ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬಳಸಿಕೊಂಡ ಅವಕಾಶವೇ ಅಥವಾ...?

Last Updated 18 ಮಾರ್ಚ್ 2017, 20:25 IST
ಅಕ್ಷರ ಗಾತ್ರ

ಕಳೆದ ಗುರುವಾರದ ಎಲ್ಲ ಸುದ್ದಿ ಪತ್ರಿಕೆಗಳ ಶೀರ್ಷಿಕೆಗಳು ಒಂದೇ ರೀತಿ ಇದ್ದುವು. ರಾಜ್ಯದ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದಿನ ದಿನ ಮುಂದಿನ ಆರ್ಥಿಕ ವರ್ಷದ ಬಜೆಟ್‌ ಮಂಡಿಸಿದ್ದರು. ಎಲ್ಲ ಪತ್ರಿಕೆಗಳೂ, ‘ಇದು ಚುನಾವಣೆ ಬಜೆಟ್‌’ ಎಂದೇ ಬಣ್ಣಿಸಿದುವು. ಎಲ್ಲ ಸುದ್ದಿ ಮನೆಗಳು ಹೀಗೆ ಒಂದೇ ರೀತಿ ಭಾವಿಸುವುದು ವಿರಳ.

ಮುಂದಿನ ವರ್ಷ ವಿಧಾನಸಭೆಗೆ ನಡೆಯುವ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿ ಬಜೆಟ್‌ ಮಂಡಿಸಿದ್ದಾರೆ ಎಂದೇ ಎಲ್ಲರಿಗೂ ಅನಿಸಿತು. ಸಿದ್ದರಾಮಯ್ಯನವರಿಗೆ ಮುಂದಿನ ಮಾರ್ಚ್‌ಗಿಂತ ಮುಂಚೆ ಇನ್ನೊಂದು ಬಜೆಟ್‌ ಮಂಡಿಸಲು ಅವಕಾಶ ಇದೆ. ಆದರೆ, ಮುಂಬರುವ ಚುನಾವಣೆಯಲ್ಲಿ ಬೇರೆ ಪಕ್ಷದ ಸರ್ಕಾರ ಬಂದರೆ ಜುಲೈನಲ್ಲಿ ತನ್ನದೇ ಬಜೆಟ್‌ ಅನ್ನು ಅದು ಮಂಡಿಸುತ್ತದೆ. ಹಾಗಾಗಿ ಬರುವ ವರ್ಷ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್‌ನ ಅನುಷ್ಠಾನದ ಬಗ್ಗೆ ಯಾರಿಗೂ ಖಾತ್ರಿ ಇಲ್ಲ.

ಈ ಸಾರಿ ಸಿದ್ದರಾಮಯ್ಯನವರು ಬಜೆಟ್‌  ಮಂಡಿಸುವುದಕ್ಕಿಂತ ಕೆಲವೇ ದಿನಗಳ ಮುಂಚೆ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬಂದಿತ್ತು. ಉತ್ತರಪ್ರದೇಶದಲ್ಲಿ ಬಿಜೆಪಿಗೇ ನಂಬಲಾಗದಷ್ಟು ಭಾರಿ ಬಹುಮತದ ಅಧಿಕಾರ ಸಿಕ್ಕಿತ್ತು. ಸರಳವಾಗಿ ನೋಡಿದರೆ ಎಲ್ಲ ರಾಜ್ಯಗಳಲ್ಲಿ ಕಳೆದ ಐದು ಅಥವಾ ಹತ್ತು ವರ್ಷಗಳಲ್ಲಿ ಅಧಿಕಾರ ಹಿಡಿದ ಪಕ್ಷಗಳು ಚುಕ್ಕಾಣಿ ಕಳೆದುಕೊಂಡಿದ್ದುವು. ಆದರೆ, ಇದು ಅಷ್ಟು ಸರಳ ಫಲಿತಾಂಶವೇ?

ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್‌, ಇಂಥ ಹೀನಾಯ ಸೋಲು ಕಾಣುವಂಥ  ಕೆಟ್ಟ ಆಡಳಿತವನ್ನೇನೂ ಕೊಟ್ಟಿರಲಿಲ್ಲ. ಅವರಿಗೆ ರಾಜ್ಯದಲ್ಲಿ ಒಳ್ಳೆಯ ಹೆಸರು ಇದ್ದಂತೆ ಇತ್ತು. ಯುವಕ ಅಖಿಲೇಶ್‌ ತಂದೆಯನ್ನೇ ಎದುರು ಹಾಕಿಕೊಂಡು ಕಣಕ್ಕೆ ಇಳಿದಿದ್ದರು.

ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕೂಡ ಪ್ರಕಟಿಸಿರಲಿಲ್ಲ. ಆದರೂ ಅದಕ್ಕೆ ಸಿಕ್ಕ ಜನಾದೇಶ ಅಭೂತಪೂರ್ವ ಎನ್ನುವಂತೆ ಇತ್ತು. 2015ರ ಬಿಹಾರ ಮತ್ತು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ಬಿಜೆಪಿ ಈ ಸಾರಿಯ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗಿಂತ ಮುಂಚೆ ನೋಟು ರದ್ದತಿಯಂಥ ದೊಡ್ಡ ಜೂಜಿಗೆ ಕೈ ಹಾಕಿತ್ತು. ಆ ಮೂಲಕ ಚುನಾವಣೆ ಗೆಲ್ಲುವುದು ಅದರ ಆಕಾಂಕ್ಷೆಯಾಗಿತ್ತು.

ಸ್ವಾಮಿನಾಥನ್‌ ಅಂಕ್ಲೆಸಾರಿಯಾ ಅವರಂಥ ತಜ್ಞ ಆರ್ಥಿಕ  ಅಂಕಣಕಾರರು, ‘ನೋಟು ರದ್ದತಿ ಕ್ರಮದಿಂದ ಬಿಜೆಪಿಗೆ ಯಾವ ಪ್ರಯೋಜನವೂ ಆಗುವುದಿಲ್ಲ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲು ಖಚಿತ’ ಎಂದು ಚುನಾವಣೆ ಘೋಷಣೆಯಾದ ಕೆಲವೇ ದಿನಗಳಲ್ಲಿ ಬರೆದ ತಮ್ಮ ಅಂಕಣದಲ್ಲಿ ಅಭಿಪ್ರಾಯ ಪಟ್ಟಿದ್ದರು.

ಆದರೆ, ಹಂತ ಹಂತವಾಗಿ ಮತದಾನ ನಡೆದಂತೆ ಸ್ವಾಮಿನಾಥನ್‌ ಅಭಿಪ್ರಾಯ ಬದಲಾಯಿತು. ಅವರು ಮತ್ತೆ ತಮ್ಮ ಅಂಕಣದಲ್ಲಿಯೇ ಬರೆದರು : ‘ಬಿಜೆಪಿಗೆ ಗೆಲುವು ಖಚಿತ’ ಎಂದು. ನಮ್ಮ ಪತ್ರಿಕೆಯಲ್ಲಿ ಅಂಕಣ ಬರೆಯುವ ಶೇಖರ್‌ ಗುಪ್ತ ಕೂಡ, ಬಿಜೆಪಿಗೆ ಸ್ಪಷ್ಟ ಗೆಲುವಿನ ಇಂಗಿತ ನೀಡಿದ್ದರು.

ಕಳೆದ ವರ್ಷದ ನವೆಂಬರ್‌ ತಿಂಗಳ ಕೊನೆಯಲ್ಲಿ ಉತ್ತರ ಪ್ರದೇಶದಲ್ಲಿ ನಾನೂ ಪ್ರವಾಸ ಮಾಡಿದ್ದೆ. ಬೆಳಗಿನ ಕೊರೆಯುವ ಚಳಿಯಲ್ಲಿ ಜನರು ಎ.ಟಿ.ಎಂಗಳ ಮುಂದೆ, ಬ್ಯಾಂಕುಗಳ ಮುಂದೆ ದೊಡ್ಡ ಸರದಿ ಸಾಲಿನಲ್ಲಿ ನಿಂತುದನ್ನು ಕಂಡಿದ್ದೆ. ನೋಟು ರದ್ದತಿಯಿಂದ ಮತ್ತು ಎಟಿಎಂಗಳಲ್ಲಿ ಹಣದ ‘ಪಡಿತರ’ದಿಂದ ಜನರಿಗೆ ತೊಂದರೆಯಾಗಿರಬಹುದು, ಅದು ಬಿಜೆಪಿ ವಿರುದ್ಧ ಹೋಗಬಹುದು ಎಂದು ನನಗೂ ಅನಿಸಿತ್ತು. ನಮ್ಮಂಥವರೆಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಫಲಿತಾಂಶ ಬಂತು.

ಚುನಾವಣೆ ಫಲಿತಾಂಶ ಬಂದ ಮರುದಿನ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ಪಕ್ಷದ ಕಚೇರಿಯಲ್ಲಿ ಮಾಡಿದ ಭಾಷಣ ರಾಜಕೀಯವಾಗಿ ಬಹಳ ಮಹತ್ವದ್ದು. ಅದೇ ಬಗೆಯ ಭಾಷಣವನ್ನು ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿಯೂ ನಂತರ ಮಾಡಿದ್ದಾರೆ. ಅವರು ಅಲ್ಲಿ ಐದು ಮುಖ್ಯ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ : ಒಂದು, ಜನರು ಮತಗಟ್ಟೆಗಳಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಏಕೆ ಬರುತ್ತಾರೆ?

ಎರಡು, ಬಡವರು ‘ಆಮಿಷಗಳನ್ನು ಇಷ್ಟಪಡುವುದಿಲ್ಲ, ಮತ್ತು ಕಷ್ಟಪಟ್ಟು ದುಡಿಯಲು ಬಯಸುತ್ತಾರೆ. ಅವರಿಗೆ ಆ ಅವಕಾಶ ಕಲ್ಪಿಸಬೇಕು. ಮೂರು, ಮಧ್ಯಮ ವರ್ಗ ತಾತ್ಕಾಲಿಕವಾಗಿ ಹೊರೆ ಹೊರಲು ಸಿದ್ಧವಾಗಬೇಕು. ನಾಲ್ಕು, ಇದು ಯುವಕರ ಕಾಲ. ಮತ್ತು ಐದು, ಸ್ವಾತಂತ್ರ್ಯಕ್ಕೆ 75 ವರ್ಷ ತುಂಬುವ ಸಂದರ್ಭದಲ್ಲಿ 2022ಕ್ಕೆ ನವಭಾರತ ನಿರ್ಮಾಣಕ್ಕೆ ನಾವು ಸಿದ್ಧರಾಗಬೇಕು.

ಚುನಾವಣೆ ಸಮಯದಲ್ಲಿ ಮತದಾರರಿಗೆ ಕೊಡುವ ಆಮಿಷಗಳು ಬಜೆಟ್‌ ಮೇಲೆ ಹಾಕುವ ಹೊರೆ ಅಗಾಧವಾದುದು. ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತ  ಹೋಗುತ್ತಿದೆ ಮತ್ತು ಎಲ್ಲ ಪಕ್ಷಗಳು ಮತದಾರರಿಗೆ ಬಗೆ ಬಗೆಯ ಆಮಿಷ ಒಡ್ಡಲು ಪೈಪೋಟಿ ಮಾಡುತ್ತಿವೆ. ‘ಇಂಥ ಆಮಿಷಗಳನ್ನು ಅವರಿಗೆ ಒಡ್ಡುವ ಬದಲು ಆರ್ಥಿಕವಾಗಿ ಅವರನ್ನು ಸುಪುಷ್ಟ ಮಾಡುವ ಯೋಜನೆಗಳನ್ನು ಹಾಕಿಕೊಂಡರೆ ಮಧ್ಯಮ ವರ್ಗ ಈಗ ಹೊರುತ್ತಿರುವ ಹೊರೆಯನ್ನು ಬಡವರೇ ಹೊರುತ್ತಾರೆ’ ಎಂದೂ ಪ್ರಧಾನಿ ಹೇಳಿದರು.

2014ರ  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನರು ಅಗಾಧ ಎನ್ನುವಂಥ ಬೆಂಬಲ ಕೊಟ್ಟುದು ಇದೇ ‘ಅಭಿವೃದ್ಧಿ’ ಕನಸುಗಳ ಬೆನ್ನು ಏರಿ. ಈಗ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕ ಅಷ್ಟೇ ಅಗಾಧ ಗೆಲುವು ಅದೇ ಅಭಿವೃದ್ಧಿಯ ಕನವರಿಕೆಯದೇ? ಪ್ರಧಾನಿ ಹಾಗೆ ಭಾವಿಸುವಂತೆ ಕಾಣುತ್ತದೆ. ಮೋದಿಯವರು ಅವಕಾಶ ಸಿಕ್ಕಾಗಲೆಲ್ಲ ‘ಯುವಕರನ್ನು ಉದ್ದೇಶಿಸಿ’ ಮಾತನಾಡುತ್ತಿದ್ದಾರೆ ಮತ್ತು ನವಭಾರತ ನಿರ್ಮಾಣದ ಮಾತನ್ನೂ ಆಡುತ್ತಿದ್ದಾರೆ.

ಮತ್ತೆ ರಾಜ್ಯ ಬಜೆಟ್ಟಿಗೆ ಬರೋಣ. ಬಜೆಟ್‌ ಎಂದರೆ  ಒಂದು ಪಕ್ಷದ ರಾಜಕೀಯ ಸಿದ್ಧಾಂತದ ಹೇಳಿಕೆ ಇದ್ದಂತೆ. ಮೋದಿಯವರ ಜನಪ್ರಿಯತೆ, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ, ಇದೆಲ್ಲ ತಮ್ಮ ಬಜೆಟ್‌ ಮಂಡಿಸುವಾಗ ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಇತ್ತು. ಅದಕ್ಕೇ ಅವರು ಬಜೆಟ್ ಪುಸ್ತಕದ ಮೊದಲನೇ ಪುಟದ ಮೂರನೇ ಪ್ಯಾರಾದಲ್ಲಿಯೇ ತಮ್ಮ ರಾಜಕೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ.

‘ನಮ್ಮದು ಸರ್ವರನ್ನೂ ಒಳಗೊಂಡ ಮಾನವೀಯ ಮುಖವುಳ್ಳ ಸರ್ವೋದಯದ ಅಭಿವೃದ್ಧಿ ಮಾದರಿ. ಇದಕ್ಕೆ ಪೂರಕವಾಗಿ ಸಂವಿಧಾನದ ಆಶಯಗಳಲ್ಲೊಂದಾದ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ವಿಸ್ತೃತ ಆರ್ಥಿಕ ವಿನ್ಯಾಸವನ್ನು ಕಳೆದ ನಾಲ್ಕು ಆಯವ್ಯಯಗಳಲ್ಲಿ ನಾನು ಜನತೆಯ ಮುಂದಿಟ್ಟಿದ್ದೇನೆ. ಅದನ್ನು ಮತ್ತಷ್ಟು ವಿಸ್ತರಿಸುವ, ಎತ್ತರಿಸುವ ಪ್ರಾಮಾಣಿಕ ಪ್ರಯತ್ನವನ್ನು ಈ ಆಯವ್ಯಯದಲ್ಲಿ ಮಾಡಿದ್ದೇನೆ.

ಅಭಿವೃದ್ಧಿಯ ಫಲ ಜನಜೀವನದಲ್ಲಿ ಪ್ರತಿಫಲಿತವಾಗಬೇಕೆಂಬುದು ನನ್ನ ಬಯಕೆ. ಇದೇ ನಮ್ಮ ಸರ್ಕಾರದ ಸಾಧನೆಯ ನಿಜವಾದ ಮಾನದಂಡವೆಂದು ನಾನು ನಂಬಿದ್ದೇನೆ... ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ರಾಮರಾಜ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ. ಜನಪರ ಸರ್ಕಾರವೆಂದರೆ ಅಭಿವೃದ್ಧಿ ವಿರೋಧಿ ಸರ್ಕಾರ ಎನ್ನುವಂಥ ಬಾಲಿಶವೂ, ಸಂಕುಚಿತವೂ ಆದ ಕಲ್ಪನೆಗಳು ಅದು ಹೇಗೋ ವಿತ್ತೀಯ ವಲಯದಲ್ಲಿ ನುಸುಳಿಬಿಟ್ಟಿವೆ!’

ತಮ್ಮ ಈ ನಂಬಿಕೆಗೆ  ಪೂರಕವಾಗಿ ಮುಖ್ಯಮಂತ್ರಿ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ವರ್ಗಗಳಿಗೆ ಮಾಡಿದ ‘ಅನುದಾನ ವಿತರಣೆ’ಯ ಮುಂದುವರಿಕೆ ಜೊತೆಗೆ ತೀರಾ ಕಡೆಗಣಿತವಾದ ಜೇನುಕುರುಬ, ಕೊರಗ, ಸೋಲಿಗ, ಎರವ, ಕಾಡುಕುರುಬ ಮತ್ತು ಮಲೆಕುಡಿಯರಂಥ ಆದಿವಾಸಿ ಸಮುದಾಯಗಳನ್ನು ಕೂಡ ಹುಡುಕಿ ಅವರಿಗೂ ಈ ಸಾರಿಯ ಬಜೆಟ್ಟಿನಲ್ಲಿ ಅನುದಾನ ಒದಗಿಸಿದ್ದಾರೆ.

ಇದೇ ‘ರಾಜಕೀಯ ಹೇಳಿಕೆ’ಯ ಮುಂದುವರಿಕೆ ಎನ್ನುವಂತೆ ಇರುವ ಎಂಟನೇ ಪ್ಯಾರಾದ ಆರಂಭದಲ್ಲಿ ‘ಮೂಲ ಸೌಕರ್ಯ ಕಲ್ಪಿಸುವುದು ಅಭಿವೃದ್ಧಿ ಎಂದುಕೊಂಡಿರುವ ಒಂದು ವರ್ಗ ನಮ್ಮಲ್ಲಿದೆ’ ಎಂದು ಆ ವರ್ಗದ ಬಗೆಗೆ ಅಸಮಾಧಾನವನ್ನೂ ಅವರು ವ್ಯಕ್ತಪಡಿಸುತ್ತಾರೆ. ಇದು ಸ್ವಲ್ಪ ಸೋಜಿಗ ಎನಿಸಿದರೂ ಅವರು ನಂಬುವ ಅಭಿವೃದ್ಧಿಗೆ ಪೂರಕವಾಗಿಯೇ ಇದ್ದಂತೆ ಇದೆ.

ರಾಜಕೀಯ ಸಿದ್ಧಾಂತದ ದೃಷ್ಟಿಯಿಂದ ಪ್ರಧಾನಿ ನರೇಂದ್ರ  ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ವೇದಿಕೆ ಮೇಲೆ ಇರಬೇಕು ಎಂದು ಬಯಸುವುದು ಸರಿಯಲ್ಲ. ಬಯಸಬಾರದು ಕೂಡ. ಇಬ್ಬರೂ ವಿರುದ್ಧವಾಗಿಯೇ ಇರಬೇಕು. ಆದರೆ, ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ರಾಜ್ಯದ ಜನರು ಈ ಎರಡರಲ್ಲಿ ಯಾವುದನ್ನು ಬಯಸುತ್ತಾರೆ? ಮೋದಿ ಅವರು ಹೇಳುತ್ತಿರುವ ಹಾಗೆ ‘ಬಡವರನ್ನು ಸಶಕ್ತಗೊಳಿಸುವುದನ್ನು’ ಅವರು ಬಯಸುತ್ತಾರೆಯೇ? ಅಥವಾ ಸಿದ್ದರಾಮಯ್ಯ ಅವರ ‘ಸಾಮಾಜಿಕ ನ್ಯಾಯದ ಸಿದ್ದಾಂತವನ್ನು’ ಬಯಸುತ್ತಾರೆಯೇ? ಸಿದ್ದರಾಮಯ್ಯನವರು ರಾಜಕೀಯವಾಗಿ ತುಂಬ ಅನುಭವ ಇರುವ ವ್ಯಕ್ತಿ.

ತಾನು ಅಹಿಂದ ಪರ ರಾಜಕೀಯ ಮಾಡುತ್ತಿರುವೆ ಎಂದು ಹೇಳಲು ಅವರು ಎಂದೂ ಸಂಕೋಚ ಪಟ್ಟಿಲ್ಲ. ಅದು ತಮ್ಮನ್ನು ಗೆಲುವಿನ ದಡಕ್ಕೆ ಮುಟ್ಟಿಸುತ್ತದೆ ಎಂದೂ ಅವರು ನಂಬಿದಂತೆ ಕಾಣುತ್ತದೆ. ಆದರೆ, ಕಳೆದ ನಾಲ್ಕು ಬಜೆಟ್ಟುಗಳಲ್ಲಿ ಅಹಿಂದ ವರ್ಗದ ಕಲ್ಯಾಣಕ್ಕೆ ತೆಗೆದಿರಿಸಿದ ದುಡ್ಡಿನಿಂದಾಗಿ ಆ ಸಮುದಾಯಗಳ ಬದುಕಿನಲ್ಲಿ ಯಾವ ಬದಲಾವಣೆ ಆಗಿದೆ ಎಂಬುದರ ಒಂದು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ಅವರು ಇದೇ ಬಜೆಟ್ಟಿನಲ್ಲಿ ಮಾಡಬೇಕಿತ್ತು.

ಅದರಿಂದ ಅವರೇ ಹೇಳಿದ ಹಾಗೆ ‘ಅಭಿವೃದ್ಧಿಯ ಫಲ ಜನಜೀವನದಲ್ಲಿ ಹೇಗೆ ಪ್ರತಿಫಲಿತವಾಗಿದೆ’ ಎಂದು ಗೊತ್ತಾಗುತ್ತಿತ್ತು. ಅಹಿಂದ ವರ್ಗದ ಜೀವನ ಮಟ್ಟದಲ್ಲಿ ಅಂಥ ಮಾರ್ಪಾಡು ಆಗಿದ್ದರೆ ಅದು ರಾಜ್ಯದ ಒಟ್ಟು ಆರ್ಥಿಕ ಅಭಿವೃದ್ಧಿಯಲ್ಲಿಯೂ ವ್ಯಕ್ತವಾಗುತ್ತಿತ್ತು. ಮತ್ತು ಬಜೆಟ್ಟಿನ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತಿತ್ತು.

ಈ ಸಾರಿಯ ಬಜೆಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಸಾಧನೆಯನ್ನು ಪ್ರಸ್ತಾಪಿಸುತ್ತ 2013–14 ಮತ್ತು 2016–17ನೇ ಸಾಲುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ವತೋಮುಖ ಅಭಿವೃದ್ಧಿಗಾಗಿ ಒದಗಿಸಿದ್ದ ₹60,350 ಕೋಟಿಗಳಲ್ಲಿ ₹47,186 ಕೋಟಿ ಗಳನ್ನು ವ್ಯಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ (ಪುಟ 81).

ಎಲ್ಲ ₹60,350 ಕೋಟಿಗಳನ್ನು ಏಕೆ ಖರ್ಚು ಮಾಡಲು ಆಗಲಿಲ್ಲ ಎಂಬ ವಿವರಣೆಯನ್ನು ಅವರು ಕೊಟ್ಟಿಲ್ಲ. ಆದರೆ, ಈಗ ವ್ಯಯವಾಗಿರುವ ₹47,000 ಕೋಟಿಗಳು ದಲಿತರ ಜೀವನವನ್ನು ಎಷ್ಟು ಸುಧಾರಿಸಿವೆ? ಈ ಸಾರಿಯ ಬಜೆಟ್ಟಿನಲ್ಲಿ ಪ್ರಕಟಿಸಿರುವ ಹೊಸ ಸವಲತ್ತುಗಳನ್ನು ನೋಡಿದರೆ ಕೊಳೆಗೇರಿ ಜನರಿಗೆ ಈಗಲೂ ಸರಿಯಾಗಿ ಕುಡಿಯಲು ನೀರಿಲ್ಲ ಮತ್ತು ಮನೆಯಲ್ಲಿ ಅಡುಗೆ ಅನಿಲ ಸಂಪರ್ಕ ಇಲ್ಲ.

‘ಹಣವನ್ನು ಖರ್ಚು ಮಾಡಲಾಗಿದೆ’ ಎಂದು ಹೇಳುವುದು ಬೇರೆ ಮತ್ತು ಅದರಿಂದ ಜನರ ಬದುಕಿನಲ್ಲಿ ‘ಏನು ಬದಲಾವಣೆ ಆಯಿತು’ ಎಂದು ಖಚಿತವಾಗಿ ವಿವರಿಸುವುದು ಬೇರೆ. ‘ಹಣವನ್ನು ಖರ್ಚು ಮಾಡಲಾಯಿತು’ ಎಂದರೆ ಸಚಿವರು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಿಕೊಂಡು ಲೂಟಿ ಹೊಡೆದರು ಎಂದೂ ಅರ್ಥ ಮಾಡಿಕೊಳ್ಳಬಹುದು! ಈಗ ಹಾಗೆ ಆಗಿರಲಾರದೇ? ಹೇಗೆ  ಹೇಳುವುದು?

ಮತ್ತೆ ಮೋದಿ ಅವರ ಭಾಷಣಕ್ಕೆ ಬರುವುದಾದರೆ, ‘ಬಡವರು ಕಷ್ಟಪಟ್ಟು ದುಡಿದು ಮುಂದೆ ಬರುವ ಅವಕಾಶಗಳಿಗಾಗಿ ಕಾಯುತ್ತಿದ್ದಾರೆಯೇ’ ಅಥವಾ ಸರ್ಕಾರ ಕೊಡುವ, ‘ಆಮಿಷಗಳಿಗಾಗಿ ಬಾಯಿಬಿಟ್ಟುಕೊಂಡು ಕುಳಿತಿದ್ದಾರೆಯೇ?’ ಮೋದಿಯವರು 35ರ ಆಸುಪಾಸಿನಲ್ಲಿ ಇರುವ ದೇಶದ ಯುವ ಸಮುದಾಯವನ್ನು ಉದ್ದೇಶಿಸಿ ಹೆಚ್ಚು ಹೆಚ್ಚು ಮಾತನಾಡುತ್ತಿದ್ದಾರೆ. ಆ ಸಮುದಾಯದ ಬಹುಪಾಲು ಮಂದಿ ನಾನಾ ಕಾರಣಗಳಿಗಾಗಿ ಮೋದಿ ಅವರ ಜೊತೆಗೆ  ಇದ್ದಂತೆ ಕಾಣುತ್ತದೆ.

ಸಿದ್ದರಾಮಯ್ಯನವರು ತಮ್ಮ ಬಜೆಟ್ಟಿನ ಆರಂಭದಲ್ಲಿ ಬೆಂಗಳೂರಿಗೆ ‘ಕ್ರಿಯಾಶೀಲ ನಗರ’ ಎಂಬ ಪಟ್ಟ ಸಿಕ್ಕುದನ್ನು ತಮ್ಮ ಸರ್ಕಾರದ ಸಾಧನೆ ಎನ್ನುವಂತೆ ಬಿಂಬಿಸಿಕೊಂಡಿದ್ದಾರೆ. ಆದರೆ, ಅವರ ಬಜೆಟ್ಟಿನಲ್ಲಿ ಯುವ ಸಮುದಾಯಕ್ಕೆ ಅನ್ವಯಿಸುವ ಅಥವಾ ಯುವ ಸಮುದಾಯ ಬಯಸುವ ಮೂಲಸೌಕರ್ಯಗಳ ಕಡೆಗೆ ಎದ್ದುಕಾಣುವಂಥ ಪ್ರಾಶಸ್ತ್ಯ ಸಿಕ್ಕಿಲ್ಲ.

ಸಿಗುವುದು ಸಾಧ್ಯವೂ ಇರಲಿಲ್ಲ. ಏಕೆಂದರೆ ಸಿದ್ದರಾಮಯ್ಯನವರು ಮಾಡ ಬಯಸುವ ರಾಜಕೀಯ, ಯುವ  ಪೀಳಿಗೆಯನ್ನು ಒಳಗೊಂಡಂತೆ ಕಾಣುವುದಿಲ್ಲ. ಅದನ್ನು ಅವರು ತಿಳಿದು ಮಾಡುತ್ತಿದ್ದಾರೆಯೋ ಅಥವಾ ಅವರ ಲಕ್ಷ್ಯದಿಂದ ಅದು ಬಿಟ್ಟು ಹೋಗಿದೆಯೋ ತಿಳಿಯದು.

ಮತಗಟ್ಟೆಗೆ ದೊಡ್ಡ  ಸಂಖ್ಯೆಯಲ್ಲಿ ಬರುವ ಬಡ ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿದ್ದರಾಮಯ್ಯನವರು ಬಜೆಟ್ ಅನ್ನು ರೂಪಿಸಿರುವುದು ಸ್ಪಷ್ಟವಾಗಿದೆ. ಅವರಿಗೆ ಪಕ್ಕದ ತಮಿಳುನಾಡು ರಾಜ್ಯದಲ್ಲಿ ಜಯಲಲಿತಾ ಅವರು ಮತ್ತೆ ಅಧಿಕಾರಕ್ಕೆ ಬಂದುದು ಇಂಥ ಆಮಿಷಗಳ ಕಾರಣವಾಗಿ ಎಂದೂ ಅನಿಸಿದಂತೆ ಕಾಣುತ್ತದೆ.  ‘ನಮ್ಮ ಕ್ಯಾಂಟೀನ್‌’ ಸ್ಥಾಪಿಸಲು ಅವರು ಹೊರಟಿರುವುದರಲ್ಲಿಯೂ ಅದೇ ಯೋಚನೆ ಕಾಣುತ್ತದೆ.

ದಕ್ಷಿಣದ ಕರ್ನಾಟಕ ರಾಜ್ಯವನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಬಯಸುವ ಹಾಗೆಯೇ ಇದನ್ನು ತನ್ನ ವಶದಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಬಯಸುವುದೂ ಸಹಜವಾಗಿದೆ. ಆದರೆ, ರಾಜ್ಯದ ಕಾಂಗ್ರೆಸ್‌ ಕೋಟೆಗೆ ಲಗ್ಗೆ  ಹಾಕಲು ಪ್ರಧಾನಿ ಮೋದಿಯವರೇ ಬರಲಿದ್ದರೆ ಅದನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರೇ ಸೇನಾಪತಿಯಾಗಿ ಹೋರಾಡಬೇಕಾಗುತ್ತದೆ.

ದೇಶದಲ್ಲಿ ಈಗಿರುವ ಕಾಂಗ್ರೆಸ್‌ ಪಕ್ಷದ ಸ್ಥಿತಿಯನ್ನು ನೋಡಿದರೆ ಅಲ್ಲಿನ ಪರಪುಟ್ಟ ನಾಯಕರಿಂದ ಸಿದ್ದರಾಮಯ್ಯನವರಿಗೆ ಏನಾದರೂ ಉಪಯೋಗ ಆಗುತ್ತದೆ ಎಂದು ಅನಿಸುವುದಿಲ್ಲ. ಅದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೆಂದೂ ಅಲ್ಲ. ಅದಕ್ಕಾಗಿಯೇ ಅವರು ತಮ್ಮದು ‘ಸಾಮಾಜಿಕ ನ್ಯಾಯದ ಸಿದ್ಧಾಂತ’ ಎಂದು ಹೇಳಿದ್ದಾರೆ ಮತ್ತು ಅದೇ ದೃಷ್ಟಿಯಿಟ್ಟುಕೊಂಡು ಹಾಲಿ ಬಜೆಟ್‌ ಅನ್ನು ಮಂಡಿಸಿದ್ದಾರೆ.

ಆದರೆ, ಪ್ರಧಾನಿಯವರು 2022ರಲ್ಲಿ ಬರುವ ದೇಶದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನವ ಭಾರತವನ್ನು ಕಟ್ಟುವ ಮಾತು ಆಡುತ್ತಿದ್ದಾರೆ. ಕರ್ನಾಟಕಕ್ಕೆ ಈಗ 60 ವರ್ಷ. ಇದು ಒಂದು ಮಹತ್ವದ ಕಾಲಘಟ್ಟ. ಕರ್ನಾಟಕಕ್ಕೆ 75 ವರ್ಷ ತುಂಬಿದಾಗ ಯಾರು ಮುಖ್ಯಮಂತ್ರಿ ಆಗಿರುತ್ತಾರೋ ಯಾರಿಗೆ ಗೊತ್ತು?

ಕರ್ನಾಟಕಕ್ಕೆ 60 ವರ್ಷ ತುಂಬಿದ ಕಾಲಘಟ್ಟದಲ್ಲಿ ಆಡಳಿತ ಮಾಡುತ್ತಿರುವ ಸಿದ್ದರಾಮಯ್ಯನವರು ರಾಜ್ಯವನ್ನು ದೇಶದ ಮಟ್ಟದಲ್ಲಿ, ಜಗತ್ತಿನ ಮಟ್ಟದಲ್ಲಿ ಎತ್ತರದಲ್ಲಿ ಕಟೆದು ನಿಲ್ಲಿಸಲು ಬರೀ ವಿಶ್ವ ಕನ್ನಡ ಸಮ್ಮೇಳನದ ಏರ್ಪಾಟು ಮಾಡಿದರೆ ಸಾಕೇ?

ಅವರು ನವಭಾರತದ ಮಾತು ಆಡಿದರೆ ಇವರು ನವಕರ್ನಾಟಕದ ಮಾತು ಆಡಬೇಕಿತ್ತು. ಅಂಥ ಮಾತು ಬಜೆಟ್ಟಿನಲ್ಲಿ ನನಗೆ ಎಲ್ಲಿಯೂ ಕಾಣಲಿಲ್ಲ. ಅಥವಾ ಅವರ ಪರಿಕಲ್ಪನೆಯ ನವ ಕರ್ನಾಟಕ ಬೇರೆಯದೇ ಆಗಿದ್ದರೂ ಆಗಿರಬಹುದು!

ಬಜೆಟ್ಟು ಎಂದರೆ ಒಂದು ಅವಕಾಶ. ಆಡಳಿತಗಾರರ ಕನಸುಗಳನ್ನು ಬಿಂಬಿಸಲು ಇರುವ ಅವಕಾಶ. ಜನರು ತಮ್ಮ ಕಲ್ಯಾಣಕ್ಕಾಗಿ ಕನಸು ಕಾಣಲು ಇರುವ ಅವಕಾಶ. ಸಿದ್ದರಾಮಯ್ಯನವರು ಆ ಅವಕಾಶವನ್ನು ಬಳಸಿಕೊಂಡಿದ್ದಾರೆಯೇ ಅಥವಾ ಕಳೆದುಕೊಂಡಿದ್ದಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT