ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಂಥಾ ಮಹಿಳಾ ಸಬಲೀಕರಣ?

Last Updated 4 ಜುಲೈ 2011, 19:30 IST
ಅಕ್ಷರ ಗಾತ್ರ

ಕಳೆದ ಸೋಮವಾರದಂದು ಗುಲ್ಬರ್ಗಾ ಜಿಲ್ಲಾ ಪಂಚಾಯಿತಿ ಭಾರತೀಯ ಪ್ರಜಾಸತ್ತೆ ಹಾಗೂ ಮಹಿಳಾ ವಿಮೋಚನಾ ಹೋರಾಟಗಳೆರಡೂ ತಲೆ ತಗ್ಗಿಸುವಂಥ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಮಹಿಳೆಯರಿಗೆ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪುರುಷರೊಡನೆ ಸಮಪಾಲು ನೀಡಬೇಕೆಂಬ ಸಂಘರ್ಷ ಸಾಕಾರವಾದ ಸಂತೋಷ ನಮ್ಮಳಗಿಳಿಯುವ ಮೊದಲೇ `ಹೆಂಗಸರಿಗೆ ಅಧಿಕಾರ ಕೊಟ್ಟರೆ ಹೀಗೆ~ ಎನ್ನುವ ಹೀಯಾಳಿಕೆಯ ಮಾತು ಮತ್ತೆ ಮೊಳಗುತ್ತಿದೆ. ಇದಕ್ಕೆ ಕಾರಣವಾದ ಪರಿಸ್ಥಿತಿಗೆ ಕೇವಲ ಭಾವನಾತ್ಮಕವಾಗಿ ಪ್ರತಿಕ್ರಿಯಿಸದೆ, ಇಡೀ ಪ್ರಕರಣವನ್ನು ವೈಚಾರಿಕ ವಿಶ್ಲೇಷಣೆಗೆ ಒಳಪಡಿಸಿ ಮಹಿಳಾ ಮೀಸಲಾತಿಯನ್ನು ಒಂದು ಅರ್ಥಪೂರ್ಣ ಅನುಭವವನ್ನಾಗಿಸುವ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಲು ಸಮಯ ಸನ್ನಿಹಿತವಾಗಿದೆ.

ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯ ಒಟ್ಟು ಸದಸ್ಯರ ಸಂಖ್ಯೆ ನಲವತ್ತಮೂರು (43). ಅದರಲ್ಲಿ 23 ಮಂದಿ ಮಹಿಳೆಯರು. ಜೂನ್ 27 ರಂದು ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆ ನಡೆಯಬೇಕಾಗಿದ್ದು, ಈ ಮಹಿಳೆಯರೆಲ್ಲಾ ಅಲ್ಲಿ ಹಾಜರಿದ್ದುದೇ ಅಲ್ಲದೆ ತಮ್ಮ ಹಾಜರಾತಿಯನ್ನು ದಾಖಲಿಸಿಯೂ ಆಗಿತ್ತು. ಆದರೆ, ಇವರಲ್ಲಿ ಒಬ್ಬರನ್ನು ಹೊರತುಪಡಿಸಿ, ಉಳಿದವರೆಲ್ಲಾ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದದ್ದೇ ಅಲ್ಲದೆ, ಇನ್ನು ಮುಂದೆ ತಮ್ಮ `ಪತಿರಾಯ~ರುಗಳನ್ನು ಸಭೆಗೆ ಆಹ್ವಾನಿಸಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಅಧ್ಯಕ್ಷರ ಮುಂದಿಟ್ಟರು. `ನಮಗೆ ರಾಜಕೀಯ ಅನುಭವವಾಗಲಿ, ಜ್ಞಾನವಾಗಲಿ ಇಲ್ಲದಿರುವ ಕಾರಣ ಪಂಚಾಯತಿ ವ್ಯವಸ್ಥೆಯಲ್ಲಿ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ನಾವು ಅಸಮರ್ಥರು, ಮೇಲಾಗಿ ಅಧಿಕಾರಿಗಳು ತಮ್ಮ ಮಾತುಗಳಿಗೆ ಬೆಲೆ ಕೊಡುವುದಿಲ್ಲ. ಆದ್ದರಿಂದ ನಮ್ಮ ಪತಿಯ ಸಹಭಾಗಿತ್ವ ಅತ್ಯಗತ್ಯ~ ಎನ್ನುವುದು ಈ ಮಹಿಳಾ ಸದಸ್ಯರ ವಾದವಾಗಿತ್ತು.

ಸದಸ್ಯರ ಬೇಡಿಕೆಯೇನಾದರೂ ಇರಲಿ, ಅದನ್ನು ಪ್ರಜಾಸತ್ತಾತ್ಮಕ ನಿಯಮಗಳ ಚೌಕಟ್ಟಿನಲ್ಲಿಟ್ಟು `ಸರಿ~ `ತಪ್ಪು~ಗಳ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡಬೇಕಾದ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತ ವ್ಯಕ್ತಿಯ ವರ್ತನೆ ಈ ಪ್ರಕರಣದ ಅತ್ಯಂತ ಅಸಹನೀಯ ಮುಖ. ಮಹಿಳಾ ಸದಸ್ಯರ ಒತ್ತಾಯಕ್ಕೆ ಮಣಿದ ಈ ಅಧ್ಯಕ್ಷರು ಸೋಮವಾರ ಸಂಜೆಯೇ ಮತ್ತೊಂದು ಸಭೆಯನ್ನು ಕರೆದು, ಅದರಲ್ಲಿ ಭಾಗವಹಿಸಲು ಅಧಿಕೃತ ಸದಸ್ಯರು ಹಾಗೂ ಅಧಿಕಾರಿಗಳ ಜೊತೆಗೆ, ಅನಧಿಕೃತ ಅಧಿಕಾರ ಕೇಂದ್ರಗಳಾಗಿ ಹೊರ ಹೊಮ್ಮಲು ಹವಣಿಸಿದ್ದ ಪತಿ ಮಹಾಶಯರಿಗೂ ಆಹ್ವಾನವಿತ್ತದ್ದು ಸಂವಿಧಾನದತ್ತವಾದ ಸ್ಥಾನಕ್ಕೆ ಮಾಡಿದ ಅಪಚಾರ.

ಈ `ಅನೌಪಚಾರಿಕ~ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸದಸ್ಯರ ಪತಿಗಳು ಪಂಚಾಯಿತಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮಗೆ ಎಲ್ಲ ಮಾಹಿತಿಯನ್ನು ನೀಡಬೇಕು ಹಾಗೂ ಸಭೆಗಳಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಇಟ್ಟರಂತೆ. ಎಲ್ಲಕ್ಕಿಂತ ಮಿಗಿಲಾಗಿ, ಪ್ರತಿ ಸಾಮಾನ್ಯ ಸಭೆಗೂ ಮೂರು ದಿವಸಗಳ ಮೊದಲೇ ಈ `ಅನಧಿಕೃತ~ ಸದಸ್ಯರನ್ನೊಳಗೊಂಡಂತೆ ಪೂರ್ವಭಾವಿ ಸಭೆಯನ್ನು ಕರೆದು ಸಾಮಾನ್ಯ ಸಭೆಯ ಕಾರ್ಯಸೂಚಿ ಹಾಗೂ ಅಲ್ಲಿ ಚರ್ಚೆಯಾಗಲಿರುವ ವಿಷಯಗಳ ಬಗ್ಗೆ ಇವರಿಗೆ ಮಾಹಿತಿಯನ್ನೊದಗಿಸಲು ಕೂಡ ಸೋಮವಾರ ಸಂಜೆ ನಡೆದ ಅನೌಪಚಾರಿಕ ಸಭೆಯಲ್ಲಿ ತೀರ್ಮಾನಿಸಲಾಗಿತ್ತಂತೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇಂಥ ಘಟನೆ ನಡೆದದ್ದು ಇದೇ ಪ್ರಥಮ ಬಾರಿಗೆ ಎಂದು ಕೂಡ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಂವಿಧಾನಕ್ಕೇ ಅವಮಾನವಾಗುವಂಥ ರೀತಿಯಲ್ಲಿ ಮಹಿಳಾ ಸದಸ್ಯರ ಪುರುಷ ಸಂಬಂಧಿಗಳು ವರ್ತಿಸುತ್ತಿದ್ದಾಗ, ಪಂಚಾಯಿತಿಯ ಪುರುಷ ಸದಸ್ಯರು ಯಾವುದೇ ಬಗೆಯ ಪ್ರತಿಭಟನೆಯನ್ನು ವ್ಯಕ್ತಪಡಿಸದಿದ್ದುದು ಅಥವಾ ನಿಯಮಗಳ ಪ್ರಕಾರ ಸಭೆ ನಡೆಯಲೇ ಬೇಕೆಂದು ಪಟ್ಟು ಹಿಡಿಯದೆ ಇದ್ದುದು ಆಶ್ಚರ್ಯ!

ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿರುವ ಘಟನೆಗಳು, ಮಹಿಳೆಯರಿಗೆ ರಾಜಕೀಯ ಮೀಸಲಾತಿಯನ್ನು ನೀಡುವುದರ ಮೂಲಕ ಲಿಂಗ ಸೂಕ್ಷ್ಮವಾದ ಆಡಳಿತ ವ್ಯವಸ್ಥೆಯ ಉದಯವಾಗಲಿದೆ ಎಂಬ ಆಶಯವನ್ನು ಎಲ್ಲೋ ಒಂದೆಡೆ ಹುಸಿ ಮಾಡುತ್ತಿವೆ ಎನಿಸದಿರುವುದಿಲ್ಲ. ಹಾಗೆ ನೋಡಿದರೆ ರಾಜಕೀಯ ಅಧಿಕಾರದಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡಬೇಕೆಂಬ ಹೋರಾಟ ಹೆಜ್ಜೆ ಹೆಜ್ಜೆಗೂ ತೀವ್ರ ವಿರೋಧಗಳನ್ನು ಎದುರಿಸಿಯೇ ಒಂದು ಘಟ್ಟವನ್ನು ತಲುಪಿದ್ದು. ಅದರಲ್ಲೂ ಅವರಿಗೆ ಶೇಕಡ 50ರಷ್ಟು ಸ್ಥಾನಗಳನ್ನು ಕಾದಿರಿಸಬೇಕೆಂಬ ಪ್ರಸ್ತಾವನೆಗಂತೂ ತೀವ್ರ ವಿರೋಧ ವ್ಯಕ್ತವಾಗಿತ್ತು.

ನೂರಾರು ವರ್ಷಗಳ ಕಾಲ ರಾಜಕೀಯ ಅಧಿಕಾರದ ಚುಕ್ಕಾಣಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಪುರುಷಪ್ರಧಾನ ವ್ಯವಸ್ಥೆ ಈ ಅಧಿಕಾರದ ಮರುಹಂಚಿಕೆಯನ್ನು ಸುಲಭವಾಗಿ ಸ್ವೀಕಾರ ಮಾಡಲಿಲ್ಲ. ಮಹಿಳೆಯರಿಗೆ ರಾಜಕೀಯ ಅನುಭವದ ಕೊರತೆಯಿರುವುದರಿಂದ ಅವರಿಗೆ ಅಧಿಕಾರದ ಜವಾಬ್ದಾರಿಯನ್ನು ಕೊಡುವುದು ತರವಲ್ಲ ಎಂಬ ವಾದ ಒಂದೆಡೆ, ತಮ್ಮದಾಗಬಹುದಾಗಿದ್ದ ಸ್ಥಾನಗಳು ಮಹಿಳೆಯರ ಪಾಲಿಗೆ ಹೋಗುತ್ತಿವೆಯಲ್ಲ ಎಂಬ ಅನೇಕ ಪುರುಷರ `ಸಂಕಟ~ ಮತ್ತೊಂದೆಡೆ- ಇವುಗಳ ನಡುವೆ ಸಿಲುಕಿರುವ ಮಹಿಳಾ ಮೀಸಲಾತಿ ಈಗಾಗಲೇ ಒಮ್ಮೆ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದ ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯಲ್ಲೇ ಮತ್ತೊಮ್ಮೆ ವೈರುಧ್ಯಗಳ ಸುಳಿಯಲ್ಲಿ
ಸಿಲುಕಿರುವುದು `ನಗುವವರ ಮುಂದೆ ಎಡವಿ ಬಿದ್ದಂಥ~ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿಯ ಚುನಾವಣೆಗಳು ಘೋಷಣೆಯಾಗಿ, ಮೀಸಲಾತಿ ಪ್ರಕಟವಾದಾಗ ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯಲ್ಲಿ ನಿಗದಿತ ಶೇಕಡ 50 ಕ್ಕಿಂತ ಹೆಚ್ಚು ಸ್ಥಾನಗಳನ್ನು (43ರಲ್ಲಿ 23) ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಕೆಲವರು ಆಕ್ಷೇಪವನ್ನೆತ್ತಿ, ರಾಜ್ಯ ಉಚ್ಚ ನ್ಯಾಯಾಲಯದ ಗುಲ್ಬರ್ಗಾ ಸಂಚಾರಿ ಪೀಠದಲ್ಲಿ ಅಹವಾಲನ್ನು ಸಲ್ಲಿಸಿದ್ದರು. ಇದನ್ನು ಎತ್ತಿ ಹಿಡಿದಿದ್ದ ನ್ಯಾಯಾಲಯ ಚುನಾವಣೆಗೆ ತಡೆಯಾಜ್ಞೆಯನ್ನು ನೀಡಿತ್ತು. ಆದರೆ ಒಂದು ವಾರದ ನಂತರ ಇದೇ ಪೀಠ ತಡೆಯಾಜ್ಞೆಯನ್ನು ತೆರವುಗೊಳಿಸಿ, ಚುನಾವಣೆಗಳು ನಡೆಯಲು ದಾರಿ ಮಾಡಿಕೊಟ್ಟುದ್ದನ್ನು ಇಲ್ಲಿ ಸ್ಮರಿಸಬಹುದು. ಹೀಗೆ ನ್ಯಾಯಾಲಯವೇ ಎತ್ತಿ ಹಿಡಿದ ಆಯ್ಕೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜಗತ್ತಿಗೆ ತಮ್ಮ ಸಾಮರ್ಥ್ಯವನ್ನು ತೋರಿಸುವುದನ್ನು ಬಿಟ್ಟು, ಈ ಮಹಿಳಾ ಸದಸ್ಯರು ನ್ಯಾಯಬಾಹಿರವಾದ ಮಾರ್ಗವನ್ನು ಅನುಸರಿಸಿ ಅಧಿಕಾರದಲ್ಲಿ ಉಳಿಯುವ ಕೆಲಸಕ್ಕೆ ಕೈ ಹಾಕಿದ್ದು ವಿಷಾದನೀಯ.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಅಸ್ತಿತ್ವಕ್ಕೆ ಬಂದಾಗಿನಿಂದ ಹೆಂಡತಿಯ ಪರ ಅಧಿಕಾರ, ಚಲಾಯಿಸುವ ಗಂಡಂದಿರ ಕಥೆಗಳನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಂಥ ಪ್ರಸಂಗಗಳು ವರದಿಯಾದಾಗ ಅದಕ್ಕೆ ಪ್ರತಿಕ್ರಿಯಿಸಬೇಕೆಂಬ ಆಸಕ್ತಿಯನ್ನೇ ಅನೇಕರು ಕಳೆದುಕೊಂಡಿದ್ದಾರೆ. ಪತ್ನಿ ಪ್ರಜಾಸತ್ತಾತ್ಮಕವಾಗಿ ಪಡೆದಿರುವ ಅಧಿಕಾರವನ್ನು ಸಂಪೂರ್ಣವಾಗಿ ತನ್ನ ಕೈಗೆತ್ತಿಕೊಂಡು, ಆಕೆಯನ್ನು ಮನೆಯಿಂದ ಹೊರಗಡೆಯೇ ಹೋಗಲು ಬಿಡದೆ, ಕಚೇರಿ ಕಡತಗಳನ್ನು ಮನೆಗೆ ತರಿಸಿಕೊಂಡು ತಾನೇ ಸಹಿ ಮಾಡುವ ಗಂಡನಿಂದ ಹಿಡಿದು, ಪಂಚಾಯಿತಿಯ ಸಭೆಗಳಲ್ಲಿ ಪತ್ನಿ ಕೂರಬೇಕಾದ ಕುರ್ಚಿಯಲ್ಲಿ ತಾನೇ ಕೂತು ಅಧಿಕಾರ ಚಲಾಯಿಸುವ ಗಂಡನವರೆಗೆ ಅನೇಕ `ಪುರುಷ ಮಾದರಿಗಳು~ ದೇಶದಾದ್ಯಂತ ನಮಗೆ ದೊರೆಯುತ್ತವೆ.

ದೇಶದ ನಾನಾ ಭಾಗಗಳಲ್ಲಿ ಮಹಿಳಾ ಚುನಾಯಿತ ಪ್ರತಿನಿಧಿಗಳ ಕಾರ್ಯವೈಖರಿಯ ಬಗ್ಗೆ ನಕಾರಾತ್ಮಕ ವರದಿಗಳು ಮಹಿಳಾ ಮೀಸಲಾತಿ ನೀತಿ ಜಾರಿಗೆ ಬಂದಾಗಿನಿಂದ ಬರುತ್ತಲೇ ಇವೆ. ಸಂಸತ್ತಿನಲ್ಲಿ, ವಿಧಾನ ಸಭೆಗಳಲ್ಲಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಒಮ್ಮೆಯೂ ಬಾಯಿ ತೆರೆಯದ ಪುರುಷ ಸದಸ್ಯರು ಅನೇಕ ಮಂದಿ ಇದ್ದಾಗ್ಯೂ, ಈ ವಿಷಯ ಎಂದಿಗೂ ಭಾರಿ ಸುದ್ದಿ ಮಾಡಿಲ್ಲ. ಅದೇ `ಮಾತನಾಡದ ಮಹಿಳೆಯರ~ ಬಗ್ಗೆ ಮಾತ್ರ ಪುಂಖಾನುಪುಂಖವಾಗಿ ಕಥೆಗಳು ಮೂಡಿ ಬರುತ್ತಲೇ ಇರುತ್ತವೆ. ಪುರುಷನ ಪರಮಾಧಿಕಾರವನ್ನೂ ಸ್ತ್ರೀಯ ಪರಾಧೀನತೆಯನ್ನೂ ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವ ಮನಸ್ಸುಗಳಿಗೆ, ಮಹಿಳೆಯರ ಸಾಫಲ್ಯಗಳನ್ನು ಗುರುತಿಸುವುದಕ್ಕಿಂತ ಅವರ ವೈಫಲ್ಯಗಳನ್ನು ವೈಭವೀಕರಿಸುವುದರಲ್ಲಿ ಹೆಚ್ಚು ತೃಪ್ತಿ. ಇಂಥ ಘಟನೆಗಳಿಗೆ ದೊರೆಯುತ್ತಿರುವ ವ್ಯಾಪಕ ಪ್ರಚಾರದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇನ್ನೂ ಅಪೂರ್ಣವಾಗಿರುವ ಮಹಿಳಾ ಮೀಸಲಾತಿಯ ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಎನ್ನುವುದಂತೂ ಸತ್ಯ.

ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯ ಘಟನೆಯೂ ಸೇರಿದಂತೆ ಇಂಥ ಬಹುತೇಕ ಪ್ರಸಂಗಗಳಲ್ಲಿ ಎದ್ದು ಕಾಣುವಂಥ ಒಂದು ವಿಚಾರವೆಂದರೆ ಅತ್ಯಧಿಕ ಸಂಖ್ಯೆಯ ಚುನಾಯಿತ ಮಹಿಳಾ ಸದಸ್ಯರಿಗೆ ಸಾರ್ವಜನಿಕ ಜೀವನದ ಬಗ್ಗೆ ಯಾವುದೇ ಅನುಭವವಿಲ್ಲದಿರುವುದು. `ಮನೆ~ ಎಂಬ ಸೀಮಿತ ವಲಯದಲ್ಲೇ  ತಮ್ಮ ಕುಟುಂಬದ ಸದಸ್ಯರು ಅಥವಾ ಆಯ್ದ ಕೆಲ ಸ್ನೇಹಿತರೊಡನೆ ಮಾತ್ರ ಸಂಪರ್ಕವನ್ನಿಟ್ಟುಕೊಂಡು ಬದುಕನ್ನು ಸವೆಸುತ್ತಿದ್ದವರನ್ನು ಇದ್ದಕ್ಕಿದ್ದ ಹಾಗೆ ಅಧಿಕಾರವೆಂಬ ಸಂಕೀರ್ಣ ವಲಯದಲ್ಲಿ ತಂದು ಬಿಟ್ಟಾಗ ಅವರು ಗಲಿಬಿಲಿಗೊಳ್ಳುವುದು ಸಹಜವೇ ಸರಿ. ಹಾಗೆಂದ ಮಾತ್ರಕ್ಕೆ ತಮ್ಮ ಅಸಹಾಯಕತೆ-ಅಜ್ಞಾನಗಳನ್ನೇ ಬಂಡವಾಳವನ್ನಾಗಿರಿಸಿಕೊಂಡು ಮಹಿಳೆಯರು ಪ್ರಜಾಸತ್ತೆಯ ಮೂಲ ತತ್ವಗಳಿಗೇ ಭಂಗ ಬರುವಂತೆ ನಡೆದುಕೊಳ್ಳುವುದನ್ನು ನಾವು ಸಹಿಸಬೇಕಿಲ್ಲ. ಇನ್ನು ಮುಂದಾದರೂ ಪುರುಷ ಅವಲಂಬಿತ ಹಾಗೂ ಪುರುಷ ಕೇಂದ್ರಿತ ರಾಜಕಾರಣವನ್ನು ಪ್ರಶ್ನಿಸಿ-ಪ್ರತಿಭಟಿಸುವಂಥ ಸಮರ್ಥ ಮಹಿಳಾ ನಾಯಕತ್ವದ ಸೃಷ್ಟಿಗೆ ಈ ಸಮಾಜ ಬದ್ಧವಾಗಬೇಕು.

ಮಹಿಳೆಯರನ್ನು ಮುಂದಿಟ್ಟುಕೊಂಡು ತಮ್ಮ ತಮ್ಮ ವೈಯಕ್ತಿಕ ಕಾರ್ಯಸೂಚಿಗಳನ್ನು ಸಾಧಿಸಿಕೊಳ್ಳುತ್ತಿರುವ ಮಂದಿ ಇಂದಿಗೂ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಎಲ್ಲ ಹಂತಗಳಲ್ಲೂ ರಾರಾಜಿಸುತ್ತಿರುವುದರಿಂದಲೇ ಮಹಿಳೆಯರು ಪುರುಷರ ಕೈಗೊಂಬೆಗಳ ಹಾಗೆ ವರ್ತಿಸಬೇಕಾದಂಥ ಪರಿಸ್ಥಿತಿ ಸೃಷ್ಟಿಯಾಗಿರುವುದು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡ 50 ರಷ್ಟು ಮೀಸಲಾತಿಯನ್ನು ನೀಡುವುದನ್ನಂತೂ ತಪ್ಪಿಸಲಾಗಲಿಲ್ಲ. ಆದ್ದರಿಂದ ಅವರು ಸಮರ್ಪಕ ಕಾರ್ಯ ನಿರ್ವಹಿಸಲು ಆಸ್ಪದ ನೀಡದಂತೆ ತಡೆಯೊಡ್ಡುವ ಸಂಚನ್ನು ಪುರುಷ ಪ್ರಧಾನ ವ್ಯವಸ್ಥೆ ರೂಪಿಸುತ್ತಲೇ ಬಂದಿದೆ.

ಮಹಿಳೆಯರು ತಮ್ಮ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಅವಕಾಶಗಳನ್ನು ನಿರಾಕರಿಸಿ, ಅವರಲ್ಲಿ ಕೀಳರಿಮೆ ಬೆಳೆಸಿ ಅವರು ಅಪ್ರಯೋಜಕರು ಎನ್ನುವ ಹಣೆಪಟ್ಟಿ ತೊಡಿಸಿ, ಪುರುಷರ ಸಹಾಯವಿಲ್ಲದೆ ಬದುಕಲು ಸಾಧ್ಯವೇ ಇಲ್ಲ ಎನ್ನುವ ಭಾವನೆಯನ್ನು ಸ್ವತಃ ಮಹಿಳೆಯರೇ ಹೇಳಿಕೊಳ್ಳುವಂಥ ಸ್ಥಿತಿಗೆ ಅವರನ್ನು ತಳ್ಳಲಾಗುತ್ತದೆ. ಕುಟುಂಬದಿಂದ ಹಿಡಿದು ವಿಶಾಲ ಸಮಾಜದವರೆಗೆ ಎಲ್ಲ ಸಂಸ್ಥೆಗಳಲ್ಲೂ ಈ ಪ್ರವೃತ್ತಿ ಕಂಡು ಬರುತ್ತದೆ.

`ಮಹಿಳೆಯರಿಗೆ ರಾಜಕೀಯ ಅನುಭವದ ಕೊರತೆಯಿದೆ, ಆದ್ದರಿಂದ ಅವರು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರು~ ಎಂಬ ಅರ್ಥಹೀನ ವಾದವನ್ನು ಮುಂದಿಟ್ಟುಕೊಂಡು ಮಹಿಳೆಯರ ರಾಜಕೀಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿರುವ ರಾಜಕೀಯ ಪಕ್ಷಗಳು ಈಗಲಾದರೂ ಎಚ್ಚೆತ್ತು ಅವರನ್ನು ರಾಜಕೀಯ ಮುಖ್ಯವಾಹಿನಿಗೆ ತರಲು ಕಾರ್ಯಕ್ರಮಗಳನ್ನು ರೂಪಿಸಲಿ.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿಗೆ ಒಂದು ಅರ್ಥ ಬರಬೇಕಾದರೆ, ಎಲ್ಲ ಚುನಾಯಿತ ಮಹಿಳಾ ಪ್ರತಿನಿಧಿಗಳೂ (ಪಕ್ಷಾತೀತವಾಗಿ) ತಮಗೆ ರಾಜಕೀಯದ ಜ್ಞಾನ-ಅನುಭವಗಳನ್ನು ಪಡೆಯಲು ಅನುಕೂಲವಾಗುವಂಥ ವ್ಯವಸ್ಥೆಯನ್ನು ಆಯಾ ತಾಲೂಕು ಅಥವಾ ಜಿಲ್ಲಾ ಮಟ್ಟದಲ್ಲೇ ಸೃಷ್ಟಿಸಬೇಕೆಂಬ ಒತ್ತಾಯವನ್ನು ಸರ್ಕಾರದ ಮೇಲೆ ತರಬೇಕಾಗುತ್ತದೆ. ಈಗ ಯಾವುದೇ ಬಗೆಯ ತರಬೇತಿ ದೊರೆಯುತ್ತಿಲ್ಲ ಎಂಬುದು ಇದರ ಅರ್ಥವಲ್ಲ. ಆದರೆ ಆ ತರಬೇತಿಗೆ ನಿರಂತರತೆ ಇರಬೇಕು. ಅಷ್ಟೇ ಅಲ್ಲ, ಆಗಿಂದಾಗ್ಗೆ ಅವರ ಕಾರ್ಯವೈಖರಿಯ ಮೇಲೆ ಈ ತರಬೇತಿಯ ಪರಿಣಾಮವನ್ನು ಪರಿಶೀಲಿಸುವಂಥ ವ್ಯವಸ್ಥೆ ಕೂಡ ಸೃಷ್ಟಿಯಾಗಬೇಕು. ಎಲ್ಲಕ್ಕಿಂತ ಮಿಗಿಲಾಗಿ ಪಂಚಾಯಿತಿಗಳ ಸಭೆಗೆ ಅನಧಿಕೃತವಾಗಿ ಹಾಜರಾಗಿ ದಬ್ಬಾಳಿಕೆ ಮಾಡಲೆತ್ನಿಸುವ ಪುರುಷರನ್ನು ಹೊರಗೆ ಹಾಕಲು ಕೇವಲ ಮಹಿಳಾ ಸದಸ್ಯರಷ್ಟೇ ಅಲ್ಲ, ಪುರುಷ ಸದಸ್ಯರೂ ಕೈ ಜೋಡಿಸಬೇಕು.
ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ: editpagefeedback@prajavani.co.i

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT