ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಕೂಲ್ ಇನ್ಸ್‌ಪೆಕ್ಟರ್‌ಗಳ ಕಾರುಬಾರು

Last Updated 18 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬುಲೆಟ್ ಮೇಲೆ ಹತ್ತಿಕೊಂಡು ಜುಂ ಎಂದು ಹೋಗುವ ಇನ್ಸ್‌ಪೆಕ್ಟರ್‌ಗಳನ್ನು ನಾವೆಲ್ಲಾ ಬಾಲ್ಯ ದಿಂದಲೇ ನೋಡಿದ್ದೆವು. ಕನ್ನಡ ಸಿನಿಮಾಗಳಲ್ಲಿ ಅಂಬರೀಶ್, ಟೈಗರ್ ಪ್ರಭಾಕರ್, ಶಂಕರ್‌ನಾಗ್ ಥರದ ನಟರು ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮಿಂಚುವುದು ಕಂಡಾಗ ಬಲು ಖುಷಿಯಾಗು ತ್ತಿತ್ತು. ಆಗ ನಮಗೆಲ್ಲಾ ಮಾಡೆಲ್ಲುಗಳು ಇವರೇನೆ. ಇವರ ನಟನೆಗಳನ್ನು ನಾವು ಬಹಳ ವರ್ಷದ ತನಕ ನಿಜವೆಂದೇ ನಂಬಿದ್ದೆವು. ಹೀಗಾಗಿ, ಜೀವನದಲ್ಲಿ ಏನಾದ್ರೂ ಆದ್ರೆ  ಪೊಲೀಸ್ ಇನ್ಸ್‌ ಪೆಕ್ಟರೇ ಆಗಬೇಕು ಎಂಬ ಆಸೆ ಹುಟ್ಟಿಬಿಟ್ಟಿತ್ತು.

ಆ ಕನ್ನಡಕ, ಬುಲೆಟ್ ಕಿಕ್ ಮಾಡಿ ಸ್ಟಾರ್ಟ್ ಮಾಡುವ ಸ್ಟೈಲ್, ವಿಲನ್‌ಗಳನ್ನು ಹಿಂಬಾಲಿಸುವ ರೀತಿ ಎಲ್ಲಾ ಇಷ್ಟವಾಗುತ್ತಿದ್ದವು. ಆಗ ಮೂಡಿ ಬರುತ್ತಿದ್ದ ಢನ್ ಢಣಾಣ್ ಎಂಬ ಮ್ಯೂಸಿಕ್ಕೋ ಮತ್ತಷ್ಟು ರೋಮಾಂಚನ ಎನಿಸುತ್ತಿತ್ತು. ನನ್ನನ್ನು ಆಗಾಗ ಹಿಡಿದು ಚಚ್ಚುವ ನನ್ನ ದೊಡ್ಡಣ್ಣನಿಗೆ ಇನ್ಸ್‌ಪೆಕ್ಟರ್ ಆಗಿ ಬಂದು ಸೇಡು ತೀರಿಸಿಕೊಳ್ಳ ಬೇಕು. ಗಲ್ಲಿಗಲ್ಲಿಗಳಲೆಲ್ಲಾ ಓಡಾಡಿಸಿಕೊಂಡು ರುಬ್ಬಬೇಕು ಎಂಬ ಅದಮ್ಯ ಆಸೆ ಸಿನಿಮಾ ನೋಡುವಾಗೆಲ್ಲಾ ಮೂಡುತ್ತಿತ್ತು. ಜುಜುಬಿ ಕಾರಣಗಳಿಗೆಲ್ಲಾ ಮನಸೋ ಇಚ್ಛೆ ಥಳಿಸುವ ಅವನ ಕೈಗೆ ಕೋಳ ಹಾಕಬೇಕು.

ಲಾಕಪ್ಪಿನಲ್ಲಿ ಕಟ್ಹಾಕಿಕೊಂಡು ಅವನನ್ನು ಚಟ್ನಿ ಮಾಡಬೇಕು. ನಂತರ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬುಲೆಟ್‌ ನಲ್ಲಿ ಹತ್ತಿಪ್ಪತ್ತು ರೌಂಡು ಊರು ಸುತ್ತಬೇಕು ಅನ್ನೋ ಹಂಬಲವಾಗುತ್ತಿತ್ತು. ಬುದ್ಧಿ ಬಂದಂತೆಲ್ಲಾ ಆ ಆಸೆ ಯಾಕೆ ಕಮರಿಹೋಯಿತೋ ಗೊತ್ತಾಗಲಿಲ್ಲ.
ನಾನು ಉಪನ್ಯಾಸಕನಾಗಿದ್ದೇನೆ ಅಂದಾಗೆಲ್ಲಾ ನನ್ನ ಹಳೆ ಗೆಳೆಯರು, ವ್ಹಾವ್ ನೋಬೆಲ್ ಜಾಬ್ ಎಂದು ಹುಬ್ಬು ಹಾರಿಸುತ್ತಾರೆ. ನಮ್ಮದು ನೋ.. ಬೆಲ್ ಜಾಬ್ ಅಲ್ಲ, ಜಾಬ್ ವಿತ್ ಬೆಲ್ ಎಂದು ಸರಿ ಮಾಡುತ್ತೇನೆ. ನೀವ್ ಬಿಡ್ರಪ್ಪ ಭಾರಿ ಆರಾಮ್ ಜನ. ಬೆಲ್ಲು, ಬಿಲ್ಲುಗಳಲ್ಲೇ ಇರ್ತೀರಿ.

ಸಿಕ್ಕಾಪಟ್ಟೆ ರಜಾ ಪಡೆದು ಮಜಾ ಮಾಡ್ತೀರಿ ಎಂದು ನಮ್ಮ ಕೆಲಸವನ್ನು ನೋಡಿ ಹೊಟ್ಟೆ ಉರಿದುಕೊಳ್ಳುವವರೂ ಇದ್ದಾರೆ. ಇದು ತಕ್ಕಮಟ್ಟಿಗೆ ನಿಜವೂ ಹೌದು. ಹೆಚ್ಚು ಮಾನಸಿಕ ಒತ್ತಡಗಳಿಲ್ಲದ, ನಾಲ್ಕು ಮಕ್ಕಳಿಗೆ ಕಲಿಸಿ ಬದುಕಿನ ದಾರಿ ತೋರಿಸಬಹುದಾದ ಒಳ್ಳೇ ಕೆಲಸ ಅಂತ ನಾವೇ ಬೆನ್ನು ಚಪ್ಪರಿಸಿಕೊಳ್ಳ ಬಹುದು. ಸಂಬಳ ಕಡಿಮೆ ಇದ್ದರೂ ಹೆಚ್ಚು ಗೌರವ ಸಿಗುವ ಈ ಕೆಲಸವನ್ನು ಯಾರಾದರೂ ಬಿಟ್ಟವರುಂಟೆ? ನನಗಂತೂ ತೃಪ್ತಿ ಇದೆ.

ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ನೋಡಿದ್ದ ನಾವು ಶಾಲೆಗೆ ಸೇರಿದ ಮೇಲೆ ಸ್ಕೂಲ್ ಇನ್ಸ್‌ಪೆಕ್ಟರ್‌ಗಳೆಂಬ ಹೊಸ ಮನುಷ್ಯ ರನ್ನು ನೋಡಿದೆವು. ಇವರಿಗೆ ಬುಲೆಟ್ಟು ಬೈಕು, ಖಾಕಿ ಬಟ್ಟೆ, ಸೊಂಟದ ಪಿಸ್ತೂಲು ಏನೇನೂ ಇರಲಿಲ್ಲ. ನೋಡಲು ಅಷ್ಟು ದೃಢ ಕಾಯದವರೂ ಅಲ್ಲ. ಇಂಥ ಇನ್ಸ್‌ಪೆಕ್ಟರ್‌ಗಳು ಆಗಾಗ ನಮ್ಮ ಶಾಲೆಗಳಿಗೆ ಬರುತ್ತಿದ್ದರು. ಇವರು ಶಾಲೆಗಳಿಗೆ ಯಾಕಾಗಿ ಬರುತ್ತಿದ್ದರು, ಬಂದು ಏನು ಕಸುಬು ಮಾಡುತ್ತಿದ್ದರು ಎಂಬುದು ನಮಗೆ ಅರ್ಥವಾಗು ತ್ತಿರಲಿಲ್ಲ. ಆದರೆ, ಈ ಇನ್ಸ್‌ಪೆಕ್ಟರುಗಳು ಶಾಲೆಗೆ ಬಂದಾಗ ಮಾತ್ರ ನಮ್ಮ ಮೇಷ್ಟ್ರುಗಳು ಅದ್ಯಾಕೋ ಹೌಹಾರಿ ಬೀಳುತ್ತಿದ್ದರು.

ಇಸ್ಕೂಲ್ ಇನ್ಸ್‌ಪೆಕ್ಟರ್ ಬಂದಿದ್ದಾರೆ ಎಂದು ಸುದ್ದಿ ಗೊತ್ತಾದರೆ ಸಾಕು. ಅಸಲಿ ಪೊಲೀಸ್ ಇನ್ಸ್‌ಪೆಕ್ಟರ್ರೇ ಬಂದಂತೆ ಟೆನ್ಷನ್‌ಗೆ ಬೀಳುತ್ತಿದ್ದರು. ಯಾವಾಗಲೂ ನಮ್ಮನ್ನು ಹೊಡೆದು, ಕಿವಿ ಹಿಂಡಿ, ಗೋಳು ಹೊಯ್ದುಕೊಳ್ಳುವ ಈ ಮೇಷ್ಟ್ರುಗಳು ಆ ಸಮಯದಲ್ಲಿ ವಿಲವಿಲ ಎಂದು ಒದ್ದಾಡುವುದು ನೋಡಿ ಒಂದಿಷ್ಟು ಸಮಾಧಾನವಾಗು ತ್ತಿತ್ತು. ಈ ಇಸ್ಕೂಲ್ ಇನ್ಸ್‌ಪೆಕ್ಟರ್‌ಗಳು ಬಂದಂಥ ಹೊತ್ತಿ ನಲ್ಲಿ ಅಂಡುಸುಟ್ಟ ಬೆಕ್ಕುಗಳಂತೆ ಓಡಾಡುವ ಮೇಷ್ಟ್ರುಗಳ ಪಡಿಪಾಟಲು ನೋಡಿ ಹಾಲು ಕುಡಿದಷ್ಟೇ ಸಂಭ್ರಮವಾಗುತ್ತಿತ್ತು.

ನೆಟ್ಟಗೆ ಪಾಠ ಮಾಡದ ಮೇಷ್ಟ್ರುಗಳು, ಲೆಕ್ಕಪತ್ರ ಸರಿಯಾಗಿ ಬರೆಯದ ಹೆಡ್ಮೇಷ್ಟ್ರುಗಳು ತಕಪಕ ಕುಣಿಯುವು ದನ್ನು ನಾವು ಆಶ್ಚರ್ಯದಿಂದ ನೋಡುತ್ತಿದ್ದೆವು. ನಮ್ಮನ್ನು ಹೆದರಿಸಿ ಅಲ್ಲಾಡಿಸುವ ಈ ಐನಾತಿ ಮೇಷ್ಟ್ರುಗಳಿಗೆ ಗಡಗಡ ಎಂದು ನಡುಗಿಸುವ ಶಕ್ತಿ ಇರುವ ಆ ಭೂಪತಿ ಗಂಡು ಇವನೆಂದ ಮೇಲೆ ಇವನ್ಯಾರೋ ವೆರಿ ಇಂಪಾರ್ಟೆಂಟ್ ಪರ್ಸನ್ನೇ ಇರಬೇಕೆಂದು ಭಾವಿಸುತ್ತಿದ್ದೆವು.
ಪ್ರತಿ ತರಗತಿಗೂ ಬಂದು ಅವರು ನಮಗರ್ಥ ವಾಗದ ಸರ್ವೆ ಕಾರ್ಯ ಮಾಡುತ್ತಿದ್ದರು.

ಅವರು ತರಗತಿಗಳಿಗೆ ವಕ್ಕರಿಸುವ ಮೊದಲೇ ನಮ್ಮ ಗುರು ಗಳು ಸದಾ ಖಾಲಿ ಹೊಡೆವ ಬೋರ್ಡಿನ ತುಂಬಾ ಕಂಡಾಪಟ್ಟೆ ಬರೆದಿಡುತ್ತಿದ್ದರು. ಒಂದಿಷ್ಟು ಓದಿನಲ್ಲಿ ಚಾಲ್ತಿ ಇರುವ ತಲೆಗಳನ್ನೇ ಮುಂದಿನ ಬೆಂಚಿನಲ್ಲಿ ಕೂರಿಸುತ್ತಿದ್ದರು. ಇಸ್ಕೂಲ್ ಇನ್ಸ್‌ಪೆಕ್ಟರ್ ಏನಾದ್ರೂ ಇಂಥ ಪ್ರಶ್ನೆ ಕೇಳಿದರೆ, ಇಂಥ ಉತ್ತರ ಕೊಡಬೇಕು ಕಂಡ್ರಲೇ ಎಂದು ಅವರಿಗೆಲ್ಲಾ ಒಂದು ಟ್ರೈನಿಂಗು ಕೊಡುತ್ತಿದ್ದರು. ಹಿಂದಿನ ಬೆಂಚಿನಲ್ಲಿ ಕೂತು ಈ ಎಲ್ಲಾ ಸಂಗತಿ ಗಳನ್ನು ಬಾಯಿಬಿಟ್ಟುಕೊಂಡು ನೋಡುವ ನಮಗೆ ಮಾತ್ರ ಅಪ್ಪಿತಪ್ಪಿಯೂ ಏನನ್ನೂ ಹೇಳುತ್ತಿರಲಿಲ್ಲ. ಅಂಥ ಫಜೀತಿ ದಿನ ನಾವುಗಳು ಬಂದದ್ದೇ ಅಪರಾಧವಾಯಿತು ಎಂಬಂತೆ ಗುರಾಯಿಸುತ್ತಿದ್ದರು.

ತರಗತಿ ಚೆಕ್ ಮಾಡಲು ಬರುವ ಇಸ್ಕೂಲ್ ಇನ್ಸ್‌ಪೆಕ್ಟರ್‌ಗಳು ಬಲು ಹುಷಾರಿ ಜನ ಇದ್ದಂಗೆ ಕಾಣುತ್ತಿತ್ತು.  ಮೇಷ್ಟ್ರುಗಳು ಪ್ರಶ್ನೋತ್ತರಕ್ಕೆ ರೆಡಿ ಮಾಡಿಟ್ಟುಕೊಂಡ ರೆಡಿಮೇಡ್ ಹುಡುಗರನ್ನು ಬಿಟ್ಟು ನಮ್ಮಂಥ ಅಸಮಾನ್ಯ ಹುಡುಗರಿಗೇ ಮೊದಲು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆ ಎಂದರೆ ಟೂ ಎನ್ನಲಾಗದ ಹಿಂದಿನ ಬೆಂಚಿನ ನನ್ನ ಗೌರವಾನ್ವಿತ ಗೆಳೆಯರು ಮೌನವಾಗಿ ಎದ್ದು ನಿಲ್ಲುತ್ತಿದ್ದರು. ಇಸ್ಕೂಲ್ ಇನ್ಸ್‌ಪೆಕ್ಟರ್ ಸಾಹೇಬರ ಎಲ್ಲಾ ಪ್ರಶ್ನೆಗಳಿಗೂ ಪಿಳಿಪಿಳಿ ಕಣ್ಣುಗಳಿಂದಲೇ ಅಮೋಘ ಉತ್ತರ ನೀಡುತ್ತಿದ್ದವು. ಮೇಷ್ಟ್ರು ಎಂದೂ ಕಲಿಸಿದ, ಕಲಿಸಿದರೂ ನಮ್ಮ ತಲೆ ಯೊಳಗೆ ಹೋಗದ ಪ್ರಶ್ನೆಗಳಿಗೆ ನಾವಾದರೂ ಹೇಗೆ ಉತ್ತರ ಕೊಡಲು ಸಾಧ್ಯ.

ನಮ್ಮ ವ್ಯಾಪ್ತಿಗೆ ಮೀರಿದ ಜ್ಞಾನಲೋಕದ ಅಸ್ಪಷ್ಟ ಚಟುವಟಿಕೆ ಗಳು ನಮ್ಮ ಕಣ್ಣೆದುರು ನಡೆಯುತ್ತಿದ್ದವು. ಯಾವ ಪ್ರಶ್ನೆ ಕೇಳಿದರೂ ನಮ್ಮದು ನೀರವ ಮೌನದ ಉತ್ತರ. ನಮ್ಮ ಮೌನ ಮೇಷ್ಟ್ರರ ಮಾನವನ್ನು ಹರಣ ಮಾಡುತ್ತೆ ಎನ್ನುವ ಗ್ಯಾನವೂ ನಮಗಿರ ಲಿಲ್ಲ.  ಮೇಷ್ಟ್ರುಗಳಿಗೆ ಘನಘೋರ ಶಿಕ್ಷೆ ಕೊಡಿಸ ಲೆಂದೇ ಭೂಮಿಗೆ ಬಂದ ಸಾಕ್ಷಿಪ್ರಜ್ಞೆಗಳಂತೆ ನಾವು ಎದ್ದು ನಿಲ್ಲುತ್ತಿದ್ದೆವು. ನಮ್ಮ ದಿವ್ಯ ಮೌನಕ್ಕೆ ಇಷ್ಟೊಂದು ಶಕ್ತಿ ಇದೆ ಎಂದು ಗೊತ್ತಾಗಿದ್ದು ಆವಾಗಲೇನೆ.

ಕೊನೆಕೊನೆಗೆ ಇನ್ಸ್‌ಪೆಕ್ಟರ್‌ಗಳು ಕೇಳುವ ಪ್ರಶ್ನೆಗಳಿಗೆ ನಮ್ಮ ಮೇಷ್ಟ್ರುಗಳೇ ಉತ್ತರ ಹೇಳಿ ಅವರಿಂದ ಸಖತ್ತಾಗಿ  ಉಗಿಸಿಕೊಳ್ಳುತ್ತಿ ದ್ದರು. ಸರಿಯಾದ ಉತ್ತರ ಯಾರು ಹೇಳಿದ ರೇನು? ನಮ್ಮ ಪರವಾಗಿ ಮೇಷ್ಟ್ರು ಉತ್ತರ ಹೇಳಿದರೆ ಅದನ್ನೂ ಸಹಿಸಿಕೊಳ್ಳದವ ಇವನೆಂಥ ಅಯೋಗ್ಯ ಮನುಷ್ಯ ಎಂದು ಇಸ್ಕೂಲ್ ಇನ್ಸ್‌ಪೆಕ್ಟರ್ ಮೇಲೆ ನಮಗೆ ಸಿಟ್ಟೇ ಬರುತ್ತಿತ್ತು. ಆತ ವಿಚಾರಣೆಯ ಸ್ಟೈಲಿನಲ್ಲಿ ‘ಇದೇ ಏನ್ರಿ ಮೇಷ್ಟ್ರೆ, ನೀವು ಮಕ್ಕಳಿಗೆ ಕಲಿಸಿರೋದು.

ಏನ್ ಪಾಠ ಮಾಡಿದ್ದೀರ್ರೀ, ತೆಗೀರಿ ನಿಮ್ಮ ನೋಟ್ಸ್ ಆಫ್ ಲೆಸೆನ್ಸ್? ಎಲ್ರಿ ಒಬ್ಬ ಹುಡುಗನೂ ಕೇಳಿದ ಒಂದು ಮಾಮೂಲಿ ಪ್ರಶ್ನೆಗೂ ಉತ್ತರಾನೇ ಕೊಡ್ತಾ ಇಲ್ವಲ್ರಿ. ನೀವೇನ್ ಪಾಠ ಮಾಡಕ್ಕೆ ಬರ್ತಿರೋ, ಎಲೆ ಅಡಿಕೆ ಜಗಿದು ಉಗಿಯೋಕೆ ಬರ್ತಿರೋ. ಇಲ್ಲಿ ಸ್ಕೂಲು ಹಾಳಾಗೋದ್ರೂ ಪರ್ವಾಗಿಲ್ಲ. ಅಲ್ಲಿ ನಿಮ್ ಅಡಿಕೆ ತ್ವಾಟ ಮಾತ್ರ ಚೆನ್ನಾಗಿದ್ರೆ ಸಾಕಲ್ಲವೆ? ಈ ಊರಿಗೆ ನೀವ್ ಮೇಷ್ಟ್ರಾಗಿ ಬಂದ್ರೋ, ಒಕ್ಕಲುತನ ಮಾಡೋ ರೈತನಾಗಿ ಬಂದ್ರೋ ಒಂದೂ ತಿಳೀತಾನೆ ಇಲ್ವಲ್ರಿ? ನಿಮ್ಮ ಜಮೀನು ತ್ವಾಟದ ಕೆಲಸಕ್ಕೆ ಕೊಟ್ಟಷ್ಟೇ ಇಂಪಾರ್ಟೆನ್ಸು ಕೈತುಂಬಾ ಸಂಬಳ ಕೊಡೋ ಈ ಸ್ಕೂಲ್ ಮೇಲೂ ತೋರಿಸ್ರೀ’ ಎಂದು ಸಖತ್ ಬೆಂಡ್ ಎತ್ತುತ್ತಿದ್ದರು.  

ಅವರು ಬೈಯುವಾಗ ತಲೆ ಕೆರೆದುಕೊಂಡು, ಹಲ್ಲು ಗಿಂಜುತ್ತಾ ಇರುತ್ತಿದ್ದ ಮೇಷ್ಟ್ರು ಆ ಇನ್ಸ್‌ಪೆಕ್ಟರ್‌ಗಳು ಅತ್ತ ಹೋಗುತ್ತಲೇ ಇತ್ತ ಹುಲಿ ಗಳಾಗಿ ಬಿಡುತ್ತಿದ್ದರು. ಬಡಪಾಯಿ ಗಳಾದ ನಮ್ಮಗಳ ಗ್ರಾಚಾರ ಅಲ್ಲಿಂದಲೇ ಶುರುವಾಗು ತ್ತಿತ್ತು. ಅವರು ಕೇಳಿದ ಒಂದು ಸಿಲ್ಲೀ ಪ್ರಶ್ನೆಗೂ ಉತ್ತರ ಕೊಡೋಕೆ ಬರಲ್ವಲ್ರೋ ಕತ್ತೆ ಜಾತಿ ಮಕ್ಕಳ್ರಾ. ತಲೇಲಿ ಏನ್ ಲದ್ದಿ ತುಂಬ್ಕೊಂಡಿದ್ದಿ ರೇನ್ರೋ? ನಿಮ್ಮಂಥ ದರಿದ್ರವಕ್ಕೆ ಪಾಠ ಹೇಳ್ತೀ ವಲ್ಲ ನಮ್ಮ ಕೆರ ತೊಗೊಂಡು ನಾವೇ ಹೊಡ್ಕೊ ಬೇಕು. ಹಂದಿ ಥರ ಬೆಳೆದಿದ್ದೀರಾ.

ಬಾಯಿ ಬಿಡಕ್ಕೆ ನಿಮಗೆ ಏನ್ ರೋಗ ಹೇಳಿ. ಎದ್ದು ನಿಂತ್ಕೊಳ್ರೋ ಬಡ್ಡೀ ಮಕ್ಕಳಾ? ಎಂದು ಹಿಡಿದುಕೊಂಡು ಎರ್ರಾಬಿರ್ರಿ ತದಕುತ್ತಿದ್ದರು. ಆ ಹಾಳಾದ ಇಸ್ಕೂಲ್ ಇನ್ಸ್‌ಪೆಕ್ಟರ್‌ಗಳು ಬಂದು ಹೋದರೆ ಇತ್ತ ಚಳಿ ಜ್ವರ ಬಾಯಿಗೆ ಬರುತ್ತಿದ್ದವು. ಮೇಷ್ಟ್ರು ಮಾನ ಮರ್ಯಾದೆಗಳನ್ನು ಸದಾ ಮೂರೇ ಕಾಸಿಗೆ ಹರಾಜು ಹಾಕುವ ನಾವು ಹೊಡೆತಗಳಿಗೆ ಬೆನ್ನು ರೆಡಿಮಾಡಿ ಇಟ್ಟುಕೊಳ್ಳಬೇಕಿತ್ತು. ಆಗಾಗ ಬಂದು ನಮ್ಮ ಮೇಷ್ಟ್ರುಗಳ ಪಿತ್ತ ಕೆರಳಿಸಿ ಹೋಗುವ, ಆ ಮೂಲಕ ನಮ್ಮ ಸಜೆಗೂ ಕಾರಣ ವಾಗುವ ಈ ಶನಿ ಇಸ್ಕೂಲ್ ಇನ್ಸ್‌ಪೆಕ್ಟರ್ ಯಾಕಾದ್ರೂ ಬರ್ತಾನೋ ಎಂದು ನಾವು ಶಪಿಸುತ್ತಿದ್ದೆವು. ಇದೆಲ್ಲಾ ಆಗಿದ್ದು ಪ್ರೈಮರಿ ಸ್ಕೂಲಿನಲ್ಲಿ.

ಮುಂದೆ ಮಿಡ್ಲ್ ಸ್ಕೂಲಿಗೆ ಹೋದಾಗ ಇಂಥದ್ದೇ ಇನ್ಸ್‌ಪೆಕ್ಟರ್‌ಗಳ ಭಾರಿ ತಂಡವೇ ಒಂದು ದಿನ ಬಂದಿತ್ತು. ಇವರು ಈ ಮೊದಲಿನ ಇಸ್ಕೂಲ್ ಇನ್ಸ್‌ಪೆಕ್ಟರ್‌ಗಳಂತೆ ನಮಗೆ ಒದೆ ತಿನ್ನಿಸುವವರಾಗಿರಲಿಲ್ಲ. ಬದಲಿಯಾಗಿ  ಸಜ್ಜನರಾಗಿದ್ದರು. ಬೆಳಿಗ್ಗೆಯಿಂದ ಬಿಡುವಿಲ್ಲದೆ ಅದೇನೋ ಲೆಕ್ಕ ಪತ್ರ ನೋಡಿದರು. ನಮ್ಮೆಲ್ಲಾ ತರಗತಿಗೆ ಬಂದು ಪ್ರಶ್ನೆ ಕೇಳಿ ನಮ್ಮ ನೋಟ್ಸ್ ನೋಡಿ, ಏನೇನೋ ವೆರಿಗುಡ್ ಎಂದು ಹೋದರು. ಕೆಲ ಮೇಡಂಗಳ ಎದುರು ಬಾಯ್ತುಂಬ ನಕ್ಕು ಮಾತಾಡಿದರು. ಅವರ ಹಿಂದೆ ಅಪರಾಧಿಗಳಂತೆ ಸುತ್ತುತ್ತಿದ್ದ ನಮ್ಮ ಮೇಷ್ಟ್ರುಗಳಿಗೂ ಅವತ್ತಿನ ದಿನ ಸಖತ್ತು ವಿನಯ ಬಂದಿತ್ತು. ಆಗಾಗ ಸಲಾಮುಗಳ ಕುಕ್ಕುತ್ತಲೇ ಇದ್ದರು.

ಹೆಡ್ಮೇಷ್ಟ್ರಂತೂ ಕಚ್ಚೆಪಂಚೆ ಗಟ್ಟಿ ಹಿಡಿದು ಕೊಂಡು ಅವರ ಹಿಂದೆ ಮುಂದೆ ಲೀಲಾಜಾಲ ವಾಗಿ ಸುತ್ತುತ್ತಿದ್ದರು. ಯಾರ ಮೊಗದಲ್ಲೂ ಹೆದರಿಕೆ ಇರಲಿಲ್ಲ. ಇನ್ನು ಮಧ್ಯಾಹ್ನದ ಹೊತ್ತಿಗೆ ಈ ಇನ್ಸ್‌ಪೆಕ್ಟರ್‌ಗಳಿಗೆ ನಾಟಿಕೋಳಿ ಸಾರಿನ ಭರ್ಜರಿ ಪಾರ್ಟಿ ಏರ್ಪಾಡಾಗಿ ಹೋಗಿತ್ತು. ಆಗ ನಮಗೆ ಪೀರ್‌ಸಾಬ್ ಎಂಬ ಅಸಿಸ್ಟೆಂಟ್ ಹೆಡ್ಮೇಷ್ಟ್ರು ಇದ್ದರು. ಅವರು ಇಂಗ್ಲೀಷ್ ಕಲಿಸುತ್ತಿದ್ದರು. ಒಳ್ಳೇ ಮನಸ್ಸಿನ ಸೈಲೆಂಟ್ ವ್ಯಕ್ತಿಯಾಗಿದ್ದರು. ಹೆಡ್ಮೇಷ್ಟ್ರಿಗೆ ಪರಮಾಪ್ತರಾಗಿ ದ್ದರು. ಅವರ ಮಗ ಬಿ.ಪಿ. ಗೌಸ್‌ಫಯಾಜ್ ನನ್ನ ಚಡ್ಡಿ ದೋಸ್ತಿಯಾಗಿದ್ದ.

ಜೋಳದ ರೊಟ್ಟಿ, ನಾಟಿ ಕೋಳಿಯ ಸಾರು, ಬಿರ್ಯಾನಿ ರೈಸು, ಕೋಳಿ ಫ್ರೈ, ಮೊಟ್ಟೆ ಪಲ್ಯಗಳು ಪೀರ್‌ಸಾಬ್ ಮನೆಯಲ್ಲಿ ಸಿದ್ಧವಾಗುತ್ತಿದ್ದವು. ಅವುಗಳನ್ನೆಲ್ಲಾ ಮನೆಯಿಂದ ಶಾಲೆಯ ತನಕ ಹೊತ್ತು ತರುವ ಜವಾಬ್ದಾರಿ ನನಗೂ, ಫಯಾಜ್‌ಗೂ ಕೊಟ್ಟಿದ್ದರು. ಯಾಕೋ ನಿಮ್ಮಪ್ಪ ಮತ್ತು ಹೆಡ್ಮೇಷ್ಟ್ರೆಲ್ಲಾ ಸೇರಿ ಅವರಿಗೆ ಪಾರ್ಟಿ ಕೊಡ್ತಿದ್ದಾರೆ. ಅವ್ರು ನಿಮ್ ದೂರದ ನೆಂಟರೇನೋ ಎಂದು ನಾನು ಗೆಳೆಯನಿಗೆ ಕೇಳಿದ್ದೆ. ಅದಕ್ಕವನು ಅವರು ಇಸ್ಕೂಲ್ ಇನ್ಸ್‌ಪೆಕ್ಟರ್‌ಗಳು ಕಣೋ.

ಅವರೆಲ್ಲಾ ದೊಡ್ಡ ಆಫೀಸರ್‌ಗಳು. ಒಂಚೂರು ಹೆಚ್ಚು ಕಮ್ಮಿಯಾದ್ರೆ ನಮ್ಮಪ್ಪನ ಕೆಲ್ಸಾನೆ ಕಸ್ಕೊಂಡು ಬಿಡ್ತಾರಂತೆ ಕಣೋ. ಅವ್ರು ಬಂದಾಗ ದೇವ್ರು ಥರ ನೋಡ್ಕೋಬೇಕಂತೆ ಗೊತ್ತಾ? ಇಲ್ಲಾಂದ್ರೆ ಶಾಪ ಕೊಡ್ತಾರಂತೆ ಎಂದು ಅವನಿಗೆ ತಿಳಿದಷ್ಟು ನನಗೆ ಹೇಳಿದ್ದ. ಶಾಪ ಕೊಡುವ ಶಕ್ತಿ ಇರೋರಂದ್ರೆ ಬಹಳ ಶಕ್ತಿವಂತರೇ ಇರಬೇಕೆಂದು ಭಾವಿಸಿದ ನಾನು ಮತ್ತೆ ಇನ್ನಷ್ಟು ಕೆದಕಿ ಏನೂ ಕೇಳಲು ಹೋಗಲಿಲ್ಲ.
ಹಾಗೆ ಬಂದ ಇಸ್ಕೂಲ್ ಇನ್ಸ್‌ಪೆಕ್ಟರ್‌ಗಳಿಗೆ ಊಟ, ಹಣ್ಣು, ಚಾ, ಎಲೆ, ಅಡಿಕೆ, ತಂಬಾಕು ಗಳನ್ನು ನಾನು ಫಯಾಜ್ ಸಪ್ಲೈ ಮಾಡಿದೆವು. ಕೊನೆಗೆ ಮಿಕ್ಕಿದ ನಾನ್‌ವೆಜ್ ಊಟವನ್ನು ನಾವಿಬ್ಬರು ಬಾರಿಸಿದ್ದೆವು. ಇಸ್ಕೂಲ್ ಇನ್ಸ್‌ಪೆಕ್ಟರ್‌ ಗಳು ತಿಂದುಂಡು, ನಿದ್ದೆ ತೆಗೆದರು.

ಶಾಲೆಗೆ ಮೀಟಿಂಗ್ ರಜೆ ನೀಡಿದ್ದರು. ಸಂಜೆ ಹೋಗುವಾಗ ತೆಂಗಿನಕಾಯಿ, ಅಕ್ಕಿ ಮೂಟೆ, ಬಿಳಿಜೋಳ, ಜೇಬಲ್ಲಿ ಒಂದಿಷ್ಟು ರೊಕ್ಕವನ್ನು ತುರುಕಿಕೊಂಡ ಆ ಸಜ್ಜನರು ಜೀಪು ಹತ್ತುತ್ತಿದ್ದರು. ಹಿಂದೆ ಪ್ರೈಮರಿ ಶಾಲೆಯಲ್ಲಿದ್ದಾಗ ಬಂದು ಏನೇನೋ ಪ್ರಶ್ನೆ ಕೇಳಿ, ನಮ್ಮ ಮೇಷ್ಟ್ರುಗಳಿಗೇ ಬೈದು, ಆಮೇಲೆ ಅವರಿಂದ ತಾರಾಮಾರಿ ಹೊಡೆಸಿದ್ದ ಆ ಇಸ್ಕೂಲ್ ಇನ್ಸ್‌ಪೆಕ್ಟರ್‌ಗಳಿಗಿಂತ ಇವರು ಭಾರಿ ಉತ್ತಮ ವ್ಯಕ್ತಿಗಳಂತೆ ನಮಗೆ ಕಂಡರು. 

ಇಂಥ ಶಾಲಾ ಇನ್ಸ್‌ಪೆಕ್ಟರ್ರುಗಳು ಆಗಾಗ ಪ್ರತ್ಯಕ್ಷರಾಗುತ್ತಿದ್ದರು. ಅವರ್‍್ಯಾಕೆ ಬರುತ್ತಿದ್ದರು, ಇವರ್‍್ಯಾಕೆ ಔತಣ ನೀಡುತ್ತಿದ್ದರು? ಎಂಬುದೆಲ್ಲಾ ಆಗ ಅರ್ಥವಾಗುತ್ತಿರಲಿಲ್ಲ. ಈಗೀಗ ಅಷ್ಟೋ ಇಷ್ಟೋ ತಿಳಿಯುತ್ತಿದೆ. ಸ್ಕೂಲಿನಲ್ಲಿ ಮಾಡುವ ಪಾಠವನ್ನೇ ನೆಟ್ಟಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಇರದ ನಮಗೆ ಆಗ ಈ ಉಸಾಬರಿ ವಿಷಯ ಗಳಾದರೂ ಏಕೆ ಬೇಕಿತ್ತು ಹೇಳಿ. ಅಪರೂಪಕ್ಕೆ ಬಂದು ಭರ್ಜರಿ ಊಟವುಂಡು ನಮಗೂ ಒಂದು ಪಾಲು ದಕ್ಕುವಂತೆ ಮಾಡುತ್ತಿದ್ದ ಈ ದೇವತಾ ಸ್ವರೂಪಿ ಇನ್ಸ್‌ಪೆಕ್ಟರ್‌ಗಳನ್ನು ನಾನು ಇಂದಿಗೂ ಸ್ಮರಿಸುತ್ತೇನೆ.

ಈಗ ಈ ಶಾಲಾ ಇನ್ಸ್‌ಪೆಕ್ಟರ್‌ಗಳ ಸ್ವರೂಪ, ಹುದ್ದೆ, ರೀತಿ, ನೀತಿಗಳು ಬದಲಾಗಿ ಹೋಗಿರ ಬೇಕು. ಆಗಿನ  ರಾಜಾತಿಥ್ಯ ಈಗ ಯಾವ ಸ್ವರೂಪದಲ್ಲಿದೆಯೋ ನನಗೆ ಗೊತ್ತಿಲ್ಲ. ಅದನ್ನು ಈಗಿನ ಮೇಷ್ಟ್ರುಗಳೇ ಹೇಳಬೇಕು. ದೊರೆಗಳಂತೆ ದಂಡೆತ್ತಿ ಬಂದು ಸಾಮಂತ ರಾಜರಿಂದ ಕಪ್ಪ ಕಾಣಿಕೆ, ಸತ್ಕಾರ ಪಡೆಯುತ್ತಿದ್ದ ಪ್ರಾಚೀನ ಚಕ್ರವರ್ತಿಗಳಂತೆ ರಾಜ್ಯಭಾರ ಮಾಡುತ್ತಿದ್ದ ಆಗಿನ ಇಸ್ಕೂಲ್ ಇನ್ಸ್‌ಪೆಕ್ಟರ್‌ಗಳ ನೆನಪನ್ನು ನಾನು ಎಂದಿಗೂ ಮರೆಯುವಂತಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT