ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರೋಮ್ ಶರ್ಮಿಳಾ ಮತ್ತು ಮಾಯಾವತಿ

Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಗೆದ್ದವರ ಹಮ್ಮಿನ ಬಗ್ಗೆ ಬರೆಯಲು ತುದಿಗಾಲಲ್ಲಿ ನಿಂತವರು ಎಲ್ಲೆಡೆ ಸಿಗುತ್ತಾರೆ. ಆದರೆ ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಜಗತ್ತಿನ ದೊಡ್ಡ ಲೇಖಕ, ಲೇಖಕಿಯರು ಸದಾ ಸೋತವರ ಕಡೆಗೆ ನೋಡಬೇಕೆನ್ನುವುದನ್ನು ಹೇಳಿಕೊಡುತ್ತಿರುತ್ತಾರೆ. ಮೊನ್ನೆ ಮಣಿಪುರದ ಮತ ಎಣಿಕೆಯ ದಿನ ಧ್ಯಾನದ ಭಂಗಿಯಲ್ಲಿ ಕೂತಿದ್ದ, ಆಳದಲ್ಲಿ ಹತಾಶೆ ಅನುಭವಿಸಿದಂತಿದ್ದ ಇರೋಮ್ ಶರ್ಮಿಳಾರ ಚಿತ್ರ ನೋಡಿದವರಿಗೆ ದುಃಖವಾಗಿರಬಹುದು. ಶರ್ಮಿಳಾರ ಸ್ವಾರ್ಥವಿಲ್ಲದ ಹೋರಾಟ ಬಲ್ಲವರಿಗೆಲ್ಲ ಇಂಡಿಯಾದ ಚುನಾವಣೆಗಳು ತಲುಪಿದ ಕ್ರೂರ ಘಟ್ಟ ಕಂಡು ದಿಗ್ಭ್ರಮೆಯಾಗಿರಬಹುದು.

ನಿಮಗೆ ನೆನಪಿರಬಹುದು: 2000ನೇ ಇಸವಿಯ ನವೆಂಬರ್ 4ರಂದು ಅಸ್ಸಾಂ ರೈಫಲ್ ಪಡೆ ಮಣಿಪುರದ ಇಂಫಾಲ್ ಬಳಿಯ ಮಾಲಂ ಎಂಬ ಊರಿನಲ್ಲಿ ಹತ್ತು ಮಂದಿಯನ್ನು ಏಕಾಏಕಿ ಕೊಂದಿತು. ಅವತ್ತು ಗುರುವಾರ. ‘ದೇವತೆ ಗುಡಿಯಿಂದ ಹೊರಬರುವ ದಿನ’. ಪ್ರತಿ ಗುರುವಾರದಂತೆ ಅವತ್ತು ಕೂಡ ಶರ್ಮಿಳಾ ಉಪವಾಸ ಮಾಡುತ್ತಿದ್ದರು. ಅಮಾಯಕರ ಹತ್ಯೆಯ ಸುದ್ದಿ ಕೇಳಿದ 27ರ ಹರೆಯದ ಶರ್ಮಿಳಾ ಅಂದಿನಿಂದ ಊಟವನ್ನೇ ಮಾಡಲಿಲ್ಲ. ‘ನಾನು ಗಾಂಧೀಜಿಯ ಮಾರ್ಗ ಅನುಸರಿಸಿ ಉಪವಾಸ ಸತ್ಯಾಗ್ರಹ ಮಾಡಿದ್ದೇನೆ’ ಎಂದಿದ್ದ ಶರ್ಮಿಳಾ, ಬ್ರಿಟಿಷರ ಸರ್ಕಾರಕ್ಕಿದ್ದಷ್ಟು ಆತ್ಮಸಾಕ್ಷಿ ಕೂಡ ನಮ್ಮ ಸರ್ಕಾರಗಳಿಗೆ ಇಲ್ಲದ ಕಾಲದಲ್ಲಿ ಗಾಂಧೀಜಿಯಿರಲಿ, ಯಾರೂ ಮಾಡದಷ್ಟು ದೀರ್ಘ ಕಾಲ ಸತ್ಯಾಗ್ರಹ ಮಾಡಿದ್ದರು.  

ಅವರು ಉಪವಾಸ ನಿಲ್ಲಿಸಿದ್ದು ಕಳೆದ ವರ್ಷದ ಆಗಸ್ಟ್‌ನಲ್ಲಿ. ಆಗ ಅವರಿಗೆ 43 ವರ್ಷ. ಮುಂದೆ ತನ್ನ ಗೆಳೆಯನ ಜೊತೆ ಜೀವಿಸುವ, ಚುನಾವಣೆಗೆ ಇಳಿಯುವ ಎರಡು ನಿರ್ಧಾರಗಳನ್ನು ಅವರು ಪ್ರಕಟಿಸಿದರು. ಮಣಿಪುರದ ಹೆಣ್ಣುಮಕ್ಕಳ ಮಾನರಕ್ಷಣೆಗಾಗಿ, ಕೊಲೆಯಾಗುತ್ತಿದ್ದ ಯುವಕರಿಗಾಗಿ ತನ್ನ ಯೌವನದ ಹದಿನಾರು ವರ್ಷಗಳನ್ನು ತ್ಯಾಗ ಮಾಡಿದ ಶರ್ಮಿಳಾ ಮಣಿಪುರದ ಚುನಾವಣೆಗೆ ನಿಂತಾಗ ಯುವಕರಾಗಲೀ, ಆಕೆಯ ತಲೆಮಾರಿನ ಹೆಂಗಸರಾಗಲೀ, ಹೊಸ ತಲೆಮಾರಿನ ಹೆಣ್ಣುಮಕ್ಕಳಾಗಲೀ ಅವರಿಗೆ ವೋಟು ಹಾಕಲಿಲ್ಲ ಎನ್ನುವುದು ಇಂಡಿಯಾದ ನಿರ್ದಯ ರಾಜಕಾರಣದಲ್ಲಿ ಜನರ ಆತ್ಮಸಾಕ್ಷಿ ಸತ್ತಿರುವುದನ್ನು ಸೂಚಿಸುತ್ತದೆ. ರಾಜಕೀಯ ಪಕ್ಷಗಳಲ್ಲಿ ಎಂದೋ ಬತ್ತಿ ಹೋದ ಆತ್ಮಸಾಕ್ಷಿ ಜನರಲ್ಲೂ ಬತ್ತಿಹೋಗತೊಡಗಿದಾಗ ದೇಶದ ರಾಜಕಾರಣ ದಿಕ್ಕೆಟ್ಟು ಹೋಗುತ್ತದೆ.

ಚಳವಳಿ, ಪ್ರತಿಭಟನೆಗಳ ರಾಜಕಾರಣವೇ ಬೇರೆ; ವೋಟಿನ ರಾಜಕಾರಣವೇ ಬೇರೆ ಎನ್ನುತ್ತಾ, ರಾಜಕೀಯ ಪಕ್ಷಗಳ ಭ್ರಷ್ಟಾಚಾರ, ಕರಾಮತ್ತಗಳನ್ನು ‘ಮಹಾತಂತ್ರ’ಗಳೆಂಬಂತೆ ಗೆದ್ದೆತ್ತಿನ ಬಾಲ ಹಿಡಿಯುವ ಸಮೂಹ ಮಾಧ್ಯಮಗಳು ನಂಬಿಸುತ್ತಿರುತ್ತವೆ. ಹುಂಬ ಮತದಾರರೂ ಇದನ್ನು ನಂಬತೊಡಗುತ್ತಾರೆ. ಆದರೆ ನಿಜಕ್ಕೂ ತಮಗಾಗಿ ಕೆಲಸ ಮಾಡುತ್ತಿರುವ ಚಳವಳಿಗಾರ್ತಿಯೊಬ್ಬಳಿಗೆ   ಕೊನೆಯ ಪಕ್ಷ ಒಂದು ಸಾವಿರ ಮಹಿಳೆಯರಾದರೂ ಬೆಂಬಲ ವ್ಯಕ್ತಪಡಿಸಿದ್ದರೆ, ಆ ಸುತ್ತಿನಲ್ಲಿ ಹೆಂಗಸರ ಮೇಲೆ ಎರಗಲು ಸಿದ್ಧರಾಗಿರುವ ಉನ್ಮತ್ತ ಸೈನಿಕರ ಭಂಡ ಧೈರ್ಯ ಉಡುಗಿರುತ್ತಿತ್ತು. ತನ್ನ ತ್ಯಾಗವನ್ನು ಹಾಡಿ ಹೊಗಳಿದ ನಾಡಿನಲ್ಲಿ ತನಗೆ ಸಾವಿರ ಜನರ ವೋಟುಗಳ ಬೆಂಬಲವೂ ಇಲ್ಲವೆನ್ನುವುದು ಶರ್ಮಿಳಾಗೆ ದಿಗ್ಭ್ರಮೆ ಹುಟ್ಟಿಸಿರಬಹುದು. 

ಶರ್ಮಿಳಾ ಅಧಿಕಾರ ರಾಜಕಾರಣದತ್ತ ತಲೆ ಹಾಕುವುದಿಲ್ಲವೆಂದು ನಿರಾಶೆಯಿಂದ ಹೇಳಿ ಸುಮ್ಮನಾಗಿದ್ದಾರೆ. ಆದರೆ ಅಂಥದೇ ನಿರಾಶೆ ಈ ದೇಶದ ಮುಖ್ಯ ನಾಯಕಿ ಮಾಯಾವತಿಯವರನ್ನೂ ಮುತ್ತಿದರೆ ಇಂಡಿಯಾದ ದಲಿತ ಹಾಗೂ ಮಹಿಳಾ ರಾಜಕಾರಣದ ಸಾಧ್ಯತೆಗೆ ದೊಡ್ಡ ಹೊಡೆತವಾಗುತ್ತದೆ. ಕಾನ್ಶೀರಾಮರಿಂದ ರೂಪುಗೊಂಡ ಮಾಯಾವತಿ ಬೇರೆ ಬೇರೆ ಸಮೀಕರಣದ ಮೂಲಕ  ಅಧಿಕಾರ ಹಿಡಿದರು. ನಂತರ ಅಧಿಕಾರ ತಪ್ಪಿತು. ಈ ಸಲ ಶೇಕಡ 22.2ರಷ್ಟು ಮತಗಳು ಮಾತ್ರ ಬಿದ್ದವು. ಚುನಾವಣಾ ರಾಜಕಾರಣದಲ್ಲಿ ಏಳುಬೀಳು ಸಹಜ. ಆದರೆ ಈ ಸಲ ಮತ್ತೆ ಅವರು ರಾಜ್ಯಸಭೆಗೆ ಆರಿಸಿಬರುವುದು ಕಷ್ಟ ಎಂಬ ವರದಿ ನೋಡಿದಾಗ ಬೇಸರವಾಯಿತು. ಯಾಕೆಂದರೆ, ದಲಿತರ ಹಿತ ರಕ್ಷಿಸಬಲ್ಲ ಮಾಯಾವತಿಯವರಂಥವರು ರಾಜ್ಯಸಭೆಯಲ್ಲಿ ಇರಬೇಕಾದ್ದು ಅಗತ್ಯ. ಈ ಘಟ್ಟದಲ್ಲಿ ಸಮಾಜವಾದಿ ಪಕ್ಷ ಮಾಯಾವತಿಯವರನ್ನು ರಾಜ್ಯಸಭೆಗೆ ಕಳಿಸಲು ನೆರವಾದರೆ ದೇಶದ ರಾಜಕೀಯದಲ್ಲಿ ಹೊಸ ಅಲೆಯೇ ಏಳಬಹುದು. ಲೋಹಿಯಾ ಫೋಟೊ ಹಾಕಿಕೊಂಡಿರುವ ಸಮಾಜವಾದಿ ಪಕ್ಷ ಹಾಗೂ ಅಂಬೇಡ್ಕರ್ ಫೋಟೊ ಹಾಕಿಕೊಂಡಿರುವ ಬಹುಜನ ಸಮಾಜ ಪಕ್ಷಗಳ ನಡುವೆ ಚುನಾವಣಾ ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳಿರಬಹುದು; ಆದರೆ ಹೆಚ್ಚಿನ ತಾತ್ವಿಕ ಅಂತರಗಳಿದ್ದಂತಿಲ್ಲ.

ಈ ಸಂದರ್ಭದಲ್ಲಿ, 1962ರ ಲೋಕಸಭಾ ಚುನಾವಣೆಯಲ್ಲಿ ಲೋಹಿಯಾ ಅವರ ಸಮಾಜವಾದಿ ಪಕ್ಷ ಗ್ವಾಲಿಯರ್ ಮಹಾರಾಣಿಯ ಎದುರು ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆ ಸುಖೋರಾಣಿಯವರನ್ನು ನಿಲ್ಲಿಸಿದ ಘಟನೆಯನ್ನು ಹೇಳಬೇಕು.  ಅವತ್ತು ಸಮಾಜವಾದಿ ಪಕ್ಷ ಸುಖೋರಾಣಿಯವರನ್ನು ನಿಲ್ಲಿಸಿದ್ದು ಸಾಂಕೇತಿಕವಾಗಿರಬಹುದು. ಆದರೆ ಮುಂದೆ ಉತ್ತರಪ್ರದೇಶದಲ್ಲಿ ನಡೆದ ಸಾಮಾಜಿಕ-ರಾಜಕೀಯ ಮಂಥನದಲ್ಲಿ ಕಾನ್ಶೀರಾಂ ಮತ್ತು ಸಾವಿರಾರು ಕಾರ್ಯಕರ್ತರು ಸೈಕಲ್ ತುಳಿದು ಕಟ್ಟಿದ ಪಕ್ಷದಿಂದ ಸುಖೋರಾಣಿಯವರ ಸಾಮಾಜಿಕ ಹಿನ್ನೆಲೆಯಿಂದಲೇ ಬಂದ ಮಾಯಾವತಿ ಮುಖ್ಯಮಂತ್ರಿಯಾದರು. ಇದು ಇಂಡಿಯಾದ ದಲಿತ ರಾಜಕಾರಣದ ಮುಖ್ಯ ಘಟ್ಟ. ಇದಕ್ಕಿಂತ ಮೊದಲೇ ಸಮಾಜವಾದಿ ಪಕ್ಷ ಅಂಬೇಡ್ಕರ್ ಅವರನ್ನು ಸಾಮಾನ್ಯ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಲು ಬಯಸಿತ್ತು; ಅಂಬೇಡ್ಕರ್ ಹಾಗೂ ಲೋಹಿಯಾ ನಡುವೆ ಎರಡೂ ಪಕ್ಷಗಳ ನಡುವಣ ಹೊಂದಾಣಿಕೆಯ ಮಾತುಕತೆ ಶುರುವಾಗಿತ್ತು. ಅಷ್ಟರಲ್ಲೇ ಅಂಬೇಡ್ಕರ್ ನಿಧನರಾದರು. ಇಂಡಿಯಾದ ರಾಜಕಾರಣದ ಉಜ್ವಲ ಘಟ್ಟವೊಂದರ ಆರಂಭ ತಪ್ಪಿಹೋಯಿತು. ಅದು ತಪ್ಪಿ ಹೋಯಿತೆಂದು ಹಿಂಗಣ್ಣರಾಗಿ ಹಳಹಳಿಸಿ ಪ್ರಯೋಜನವಿಲ್ಲ. ಈಗ ಮಾಯಾವತಿ-ಮುಲಾಯಂ- ಅಖಿಲೇಶ್ ಒಟ್ಟಿಗೆ ಬರುವುದು ಅನಿವಾರ್ಯ. ಅದು ರಾಜ್ಯ ರಾಜಕಾರಣಕ್ಕಷ್ಟೇ ಅಲ್ಲ, ಮುಂದಿನ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದಲೂ ಅನಿವಾರ್ಯ. ಯಾವುದೇ ಪಕ್ಷ ಅತಿಯಾದ ಸ್ಥಾನಗಳನ್ನು ಗೆಲ್ಲುವುದು ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿ. ಹಿಂದೆ ಕಾಂಗ್ರೆಸ್ ಹೀಗೆ ಗೆದ್ದಾಗಲೂ ಇಂಡಿಯಾದಲ್ಲಿ ಸರ್ವಾಧಿಕಾರ ಹಬ್ಬಿತ್ತು. ಇದೀಗ, ಚುನಾವಣೆಗೆ ಮೊದಲು ದೊಡ್ಡ ಮೊತ್ತದ ನೋಟು ರದ್ದು ಮಾಡಿ, ಹಣ ಹೊರತೆಗೆಯಲು ನಿರ್ಬಂಧಗಳನ್ನೊಡ್ಡುವುದು; ಚುನಾವಣೆ ಮುಗಿದ ಮೇಲೆ ಈ ನಿರ್ಬಂಧವನ್ನು ತೆಗೆಯುವುದು… ಇವೆಲ್ಲವನ್ನೂ ಗಮನಿಸಿದವರೆಲ್ಲ ಈ ಚುನಾವಣೆಯಲ್ಲಿ ಸರ್ವಾಧಿಕಾರ ಹೇಗೆ ಕೆಲಸ ಮಾಡಿದೆ ಎಂಬುದನ್ನು ಅರಿತಿದ್ದಾರೆ. ಇಂಥ ತಂತ್ರಗಳೆದುರು ಜನಪರ ರಾಜಕಾರಣ ಮಾಡಬಯಸುವ ರಾಜಕೀಯ ಪಕ್ಷಗಳು ಬೇರೆಯದೇ ಆದ, ನೇರವಾದ ನಡೆನುಡಿಗಳನ್ನು ರೂಪಿಸಿಕೊಳ್ಳಲೇಬೇಕಾಗುತ್ತದೆ.

ಚುನಾವಣೆಯ ಸೋಲಿರಲಿ, ಯಾವುದೇ ಸೋಲನ್ನು ಕೂಡ ಸ್ವೀಕರಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಸೋಲಿನಿಂದ ವ್ಯಕ್ತಿಗಳ ಅಹಮ್ಮಿಗೆ ಪೆಟ್ಟಾಗಿರುತ್ತದೆ. ಆದರೆ ರಾಜಕೀಯ ಪಕ್ಷಗಳಿಗೆ ಅತಿಯಾದ ಅಹಂ ಇರಬಾರದು. ನ್ಯಾಯ, ಅನ್ಯಾಯಗಳನ್ನು ಬೇರ್ಪಡಿಸಿ ನೋಡದ ವ್ಯವಸ್ಥೆಯಲ್ಲಿ ಸೋತ ಶರ್ಮಿಳಾಗೆ ಸೋತದ್ದರ ಬಗ್ಗೆ ಖಾಸಗಿ ದುಃಖ ಇರಬಾರದು. ಯಾಕೆಂದರೆ ಶರ್ಮಿಳಾ ಸ್ವಾರ್ಥಕ್ಕಾಗಿ ಚುನಾವಣೆಗೆ ನಿಂತವರಲ್ಲ. ಅವರಿಗೆ ಬಿದ್ದ ತೊಂಬತ್ತು ಮತಗಳನ್ನು ಚಲಾಯಿಸಿದ ಮತದಾರರು ನಿಜಕ್ಕೂ ಆತ್ಮಸಾಕ್ಷಿಯ ಮತ ಚಲಾಯಿಸಿರಬಹುದು. ಆದ್ದರಿಂದಲೇ ಮುಂದೆ, ತಮ್ಮಂಥವರ ರಾಜಕಾರಣಕ್ಕೆ ಸರಿಯಾಗಿ ಸ್ಪಂದಿಸಬಲ್ಲ ಆಮ್ ಆದ್ಮಿ ಪಕ್ಷದತ್ತ ಕೂಡ ಶರ್ಮಿಳಾ ನೋಡಬಹುದು; ಮತ್ತೆ ಪುಟಿದೇಳಬಹುದು. ಅಥವಾ ರಾಜಕಾರಣದಿಂದ ದೂರ ಇರಲೂಬಹುದು. ಆದರೆ ದೇಶಕ್ಕೆ ಶರ್ಮಿಳಾ ಥರದ ಗಟ್ಟಿ ಮಹಿಳೆಯರ ನಾಯಕತ್ವ ಬೇಕು; ಹಾಗೆಯೇ ಮಾಯಾವತಿಯಂಥವರ ನಾಯಕತ್ವ ಕೂಡ ಬೇಕು. ಕೆಲವು ವರ್ಗಗಳಿಂದ ಬಂದವರು ಮಾತ್ರ ಕೆಲವು ಥರದ ಪ್ರಶ್ನೆಗಳನ್ನೆತ್ತಬಲ್ಲರು. ಆದ್ದರಿಂದಲೇ ಶರ್ಮಿಳಾ ಹಾಗೂ ಮಾಯಾವತಿ ಥರದ ದಿಟ್ಟ ಮಹಿಳೆಯರ ಸೋಲು ಕಳೆದ ಐವತ್ತು ವರ್ಷಗಳ ಎಲ್ಲ ಬಗೆಯ ಪ್ರಗತಿಪರ ರಾಜಕಾರಣದ ಹಿನ್ನಡೆ ಎಂಬುದನ್ನು ಸರಿಯಾಗಿ ಅರಿತರೆ ಮಾತ್ರ ಪ್ರಗತಿಪರರು ಅಧಿಕಾರ ರಾಜಕಾರಣದ ಬಗ್ಗೆ ಸ್ಪಷ್ಟವಾಗಿ ಯೋಚಿಸಬಲ್ಲರು. ನಿರಾಶೆಯ ಕಾಲದಲ್ಲಿ ಮನಸ್ಸು ವಿಚಿತ್ರವಾಗಿ, ದಿಟ್ಟವಾಗಿ ಪುಟಿದೇಳುತ್ತದೆ. ಇದು ಮನುಷ್ಯನ ಅದಮ್ಯ ಶಕ್ತಿಗಳಲ್ಲೊಂದು. ಸವಾಲುಗಳು ಎದುರಾದಾಗ ಹೊಸ ದಿಕ್ಕಿನಿಂದ ಎರಗಲು ಸಿದ್ಧವಾಗಲೇಬೇಕಾಗುತ್ತದೆ.

ಇದೀಗ ಹೀಗೆ ಎರಗುವ ನಿಟ್ಟಿನಲ್ಲಿ ಮಾಯಾವತಿ ವೋಟಿಂಗ್ ಮೆಷಿನ್ ಬಗ್ಗೆ ರಾಗ ಎಳೆದಿದ್ದಾರೆ. ಅದರ ‘ಟೈಮಿಂಗ್’ ತಪ್ಪಿರಬಹುದು. ಆದರೂ ಆ ರಾಗದಲ್ಲಿ ಹುರುಳಿರುವುದನ್ನು ಎಲ್ಲ ರಾಜಕೀಯ ಪಕ್ಷಗಳೂ ಮನಗಾಣಬೇಕು. ಜರ್ಮನಿ, ಫ್ರಾನ್ಸ್, ಬ್ರಿಟನ್ ಸೇರಿದಂತೆ ದೊಡ್ಡ ದೇಶಗಳು, ಅಮೆರಿಕದ ಕೆಲವು ರಾಜ್ಯಗಳು ಕೂಡ ವೋಟಿಂಗ್ ಮೆಷಿನ್ ಬಳಸುವುದಿಲ್ಲ. ಈ ಪ್ರಶ್ನೆಯನ್ನು ಮಾಯಾವತಿ ಮೊದಲೇ ಎತ್ತಿದ್ದರೆ ನಿಜಕ್ಕೂ ಅರ್ಥವಿರುತ್ತಿತ್ತು. ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳ ವಿಶ್ವಾಸಾರ್ಹತೆಯ ಪ್ರಶ್ನೆ ಇವತ್ತಿನದಲ್ಲ. ಪಂಜಾಬಿನ ಅಮರಿಂದರ್ ಸಿಂಗ್ ಇವುಗಳಲ್ಲಿ ಹೇಗೆ ಮತಗಳ ವರ್ಗಾವಣೆಯಾಗಬಹುದೆಂದು ಏಳೆಂಟು ವರ್ಷಗಳ ಹಿಂದೆಯೇ ತೋರಿಸಿದ್ದರು. ಸುಬ್ರಮಣಿಯನ್ ಸ್ವಾಮಿ ಕೂಡ ಇದನ್ನು ತೋರಿಸಿದ್ದರೆಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಮೊನ್ನೆ ಮಾಯಾವತಿ ಎತ್ತಿದ ಪ್ರಶ್ನೆಯನ್ನು ಮುಂದುವರಿಸಿರುವ ಅರವಿಂದ ಕೇಜ್ರಿವಾಲ್ ಈ ಸಲದ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪೇಪರ್ ಬ್ಯಾಲೆಟ್ ಬಳಸಲು ಕೋರಿದ್ದಾರೆ. ನಮ್ಮ ರಾಜಕೀಯ ಪಕ್ಷಗಳ ಮುಂದಿನ ಹೋರಾಟದ ಘಟ್ಟ ಇಲ್ಲಿಂದಲೇ ಶುರುವಾಗಬಹುದೇ?

ಇದೆಲ್ಲದರ ನಡುವೆ, ಎಲ್ಲೋ ಯಾರೋ ಗೆದ್ದ ಬಗೆಗಿನ ಗೆಲುವಿನ ದುರಹಂಕಾರ ಕರ್ನಾಟಕದಲ್ಲಿ ತನ್ನ ಕರಾಳಮುಖವನ್ನು ತೋರಲೆತ್ನಿಸಿರುವುದು ಲೇಖಕ ಯೋಗೀಶ್ ಮಾಸ್ತರ್ ಮೇಲೆ ದುರುಳರು ನಡೆಸಿದ ಹಲ್ಲೆಯಲ್ಲಿ ವ್ಯಕ್ತವಾದಂತಿದೆ. ಇದು ಮುಂಬರಲಿರುವ ಕೆಟ್ಟ ದಿನಗಳ ಸೂಚನೆ ಎಂಬುದು ಈ ಸರ್ಕಾರಕ್ಕೆ ತಿಳಿಯಬೇಕು.  ಈ ಅಂಕಣ ಅಚ್ಚಿಗೆ ಹೋಗುವ ದಿನ ಬಿಜೆಪಿ ಕೌನ್ಸಿಲರ್ ಶ್ರೀನಿವಾಸಪ್ರಸಾದ್ ಅವರ ಹತ್ಯೆ ನಡೆದಿದೆ. ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳೂ ಈ ಎರಡೂ ಘಟನೆಗಳನ್ನೂ ಸ್ಪಷ್ಟವಾಗಿ ಖಂಡಿಸದಿದ್ದರೆ, ಮುಂದೆ ಕರ್ನಾಟಕದಲ್ಲಿ ಹಬ್ಬಲಿರುವ ದುಷ್ಟ ರಾಜಕಾರಣಕ್ಕೆ ಎಲ್ಲ ರಾಜಕೀಯ ಪಕ್ಷಗಳೂ, ಜನರೂ ಬಲಿಯಾಗಬೇಕಾಗುತ್ತದೆ.

ಕೊನೆಟಿಪ್ಪಣಿ: ದೇವೇಗೌಡರ ಕಾಲಜ್ಞಾನ ಮತ್ತು ತಯಾರಿ
ಉತ್ತರಪ್ರದೇಶ ಚುನಾವಣೆಯ ಫಲಿತಾಂಶ ಬರುವ ಮೊದಲೇ ದೇವೇಗೌಡರು ಹೇಳಿದ್ದರು: ‘ಉತ್ತರಪ್ರದೇಶದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿಲ್ಲ ಮತ್ತು ಪ್ರಜಾಪ್ರಭುತ್ವಕ್ಕೆ ಆತಂಕವಿದೆ’. ದೇವೇಗೌಡರು ಉತ್ತರಪ್ರದೇಶದಲ್ಲಿ ಅಪ್ಪ-ಮಕ್ಕಳ ನಡುವೆ ತಂದಿಟ್ಟ ರಾಜಕಾರಣದ ಹಿಂದೆ ಇದ್ದ ಕೈಗಳನ್ನು ಸ್ಪಷ್ಟವಾಗಿ ಗುರುತಿಸಿದ್ದರು. ಎರಡು ತಿಂಗಳ ಹಿಂದೆ ಸಮಾಜವಾದಿ ಪಕ್ಷಕ್ಕೆ ಅಮರಸಿಂಗ್ ಎಂಬ ‘ಅಧಿಕಾರದಲ್ಲಾಳಿ’ಯ ಪುನರಾಗಮನ ಮುಂಬರಲಿರುವ ಕೆಟ್ಟ ದಿನಗಳ ಸೂಚನೆಯಂತೆ ನನಗೆ ಕಂಡಿತ್ತು.

ಇವೆಲ್ಲವನ್ನೂ ಗಮನಿಸಿರುವವರಿಗೆ ಇವತ್ತಿನ ರಾಜಕಾರಣದ ಒಳಸಂಚುಗಳ ಕೆಲವು ಚಿತ್ರಗಳು ಕಾಣಬಹುದು: ಅಪ್ಪ-ಮಕ್ಕಳ ಜಗಳ ನಿತ್ಯದ ಸುದ್ದಿಯಾಗುತ್ತದೆ; ‘ಅಖಿಲೇಶರನ್ನು ಎಲ್ಲರೂ ಬಯಸುತ್ತಾರೆ; ಮುಲಾಯಂಸಿಂಗರನ್ನು ಕೇಳುವವರೇ ಇಲ್ಲ’ ಎಂಬ ‘ಸಮೀಕ್ಷೆ’ಯೊಂದು ಇದ್ದಕ್ಕಿದ್ದಂತೆ ಪ್ರಕಟವಾಗುತ್ತದೆ; ಇದನ್ನು ಯಾರು, ಯಾಕಾಗಿ ಮಾಡಿಸುತ್ತಾರೆ ಎಂಬುದು ಜನರಿಗೆ ಸುಲಭವಾಗಿ ಗೊತ್ತಾಗುವುದಿಲ್ಲ. ಚುನಾವಣೆ ನಡೆಯುವಾಗಲೇ ಉತ್ತರಪ್ರದೇಶದ ಪತ್ರಿಕೆಯೊಂದು ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸುತ್ತದೆ. ಅದಕ್ಕೆ ಚುನಾವಣಾ ಆಯೋಗ ಒಂದು ನೋಟಿಸ್ ಕೊಡುತ್ತದೆ. ಮುಂದೇನಾಯಿತು? ಯಾರಿಗೂ ಗೊತ್ತಿಲ್ಲ. ಎಕ್ಸಿಟ್ ಪೋಲ್ ಫಲಿತಾಂಶಗಳು ಮುಂದೆಂದೋ ಪ್ರಕಟವಾಗುವ ಮುನ್ನವೇ ಬೇಕಾದವರ ಕೈ ಸೇರುತ್ತವೆ. ಇಂಥ ಹೊಸ ಆಟಗಳನ್ನು ಎದುರಿಸಲು ದೇವೇಗೌಡರಂಥ ಹಳಬರು ಹೇಗೆ ತಯಾರಾಗುತ್ತಾರೆ ಯಾವ ಹೊಸ ಕಾರ್ಯಸೂಚಿ ಕೊಡುತ್ತಾರೆ ಎಂಬುದರ ಮೇಲೂ ಪ್ರಾದೇಶಿಕ ಪಕ್ಷಗಳ ಭವಿಷ್ಯ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT