ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಂದು ಚೀನಾ ಫೋನ್ : ಐಟೆಲ್ ಎಸ್ 42

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್ ಮೂಲದ ಟ್ರಾನ್ಶನ್ ಹೋಲ್ಡಿಂಗ್ ಕಂಪನಿ ಐಟೆಲ್ ಹೆಸರಿನ ಸರಳ ಫೋನ್‌ಗಳಿಗೆ ಪ್ರಖ್ಯಾತವಾಗಿತ್ತು. ಅದು ಭಾರತವೂ ಸೇರಿದಂತೆ 45 ದೇಶಗಳಲ್ಲಿ ವ್ಯಾಪಾರ ಮಾಡುತ್ತಿದೆ. ಸ್ಮಾರ್ಟ್‌ಫೋನ್‌ಗಳನ್ನು ಜನರು ಎರಡಕ್ಕಿಂತ ಹೆಚ್ಚು ವರ್ಷ ಬಳಸಲು ಇಷ್ಟಪಡುವುದಿಲ್ಲ. ಅಂತೆಯೇ ಕಡಿಮೆ ಬೆಲೆಯ ಫೋನ್‌ಗಳಿಗೆ ತುಂಬ ಬೇಡಿಕೆಯಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಬಹುತೇಕ ಸ್ಮಾರ್ಟ್‌ಫೋನ್ ತಯಾರಕರು 10 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಐಟೆಲ್ ಕೂಡ ಅದನ್ನೇ ಮಾಡುತ್ತಿದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಐಟೆಲ್ ಎಸ್ 42 (Itel S42) ಎಂಬ ಸ್ಮಾರ್ಟ್‌ಫೋನನ್ನು.

ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಅದರಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನಿಲ್ಲ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆಯೇ ಇದೆ. ಹಿಂದುಗಡೆಯ ಕವಚ ತೆಗೆಯುವಂತಿಲ್ಲ. ಹಿಂದುಗಡೆ ಮೇಲ್ಭಾಗ ಮತ್ತು ಕೆಳಭಾಗಗಳಲ್ಲಿ ಪ್ಲಾಸ್ಟಿಕ್ಕಿನ ಪ್ರತ್ಯೇಕ ದೇಹವಿದೆ. ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳು ಇವೆ. ಎಡಗಡೆ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇ ಇದೆ. ಮೇಲ್ಗಡೆ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಕೆಳಗಡೆ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಹಿಂದುಗಡೆ ಎಡ ಮೂಲೆಯಲ್ಲಿ ಕ್ಯಾಮೆರಾ ಮತ್ತು ಮಧ್ಯಭಾಗದಲ್ಲಿ ಸ್ವಲ್ಪ ಮೇಲ್ಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಇದು 18:9 ಅನುಪಾತದ ಪರದೆ ಹೊಂದಿದೆ. ಪರದೆಯ ಕೆಳಗಡೆ ಮೂರು ಸಾಫ್ಟ್ ಬಟನ್‌ಗಳಿಲ್ಲ. ಇದರ ತೂಕ ಎಷ್ಟು ಎಂದು ಎಲ್ಲೂ ನಮೂದಿಸಿಲ್ಲ. ಕೈಯಲ್ಲಿ ಹಿಡಿದಾಗ ಇದು ತೂಕದ ಫೋನ್ ಎಂದು ಅನ್ನಿಸುತ್ತದೆ. ಈ ಫೋನಿನಲ್ಲಿ ಎರಡು ನ್ಯಾನೊ ಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಬಳಸಬಹುದು.

ಇದು ಕಡಿಮೆ ಬೆಲೆಯ ಫೋನ್ ಆದರೂ ಹಾಗೆಂದು ಅನ್ನಿಸುವುದಿಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 44848 ಇದೆ ಅಂದರೆ ಇದು ವೇಗದ ಫೋನ್ ಅಲ್ಲ. 3 ಗಿಗಾಬೈಟ್ ಪ್ರಾಥಮಿಕ ಮೆಮೊರಿ ಇರುವುದರಿಂದ ಕೆಲಸದ ವೇಗ ಪರವಾಗಿಲ್ಲ. ಆದರೂ ಕೆಲವು ಕಿರುತಂತ್ರಾಂಶಗಳನ್ನು (ಆ್ಯಪ್) ಇನ್‌ಸ್ಟಾಲ್ ಮಾಡುವಾಗ, ಮೊದಲ ಬಾರಿಗೆ ತೆರೆಯುವಾಗ, ಅಧಿಕ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವಾಗ, ಇದರ ಶಕ್ತಿ ಕಡಿಮೆ ಎಂದು ಗೊತ್ತಾಗುತ್ತದೆ. ಬಹುತೇಕ ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದಾದರೂ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡುವ ಅನುಭವ ತೃಪ್ತಿದಾಯಕವಾಗಿಲ್ಲ. ಇದರ ಮೆಮೊರಿ ಸ್ವಲ್ಪ ಕಡಿಮೆ ಎಂದು ಅನ್ನಿಸಬಹುದು. ಆದರೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಹಾಗೂ ಯುಎಸ್‌ಬಿ ಓಟಿಜಿ ಸವಲತ್ತು ಇರುವ ಕಾರಣ ಅಷ್ಟು ಚಿಂತೆ ಮಾಡಬೇಕಾಗಿಲ್ಲ.

ವಿಡಿಯೊ ವೀಕ್ಷಣೆ ಪರವಾಗಿಲ್ಲ. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. 4k ವಿಡಿಯೊ ಪ್ಲೇ ಆಗುವುದಿಲ್ಲ. ಸ್ವಲ್ಪ ಹಳೆ ಮತ್ತು ಕಡಿಮೆ ಶಕ್ತಿಯ ಪ್ರೊಸೆಸರ್ ಬಳಸಿರುವುದು ಇದಕ್ಕೆ ಕಾರಣ. ಇದರ ಆಡಿಯೊ ಇಂಜಿನ್ ಅಷ್ಟಕ್ಕಷ್ಟೆ. ಇಯರ್‌ಫೋನ್ ನೀಡಿದ್ದಾರೆ. ಅದರ ಗುಣಮಟ್ಟವೂ ಅಷ್ಟಕ್ಕಷ್ಟೆ. ಒಂದೇ ಪ್ರತಿ ಕುಶನ್ ನೀಡಿದ್ದಾರೆ. ಸಿನಿಮಾ ವೀಕ್ಷಣೆ ನಿಮ್ಮ ಪ್ರಥಮ ಆದ್ಯತೆಯಾಗಿದ್ದಲ್ಲಿ ಈ ಫೋನ್ ನಿಮಗೇ ಅಷ್ಟೇನೂ ತೃಪ್ತಿ ನೀಡಲಾರದು. ನಾನು ಗಮನಿಸಿದ ಒಂದು ವಿಶೇಷ ಅಂದರೆ ಈ ಫೋನಿನಲ್ಲಿರುವ ಎಫ್‌ಎಂ ರೇಡಿಯೊ. ಅದರ ಗ್ರಾಹಕಶಕ್ತಿ ನಿಜಕ್ಕೂ ಚೆನ್ನಾಗಿದೆ. ನಮ್ಮ ಮನೆಯ ಒಳಗೆ ಬಹುತೇಕ ಫೋನ್‌ಗಳಲ್ಲಿ ಎಫ್‌ಎಂ ರೇಡಿಯೊ ಚಾನೆಲ್‌ಗಳು ಸರಿಯಾಗಿ ಕೇಳುವುದಿಲ್ಲ. ಈ ಫೋನಿನಲ್ಲಿ ಹಲವು ಚಾನೆಲ್‌ಗಳು ಚೆನ್ನಾಗಿ ಕೇಳಿಸಿದವು.

ಇದರಲ್ಲಿ 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 13 ಮೆಗಾಪಿಕ್ಸೆಲ್‌ನ ಸ್ವಂತೀ ಕ್ಯಾಮೆರಾಗಳಿವೆ. ಕ್ಯಾಮೆರಾದ ವಿಷಯದಲ್ಲಿ ಇದು ಅಷ್ಟಕ್ಕಷ್ಟೆ. ಒಂದು ಮಟ್ಟಿಗೆ ತೃಪ್ತಿ ನೀಡುವಂತಹ ಫೋಟೊ ತೆಗೆಯುತ್ತದೆ. ಇದರ ಬೆಲೆ ಕಡಿಮೆ ಎಂದು ಗಮನಿಸಿದಾಗ ಈ ಗುಣಮಟ್ಟ ನೀಡುವ ಹಣಕ್ಕೆ ತೃಪ್ತಿ ನೀಡುವಂತಹದು ಎನ್ನಬಹುದು.

ಈ ಫೋನಿನ ವೈಶಿಷ್ಟ್ಯವೆಂದರೆ ಇಷ್ಟು ಕಡಿಮೆ ಬೆಲೆಯ ಫೋನಿನಲ್ಲಿ ಮುಖ ಗುರುತು ಹಿಡಿಯುವ ಸೌಲಭ್ಯ (face recognition) ನೀಡಿರುವುದು. ಈ ಸವಲತ್ತು ಚೆನ್ನಾಗಿ ಕೆಲಸ ಮಾಡುತ್ತಿದೆ.

ಆ್ಯಂಡ್ರಾಯ್ಡ್ 8.0 ಆಗಿರುವುದರಿಂದ ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇರತಕ್ಕದ್ದು. ಆದರೆ ಇದರಲ್ಲಿ ಹಿಂದಿ ಮತ್ತು ಗುಜರಾತಿ ಭಾಷೆಗಳನ್ನು ಮಾತ್ರ ನೀಡಿದ್ದಾರೆ. ಅದು ಯಾಕೆ ಹಾಗೆ ಎಂದು ಕಂಪನಿಯವರನ್ನು ಪ್ರಶ್ನಿಸಿದಾಗ ಹೆಚ್ಚಿನ ಭಾಷೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದರು. ಆದರೆ ನನಗೆ ಕನ್ನಡವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಕಂಡುಬರಲಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ನೀಡಬಹುದಾದ ಫೋನ್ ಎನ್ನಬಹುದು.

**

ವಾರದ ಸುದ್ದಿ: ಉಕ್ತಿಗಳಿಗೆ ಕೈಗಡಿಯಾರ

ಕೆಲವರಿಗೆ ಪ್ರತಿದಿನ ಬೆಳಿಗ್ಗೆ ಯಾವುದಾದರೊಂದು ಪ್ರೇರಣಾತ್ಮಕ ಉಕ್ತಿಯನ್ನು ಹಂಚುವ ಹವ್ಯಾಸವಿರುತ್ತದೆ. ಬೆಳಿಗ್ಗೆ ಮಾತ್ರವಲ್ಲ ಉತ್ಸಾಹ ಕುಗ್ಗಿದಾಗಲೆಲ್ಲ ಯಾವುದಾದರೊಂದು ಖ್ಯಾತ ಉಕ್ತಿಯನ್ನು ಓದಿ ಮತ್ತೊಮ್ಮೆ ಉತ್ಸಾಹ ಪಡೆಯುವವರೂ ಇದ್ದಾರೆ. ಅಂತಹವರಿಗಾಗಿ ಒಂದು ಹೊಸ ಕೈಗಡಿಯಾರ ಬಂದಿದೆ.

ಈ ವಾಚನ್ನು ಕೈಗೆ ಕಟ್ಟಿಕೊಂಡು ಸಮಯ ನೋಡುವುದು ಮಾತ್ರವಲ್ಲ ಬೇರೆ ಬೇರೆ ಉಕ್ತಿಗಳನ್ನು ಓದುತ್ತಿರಬಹುದು. ಆಂತರಿಕವಾಗಿ ಸಹಜವಾಗಿಯೇ ಜೀವನೋತ್ಸಾಹವಿರುವ ಬಹುಪಾಲು ಭಾರತೀಯರಿಗೆ ಇದರ ಅಗತ್ಯವಿಲ್ಲ.

**

ವಾರದ ಪದ: Internet of Things (IoT) = ವಸ್ತುಗಳ ಅಂತರಜಾಲ, ಇಂಟರ್‌ನೆಟ್ ಆಫ್ ಥಿಂಗ್ಸ್

ಮನೆಯ, ಕಚೇರಿ ಅಥವಾ ಉದ್ಯಮಗಳಲ್ಲಿ ಬಳಸುವ ಹಲವಾರು ಸಾಧನಗಳನ್ನು ಅಂತರಜಾಲದ ಸಂಪರ್ಕಕ್ಕೆ ತರುವುದು ಮತ್ತು ಅವುಗಳನ್ನು ಅಂತರಜಾಲದ ಮೂಲಕ ನಿಯಂತ್ರಿಸುವುದನ್ನು ವಸ್ತುಗಳ ಅಂತರಜಾಲ ಎಂದು ಕರೆಯಲಾಗುತ್ತದೆ. ಉದಾಹರಣೆಗಳು -ಕೈಗೆ ಕಟ್ಟುವ ಆರೋಗ್ಯ ಪಟ್ಟಿ. ಇದು ನಿಮ್ಮ ಚಟುವಟಿಕೆಗಳನ್ನು ದಾಖಲಿಸಿ ಅವುಗಳನ್ನು ಅಂತರಜಾಲದ ಮೂಲಕ ಸಂಗ್ರಹಿಸಿಟ್ಟು ಕೊಂಡು ವಿಶ್ಲೇಷಣೆ ಮಾಡಲು ಸಹಾಯಕಾರಿ. ಬುದ್ಧಿವಂತ ಪೊರಕೆ ಅರ್ಥಾತ್ ಸ್ಮಾರ್ಟ್ ವಾಕ್ಯೂಮ್ ಕ್ಲೀನರ್. ಇದನ್ನು ಅಂತರಜಾಲದ ಮೂಲಕವೂ ನಿಯಂತ್ರಿಸಬಹುದು. ಮನೆಯಲ್ಲಿ ಸ್ಥಾಪಿಸಿರುವ ಕ್ಯಾಮರವನ್ನು ಅಂತರಜಾಲಕ್ಕೆ ಸಂಪರ್ಕಿಸಿ ಕಚೇರಿಯಲ್ಲಿ ಕುಳಿತೇ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವೀಕ್ಷಿಸಬಹುದು.

**

ವಾರದ ಆ್ಯಪ್‌: ನಕ್ಷತ್ರ ವೀಕ್ಷಣೆ ಮಾಡಿ

ನಿಮಗೆ ನಕ್ಷತ್ರ ವೀಕ್ಷಣೆಯ ಆಸಕ್ತಿ ಇದೆಯೇ? ಖಗೋಳವಿಜ್ಞಾನದಲ್ಲಿ ಆಸಕ್ತಿ ಇದೆಯೇ? ಆಕಾಶದಲ್ಲಿ ಕಾಣಿಸುವ ಕಾಯಗಳು ಯಾವ್ಯಾವುವು, ಅವುಗಳ ಹೆಸರೇನು, ಎಂದೆಲ್ಲ ತಿಳಿಯುವ ಆಸಕ್ತಿ ಇದೆಯೇ? ಇವೆಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದಾದರೆ ನಿಮಗೆ ನಕ್ಷತ್ರವೀಕ್ಷಣೆಗೆ ಸಹಾಯ ಮಾಡುವ ಕಿರುತಂತ್ರಾಂಶ (ಆ್ಯಪ್) ಬೇಕು. ಅಂಥ ಒಂದು ಕಿರುತಂತ್ರಾಂಶ ಬೇಕಿದ್ದಲ್ಲಿ ನೀವು ಗೂಗಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Star Walk 2 Free - Identify Stars in the Sky Map ಎಂದು ಹುಡುಕಬೇಕು ಅಥವಾ http://bit.ly/gadgetloka323 ಜಾಲತಾಣಕ್ಕೆ ಭೇಟಿ ನೀಡಬೇಕು.

ನಿಮ್ಮ ಫೋನನ್ನು ಆಕಾಶದ ಬೇರೆ ಭಾಗಗಳಿಗೆ ಗುರಿ ಇಟ್ಟಾಗ ಅದು ಅಲ್ಲಿರುವ ಆಕಾಶಕಾಯದ ಬಗ್ಗೆ ವಿವರ ನೀಡುತ್ತದೆ. ನಮ್ಮ ಸೌರವ್ಯೂಹದ ಗ್ರಹಗಳು, ಕಿರುಗ್ರಹ, ಧೂಮಕೇತು, ನಕ್ಷತ್ರಪುಂಜ, ನೀಹಾರಿಕೆ, ಇವೆಲ್ಲವುಗಳ ಬಗೆಗೆ ಎಲ್ಲ ಮಾಹಿತಿ ನೀಡುತ್ತದೆ. ಉತ್ತಮ ಕಿರುತಂತ್ರಾಂಶ.

**

ವಾರದ ಪ್ರಶ್ನೆ: ಮೈಕ್ರೋಮ್ಯಾಕ್ಸ್ ಫೋನ್‌ಗಳಿಗೆ ಕಸ್ಟಮ್ ರೋಮ್ ಎಲ್ಲಿ ದೊರೆಯುತ್ತದೆ?

ಉ: forum.xda-developers.com ನಲ್ಲಿ ಪ್ರಯತ್ನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT