ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರನ್ನು ಹೇಗೆ ನಂಬಬೇಕು? ಏಕೆ ನಂಬಬೇಕು?

Last Updated 6 ಮೇ 2017, 19:30 IST
ಅಕ್ಷರ ಗಾತ್ರ
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ನವದೆಹಲಿ ಕಚೇರಿಯಲ್ಲಿ ಅವರ ಕುರ್ಚಿಯ ಹಿಂದೆ ಅಟಲ ಬಿಹಾರಿ ವಾಜಪೇಯಿ ಅವರ ಚಿತ್ರ ಇದೆ. ಅದರ ಕೆಳಗೆ, ‘ಛೋಟೆ ಮನ್‌ ಮೇ ಕೋಯಿ ಬಡಾ ನಹೀ ಹೋತಾ, ಟೂಟೆ ಮನ್‌ ಮೇ ಕೋಯಿ ಖಡಾ ನಹೀ ಹೋತಾ’ ಎಂಬ ಧ್ವನಿಪೂರ್ಣ ಕವಿತೆಯಂಥ ಅವರದೇ ಮಾತು ಇದೆ. ‘ಸಣ್ಣ ಮನಸ್ಸಿನೊಳಗೆ ದೊಡ್ಡವನಾರೂ ಇರುವುದಿಲ್ಲ; ಮುರಿದ ಮನಸ್ಸಿನೊಳಗೆ ಯಾರೂ ನೆಲೆಸುವುದಿಲ್ಲ’ ಎಂಬುದು ಅದರ ಅರ್ಥ.
 
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರು ಅಮಿತ್‌ ಷಾ ಅವರನ್ನು ಅವರ ಕಚೇರಿಯಲ್ಲಿ ಅನೇಕ ಸಾರಿ ಭೇಟಿ ಮಾಡಿರಬಹುದು. ಯಡಿಯೂರಪ್ಪನವರ ವಿರುದ್ಧ ದೂರು ಹೇಳಲು ಹೋದಾಗ ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರೂ ಅದೇ ಕಚೇರಿಗೆ ಹೋಗಿರಬಹುದು! ಇಬ್ಬರೂ ವಾಜಪೇಯಿ ಚಿತ್ರ ನೋಡಿರಬಹುದು. ಅದರ ಕೆಳಗೆ ಹಿಂದಿಯಲ್ಲಿ ಬರೆದಿರುವ ವಾಕ್ಯವನ್ನು ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಇಬ್ಬರಿಗೂ ಹಿಂದಿ ಅಷ್ಟಕ್ಕಷ್ಟೇ ಬರುತ್ತದೆ.
 
ಸಮರ ಕಣದಲ್ಲಿ ಎದುರಾದಂತೆ ಒಬ್ಬರ ವಿರುದ್ಧ ಒಬ್ಬರು ಕತ್ತಿ ಮಸೆಯುತ್ತಿರುವ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರಲ್ಲಿ ಸಣ್ಣ ಮನಸ್ಸು ಯಾರದು ಮುರಿದ ಮನಸ್ಸು ಯಾರದು ಎಂದು ಅವರವರಿಗೇ ಗೊತ್ತಿರುತ್ತದೆ. ಅಥವಾ ಅದನ್ನು ಅವರು ಆಗಾಗ ಅದಲು ಬದಲು ಮಾಡಿಕೊಂಡಿರಲೂಬಹುದು.  
ಮನಸ್ಸು ಸಣ್ಣದು ಇದ್ದರೆ ಆ ಮನಸ್ಸಿನಲ್ಲಿ ಒಬ್ಬ ದೊಡ್ಡ ಮನುಷ್ಯ ಇರಲಾರ. ಮನಸ್ಸು ಮುರಿದಿದ್ದರೆ ಆ ಮನಸ್ಸಿನಲ್ಲಿ ಸ್ವತಃ ಆ ಮನುಷ್ಯನೂ ಇರಲಾರ.
 
ಅಂದ ಮೇಲೆ ಅಲ್ಲಿ  ಇನ್ನೊಬ್ಬರಿಗೆ ಜಾಗ ಇರುವುದು ದೂರವೇ ಉಳಿಯಿತು. ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಣ ಶೀತಲ ಸಮರ ನಿನ್ನೆ ಮತ್ತು ಇಂದು ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ತಣ್ಣಗೆ ಆಗುತ್ತದೆಯೋ ಅಥವಾ ಬೂದಿ ಮುಚ್ಚಿದ ಕೆಂಡದ ಹಾಗೆ ಉಳಿಯುತ್ತದೆಯೋ ಎಂಬುದು ಬಹಳ ಬೇಗ ಗೊತ್ತಾಗುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ಇಬ್ಬರೂ ಮುಖ ಗಂಟು ಹಾಕಿಕೊಂಡು ಕುಳಿತುದನ್ನು ನೋಡಿದರೆ ಅದು ಬೂದಿ ಮುಚ್ಚಿದ ಕೆಂಡವೇ ಎಂದು ಅನಿಸುತ್ತದೆ. ಬಹುಶಃ ಇಬ್ಬರೂ ಪರಸ್ಪರರನ್ನು ಬಹಳಷ್ಟು ನೋಯಿಸಿದ ಹಾಗೆ ಕಾಣುತ್ತದೆ.
 
ಯಡಿಯೂರಪ್ಪ ಈಗ ರಾಜ್ಯ ಬಿಜೆಪಿಯ ಅಗ್ರಮಾನ್ಯ ನಾಯಕ. ಅವರು ಪಕ್ಷದ ಅಧ್ಯಕ್ಷ ಮತ್ತು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ. ಅವರ  ನಾಯಕತ್ವವನ್ನು ಪಕ್ಷದಲ್ಲಿ ಈಗ ಯಾರೂ ಪ್ರಶ್ನಿಸುತ್ತಿಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿ. ಒಂದು ಸಾರಿ ಪಕ್ಷ ಬಿಟ್ಟು ಹೊರಗೆ ಹೋದ, ಒಂದು ರೀತಿ ಪಕ್ಷದ ಸೋಲಿಗೆ  ಕಾರಣವಾದ, ವ್ಯಕ್ತಿಗೆ ಆ ಪಕ್ಷ ಮತ್ತೆ ಇಂಥ ಮನ್ನಣೆ ಕೊಟ್ಟುದು ಬಿಜೆಪಿ ಇತಿಹಾಸದಲ್ಲಿ ಹಿಂದೆ ಎಂದೂ ಆಗಿರಲಿಲ್ಲ.
 
2013ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರ ಉದ್ದೇಶ ತಾವು ಅಧಿಕಾರಕ್ಕೆ ಬರುವುದು ಆಗಿತ್ತೋ ಇಲ್ಲವೋ ತಿಳಿಯದು. ಆದರೆ, ಬಿಜೆಪಿಯನ್ನು ಸೋಲಿಸುವುದು ಅವರ ಪ್ರಬಲ ಉದ್ದೇಶವಾಗಿತ್ತು ಮತ್ತು ಅದರಲ್ಲಿ ಅವರು ಸಫಲರಾದರು. ಬಿಜೆಪಿ ಜೊತೆಗೆ ಪಕ್ಷದಲ್ಲಿ ಕೆಲವರ ಸೊಂಟವನ್ನಾದರೂ ಮುರಿಯಬೇಕು ಎಂದು ಅವರು ನಿರ್ಣಯಿಸಿದ್ದರು. ಅದರಲ್ಲಿಯೂ ಅವರು ಸಫಲರಾದರು. ಹಾಗೆ ಯಡಿಯೂರಪ್ಪ ಸೊಂಟ ಮುರಿಯಬೇಕು ಎಂದು ಕೊಂಡವರ ಪಟ್ಟಿಯಲ್ಲಿ ಈಶ್ವರಪ್ಪ ಹೆಸರು ಮೊದಲಿನದಾಗಿತ್ತು. ಅದೆಲ್ಲ ಈಗ ಹಳೆಯ ಕಥೆ.
 
ಯಡಿಯೂರಪ್ಪ ಮತ್ತೆ ಪಕ್ಷಕ್ಕೆ ಬಂದರು. ಸಂಸದರಾದರು. ಚುನಾವಣೆ ಕಾರ್ಯತಂತ್ರದ ಕಾರಣವಾಗಿ ಅವರನ್ನು ಪಕ್ಷ ಈಗ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಿಸಿದೆ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. 
 
ದಕ್ಷಿಣ ಭಾರತದಲ್ಲಿ ಒಂದು ಸಾರಿ ಸ್ವಶಕ್ತಿಯಿಂದ ಅಧಿಕಾರ ಹಿಡಿದು ಹಾಗೂ ಹೀಗೂ ಐದು ವರ್ಷಗಳನ್ನು ಪೂರೈಸಿರುವ ಬಿಜೆಪಿ ಈಗ ಮತ್ತೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಹಂಬಲ ಹೊಂದಿದೆ. 2018ರಲ್ಲಿ ವಿಧಾನಸಭೆಯಲ್ಲಿ ಅಧಿಕಾರ ಹಿಡಿದರೆ 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸೀಟುಗಳನ್ನು ಗೆಲ್ಲಲು ಅನುಕೂಲ ಎಂದೂ ಆ ಪಕ್ಷ ಲೆಕ್ಕ ಹಾಕುವುದು ಸಹಜ. ಹಾಗೆ ನೋಡಿದರೆ ಎರಡನೆಯದೇ ಆ ಪಕ್ಷಕ್ಕೆ ಹೆಚ್ಚು ಮುಖ್ಯ ಸಂಗತಿ.
 
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾದ ನಂತರ ಯಡಿಯೂರಪ್ಪ ಮಾಡಬೇಕಾಗಿದ್ದುದು ಪಕ್ಷದಲ್ಲಿನ ಎಲ್ಲ ಹಿರಿಯರನ್ನು ಕರೆದು ಪಕ್ಕದಲ್ಲಿ ಕೂಡ್ರಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವುದು ಹೇಗೆ, ಪದಾಧಿಕಾರಿಗಳನ್ನು ನೇಮಿಸುವಾಗ ನಿಮ್ಮ ಸಲಹೆ ಸೂಚನೆ ಏನು ಎಂದೆಲ್ಲ ಕೇಳಬೇಕಿತ್ತು. 2008ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಇದ್ದ ಆ ಪಕ್ಷದ ನಾಯಕತ್ವಕ್ಕೂ ಈಗಿನ ನಾಯಕತ್ವಕ್ಕೂ ಬಹಳ ವ್ಯತ್ಯಾಸ ಇದೆ.
 
ಆಗ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಯಡಿಯೂರಪ್ಪ ಮಾತ್ರ ರಾಜ್ಯ ಮಟ್ಟದ ದೊಡ್ಡ  ನಾಯಕರಾಗಿದ್ದರು. ಅವರಷ್ಟೇ ಹಿರಿಯ ನಾಯಕರಾಗಿ ಅನಂತಕುಮಾರ್‌ ಮಾತ್ರ ಇದ್ದರು. ಈಗ ಅದೇ ಪಕ್ಷದಿಂದ ಮಾಜಿ ಮುಖ್ಯಮಂತ್ರಿಗಳಾಗಿ ಜಗದೀಶ್‌ ಶೆಟ್ಟರ್‌, ಡಿ.ವಿ.ಸದಾನಂದಗೌಡರು ಇದ್ದಾರೆ. ಕೇಂದ್ರದಲ್ಲಿ ಅತಿ ಹಿರಿಯ ಮಂತ್ರಿಗಳಲ್ಲಿ ಒಬ್ಬರಾಗಿ ಅನಂತಕುಮಾರ್‌ ಇದ್ದಾರೆ. ಈಶ್ವರಪ್ಪ ಕೂಡ ಕಿರಿಯ ನಾಯಕರೇನೂ ಅಲ್ಲ. ಅವರೂ ಮೂರು ಬಾರಿ ಪಕ್ಷದ ಅಧ್ಯಕ್ಷರಾಗಿದ್ದವರು. ಇವರಷ್ಟೇ ಅಲ್ಲ. ಅಶೋಕ್‌, ಸುರೇಶ್‌ ಕುಮಾರ್‌, ಕಾರಜೋಳ, ರವಿ, ಜಿಗಜಿಣಗಿ ಹೀಗೆ ಅನೇಕರು ಈಗ ಪಕ್ಷದಲ್ಲಿ ಮುಂಚೂಣಿ ನಾಯಕರು ಅನಿಸಿದ್ದಾರೆ.
 
ಯಡಿಯೂರಪ್ಪನವರು ಒಬ್ಬೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಇವರನ್ನೆಲ್ಲ ಸಂಪರ್ಕಿಸಿ, ಮನೆಗೆ  ಕರೆದು ಜೊತೆಗೆ ತಿಂಡಿ ತಿನ್ನುತ್ತ, ಊಟ ಮಾಡುತ್ತ ಮಾತನಾಡಿದ್ದರೆ ಯಡಿಯೂರಪ್ಪನವರಿಗೇನೂ ನಷ್ಟ ಆಗುತ್ತಿರಲಿಲ್ಲ. ಪಕ್ಷದಲ್ಲಿ ಇನ್ನಷ್ಟು ಪ್ರೀತಿ, ವಿಶ್ವಾಸ ವೃದ್ಧಿಸುತ್ತಿತ್ತು. ಎಲ್ಲರೂ ಸೇರಿ ಗೆಲುವಿಗೆ ಶ್ರಮಿಸಲು ಕಂಕಣ ಕಟ್ಟಬಹುದಿತ್ತು.
 
ಈಗ ಏನಾಗಿದೆ ಎಂದರೆ ಬಿಜೆಪಿಯಲ್ಲಿಯೂ ಕಾಂಗ್ರೆಸ್ಸಿನ ಹಾಗೆ ಮೂಲ ಮತ್ತು ವಲಸೆ ಎಂಬ ಭಿನ್ನ ಕೀರಲು ಧ್ವನಿ ಕೇಳಿಸುತ್ತಿದೆ.   ಯಾವ ಮುಲಾಜು ಇಲ್ಲದೆ, ‘ಪಕ್ಷ ಬಿಟ್ಟು ಹೋಗಿ ಕೆಜೆಪಿ ಕಟ್ಟಿ ನಮಗೆ ಹಾನಿ ಮಾಡಿದಿರಿ’ ಎಂದೇ ಈಶ್ವರಪ್ಪನವರು ಯಡಿಯೂರಪ್ಪನವರನ್ನು ಹಳಿಯುತ್ತಿದ್ದಾರೆ. ಮತ್ತು, ‘ನಿಮಗೆ  ‘ಹತ್ತಿರ’ದವರ ಮಾತನ್ನು ಮಾತ್ರ ಕೇಳುತ್ತಿದ್ದೀರಿ, ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದೀರಿ’ ಎಂದೂ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
 
‘ಯಡಿಯೂರಪ್ಪನವರು ಇನ್ನೂ ಕೆಜೆಪಿ ಮನಃಸ್ಥಿತಿಯಿಂದ ಹೊರಗೆ ಬಂದಂತೆ ಕಾಣುತ್ತಿಲ್ಲ. ಈಗಲೂ ಈಶ್ವರಪ್ಪನವರನ್ನು ಮತ್ತು ಅಂಥವರನ್ನು ಮುಗಿಸುವುದು ಅಥವಾ ಅವಕಾಶದಿಂದ ವಂಚಿತರಾಗುವಂತೆ ಮಾಡುವುದು ಅವರ ಉದ್ದೇಶ ಇದ್ದಂತಿದೆ’ ಎಂದು  ಅನೇಕರಿಗೆ  ಅನಿಸುತ್ತಿದೆ. 
ಅದು ನಿಜವಾಗಿದ್ದರೆ ದೊಡ್ಡ ತಪ್ಪು. ಈಶ್ವರಪ್ಪ ಅವರಿಗೆ ಶಿವಮೊಗ್ಗದಲ್ಲಿ ಟಿಕೆಟ್‌ ತಪ್ಪಿಸುವುದು ಯಡಿಯೂರಪ್ಪನವರ ಉದ್ದೇಶ ಆಗಿರಬಾರದು.
 
ಅವರಿಗೆ ಟಿಕೆಟ್‌ ಕೊಡಬೇಕು ಮತ್ತು ಅವರ ಗೆಲುವಿಗೆ ಎಲ್ಲ ರಾಗದ್ವೇಷಗಳನ್ನು ಬಿಟ್ಟು ಯಡಿಯೂರಪ್ಪ ಪ್ರಚಾರ ಮಾಡಬೇಕು. ಹಾಗೂ ಅವರ ಗೆಲುವು ತಮ್ಮ ಗೆಲುವು ಎಂದು ಸಾರಬೇಕು. ಟಿಕೆಟ್‌ ತಪ್ಪಿಸಬೇಕು ಎನ್ನುವುದು, ಅಲ್ಲಿನ ಹಿರಿಯ ನಾಯಕರಿಗೆ ಇರುಸುಮುರುಸು ಆಗುವಂತೆ ತಮ್ಮ ಜೊತೆಗೆ ಬಿಜೆಪಿ ಬಿಟ್ಟು ಕೆಜೆಪಿಗೆ ಬಂದವರಿಗೆ ಜಿಲ್ಲಾ ಅಧ್ಯಕ್ಷತೆಗೆ ಮಣೆ ಹಾಕುವುದು, ವಾಜಪೇಯಿಯವರ ಮಾತಿನಲ್ಲಿ ಹೇಳಬೇಕು ಎಂದರೆ, ‘ಛೋಟೆ ಮನ್ ಕಾ ಕಾಮ್‌. ’
ನಾನು ಈ ಅಂಕಣ ಬರೆಯುವಾಗ ಅನೇಕ ಹಿರಿಯ ಬಿಜೆಪಿ ನಾಯಕರ ಜೊತೆಗೆ  ಮಾತನಾಡಿದೆ. ಅವರು ಯಾರೂ ಯಡಿಯೂರಪ್ಪನವರ ನಾಯಕತ್ವವನ್ನು ಪ್ರಶ್ನೆ ಮಾಡುತ್ತಿಲ್ಲ. ಈಶ್ವರಪ್ಪ ಕೂಡ ಯಡಿಯೂರಪ್ಪ ಅವರ  ನಾಯಕತ್ವಕ್ಕೆ ಸಡ್ಡು ಹೊಡೆದಿಲ್ಲ. ಹೊಡೆಯುತ್ತಿಲ್ಲ. ‘ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಅವರು ಹೋದಬಂದಲ್ಲೆಲ್ಲ ಸಾರಿದ್ದಾರೆ. 
 
ಇದರ ಅರ್ಥ ಏನು ಎಂದರೆ ಯಡಿಯೂರಪ್ಪನವರಿಗೆ ಯಾವ ಅಳುಕೂ, ಅಭದ್ರತೆಯೂ ಇರಬಾರದಿತ್ತು. ಒಬ್ಬ ನಾಯಕನಿಗೆ ಇರಬೇಕಾದ ಔದಾರ್ಯವನ್ನು ಅವರು ಎಲ್ಲ ಜೊತೆಗಾರರಿಗೆ ತೋರಿಸಬೇಕಿತ್ತು. ಅವರ ಮೇಲೆ ಹಟ ಸಾಧಿಸುವುದಕ್ಕಿಂತ ಸೋಲಬೇಕಿತ್ತು. ತಮಗೆ ಯಾರಾದರೂ ನೋಯಿಸಿದ್ದರೆ, ಗಾಸಿಗೊಳಿಸಿದ್ದರೆ ಅದನ್ನು ಮರೆಯಬೇಕಿತ್ತು. ತಾವು ಸೋತು ಅವರ ಮನಸ್ಸು ಗೆಲ್ಲಬೇಕಿತ್ತು.
 
ಈಶ್ವರಪ್ಪ ಅವರ ಹಾಗೆ ಅನೇಕರಿಗೆ ಜಿಲ್ಲಾ ಅಧ್ಯಕ್ಷರ ನೇಮಕದಲ್ಲಿ ಆಗಿರುವ ‘ಅನ್ಯಾಯ’ ಕುರಿತು ಅಸಮಾಧಾನ ಇದೆ. ಆದರೆ, ಅವರು ಎಲ್ಲರೂ ಹೈಕಮಾಂಡಿನ ಮೇಲೆ ಭಾರ ಹಾಕಿ ಸುಮ್ಮನೆ ಇದ್ದಾರೆ. ಈಶ್ವರಪ್ಪ ಅವರ ಜೊತೆಗೆ ಅವರಷ್ಟೇ ಹಿರಿಯರಾದ ನಾಯಕರು ಯಾರೂ ಧ್ವನಿಗೂಡಿಸಿಲ್ಲ ಎಂದರೆ ಅದಕ್ಕೆ ಕಾರಣ ಅವರಿಗೆ ಅಸಮಾಧಾನ ಇಲ್ಲ ಎಂದು ಅಲ್ಲ. ಆದರೆ, ಮೊದಲು ಮಾತನಾಡಿ ನಂತರ ಯೋಚನೆ ಮಾಡುವ ಈಶ್ವರಪ್ಪ ಅವರ ದುಡುಕು ಅವರಿಗೆಲ್ಲ ಇಷ್ಟ ಇಲ್ಲ.
 
ಆದರೆ, ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕು ಎನ್ನುವ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಈಗ  ಜಗಜ್ಜಾಹೀರು. ಈಶ್ವರಪ್ಪನವರಂತೂ ನಿನ್ನೆ ಹೊರತು ಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಮಾಧ್ಯಮಗಳ ಸಮ್ಮುಖದಲ್ಲಿಯೇ ತಮ್ಮ ಪಕ್ಷದ ವಿದ್ಯಮಾನಗಳನ್ನು ಚರ್ಚಿಸುತ್ತಿದ್ದರು. ಅಥವಾ ಚರ್ಚಿಸಲು ಬಯಸುತ್ತಿದ್ದರು. ಅವರು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದನ್ನು ಮರೆತೇ ಬಿಟ್ಟಿದ್ದರು. ಏನಿದ್ದರೂ ಅವರು ಯಡಿಯೂರಪ್ಪನವರನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕಾಗಿಯೇ ಹೆಚ್ಚು ಸಮಯ ವ್ಯಯ ಮಾಡಿದರು.
 
ಇಬ್ಬರು ಹಿರಿಯ ನಾಯಕರು ಹೀಗೆ ಮದವೆದ್ದ ಕೋಣಗಳ ಹಾಗೆ ಘೀಳಿಡುತ್ತ ಇದ್ದರೆ ಪಕ್ಷ ಎಲ್ಲಿ ಉಳಿಯುತ್ತದೆ? ಆಶ್ಚರ್ಯ ಎಂದರೆ ಪಕ್ಷದ ಕೇಂದ್ರ ನಾಯಕತ್ವ ಸುಮ್ಮನೇ ಇದ್ದುದು. ಇಬ್ಬರಿಗೂ ಕಿವಿ ಹಿಂಡಿ, ‘ನೀವು ಸರಿ ಹೋಗುತ್ತೀರೋ ಅಥವಾ ನಿಮ್ಮಿಬ್ಬರನ್ನೂ ಕಿತ್ತು ಹಾಕಿ ಮೂರನೆಯವರನ್ನು ನೇಮಿಸಿ ಚುನಾವಣೆಗೆ ಹೋಗೋಣವೋ’ ಎಂದು ಕೇಳಬೇಕಿತ್ತು. ಹಾಗೆ ಆಗಲಿಲ್ಲ. ಬಿಜೆಪಿಯಂಥ ಶಿಸ್ತಿನ (?) ಪಕ್ಷದಲ್ಲಿ ಹೀಗೆಲ್ಲ ಭಿನ್ನಮತ ಸಹಿಸುವುದು ಸೋಜಿಗ.

ಅತ್ತ ಬಿಜೆಪಿಯಲ್ಲಿ ಭಿನ್ನಮತ ಹೀಗೆ ಬೆಳೆಯುತ್ತ ಇದ್ದರೆ ಅಥವಾ ಕಾರ್ಯಕಾರಿಣಿ ಸಭೆಯ ನಿಮಿತ್ತ ಒಂದೆರಡು ದಿನದ ಮಟ್ಟಿಗೆ ತಣ್ಣಗೆ ಆಗಿದ್ದರೆ ರಾಜ್ಯದಲ್ಲಿ ಇತ್ತ ಅಧಿಕಾರ ಉಳಿಸಿಕೊಳ್ಳಲು ಬಯಸಿರುವ ಕಾಂಗ್ರೆಸ್‌ ಪಕ್ಷ ಹೆಚ್ಚು ಸಂಘಟಿತವಾಗಿ ಇರುವಂತೆ ಕಾಣುತ್ತಿದೆ. ಪಕ್ಷದ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಅವರನ್ನು ಬದಲಿಸಿ ಹೊಸ ಮತ್ತು ಯುವ ಮುಖ ವೇಣುಗೋಪಾಲ್‌ ಅವರನ್ನು ಆ ಸ್ಥಾನಕ್ಕೆ ತಂದಿರುವ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಬಹಳ ಮುಖ್ಯ ಸಂಗತಿ. 
 
ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ದರಾಮಯ್ಯ ಭದ್ರವಾಗಿ ಕುಳಿತಿದ್ದಾರೆ. ಚುನಾವಣೆ ಆಗುವ ವರೆಗೆ ಅವರ ಸ್ಥಾನಕ್ಕೆ ಯಾವ ಚ್ಯುತಿಯೂ ಬರುವಂತೆ ಕಾಣುವುದಿಲ್ಲ. ಅವರ ನಾಯಕತ್ವದ ವಿರುದ್ಧ ಅಪಸ್ವರ ಎತ್ತುವವರು ಕೂಡ ಈಗ ಯಾರೂ ಇಲ್ಲ. ಆಗೀಗ ಭಿನ್ನ ಧ್ವನಿ ಎತ್ತುವಂತೆ ತೋರಿಸುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಕೂಡ ಸಿದ್ದರಾಮಯ್ಯನವರ ಜೊತೆಗೇ ಸಿನಿಮಾ ನೋಡಲು ಹೋಗುತ್ತಾರೆ. ಅಥವಾ ಹೋಗಬೇಕು ಎಂದು ಬಯಸುತ್ತಾರೆ.
 
ಇನ್ನೇನು ಕೆಲವೇ ದಿನಗಳಲ್ಲಿ ಪಕ್ಷದ ರಾಜ್ಯ ಅಧ್ಯಕ್ಷರು ಬದಲಾಗುವಂತೆ ಕಾಣುತ್ತದೆ. ಈಗಿನ ಸೂಚನೆ ನೋಡಿದರೆ ಅವರು ಕೂಡ ಮುಖ್ಯಮಂತ್ರಿಗೆ ಬೇಕಾದವರೇ ಆಗಿರುವ ಸಾಧ್ಯತೆ ಹೆಚ್ಚು ಇದೆ. ಚುನಾವಣೆ ನಡೆಯುವ ವರ್ಷದಲ್ಲಿ ಸಾಮಾನ್ಯವಾಗಿ ಎರಡು ತದ್ವಿರುದ್ಧ ಅಧಿಕಾರ ಕೇಂದ್ರಗಳನ್ನು ಹೈಕಮಾಂಡ್‌ ಸೃಷ್ಟಿಸಲಾರದು. ಅದರಿಂದ ಪಕ್ಷದಲ್ಲಿ ವಿರಸ ಹೆಚ್ಚಾಗುತ್ತದೆಯೇ ಹೊರತು ಸಮರಸ ಉಂಟಾಗುವುದಿಲ್ಲ.
 
ಡಿ.ಕೆ.ಶಿವಕುಮಾರ್‌  ಅವರಿಗೆ ಹೈಕಮಾಂಡಿನಲ್ಲಿ ಎಷ್ಟು ಬಲ ಇದೆಯೋ ಎಂ.ಬಿ.ಪಾಟೀಲರಿಗೂ ಅಷ್ಟೇ ಬಲ ಇರುವಂತಿದೆ. ಅವರು ತಮಗೆ ಬೇಕಾಗಿದ್ದ ಜಲಸಂಪನ್ಮೂಲ ಖಾತೆಯನ್ನು ಪಡೆದುದು ಅಲ್ಲದೇ  ಸಂಪುಟ ಪುನಾರಚನೆಯಲ್ಲಿ ಸ್ಥಾನದ ಜೊತೆಗೆ ಅದೇ ಖಾತೆಯನ್ನು ಉಳಿಸಿಕೊಂಡುದರಲ್ಲಿ ಅವರಿಗೆ ಹೈಕಮಾಂಡಿನಲ್ಲಿ  ಇರುವ ನೆರಳಿನ ಸುಳಿವು ಸಿಗುತ್ತದೆ. ಒಂದು ಸಾರಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಯಿತು ಎಂದರೆ ಅಲ್ಲಿಗೆ ರಾಜ್ಯದಲ್ಲಿ ಚುನಾವಣೆ ಕಹಳೆ ಮೊಳಗಿತು ಎಂದೇ ಅರ್ಥ.
 
ಕಾಂಗ್ರೆಸ್ಸಿನಲ್ಲಿ ‘ಛೋಟೆ ಮನ್‌’, ‘ಟೂಟೆ ಮನ್‌’ ಇಲ್ಲ, ಅಲ್ಲಿ ಎಲ್ಲವೂ ಸರಿ ಇದೆ ಎಂದು ಅಲ್ಲ. ಆದರೆ, ಅದನ್ನು ಅವರು ತೋರಿಸಿಕೊಟ್ಟಿಲ್ಲ. ಸಿಕ್ಕ ಸಿಕ್ಕಲ್ಲಿ ಮಾಧ್ಯಮದವರ ಮುಂದೆ ತಮ್ಮ ಅಸಮಾಧಾನ ಹಂಚಿಕೊಂಡಿಲ್ಲ. ಮುಂದಿನ ಚುನಾವಣೆಯ ನಾಯಕತ್ವ ತಮ್ಮದೇ ಎಂದ ಮುಖ್ಯಮಂತ್ರಿಯ ಮಾತಿಗೆ ವಿರೋಧ ಎನ್ನುವಂತೆ ‘ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ’ ಎಂಬ ಒಂದು ಮಾತು ಆಡಿದ್ದನ್ನು ಬಿಟ್ಟರೆ ಅದನ್ನು ಕೂಡ  ಕಾಂಗ್ರೆಸ್‌ ನಾಯಕರು ಮತ್ತೆ ಮತ್ತೆ ಆಡಿಲ್ಲ.
 
ಅಂದರೆ ಇನ್ನೇನು ಚುನಾವಣೆ ರಂಗಕ್ಕೆ ಧುಮುಕಲಿರುವ ಎರಡು ಪ್ರಮುಖ ಪಕ್ಷಗಳ ಸ್ಥಿತಿಗತಿ ಗಮನಿಸಿದರೆ ಕಾಂಗ್ರೆಸ್‌ ಪಕ್ಷ ಹೆಚ್ಚು ಸಂಘಟಿತವಾಗಿರುವಂತೆ ಮತ್ತು ಏಕ ಧ್ವನಿಯಲ್ಲಿ ಮಾತನಾಡುತ್ತ ಇರುವಂತೆ ಕಾಣುತ್ತದೆ. ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡದೇ ಇದ್ದರೂ ಭಿನ್ನಮತದ ಸಮಸ್ಯೆಯಿಲ್ಲದೆ ಸರ್ಕಾರ ನಡೆದುಕೊಂಡು ಹೋಗಿದೆ.
 
2008ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಆಡಳಿತದಲ್ಲಿ ಗಳಿಗೆಗೆ ಒಮ್ಮೆ ಭಿನ್ನಮತದ ಭುಗಿಲು ಏಳುತ್ತಿತ್ತು. ಐದು ವರ್ಷಗಳ ಅವಧಿಯಲ್ಲಿ ನಾವು ಮೂವರು ಮುಖ್ಯಮಂತ್ರಿಗಳನ್ನು ಕಂಡೆವು. ಅಂತಿಮವಾಗಿ ಅವರು ಅಧಿಕಾರ ಬಿಟ್ಟುಕೊಟ್ಟಾಗ ಪಕ್ಷಕ್ಕೂ ಒಳ್ಳೆಯ ಹೆಸರು ಇರಲಿಲ್ಲ, ಅದು ಕೊಟ್ಟ ಆಡಳಿತಕ್ಕೂ ಇರಲಿಲ್ಲ. ಈಗ ಅವರು ಮತ್ತೆ ಅಧಿಕಾರ ಹಿಡಿಯಬೇಕು ಎಂದುಕೊಂಡಿದ್ದಾರೆ.
 
ಆದರೆ, ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ. ಆಗಲೇ ಕೌರವ ಪಾಂಡವರ ಹಾಗೆ ದಿನವೂ ಜಗಳ ಆಡುತ್ತಿದ್ದಾರೆ. ಜನರು ಇವರನ್ನು ಹೇಗೆ ನಂಬಬೇಕು? ಮತ್ತು ಏಕೆ ನಂಬಬೇಕು? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT