ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕದನ ವಿರಾಮ ಇನ್ನೆಷ್ಟು ದಿನ?

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಎಂದೋ ಆಗಬೇಕಿದ್ದ ಕೆಲಸ ಕೊನೆಗೂ ಆಗಿದೆ. ಇದನ್ನು ಯಾರು ಮಾಡಬೇಕಿತ್ತು ಎಂಬುದು ಬೇರೆ ವಿಚಾರ. ಆದರೆ, ಯಾರಾದರೂ ಮಾಡಿದರು ಎಂಬುದು ನೆಮ್ಮದಿಯ ಸಂಗತಿ. ಬೀದಿಗೆ ಬಂದು ಕಾದಾಟಕ್ಕೆ ಇಳಿದಿದ್ದ ಬಿಜೆಪಿ ನಾಯಕರಿಗೆ ಆರ್‌ಎಸ್‌ಎಸ್ ಮುಖಂಡರು ಚೆಡ್ಡಿ ಬಿಚ್ಚಿಸಿ (ಡ್ರೆಸ್ಸಿಂಗ್ ಡೌನ್!) ಬುದ್ಧಿ ಹೇಳಿದ್ದಾರೆ. ಮೂವತ್ತು ವರ್ಷಗಳ ಹಿಂದಿನ ದಿನಗಳನ್ನು ನೆನಪಿಸಿದ್ದಾರೆ.

ಅವರನ್ನು ನಾಯಕರನ್ನಾಗಿ ಮಾಡಿ ಗದ್ದುಗೆ ಮೇಲೆ ಕೂಡ್ರಿಸಲು ಸಂಘದ ಕಾರ್ಯಕರ್ತರು ಬೀದಿ ಬೀದಿ ನಾಯಿಗಳ ಹಾಗೆ ಅಲೆದುದನ್ನು, ಮನೆ ಮನೆಗಳಿಗೆ ಕರೆಸಿ ಊಟ ಹಾಕಿದ್ದನ್ನು, ದಾನಿಗಳಿಂದ ಹಣ ಎತ್ತಿ ಚುನಾವಣೆಗೆ ಖರ್ಚು ಮಾಡಿದ್ದನ್ನು ಎತ್ತಿ ಹೇಳಿದ್ದಾರೆ. ಮೊದಲ ಸುತ್ತಿನಲ್ಲಿಯೇ ಯಡಿಯೂರಪ್ಪ ಮತ್ತು ಈಶ್ವರಪ್ಪ ಮೆತ್ತಗಾಗಿ ಎರಡನೇ ಸುತ್ತಿನ ಮಾತುಕತೆ ಆಗುವ ವೇಳೆಗೆ ಏನೂ ಆಗಿಯೇ ಇಲ್ಲ ಎನ್ನುವಂತೆ ಹೆಗಲ ಮೇಲೆ ಕೈ ಹಾಕಲು ಸಾಧ್ಯವಾಗಿದೆ. ಮೂರನೇ ಸುತ್ತಿನ ಮಾತುಕತೆ ಮುಗಿಯುವ ವೇಳೆಗೆ ಎಲ್ಲರೂ ಭಾಯಿ ಭಾಯಿ ಆಗಿಬಿಟ್ಟಿದ್ದರು. ಮತ್ತೆ ಪಕ್ಷ ಕಟ್ಟುವ, ಪ್ರವಾಸ ಮಾಡುವ ಚರ್ವಿತ ಚರ್ವಣ ಮಾತುಗಳನ್ನು ಎಲ್ಲರೂ ಆಡಿದ್ದಾರೆ.

ಕಳೆದ ನಾಲ್ಕು ವರ್ಷಗಳ ಬಿಜೆಪಿ ಆಡಳಿತದ ಅವಧಿಯಲ್ಲಿ ಕೆಲವು ತಿಂಗಳು ಬಿಟ್ಟರೆ ಉಳಿದ ಎಲ್ಲ ಅವಧಿಯಲ್ಲಿ ಈ ನಾಯಕರು ಇದೇ ರೀತಿ ಬೀದಿಗೆ ಬಂದು ಜಗಳವಾಡಿದ್ದಾರೆ.

ಪರಸ್ಪರ ಕೆಸರು ಎರಚಿಕೊಂಡಿದ್ದಾರೆ. ಆಡಬಾರದ ಮಾತು ಆಡಿದ್ದಾರೆ. ಮತ್ತೆ ಒಂದಾಗಿದ್ದಾರೆ. ಇದೊಂದು ರೀತಿ ಪ್ರಹಸನ ಎನ್ನುವಂತೆ ಆಗಿಬಿಟ್ಟಿದೆ. ಅವರು ಜಗಳ ಆಡದಿದ್ದರೇನೇ ಅಸಹಜ ಎನ್ನುವಷ್ಟು ಜನರಿಗೂ ಅದು ರೂಢಿಯಾಗಿಬಿಟ್ಟಿದೆ.
 
ಆರ್‌ಎಸ್‌ಎಸ್ ನಾಯಕರು ಈಗ ಹಾಕಿರುವ ತೇಪೆ, ಚಾಲ್ತಿಯಲ್ಲಿ ಇರುವ ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೆ ಮಾತ್ರ ಗಟ್ಟಿಯಾಗಿ ಇರುವಂತೆ ಕಾಣುತ್ತದೆ. ಕಾರಣ ಇಷ್ಟೇ : ಈಗ ನಡೆದಿರುವ ಜಗಳಕ್ಕೆ ಯಾವುದೇ ತತ್ವಸಿದ್ಧಾಂತ ಕಾರಣವಲ್ಲ.

ಯಾವಾಗಲೂ ಆ ಕಾರಣಕ್ಕಾಗಿ ಜಗಳ ಆಗಿರಲೂ ಇಲ್ಲ!  ತತ್ವ ಸಿದ್ಧಾಂತ ಪಾಲನೆಗಾಗಿ ಜಗಳ ಮಾಡಲು ಎಷ್ಟೊಂದು ಕಾರಣಗಳಿದ್ದುವು! ಈಗ ಅಧಿಕಾರ ಬೇಕು ಎನ್ನುವ ಒಂದು ಬಣ, ಕೊಡಲಾಗದು ಎನ್ನುವ ಇನ್ನೊಂದು ಬಣದ ನಡುವೆ ಜಗಳ ನಡೆದಿದೆ. ಅಧಿಕಾರ ಬೇಕು ಎನ್ನುವ ಬಣ ಇನ್ನೂ ಎಷ್ಟು ದಿನ ಸುಮ್ಮನಿರುತ್ತದೆ? ಸಂಘದ ಮುಖಂಡರು ಹೇಳಿದರು ಎಂದು ಯಡಿಯೂರಪ್ಪ ಸುಮ್ಮನೆ ಇರಲು ಮನಸ್ಸು ಮಾಡಿದರೂ ಅವರ ಸುತ್ತ ಇರುವವರು ಚಿತಾವಣೆ ಮಾಡುವುದಿಲ್ಲ ಎಂಬ ಖಾತ್ರಿಯೇನೂ ಇಲ್ಲ.

ಶಿಕ್ಷೆಯ ಭಯ ಎಲ್ಲಿಯವರೆಗೆ ಇರುವುದಿಲ್ಲವೋ ಅಲ್ಲಿಯವರೆಗೆ ಚಿತಾವಣೆ ಮಾಡುವವರೂ ಇರುತ್ತಾರೆ, ಬಂಡೇಳುವವರೂ ಇರುತ್ತಾರೆ. ವಾಸ್ತವವಾಗಿ ಸಂಘದ ನಾಯಕರು ಮಾಡಬೇಕಾದ ಕೆಲಸವನ್ನು ಪಕ್ಷದ ಮುಖಂಡರು ಮಾಡಬೇಕಿತ್ತು.

`ಕಾದಾಟ ನಿಲ್ಲಿಸಿ ಇಲ್ಲವೇ ಹೊರಟು ಹೋಗಿ~ ಎಂದು ಅವರು ಹೇಳಬೇಕಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರಾಗಲೀ, ಸಂಸದೀಯ ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿಯವರಾಗಲೀ ಕರೆದಿದ್ದರೆ ಯಡಿಯೂರಪ್ಪ ಅಥವಾ ಈಶ್ವರಪ್ಪ ದೆಹಲಿಗೆ ಹೋಗದೆ ಇರಲು ಆಗುತ್ತಿರಲಿಲ್ಲ.

ಯಡಿಯೂರಪ್ಪ ಅವರಿಗೆ ನೇರವಾಗಿಯೇ ಏನು ಹೇಳಬೇಕೋ ಅದನ್ನು ಹೇಳಿ ಕಳುಹಿಸಬಹುದಿತ್ತು. ಈಶ್ವರಪ್ಪ ಅವರಿಗೂ ಹೇಳಬಹುದಿತ್ತು. ನಾಯಕರು ಹಾಗೆ ಮಾಡಲಿಲ್ಲ. ಬದಲಿಗೆ ಮಾಧ್ಯಮಗಳ ಮೂಲಕ `ಬಲ್ಲಮೂಲಗಳ~ ಸಂದೇಶಗಳನ್ನು ಮಾತ್ರ ಹರಿಯಬಿಡಲಾಯಿತು.
 
ಒಂದು ಪಕ್ಷದ ಮೇಲೆ, ಆ ಪಕ್ಷದ ಸರ್ಕಾರದ ಮೇಲೆ ಮುಖ್ಯವಾಗಿ ಹೈಕಮಾಂಡಿನ ನಿಯಂತ್ರಣವೇ ಇರಬೇಕಾಗುತ್ತದೆ. ಆದರೆ, ಬಿಜೆಪಿಯಲ್ಲಿ ಆ ಸಂಸ್ಕೃತಿಯೇ ಇಲ್ಲ. ರಾಷ್ಟ್ರೀಯ ನಾಯಕರು ಕೂಡ ತಮ್ಮ ಜುಟ್ಟನ್ನು ಸಂಘದ ನಾಯಕರ ಕೈಗೇ ಕೊಟ್ಟು ಕುಳಿತಿದ್ದಾರೆ. ಅಡ್ವಾಣಿಯವರಂಥ ಅಡ್ವಾಣಿಯವರನ್ನೇ ಆಟ ಆಡಿಸಿದ ಸಂಘದ ನಾಯಕರಿಗೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರೇನು ದೊಡ್ಡ ಕುಳಗಳಲ್ಲ.

ಬಿಜೆಪಿಯ ಹೈಕಮಾಂಡ್ ದುರ್ಬಲವಾಗಿದೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸುವ ಹಾಗೆ ರಾಜ್ಯ ಬಿಜೆಪಿ ನಾಯಕರಿಗೆ ಸಂಘದ ನಾಯಕರೇ ಬುದ್ಧಿ ಹೇಳಿದ್ದಾರೆ.

ಸರ್ಕಾರ ಹೋದೀತು ಎಂದು ಹೆದರಿಕೊಂಡು ಇದುವರೆಗೆ ಸುಮ್ಮನಿದ್ದ ಸಂಘದ ನಾಯಕರು ಇದೀಗ ಬಿಜೆಪಿ ನಾಯಕರ ಬೀದಿ ಜಗಳದಿಂದ ಬೇಸತ್ತು ಸರ್ಕಾರ ಹೋದರೂ ಹೋಗಲಿ ಎಂದು  ತೀರ್ಮಾನ ಮಾಡಿದ್ದರಿಂದಲೇ ಮೊನ್ನೆಯ ಸಭೆ ನಡೆದಿದೆ.
 
ಸಭೆಯಲ್ಲಿ ಭಾಗವಹಿಸಿದ ಎಲ್ಲ ನಾಯಕರಿಗೂ ಅವರು ಅದನ್ನೇ ಹೇಳಿದ್ದಾರೆ. ಈ ಕೆಲಸವನ್ನು ಸಂಘದ ಮುಖಂಡರು ಎಂದೋ ಮಾಡಬೇಕಿತ್ತು. ಅಂಥ ಅವಕಾಶವನ್ನು ಅನೇಕ ಸಾರಿ ಪಕ್ಷದ, ಸರ್ಕಾರದ ನಾಯಕರು ಕೊಟ್ಟಿದ್ದರು. ಹಗರಣಗಳ ಮೇಲೆ ಹಗರಣಗಳು, ಭಿನ್ನಮತದ ಮೇಲೆ ಭಿನ್ನಮತದ ಚಟುವಟಿಕೆಗಳು ನಡೆದರೂ ಮಧ್ಯಪ್ರವೇಶ ಮಾಡಿ, ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರವನ್ನು ಸರಿದಾರಿಗೆ ತರಬೇಕು ಎಂದು ಅವರಿಗೆ ಅನಿಸಿರಲಿಲ್ಲ. ಹಿತ್ತಾಳೆಯ ಪಾತ್ರೆಯನ್ನು ದಿನವೂ ತಿಕ್ಕದೇ ಇದ್ದರೆ ಅದು ಕಿಲುಬು ಹಿಡಿಯುತ್ತದೆ. ರಾಜ್ಯ ಬಿಜೆಪಿ ನಾಯಕರೂ ಹಿತ್ತಾಳೆಯ ಪಾತ್ರೆಯ ಹಾಗೆಯೇ ಇದ್ದಾರೆ.

ಅವರನ್ನು ನಿತ್ಯ ಯಾರಾದರೂ ತೊಳೆಯಲೇಬೇಕು. ಇಲ್ಲದಿದ್ದರೆ ಅವರಿಗೆ ಕಿಲುಬು ಹಿಡಿಯುತ್ತದೆ. ಈ ಕಿಲುಬು ಪೂರ್ತಿ ಪಾತ್ರೆಯ ಬಣ್ಣವನ್ನೇ ಕೆಡಿಸಿ ಬಿಡಬಹುದು ಎಂದೇ ಸಂಘದ ಮುಖಂಡರು ಮಧ್ಯಪ್ರವೇಶ ಮಾಡಿದಂತೆ ಕಾಣುತ್ತದೆ. ಇದುವರೆಗೆ ಹಾಗೆ ಮಾಡದೇ ಇರುವುದಕ್ಕೆ ಸಂಘದ ನಾಯಕರು ತಕ್ಕಮಟ್ಟಿನ ಫಲಾನುಭವಿಗಳೂ ಆಗಿರಬಹುದು. `ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಸಂಪತ್ತು ಎಷ್ಟು ಹೆಚ್ಚಾಗಿದೆ ನೋಡಿ~ ಎಂದು ಗುಮಾನಿ ವ್ಯಕ್ತಪಡಿಸುವ ಸಾಕಷ್ಟು ಜನರು ಬಿಜೆಪಿಯಲ್ಲಿಯೇ ಇದ್ದಾರೆ!

ಸಂಘದ ನಾಯಕರ ಕಿವಿಮಾತಿನ ಫಲ ಎನ್ನುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಜನರ ಮತ್ತು ಕಾರ್ಯಕರ್ತರ ಕ್ಷಮೆ ಕೇಳಿದ್ದಾರೆ; ತಮ್ಮಿಂದ ತಪ್ಪಾಗಿದೆ ಎಂದಿದ್ದಾರೆ. ಯಡಿಯೂರಪ್ಪನವರು ಕ್ಷಮೆ ಕೇಳಿಲ್ಲ ಆದರೆ, ತಪ್ಪಿನ ಅರಿವಾಗಿದೆ ಎಂದಿದ್ದಾರೆ. ಅಂತಿಮವಾಗಿ ಮೇಲುಮಟ್ಟದಲ್ಲಿ ಕದನ ವಿರಾಮ ಘೋಷಣೆಯಾದಂತಿದೆ. ಈ ಬಿರುಕು ಬರೀ ನಾಯಕರ ಮಟ್ಟದಲ್ಲಿ ಮಾತ್ರ ಇರಲಿಲ್ಲ.
 
ಸದಾನಂದಗೌಡರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಹಂತದಲ್ಲಿ ಪಕ್ಷ ಎರಡು ಭಾಗವೇ ಆಗಿತ್ತು. ಅಂದರೆ ಬಿರುಕು ಬೇರು ಮಟ್ಟದವರೆಗೆ ಇಳಿದಿತ್ತು. ತಳಮಟ್ಟದಲ್ಲಿನ ಬಿರುಕು ತುಂಬಲು ಇನ್ನು ಮುಂದೆ ಪ್ರಯತ್ನ ನಡೆಯಲಿದೆ. ಮೇಲುಮಟ್ಟದಲ್ಲಿ ಒಂದು ಸಾರಿ ಸರಿ ಹೋದರೆ ಕೆಳಮಟ್ಟದಲ್ಲಿಯೂ ಸರಿ ಹೋಗಬಹುದು.
 
ಕೆಳಹಂತದ ಕಾರ್ಯಕರ್ತರಿಗೇ ಆಗಲಿ, ಶಾಸಕರಿಗೇ ಆಗಲಿ ಪಕ್ಷ ಒಡೆಯುವುದು, ಇನ್ನೊಂದು ಚುನಾವಣೆ ಬೇಗ ಬರುವುದು ಬೇಕಾಗಿಲ್ಲ. ಯಡಿಯೂರಪ್ಪನವರಿಗೂ ಇದು ಮನವರಿಕೆಯಾದಂತೆ ಕಾಣುತ್ತದೆ. ಅವರು ಅಧಿಕಾರ ಹಿಡಿಯಲು ಅಷ್ಟು ಅವಸರ ಮಾಡಿದ್ದು, ಸಂಕ್ರಾಂತಿಯ ಗಡುವನ್ನು ಕೊಟ್ಟದ್ದು ಹೈಕೋರ್ಟಿನಲ್ಲಿ ತಮಗೆ ಒಂದಿಷ್ಟು `ಪರಿಹಾರ~ ಸಿಗಬಹುದು ಎಂಬ ನಂಬಿಕೆಯಿಂದ.
 
ತಮ್ಮ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ಕೊಟ್ಟುದನ್ನು ಹೈಕೋರ್ಟು ರದ್ದು ಮಾಡುತ್ತದೆ ಎಂಬ ಭರವಸೆಯಲ್ಲಿ ಅವರು ಇದ್ದಂತಿತ್ತು. ಆದರೆ, ಅಂಥ ಆದೇಶವನ್ನು ಹೈಕೋರ್ಟು ಮಾಡುವವರೆಗೆ ಅವರು ಕಾಯಬೇಕಿತ್ತು. ಜನವರಿ 5ನೇ  ತಾರೀಖು ಕೋರ್ಟು ತಮ್ಮ ಪರವಾಗಿ ತೀರ್ಪು ನೀಡುತ್ತದೆ ಎಂದು ಹೇಳುವವರೆಗೆ ಅವರ ಆಶಾವಾದ ಬೆಳೆದು ನಿಲ್ಲಬಾರದಿತ್ತು.

ತೀರ್ಪು ಬರುವುದಕ್ಕಿಂತ ಮುಂಚೆಯೇ ಹಾಗೆ ಯಾರಾದರೂ ಹೇಳುತ್ತಾರೆಯೇ? ರಾಜ್ಯಪಾಲರು ಯಡಿಯೂರಪ್ಪ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ಕೊಟ್ಟುದು ತಪ್ಪು ಎಂದು ಹೈಕೋರ್ಟು ಒಂದು ವೇಳೆ ತೀರ್ಪು ನೀಡಿದರೆ ಅವರ ವಿರುದ್ಧದ ಬಹುತೇಕ ಮೊಕದ್ದಮೆಗಳು ಬಿದ್ದು ಹೋದಂತೆ.
 
ಆಗ ತಾವು ಅಧಿಕಾರ ಹಿಡಿಯಲು ಸಕಾಲ ಎಂದು ಅವರು ಭಾವಿಸಿದ್ದರು. ಅದಕ್ಕಾಗಿ ತರಾತುರಿಯಲ್ಲಿಯೂ ಇದ್ದರು. ನ್ಯಾಯಾಲಯಗಳಲ್ಲಿ ಹಾಗೆಲ್ಲ ನಮಗೆ ಬೇಕು ಬೇಕಾದಾಗಲೆಲ್ಲ ಬೇಕಾದ ಹಾಗೆ ತೀರ್ಪು ಬರಲು ಸಾಧ್ಯವೇ? ತಮ್ಮ ಪರವಾಗಿ ತೀರ್ಪು ಬಂದ ಮೇಲೆ ಅದನ್ನು ಇಟ್ಟುಕೊಂಡೇ ಅವರು ಹೈಕಮಾಂಡಿನ ಮುಂದೆ ಹೋಗಿ ಕುಳಿತಿದ್ದರೆ ಅದನ್ನು ಅವರು ಕೂಡ ಅಲ್ಲಗಳೆಯುತ್ತಿರಲಿಲ್ಲ. ಅವಸರಕ್ಕೆ ಅಕಲು ಇರುವುದಿಲ್ಲ.

ಬಿಜೆಪಿ ನಾಯಕರ ತಲೆಯಲ್ಲಿ ಅಕಲು ತುಂಬಲು ಸಂಘದ ನಾಯಕರು ಹೇಳಿರುವ ಇನ್ನೊಂದು ಕಿವಿಮಾತು ಮಾಧ್ಯಮಗಳ ಮುಂದೆ ಪಕ್ಷದ ವಿಚಾರ ಚರ್ಚೆ ಮಾಡಬೇಡಿ ಎಂದು. ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವೆ ಬಿರುಕು ಇಷ್ಟು ದೊಡ್ಡದಾಗಲು ಅವರಿಬ್ಬರೂ ಮಾಧ್ಯಮಗಳ ಮುಂದೆ ಬಾಯಿ ಹರಿಬಿಟ್ಟುದೇ ಮುಖ್ಯ ಕಾರಣ.
 
ಈಶ್ವರಪ್ಪ ಸಿಕ್ಕ ಸಿಕ್ಕಲ್ಲೆಲ್ಲ, `ಯಡಿಯೂರಪ್ಪ ಆರೋಪ ಮುಕ್ತರಾಗಿ ಬರಲಿ, ಅಧಿಕಾರ ಕೊಡುವ ಬಗ್ಗೆ ಯೋಚನೆ ಮಾಡುತ್ತೇವೆ~ ಎಂದು ಹೇಳಿದ್ದೇ ಅವರಿಗೆ ಮುಳುವಾಯಿತು. ತಮ್ಮನ್ನು ಜೈಲಿಗೆ ಕಳುಹಿಸಿದ್ದೇ ಈಶ್ವರಪ್ಪ ಎಂದು ಯಡಿಯೂರಪ್ಪ ಅವರೂ ನಿಜವಲ್ಲದ ಮಾತನ್ನು ಮಾಧ್ಯಮಗಳ ಮುಂದೆಯೇ ಆಡಿದರು.
 
ಟಿ.ವಿ ವಾಹಿನಿಗಳ ಬೆಳಕಿನಲ್ಲಿ ವಿವೇಚನೆ ಕಳೆದು ಹೋಗುವಂತೆ ಕಾಣುತ್ತದೆ. ನಾಯಕರ ಮಾತನಾಡುವ ಚಪಲವನ್ನು ವಾಹಿನಿಗಳ ವರದಿಗಾರರು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.
 
ಮಾಧ್ಯಮಗಳ ಮುಂದೆ ಮಾತನಾಡದೇ ಇರುವುದು ಕೂಡ ತಮ್ಮ ಹಕ್ಕು ಎಂದು ತಿಳಿದುಕೊಂಡ ನಾಯಕರು ಈಗ ಕಡಿಮೆ. ಮೈಕುಗಳು ಸಿದ್ಧವಾಗುವುದನ್ನು ಕಾಯುವವರೇ ಹೆಚ್ಚು.

`ಒಂದು ಕಾಲ ಬರುತ್ತದೆ, ನಮ್ಮ ಮುಂದೆ ಮೈಕುಗಳೇ ಇರುವುದಿಲ್ಲ~ ಎಂದು ತಿಳಿದುಕೊಂಡ ನಾಯಕ ಮಾತ್ರ ತನ್ನನ್ನು ತಾನು ಸಂಭಾಳಿಸಿಕೊಳ್ಳಬಲ್ಲ. ತನ್ನ ಪಕ್ಷದ ಮರ್ಯಾದೆಯನ್ನೂ ಉಳಿಸಬಲ್ಲ.  ಟಿ.ವಿ ವಾಹಿನಿಗಳ ಸ್ಟುಡಿಯೊಗಳಲ್ಲಿ ಎನ್.ಸಿ.ಪಿ ಕಟ್ಟುವ ಮಾತು ಆಡುತ್ತಿರುವ ಕಾಂಗ್ರೆಸ್‌ನ ಚಿಕ್ಕ ಪುಟ್ಟ ಶಾಸಕರಿಗೂ ಈ ಮಾತು ಅನ್ವಯಿಸುತ್ತದೆ, ಅವರ ಹಿಂದೆ ಅಕಸ್ಮಾತ್ ದೊಡ್ಡ ನಾಯಕರು ಇದ್ದರೂ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT