ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಒಪ್ಪಂದ: ಇಂಧನ ಅಗತ್ಯದ ಮನವರಿಕೆ?

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇರಾನಿನ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ಕಡಿವಾಣ ವಿಧಿಸುವುದಕ್ಕೆ ಸಂಬಂಧಿ­ಸಿದಂತೆ ವಿಶ್ವದ ಆರು ಬಲಾಢ್ಯ ದೇಶಗಳು ಆ ದೇಶದ ಜತೆ ಇತ್ತೀಚೆಗೆ ಮಾಡಿಕೊಂಡ ಐತಿಹಾಸಿಕ ಒಪ್ಪಂದವು ಅಂತರರಾಷ್ಟ್ರೀಯವಾಗಿ ಮಹತ್ವದ ರಾಜತಾಂತ್ರಿಕ ಗೆಲುವಾಗಿದೆ. ಅಮೆರಿಕ, ಇಂಗ್ಲೆಂಡ್, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಪಟ್ಟಾಗಿ ಕುಳಿತು ಇರಾನ್ ಜತೆ ಕೊನೆಗೂ ಒಪ್ಪಂದಕ್ಕೆ ಬಂದಿರುವುದನ್ನು ಕೆಲ ವಿಶ್ಲೇಷಕರು ಜೂಜು ಎಂದೇ ಬಣ್ಣಿಸಿದ್ದರೂ, ಸದ್ಯದ ಜಾಗತಿಕ ಮತ್ತು ಆರ್ಥಿಕ ಸನ್ನಿವೇಶದಲ್ಲಿ ಈ ವಿದ್ಯಮಾನಕ್ಕಂತೂ ತುಂಬ ಮಹತ್ವ ಇದೆ.

ಯುರೇನಿಯಂ ಸಮೃದ್ಧಗೊಳಿಸುವುದಕ್ಕೆ ಮಿತಿಗೊಳಿಸಲು ಇರಾನ್ ಕೊನೆಗೂ ಸಮ್ಮತಿಸಿರುವುದೇ ಈ ಒಪ್ಪಂದದ ಒಟ್ಟಾರೆ ತಿರುಳಾಗಿದೆ. ಇದೇ ಕಾರಣಕ್ಕೆ ಪ್ರಮುಖ ದೇಶಗಳು ಇರಾನ್ ವಿರುದ್ಧ ಜಾರಿಗೊಳಿಸಿದ್ದ ಆರ್ಥಿಕ ದಿಗ್ಬಂಧನ ತೆರವುಗೊಳಿಸುವುದಾಗಿ ಪ್ರಕಟಿಸಿವೆ.  ಇರಾನ್ ರಫ್ತು ಮಾಡಿದ್ದ ಕಚ್ಚಾ ತೈಲಕ್ಕೆ ಪ್ರತಿಯಾಗಿ ಆಮದು ಮಾಡಿಕೊಂಡ ದೇಶಗಳು ಪಾವತಿಸಬೇಕಾಗಿದ್ದ 700 ಕೋಟಿ ಡಾಲರ್ (ಅಂದಾಜು ₨ 43,400 ಕೋಟಿ) ಮೊತ್ತದ ಮೇಲಿನ ನಿರ್ಬಂಧ ಸಡಿಲಿಕೆ ಮಾಡಿರುವುದೂ ಮಹತ್ವದ ನಿರ್ಧಾರವಾಗಿದೆ.

ಈ ಒಪ್ಪಂದವು ಭಾರತದ ಅರ್ಥ ವ್ಯವಸ್ಥೆ ಮೇಲೆಯೂ ಗಮನಾರ್ಹ ಪರಿಣಾಮ ಬೀರಲಿದೆ. ಭಾರತದ ಆಮದು - ರಫ್ತು ವಹಿವಾಟಿನ ಮೇಲೆ ಇದರಿಂದ ವ್ಯಾಪಕ ಪ್ರಮಾಣದ ಸಕಾರಾತ್ಮಕ ಪರಿಣಾಮ ಆಗಲಿದೆ.  ಭಾರತ ಮತ್ತು ಇರಾನ್ ಮಧ್ಯೆ ಐತಿಹಾಸಿಕ ಬಾಂಧವ್ಯ ಇದೆ. ಆರ್ಥಿಕ ದಿಗ್ಬಂಧನ ಜಾರಿಗೆ ಮುಂಚಿನಿಂದಲೂ ಭಾರತವು ಇರಾನ್‌ನಿಂದ ಗಮನಾರ್ಹ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ.

ಈ ಸಕಾರಾತ್ಮಕ ಬೆಳವಣಿಗೆಯ ಫಲವಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಪೂರೈಕೆ ಹೆಚ್ಚಲಿದೆ. ಹೀಗಾಗಿ ಕಚ್ಚಾ ತೈಲದ ಬೆಲೆಯಲ್ಲಿ ಸ್ಥಿರತೆ ಕಂಡು ಬರಲಿದೆ. ಇದು ಭಾರತದ ಆಮದು ವೆಚ್ಚವನ್ನು ತಗ್ಗಿಸಲಿದೆ.  ಕಚ್ಚಾ ತೈಲದ ಬೆಲೆ  ಒಂದು ಡಾಲರ್‌ನಷ್ಟು ಅಗ್ಗವಾದರೂ ಅದ­­ರಿಂದ ಅಂದಾಜು ₨4,000 ಕೋಟಿಗಳಷ್ಟು ಉಳಿತಾಯವಾಗಲಿದೆ ಎಂದು ಪೆಟ್ರೋಲಿಯಂ ಸಚಿವಾಲಯವೇ ಅಂದಾಜಿಸಿದೆ.

ಇರಾನ್ ವಿರುದ್ಧ ಅಂತರರಾಷ್ಟ್ರೀಯ ಆರ್ಥಿಕ ದಿಗ್ಬಂಧನ ಹೆಚ್ಚಿದ್ದರಿಂದ, ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲದ ಪ್ರಮಾಣವು ಗಮನಾರ್ಹವಾಗಿ ತಗ್ಗಿತ್ತು. 2010–-11ನೇ ಸಾಲಿನಲ್ಲಿ 18.5 ದಶಲಕ್ಷ ಟನ್‌ಗಳಷ್ಟಿದ್ದ ಕಚ್ಚಾ ತೈಲದ ಆಮದು 2012–-13ನೇ ಸಾಲಿನಲ್ಲಿ 13 ದಶಲಕ್ಷ ಟನ್‌ಗಳಿಗೆ ಕುಸಿದಿತ್ತು.

ಬದಲಾದ ಸನ್ನಿವೇಶದಲ್ಲಿ, ಭಾರತವು ಇರಾನ್‌ನಿಂದ ಮತ್ತೆ ಮೊದಲಿನ ಪ್ರಮಾಣ­ದಲ್ಲಿಯೇ ಕಚ್ಚಾ ತೈಲ ಆಮದು ಮಾಡಿಕೊಳ್ಳ­ಬಹುದಾಗಿದೆ. ಪೆಟ್ರೋಲಿಯಂ ಸಚಿವಾ­ಲಯವು 800 ಕೋಟಿ ಡಾಲರ್ (ಅಂದಾಜು
₨ 49,600 ಕೋಟಿ) ಉಳಿಸಲು ರೂಪಾಯಿ ಬೆಲೆಯಲ್ಲಿ 11 ದಶಲಕ್ಷ ಟನ್‌ಗಳಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಮಾಡಿ ಕೊಂಡಿದ್ದ ಒಪ್ಪಂದದ ಮೇಲೆ ಈ ವಿದ್ಯಮಾನವು ಕೆಲಮಟ್ಟಿಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಇತ್ತೀಚಿನ 6ರಿಂದ 9 ತಿಂಗಳ ಅವಧಿಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಬೆಲೆ ನಿರಂತರವಾಗಿ ಅಪಮೌಲ್ಯ ಆಗುತ್ತಿರುವುದ ರಿಂದ, ಕಚ್ಚಾ ತೈಲದ ಬೆಲೆಗೆ ಸಂಬಂಧಿಸಿದಂತೆ ಆಗುವ ಯಾವುದೇ ಪ್ರಮಾಣದ ಉಳಿ ತಾಯವು, ನಿಯಂತ್ರಣಕ್ಕೆ ಸಿಗದೇ ಹಟಮಾರಿ ತನ ಮಾಡುತ್ತಿರುವ ಹಣದುಬ್ಬರ ಮಟ್ಟವನ್ನು ತಗ್ಗಿಸಲು ಖಂಡಿತವಾಗಿಯೂ ನೆರವಾಗಲಿದೆ.

ಭಾರತದ ಇಂಧನ ಭವಿಷ್ಯ ಅದೆಷ್ಟು ಸುರಕ್ಷಿತವಾಗಿದೆ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ರಾಜಕೀಯ ಅಸ್ಥಿರತೆ ಇರುವ ನೈಜೀರಿಯಾ, ಸೌದಿ ಅರೇಬಿಯಾ, ಇರಾನ್ ಮತ್ತು ಕುವೈತ್ ನಂತಹ ದೇಶಗಳನ್ನು ಭಾರತ ಅದೆಷ್ಟರಮಟ್ಟಿಗೆ ಮತ್ತು ಎಲ್ಲಿಯವರೆಗೆ ಅವಲಂಬಿಸಬಹುದು ಎನ್ನುವ ಪ್ರಶ್ನೆಗೆ ತಕ್ಷಣಕ್ಕೆ ಉತ್ತರ ಸಿಗಲಾರದು.

ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸುವಂತಹ ಜಾಗತಿಕ ವಿದ್ಯಮಾನಗಳು  ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವುದು ಮತ್ತು ನಮ್ಮ ಇಂಧನದ ಅಗತ್ಯವು ದಿನೇ ದಿನೇ ಅಸಾಮಾನ್ಯ ದರದಲ್ಲಿ ಏರುಗತಿಯಲ್ಲಿ ಇರು­ವಾಗ ಸೂಕ್ತ ಯೋಜನೆ ಇಲ್ಲದಿರುವುದರಿಂದ ದೇಶದ ಅರ್ಥ ವ್ಯವಸ್ಥೆಯ ಮೇಲೆ ಅಲ್ಪಾವಧಿ ಮತ್ತು ದೀರ್ಘಾವಧಿ ಅಭಿವೃದ್ಧಿಯ ಮೇಲೆ ಸಹಜವಾಗಿಯೇ ಪ್ರತಿಕೂಲ ಪರಿಣಾಮ ಕಂಡು ಬರಲಿದೆ.

ಪೆಟ್ರೋಲಿಯಂ ಉತ್ಪನ್ನಗಳಾದ ಡೀಸೆಲ್, ಪೆಟ್ರೋಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲ (ಎಲ್‌ಪಿಜಿ) ಮುಂತಾದವು ದೇಶ ಮುನ್ನಡೆ­ಸುವ ಇಂಧನಗಳಾಗಿವೆ. ಈ ಎಲ್ಲ ಪೆಟ್ರೋಲ್ ಉತ್ಪನ್ನಗಳ ಬಳಕೆಯು ಸದ್ಯದ ಸಂದರ್ಭದಲ್ಲಿ ಕಡಿಮೆಯಾಗುವ ಸಾಧ್ಯತೆಗಳು ತುಂಬ ಕ್ಷೀಣ.

ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಇತ್ತೀಚಿನ ವರದಿಯೊಂದರಲ್ಲಿ, ಸಕಾಲಕ್ಕೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡದಿರುವುದರಿಂದ ಭಾರತವು ಇಂಧನ ಬಿಕ್ಕಟ್ಟಿನತ್ತ ಸಾಗುತ್ತಿದೆ ಎಂದು ಎಚ್ಚರಿಸಲಾಗಿದೆ.
ಭಾರತದ ಇಂಧನದ ಭವಿಷ್ಯ ಸುರಕ್ಷಿತ­ಗೊಳಿಸಲು ಮತ್ತು ಯಾವುದೇ ಬಗೆಯ ಇಂಧನ ಬಿಕ್ಕಟ್ಟು ತಪ್ಪಿಸಲು ಗಂಭೀರವಾಗಿ ಚಿಂತಿಸುವ ಅಗತ್ಯ ಇದೆ. ಪಳೆಯುಳಿಕೆ ಇಂಧನ ಅಥವಾ ಪೆಟ್ರೋಲ್ ಮೇಲಷ್ಟೇ ಅಲ್ಲದೇ ಪರ್ಯಾಯ ಶಕ್ತಿ ಮೂಲಗಳಾದ  ಸೌರಶಕ್ತಿ, ಗಾಳಿ ವಿದ್ಯುತ್ ಮತ್ತಿತರ ಪುನರ್ ಬಳಕೆಯ ಇಂಧನ ಮೂಲ­ಗಳನ್ನು ಪತ್ತೆಹಚ್ಚಿ ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಾಗಿದೆ.

ಸದ್ಯಕ್ಕೆ ಪರಮಾಣು ವಿದ್ಯುತ್ ಮತ್ತು ಸೌರಶಕ್ತಿ ಬಗ್ಗೆ ಹೆಚ್ಚು ಗಮನ ಹರಿಸಲಾಗಿದ್ದು ಸಾಕಷ್ಟು ಪ್ರಗತಿಯನ್ನೂ ಸಾಧಿಸಲಾಗಿದೆ. ಇತರ ಅನೇಕ ದೇಶಗಳು ಈ ಪರ್ಯಾಯ ಇಂಧನ ಮೂಲ­ಗಳ ಮೇಲಿನ ಅವಲಂಬನೆ ಹೆಚ್ಚಿಸಿರುವಾಗ ಭಾರತ ನಿಧಾನವಾಗಿ ಹೆಜ್ಜೆ ಹಾಕುತ್ತಿದೆ.

ನಮ್ಮಲ್ಲಿ ಕಲ್ಲಿದ್ದಲಿನ ನಿಕ್ಷೇಪವು ಸಾಕಷ್ಟು ಪ್ರಮಾಣದಲ್ಲಿ ಇರುವಾಗ, ನಿರಂತರವಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗುತ್ತಿದೆ. ಇಂಧನ ಅಗತ್ಯದ ಸವಾಲನ್ನು ಭಾರತ ಹೇಗೆ ಕಳಪೆಯಾಗಿ ನಿರ್ವಹಿಸುತ್ತಿದೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.

ಕೇಂದ್ರ ಸರ್ಕಾರವು ಇಂಧನ ನೀತಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಅಳವಡಿಸಿಕೊಂಡಿರುವ ತೇಪೆ ಹಚ್ಚುವಂತಹ ನೀತಿಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ.

ನಾನು ಇಲ್ಲಿ ಪ್ರಸ್ತಾಪಿಸಿರುವ ಕೆಲ ಸಲಹೆ­ಗಳು ದೇಶದ ಇಂಧನ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಮಗ್ರವಾಗಿ ಬಗೆಹರಿಸಲು ಕೆಲಮಟ್ಟಿಗೆ ನೆರವಾಗುವ ಸಾಧ್ಯತೆಗಳಿವೆ.

1. ಇಂಧನ ವಲಯದಲ್ಲಿನ ಬೆಲೆ ನಿರ್ಧಾರ ವ್ಯವಸ್ಥೆಯು, ಕೆಲ ನಿಯಂತ್ರಣಗಳೊಂದಿಗೆ ಮಾರುಕಟ್ಟೆ ಆಧಾರಿತವಾಗಿರಬೇಕಾಗಿದೆ. ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವಾದ ಮತ್ತು ಆಕರ್ಷಕವಾದ ಬಂಡವಾಳ ಹೂಡಿಕೆ ಉತ್ತೇಜಿಸಬೇಕಾಗಿದೆ. ಒಂದು ವೇಳೆ ಬೆಲೆ ವ್ಯವಸ್ಥೆಯಲ್ಲಿ ಯಾವುದೇ ಬಗೆಯ ಅಸ್ಪಷ್ಟತೆ ಇದ್ದರೆ ಹೊಸ ಖಾಸಗಿ ಸಂಸ್ಥೆಗಳು ಈ ವಲಯ ಪ್ರವೇಶಿಸಲು ಹಿಂದೇಟು ಹಾಕುತ್ತವೆ.

ಮುಂದಿನ 20 ವರ್ಷಗಳಲ್ಲಿನ ಇಂಧನ ಬೇಡಿಕೆ ಪೂರೈಸಲು ಪ್ರತಿ ವರ್ಷ 8,000 ರಿಂದ 9,000 ಕೋಟಿ ಡಾಲರ್‌ಗಳಷ್ಟು (₨4,96,000 ಕೋಟಿಗಳಿಂದ ₨5,58,000 ಕೋಟಿ) ಬಂಡವಾಳ ಹೂಡಿಕೆ ಮಾಡಬೇಕಾದ ಅಗತ್ಯ ಇದೆ ಎಂದು ಅಂದಾಜಿಸಲಾಗಿದೆ. ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಮತ್ತು ಪಾರದರ್ಶಕತೆ ಇದ್ದರೆ ಮಾತ್ರ ಖಾಸಗಿ ಸಂಸ್ಥೆಗಳು ಹೆಚ್ಚು ಉತ್ಸುಕತೆಯಿಂದ ಬಂಡವಾಳ ಹೂಡಿಕೆಗೆ ಮುಂದಾಗಬಹುದು.

2. ವಿದ್ಯುತ್ ಉತ್ಪಾದನೆ ವಲಯವನ್ನು ಸಾಕಷ್ಟು ಉದಾರೀಕರಣಗೊಳಿಸಿದ್ದರೂ,  ವಿದ್ಯುತ್ ಉತ್ಪಾದನೆ, ಸಾಗಾಣಿಕೆ ಮತ್ತು ವಿತರಣೆ ವಲಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿಡಿತ ಗಮನಾರ್ಹ ಪ್ರಮಾಣ­ದಲ್ಲಿಯೇ ಇದೆ. ಈ ವಲಯದಲ್ಲಿ ಪರಿಣಾಮ­ಕಾರಿಯಾದ ವಿದ್ಯುತ್ ಸಾಗಾಣಿಕೆ ಮತ್ತು ವಿತರಣೆಯಲ್ಲಿ ಖಾಸಗಿಯವರ ಪ್ರವೇಶವನ್ನು ಇನ್ನಷ್ಟು ಉತ್ತೇಜಿಸಬೇಕಾಗಿದೆ.

3. ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ ಕೆಲಮಟ್ಟಿಗೆ ಖಾಸಗಿ ಹೂಡಿಕೆ ಇದ್ದರೂ, ಬಹುತೇಕ ತೈಲೋತ್ಪನ್ನಗಳ ಬೆಲೆಗಳು ಈಗಲೂ ಭಾಗಶಃ ನಿಯಂತ್ರಣದಲ್ಲಿ ಇವೆ. ಇಲ್ಲಿ ಸಾಕಷ್ಟು ಸಮಸ್ಯೆಗಳೂ ಇವೆ. ದುರ್ಬಳಕೆ­ಯಾಗುವ ಸಬ್ಸಿಡಿ ಫಲವಾಗಿ ಕಚ್ಚಾ ತೈಲ ಆಮದಿಗೆ ಮಾಡುವ ಅತಿಯಾದ ವೆಚ್ಚ­ದಿಂದಾಗಿ ವಿತ್ತೀಯ ಕೊರತೆ ಗರಿಷ್ಠ ಮಟ್ಟ­ದಲ್ಲಿಯೇ ಇದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಿಗೆ ಕೆಲ ಸಬ್ಸಿಡಿಗಳನ್ನು ನಿಲ್ಲಿಸ­ಲಾಗುತ್ತಿದೆ. ಹೀಗಾಗಿ ಈ ಸಂಸ್ಥೆಗಳಲ್ಲಿ ದೀರ್ಘಾ­ವಧಿ ಬಂಡವಾಳ ಹೂಡಿಕೆಗಾಗಿ ಸಾಕಷ್ಟು ಸಂಪನ್ಮೂಲವೂ ಕ್ರೋಡೀಕರಣಗೊಳ್ಳುತ್ತಿಲ್ಲ. ಈ ವಲಯದಲ್ಲಿ ಖಾಸಗಿ ಬಂಡವಾಳ ಹೂಡಿಕೆ­ಯನ್ನೂ ದೂರ ಇರಿಸಲಾಗಿದೆ. ಹೀಗಾಗಿ ಬೆಲೆ­ಗಳನ್ನು ಸಂಪೂರ್ಣ ನಿಯಂತ್ರಣ ಮುಕ್ತ­ಗೊಳಿಸುವ ಮತ್ತು ಸಬ್ಸಿಡಿ ಸದ್ಬಳಕೆಗೆ ಆದ್ಯತೆ ನೀಡಬೇಕಾಗಿದೆ.

4. ಕಲ್ಲಿದ್ದಲು ನಮ್ಮ ವಿದ್ಯುತ್ ಅಗತ್ಯದ ಪ್ರಮುಖ ಮೂಲವಾಗಿದೆ. ಒಟ್ಟಾರೆ ಕಲ್ಲಿದ್ದಲು ನಿಕ್ಷೇಪ ವಲಯದ ನಿರ್ವಹಣೆಯು ಅದಕ್ಷತೆ­ಯಿಂದ ಕೂಡಿದ್ದು, ಖಾಸಗಿ ಹೂಡಿಕೆಗೆ ಸಂಪೂರ್ಣವಾಗಿ ಮುಕ್ತವಾಗಿಲ್ಲ.

ಸರ್ಕಾರಿ ಸ್ವಾಮ್ಯದ ಎರಡು ಸಂಸ್ಥೆಗಳು ಇಲ್ಲಿ ಏಕಸ್ವಾಮ್ಯ ಹೊಂದಿದ್ದು, ಇತ್ತೀಚಿಗೆ ಬೆಳಕಿಗೆ ಬಂದಿರುವ ಕಲ್ಲಿದ್ದಲು ಹಗರಣವು ಈ ವಲಯದಲ್ಲಿನ ಕೊಳಕಿಗೆ ಕನ್ನಡಿ ಹಿಡಿಯುತ್ತದೆ. ಈ ಸಮಸ್ಯೆಯನ್ನು ತಕ್ಷಣಕ್ಕೆ ಪರಿಹರಿಸ­ಬೇಕಾಗಿದೆ. ಸರ್ಕಾರ ಅಥವಾ ಖಾಸಗಿಯವರಿಗೆ ಸೇರಿದ ನೈಸರ್ಗಿಕ ಸಂಪನ್ಮೂಲಗಳನ್ನು ದೇಶದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕಾಗಿದೆ.

5. ಪುನರ್ ಬಳಕೆ ಇಂಧನ ವಲಯವು ಸಾಕಷ್ಟು ಭರವಸೆ ಮೂಡಿಸಿದ್ದರೂ, ಅದನ್ನು ಮಲತಾಯಿ ಧೋರಣೆಯಿಂದ ಕಾಣ­ಲಾಗು­ತ್ತಿದೆ. ಸರ್ಕಾರದ ಈ ಪ್ರವೃತ್ತಿ ಬದಲಾಗ­ಬೇಕಾಗಿದೆ. ನಾವು ಈಗ ಅತಿಯಾಗಿ ಅವಲಂಬಿಸಿರುವ ಕಲ್ಲಿದ್ದಲು, ಪೆಟ್ರೋಲ್ ಮತ್ತಿತರ ಇಂಧನ ಮೂಲಗಳು ಸೀಮಿತ ಪ್ರಮಾಣದಲ್ಲಿ ಇವೆ. ಭವಿಷ್ಯದ ವಿದ್ಯುತ್ ಉತ್ಪಾದನೆಗಾಗಿ ಇವುಗಳನ್ನು ಹೆಚ್ಚಿನ ವಿವೇಚನೆ­ಯಿಂದ ಬಳಸಬೇಕಾಗಿದೆ.

6. ರಾಜಕೀಯ ಇಚ್ಛಾಶಕ್ತಿ ಇರದಿದ್ದರೆ ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗಲಾರದು.  ಇಂಧನ ಮತ್ತು ವಿದ್ಯುತ್ ವಲಯದಲ್ಲಿನ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಸುಧಾರಣೆ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತಗೊಳಿಸಬೇಕಾಗಿದೆ.

ದೇಶದ ಆರ್ಥಿಕ ಬೆಳವಣಿಗೆಗೆ ಎಲ್ಲ ಬಗೆಯ ಇಂಧನದ ಸಮರ್ಪಕ ಮತ್ತು ಸುಸ್ಥಿರ ಪೂರೈಕೆಗೆ ಗರಿಷ್ಠ ಮಹತ್ವ ನೀಡಬೇಕಾಗಿದೆ. ಇರಾನ್ ಪರಮಾಣು ಒಪ್ಪಂದವು ವಸ್ತುಸ್ಥಿತಿ ಅರ್ಥೈಸಿಕೊಳ್ಳಲು ಪ್ರಚೋದನೆ ನೀಡಲಿದೆ ಎಂದೇ ನಾನು ಆಶಿಸಿರುವೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT