ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಹಾಡಿ ಕುಣಿಯುವುದಿಲ್ಲ ಆದಿವಾಸಿಗಳು!

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹನ್ಸ್ ದಾ ಸೊವ್ವೇಂದು ಶೇಖರ್, ಸಂಥಾಲ್ ಬುಡಕಟ್ಟಿನಲ್ಲಿ ಜನಿಸಿದವರು. ಜಾರ್ಖಂಡ್‌ನ ಪಾಕೂರ್ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯ. ಇಂಗ್ಲಿಷಿನಲ್ಲಿ ಕತೆ, ಕಾದಂಬರಿ, ಲೇಖನ ಬರೆಯುತ್ತಾರೆ. ಸಾಹಿತ್ಯ ಅಕಾಡೆಮಿಯ ಯುವಪುರಸ್ಕಾರ ವಿಜೇತರು. ಅವರ ಸಣ್ಣ ಕತೆಗಳ ಸಂಗ್ರಹ The Adivasi Will Not Dance. ನೈಜ ಘಟನೆಗಳು ಮತ್ತು ವಾಸ್ತವ ವಿದ್ಯಮಾನಗಳನ್ನು ಆಧರಿಸಿ ಬರೆದ ಕತೆಗಳಿವು. ಈ ಸಂಗ್ರಹದ ಒಂದು ಕತೆಯ ಹೆಸರು November is the Month of Migration.

ಹಸಿವು, ಬಡತನ, ಶೋಷಣೆಗಳ ಮುಂದೆ ಅಸಹಾಯಕರಾಗಿರುವ ಆದಿವಾಸಿಗಳ ಅಳಲನ್ನು ಸಶಕ್ತವಾಗಿ ಚಿತ್ರಿಸಿರುವ ಕತೆಗಳಿವು. ಬಡ ಆದಿವಾಸಿ ಕುಟುಂಬವೊಂದು ಹೊಟ್ಟೆಗೆ ಹಿಟ್ಟನ್ನು ಅರಸಿ ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಗೆ ವಲಸೆ ಹೊರಟಿರುತ್ತದೆ. ಹತ್ತಬೇಕಿರುವ ರೈಲು ಗಾಡಿ ಬರಲು ಎರಡು- ಮೂರು ತಾಸು ಕಾಲಾವಕಾಶ. ಕುಟುಂಬದ ಯುವತಿಯ ಹೆಸರು ತಾಳಮೈ ಖಿಸ್ಕು. ತಾಳಮೈ ಎಂದರೆ ಮಧ್ಯದವಳು ಎಂದರ್ಥ. ಅಕ್ಕ ಮತ್ತು ತಂಗಿಯ ಮಧ್ಯದಲ್ಲಿ ಹುಟ್ಟಿದ್ದವಳಿಗೆ ಸರಿಯಾದ ಹೆಸರನ್ನೂ ಇಡುವ ಬಿಡುವು ಬಡ ತಂದೆ ತಾಯಿಗಳಿಗೆ ಇರಲಿಲ್ಲ. ನಡುವಿನವಳು (ತಾಳಮೈ) ಎಂದು ಕರೆದುಬಿಟ್ಟರು. ಆದಿವಾಸಿಯಲ್ಲದ ಪೊಲೀಸನೊಬ್ಬ ಎರಡು ತುಂಡು ಬ್ರೆಡ್, ಪಕೋಡ ಹಿಡಿದು ತಾಳಮೈಯನ್ನು ಸುರತಕ್ಕೆ ಕರೆಯುತ್ತಾನೆ. ಹಸಿವು ಹಿಂಗಿಸಿಕೊಳ್ಳಬೇಕಿದ್ದ ಆಕೆಯನ್ನು ನೀತಿ ಅನೀತಿಯ ಪ್ರಶ್ನೆ ಕಾಡುವುದಿಲ್ಲ. ಆಕೆಯ ಬುಡಕಟ್ಟಿನ ಹಲವು ಹೆಣ್ಣುಮಕ್ಕಳು ಈ ಹಿಂದೆ ಮಾಡಿದ್ದನ್ನು ನೋಡಿದ್ದಳು. ತನಗೂ ಅದು ಹೊಸ ಸಂಗತಿಯಲ್ಲ. ಪೊಲೀಸನ ಆಕ್ರಮಣವನ್ನು ಹತ್ತು ನಿಮಿಷ ಸಹಿಸಿಕೊಳ್ಳುತ್ತಾಳೆ. ಬ್ರೆಡ್, ಪಕೋಡ ಪಡೆದು ತಿನ್ನುತ್ತಾಳೆ. ಅವನು ಕೊಟ್ಟ 50 ರೂಪಾಯಿ ಹಿಡಿದು ಕುಟುಂಬ ಸೇರಿಕೊಳ್ಳಲು ನಡೆಯುತ್ತಾಳೆ.

ಮತ್ತೊಂದು ಕತೆಯ ಹೆಸರು They Eat Meat. ಗುಜರಾತಿನ ಅಹ್ಮದಾಬಾದ್‌ಗೆ ವರ್ಗಾವಣೆಯ ಮೇಲೆ ತೆರಳುವ ಸಂಥಾಲಿ ಕುಟುಂಬವೊಂದು ಮಾಂಸ ತಿನ್ನಲಾಗದೆ ಕದ್ದು ಮುಚ್ಚಿ ಮೊಟ್ಟೆ ಬೇಯಿಸಿ ತಿನ್ನುವ ಸುತ್ತ ಹೆಣೆದ ಕತೆ. 2002ರ ಗುಜರಾತ್ ನರಮೇಧ ಈ ಕತೆಯ ಹಿನ್ನೆಲೆ.
ಈ ಕಥಾ ಸಂಗ್ರಹವನ್ನು Speaking Tiger ಪ್ರಕಾಶನ ಹೊರತಂದದ್ದು 2015ರ ಅಕ್ಟೋಬರ್‌ನಲ್ಲಿ. ಈ ಪುಸ್ತಕವನ್ನು ನಿಷೇಧಿಸಲು ಹೊಂಚು ಹಾಕುತ್ತಿತ್ತು ರಾಜ್ಯ ಸರ್ಕಾರ. ಸಂಥಾಲ ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂಬ ಪ್ರತಿಭಟನೆಗಳನ್ನು ಹೊಸೆದು ಹುಟ್ಟಿಸಿತು. ಆದಿವಾಸಿ
ಗಳ ರಾಜಕೀಯ ಪಕ್ಷವೆನ್ನಲಾದ ಜಾರ್ಖಂಡ್ ಮುಕ್ತಿ ಮೋರ್ಚಾ, ಸಂಥಾಲರ ಸ್ಥಿತಿಗತಿಗಳನ್ನು ಸುಧಾರಿಸಲು ವಿಫಲವಾಗಿರುವ ಪಕ್ಷ. ಜೊತೆಗೆ ಕಾಂಗ್ರೆಸ್ ಪಕ್ಷ. ಎಲ್ಲ ಪಕ್ಷಗಳೂ ಬಿಜೆಪಿ ಸರ್ಕಾರದ ಕರಾಳ ಹಂಚಿಕೆಗೆ ಕೈ ಕಲೆಸಿದವು. ನಿಷೇಧವನ್ನು ಬೆಂಬಲಿಸಿದವು.

ಮೊನ್ನೆ ಮೊನ್ನೆ ತರಾತುರಿಯಲ್ಲಿ ಪುಸ್ತಕವನ್ನು ನಿಷೇಧಿಸಿದ ಸರ್ಕಾರ, ಸಂಥಾಲರನ್ನು ಹರಿದು ಜಗಿಯತೊಡಗಿರುವ ವ್ಯಾಪಕ ಹಸಿವು ಮತ್ತು ನಿರುದ್ಯೋಗ ನಿವಾರಣೆಗೆ ಏನನ್ನೂ ಮಾಡಿಲ್ಲ. ಬದಲಿಗೆ ಸೊವ್ವೇಂದು ಶೇಖರ್ ಅವರಿಗೆ ನೋಟಿಸ್ ನೀಡಿ ಬೇಟೆಯಾಡತೊಡಗಿದೆ.

2017ರ ಹಿಂದೂ ಇಂಗ್ಲಿಷ್ ದೈನಿಕದ ಬಹುಮಾನಕ್ಕೆ ಪರಿಗಣಿಸಲಾದ ಬರಹಗಾರರ ಪಟ್ಟಿಯಲ್ಲಿ ಶೇಖರ್ ಹೆಸರೂ ಇತ್ತು. ಶೇಖರ್ ಕತೆಗಳು ಆದಿವಾಸಿ ಶೋಷಣೆಯ ಹಸಿ ಹಸಿ ವಿವರಗಳೊಂದಿಗೆ ಧಗಧಗಿಸುತ್ತವೆ. ಅವುಗಳನ್ನು ಪಚನ ಮಾಡಿಕೊಳ್ಳುವುದು ಸುಲಭವಲ್ಲ. ಕತೆಯಲ್ಲಿ ಬರುವ ಲೈಂಗಿಕ ವಿವರಗಳು ಬೆಚ್ಚಿ ಬೀಳಿಸಲು ಬಡಿದೆಬ್ಬಿಸುವಂತಹವೇ ವಿನಾ ರಂಜಿಸಿ ರೋಮಾಂಚನಗೊಳಿಸುವ ಉದ್ದೇಶದಿಂದ ಬರೆದವುಗಳಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಜೀವನೋಪಾಯ ಅರಸಿ, ಗುಳೆ ಹೋಗುವ ಸಂಥಾಲರನ್ನು ವಾಹನಗಳಲ್ಲಿ ಕುರಿ ಕೋಳಿಗಳಂತೆ ತುಂಬಿ ಒಯ್ಯಲಾಗುತ್ತದೆ. ಈ ಪ್ರಯಾಣದಲ್ಲೇ ಅವರ ಲೈಂಗಿಕ ಶೋಷಣೆ ಶುರುವಾಗುತ್ತದೆ. ತಲುಪಿದ ನಂತರ ಜಮೀನುದಾರ, ಅವನ ಮಗ, ಅಣ್ಣ ತಮ್ಮಂದಿರು ಯಾರೆಂದರೆ ಅವರು. ತುಟಿ ಬಿಚ್ಚಿ
ದರೆ ಕೆಲಸ ಕಳೆದುಕೊಳ್ಳಬೇಕು. ಬೇರೆ ದಾರಿಯೇ ಇಲ್ಲ.ಸಹಿಸಿಕೊಳ್ಳಲೇಬೇಕು ಎನ್ನುತ್ತಾರೆ ಆದಿವಾಸಿ ಹೆಣ್ಣುಮಕ್ಕಳು.

ಈ ಕೃತಿಯಲ್ಲಿನ ಕಟ್ಟಕಡೆಯ ಸಣ್ಣ ಕತೆಯ ಹೆಸರೇ The Adivasi Will Not Dance. ಕಥಾನಾಯಕ ಮಂಗಲ್ ಮುರ್ಮು ಜಮೀನು ಕಳೆದುಕೊಂಡ ಸಂಥಾಲಿ ರೈತ. ಹಾಡುಗಾರನೂ ಹೌದು. ಜಾರ್ಖಂಡದ ಪಾಕೂರು ಜಿಲ್ಲೆಯ ಹಳ್ಳಿಯೊಂದಕ್ಕೆ ಸೇರಿದವನು. ‘ಅಭಿವೃದ್ಧಿ ಯೋಜನೆ’ಗಾಗಿ ತನ್ನ ಬದುಕಿನ ಏಕೈಕ ಆಸರೆಯಾದ ಜಮೀನು ಕಳೆದುಕೊಂಡಿರುತ್ತಾನೆ.

ಆಹ್ವಾನ ಬಂದಾಗ ಸಮಾರಂಭವೊಂದರಲ್ಲಿ ರಾಷ್ಟ್ರಪತಿಮುಂದೆ ಪ್ರದರ್ಶನ ನೀಡಲು ಖುಷಿಪಡುತ್ತಾನೆ. ಆದರೆ ರಾಷ್ಟ್ರಪತಿ ಅಡಿಗಲ್ಲು ಇರಿಸುವ ವಿದ್ಯುತ್ ಸ್ಥಾವರ ಮೇಲೇಳು ವುದು ತನ್ನಿಂದ ಮತ್ತು ತನ್ನಂತಹ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಸ್ವಾಧೀನಪಡಿಸಿಕೊಳ್ಳಲಾದ ಕೃಷಿ ಭೂಮಿಯ ಮೇಲೆ ಎಂದು ಸಮಾರಂಭದ ಸ್ಥಳದಲ್ಲಿ ತಿಳಿಯುತ್ತದೆ. ಸಮಾರಂಭವೊಂದರಲ್ಲಿ ಹಾಡಿ ಕುಣಿಯಲು ತಿರಸ್ಕರಿಸುತ್ತಾನೆ. ಪ್ರತಿರೋಧದೊಂದಿಗೆ ಕತೆ ಮುಗಿಯು
ತ್ತದೆ. ಭೂಮಿ ಕಾಣಿಯಂತಹ ಜೀವನಯಾಪನೆಯ ಸಾಧನಗಳ ಜೊತೆಗೆ ಸಾಂಸ್ಕೃತಿಕ ಅಸ್ಮಿತೆಯನ್ನೂ ದೋಚಿದವರ ಮುಂದೆ ಆತನಿಗೆ ಉಳಿದದ್ದು ಶೂನ್ಯವೊಂದೇ.

ಈ ಸೀಮೆಯ ಆದಿವಾಸಿಗಳ ಮೇಲೆ ನಡೆದಿರುವ ದಮನಕಾಂಡದ ವಿಚಾರಣೆ ನಡೆಸಿದ ಸ್ವತಂತ್ರ ಜನನ್ಯಾಯಾಧಿಕರಣದ ಮುಂದೆ ಆದಿವಾಸಿಗಳು ನಿಜವಾಗಿ ತೋಡಿ ಕೊಂಡಿರುವ ಅಳಲಿಗೂ ಮುರ್ಮುವಿನ ವ್ಯಥೆ-ವಿಷಾದಗಳ ಸ್ವಗತಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ. ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಸೂಕ್ತ ಪರಿಹಾರಧನ ಕೂಡ ನಾನಾ ಕಾರಣಗಳಿಗಾಗಿ ಎಲ್ಲರಿಗೂ ಸಿಕ್ಕಿಲ್ಲ.

ಮಂಗಲ್ ಮುರ್ಮು ಹೇಳುತ್ತಾನೆ- ‘ಈ ಕಲ್ಲಿದ್ದಲು ಇದೆಯಲ್ಲ ಸ್ವಾಮಿ, ನಮ್ಮನ್ನು ತುಸು ತುಸುವಾಗಿಯೇ ನುಂಗತೊಡಗಿದೆ. ಮರಗಳು, ಪೊದೆಗಳು, ಎಲೆಗಳು ಎಲ್ಲ ಕಪ್ಪು ಕಪ್ಪು. ನಮ್ಮ ಭೂಮಿಯೂ ಕಪ್ಪಾಗಿಬಿಟ್ಟಿದೆ. ಕಲ್ಲುಗಳು, ಬಂಡೆಗಳು, ಮರಳು ಎಲ್ಲ ಕಪ್ಪು. ಮೊದಲೇ ಕರ್‍ರಗಿರುವ ನಮ್ಮ ಮಕ್ಕಳು ಎಂದೆಂದಿಗೂ ನುಣ್ಣನೆ ಕರಿ ದೂಳಿನಲ್ಲಿ ಮುಳುಗಿಬಿಟ್ಟಿದ್ದಾರೆ. ಅವರು ಅತ್ತರೆಂದರೆ ಬರಗಾಲದ ನೆಲವನ್ನು ಕೊರೆದುಕೊಂಡು ನದಿಯೊಂದು ಹರಿದಂತೆ ಕಪಾಳಕ್ಕೆ ಇಳಿಯುತ್ತವೆ ಕಣ್ಣೀರು’.

ದಟ್ಟೈಸಿರುವ ಮಾಲಿನ್ಯವು ಕಾಮಾಲೆ, ಮಲೇರಿಯಾ, ಕಪ್ಪು ಜ್ವರ, ವಿಷಮಶೀತ ಜ್ವರಗಳ ರೂಪ ಧರಿಸಿ ದುಪ್ಪಟ್ಟು ಕಾಡತೊಡಗಿದೆ. ಹಗಲಿರುಳು ಸಾಗುವ ದೈತ್ಯ ಕಲ್ಲಿದ್ದಲು ಹೇರಿನ ಟ್ರಕ್ಕುಗಳ ಚಕ್ರದಡಿ ಸಿಕ್ಕು ಸತ್ತವರು ಪೊಲೀಸ್ ಠಾಣೆಯ ಕಡತಗಳಲ್ಲೂ ಕಾಣಸಿಗುವುದಿಲ್ಲ. ಕುಟುಂಬಕ್ಕೆ ಹಣ ತೆತ್ತು ಮುಚ್ಚಿ ಹಾಕಲಾಗುವ ಪ್ರಕರಣಗಳಿವು. ಆದಿವಾಸಿಗಳ ಬದುಕು ಮೂರಾಬಟ್ಟೆಯಾದರೆ ಗಣಿ ಕಂಪೆನಿಗಳ ಬೊಕ್ಕಸಗಳು ಭರ್ತಿಯಾಗುತ್ತವೆ.

‘ನಾವು ಬಡ ಸಂಥಾಲರಿಗೆ ಸಿಗುವುದಾದರೂ ಏನು? ಅರೆ ಹೊಟ್ಟೆ, ಚಿಂದಿ ಬಟ್ಟೆ. ನಿರುಮ್ಮಳ ಉಸಿರಾಟವೂ ತ್ರಾಸ ಎನಿಸುವ ಕಾಯಿಲೆ ಕಸಾಲೆಗಳು. ಕೆಮ್ಮಿದರೆ ನೆತ್ತರತುಂತುರು. ಎಲ್ಲ ಕಾಲಕ್ಕೂ ಮೂಳೆ ಚಕ್ಕಳಗಳು ನಾವು. ಮಾರವಾಡಿ, ಸಿಂಧಿ, ಮಂಡಲ್, ಭಗತ್, ಮುಸ್ಲಿಂ ಮುಂತಾದ ಎಲ್ಲ ‘ಡೀಕು'ಗಳು ನಮ್ಮ ನೆಲವನ್ನು ಬುಡಮೇಲು ಮಾಡಿ ಒಳಗಿಂದ ಹೊರಕ್ಕೆ ಬಗೆದು ಹಾಕುತ್ತಾರೆ' ಎನ್ನುತ್ತಾನೆ ಮುರ್ಮು. ತಮ್ಮ ಪೂರ್ವಿಕರ ನೆಲವನ್ನು ಲಾಭಕ್ಕಾಗಿ ಶೋಷಿಸುವ 'ಅಭಿವೃದ್ಧಿಪರ ನಾಗರಿಕ ಸಮಾಜ'ದ ದಾರಿಗಳಿಗೆ ಪ್ರತಿರೋಧದ ಅಡ್ಡಗಲ್ಲು ಹಾಕುತ್ತಲೇ ಬಂದವರು ಆದಿವಾಸಿಗಳು. ಮಾನವ ಮತ್ತು ನಿಸರ್ಗದ ನಡುವಿನ ಅವರ ಗ್ರಹಿಕೆ ಜೀವಪರವಾದದ್ದು. ಹೊರಗಿನಿಂದ ನಿರಾಶ್ರಿತರಾಗಿ ಬಂದವರು ಬಲಿತು ಕೊಬ್ಬಿ ಸಂಥಾಲರನ್ನು ಶೋಷಣೆಯ ಪಾತಾಳಕ್ಕೆ ತುಳಿದವರೇ ಎಲ್ಲರೂ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು. ದಮನಕ್ಕೆ ಧರ್ಮಭೇದವಿಲ್ಲ... ಕ್ರೈಸ್ತರು ಮಾತ್ರವಲ್ಲ, ಹಿಂದೂಗಳು ಇವರನ್ನು ಮತಾಂತರಕ್ಕೆ ಜಗ್ಗಿಸಿ ವೋಟು ಬ್ಯಾಂಕುಗಳನ್ನು ಭರ್ತಿ ಮಾಡಿಕೊಳ್ಳುವವರೇ.

ಸ್ವಾತಂತ್ರ್ಯ ಬಂದ ಮೊದಲ ನಲವತ್ತು ವರ್ಷಗಳಲ್ಲಿ ಜಲಾಶಯಗಳು, ಗಣಿಗಾರಿಕೆ ಮುಂತಾದ ಅಭಿವೃದ್ಧಿಯ ಹೆಸರಲ್ಲಿ ಒಕ್ಕಲೆಬ್ಬಿಸಲಾದ ಆದಿವಾಸಿಗಳ ಸಂಖ್ಯೆ 76 ಲಕ್ಷಕ್ಕೂ ಹೆಚ್ಚು. ದಟ್ಟ ದಾರಿದ್ರ್ಯದ ದಳ್ಳುರಿಗೆ ಬಿದ್ದ ಈ ಮೂಲನಿವಾಸಿಗಳು ಜಮೀನುದಾರರ ಹೊಲಗದ್ದೆಗಳ ಕೂಲಿಯಾಳುಗಳಾದರು. ಇತ್ತೀಚಿನ ವರ್ಷಗಳಲ್ಲಿ ಗಣಿ ಕಂಪೆನಿಗಳ ದಾಳಿಯಿಂದ ಆದಿವಾಸಿಗಳ ನೆಲ-ಜಲ-ನಂಬಿಕೆಗಳು ತೀವ್ರವಾಗಿ ತತ್ತರಿಸಿವೆ. ಕಲ್ಲಿದ್ದಿಲ ಕಪ್ಪು ದೂಳಿನಲ್ಲಿ ಇವರ ಬದುಕುಗಳು ಮುಳುಗಿಹೋಗಿವೆ. ಪೊಲೀಸರು ಮತ್ತು ಸ್ಥಳೀಯ ಆಡಳಿತಗಳ ದೌಷ್ಟ್ಯ ದಮನಗಳು ಬಿಡುವು ನೀಡದೆ ಕೊನೆಸಾಗಿವೆ. ಕಲ್ಲಿದ್ದಿಲ ಕಪ್ಪು ಕಿಟ್ಟದಲ್ಲಿ ಇವರ ಪುಪ್ಪಸಗಳು ಉಸಿರು ಕಟ್ಟಿವೆ. ತಿನ್ನುವ ಅನ್ನ, ಕುಡಿಯುವ ನೀರು ಎಲ್ಲ ಕಲ್ಲಿದ್ದಿಲಿನ ದೂಳಿನ ಕಪ್ಪು ಕಪ್ಪು ಕಪ್ಪು. ಮಾವು, ಮಹುವಾ ಹೂವು, ಜೇನು ಮುಂತಾದ ಅರಣ್ಯ ಉತ್ಪನ್ನಗಳ ಮೂಲಗಳು ಬರಡಾಗಿ ಭಣಗುಟ್ಟಿವೆ. ಗಣಿ ಕಂಪೆನಿಗಳು ಸಾಕಿಕೊಂಡಿರುವ ಮಾಫಿಯಾ
ಗಳು ಪ್ರತಿಭಟನೆಯ ಜನತಾಂತ್ರಿಕ ಆವರಣವನ್ನು ಹೊಸಕಿ ಹಾಕಿವೆ. ಆದಿವಾಸಿ ತಲೆಯಾಳುಗಳು ಕಲ್ಲಿದ್ದಿಲ ಸಾಗಿಸುವ ಡಂಪರ್‌ಗಳ ಅಡಿ ಹೆಣಗಳಾಗಿದ್ದಾರೆ.

ಬ್ರಿಟಿಷರು ಆರಂಭಿಸಿದ ಸಂಥಾಲ್ ಆದಿವಾಸಿಗಳ ಶೋಷಣೆ ಸ್ವತಂತ್ರ ಭಾರತದಲ್ಲೂ ಮುಂದುವರೆದಿದೆ. ಆಗ ಕೈ ತಪ್ಪಿದ ನೆಲ ಜಲ ಪುನಃ ದಕ್ಕಲೇ ಇಲ್ಲ. ಹುಟ್ಟಿ ಬೆಳೆದ ಸ್ವಂತ ನೆಲದಲ್ಲಿ ಇವರನ್ನು ಗುಲಾಮಗಿರಿಯ ನಿಕೃಷ್ಟ ಬದುಕಿಗೆ ನೂಕಲಾಗಿದೆ. ಬಡತನ, ಸಾಂಸ್ಕೃತಿಕ ಪರಕೀಯತೆ, ವಲಸೆ, ಶೋಷಣೆ, ಕೂಲಿ ಕೆಲಸ ನೀಡುವ ಹೆಸರಲ್ಲಿ ಸಾಗಣೆ-ಶೋಷಣೆ, ಅನಕ್ಷರತೆ, ಅನಾರೋಗ್ಯ, ದಾರಿದ್ರ್ಯಗಳು ನೀಗಲೇ ಇಲ್ಲ. 1855ರಲ್ಲಿ ಬ್ರಿಟಿಷರು ಮತ್ತು ಜಮೀನುದಾರಿ ಶೋಷಣೆ ವಿರುದ್ಧ ಸಿಡಿದ ಬಿಲ್ಲು ಬಾಣಗಳು- ಕತ್ತಿ ಕೊಡಲಿಗಳ ಸಶಸ್ತ್ರ ಕ್ರಾಂತಿಯನ್ನು ಆಧುನಿಕ ಮದ್ದು ಗುಂಡುಗಳ ಮೂಲಕ ಬರ್ಬರವಾಗಿ ಅಡಗಿಸಲಾಗುತ್ತದೆ. ಈ ಬಂಡಾಯದಲ್ಲಿ ಮಡಿಯುವ ಸಂಥಾಲರ ಸಂಖ್ಯೆ 15ರಿಂದ 20 ಸಾವಿರ ಎನ್ನುತ್ತದೆ ಇತಿಹಾಸ. ಸಂಥಾಲ ಪರಗಣ ಎಂಬ ಆದಿವಾಸಿ ಬಾಹುಳ್ಯದ ಹೊಸ ಜಿಲ್ಲೆಯನ್ನೇ ರೂಪಿಸುತ್ತದೆ ಬ್ರಿಟಿಷ್ ಸರ್ಕಾರ. ಈ ಹೊಸ ಜಿಲ್ಲೆ ಇದೀಗ ಒಟ್ಟು ಆರು ಜಿಲ್ಲೆಗಳನ್ನು ಒಳಗೊಂಡ ಕಂದಾಯ ವಿಭಾಗ.

ಸಮೀಕ್ಷೆಯೊಂದರ ಪ್ರ ಕಾರ ಪರಗಣದ ಎಲ್ಲ ಆದಿವಾಸಿಗಳಿಗೆ ಇಂದಿಗೂ ಎರಡು ಹೊತ್ತು ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ. ದೇವಗಡ, ಡುಮ್ಕಾ, ಗೊಡ್ಡಾ, ಪಾಕೂರ್ ಹಾಗೂ ಸಾಹೇಬ್ ಗಂಜ್‌ನಲ್ಲಿ ಅರೆಹೊಟ್ಟೆ ಉಂಡು ಬದುಕಿ ರುವ ಈ'ಭಾರತೀಯ'ರ ಪ್ರಮಾಣ ಅನುಕ್ರಮವಾಗಿ ಶೇ 2.25, ಶೇ 17.52, ಶೇ 11.46, ಶೇ 19.2 ಹಾಗೂ ಶೇ 20.77!

ಮುರ್ಮು ಹೇಳುತ್ತಾನೆ- ‘ನಾವು ಆದಿವಾಸಿ ಸರ್ನಾ ಧರ್ಮವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಅಸ್ಮಿತೆಗಳು ಅಳಿಯುತ್ತಿವೆ. ಬೇರುಗಳು ತುಂಡರಿಸುತ್ತಿವೆ. ಎಲ್ಲಿಯೂ ಸಲ್ಲದ ಜನ ಆಗುತ್ತಿದ್ದೇವೆ. ಶಾಲೆ, ಕಾಲೇಜು, ಶಿಕ್ಷಣ, ನೌಕರಿ, ಸವಲತ್ತು, ಆರೋಗ್ಯ ಎಲ್ಲ ಆದಿವಾಸಿಗಳಲ್ಲದವರು... ಹೊರಗಿನಿಂದ ಬಂದು ನೆಲೆಸಿದ ‘ಡೀಕು’ಗಳ ಪಾಲು. ನಮ್ಮ ಕಲೆ ಕುಣಿತ ಸಂಗೀತದಿಂದ ನಮಗೇನು ದಕ್ಕಿದೆ... ಹೆಸರಿಗೆ ಆದಿವಾಸಿಗಳ ನಾಡು. ಜಾರ್ಖಂಡದ ಸಂಸ್ಕೃತಿ ಪ್ರದರ್ಶನಕ್ಕೆ ಇರಿಸುವಾಗ ನಮ್ಮ ಸಂಗೀತ ಕುಣಿತವೇ ಬೇಕು. ಆದರೆ ಆದಿವಾಸಿಗಳು ತಮ್ಮ ಈ ನೆಲದಲ್ಲೇ ನರಕದ ಪಾಲಾಗಿದ್ದಾರೆ'.

ಮಂಗಲ್ ಮಾತುಗಳಲ್ಲಿ ಆದಿವಾಸಿ ಆತ್ಮಸಾಕ್ಷಿ ಧ್ವನಿಸುತ್ತದೆ- ‘ಮೇರಾ ಭಾರತ್ ಮಹಾನ್ ಅಂತಾರೆ...ಯಾವ ಮಹಾನ್? ನಗರಗಳು ಮತ್ತು ಕಾರ್ಖಾನೆಗಳಿಗಾಗಿ ವಿದ್ಯುಚ್ಛಕ್ತಿ ಉತ್ಪಾದಿಸಲೆಂದು ತನ್ನ ಸಾವಿರಾರು ಪ್ರಜೆಗಳನ್ನು ಹೊಲ ಮನೆಗಳಿಂದ ಯಾವ ಮಹಾನ್ ದೇಶ ಒಕ್ಕಲೆಬ್ಬಿಸುತ್ತದೆ? ಜೋಹಾರ್ ರಾಷ್ಟ್ರಪತಿ ಬಾಬೂ, ಈ ವಿದ್ಯುತ್ ಸ್ಥಾವರವನ್ನು ಕಟ್ಟಲಾಗುತ್ತದೆ, ಈ ಸ್ಥಾವರ ನಮ್ಮೆಲ್ಲರ ಪಾಲಿನ ಕಡೆಗಾಲ... ನಾವು ಎಲ್ಲಿಗೆ ಹೋಗೋಣ, ಎಲ್ಲಿ ಬಿತ್ತಿ ಬೆಳೆಯೋಣ. ಈ ಸ್ಥಾವರ ನಮಗೆಲ್ಲ ಒಳ್ಳೆಯದು ಮಾಡ್ತದೆ ಅಂತಾರೆ ನಿಮ್ಮ ಪಕ್ಕ ಕುಳಿತಿರುವವರು... ನಮ್ಮನ್ನು ಒಕ್ಕಲೆಬ್ಬಿಸಿದ ಈ ಸ್ಥಾವರದಿಂದ ನಮಗೆ ಹೇಗೆ ಒಳ್ಳೆಯದಾದೀತು. ಮತ್ತು ನಾವು ಆದಿವಾಸಿಗಳು ಹೇಗೆ ಕುಣಿದು ಖುಷಿಯಾಗಿರಬಲ್ಲೆವು. ನಮ್ಮ ಹೊಲ ಮನೆಗಳನ್ನು ವಾಪಸು ಕೊಡದಿದ್ದರೆ ನಾವು ಹಾಡಿ ಕುಣಿಯುವುದಿಲ್ಲ. ಆದಿವಾಸಿಗಳು ನಾವು ಕುಣಿಯುವುದಿಲ್ಲ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT