ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಮಕ್ಕಳ ಸಮಯ; ಅವರೇ ಯೋಜಿಸಲಿ ರಜೆಯ!

Last Updated 30 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇಂದು ಬಹುತೇಕ ಎಲ್ಲ ಶಾಲೆಗಳ ಶೈಕ್ಷಣಿಕ ವರ್ಷ ಮುಗಿದು, ನಾಳೆಯಿಂದ ಬೇಸಿಗೆಯ ರಜೆಗಳು ಪ್ರಾರಂಭವಾಗಲಿವೆ. ಉರಿಬಿಸಿಲಿನ ನಡುವೆಯೂ ಮಕ್ಕಳ ಕಲರವ ನಮ್ಮ ನಗರಗಳ ರಸ್ತೆಗಳು, ಉದ್ಯಾನಗಳು ಮತ್ತು ಆಟದ ಮೈದಾನಗಳಲ್ಲಿ ಆಗಲೇ ದಟ್ಟವಾಗಿ ಕೇಳಲಾರಂಭಿಸಿದೆ. ಹತ್ತು ತಿಂಗಳ ಕಾಲ ಶಾಲೆಯ ಪಠ್ಯಕೇಂದ್ರಿತ ಚಟುವಟಿಕೆಗಳಲ್ಲಿ ಮಗ್ನರಾಗಿದ್ದ ಮಕ್ಕಳಿಗೆ ಮುಂದಿನ ಎರಡು ತಿಂಗಳು ಶಾಲೆಯ ಸಂಕೋಲೆಗಳಿಲ್ಲ. ತಮಗೆ ಬೇಕಾದಂತೆ ಕಾಲ ಕಳೆಯಲು ಒಂದಿಷ್ಟು ಸ್ವಾತಂತ್ರ್ಯ. ಇದಕ್ಕೆ ಪೋಷಕರು ಸ್ವಲ್ಪ ಅವಕಾಶ ನೀಡಬೇಕಷ್ಟೆ.

ಆದರೆ ಬೇಸಿಗೆಯ ರಜೆಗಳು ಹಿಂದಿನಂತೆ ಉಳಿದಿಲ್ಲ. ಹೀಗೆ ಹೇಳುವಾಗ ಈಗ ಒಂದೆರಡು ದಶಕಗಳ ಹಿಂದೆಯೂ ಅನುಭವಿಸಬಹುದಾಗಿದ್ದ ಬೇಸಿಗೆ ರಜದ ಸುಖವನ್ನು ನೆನೆಸಿಕೊಂಡು ಹಳಹಳಿಕೆಯ ಮಾತುಗಳನ್ನು ಬರೆಯುವುದು ನನ್ನ ಉದ್ದೇಶವಲ್ಲ. ಬದಲಿಗೆ ಇಂದು ರಜೆಯ ಸಂದರ್ಭದಲ್ಲಿ ಸಾಧ್ಯವಿರುವ ಕಲಿಕೆಯ ಸ್ವರೂಪದ ಬಗ್ಗೆ ಕೆಲವು ಟಿಪ್ಪಣಿಗಳನ್ನು ಓದುಗರೊಡನೆ ಹಂಚಿಕೊಳ್ಳಲು ಬಯಸುತ್ತೇನೆ. ಈಗಾಗಲೆ ಮುಂದಿನ ಎರಡು ತಿಂಗಳಲ್ಲಿ ತಮ್ಮ ಮಕ್ಕಳನ್ನು ಯಾವುದರಲ್ಲಾದರೂ ತೊಡಗಿಸಲು ಮಧ್ಯಮವರ್ಗದ ಪೋಷಕರು ತಮಗಿರುವ ಆಯ್ಕೆಗಳನ್ನು ಅಳೆಯತೊಡಗಿದ್ದಾರೆ. ದಿನವಿಡೀ ನಡೆಯುವ ಬೇಸಿಗೆಯ ಶಿಬಿರಗಳ ಜಾಹೀರಾತುಗಳು ಹರಿದಾಡುತ್ತಿವೆ. ಹಣಕ್ಕಾಗಿಯೇ ಇಂತಹ ಶಿಬಿರಗಳನ್ನು ಆಯೋಜಿಸುವವರು ಇದ್ದಾರೆ, ನಿಜ. ಆದರೆ ಮಕ್ಕಳಿಗೆ ಕಲೆ ಮತ್ತು ಕ್ರೀಡೆಗಳನ್ನು ಕಲಿಸುವ ಗಂಭೀರ ಪ್ರಯತ್ನಗಳನ್ನು ಮಾಡುವವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಇಂತಹವರ ಪಟ್ಟಿಯಲ್ಲಿ ರಂಗಾಯಣದಂತಹ ಸರ್ಕಾರಿ ಸಂಸ್ಥೆಗಳು ಇವೆ. ರಾಜ್ಯದ ಹಲವಾರು ಹಿರಿಯ ಮತ್ತು ಕಿರಿಯ ಕಲಾವಿದರು, ಕ್ರೀಡಾಪಟುಗಳು ಇದ್ದಾರೆ. ಇವರಿಂದ ಆಯೋಜಿತವಾಗುವ ಕಾರ್ಯಕ್ರಮಗಳು ಮಕ್ಕಳ ಚುರುಕುತನ, ಹೆಚ್ಚುವರಿ ಶಕ್ತಿಗಳಿಗೆ ಏನಾದರೂ ಕಲಿಕೆಯ ಚೌಕಟ್ಟನ್ನು ಒದಗಿಸಬೇಕೆನ್ನುವ ಉದ್ದೇಶ ಹಾಗೂ ಮಹತ್ವಾಕಾಂಕ್ಷೆಗಳಿಂದ ರೂಪುಗೊಂಡಿವೆ ಎನ್ನುವುದರಲ್ಲಿ ಅನುಮಾನಗಳಿಲ್ಲ.

ಶಾಲೆಯ ಪಠ್ಯಕ್ರಮದೊಳಗೆ ಸಹಪಠ್ಯ (ಕೊ-ಕರಿಕ್ಯುಲರ್) ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಹೆಣೆಯುವುದು ಕಷ್ಟದ ವಿಚಾರ. ಅಂದರೆ ಸಂಗೀತದಂತಹ ಕಲೆಗಳ ಅಭ್ಯಾಸಕ್ಕಾಗಲಿ, ರೊಬಾಟಿಕ್ಸ್‌ನಂತಹ ವಿಜ್ಞಾನದ ಅಂಗಗಳ ಕಲಿಕೆಗಾಗಲಿ ಅಥವಾ ಬ್ಯಾಡ್ಮಿಂಟನ್‌ನಂತಹ ಕ್ರೀಡೆಯ ತರಬೇತಿಗಾಗಲಿ ಶಾಲೆಯ ಪಠ್ಯಕ್ರಮ ಹಾಗೂ ವೇಳಾಪಟ್ಟಿಯಲ್ಲಿ ಸೀಮಿತ ಅವಕಾಶಗಳಿರುತ್ತವೆ. ಶಾಲೆಯೊಳಗೆ ಇಂತಹ ಚಟುವಟಿಕೆಗಳನ್ನು ಆಯೋಜಿಸಿದರೆ ಅದರ ಉದ್ದೇಶ ಮಕ್ಕಳಿಗೆ ಅವರ ನಿತ್ಯದ ಕಲಿಕೆಯ ಕಾರ್ಯಕ್ರಮದಿಂದ ಬಿಡುವು ನೀಡುವುದಾಗಿರುತ್ತದೆ. ಹೆಚ್ಚೆಂದರೆ ಮಕ್ಕಳ ವ್ಯಕ್ತಿತ್ವ ಸುಸಂಗತ (ವೆಲ್-ರೌಂಡೆಡ್) ಆಗಿರಬೇಕೆಂದು ಇರುತ್ತದೆ. ಅಂದರೆ ಶಾಲೆಯ ಸಂದರ್ಭದಲ್ಲಿ ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ತರಬೇತಿಗೆ ಇರುವ ಅವಕಾಶ ಸೀಮಿತ ಮಾತ್ರ. ಇಂತಹ ಚಟುವಟಿಕೆಗಳಲ್ಲಿ ಆಸಕ್ತಿ ಮತ್ತು ಪ್ರತಿಭೆಯಿರುವವರು ಹೆಚ್ಚಿನ ತರಬೇತಿಗಾಗಿ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು.

ನನಗೆ ಆಸಕ್ತಿಯಿರುವುದು ಕಲಿಕೆಯ ಪ್ರಕ್ರಿಯೆಯ ಬಗ್ಗೆ. ಮಕ್ಕಳು ಶಾಲೆಯ ಪಠ್ಯಕ್ರಮದ ವಿಷಯಗಳನ್ನಾಗಲಿ, ಸಹಪಠ್ಯ ಅಥವ ಪಠ್ಯೇತರ ವಿಷಯಗಳನ್ನಾಗಲಿ ಹೇಗೆ ಕಲಿಯುತ್ತಾರೆ ಎಂಬುದರ ಕುರಿತಾಗಿ. ಅಂದರೆ ಕನ್ನಡ ಅಥವಾ ವಿಜ್ಞಾನವನ್ನು ಕಲಿಯುವುದಕ್ಕೂ ಸಂಗೀತ ಅಥವಾ ಕ್ರಿಕೆಟ್ ಕಲಿಯುವುದಕ್ಕೂ ಏನಾದರೂ ವ್ಯತ್ಯಾಸಗಳಿವೆಯೆ? ಅವುಗಳನ್ನು ಕಲಿಯುವ ಉದ್ದೇಶಗಳಲ್ಲಿ ಇರುವ ಭಿನ್ನತೆಗಳೇನು? ಈ ಪ್ರಶ್ನೆಗಳಿಗೆ ಕೆಲವು ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇನೆ.

ಕಲೆ ಅಥವಾ ಕ್ರೀಡೆಗಳನ್ನು ಕಲಿಯುವಾಗ ನಮ್ಮ ಮುಂದಿರುವ ಬಹುದೊಡ್ಡ ಗುರಿಯೆಂದರೆ ವೃತ್ತಿಪರರಾಗಬೇಕೆನ್ನುವುದಲ್ಲ. ಎಲ್ಲ ಮಕ್ಕಳು ವೃತ್ತಿಪರ ಕ್ರಿಕೆಟ್ ಆಟಗಾರರೊ ಇಲ್ಲವೆ ಬಾಲಿವುಡ್ ನಟರೊ ಆಗಲು ಸಾಧ್ಯವಿಲ್ಲ. ಹಾಗಾಗಿ ಬಹುಮಟ್ಟಿಗೆ ಕಲೆ-ಕ್ರೀಡೆಗಳ ಕಲಿಕೆಯ ಉದ್ದೇಶ ನಾನು ಮೇಲೆಯೂ ಗುರುತಿಸಿದಂತೆ ಸುಸಂಗತ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕೆನ್ನುವುದು. ಜೊತೆಗೆ ಸಾಂಘಿಕವಾಗಿ ಚಟುವಟಿಕೆಗಳನ್ನು ಮಾಡಲು ಕಲಿಯುವುದು ಹಾಗೂ ಆ ಮೂಲಕ ಇತರರೊಡನೆ ಹೊಂದಿಕೊಂಡು ತಂಡವೊಂದರಲ್ಲಿ ಕೆಲಸ ಮಾಡುವ ಕ್ಷಮತೆಯನ್ನು ಗಳಿಸಿಕೊಳ್ಳುವುದು ಸಹ ಮತ್ತೊಂದು ಗುರಿಯಾಗಿರುತ್ತದೆ. ಇದಲ್ಲದೆ ನಮ್ಮ ಸಂಸ್ಕೃತಿಯ ವಿಭಿನ್ನ ಆಯಾಮಗಳ ಪರಿಚಯ ಮಾಡಿಕೊಳ್ಳುವುದು ಸಹ ಮತ್ತೊಂದು ಮುಖ್ಯ ಉದ್ದೇಶವಾಗಬಹುದು. ಗಮನಿಸಿ. ಆಧುನಿಕಪೂರ್ವ ಯುಗದಲ್ಲಿ ಕಲೆ ಹಾಗೂ ಕ್ರೀಡೆಗಳು ಒಂದು ರೀತಿಯಲ್ಲಿ ಬದುಕಿನ ಅವಿಭಾಜ್ಯ ಅಂಗವಾಗಿರುತ್ತಿದ್ದವು. ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ಊರಹಬ್ಬಗಳನ್ನು ಆಚರಿಸುವಾಗ ಇಲ್ಲವೆ ಮದುವೆಯಂತಹ ಜೀವನಚಕ್ರದ (ಲೈಫ್‌  ಸೈಕಲ್) ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಹಾಡುಹಸೆ, ನಾಟಕ-ನೃತ್ಯಗಳು ಹಾಗೂ ಕ್ರೀಡೆಗಳು ಬದುಕಿನ ಹಾಸುಹೊಕ್ಕಾಗಿರುತ್ತಿದ್ದವು. ಆಧುನಿಕ ಯುಗದಲ್ಲಿ ಕಲೆ ಮತ್ತು ಬದುಕುಗಳು ಪ್ರತ್ಯೇಕವಾದಂತೆ, ಕಲೆ-ಕ್ರೀಡೆಗಳನ್ನು ಔಪಚಾರಿಕವಾಗಿ ಕಲಿಯಬೇಕಾಗಿದೆ. ಒಂದೆಡೆ ಇದಿರಲಿ.

ಪಠ್ಯ ಮತ್ತು ಪಠ್ಯೇತರ ವಿಷಯಗಳ ಕಲಿಕೆಯ ಪ್ರಕ್ರಿಯೆಯಲ್ಲಿ ಇರುವ ಒಂದೆರಡು ವ್ಯತ್ಯಾಸಗಳನ್ನು ಗುರುತಿಸಬೇಕು. ಶಾಲೆಯ ಪಠ್ಯಕ್ರಮದ ಅಂಗವಾಗಿ ಕನ್ನಡ ಅಥವಾ ಇಂಗ್ಲಿಷ್ ಭಾಷೆಗಳನ್ನು ಹತ್ತಾರು ವರ್ಷಗಳ ಕಾಲ ಕಲಿಯುತ್ತೇವೆ. ಅಕ್ಷರಗಳನ್ನು ಮತ್ತು ಪ್ರಾಥಮಿಕ ಬಳಕೆಗೆ ಬರುವ ಪದಗಳನ್ನು ಕಲಿಯಲೇ ಶಾಲೆಯ ಮೊದಲ ಹಲವು ವರ್ಷಗಳನ್ನು ಮೀಸಲಿಡುತ್ತೇವೆ. ಆದರೆ ಭಾಷೆಗಳ ಅಥವಾ ಗಣಿತದ ಕಲಿಕೆಗೆ ಹೋಲಿಸಿದಾಗ ಸಂಗೀತ ಅಥವಾ ನೃತ್ಯಗಳಂತಹ ಪಠ್ಯೇತರ ಚಟುವಟಿಕೆಗಳ ಮೊದಲ ಪಾಠಗಳ ಕಲಿಕೆ ಹಾಗೂ ಅಭ್ಯಾಸಕ್ಕೆ ಸಿಗುವ ಸಮಯ ಹಾಗೂ ಅವಕಾಶ ಕಡಿಮೆ. ಅಕ್ಷರಗಳನ್ನು ಕಲಿಯಲು, ಅಭ್ಯಾಸ ಮಾಡಲು ದೊರಕುವ ಅವಕಾಶಕ್ಕೂ ಸಂಗೀತದ ಸರಿಗಮ ಕಲಿಯಲು ಸಿಗುವ ಕಾಲವನ್ನೂ ತುಲನೆ ಮಾಡಿ. ಇದರ ಜೊತೆಗೆ ಇಲ್ಲಿರುವ ಮತ್ತೊಂದು ಮುಖ್ಯ ವ್ಯತ್ಯಾಸವನ್ನು ಗಮನಿಸಬೇಕು. ಶಾಲೆಯ ಪಠ್ಯಕ್ರಮದ ಪರೀಕ್ಷೆಗಳಲ್ಲಿ ಅಲ್ಲೊಂದು ಇಲ್ಲೊಂದು ತಪ್ಪು ಮಾಡಿದರೂ ಕಲಿಕೆ ಮುಂದುವರೆಯುತ್ತದೆ. ಆದರೆ ಸಂಗೀತದಲ್ಲಿ ಪರಿಪೂರ್ಣತೆ, ಪಕ್ವತೆ ಬರುವ ತನಕ ಮುಂದಿನ ಪಾಠ ಅಲಭ್ಯ. ಅಂದರೆ ಸಂಗೀತದ ಕಲಿಕೆ ಮತ್ತು ಅಭ್ಯಾಸಗಳಲ್ಲಿ ಪರಿಪೂರ್ಣತೆಯನ್ನೇ ಗುರಿಯಾಗಿಟ್ಟುಕೊಂಡು ಅಭ್ಯಾಸ ನಡೆಸುತ್ತೇವೆ. ವೇದಿಕೆಯ ಮೇಲೆ ಹಾಡುವಾಗ ಅಥವಾ ನರ್ತನ ಮಾಡುವಾಗ ಇಲ್ಲವೆ ನಾಟಕವೊಂದನ್ನು ಪ್ರದರ್ಶಿಸುವಾಗ ಯಾವುದೇ ತಪ್ಪುಗಳನ್ನು ಮಾಡುವಂತಿಲ್ಲ. ಹೀಗೆ ಕಲೆ ಮತ್ತು ಕ್ರೀಡೆಗಳ ಕಲಿಕೆಯಲ್ಲಿ ನಾವು ನಿರೀಕ್ಷಿಸುವ ಪರಿಪೂರ್ಣತೆಯು ಒಟ್ಟಾರೆ ಶಾಲೆಯ ಕಲಿಕೆಯ ಸಂದರ್ಭದಲ್ಲಿಯೂ ಮತ್ತೊಂದು ಮಾದರಿಯಾಗಬಹುದು.

ಕ್ರೀಡೆಗಳ ಕಲಿಕೆ- ತರಬೇತಿಗಳ ಸಂದರ್ಭದಲ್ಲಿ ಕೆಲವು ಹೊಸ ಒಳನೋಟಗಳು ಇತ್ತೀಚಿನ ದಿನಗಳಲ್ಲಿ ಲಭ್ಯವಾಗುತ್ತಿವೆ. ಬೇಸಿಗೆಯ ಶಿಬಿರವೊಂದರಲ್ಲಿ ಕ್ರಿಕೆಟ್ ಅಥವಾ ಚೆಸ್‌ನಂತಹ ಕ್ರೀಡೆಯೊಂದನ್ನು ಕಲಿಯಲಾರಂಭಿಸುವ ಮಗು ಒಂದು ಕ್ರೀಡೆಯನ್ನು ಮಾತ್ರ ಆಯ್ಕೆ ಮಾಡಿಕೊಂಡು, ನಿರಂತರವಾಗಿ ಅಭ್ಯಾಸ ಮಾಡಿದರೆ ಅದನ್ನು ಚೆನ್ನಾಗಿ ಕಲಿಯಬಹುದು ಮಾತ್ರವಲ್ಲ, ಯಶಸ್ಸನ್ನು ಪಡೆಯಬಹುದು ಎಂಬ ನಂಬಿಕೆಯನ್ನು ಈಗ ಪ್ರಶ್ನಿಸಲಾಗುತ್ತಿದೆ. ಹತ್ತು ಸಾವಿರ ಗಂಟೆ ಅಭ್ಯಾಸ ಮಾಡಿದರೆ ಯಾವುದೇ ಕ್ರೀಡೆಯಲ್ಲಿ ಅತಿಜಾಣ (ಜೀನಿಯಸ್) ಆಗಬಹುದು ಎನ್ನುವುದನ್ನು ಪ್ರಶ್ನಿಸುವವರು ಹೆಚ್ಚಾಗಿದ್ದಾರೆ. ಅದಕ್ಕೆ ಕಾರಣವಿಷ್ಟೆ. ಕ್ರೀಡೆಯಲ್ಲಿ ಯಶಸ್ಸನ್ನು ಕೊಡುವುದು ಏನು ಎನ್ನುವುದರ ಬಗ್ಗೆ ಪ್ರಶ್ನೆಗಳಿರುವುದರಿಂದ. ಅಭ್ಯಾಸವೆ, ತರಬೇತಿಯೆ, ದೈಹಿಕ ಸಾಮರ್ಥ್ಯವೆ, ಇಲ್ಲವೆ ಮಾನಸಿಕ ಸ್ಥೈರ್ಯವೆ?

ಬಹುತೇಕ ಒಲಿಂಪಿಕ್ ಪದಕ ವಿಜೇತರು ಹದಿಹರೆಯವನ್ನು ಪ್ರವೇಶಿಸುವ ಮೊದಲೇ ತಮ್ಮ ಪ್ರತಿಭೆಯ ಸೂಚನೆಯನ್ನು ನೀಡಿರುತ್ತಾರೆ ಹಾಗೂ ಯಶಸ್ಸಿಗೆ ಅಗತ್ಯವಾದ ತರಬೇತಿಯನ್ನು ಪ್ರಾರಂಭಿಸುತ್ತಾರೆ. ಆದರೆ ಅವರ ಪ್ರತಿಭೆಯನ್ನು ಸಾಣೆ ಹಿಡಿಯುವ ಕೆಲಸ ಕೇವಲ ಒಂದೇ ಕ್ರೀಡೆಯನ್ನು ಅಭ್ಯಾಸ ಮಾಡುವುದರಿಂದ ಆಗುವುದಿಲ್ಲ. ಟೆನಿಸ್ ಆಟಗಾರ ರೋಜರ್ ಫೆದರರ್ ತನ್ನ ಬಾಲ್ಯದಲ್ಲಿ ಟೆನಿಸ್ ಜೊತೆಗೆ ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌ ಮತ್ತಿತರ ಆಟಗಳನ್ನು ಆಡಿದ್ದರಿಂದ ಕಲಿತ ಪಾಠಗಳು ಅಮೂಲ್ಯವಾದವು ಎಂದು ಹೇಳುತ್ತಾರೆ. ಪ್ರತಿಯೊಂದು ಕ್ರೀಡೆಯಿಂದಲೂ ಕಾಲ್ಚಳಕ, ದೇಹದ ತೂಕವನ್ನು ವಿತರಿಸುವುದು, ಕ್ರೀಡಾಂಗಣದೊಳಗಿರುವ ಸ್ಥಳದ ಅರಿವು, ತನ್ನ ತಂಡದ ಇತರ ಸದಸ್ಯರ ಶಕ್ತಿ - ಸಾಮರ್ಥ್ಯಗಳನ್ನು ಅಳೆಯುವ ಶಕ್ತಿ ಇತ್ಯಾದಿಗಳೆಲ್ಲವನ್ನೂ ಕಲಿಯುತ್ತೇವೆ. ಐಪಿಎಲ್‌ನಲ್ಲಿ ಬೆಂಗಳೂರಿನ ತಂಡದ ಪರವಾಗಿ ಆಡುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಎ.ಬಿ. ಡಿವಿಲಿಯರ್ಸ್ ಹೀಗೆ
ಯೌವನದಲ್ಲಿ ಹಲವಾರು ಕ್ರೀಡೆಗಳನ್ನು ಆಡುತ್ತಿದ್ದ ಮತ್ತೊಬ್ಬ ಆಟಗಾರ. ಡಿವಿಲಿಯರ್ಸ್ ತನ್ನ ಬಾಲ್ಯ ಮತ್ತು ಹದಿಹರೆಯದಲ್ಲಿ ಟೆನಿಸ್ ಹಾಗೂ ರಗ್ಬಿಗಳನ್ನು ಗಂಭೀರವಾಗಿ ಸ್ಪರ್ಧಾತ್ಮಕವಾಗಿ ಆಡುತ್ತಿದ್ದರು. ಬಹುಶಃ ಅವರ 15ನೆಯ ವಯಸ್ಸಿನಲ್ಲಿ ಡಿವಿಲಿಯರ್ಸ್‌ಗಿಂತ ಉತ್ತಮರಾದ ಕ್ರಿಕೆಟ್ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ಹಲವರು ಇದ್ದಿರಬಹುದು. ಆದರೆ ಇಂದು ಟೆನಿಸ್‌ನ ಹೊಡೆತಗಳನ್ನು ಮತ್ತು ರಗ್ಬಿಯಿಂದ ಕಲಿತ ಕ್ರೀಡಾಂಗಣದೊಳಗಣ ಸ್ಥಳದ ಅರಿವು ಡಿವಿಲಿಯರ್ಸ್‌ರನ್ನು ಪ್ರಪಂಚದ ಅತ್ಯುತ್ತಮ ಬ್ಯಾಟುಗಾರನನ್ನಾಗಿಸಿದೆ. ಇಂತಹ ರೀತಿಯ ನೂರಾರು ಉದಾಹರಣೆಗಳು ನಮ್ಮ ಮುಂದಿವೆ.

ಬೇಸಿಗೆಯ ರಜೆಗೆ, ಶಿಬಿರಗಳಿಗೆ, ಪಠ್ಯೇತರ ಚಟುವಟಿಕೆಗಳಿಗೆ ಮತ್ತೆ ವಾಪಸಾಗೋಣ. ಮಕ್ಕಳಿಗೆ ಖುಷಿ ಕೊಡುವ ಒಂದಷ್ಟು ಚಟುವಟಿಕೆಗಳನ್ನು, ಸಾಧ್ಯವಾದಷ್ಟು ಮುಕ್ತವಾಗಿರುವ ಕಲಿಕೆಯ ವಾತಾವರಣದಲ್ಲಿ ಸಂಘಟಿಸಲು ಸಾಧ್ಯವಾದರೆ ಅದು ಒಳ್ಳೆಯದೇನೊ. ನಾನು ಮೇಲೆ ಗುರುತಿಸಿದಂತೆ ಪ್ರದರ್ಶನಕಲೆಗಳ ಕಲಿಕೆ ಬೇರೆಯ ರೀತಿಯ ಕಲಿಕೆಯ ಮಾದರಿಯನ್ನು, ತೀವ್ರತೆಯನ್ನು ಮತ್ತು ಪರಿಪೂರ್ಣತೆಯ ನಿರೀಕ್ಷೆಯನ್ನು ಮಕ್ಕಳ ಮುಂದಿಡುತ್ತದೆ. ಇದು ಬಹುಶಃ ಮಕ್ಕಳಿಗೆ ಉಪಯುಕ್ತವಾಗುವ ಅನುಭವವೆಂದು ನನಗನ್ನಿಸುತ್ತದೆ. ಹಾಗೆಯೇ ಕ್ರೀಡೆಗಳ ಸಂದರ್ಭದಲ್ಲಿ ಒಂದು ಸುರಂಗದೃಷ್ಟಿಯನ್ನು ನಮ್ಮದಾಗಿಸಿಕೊಳ್ಳುವುದರ ಬದಲು ಹಲವು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಾದರೆ ಉತ್ತಮ.

ಇವೆಲ್ಲವುಗಳ ನಡುವೆ ತಮ್ಮ ಸಮಯವನ್ನು ತಾವೇ ಯೋಜಿಸಿಕೊಳ್ಳಲು, ನಿರ್ವಹಿಸಲು ಮಕ್ಕಳಿಗೆ ಅವಕಾಶವಾದರೆ ಅದು ಬೇಸಿಗೆ ರಜೆಯ ಸದುಪಯೋಗ ಮಾಡಿಕೊಂಡಂತೆ. ಶಾಲಾ ಕೇಂದ್ರಿತ ಚಟುವಟಿಕೆಗಳು ವರ್ಷದ ಹತ್ತು ತಿಂಗಳನ್ನು ತಮ್ಮದಾಗಿಸಿಕೊಂಡಿರುತ್ತವೆ. ಈ ಎರಡು ತಿಂಗಳು ಮಕ್ಕಳೇ ತಮಗೆ ತೋಚಿದಂತೆ ಅವರ ಸಮಯವನ್ನು ವ್ಯಯಿಸಲಿ. ಅದರಿಂದಲೂ ಅವರು ಮತ್ತೇನನ್ನೋ ಕಲಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT