ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಲ್ಲ ಜುಟ್ಟಿನ ಮಲ್ಲಿಗೆಯ ಅಲಂಕಾರ...

Last Updated 22 ಜುಲೈ 2017, 19:44 IST
ಅಕ್ಷರ ಗಾತ್ರ

ಅದು ಕಳೆದ ತಿಂಗಳು ನಡೆದ ವಿಧಾನಸಭೆ ಅಧಿವೇಶನದ ಸಮಯ. ಶಾಸಕ ನಾರಾಯಣಸ್ವಾಮಿಯವರು ತಮ್ಮ ಊರಿನ ಕನ್ನಡ ಶಾಲೆಯ ದುಃಸ್ಥಿತಿ ಕುರಿತು ಸದನದಲ್ಲಿ ಪ್ರಸ್ತಾಪಿಸಿದರು. ವಾಸ್ತವದಲ್ಲಿ ಅದಕ್ಕೆ ಶಿಕ್ಷಣ ಸಚಿವರು ಉತ್ತರ ಕೊಡಬೇಕಿತ್ತು. ಮುಖ್ಯಮಂತ್ರಿ ಎದ್ದು ನಿಂತರು.

‘ನೀವು ನಿಮ್ಮ ಮಕ್ಕಳನ್ನು ಯಾವ ಶಾಲೆಗೆ ಕಳುಹಿಸುತ್ತೀರಿ’ ಎಂದು ಮರುಪ್ರಶ್ನೆ ಹಾಕಿದರು. ‘ನಿಮಗೆ ಸಂಧಿ ಗೊತ್ತಾ,’ ‘ಸಮಾಸ ಗೊತ್ತಾ’ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಲು ಆರಂಭಿಸಿದರು. ‘ರೀ ಡಾಕ್ಟ್ರೇ ನಿಮಗೆ ಗೊತ್ತೇನ್ರೀ ಸಂಧಿ ಎಂದರೆ ಏನು ಎಂದು,’ ‘ಸಮಾಸ ಎಂದರೆ ಏನು ಎಂದು’ ಎನ್ನುತ್ತ ಬಿಜೆಪಿ ಸದಸ್ಯ ಅಶ್ವತ್ಥನಾರಾಯಣರ ಕಾಲು ಎಳೆದರು.

ಬಹುಶಃ ಸದನದಲ್ಲಿ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರಿಗೂ ಸಂಧಿ ಎಂದರೆ ಏನು ಎಂದು ಗೊತ್ತಿದ್ದಂತೆ ಕಾಣಲಿಲ್ಲ, ಸಮಾಸ ಎಂದರೆ ಏನು ಎಂಬುದು  ದೂರವೇ ಉಳಿಯಿತು! ಸಿದ್ದರಾಮಯ್ಯನವರ ವ್ಯಾಕರಣ ಜ್ಞಾನಕ್ಕೆ ತಲೆದೂಗಿದ ಸದನ ಕನ್ನಡ ಶಾಲೆಗಳ ದುಃಸ್ಥಿತಿಯನ್ನು ಮರೆತೇ ಬಿಟ್ಟಿತು! ಮತ್ತೆ ಅದನ್ನೇ ಕೇಳಲು ಎದ್ದು ನಿಂತ ನಾರಾಯಣಸ್ವಾಮಿಯವರಿಗೆ ಮತ್ತೆ ಅದೇ ಪ್ರಶ್ನೆ ಎದುರಾಯಿತು, ‘ನಿಮ್ಮ ಮಕ್ಕಳು ಯಾವ ಶಾಲೆಗೆ ಹೋಗುತ್ತಾರೆ?’

ಕನ್ನಡ ಶಾಲೆಗಳ ದುಃಸ್ಥಿತಿಯ ಪ್ರಶ್ನೆಯನ್ನು ಈ ಸರ್ಕಾರವೆಂದು ಅಲ್ಲ, ಎಲ್ಲ ಸರ್ಕಾರಗಳೂ ಹೀಗೆಯೇ ಮರೆಮಾಚಲು ಅಥವಾ ವಿಷಯಾಂತರ ಮಾಡಲು ಪ್ರಯತ್ನಿಸಿವೆ. ನಾರಾಯಣಸ್ವಾಮಿಯವರೇ ಇರಲಿ, ಇನ್ನು ಬೇರೆ ಯಾವ ಶಾಸಕರೇ ಇರಲಿ; ಅವರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಇಟ್ಟು ಕಲಿಸುವಷ್ಟು ಅನುಕೂಲಸ್ಥರು ಇರಬಹುದು. ಹಾಗೆಂದು ಒಬ್ಬ ಜನಪ್ರತಿನಿಧಿಯಾಗಿ ಅವರಿಗೆ ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಯ ಕೆಟ್ಟ ಸ್ಥಿತಿ ಕುರಿತು ಪ್ರಸ್ತಾಪಿಸಲು ಅಧಿಕಾರ ಕಳೆದು ಹೋಗುವುದಿಲ್ಲ. ಆದರೆ, ಈ ಪ್ರಶ್ನೆಯನ್ನು ಎದುರಿಸುವುದೇ ಸರ್ಕಾರಕ್ಕೆ ಬೇಡವಾಗಿದೆ.

ಅದು ಮೂಲಭೂತ ಸಮಸ್ಯೆ. ಕಲಿಕೆ ಮಾಧ್ಯಮ ಕುರಿತ ವ್ಯಾಜ್ಯದಲ್ಲಿ ನಾವು ಸುಪ್ರೀಂ ಕೊರ್ಟಿನಲ್ಲಿ ಸೋತು ಮೂರು ವರ್ಷಗಳು ಗತಿಸಿ ಹೋದುವು. ಈ ವಿಚಾರ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗ ಸುಪ್ರೀಂ ಕೋರ್ಟು ಆಗಿನ ಅಡ್ವೋಕೇಟ್‌ ಜನರಲ್ ಅವರಿಗೆ ಇದೇ ಪ್ರಶ್ನೆ ಕೇಳಿತ್ತು : ‘ನೀವು ನಿಮ್ಮ ಮಕ್ಕಳನ್ನು ಯಾವ ಮಾಧ್ಯಮದ ಶಾಲೆಗೆ ಕಳಿಸುತ್ತೀರಿ’ ಎಂದು. ಸುಪ್ರೀಂ ಕೋರ್ಟು ಆಗ ಇನ್ನೂ ಒಂದು ಪ್ರಶ್ನೆ ಕೇಳಿತ್ತು : ‘ನಿಮ್ಮ ರಾಜ್ಯದಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ಕಲಿಸುವಷ್ಟು ಸರ್ಕಾರಿ ಶಾಲೆಗಳು ನಿಮ್ಮಲ್ಲಿ ಇವೆಯೇ’ ಎಂದು. ಅದೃಷ್ಟಕ್ಕೆ, ‘ನಿಮ್ಮ ಶಾಲೆಗಳ ಗುಣಮಟ್ಟ ಹೇಗಿದೆ ಎಂದು ನಿಮಗೆ ಗೊತ್ತಿದೆಯೇ’ ಎಂಬ ಇನ್ನೊಂದು ಪ್ರಶ್ನೆಯನ್ನೂ ಕೋರ್ಟು ಕೇಳಲಿಲ್ಲ. ಕೇಳಬೇಕಿತ್ತು.

ನಾನು ನಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಓದಿದ್ದು 1960ರ ದಶಕದಲ್ಲಿ.  ಆ ಶಾಲೆಯ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ.  ಈಗಲೂ ಅಲ್ಲಿ ಮಕ್ಕಳು ನೆಲದ ಮೇಲೆಯೇ ಕುಳಿತು ಓದುತ್ತಾರೆ. ಅನತಿ ದೂರದಲ್ಲಿ ಖಾಸಗಿ ಶಾಲೆಗಳು ಬಂದಿವೆ. ಅಲ್ಲಿನ ಸೌಕರ್ಯ ಕಣ್ಣು ಕುಕ್ಕುವಂತಿದೆ. ಕೆಲವು ಮೈಲು ದೂರ ಹೋದರೆ ನಮ್ಮ ಭಾಗದ ಪ್ರಬಲ ರಾಜಕಾರಣಿಯೊಬ್ಬರು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸುವ ಹಲವು ಅಂತಸ್ತುಗಳ ಅಂತರರಾಷ್ಟ್ರೀಯ ಶಾಲೆಯನ್ನು ಕಟ್ಟಿಸಿದ್ದಾರೆ.

ನಮ್ಮ ಊರಿನ ಅನುಕೂಲಸ್ಥರ ಮಕ್ಕಳು ಅಲ್ಲಿಗೇ ಕಲಿಯಲು ಹೋಗುತ್ತಾರೆ. ಇದು ಕೇವಲ ನಮ್ಮ ಊರಿನ ಕಥೆಯಲ್ಲ, ಎಲ್ಲ ಊರುಗಳಲ್ಲಿಯೂ ಇದೇ ಸ್ಥಿತಿ ಇದೆ.  ಎಷ್ಟು ವರ್ಷ ಕಳೆದರೂ ಸರ್ಕಾರಿ ಶಾಲೆಗಳ ಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಸಿದ್ದರಾಮಯ್ಯನವರಿಗೆ ಒಳ್ಳೆಯ ಕನ್ನಡ ಹಾಗೂ ಒಳ್ಳೆಯ ವ್ಯಾಕರಣ ಕಲಿಸಿದಂಥ ಶಿಕ್ಷಕರು ನಮಗೂ ಸಿಕ್ಕಿದ್ದರು; ಅದು ನಮ್ಮ ಭಾಗ್ಯ.

ಈಗ ಮಕ್ಕಳಿಗೆ ಬಿಡಿ ಅನೇಕ ಶಿಕ್ಷಕರಿಗೇ ವ್ಯಾಕರಣ ಬರುವುದಿಲ್ಲ. ಕಾಲದ ಅಗತ್ಯಕ್ಕೆ ತಕ್ಕಂತೆ  ಶಾಲೆಗಳ ಭೌತಿಕ ಮತ್ತು ಬೌದ್ಧಿಕ ಮಟ್ಟವನ್ನು ಎತ್ತರಿಸಲು ಸರ್ಕಾರ ಪ್ರಯತ್ನ ಮಾಡಲಿಲ್ಲ. ಮಕ್ಕಳಿಗೆ ಮಧ್ಯಾಹ್ನದ ಊಟ ಕೊಡುವುದು, ಸಮವಸ್ತ್ರ ಕೊಡುವುದು, ಪಠ್ಯಪುಸ್ತಕ ಕೊಡುವುದು ಮತ್ತು ಸೈಕಲ್‌ ಕೊಡುವುದು ಖಂಡಿತ ಶ್ಲಾಘನೀಯ ಕೆಲಸ. ಆದರೆ, ಶಾಲೆಗಳೇ ಮುರುಕಲು ಕಟ್ಟಡದಲ್ಲಿ ನಡೆಯುತ್ತ ಇದ್ದರೆ, ಅಲ್ಲಿ ಶೌಚಕ್ಕೆ ಹೋಗಲು ಜಾಗವೇ ಇಲ್ಲದೇ ಇದ್ದರೆ ಮಕ್ಕಳು ಅಲ್ಲಿಗೆ ಏಕೆ ಬರುತ್ತವೆ? ಬಂದರೂ ಅವರ ಮನಃಸ್ಥಿತಿ ಹೇಗೆ ಇರುತ್ತದೆ?

ಒಂದಿದ್ದರೆ ಇನ್ನೊಂದು ಇಲ್ಲದಂಥ ಕಟ್ಟಡದಲ್ಲಿ ಕಲಿಸುವ ಶಿಕ್ಷಕರ ಮನೋಸ್ಥೈರ್ಯ ಎಂಥದಾಗಿರುತ್ತದೆ? ಸರ್ಕಾರಿ ಶಾಲೆಗಳು ಯಾರಿಗೂ ಬೇಡ ಅನಿಸಿದ್ದು ಈ ಕಾರಣಕ್ಕಾಗಿ. ಒಂದು ಕಡೆ ತನ್ನ ಶಾಲೆಗಳನ್ನೇ ಅಲಕ್ಷಿಸಿದ ಸರ್ಕಾರ ಇನ್ನೊಂದು ಕಡೆ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಮೇಲೆ ಏಳಲು ಅವಕಾಶ ಕೊಟ್ಟಿತು. ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೆ ಮಕ್ಕಳು ನೇರವಾಗಿ ಒಂದೇ ಸಾರಿ ಅಮೆರಿಕ ಅಥವಾ ಇಂಗ್ಲೆಂಡಿಗೇ ಹೋಗಿ ಬಿಡುತ್ತಾರೆ ಎಂದು ನಾವೂ ಪಾಲಕರು ಭ್ರಮಿಸಿದೆವು. ಈ ಭ್ರಮೆಯ ಪೊರೆಯನ್ನು ಹರಿಯಲು ಅನೇಕರು ಪ್ರಯತ್ನ ಮಾಡಿದರು, ಬುದ್ಧಿ ಹೇಳಿದರು, ತಿಳಿ ಹೇಳಿದರು.

1964ರಷ್ಟು ಹಿಂದೆ ತಮಗೆ ರಾಷ್ಟ್ರಕವಿ ಗೌರವ ಕೊಟ್ಟ ಸಂದರ್ಭದಲ್ಲಿ ಕುವೆಂಪು ಹೇಳಿದರು : ‘ನಮ್ಮ ದೇಶದ ಪ್ರಚ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರಹಿತಾಸಕ್ತ ಪ್ರತಿಗಾಮಿ ಶಕ್ತಿಗಳು, ಮಕ್ಕಳಿಗೆ ಹಾಲುಣಿಸುವ ನೆವದಿಂದ ಅವರನ್ನು ಕೊಲ್ಲುತ್ತಿದ್ದ ಭಾಗವತ ಪುರಾಣದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್‌ ಭಾಷೆಯಿಂದಲೂ ಇಂಗ್ಲಿಷ್‌ ಮಾಧ್ಯಮದಿಂದಲೂ ವರ್ಷ ವರ್ಷವೂ ಪರೀಕ್ಷೆಯ ಜಿಲೋಟಿನ್ನಿಗೆ ಕೋಟ್ಯಂತರ ಬಾಲಕರ ಮತ್ತು ತರುಣರ ತಲೆಗಳನ್ನು ಬಲಿ ಕೊಡುತ್ತಿದ್ದಾರೆ. ಆ ನಷ್ಟದ ಪರಿಮಾಣವನ್ನು ಊಹಿಸಲೂ ಸಾಧ್ಯವಿಲ್ಲ. ಬಹುಶಃ, ಸರಿಯಾಗಿ ಲೆಕ್ಕ ಹಾಕಿದರೆ, ನಾಲ್ಕಾರು ಪಾಂಚವಾರ್ಷಿಕ ಯೋಜನೆಗಳ ಮೊತ್ತವೇ ಆದರೂ ಆಗಬಹುದು...

‘ಇಂಗ್ಲಿಷ್‌  ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೇ ನಿತ್ಯರೋಗಿಯಂತಿರಬೇಕಾಗುತ್ತದೆ...  ನಮ್ಮ ಕಾರ್ಖಾನೆಗಳನ್ನೆಲ್ಲ ನಿಲ್ಲಿಸಿ, ಅಣೆಕಟ್ಟುಗಳನ್ನು ತಡೆಹಿಡಿದು, ಪ್ರಯೋಗಶಾಲೆ ಸಂಶೋಧನಾಗಾರಗಳನ್ನೆಲ್ಲ ವಜಾಮಾಡಿ, ಹಲವು ಪಾಂಚವಾರ್ಷಿಕ ಯೋಜನೆಗಳ ಆ ಹಣವನ್ನೆಲ್ಲ ಇಂಗ್ಲಿಷ್‌ ಸ್ಟಾಂಡರ್ಡ್‌ ಅನ್ನು ಉತ್ತಮಗೊಳಿಸುವುದಕ್ಕಾಗಿಯೇ ವೆಚ್ಚ ಮಾಡಿದರೂ ಇನ್ನು ನೂರು ವರ್ಷಗಳ ಆನಂತರವೂ ನಮ್ಮ ಮಕ್ಕಳ ಇಂಗ್ಲಿಷಿನ ಮಟ್ಟ ಈಗಿರುವುದಕ್ಕಿಂತ ಮೇಲಕ್ಕೇರುವುದಿಲ್ಲ!...

‘ಆಹಾರದ ಸಮಸ್ಯೆಗಿಂತಲೂ ಚೀಣಿಯರ ಸಮಸ್ಯೆಗಿಂತಲೂ ಗುರುತರವಾದ ಸಮಸ್ಯೆ ಇದು.  ಇಂಗ್ಲಿಷ್‌ ಶಿಕ್ಷಣದ ಪ್ರಚ್ಛನ್ನ ಭ್ರಷ್ಟಾಚಾರವನ್ನು, ನಷ್ಟದಲ್ಲಾಗಲಿ, ಹಾನಿಯಲ್ಲಾಗಲಿ, ಸರಿದೂಗುವ ಭ್ರಷ್ಟಾಚಾರ ಮತ್ತೊಂದಿಲ್ಲ.’

ಕುವೆಂಪು, ಈ ಮಾತನ್ನು ಶಾಸನಕರ್ತರನ್ನು ಉದ್ದೇಶಿಸಿಯೇ ಮಾತನಾಡುತ್ತ  ಹೇಳಿದ್ದರು. ಆಗಿನ ಸರ್ಕಾರ ಅವರಿಗೆ ರಾಷ್ಟ್ರಕವಿ ಗೌರವ ಕೊಟ್ಟಿತ್ತು. ಇದಾಗಿ ಅರ್ಧ ಶತಮಾನ ಕಳೆದು ಹೋಯಿತು. ನಮಗೆ ಬುದ್ಧಿ ಬರಲಿಲ್ಲ. ನಮಗೆ ಬುದ್ಧಿ ಬರಲು ಶಿಕ್ಷಣ ವ್ಯವಸ್ಥೆ ಕುರಿತಂತೆ ನಮಗೆ ಒಂದು ಧೋರಣೆಯೇ ಇರಲಿಲ್ಲ. ಮಕ್ಕಳನ್ನು ಕೂಡ ಮತಬ್ಯಾಂಕುಗಳ ಹಾಗೆ ಓಲೈಸುವ ಕೆಲಸವೊಂದನ್ನು ಬಿಟ್ಟು ಸರ್ಕಾರಗಳು ಬೇರೆ ಯಾವ ಸುಧಾರಣೆಯ ಕೆಲಸವನ್ನೂ ಮಾಡಲಿಲ್ಲ.

ಮಾಡಿದ್ದರೆ ಅರ್ಧ ಶತಮಾನದ ಹಿಂದೆ  ನಾವೆಲ್ಲ ಓದಿದ ಶಾಲೆ ಈಗಲೂ ಅದೇ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಬಹುಶಃ ಸಿದ್ದರಾಮಯ್ಯನವರು ಓದಿದ ಶಾಲೆಯೂ ಹಾಗೆಯೇ ಇರಬಹುದು. ಅವರು ಹೋಗಿ ನೋಡಿದ್ದಾರೋ ಇಲ್ಲವೋ ತಿಳಿಯದು. ಸರ್ಕಾರಿ ಶಾಲೆಗಳನ್ನು ಕೊಲ್ಲುವ ವ್ಯವಸ್ಥಿತ ಪ್ರಯತ್ನವೊಂದು ಅನೇಕ ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇರುವುದಕ್ಕೆ ನಾವೆಲ್ಲ ಕಣ್ಣು- ಬಾಯಿ ಮುಚ್ಚಿಕೊಂಡು ಸುಮ್ಮನೇ ಕುಳಿತುದು ಕಾರಣ.

‘ಕಲಿಕೆ ಮಾಧ್ಯಮವೆಂಬುದು ಪಾಲಕರ ಆಯ್ಕೆಗೆ ಬಿಟ್ಟ ವಿಚಾರ’ ಎಂದು ಸುಪ್ರೀಂ ಕೊರ್ಟು ತೀರ್ಪು ನೀಡಿ ಮೂರು ವರ್ಷಗಳೇ ಕಳೆದಿವೆ. ಆದರೂ, ‘ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು’ ಎಂದು ಸಾಹಿತ್ಯ ಸಮ್ಮೇಳನದಲ್ಲೋ, ಸಾಹಿತಿಗಳ ನಿಯೋಗ ಭೇಟಿಯಾಗಲು ಬಂದಾಗಲೋ ಹೇಳಿದ್ದನ್ನು ಬಿಟ್ಟರೆ ರಾಜ್ಯ ಸರ್ಕಾರ ಹೆಚ್ಚಿನ ಪ್ರಯತ್ನವನ್ನೇನೂ ಮಾಡಿದಂತೆ ಕಾಣುವುದಿಲ್ಲ. ಅದು ಹಾಗೆ ಹೇಳುವುದು ಕೂಡ ತನ್ನ ಹೊಣೆಯನ್ನು ಹಾರಿಸಿಕೊಳ್ಳುವ ಪ್ರಯತ್ನದಂತೆ ಕಾಣುತ್ತದೆ.

ಕೇಂದ್ರ ಸರ್ಕಾರಕ್ಕೆ ಕನ್ನಡದ ಮೇಲೆ ಏಕೆ ಪ್ರೀತಿ ಇರುತ್ತದೆ? ಪ್ರೀತಿ ಇರುವುದಾದರೆ ಅದು ಕರ್ನಾಟಕ ಸರ್ಕಾರಕ್ಕೆ ಇರಬೇಕು. ಕಲಿಕೆಯಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮಕ್ಕೆ ಅವಕಾಶ ಇರಬೇಕು ಎಂದು ಸರ್ಕಾರ ಪ್ರಾಮಾಣಿಕ ವಾಗಿ ಯೋಚಿಸುತ್ತಿದ್ದರೆ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲು ತಾನೇ ಮುಂದಾಗಬೇಕು.

ಕರ್ನಾಟಕದಲ್ಲಿಯೇ ಅಂಥ ಒಂದು ಸಭೆ ಏರ್ಪಡಿಸಬೇಕು. ತನ್ನ ನಾಡಿನ ಭಾಷೆಗೆ ಎದುರಾಗಿರುವ ಸಂಕಟವನ್ನು ಅವರೆಲ್ಲರ ಮುಂದೆ ಇಡಬೇಕು. ‘ನಾವೆಲ್ಲ ಸೇರಿ ಏನು ಮಾಡೋಣ ಹೇಳಿ’ ಎಂದು ಕೇಳಬೇಕು. ಯಾರು ಸಂತ್ರಸ್ತರೋ ಅವರಿಗೇ ದರ್ದು ಇಲ್ಲದೇ ಇದ್ದರೆ ಉಳಿದವರು ಏಕೆ ಅವರ ಬಗೆಗೆ ಕಾಳಜಿ ಮಾಡುತ್ತಾರೆ?

ಸಿದ್ದರಾಮಯ್ಯನವರು ಹೇಳಿ ಕೇಳಿ ಅಹಿಂದ ರಾಜಕಾರಣ ಮಾಡುತ್ತಿದ್ದಾರೆ. ಈಗ ಅಹಿಂದ ವರ್ಗದವರಿಗೆ ಯಾರಿಗೂ ಕನ್ನಡ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮ ಬೇಕಾಗಿಲ್ಲ. ಇದೆಲ್ಲ ರಹಸ್ಯವಾದ ಸಂಗತಿಯೇನೂ ಅಲ್ಲ. ತಮ್ಮ ಮಕ್ಕಳು ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಕಲಿತರೆ,  ಪ್ರಬಲ ಹಾಗೂ ‘ಮೇಲು ಜಾತಿ’ಗಳ ಮಕ್ಕಳಿಗೆ ಸಿಕ್ಕ ಹಾಗೂ ಸಿಗುತ್ತಿರುವ ಅವಕಾಶಗಳಿಂದ ವಂಚಿತರಾಗುತ್ತಾರೆ ಎಂಬ ದಟ್ಟ ಭಾವನೆ ಅವರಲ್ಲಿ ಇದೆ. ಅವರ ಅನಿಸಿಕೆಯಲ್ಲಿ ಯಾವ ತಪ್ಪೂ ಇಲ್ಲದೇ ಇರಬಹುದು.

ಆ ಅನಿಸಿಕೆಯನ್ನು ಪ್ರತಿನಿಧಿಸುವ ಒಂದು ಸಮೂಹದ ಆಶೋತ್ತರಗಳನ್ನು ಕೇಂದ್ರದಲ್ಲಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯನವರಿಗೂ ಕನ್ನಡ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮ ಎಂಬುದು ಒಂದು ಆದ್ಯತೆಯ ಸಂಗತಿ ಎಂದು ಅನಿಸುತ್ತಿಲ್ಲದೇ ಇರಬಹುದು.  ಹಾಗಾಗಿಯೇ ಅವರು ಯಾರದೋ ಒತ್ತಡಕ್ಕೆ ಮಣಿದು ಏನೋ ಒಂದು ಸಬೂಬು ಹೇಳಿದಂತೆ ಮಾಡುತ್ತ ಇರಬಹುದು.

ರಾಜ್ಯದಲ್ಲಿ ಜನತಾದಳ ಸರ್ಕಾರ ಇದ್ದಾಗ, 1997–98ರಲ್ಲಿ, ಮೊರಾರ್ಜಿ  ವಸತಿ ಶಾಲೆಗಳು ಆರಂಭವಾದುವು. ಈಗ ಇರುವ ಅಂಥ ಶಾಲೆಗಳ ಸಂಖ್ಯೆ 520. ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗಗಳ (ಅಹಿಂದ) ಮಕ್ಕಳಿಗೆ ಮೀಸಲಾದ ಶಾಲೆಗಳು ಇವು. ಆ ಎಲ್ಲ ಶಾಲೆಗಳು ಆರಂಭದಲ್ಲಿ ಕನ್ನಡ ಮಾಧ್ಯಮದ ಶಾಲೆಗಳಾಗಿದ್ದುವು. ಈಗ ಅವು ಎಲ್ಲವೂ ಇಂಗ್ಲಿಷ್‌ ಮಾಧ್ಯಮದ ಶಾಲೆಗಳಾಗಿವೆ.

ಅವು ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಮೀಸಲಾದ ಶಾಲೆಗಳು ಆಗಿರುವುದಕ್ಕೂ ಹಾಗೂ ಅವು ಇಂಗ್ಲಿಷ್‌ ಮಾಧ್ಯಮಕ್ಕೆ ಬದಲಾಗಿರುವುದಕ್ಕೂ ಸಂಬಂಧ ಇಲ್ಲ ಎಂದು ಹೇಗೆ ಹೇಳುವುದು? ದುರಂತ ಎಂದರೆ ಅಲ್ಲಿ ಕಲಿಸುವ ಶಿಕ್ಷಕರು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತವರಲ್ಲ. ಅವರಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸಲೂ ಬರುವುದಿಲ್ಲ.

ಅವರು ಏನು ಕಲಿಸುತ್ತಾರೋ ಮಕ್ಕಳು ಏನು ಕಲಿಯುತ್ತವೆಯೋ ದೇವರಿಗೇ ಗೊತ್ತು. ಆದರೆ, ಅಲ್ಲಿನ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುತ್ತಿವೆ ಎಂದು ಅವರ ಪಾಲಕರಿಗೂ ಮತ್ತು ಕಲಿಸುತ್ತಿದ್ದೇವೆ ಎಂದು ಸರ್ಕಾರಕ್ಕೂ ಸಮಾಧಾನವೋ ಅಹಂಕಾರವೋ ಇದ್ದಿರಬಹುದು. ಅಂಥ ಅರೆಬರೆ ಶಿಕ್ಷಣದಿಂದ ಮಕ್ಕಳಿಗೆ ಏನು ಪ್ರಯೋಜನವಾಯಿತು ಎಂಬುದು ಬೇರೆ ವಿಚಾರ.

ಸಮಸ್ಯೆಯೇನು ಎಂದರೆ ವಿಶ್ವಕನ್ನಡ ಸಮ್ಮೇಳನ ನಡೆಸುತ್ತೇವೆ ಎಂದು ಸರ್ಕಾರ ಹೇಳಿದಾಗಲೆಲ್ಲ ಕನ್ನಡ ಮಾಧ್ಯಮ ಮತ್ತೆ ಮತ್ತೆ ನಮಗೆಲ್ಲ ನೆನಪಾಗುತ್ತದೆ. ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಯ ಮಾಧ್ಯಮದ ಅನುಷ್ಠಾನಕ್ಕಾಗಿ ನಾವೆಲ್ಲ ಪತ್ರಿಕೆಗೆ ಪತ್ರ ಬರೆಯುವುದನ್ನು ಬಿಟ್ಟು ಬೇರೇನು ಮಾಡಿದ್ದೇವೆ? ನಾವು ಎಷ್ಟು ಮಂದಿ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೇ ಕಳಿಸಿದ್ದೇವೆ? ಸರ್ಕಾರಕ್ಕೆ ನಾವೆಲ್ಲ ಅಪ್ರಾಮಾಣಿಕರೂ, ಅವಕಾಶವಾದಿಗಳೂ ಎಂದು ಅನಿಸುತ್ತಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ನಮ್ಮನ್ನು ಹೇಗೆ ‘ಸಮಾಧಾನ ಮಾಡಬೇಕು’ ಎಂದು ಅಲ್ಲಿ ಇದ್ದವರಿಗೆ ಗೊತ್ತಿರಬಹುದು ಎಂದು ನನಗೆ ಅನುಮಾನವಿದೆ.

ಸಾಹಿತಿಗಳು ಕನ್ನಡ ಮಾಧ್ಯಮ ಕುರಿತು ಮಾತನಾಡಿದಷ್ಟು ಕನ್ನಡದ ಶಾಲೆಗಳ ಸ್ಥಿತಿಗತಿ ಸುಧಾರಣೆ ಕುರಿತು ಮಾತನಾಡಿಲ್ಲ. ಬಹುಶಃ ಅವರು ಮಾತನಾಡಿದ್ದಿದ್ದರೆ ಕನ್ನಡ ಶಾಲೆಗಳ ಸ್ಥಿತಿ ಈಗಿನ ದುರವಸ್ಥೆಯಲ್ಲಿ ಇರುತ್ತಿರಲಿಲ್ಲ. ಕನ್ನಡ ಚಳವಳಿಗಾರರು ಅನೇಕ ಚಳವಳಿ ಮಾಡಿದ್ದಾರೆ. ಆದರೆ, ಕನ್ನಡ ಶಾಲೆಗಳ ಸ್ಥಿತಿ ಸುಧಾರಣೆ ಕುರಿತು ಒಂದು ಚಳವಳಿಯೂ ನಡೆದಂತೆ ಕಾಣುವುದಿಲ್ಲ. ವೇದಿಕೆಯ ಭಾಷಣಕ್ಕೆ, ಘೋಷಣೆಗೆ ಯಾವ ಬೆಲೆ ಇರುತ್ತದೆ?

ಕನ್ನಡ ಮಾಧ್ಯಮ ಶಾಲೆಗಳನ್ನು ಹೇಗೆ ನಡೆಸಬೇಕು ಎಂದು ಮೂಡಬಿದರೆಯಲ್ಲಿ ಮೋಹನ ಆಳ್ವ ತೋರಿಸಿಕೊಟ್ಟಿದ್ದಾರೆ. ಕಳೆದ ಏಳು ವರ್ಷಗಳಿಂದ ಅವರು ಅಲ್ಲಿ ಆರರಿಂದ ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಸಂಪೂರ್ಣ ಉಚಿತ ಶಿಕ್ಷಣ ಕೊಡುತ್ತಿದ್ದಾರೆ. ವರ್ಷಕ್ಕೆ ಕನಿಷ್ಠವೆಂದರೂ ನಾಲ್ಕು ಕೋಟಿ ರೂಪಾಯಿಗಳನ್ನು ಅವರು ತಮ್ಮ ಜೇಬಿನಿಂದ ವ್ಯಯಿಸುತ್ತಿದ್ದಾರೆ. ಅಲ್ಲಿ ಪ್ರವೇಶ ಪಡೆಯಲು ಮಕ್ಕಳು, ಪಾಲಕರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ಸಾರಿ 17,000 ಮಕ್ಕಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕಿಂತ ಇನ್ನೇನು ಬೇಕು? ಇದು ಕನ್ನಡದ ಪ್ರೇಮಕ್ಕಾಗಿ ಮಾಡಿದ ನಿಸ್ಪೃಹ ಕೆಲಸ.

ಒಬ್ಬ ಶಾಸಕನಾಗಿ ಸರ್ಕಾರಿ ಶಾಲೆಗಳನ್ನು ಹೇಗೆ ಪುನರುಜ್ಜೀವನ ಮಾಡಬಹುದು ಎಂದು ಬಿ.ಸುರೇಶಗೌಡ ತೋರಿಸಿಕೊಟ್ಟಿದ್ದಾರೆ. ಸರ್ಕಾರ ತಮಗೆ ಕೊಡುವ ಶಾಸಕರ ನಿಧಿಯನ್ನೆಲ್ಲ ಅವರು ಅದಕ್ಕೇ ಬಳಸಿದ್ದಾರೆ. ಉಳಿದ ಹಣಕ್ಕಾಗಿ ದಾನಿಗಳ ಕೈಕಾಲು ಹಿಡಿದಿದ್ದಾರೆ. ಹಳೆಯ ಮುರುಕಲು ಶಾಲೆಯನ್ನು ಕೆಡವಿ ಹೊಸ ಶಾಲೆ ಕಟ್ಟಲು ಏನಿಲ್ಲವೆಂದರೂ 80 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿ ವರೆಗೆ ಖರ್ಚು ಮಾಡಿದ್ದಾರೆ. ಅವರ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂಥ ಏಳು ಶಾಲೆಗಳು ಎದ್ದು ನಿಂತಿವೆ. ಯಾವ ಇಂಗ್ಲಿಷ್‌ ಮಾಧ್ಯಮ ಶಾಲೆಗೂ ಅವು ಕಡಿಮೆಯಿಲ್ಲ.  ಮನಸ್ಸು ಮಾಡಿದರೆ ಜನಪ್ರತಿನಿಧಿಗಳು ಏನು ಮಾಡಬಹುದು ಎಂಬುದಕ್ಕೆ ಇದು ಒಂದು ನಿದರ್ಶನ. ಇದು ಬದ್ಧತೆಯ ಕೆಲಸ.

ಕನ್ನಡದ ವಿಚಾರದಲ್ಲಿ ನಿಸ್ಪೃಹತೆ ಮತ್ತು ಬದ್ಧತೆ ಎರಡೂ ಇಲ್ಲದೇ  ನಾಡಿಗೊಂದು ಸ್ವಂತ ಬಾವುಟ ಬೇಕು ಎನ್ನುವುದು ಜುಟ್ಟಿನ ಮಲ್ಲಿಗೆಯ ಅಲಂಕಾರವಲ್ಲದೇ ಮತ್ತೇನು ಆಗಿರಲು ಸಾಧ್ಯ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT