆಧುನಿಕ ಜಗತ್ತಿನಲ್ಲಿ ನಿನಗೆ ಅಸ್ತಿತ್ವವೇ ಇಲ್ಲ’ ಎಂದು ಮಗಳು ಅಪ್ಪನನ್ನು ದೂಷಿಸುತ್ತಾಳೆ.
 
ಈ ಮಾತು ನನ್ನನ್ನು ಹುರಿದುಂಬಿಸಿದ್ದರಿಂದ ಎರಡು ವರ್ಷಗಳ ಹಿಂದೆ ನಾನು ಸಾಮಾಜಿಕ ಮಾಧ್ಯಮಗಳಿಗೆ ಶರಣಾದೆ. ನನ್ನ ಹಿಂಬಾಲಕರ ಸಂಖ್ಯೆ 10 ಲಕ್ಷ ದಾಟಿತ್ತು. ಅವರಿಗೆಲ್ಲ ಚಿರಋಣಿಯಾಗಿರುವೆ. ಅತಿ ಹೆಚ್ಚು ಸಂಖ್ಯೆಯ ಓದುಗರನ್ನು ತಲುಪಲು ಸಾಮಾಜಿಕ ಮಾಧ್ಯಮವು ಈಗ ಹೊಸ ವೇದಿಕೆ ಕಲ್ಪಿಸಿಕೊಟ್ಟಿದೆ. ಅಸಂಖ್ಯ ಜನರ ಜತೆ ಅತ್ಯಲ್ಪ ಅವಧಿಯಲ್ಲಿ ಸಂವಹನ ಸಾಧಿಸಲೂ ಸಾಧ್ಯವಾಗಿದೆ. 
 
ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯದ ಮೇಲೆ ನಿಯಂತ್ರಣ ಹೊಂದಿರುವ ಗಂಭೀರ ಸ್ವಭಾವದ ಜನ, ಈ ಸಾಮಾಜಿಕ ಮಾಧ್ಯಮಗಳನ್ನು ಎಡಬಿಡದೆ ಕಾಡಿ  ನಿರಂತರವಾಗಿ ಪೀಡಿಸುವ ಬಗ್ಗೆ ನನಗೆ ಚಿಂತೆಯಾಗಿದೆ. ಹಳೆಯ ರಾಜಕೀಯ, ಆಡಳಿತ ಮತ್ತು ವಸ್ತುಸ್ಥಿತಿ ಆಧರಿಸಿದ ಚರ್ಚೆಗೆ ಹೋಲಿಸಿದರೆ ಈ ಮಾಧ್ಯಮವನ್ನು ಸುಲಭದ, ಮೈಗಳ್ಳತನದ ಮತ್ತು ಕಡಿಮೆ ವೆಚ್ಚದ ಪರ್ಯಾಯ ಮಾಧ್ಯಮಎಂದು ಪರಿಗಣಿಸುವ ಬಗ್ಗೆ ನನ್ನಲ್ಲಿ ಆತಂಕ ಮೂಡಿದೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT