ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಆಟಕ್ಕೆ ಯಾರು ಸಾಟಿ?

ಅಕ್ಷರ ಗಾತ್ರ

ನಮ್ಮ ಹುಡುಗರು ಗೆದ್ರು ರಣಜಿ ಟ್ರೋಫಿ
ಗೆದ್ದ ಕಲಿಗಳಿಗೆ ಸಿಕ್ತು ಬಹುಮಾನ ಕೋಟಿ
ನಿಂತಿಲ್ಲ ಪುಢಾರಿಗಳಿಂದ ನಿತ್ಯ ಲೂಟಿ
ರಾಜಕಾರಣಿಗಳ ಆಟಕ್ಕೆ ಇನ್ಯಾರು ಸಾಟಿ
‘ಸಾರ್, ನಿಮ್ಮ ಕಾಲ್ಗುಣ ಚೆನ್ನಾಗಿದೆ ಸಾರ್’ .- ಅಯ್ಯ ಅವರ ಗೃಹಕಚೇರಿ ಒಳಗೆ ಚಮಚೇಶ್ ಅವರು ಅಯ್ಯ ಅವರನ್ನು ಸಂಪ್ರೀತಗೊಳಿಸಲು ಕಾಲ್ಗುಣದ ಪ್ರಸ್ತಾಪ ಮಾಡುತ್ತಿದ್ದರು.

ಯಾವುದೇ ಪ್ರತಿಕ್ರಿಯೆಯಿಲ್ಲದೆ, ಮೌನವಾಗಿ, ನಿಧಾನ­ವಾಗಿ ವಾರೆಗಣ್ಣಿನಿಂದ ವಂದಿಮಾಗಧರತ್ತ ದೃಷ್ಟಿ ಹಾಯಿಸಿದ ಅಯ್ಯ ಅವರು, ‘ಮುಚ್ಚೋ ಬಾಯಿ, ನಾನು ಕಾಲ್ಗುಣ, ಪಾಲ್ಗುಣ ನಂಬಲ್ಲ ಅಂತ ಗೊತ್ತಿಲ್ವ? ಈಗ ನನ್ನದೇನಿದ್ರೂ ‘ಕೈ’­ಗುಣ. ಮೌಢ್ಯ ತೊಲಗಿಸೋಕೆ ಅಂತ ಮಸೂದೆ ಮಾಡೋಕೆ ಹೊರ­ಟಿರೋ ನನ್ನ ಹತ್ರಾನೇ ಕಾಲ್ಗುಣದ ಮಾತಾಡ್ತೀಯಾ?’ ಎಂದು ಗದರಿದರು.

‘ಹಂಗಲ್ಲ ಸಾರ್, ಹದಿನೈದು ವರ್ಷಗಳ ನಂತರ ನಮ್ಮ ಹುಡು­­ಗರು ರಣಜಿ ಕಿರೀಟ ತಕ್ಕೊಂಡು ಬಂದಿದ್ದಾರೆ. ಬಹಳ ವರ್ಷ­­ಗಳ ನಂತರ ರಾಜ್ಯದಲ್ಲಿ ಅಹಿಂದ ಸರ್ಕಾರ ಬಂದಿದೆ. ಅದಕ್ಕೆ ನಿಮ್ಮ ಕಾಲ್ಗುಣ ಅಲ್ಲದೆ ಬೇರೆ ಕಾರಣ ಇಲ್ಲ. ಆವತ್ತು ಎಇಎಸ್ ಪ್ರಸನ್ನ, ಇವತ್ತು ವಿನಯ್‌ಕುಮಾರ್. ಆವತ್ತು ದೇವ­­ರಾಜ ಅರಸು ಇವತ್ತು ಅಯ್ಯ’- ಚಮಚೇಶ್ ಅವರು ವಿವರಿಸುತ್ತಾ ಹೋದರು.

ದೇವರಾಜ ಅರಸು ಹೆಸರು ಕೇಳುತ್ತಲೇ ಉಬ್ಬಿಹೋದ ಅಯ್ಯ ಅವರು ಖುಷಿಯಿಂದ: ‘ಆಯ್ತು ಆಯ್ತು, ಪ್ಲೇಯರ್‌­ಗ­ಳಿಗೆ ಒಂದು ಕೋಟಿ ರೂಪಾಯಿ ಬಹುಮಾನ ಅನೌನ್ಸ್ ಮಾಡ್ರಿ’ ಎಂದು ಘೋಷಿಸಿಯೇ ಬಿಟ್ಟರು.

‘ಅದಿರ್ಲಿ ಸಾರ್, ರಣಜಿ ಗೆದ್ದ ಕ್ರಿಕೆಟ್ ತಂಡದ ಎಲ್ಲ ಆಟ­ಗಾರರೂ ನಿಮ್ಮನ್ನು ನೋಡಲು ಈಗ ಬರ್ತಾ ಇದ್ದಾರೆ ಸಾರ್, ಒಂದ್ಕಪ್ ಕಾಫಿ ಕೊಟ್ಟು, ಒಂದ್ ಪೇಟಾ ಹಾಕಿ ಕಳುಹಿಸಿ ಬಿಡೋಣ, ತಂಡದ ನೇತೃತ್ವವನ್ನು ಪೆಕರ ಅವರು ವಹಿಸಿ­ಕೊಂಡು ಕರಕೊಂಡು ಬರ್ತಾ  ಇದ್ದಾರೆ’ ಎಂದು ಹೇಳುತ್ತಿರು ವಂ­ತೆಯೇ ಪೆಕರನ ನೇತೃತ್ವದಲ್ಲಿ ಕ್ರಿಕೆಟ್‌ಕಲಿಗಳ ತಂಡ ಸಿಎಂ ಅವರ ಗೃಹ ಕಚೇರಿಯೊಳಗೆ ನುಗ್ಗಿಯೇ ಬಿಟ್ಟಿತು.

ಅಯ್ಯ ಅವರು ಎಲ್ಲರ ಕೈಕುಲುಕಿದರು.    ‘ನೀವು ಗೆದ್ಕಂಡ್ ಬಂದದ್ದು ಬಹಳ ಸಂತೋಷದ ಸಂಗತಿ. ಹದಿನೈದು ವರ್ಷ­ಗಳಿಂದ ಪ್ರಶಸ್ತಿ ಬಂದಿರಲಿಲ್ಲ. ಹಿಂದಿನ ಸರ್ಕಾರಗಳು ಏನ್ ಮಾಡ್ತಾ ಇದ್ವು? ರಪ್ಪ ಅವರಂತೂ ರಾಜ್ಯಾನ ದಿವಾಳಿ ಎಬ್ಬಿಸಿ­ಬಿಟ್ರು’ ಎಂದರಲ್ಲದೆ, ‘ನಾನು ಕ್ರಿಕೆಟ್ ಆಗಾಗ ನೋಡ್ತಾ ಇರ್ತೀನಿ’ ಎಂದರು.

ಎಡಪಕ್ಕದಲ್ಲಿ ನಿಂತಿದ್ದ ರಾವಣ್ಣ ಅವರನ್ನು ತಂಡಕ್ಕೆ ಪರಿಚ­ಯಿಸಿ, ‘ನಮ್ ರಾವಣ್ಣ ಕೂಡಾ ಪ್ಲೇಯರ್ರು! ಹಾಕಿ ಆಡ್ತಾ ಇದ್ರು’ ಎಂದು ಜೋಕ್ ಮಾಡಿದರು.

ಬಲಪಕ್ಕದಲ್ಲಿ ಇಡಗೂರು ಸಾಹೇಬರೂ ನಗುತ್ತಾ ನಿಂತಿದ್ದರು. ‘ಏನ್ರೀ ಇಡಗೂರು ಅವರೇ, ನಮ್ಮ ಹುಡುಗರು ರಣಜಿ ಕಿರೀಟ ಗೆಲ್ಲಲಿ ಅಂತ ಕುರಿ, ಕೋಳಿ ಏನೂ ಬಲಿ ಕೊಡ­ಲಿಲ್ಲ ತಾನೇ?!’ ಎಂದು ಕೇಳಿ ಎಲ್ಲರನ್ನೂ  ನಗಿಸಿದರು. ‘ಇವರೂ ಒಳ್ಳೇ ಪ್ಲೆಯರ್ರು, ಯಂಗ್ ಆಗಿದ್ದಾಗ ಮೈಸೂರು ಬಳ್ಳಾಲ್ ಹೋಟೆಲ್ ಸರ್ಕಲ್ ಹತ್ರ ನಿಂತ್ಕಂಡು ಬ್ಯಾಟಿಂಗ್ ಮಾಡೋವ್ರು’ ಎಂದು ಮತ್ತೊಂದು ಜೋಕ್ ಮಾಡಿದರು. ವಂದಿ­ಮಾಗಧರು ಬಲವಂತವಾಗಿ ನಕ್ಕರು. ಆಟಗಾರರು ಏನೂ ಅರ್ಥವಾಗದೆ ಮಿಕಿಮಿಕಿ ನೋಡಿದರು.
ತಂಡದ ಕ್ಯಾಪ್ಟನ್‌ನನ್ನು ಪೆಕರ ಪರಿಚಯಿಸಿದ. ‘ಬಹಳ ಸಂತೋಷ, ತಂಡದಲ್ಲಿ ಸಾಮಾಜಿಕ ನ್ಯಾಯ ಸಂದಿ­ದೆಯಾ? ಅದು ಮುಖ್ಯ’ ಎಂದರು ಅಯ್ಯ.

ಏನೂ ಅರ್ಥವಾಗದೆ ಕ್ಯಾಪ್ಟನ್, ‘ಯಸ್ ಸಾರ್’ ಎಂದು ತಲೆ ಆಡಿಸಿದರು.
‘ಯಾಕ್ಹೇಳ್ತೀನಿ ಅಂದ್ರೆ, ನಮ್ಮ ರಾಜಕೀಯ ರಂಗದಲ್ಲಿ ಎಂಥೆಂಥಾ ಚಾಲೂಕಿ ಆಟಗಾರರಿದ್ದಾರೆ ಗೊತ್ತಾ? ಮ್ಯಾಚ್ ಗೆಲ್ಲೋದು ಬಹಳ ಕಷ್ಟ ಇದೆ ಅಂತ ನನಗೆ ಗೊತ್ತು. ನಿಮಗೆ ಗೊತ್ತಾ...ದೊಡ್ಡಗೌಡರು, ರಪ್ಪ, ಡಾಜಿಪ ಎಲ್ಲರ ಸ್ಪಿನ್‌­ದಾಳಿ­ಯನ್ನು ಎದುರಿಸಿ ನಾನು ಇಲ್ಲಿ ಬಂದು ಕೂತಿದ್ದೇನೆ’- ಅಯ್ಯ ಅವರ ಲಹರಿ ಹರಿಯಲಾರಂಭಿಸಿತು.

‘ಸಾರ್, ಇವರು ಶ್ರೇಯಸ್, ನಾಲ್ಕು ವಿಕೆಟ್ ಕಬಳಿಸಿ ಗೆಲು­ವಿಗೆ ಕಾರಣರಾದವರು’ ಆಟಗಾರರ ಪರಿಚಯಕ್ಕೆ ಕ್ಯಾಪ್ಟನ್ ಮುಂದಾದರು.
‘ನಮ್ಮಲ್ಲೂ ದೊಡ್ಡಗೌಡರು ಅಂತ ಒಬ್ಬರಿದ್ದಾರೆ. ವಿಕೆಟ್ ಎಗರಿ­­ಸೋ­ದ್ರಲ್ಲಿ ಬಹಳ ಫೇಮಸ್. ಎರಡು ಜಿಲ್ಲೇಲಿ ಮಾತ್ರ ಅಬ್ಬ­ರಿ­ಸುತ್ತಾ, ನಲವತ್‌ವರ್ಷದಿಂದ ಒಂದೇತರ ಸ್ಪಿನ್ ಮಾಡ್ಕಂಡು ಆಡಿದ್ದೇ ಆಡ್ತಾ ಇದಾರೆ. ಚುನಾವಣೆ ಮುಗಿದು, ಫಲಿ­­­ತಾಂಶ ಬರೋವರ್ಗೂ ಡಗ್‌ಔಟ್‌ನಲ್ಲಿ ಕಾದು ಕುಳಿತಿ­ರ್ತಾರೆ. ಮೆಜಾರಿಟಿ ಯಾರಿಗೆ ಬರುತ್ತೋ ಅತ್ತ ಕಡೆ ಓಡಿ ಅಧಿ­ಕಾರ ಗ್ರ್ಯಾಬ್ ಮಾಡ್ತಾರೆ. ಧರ್ಮಾತ್ಮ ಸಿಂಗ್‌ಜೀ ಅವರ ವಿಕೆಟ್ ಎಗರಿಸಿದ್ದೂ ಅವರೇ. ಓಡಲು ಆಗದಿದ್ದರೆ ಮಾರ ಸ್ವಾಮಿ­ಗಳಿಗೆ ಬದಲಿ ಆಟಗಾರನಾಗಿ ಛಾನ್ಸ್ ಕೊಡ್ತಾರೆ’ ಎಂದು ಹೇಳಿ ಅಯ್ಯ ಅವರು ನಕ್ಕರು.

ಯುವ ಆಟಗಾರರು ಏನೂ ಅರ್ಥವಾಗದೆ ಸುಮ್ಮನೆ ಮಿಕಿಮಿಕಿ ನೋಡುತ್ತಿದ್ದರು.
‘ನಿಮ್ಮ ತಂಡದಲ್ಲೂ ಡಿಕುಶಿಮಾರ ಮತ್ತು ಬೇಗ ಎಂಬ ಇಬ್ಬರು ‘ಸಮರ್ಥ’ ಆಟಗಾರರಿದ್ದಾರೆ ಸಾರ್’ ಎಂದು ಪೆಕರ ನಡುವೆ ಒಂದು ಬಾಣ ಬಿಟ್ಟ.

’ಹೌದು ಕಣ್ರೀ, ಅವರಿಬ್ಬರೂ ಸಚಿನ್‌ದೇವರು ಇದ್ದಂಗೆ. ತಂಡ ಯಾವ್ದೇ ಇದ್ರೂ ಜಾಗ ಕಾಯಂ ಮಾಡ್ಕೋಳ್ಳೋವಂತ ಆಟ­ಗಾರರು. ಕನಕಪುರ, ಬೆಂಗಳೂರು ಸಿಟಿಯಲ್ಲಿ ಅವರು ಹೊಡೀದೇ ಇರೋ ‘ಬೌಂಡರಿ’ಗಳೇ ಇಲ್ಲ’
ಏನು ಹೇಳಿದರೂ ಸಾಹೇಬರು ಅದದೇ ವಿಷಯಕ್ಕೇ ಬಂದು ನಿಲ್ಲುತ್ತಿ­ದ್ದಾರಲ್ಲಾ ಎಂದು ಪೆಕರ ಚಿಂತಾಕ್ರಾಂತನಾದ. ‘ಇರಲಿ ಸಾರ್, ಇದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಎಲ್ಲರಿಗೂ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟುಬಿಡಿ ಸಾರ್, ಎನ್‌­ಕರೇಜ್‌ಮೆಂಟ್ ಇರುತ್ತೆ’ ಎಂದು ಪೆಕರ ಶಿಫಾರಸು ಮಾಡಿದ.

‘ಬರೀ ಕ್ರಿಕೆಟ್‌ನವರಿಗೇ ಪ್ರಶಸ್ತಿಕೊಟ್ರೆ ಹೇಗೆ? ಕಬಡ್ಡಿ, ಕೊಕ್ಕೋ, ಕುಸ್ತಿ ಇವೆಲ್ಲಾ ಹಿಂದುಳಿದ ಆಟಗಳು. ಅವುಗಳನ್ನು ನಾವು ಸಮಾಜದ ಮುಖ್ಯಸ್ತರಕ್ಕೆ ತರಬೇಕಲ್ಲವೇ? ಪ್ರಶಸ್ತಿಗಳು ಬಂದರೆ ಮಾತ್ರ ದೊಡ್ಡವಿಷಯವಲ್ಲ. ಆಟ ಆಡೋದೂ ಮುಖ್ಯ’ ಎಂದರು ಅಯ್ಯ.
ಪ್ರಶಸ್ತಿಗಳ ಬಗ್ಗೆ ಇದೆ ಅಂತೆಕಂತೆ
ಪೀಠ ಪ್ರಶಸ್ತಿಯೇ ನಾನ್‌ಸೆನ್ಸ್ ಅಂತೆ
ಸಾಹಿತ್ಯ ಬರಿ ಎಂಟೇ ಜನರದಲ್ವಂತೆ
ಲಾಬಿ ಮಾಡಿದರೆ ಎಲ್ಲ ಉಂಟಂತೆ
‘ಪರವಾಗಿಲ್ಲ ಬಿಡಿ ಸಾರ್, ಬಿಡಿಎ ಸೈಟನ್ನಾದರೂ ಕೊಡಿ’ ಎಂದು ಪೆಕರ ಬೇಡಿಕೆ ಮುಂದಿಟ್ಟ.

‘ಎಲ್ಲಿದೆ ಸೈಟು?! ಹಿಂದಿನ ಸಿಎಂಗಳೆಲ್ಲಾ ‘ಜಿ’ ಕೆಟಗರಿಯಲ್ಲಿ ಮನೆಕೆಲಸಗಾರರಿಗೆ, ಅಡುಗೆಮನೆ­ಯಾಳು­ಗಳಿಗೆ, ಶಾಸ್ತ್ರ ಹೇಳುವವರಿಗೆ ಕೊಟ್ಟು ನುಂಗಿ ನೊಣೆದು ಹಾಕಿ­ರೋದು ಗೊತ್ತಿಲ್ವಾ?’- ಅಯ್ಯ ಅವರು ಪ್ರಶ್ನಿಸಿದರು.

‘ಯುವ ಆಟಗಾರರು ಟೀಂ ಸ್ಪಿರಿಟ್‌ನಿಂದ ಗೆದ್ದಿದ್ದಾರೆ. ಅವರಿಗೆ ಕೊನೇ ಮಾತಾಗಿ ನಿಮ್ಮ ಸಂದೇಶ ಹೇಳಿ ಆಶೀರ್ವದಿಸಿ ಸಾರ್’ ಎಂದು ಪೆಕರ ವಿನಂತಿಸಿಕೊಂಡ.

ಟೀಂ ಸ್ಪಿರಿಟ್ ಅಂದ ಕೂಡಲೇ ಅಯ್ಯ ಅವರು ಗರಂ ಆದರು. ‘ಲೋಕಸಭಾ ಚುನಾವಣೆ ಹತ್ರ ಬಂತು. ಎಲ್ಲಿದೆ ಟೀಂ ಸ್ಪಿರಿಟ್? ಆಗ್ಲೇ ಕಾಲು ಎಳೆಯೋದಿಕ್ಕೆ ಹೊರಟಿದ್ದಾರೆ. ಕೋಳಿ­ವಾಡ, ಮಾಲಕಯ್ಯ ದೆಹಲಿಯಲ್ಲೇ ಕೂತಿದ್ದಾರೆ. ನನ್ನ ಸಂಪುಟ ಸಚಿವರು ಎಲ್ಲಿದ್ದಾರೆ ಹುಡುಕಬೇಕಲ್ಲಾ, ಇವ­ರೇನೋ ರಣಜಿ ಗೆದ್ದರು, ನಾನು ಲೋಕಸಭೆ ಗೆಲ್ಲಬೇಕಲ್ಲ’ ಎಂದು ಹೇಳಿ ಅಯ್ಯ ಅವರು ಎದ್ದು ನಿಂತರು. ಎಲ್ಲರ ಕೈಕುಲುಕಿ ಬೀಳ್ಕೊಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT