ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಜಾರು ಓಟ

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಆರೆಂ ಟು ವರ್ಷಗಳ ಕೆಳಗೆ ನಾನೊಮ್ಮೆ ಊಟಿಗೆ ಯಾವುದೋ ಕೆಲಸದ ಮೇಲೆ ಹೋಗಿದ್ದೆ. ಸಂಜೆ ತಿರುಗಾಡಿ ಬರಲು ಹೊರಟೆ. ಸ್ವಲ್ಪ ಮುಂದೆ ಹೋದಾಗ ಸುಂದರವಾದ ಬೆಟ್ಟದ ಸಾಲುಗಳು.
 
ನನ್ನ ಹಾಗೆಯೇ ಸಾಕಷ್ಟು ಜನ ಅಲ್ಲಿಗೆ ಬಂದಿದ್ದರು. ವಾತಾವರಣ ಬಹಳ ಹಿತಕರವಾಗಿತ್ತು. ನಾನು ಬೆಟ್ಟದ ಕೆಳಗೆ ಒಂದು ಕಲ್ಲಿನ ಮೇಲೆ ಕುಳಿತು ನಿಸರ್ಗವನ್ನು ನೋಡಿ ಸಂತೋಷಪಡುತ್ತಿದ್ದೆ. ಅಲ್ಲಿ ಕೆಲ ಮಕ್ಕಳು ನಿಧಾನವಾಗಿ ಬೆಟ್ಟವನ್ನು ಸ್ವಲ್ಪ ದೂರ ಏರಿ ನಂತರ ಇಳಿದು ಸಂತೋಷಪಡುತ್ತಿದ್ದರು. ಆಗ ಅಲ್ಲಿಗೆ ಒಂದು ಪರಿವಾರ ಬಂತು.

ಅವರು ಮಾತನಾಡುವ ರೀತಿ  ಗಮನಿಸಿದರೆ ಆ ಪರಿವಾರದಲ್ಲಿ ತಂದೆ, ತಾಯಿ, ಅಳಿಯ, ಮಗಳು ಮತ್ತು ಇಬ್ಬರು ಗಂಡುಮಕ್ಕಳು ಇದ್ದ ಹಾಗೆ ತೋರಿತು. ಅವರಿಗೂ ತುಂಬ ಉತ್ಸಾಹ ಬಂದಿತ್ತು.

ಸ್ವಲ್ಪ ಹೊತ್ತು ಮಾತನಾಡುತ್ತಿದ್ದ ಅವರು ನಿಧಾನವಾಗಿ ಬೆಟ್ಟ ಏರತೊಡಗಿದರು. ಮೊದಮೊದಲು ಸಾವಕಾಶವಾಗಿ ಅಲ್ಲಲ್ಲಿದ್ದ ಅಡ್ಡದಾರಿಗಳನ್ನು ಬಳಸಿಕೊಂಡು ಮುಂದೆ ಸಾಗಿದರು. ಬಹುಶಃ ಮೇಲಿನ ವಾತಾವರಣ, ತಂಪಾದ ಗಾಳಿ ಮತ್ತಷ್ಟು ಆನಂದ ತಂದಿರಬೇಕು. ಮೇಲಿನಿಂದ ಕೆಳಗೆ ನೋಡುತ್ತಿದ್ದರು, ನಗುತ್ತಿದ್ದರು.
 
ಅವರ ಕೂದಲು, ಬಟ್ಟೆಗಳು ಗಾಳಿಗೆ ಹಾರಾಡುತ್ತಿದ್ದವು. ಅವರು ಮತ್ತಷ್ಟು ಮೇಲಕ್ಕೆ ಏರತೊಡದರು. ನನಗೇಕೋ ಅದು ಆತುರದ ನಿರ್ಧಾರ, ಅಪಾಯಕಾರಿಯಾದದ್ದು ಎನ್ನಿಸತೊಡಗಿತು. ಅವರು ಏರಿದ್ದು ಬಹಳ ಎತ್ತರ. ನನಗೆ ಕೆಳಗಿನಿಂದ ಚಿಕ್ಕಚಿಕ್ಕ ಗೊಂಬೆಗಳಂತೆ ಕಾಣುತ್ತಿದ್ದರು. ಅವರೇನು ಮಾತನಾಡಿಕೊಂಡರೋ ತಿಳಿಯದು.

ಅವರೆಲ್ಲ ಕೆಳಗೆ ಬೇಗಬೇಗನೇ ಇಳಿಯತೊಡಗಿದರು. ಯಾವಾಗಲೂ ಏರುವುದು ಕಷ್ಟ, ಇಳಿಯುವುದು ಸುಲಭ. ಆದರೆ, ತುಂಬ ಅಪಾಯಕಾರಿ. ಜೀವನದಲ್ಲೂ ಹಾಗೆಯೇ ಅಲ್ಲವೇ. ಬರುಬರುತ್ತ ಅವರು ಇಳಿಯುವ ವೇಗ ಹೆಚ್ಚಾಯಿತು. ಕೆಳಗೆ ಧಾವಿಸುವಾಗ ದೇಹದ ಭಾರ ಕೆಳಗೆ ತಳ್ಳುವುದರಿಂದ ನಿಲ್ಲುವುದು ಬಲುಕಷ್ಟ.

ಅವರು ಓಡತೊಡಗಿದರು. ಹುಡುಗರೇನೋ ಸಂತೋಷಪಡುತ್ತಿರಬೇಕು. ಆದರೆ ತಂದೆ ತಾಯಿಯರಿಗೆ ವಿಪರೀತ ಆತಂಕವಾಗಿರಬೇಕು. ತಾಯಿ ಸೀರೆ ಉಟ್ಟಿದ್ದರಿಂದ ಇನ್ನಷ್ಟು ಕಷ್ಟವಾಯಿತು. ಕ್ಷಣಾರ್ಧದಲ್ಲಿ ಅವರು ಕೂಗತೊಡಗಿದರು.

ಉಳಿದವರು ಅವರನ್ನು ನೋಡಿದರೂ ತಮ್ಮ ವೇಗವನ್ನು ನಿಲ್ಲಿಸಲಾಗುತ್ತಿಲ್ಲ. ಅಪ್ಪ ಕೂಗತೊಡಗಿದರು. ಮರುಕ್ಷಣ ತಾಯಿ ಕಾಲಿಗೆ ಸೀರೆ ತೊಡರಿ, ಕಲ್ಲು ಎಡವಿ ಬಿದ್ದು ಉರುಳಲಾರಂಭಿಸಿದರು.
 
ಇದ್ದುದರಲ್ಲಿ ಅಳಿಯ ಸ್ವಲ್ಪ ನಿಧಾನವಾಗಿ ಇಳಿಯುತ್ತಿದ್ದವನು,  ಸರಸರನೇ ಅತ್ತೆ ಬಿದ್ದೆಡೆಗೆ ಸಾಗಿ ಅವರನ್ನು ನಿಲ್ಲಿಸಿ, ಕೂಡ್ರಿಸಿದ. ಅಷ್ಟರಲ್ಲಿ ಮಗಳು ಕೂಡ ಬಿದ್ದು ಜಾರತೊಡಗಿದಳು.

ಕೆಲ ದೂರ ಕೆಳಗೆ ಬಂದ ಮೇಲೆ ಜಾರುವುದು ನಿಂತು ಎದ್ದು ನಿಂತಳು. ನಂತರ ಗಂಡು ಮಕ್ಕಳಿಬ್ಬರೂ ಮೇಲೆ ಹೋಗಿ ಅಮ್ಮನನ್ನು ಕರೆತಂದರು. ಯಾವ ದೊಡ್ಡ ಅನಾಹುತವಾಗದಿದ್ದರೂ ತಾಯಿ, ಮಗಳಿಗೆ ತರಚುಗಾಯಗಳಾಗಿದ್ದವು. ದೇವರ ದಯೆ ಇಷ್ಟಕ್ಕೇ ಮುಗಿಯಿತಲ್ಲ ಎಂದು ಸಂತೋಷಪಟ್ಟರು.

ನಾವೂ ಹಾಗೆಯೇ ಓಡುತ್ತಿದ್ದೇವೆ ಇಳಿಮುಖವಾಗಿ. ನಮ್ಮ ಆಸೆಗಳ, ಅಪೇಕ್ಷೆಗಳ, ಮಹತ್ವಾಕಾಂಕ್ಷೆಗಳ ಬೆನ್ನು ಹತ್ತಿ. ನಮ್ಮ ಕಾಲುಗಳಿಗೆ ವೇಗವನ್ನು ತಡೆದುಕೊಳ್ಳುವುದು ಕಷ್ಟವಾಗುತ್ತಿದೆ. ನಮ್ಮ ವೇಗ ನಿಧಾನವಾದಷ್ಟೂ ತಡೆದು ನಿಲ್ಲುವ ಅವಕಾಶ ಹೆಚ್ಚು. ಕೆಲವೊಮ್ಮೆ ಈ ಓಟಕ್ಕೆ ಕೊನೆಯೇ ಇಲ್ಲವೇ ಎನ್ನಿಸುತ್ತದೆ. ಬದುಕಿರುವವರೆಗೂ ಓಟ ತಪ್ಪಿದ್ದಲ್ಲ. ಓಟ ಮುಗಿಸುವುದು ಉದ್ದೇಶವಲ್ಲ.

ಯಾವ ಬುದ್ಧಿವಂತಿಕೆಯಿಂದ, ತಾಳ್ಮೆಯಿಂದ, ನಿಗ್ರಹದಿಂದ ಎಷ್ಟು ಚೆನ್ನಾಗಿ ನಿಧಾನವಾಗಿ ಈ ಓಟ  ಮುಂದುವರೆಸುತ್ತೇವೆ ಎಂಬುದು ಮುಖ್ಯ. ಅದು ನಮ್ಮ ಜೀವನದ ಯಶಸ್ಸನ್ನು ತೀರ್ಮಾನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT