ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ಗೆ ಹೊಸ ನಾಯಕತ್ವ

Last Updated 17 ಜೂನ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಜನ ಸೂಕ್ಷ್ಮವಾಗಿ ಗಮನಿಸುವ ಕಂಪೆ­ನಿ­ಯೆಂದರೆ ಇನ್ಫೊಸಿಸ್‌. ಕಳೆದ ವಾರ ಕಂಪೆನಿಗೆ ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು (ಸಿಇಒ) ನಿಯೋಜಿಸುವ ಮೂಲಕ ಕುತೂಹಲ ಅಂತಿಮ ಘಟ್ಟಕ್ಕೆ ತಲು­ಪಿತ್ತು. ನೂತನ ಸಿಇಒ ನೇಮಕದ ಮೂಲಕ ಈ ಭವ್ಯ ಕಂಪೆನಿ ಇತಿಹಾಸದಲ್ಲಿ ಹೊಸದೊಂದು­ ಅಧ್ಯಾಯವೂ ಆರಂಭವಾದಂತಾಯಿತು.

ಇನ್ಫೊಸಿಸ್‌ನ ಕಥೆಗೂ ಬೆಂಗಳೂರಿನ ಅಭಿ­ವೃದ್ಧಿಯ ಕಥೆಗೂ ಸಂಬಂಧ ಇದೆ. ಒಂದು ಕಾಲಕ್ಕೆ ಬೆಂಗಳೂರು ಎಂಬುದು ನಿದ್ರಾವಸ್ಥೆ­ಯಲ್ಲಿದ್ದ ನಗರವಾಗಿತ್ತು. ಸರ್ಕಾರಿ ಸ್ವಾಮ್ಯದ ಉತ್ಪಾದನಾ ಮತ್ತು ಸಂಶೋಧನಾ ಸಂಸ್ಥೆಗಳು ಮೈಗೂಡಿಸಿಕೊಂಡಿದ್ದ ಉದಾಸೀನ ಮನೋ­ಭಾವ ಬೆಂಗಳೂರು ನಗರವನ್ನು ಜಡತ್ವದ ನಗರ­ವನ್ನಾಗಿಸಿತ್ತು. ಆದರೆ ಇನ್ಫೊಸಿಸ್‌ ಬೆಂಗಳೂರಿಗೆ ಅಂಟಿದ್ದ ಈ ಕಳಂಕವನ್ನು ತೊಡೆದು ಹಾಕಿತು. ದೇಶದ ಉದ್ದಗಲದಿಂದ ಯುವಕರನ್ನು ಬೆಂಗ­ಳೂ­ರಿ­ನತ್ತ ಸೆಳೆಯಿತು.

90ರ ದಶಕದ ಕೊನೆಯ ಭಾಗದಿಂದೀಚೆಗೆ ಎಲ್ಲರೂ ನೆಚ್ಚುವ, ಉದ್ಯೋ­ಗಕ್ಕೆ ಸೇರಿಕೊಳ್ಳಲು ಬಯಸುವ ಕಂಪೆನಿ­ಯಾಗಿ ಇನ್ಫೊಸಿಸ್‌ ಮಾರ್ಪಟ್ಟಿತ್ತು. ಕಂಪೆನಿ ಅನುಸರಿ­ಸಿದ ಅಭಿವೃದ್ಧಿಯ ವೇಗ ಹಲವಾರು ಪ್ರತಿಭಾ­ನ್ವಿತರನ್ನು ಕಂಪೆನಿಯತ್ತ ಸೆಳೆಯಿತು. ಬೆಂಗಳೂರು ಈ ಮೂಲಕ ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದ ಕೇಂದ್ರವಾ­ಯಿತು. ಬಹು­ತೇಕ ಇದೇ ಸಮಯಕ್ಕೆ ವಿಪ್ರೊ­ದಂತಹ ಹಲ­ವಾರು ಕಂಪೆನಿಗಳೂ ಬೆಂಗಳೂರಿ­ನಲ್ಲಿ ಕಾರ್ಯಾ­ಚರಣೆ ಆರಂಭಿಸಿದ್ದವು.

ಬೆಂಗಳೂರಿನ ಸುಶಿಕ್ಷಿತ ಮಧ್ಯಮ ವರ್ಗದ ಮಂದಿ ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಅಮೆರಿಕಕ್ಕೆ ಕಳುಹಿಸುವ ಗುರಿಯನ್ನೇ ಇಟ್ಟುಕೊಂಡವರಾಗಿದ್ದರು. ಇನ್ಫೊ­ಸಿಸ್‌ ಮತ್ತು ಇತರ ಸಾಫ್ಟ್‌ವೇರ್‌ ಕಂಪೆನಿಗಳು ತಮ್ಮದೇ ಆದಂತಹ ಗುಣಮಟ್ಟವನ್ನು ಸಾಬೀತುಪಡಿಸಿಕೊಂಡವು ಹಾಗೂ ವಿದ್ಯಾರ್ಹತೆ ಮತ್ತು ಪ್ರಾವೀಣ್ಯತೆಗೆ ತಕ್ಕಂತೆ ಉದ್ಯೋಗ ಅವಕಾಶಗಳನ್ನು ಒದಗಿಸಿದವು. ಇಂತಹ ಹೊಸ ಅವಕಾಶವನ್ನು ಏಕಾಂಗಿಯಾಗಿ ಹುಟ್ಟುಹಾಕಿದ ಇನ್ಫೊಸಿಸ್‌ನಂತಹ ಕಂಪೆನಿಗಳು ಜನರ ನೆಚ್ಚಿನ ಕಂಪೆನಿಗಳಾಗಿ ಮಾರ್ಪಟ್ಟವು. ಈ ಮೊದಲು ಕೇಳಿರದಂತಹ ಕೆಲಸದ ವಾತಾವರಣವನ್ನು ಮತ್ತು ಸೌಲಭ್ಯಗಳನ್ನು ಒದಗಿಸಿದವು.

ಉದ್ಯಮದಲ್ಲಿ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸುವುದರ ಜತೆಗೆ ಸಮಾನ ಅವಕಾಶಗ­ಳನ್ನೂ ಅವರ ಮುಂದೆ ತೆರೆದಿಡುವ ಕೆಲಸವನ್ನು ಇನ್ಫೊಸಿಸ್‌ನಂತಹ ಕಂಪೆನಿಗಳು ಮಾಡಿದವು.

ಇನ್ಫೊಸಿಸ್‌ ಅನ್ನು ಆರಂಭಿಸಿದವರು ಕೆಲವೇ ಕೆಲವು ವೃತ್ತಿಪರರ ಗುಂಪು.  ಅದು ಅತ್ಯಂತ ಕಡಿಮೆ ಬಂಡವಾಳದಲ್ಲಿ ಆರಂಭವಾಯಿತು. ಆದರೆ ಅದು ಮುಂದೆ ದೇಶದ ಪ್ರಮುಖ ಐಟಿ ಕಂಪೆನಿಯಾಗಿ ರೂಪುಗೊಂಡಿತು. ಕಂಪೆನಿಯ ಕಾರ್ಯವೈಖರಿ ಮತ್ತು ಅದರ ಕಾರ್ಪೊರೇಟ್‌ ಆಡಳಿತ ವೈಖರಿ ಉದ್ಯಮ ವಲಯದಲ್ಲಿ ಸದಾ ಮಾತಿನ ವಿಚಾರವಾಗಿತ್ತು. ಕಠಿಣ ದುಡಿಮೆ, ತೀಕ್ಷ್ಮ ಮನೋಭಾವ ಮತ್ತು ಮುನ್ನುಗ್ಗುವ ತಂತ್ರದೊಂದಿಗೆ ಯಶಸ್ಸು ಗಳಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟ ಮಹಾನ್‌ ಸಂಸ್ಥೆ ಇದು. ಇನ್ಫೊಸಿಸ್‌ನ ಸಂಸ್ಥಾಪಕರು ಈ ಯಶಸ್ಸಿನ ಕಾರಣಕ್ಕೆ ದಂತಕತೆಗಳಾಗಿಬಿಟ್ಟಿದ್ದಾರೆ ಮತ್ತು ಅವರು ತುಳಿದ ಹಾದಿ ಉದ್ಯಮದಲ್ಲಿ ‘ಚಿನ್ನದ ಗುಣಮಟ್ಟ’ ಎಂಬಂತೆ ಗುರುತಿಸಿ­ಕೊಂಡಿದೆ.

ಕಂಪೆನಿಯನ್ನು ಹುಟ್ಟುಹಾಕಿದವರಲ್ಲಿ ಒಬ್ಬರಾದ ಮತ್ತು ಪ್ರಥಮ ಸಿಇಒ ಆದ ನಾರಾಯಣ ಮೂರ್ತಿ ಅವರು ಹಲವರ ಪಾಲಿಗೆ ದೇವತಾ ಸ್ವರೂಪಿಯಂತೆ ಕಂಡು­ಬಂದರು. ಅವರ ಚಿಂತನೆಗಳು, ದೂರದೃಷ್ಟಿಗಳು ಉದ್ಯಮ ರಂಗದಲ್ಲಿ ಮಾತ್ರವಲ್ಲ, ದೇಶದಲ್ಲಿ ಬಹಳ ಪ್ರಾಮುಖ್ಯ ಗಳಿಸಿಕೊಂಡವು. ಕಂಪೆನಿ ತನ್ನ ಹೂಡಿಕೆದಾರರಿಗೂ ಕೈತುಂಬಾ ವಾಪಸ್‌ ಕೊಟ್ಟಿದೆ ಹಾಗೂ ಭಾರಿ ಪ್ರಗತಿ ಮತ್ತು ನಿರಂತರ ಅಧಿಕ ಲಾಭ ಗಳಿಕೆಯಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹಲವು ವರ್ಷಗಳವರೆಗೆ ಇನ್ಫೊಸಿಸ್‌ ಕಣ್ಮಣಿಯಾಗಿಯೇ ಇತ್ತು.

ಎಲ್ಲಾ ಉತ್ತಮ ವಸ್ತುಗಳಿಗೂ ಒಂದು ಅವಧಿ ಎಂಬುದು ಇರುತ್ತದೆ. ಅತ್ಯುತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ ಕಂಪೆನಿಗಳೂ ಹಲ­ವಾರು ಕಾರಣಗಳಿಂದ ಹಿನ್ನಡೆ ಅನುಭವಿಸು-­ವಂತಾಗುತ್ತದೆ. ಇನ್ಫೊಸಿಸ್‌ ಕೂಡಾ ಇದಕ್ಕೆ ಹೊರತಾಗಲಿಲ್ಲ. ಐಟಿ ಉದ್ಯಮದ ನಾಯಕನಾ­ಗಿದ್ದ ಕಂಪೆನಿ ತನ್ನ ಪ್ರಗತಿ ಮತ್ತು ಲಾಭ ಗಳಿಕೆಯಲ್ಲಿ ಹಿನ್ನಡೆ ಅನುಭವಿಸುವ ಹಂತಕ್ಕೆ ಬಂತು. ಕಂಪೆನಿಯನ್ನು ಹುಟ್ಟುಹಾಕಿದವರು ಈಗಲೂ ಕಂಪೆನಿಯ ನಾಯಕರಾಗಿಯೇ ಮುಂದು­ವರಿದರೂ ಉದ್ಯಮದಲ್ಲಿನ ನಾಯಕತ್ವ ಸ್ಥಾನವನ್ನು ಮುಂದುವರಿಸುವಂತಹ ಶಕ್ತಿಯನ್ನು ಉಳಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ.

ಈ ನಾಯಕರೆಲ್ಲರೂ ಅತ್ಯಂತ ಸ್ಪರ್ಧಾತ್ಮಕ­ವಾ­ಗಿಯೇ ಇದ್ದರೂ, ವೇಗದ ಯುಗದಲ್ಲಿ ಇನ್ನಷ್ಟು ವೇಗದಲ್ಲಿ  ಬದಲಾವಣೆ ಸಾಧಿಸಲು ಅವರಿಂದ ಸಾಧ್ಯವಾಗಲಿಲ್ಲ. ಮೂರು ದಶಕಗಳಿಗೂ ಅಧಿಕ ಸಮಯದಿಂದ ಒಂದೇ ಪರಿಸರದಲ್ಲಿ ದುಡಿದ ಅವರಿಗೆ ಒಂದು ರೀತಿಯ ನೆಮ್ಮದಿಯ ಭಾವ ಮೂಡಿತ್ತು ಮತ್ತು ಅವರು ಮುನ್ನುಗ್ಗುವಂತಹ ಮನೋಭಾವವನ್ನು ಕಳೆದುಕೊಂಡಿದ್ದರು. ಇದಕ್ಕೆ ತಕ್ಕಂತೆ ಕಂಪೆನಿಯಲ್ಲಿ ನಡೆದ ಕೆಲವೊಂದು ಬದಲಾವಣೆಗಳೂ ಉತ್ತಮವಾಗಿರಲಿಲ್ಲ. ಕೊನೆಗೂ ಕಂಪೆನಿಯನ್ನು ಮುನ್ನಡೆಸಲು ಹೊಸ ಹಾಗೂ ಯುವ ಸಿಇಒ ತರಲಾಗಿದೆ.

ಈ ವಿದ್ಯಮಾನದಲ್ಲಿ ಹಲವಾರು ಕಥೆಗಳಿವೆ. ಐಟಿ ಮಾರುಕಟ್ಟೆ ಇಂದು ಎಲ್ಲಾ ಖಂಡಗಳಿಗೂ ವಿಸ್ತರಿಸಿದೆ, ಸ್ಪರ್ಧೆ ಎಂಬುದು ಬಹಳ ಪ್ರಬಲವಾಗಿದೆ ಹಾಗೂ ಪ್ರತಿ ದಿನ ಎಂಬಂತೆ ತಂತ್ರಜ್ಞಾನ ಬದಲಾಗುತ್ತಿದೆ. ಸ್ಪರ್ಧೆಗಳನ್ನೆಲ್ಲಾ ಎದುರಿಸಿ ಮುಂಚೂಣಿಯಲ್ಲಿ ನಿಲ್ಲಲು ಕಂಪೆನಿ­ಗಳು ಇಂದು ಬಹಳ ದೊಡ್ಡ ಪ್ರಯತ್ನವನ್ನೇ ನಡೆಸಬೇಕಾಗುತ್ತದೆ. ಇಂತಹ ಕಂಪೆನಿಗಳ ನಾಯಕತ್ವದಲ್ಲಿ ಒಂದು ದೂರದೃಷ್ಟಿ ಮತ್ತು ಅತ್ಯಂತ ವೇಗವಾಗಿ ಬದಲಾವಣೆಗಳನ್ನು ನಿರ್ದಯ­ವಾಗಿ ಮಾಡುವಂತಹ ಮನೋಭಾವ ಇರಬೇಕು. ಈ ವಿಷಯದಲ್ಲಿ ಸಣ್ಣ ಉದಾ­ಸೀನವೂ ವಹಿವಾಟನ್ನು ಹಾಳು ಮಾಡಬಹುದು. ಕಂಪೆನಿಯನ್ನು ಹುಟ್ಟುಹಾಕಿದವರನ್ನು ಕಂಪೆನಿಯ ಕಾರ್ಯಾಚರಣೆಯ ಮುಖ್ಯಸ್ಥರ­ನ್ನಾಗಿ ಮಾಡಿ ಅವರಿಗೆ ಗೌರವ ಸೂಚಿಸಿದ್ದ ಕಂಪೆನಿಯ ನೀತಿ ಸಮರ್ಪಕವೇ ಆಗಿದ್ದರೂ, ಅದು ಸರಿಯಾದ ನಿರ್ಧಾರವಾಗಿರಲಿಲ್ಲ.

ತುಸು ವಿಳಂಬವಾದರೂ, ಈ ವಾಸ್ತವವನ್ನು ಅರ್ಥ ಮಾಡಿಕೊಂಡು, ಹೊರಗಿನ ಸಮರ್ಥ ವ್ಯಕ್ತಿ­ಯೊಬ್ಬರಿಗೆ ಕಂಪೆನಿಯ ಹೊಣೆಗಾರಿಕೆ ನೀಡಿದ ಇನ್ಫೊಸಿಸ್‌ನ ಆಡಳಿತ ಮಂಡಳಿಯನ್ನು ನಾವು ಅಭಿನಂದಿಸಬೇಕು. ಮೂರು ದಶಕಗಳಿಗೂ ಅಧಿಕ ಸಮಯದಿಂದ ಕಂಪೆನಿಯನ್ನು ಬೆಳೆಸಿದ ಸಂಸ್ಥಾಪಕರಿಗೆ ಕಂಪೆನಿಯ ವ್ಯವಹಾರಗಳ ಮೇಲಿನ ನಿಯಂತ್ರಣ ಬಿಟ್ಟುಕೊಡುವುದು ನಿಜವಾಗಿಯೂ ಕಷ್ಟಕರ ಮತ್ತು ತೀರಾ ಭಾವನಾತ್ಮಕ ವಿಚಾರ ಎಂಬುದು ಸತ್ಯ. ಆದರೆ ಬೆಂಗಳೂರಿನ ಮಂದಿ ಈ ಮಹಾನ್‌ ಕಂಪೆನಿ ಇನ್ನಷ್ಟು ದೊಡ್ಡದಾಗಿ ಬೆಳೆಯುವುದನ್ನು ಮತ್ತು ತನ್ನ ಗತಕಾಲದ ವೈಭವವನ್ನು ಮರಳಿ ಪಡೆಯುವುದನ್ನು ಎದುರು ನೋಡುತ್ತಿದ್ದಾರೆ. ಅದಕ್ಕಾಗಿಯೇ ಆಗಿರುವ ಈ ಬದಲಾವಣೆ­ಯನ್ನು ಅವರೆಲ್ಲರೂ ಸ್ವಾಗತಿಸುವುದು ನಿಶ್ಚಿತ.
* * *
ವ್ಯವಹಾರ ಅಭಿವೃದ್ಧಿ– ಸರಿಯಾದ ಹೆಜ್ಜೆ: ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ನಿಯುಕ್ತರಾದ ವಿದೇಶ ಸೇವೆಯ ಅಧಿಕಾರಿಗಳನ್ನು ಉದ್ದೇಶಿಸಿ ಈಚೆಗೆ ಮಾತನಾ­ಡಿದ್ದು ನಿಜಕ್ಕೂ ಹೃದಯಕ್ಕೆ ತಟ್ಟುವಂತಹ ವಿಚಾರವಾಗಿತ್ತು. ರಾಜತಾಂತ್ರಿಕ ವಿಚಾರದ ಜತೆಯಲ್ಲಿ ಉದ್ಯಮ ಅಭಿವೃದ್ಧಿ ವಿಚಾರಗಳತ್ತ ಹೆಚ್ಚಿನ ಗಮನ ಹರಿಸುವಂತೆ ಮೋದಿ ಸಲಹೆ ನೀಡಿದ್ದರು. ಸರ್ಕಾರದ ಧೋರಣೆಯಲ್ಲಿ ಆಗಿ­ರುವ ಈ ಬದಲಾವಣೆ ನಿಜಕ್ಕೂ ಸ್ವಾಗತಾರ್ಹ.

ಬಹುತೇಕ ದೇಶಗಳಲ್ಲಿ ಇರುವ ರಾಜತಾಂತ್ರಿಕ ಕಚೇರಿಗಳು ಅಲಂಕಾರಿಕ ಮತ್ತು ಅವುಗಳು ಉದ್ಯಮ ವ್ಯವಹಾರ ಅಭಿವೃದ್ಧಿಗೆ ಹೆಚ್ಚೇನನ್ನೂ ಕೊಡುಗೆಯಾಗಿ ನೀಡುತ್ತಿಲ್ಲ. ಭಾರತದೊಂದಿಗೆ ಭೌಗೋಳಿಕ–ರಾಜಕೀಯ ಪ್ರಭಾವ ಹೊಂದಿ­ರುವ ಮತ್ತು ಭಾರತೀಯರು ಅಧಿಕ ಸಂಖ್ಯೆ­ಯಲ್ಲಿ ನೆಲೆಸಿರುವ ದೇಶಗಳ ಹೊರತುಪಡಿಸಿ ಉಳಿದ ರಾಷ್ಟ್ರಗಳಲ್ಲಿ ಉಭಯ ದೇಶಗಳ ವ್ಯಾಪಾರ, ವಹಿವಾಟು ವೃದ್ಧಿಗೆ ಹೆಚ್ಚಿನ ಏನನ್ನೂ ಮಾಡುತ್ತಿಲ್ಲ. ಉಭಯ ದೇಶಗಳ ನಡುವೆ ವ್ಯಾಪಾರ, ಉದ್ಯಮ, ಹೂಡಿಕೆ, ಪ್ರವಾಸೋ­ದ್ಯಮ ಅಭಿವೃದ್ಧಿಗೆ ಈ ರಾಜತಾಂತ್ರಿಕ ಕಚೇರಿಗ­ಳನ್ನು ಉತ್ತರದಾಯಿತ್ವವನ್ನಾಗಿ ಮಾಡಬೇಕು ಎಂದು ನಾನು ಈ ಹಿಂದಿನ ಒಂದು ಅಂಕಣದಲ್ಲಿ ಬರೆದಿದ್ದೆ.

ಹಲವಾರು ದೇಶಗಳಿಗೆ ತೆರಳಿದ ಉದ್ಯಮ ನಿಯೋಗದಲ್ಲಿ ನಾನೂ ಇದ್ದುದರಿಂದ ನನಗೆ ಅಲ್ಲಿನ ಕೆಲಸದ ವೈಖರಿ ಗೊತ್ತಿದೆ. ಇಂತಹ ರಾಜತಾಂತ್ರಿಕ ಕಚೇರಿಗಳ ದೊಡ್ಡಸ್ತಿಕೆಯ ಮನೋಭಾವ ಕಂಡು ನಿರಾಶೆಯಿಂದಲೇ ದೇಶಕ್ಕೆ ಹಿಂದಿರುಗಿದ್ದು ಹೆಚ್ಚು. ಕೆಲವೊಂದು ದೇಶಗಳಲ್ಲಿ ತೀರಾ ನಿರಾಶಾದಾಯಕ  ಸ್ವಾಗತ ಕಾದಿರುತ್ತದೆ, ಸಹಜವಾಗಿಯೇ ಭಾರತೀಯ ಉದ್ಯಮಿಗಳಿಗೆ ಇದು ಬೇಸರ ತರಿಸಿಬಿಡುತ್ತದೆ.

ಇಂತಹ ವಿಷಯಗಳನ್ನು ತಿಳಿಸುವಲ್ಲಿ ಮೋದಿ ಅವರು ಸರಿಯಾದ ಜಾಗಕ್ಕೇ ಹೊಡೆದಿದ್ದಾರೆ. ಮೋದಿ ಅವರು ಭೂತಾನ್‌ನ ತಮ್ಮ ಪ್ರಥಮ ವಿದೇಶಿ ಪ್ರವಾಸದಲ್ಲೇ ‘ಬಿ 4 ಬಿ’ ಎಂದು ಹೇಳುವ ಮೂಲಕ ಉದ್ಯಮ ವ್ಯವಹಾರಕ್ಕೆ ತಮ್ಮ ಪ್ರಥಮ ಪ್ರಾಶಸ್ತ್ಯ ಎಂಬುದನ್ನು ತೋರಿಸಿಕೊಟ್ಟಿ­ದ್ದಾರೆ. ವಿದೇಶಗಳಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೂಲಕ ವ್ಯವಹಾರ ಕುದುರಿಸುವ ನಿಟ್ಟಿನಲ್ಲಿ ಮೋದಿ ಅವರು ತೋರಿಸಿರುವ ಹಾದಿ ಹಳೆಯ ಉದಾಸೀನ ಮನೋಭಾವದಿಂದ ಹೊರಬರಲು ನೆರವಾಗ­ಲಿದೆ ಮತ್ತು ಸಂಪನ್ಮೂಲವನ್ನು ದೇಶದ ಬಳಕೆಗಾಗಿ ಬಳಸಿಕೊಳ್ಳುವಂತಾಗಲಿದೆ.

ಈ ಅಧಿಕಾರಿಗಳಿಗೆ ಗುರಿಗಳನ್ನು ನೀಡಿ, ಕಾಲಕಾಲಕ್ಕೆ ಅವುಗಳ ಮೌಲ್ಯಮಾಪನ ಮಾಡುವಂತಹ ಕ್ರಮಕ್ಕೂ ಮೋದಿ ಅವರು ಮುಂದಾಗಬೇಕಿತ್ತು. ದೇಶಗಳ ನಡುವೆ ವ್ಯವಹಾರ ವೃದ್ಧಿಗೆ ಇರುವ ಈ ಒಂದು ಸುವರ್ಣ ಅವಕಾಶವನ್ನು ನಾವು ಬಹಳ ಕಾಲದಿಂದ ಕೈಚೆಲ್ಲಿಕೊಂಡುಬಿಟ್ಟಿದ್ದೆವು. ಆದರೆ ಇದೀಗ ಪ್ರಧಾನಿ ಅವರಿಂದಲೇ ಇಂತಹ ಕ್ರಮವೊಂದು ಆರಂಭವಾಗಿರುವುದು ಅತ್ಯಂತ ಸ್ವಾಗತಾರ್ಹ ವಿಚಾರ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT