ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಚಿಗುರೊಡೆದ ಬೆಳೆ ಚಿಗರೆಗೆ ಆಹಾರ!

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಾನವ-ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ದೊಡ್ಡ ಇತಿಹಾಸವೇ ಇದೆ. ಕಾಡು ದಿನೇ ದಿನೇ ಕಡಿಮೆಯಾಗುತ್ತಿದ್ದು, ಮಳೆಯ ಅಭಾವದಿಂದ ಕಾಡಿನಲ್ಲಿ ಮೇವಿರಲಿ, ನೀರೂ ಸಿಗದ ಪರಿಸ್ಥಿತಿ ತಲೆದೋರಿದೆ. ಹಾಗಾಗಿ ಕಾಡು ಪ್ರಾಣಿಗಳು ಆಹಾರ-ನೀರು ಅರಸಿಕೊಂಡು ನಾಡಿಗೆ ನುಗ್ಗುತ್ತಿವೆ.

ಇತ್ತೀಚಿನ ದಿನಗಳಲ್ಲಂತೂ ರಾಜ್ಯದ ವಿವಿಧ ಭಾಗಗಳಲ್ಲಿ ವನ್ಯಜೀವಿಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ವನ್ಯಜೀವಿಗಳಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿಯಾದರೆ ಇನ್ನು ಕೆಲವೆಡೆ ಚಿರತೆ ಕಾಟವಿದೆ. ಉತ್ತರ ಕರ್ನಾಟಕದ ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ಬೀದರ್ ಜಿಲ್ಲೆಗಳಲ್ಲಿ ಜಿಂಕೆ ಹಾವಳಿ ವ್ಯಾಪಕವಾಗಿದೆ.

ಜಿಂಕೆ ಹಾವಳಿಯ ತೀವ್ರತೆ ಎಷ್ಟಿದೆ ಎಂದರೆ ಈ ವರ್ಷ ಗದಗ ಜಿಲ್ಲೆಯೊಂದರಲ್ಲೇ ಪರಿಹಾರ ಕೋರಿ ಅರಣ್ಯ ಇಲಾಖೆಗೆ 13,700ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ! ಅರ್ಜಿ ಸಲ್ಲಿಸಲು ಅರಣ್ಯ ಇಲಾಖೆ ಕಚೇರಿಗಳ ಮುಂದೆ ಜನರು ಪಾಳಿ ಹಚ್ಚುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ. ಕಳೆದ ವರ್ಷವೂ 4,400 ಅರ್ಜಿಗಳು ಬಂದಿದ್ದವು.

12.48 ಲಕ್ಷ ರೂಪಾಯಿ ಪರಿಹಾರ ವಿತರಣೆಯಾಗಿದೆ. ಕೊಪ್ಪಳದಲ್ಲೂ ಕಳೆದ ವರ್ಷ 1.36 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಅಲ್ಲಿ ಈ ವರ್ಷ 150 ಅರ್ಜಿಗಳು ಬಂದಿವೆ. ಅಂದರೆ ಜಿಂಕೆ (ಕೃಷ್ಣಮೃಗ, ಚಿಗರೆ) ಹಾವಳಿ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಬರೀ ಮುಂಗಾರು ಹಂಗಾಮಿನಲ್ಲಿ ಮಾತ್ರ ಇವುಗಳ ಹಾವಳಿ ಇರುತ್ತದೆ. ಹಿಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಹುಲ್ಲು, ನೀರು ಲಭ್ಯವಾಗುವುದರಿಂದ ಹೊಲಕ್ಕೆ ನುಗ್ಗುವುದು ಕಡಿಮೆ.

ಕೊಪ್ಪಳ ಮತ್ತು ಗದಗ ಜಿಲ್ಲೆಗಳು ಮೊದಲೇ ಒಣಭೂಮಿ ಪ್ರದೇಶಕ್ಕೆ ಸೇರಿದವುಗಳು. ಕೊಪ್ಪಳ ಜಿಲ್ಲೆಯ ಗಂಗಾವತಿ ಮಾತ್ರ ಭತ್ತದ ಕಣಜ. ಕೊಪ್ಪಳ ತಾಲ್ಲೂಕಿನ ಕೆಲ ಹಳ್ಳಿಗಳಿಗೆ ತುಂಗಭದ್ರಾ ಅಣೆಕಟ್ಟೆಯಿಂದ ನೀರು ದೊರೆಯುತ್ತದೆ. ಆದರೆ ಯಲಬುರ್ಗಾ, ಕುಷ್ಟಗಿ ತಾಲ್ಲೂಕುಗಳ ಸ್ಥಿತಿ ಶೋಚನೀಯವಾಗಿದೆ. ಗದಗ ಜಿಲ್ಲೆಯ ಮುಂಡರಗಿ, ನರಗುಂದ, ಶಿರಹಟ್ಟಿಯ ಕೆಲವು ಭಾಗ ಮಾತ್ರ ನೀರಾವರಿಗೆ ಒಳಪಟ್ಟಿದೆ.

ಉಳಿದಂತೆ ಮಳೆಯಾದರಷ್ಟೇ ಬೆಳೆ. ಮುಂಗಾರು ಹಂಗಾಮಿನಲ್ಲಿ ಬಿದ್ದ ಮಳೆಯ ತೇವಾಂಶದಲ್ಲಿಯೇ ಒಂದಿಷ್ಟು ಹೆಸರು, ಶೇಂಗಾ, ಕಡಲೆ ಬೆಳೆದು ಕುಟುಂಬದ ರಥ ಎಳೆಯಲು ಮುಂದಾಗುವ ಈ ಭಾಗದ ರೈತರ ಬದುಕನ್ನು ಜಿಂಕೆಯಂತಹ ಸಣ್ಣ ಪ್ರಾಣಿ ಮೂರಾಬಟ್ಟೆಯಾಗಿಸಿದೆ.
ಕಾಡಾನೆಗಳು ಹೊಲ-ಗದ್ದೆ, ತೋಟಗಳಿಗೆ ನುಗ್ಗಿದ ಸಂದರ್ಭದಲ್ಲಿ ಸಿಕ್ಕಷ್ಟನ್ನು ತಿಂದು, ಓಡಾಡಿದ ಜಾಗದಲ್ಲಿನ ಬೆಳೆ ನೆಲಕಚ್ಚಿರುತ್ತದೆ. ಆದರೆ ಜಿಂಕೆಗಳ ಹಿಂಡು ಹೊಲಕ್ಕೆ ನುಗ್ಗಿದರೆ ಕೆಲವೇ ತಾಸುಗಳಲ್ಲಿ ಇಡೀ ಹೊಲದಲ್ಲಿ ಪೀಕಿನ ಕುರುಹು ಇಲ್ಲದಂತೆ ಸ್ವಚ್ಛ ಮಾಡಿಬಿಡುತ್ತದೆ.

ಮಾರನೇ ದಿನ ರೈತ ಹೊಲಕ್ಕೆ ಬಂದರೆ ಇದು ತನ್ನ ಹೊಲವೇ ಎಂದು ಆಶ್ಚರ್ಯ ಪಡಬೇಕಾಗುತ್ತದೆ. ಏಕೆಂದರೆ ಮೊಳಕೆಯೊಡೆದು ಮೇಲೆದ್ದಿದ್ದ ಸಸಿಗಳು ಪೂರ್ಣವಾಗಿ ಮಾಯವಾಗಿರುತ್ತವೆ. ಜಿಂಕೆಗಳು ಒಂದು ಅಡಿ ಎತ್ತರದಷ್ಟು ಬೆಳೆದಿರುವ ಗಿಡಗಳ ಎಲೆಗಳನ್ನು ತಿನ್ನುವುದಿಲ್ಲ. ಬದಲಿಗೆ ಅವು ಆರಿಸಿಕೊಳ್ಳುವುದೂ 3-4 ಎಲೆಗಳನ್ನಷ್ಟೇ ಬಿಟ್ಟಿರುವ ಎಳೆಯ ಸಸಿಗಳನ್ನು ಮಾತ್ರ. ಜಿಂಕೆ ಹಾವಳಿ ಹೆಚ್ಚಾದ ಮೇಲೆ ಈ ಭಾಗದಲ್ಲಿ ಬಹುತೇಕ ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಯುವುದನ್ನೇ ಕಡಿಮೆ ಮಾಡಿದ್ದಾರೆ.

ಒಮ್ಮೆ ಜಿಂಕೆಗಳು ಬೆಳೆ ನಾಶ ಮಾಡಿದರೆ, ಒಣ ಬೇಸಾಯದ ಈ ಪ್ರದೇಶದಲ್ಲಿ ಮತ್ತೆ ಬಿತ್ತನೆ ಮಾಡುವುದು ಸಾಧ್ಯವಿಲ್ಲ. ಬೀಜ-ಗೊಬ್ಬರಕ್ಕೆ ಹಾಕಿದ ದುಡ್ಡೂ ವ್ಯರ್ಥವಾಗುತ್ತದೆ. ಬಿತ್ತನೆ ಬೀಜ ಕೊಳ್ಳಲು ಸಹ ಸಾಲ ಮಾಡಬೇಕಾದ ಸ್ಥಿತಿಯಲ್ಲಿರುವ ಸಣ್ಣ ರೈತರಿಗೆ, ತಮ್ಮ ಬೆಳೆಯನ್ನು ಕಾಪಾಡಿಕೊಳ್ಳಲು ಹೊಲದಲ್ಲಿ ಕಾವಲು ಇರಿಸುವುದೂ ಕಷ್ಟ.

ಹೊಲದಲ್ಲಿ ಜನರ ಚಟುವಟಿಕೆ ಇದ್ದರೆ, ಕಾವಲಿದ್ದರೆ ಜಿಂಕೆಗಳು ಅತ್ತ ಸುಳಿಯುವುದಿಲ್ಲ. ಜನರನ್ನು ಕಂಡರೆ ಅಂಜುವ ಪ್ರಾಣಿ ಇದು. ಸ್ವಲ್ಪ ಸಪ್ಪಳವಾದರೂ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ. ಹಾಗಾಗಿಯೇ, ಸದಾ ಜನರ ಚಟುವಟಿಕೆ ಇರುವ ನೀರಾವರಿ ಪ್ರದೇಶದತ್ತ ಇವು ಸುಳಿಯುವುದಿಲ್ಲ. ಒಣಭೂಮಿ ಪ್ರದೇಶದಲ್ಲಿ ಮಳೆ ಬಂದಾಗ ಉತ್ತಿ, ಬೀಜ ಬಿತ್ತಿ, ಗೊಬ್ಬರ ಎರಚಿ ಬರುವ ರೈತ ಯಾವಾಗಲೋ ಒಮ್ಮೆ ಹೊಲಕ್ಕೆ ಹೋಗಿ ಬರುತ್ತಾನೆ. ಅಂತಹ ಹೊಲದ ಬೆಳೆ ಜಿಂಕೆಗಳಿಗೆ ಸುಲಭದ ತುತ್ತಾಗುತ್ತಿದೆ. ತಮಗೆ ಏನೂ ಸಿಗುವುದಿಲ್ಲ ಎಂದು ರೈತ ಪರಿತಪಿಸುತ್ತಿದ್ದಾನೆ.

ಇಲ್ಲಿ ಇನ್ನೊಂದು ಸಂಗತಿ ಎಂದರೆ ನೈಸರ್ಗಿಕವಾಗಿ ಜಿಂಕೆ ಮೇಲೆ ಇರಬೇಕಾದ ನಿಯಂತ್ರಣವಿಲ್ಲ. ಅಂದರೆ ಅವುಗಳನ್ನು ಕೊಂದು ತಿನ್ನುವ ಹುಲಿ, ಚಿರತೆ, ಕತ್ತೆ ಕಿರುಬ, ಕಾಡು ಬೆಕ್ಕು ಮೊದಲಾದ ವನ್ಯಜೀವಿಗಳು ಈ ಭಾಗದಲ್ಲಿ ಕಡಿಮೆ. ವರ್ಷಕ್ಕೆ ಎರಡು ಬಾರಿ 2-3 ಮರಿಗಳನ್ನು ಹಾಕುವುದರಿಂದ ಅವುಗಳ ಸಂತತಿಯೂ ಬಹಳ ಹೆಚ್ಚಾಗಿದೆ. ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರತಿವರ್ಷ ಶೇ 13ರಷ್ಟು ಪ್ರಮಾಣದಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ.

ಗದಗ ಜಿಲ್ಲೆಯ ರೋಣ, ಗದಗ ಮತ್ತು ಮುಂಡರಗಿ ತಾಲ್ಲೂಕು, ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ ಮತ್ತು ಕೊಪ್ಪಳ ತಾಲ್ಲೂಕುಗಳಲ್ಲಿ ಇವುಗಳ ಹಾವಳಿ ತೀವ್ರವಾಗಿದೆ. ಇದೊಂದು ಗಂಭೀರ ವಿಷಯ. ಗದಗದಿಂದ ಕೊಪ್ಪಳದ ಕಡೆಗೆ ರೈಲಿನಲ್ಲಿ ಹೋಗುವಾಗ ಸಾಮಾನ್ಯವಾಗಿ ಜಿಂಕೆಗಳ ಹಿಂಡು ಕಣ್ಣಿಗೆ ಬೀಳುತ್ತದೆ.

ಜಿಂಕೆ ಹಾವಳಿ 3-4 ಜಿಲ್ಲೆಗಳಲ್ಲಿ ವ್ಯಾಪಕವಾಗಿರುವುದರಿಂದ ಸರ್ಕಾರವೇ ಒಂದು ನೀತಿ ರೂಪಿಸಬೇಕು. ಅದನ್ನು ಬಿಟ್ಟು ಸ್ಥಳೀಯವಾಗಿ ಕೃಷಿ, ಅರಣ್ಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ರೂಪದಲ್ಲಿ ಬಿಡಿಗಾಸು   ಕೊಟ್ಟರೆ ಸಾಲದು. ಸಮಸ್ಯೆ ಗಂಭೀರವಾಗಿರುವುದರಿಂದ ಸರ್ಕಾರವೇ ವನ್ಯಜೀವಿಗಳನ್ನು ರಕ್ಷಿಸುವ ಹಾಗೂ ರೈತರ ಹಿತವನ್ನೂ ಕಾಯುವ ಸಮರ್ಪಕವಾದ ನಿರ್ಧಾರವನ್ನು ಕೈಗೊಳ್ಳಬೇಕು.

ಆದರೆ ಇತ್ತ ಆಲೋಚಿಸದ ಸರ್ಕಾರ ಸಮಸ್ಯೆಯನ್ನು ಸ್ಥಳೀಯವಾಗಿಯೇ ಪರಿಹರಿಸಲು ಸೂಚನೆ ನೀಡಿರುವಂತಿದೆ. ಅಲ್ಲದೇ ಕೊಡುವ ಪರಿಹಾರ ಕೂಡ ರೈತರು ಮಾಡಿದ ಖರ್ಚಿಗೆ ಅನುಗುಣವಾಗಿ ಇರುವುದಿಲ್ಲ. ರೈತ ತನ್ನ ಕುಟುಂಬವನ್ನು ಸಾಕಲು ಆ ಬೆಳೆಯನ್ನೇ ನಂಬಿರುತ್ತಾನೆ ಎಂಬುದನ್ನು ಪರಿಹಾರ ಕೊಡುವಾಗ ಸರ್ಕಾರ ಗಮನದಲ್ಲಿ ಇರಿಸಿಕೊಳ್ಳಬೇಕು.

ಕ್ವಿಂಟಲ್ ಹೆಸರು ಕಾಳು ಬೆಲೆ ಮಾರುಕಟ್ಟೆಯಲ್ಲಿ 6000-7000 ರೂಪಾಯಿ ಇರುವಾಗ, ಸರ್ಕಾರವು ಹಾನಿ ಪ್ರಮಾಣ ಆಧರಿಸಿ, 100, 200, 300 ರೂಪಾಯಿ ಕೊಟ್ಟರೆ ಅವರ ಬದುಕು ಕಟ್ಟಿಕೊಳ್ಳಲು ಸಾಧ್ಯವೇ? ಗದಗ ಜಿಲ್ಲೆಯ ಸವಡಿ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಹೆಸರು ಬೆಳೆ ಹಾನಿಗೆ 18 ರೂಪಾಯಿ ಪರಿಹಾರ ನೀಡಿದ್ದೂ ಉಂಟು. ಇದಕ್ಕೆ ಸರ್ಕಾರಿ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕು. ಹಾನಿಯ ಪ್ರಮಾಣವನ್ನು ಅಂದಾಜು ಮಾಡುವಾಗ ರೈತನ ಕುಟುಂಬದ ಬಗ್ಗೆಯೂ ಯೋಚಿಸಬೇಕು.

ಪರಿಹಾರ ಸಿಗುತ್ತದೆ ಎಂದು ಬೀಜವನ್ನೇ ಬಿತ್ತದ ಹಲವರು ಜಿಂಕೆ ಹಾವಳಿಯಿಂದ ಬೆಳೆ ನಾಶವಾಗಿದೆ ಎಂದು ಅರ್ಜಿ ಕೊಡುತ್ತಿರುವುದು ಸುಳ್ಳೇನೂ ಅಲ್ಲ. ಜಿಂಕೆಗಳು, ಬಿತ್ತನೆಯಾದ ಕುರುಹೇ ಇಲ್ಲದಂತೆ ಬೆಳೆ ನಾಶ ಮಾಡುವುದು ಇಂತಹವರಿಗೆ ವರದಾನವಾಗಿದೆ. ಇಂತಹ ಕೆಲವರ ದುರಾಸೆಯ ತಂತ್ರವು ಉತ್ತಿ, ಬಿತ್ತಿ, ಬೆಳೆ ಕಳೆದುಕೊಂಡ ಸಹಸ್ರಾರು ಮಂದಿಗೆ  ತೊಂದರೆಯನ್ನು ತಂದೊಡ್ಡಿದೆ.

ಈ ಭಾಗದಲ್ಲಿನ ಸಮಸ್ಯೆಯನ್ನು ಮನಗಂಡು ಸರ್ಕಾರ 2010-11ನೇ ಸಾಲಿನ ಬಜೆಟ್‌ನಲ್ಲಿ ಕೊಪ್ಪಳದಲ್ಲಿ `ಜಿಂಕೆ ವನ' ನಿರ್ಮಿಸುವ ಪ್ರಸ್ತಾಪ ಮಾಡಿತ್ತು. ಆದರೆ, ಸೂಕ್ಷ್ಮ ಪ್ರಾಣಿಗಳಾದ ಇವುಗಳನ್ನು ಹಿಡಿದು ಸಾಗಿಸುವಾಗ ಅವು ಸತ್ತು ಹೋಗುವ ಸಾಧ್ಯತೆ ಇದೆ ಎಂದು ಈಗ ಕೈಚೆಲ್ಲಿದೆ. ಜಿಂಕೆಗಳು ಸ್ವಾಭಾವಿಕವಾಗಿ ಅರಣ್ಯ ಪ್ರದೇಶ ಮತ್ತು ಅರಣ್ಯೇತರ ಪ್ರದೇಶ ಎರಡರಲ್ಲೂ ವಾಸಿಸುತ್ತವೆ. ಹಾಗಾಗಿ ಅವುಗಳನ್ನು ಸ್ಥಳಾಂತರಿಸಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿ ಪ್ರಸ್ತಾವವನ್ನು ಕೈಬಿಟ್ಟಿರುವುದಾಗಿ ಹೇಳಿದೆ.

ಜಿಂಕೆಯನ್ನು ಹಿಡಿದು ಬೇರೆಡೆಗೆ ಸಾಗಿಸುವುದು ಕಷ್ಟದ ಕೆಲಸವೇ ಸರಿ. ಮನುಷ್ಯರನ್ನು ಕಂಡರೆ ಹೆದರಿ ಓಡುವ ಅದು ಆಘಾತಕ್ಕೆ ಒಳಗಾಗುವುದು ಸಹಜ. ಹಾಗೆಂದು ಸುಮ್ಮನೆ ಬಿಟ್ಟರೆ ರೈತರ ಸ್ಥಿತಿ ಇನ್ನೂ ಶೋಚನೀಯವಾಗುತ್ತದೆ. ವನ್ಯಜೀವಿ ಸಂರಕ್ಷಣೆ ಜತೆಗೆ ರೈತರ ಹಿತ ಕಾಯುವ ಹೊಣೆಗಾರಿಕೆಯೂ ತನ್ನ ಮೇಲಿದೆ ಎನ್ನುವುದನ್ನು ಸರ್ಕಾರ ಮರೆಯಬಾರದು. 

ಜಿಂಕೆ ವನ ಸ್ಥಾಪನೆ ಪ್ರಸ್ತಾವವನ್ನು ಕೈಬಿಡುವುದಕ್ಕಿಂತ, ಗದಗ ಮತ್ತು ಕೊಪ್ಪಳದಲ್ಲಿ ಜಿಂಕೆಗಳು ಹೆಚ್ಚಾಗಿರುವ ಕಾಣಿಸಿಕೊಳ್ಳುವ ಪ್ರದೇಶದಲ್ಲಿಯೇ ರೈತರಿಂದ ಜಮೀನು ಖರೀದಿಸಿ, 100-200 ಎಕರೆ ಪ್ರದೇಶದಲ್ಲಿ ಮೇವು-  ನೀರು ದೊರೆಯುವಂತೆ ಮಾಡಬೇಕು. ಜತೆಗೆ ಆ ಪ್ರದೇಶಕ್ಕೆ ಸುತ್ತಲೂ ಎತ್ತರದ ಬೇಲಿ ಹಾಕಿಸಿ, ರೈತರ ಹೊಲಕ್ಕೆ ಅವು ನುಗ್ಗದಂತೆ ತಡೆಯಬೇಕು. ಸರ್ಕಾರದ ಈ ಕೆಲಸಕ್ಕೆ ರೈತರೂ ಭೂಮಿ ಕೊಡುವ ಮೂಲಕ (ಖರೀದಿಗೆ) ಸಹಕರಿಸಬೇಕು. ಅಲ್ಲದೇ, ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರವಾದಿಗಳು, ರೈತರನ್ನು ಒಳಗೊಂಡ ಸಮಿತಿ ರಚಿಸಿ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಕಂಡುಕೊಳ್ಳಬಹುದು.

ಕಾಡಾನೆ ಹಾವಳಿ ತಪ್ಪಿಸಲು, ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾರಿಡಾರ್ ನಿರ್ಮಾಣ, ಸೌರಬೇಲಿ ಅಳವಡಿಕೆ ಮತ್ತಿತರ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಅಲ್ಲೂ ರೈತರೇ ತೊಂದರೆಗೆ ಒಳಗಾಗುವುದು. ಇಲ್ಲಿನ ರೈತರದ್ದೂ ಅದೇ ಪರಿಸ್ಥಿತಿ. ಒಂದು ಕಣ್ಣಿಗೆ ಬೆಣ್ಣೆ; ಒಂದು ಕಣ್ಣಿಗೆ ಸುಣ್ಣ ಎಂಬ ತಾರತಮ್ಯ ನೀತಿ ಅನುಸರಿಸುವುದನ್ನು ಬಿಟ್ಟು ಎಲ್ಲ ರೈತರನ್ನು ಒಂದೇ ರೀತಿಯಲ್ಲಿ ಕಂಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಆದರೆ ಸರ್ಕಾರ ಆ ನಿಟ್ಟಿನಲ್ಲಿ ಯೋಚಿಸದಿರುವುದೇ ಬೇಸರದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT