ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ದಾರಿಗಳು ಅಗಲುವ ಸಮಯ...

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನನಗೆ ಚೆನ್ನಾಗಿ ನೆನಪಿದೆ. ಅಂದು ಫೆಬ್ರುವರಿ 13, 2009. ರಾತ್ರಿ ಎಂಟು ಗಂಟೆ ಆಗಿರಬಹುದು. ನನ್ನ ಸಂಪಾದಕರು ಸಿಂಗಪುರದಲ್ಲಿ ಇದ್ದರು. ಅವರು ಮರುದಿನ ಎರಡನೇ ಬಾರಿಗೆ ಸಂಪಾದಕರಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಅವರಿಗೆ ಕರೆ ಮಾಡಿ ಅಭಿನಂದಿಸಿದೆ. ಅವರು, ‘ನಾನು ಒಂದು ಆದೇಶ ಮಾಡಬಹುದೇ’ ಎಂದರು. ಅವರು ಏನು ಆದೇಶ ಮಾಡಬಹುದು ಎಂಬ ಯೋಚನೆಯಿಲ್ಲದೆ ‘ಮಾಡಿ ಸರ್‌ ಅದಕ್ಕೇನು’ ಎಂದೆ. ‘ನೀವು ಪ್ರತಿ ವಾರ ಅಂಕಣ ಬರೆಯಬೇಕು’ ಎಂದರು. ಅವರಿಗೆ ಆದೇಶ ಮಾಡಲು ಹೇಳಿ ಎಂಥ ತಪ್ಪು ಮಾಡಿದೆ ಎಂದು ಆಗ ಅನಿಸಿತು! ಅವರು ಅಂದು ಇನ್ನೂ ಒಂದು ಆದೇಶ ಮಾಡಿದ್ದರು. ಅದು ಇಲ್ಲಿ ಅಪ್ರಸ್ತುತ. ‘ಆ ಎರಡನೇ ಆದೇಶವನ್ನು ಜಾರಿ ಮಾಡಬಹುದು, ನನಗೆ ಇನ್ನೊಂದಿಷ್ಟು ಸಮಯ ಕೊಡಿ’ ಎಂದೆ. ಅವರು ಒಂದೇ ಮಾತಿಗೆ, ‘ಇಲ್ಲ, ನೀವು ಬರೆಯಬೇಕು’ ಎಂದರು. ಇದಾಗಿ ಬಂದ ಮೊದಲ ಭಾನುವಾರವೇ, ‘ದೊಡ್ಡ ಕನಸು ಕಾಣದವರು’ ಎಂಬ ಅಂಕಣ ಬರೆದೆ. ಅದೆಲ್ಲ ಆಗಿ ಎಂಟು ವರ್ಷಗಳು ಕಳೆದು ಹೋದುವು. ದಿನಗಳು ಹೇಗೆ ಕಳೆದು ಹೋಗುತ್ತವೆ ಎಂದು ತಿಳಿಯುವುದಿಲ್ಲ.

ಒಂದು ಭಾನುವಾರ ಕಳೆಯಿತು ಎನ್ನುವುದರ ಒಳಗೆ ಇನ್ನೊಂದು ಭಾನುವಾರ ಬಾಗಿಲು ತಟ್ಟುತ್ತ ಇರುತ್ತದೆ. ಬರವಣಿಗೆ ಎನ್ನುವುದು ಹೆರಿಗೆ ಇದ್ದಂತೆ. ಪ್ರತಿಯೊಂದು ಬರವಣಿಗೆಗೂ ‘ಸಿದ್ಧ’ವಾಗಬೇಕು. ಒಂದು ವಿಷಯ ಎನ್ನುವುದು ಹೊಳೆಯಬೇಕು. ಅದು ಹೊಳೆಯುವುದೇ ಗರ್ಭಧಾರಣೆ ಇದ್ದಂತೆ. ಹೊಳೆಯದೇ ಇದ್ದರೆ ತಡೆಯಲಾಗದ ಸಂಕಟ. ಹೊಳೆದು ತಲೆಯೊಳಗೆ ಅದು ಬೆಳೆಯುತ್ತ ಅದಕ್ಕೆ ಕಣ್ಣು, ಮೂಗು ಇತ್ಯಾದಿ ಎಲ್ಲ ಅಂಗಗಳು ರೂಪುಗೊಳ್ಳಬೇಕು. ಹೊಟ್ಟೆಯೊಳಗೆ ಮಗು ಪೂರ್ತಿ ಬೆಳೆಯಿತು ಎನ್ನುವ ವೇಳೆಗೆ ಶನಿವಾರದ ಬೆಳಗೂ ಆಗಿರುತ್ತದೆ. ಹೆರಿಗೆ ನೋವು ಶುರುವಾಗುತ್ತದೆ. ಬರೆಯುವುದು ಮುಗಿಯುವ ವೇಳೆಗೆ ತಿನ್ನುವ ನೋವಿಗೆ ಲೆಕ್ಕ ಇರುವುದಿಲ್ಲ. ಒಂದು ಸಾರಿ ‘ಮಗು’ ಹೊರಗೆ ಬಿದ್ದಿತು ಎನ್ನುವಾಗ ‘ಹಾಯ್‌’ ಎನ್ನುವ ಹಗುರ ಭಾವ. ‘ಬರೆದ ಮೇಲೆ ದಣಿವು ಆಗಬೇಕು’ ಎಂದು ನನ್ನ ಗುರು ಎಂ.ಎಂ.ಕಲಬುರ್ಗಿ ಹೇಳುತ್ತಿದ್ದರು. ಅದು ಎಂಥ ‘ದಣಿವು’ ಎಂದು ನನಗೆ ಈಗ ಅರ್ಥವಾಗುತ್ತಿದೆ.

ಬರವಣಿಗೆ ಎನ್ನುವುದು ಒಂದು ಜವಾಬ್ದಾರಿ. ಪತ್ರಿಕೆಯ ಬರವಣಿಗೆ ಎನ್ನುವುದು ಇನ್ನೂ ಹೆಚ್ಚಿನ ಹೊಣೆಗಾರಿಕೆ. ಬರವಣಿಗೆ ಪ್ರಸಕ್ತವಾಗಿರಬೇಕು. ಅಲ್ಲಿ ಒಂದು ಖಚಿತ ಅಭಿಪ್ರಾಯ ಮೂಡಿರಬೇಕು. ಅದರ ಮಂಡನೆಗೆ ಸೂಕ್ತ ಸಂರಚನೆ ಇರಬೇಕು. ಅದರಲ್ಲಿ ಒಳನೋಟ ಇರಬೇಕು. ‘ಅರೆ, ಇದು ನಮಗೆ ತಿಳಿದಿರಲೇ ಇಲ್ಲವಲ್ಲ’ ಎನ್ನುವಂಥ ಹೊಸ ಹೊಳಹು ಇರಬೇಕು. ಅಂದರೆ ಆ ಬರವಣಿಗೆ ಪ್ರಕಟವಾಗುವ ಜಾಗೆಗೆ ಓದುಗ ಪ್ರತಿವಾರ ಬರುತ್ತಾನೆ. ಒಂದು ಸಾರಿ ಹೀಗೆ ಓದುಗರನ್ನು ನಿಮ್ಮ ಕಡೆಗೆ ಸೆಳೆದುಕೊಂಡರೆ ನಿಮ್ಮ ಜವಾಬ್ದಾರಿ ಇನ್ನೂ ಹೆಚ್ಚುತ್ತ ಹೋಗುತ್ತದೆ. ನೀವು ಆಲಸಿ ಆಗುವಂತೆ ಇಲ್ಲ. ಪ್ರತಿವಾರ ನೀವು ಬರೆಯಲೇಬೇಕು. ಬರೆಯದೇ ಇದ್ದರೆ ‘ಏಕೆ ಬರೆಯಲಿಲ್ಲ’ ಎಂದು ಸಾಲ ಕೊಟ್ಟವರ ಹಾಗೆ ಕಂಡ ಕಂಡಲ್ಲಿ ಕೇಳುತ್ತಾರೆ. ಅನೇಕ ವಾರ ಬರೆದುದನ್ನು ಬಿಟ್ಟು, ‘ಆ ವಾರ ನೀವು ಬರೆದಿರಲಿಲ್ಲ’ ಎಂದು ಅಣಕಿಸುತ್ತಾರೆ. ಏನೋ ಕಾರಣ ಹೇಳಲು ಹೋದರೆ, ‘ಮೊದಲೇ ಬರೆದಿಟ್ಟು ಹೋಗಬೇಕಿತ್ತು’ ಎಂದು ನಿಮಗೇ ನಿಮ್ಮ ಜವಾಬ್ದಾರಿ ಕಲಿಸುತ್ತಾರೆ!

ಅವರಿಗೆ ಹಾಗೆ ಹೇಳಲು ಹಕ್ಕು ಇತ್ತು. ಅವರೆಲ್ಲ ನನಗೆ ಚಿರಪರಿಚಿತರು ಎಂದು ಅಲ್ಲ. ಅನೇಕ ಮಂದಿ ಅಂದೇ ಮೊದಲು ಭೇಟಿಯಾದವರು. ಮೊದಲ ಭೇಟಿಯಲ್ಲಿ ಹೌದೇ ಅಲ್ಲವೇ ಎಂದು ‘ಹುಳು ಹುಳು’ ಮುಖ ನೋಡುವರು. ‘ನೀವು ... ಅವರು ಅಲ್ಲವೇ’ ಎನ್ನುವರು. ‘ಹೌದು’ ಎಂದರೆ, ‘ನೀವು ಅಂದು ಆ ವಿಷಯದ ಬಗೆಗೆ ಬರೆದುದು ಬಹಳ ಚೆನ್ನಾಗಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸುವರು. ಅದು ಮದುವೆ ಮನೆ ಇರಬಹುದು. ಸಾಹಿತ್ಯ ಸಮ್ಮೇಳನ ಇರಬಹುದು. ಸಾಹಿತ್ಯ ಸಂಭ್ರಮ ಇರಬಹುದು, ನೀನಾಸಂ ಶಿಬಿರ ಇರಬಹುದು. ಕೊರ್ಟಿನ ಕೊಠಡಿ ಇರಬಹುದು. ಬಸ್‌ ನಿಲ್ದಾಣ ಇರಬಹುದು. ಸಭೆ, ಸಮಾರಂಭ ಇರಬಹುದು. ಕಿಕ್ಕಿರಿದ ಮೆಟ್ರೊ ರೈಲು ಬೋಗಿ ಇರಬಹುದು... ನನ್ನ ಕೈ ಹಿಡಿದು ಎಲ್ಲಿಯೋ ಯಾವಾಗಲೋ ತಮ್ಮ ಮನಸ್ಸಿನಲ್ಲಿ ಉಳಿದು ಬಿಟ್ಟ ನೆನಪನ್ನು ಹಂಚಿಕೊಳ್ಳುತ್ತಿದ್ದರು. ನನ್ನೊಳಗಿನ ಮಾತು ಅವರೊಳಗಿನ ಮಾತು ಆದುದು ಹೀಗೆ. ಅವರ ಅಳಲಿಗೆ ನಾನು ಧ್ವನಿ ಕೊಡಬೇಕು ಎಂದು ಬಯಸುವ ಅನೇಕ ಓದುಗರೂ ಇದ್ದರು.

ಒಂದು ದಿನ ತುಮಕೂರಿನಿಂದ ಆ ಹೆಣ್ಣುಮಗಳು ಭೋರೆಂದು ಅಳುತ್ತ ನನಗೆ ಕರೆ ಮಾಡಿದ್ದನ್ನು ನಾನು ಎಂದಿಗೂ ಮರೆಯಲಾರೆ. ಎದೆಯುದ್ದ ಬೆಳೆದು ನಿಂತಿದ್ದ ತನ್ನ ಮಗ ವಿನಾಕಾರಣ ನೇಣಿಗೆ ಕೊರಳು ಕೊಟ್ಟುದನ್ನು ಅವರು ಗೊಳೋ ಎಂದು ಅಳುತ್ತ ತೋಡಿಕೊಂಡರು. ಅವರಿಗೆ ಆತ ಒಬ್ಬನೇ ಮಗ. ತಾಯಿಯ ಎಲ್ಲ ಕನಸುಗಳಿಗೆ ಕೊಳ್ಳಿ ಇಟ್ಟು ಸತ್ತು ಹೋಗಿದ್ದ. ‘ಯಾಕೆ?’, ‘ಏನು?’ ಎಂದು ಯಾವ ಸುಳಿವನ್ನೂ ಬಿಟ್ಟಿರಲಿಲ್ಲ. ‘ಮತ್ತೆ ಯಾವ ತಾಯಿಗೂ ಇಂಥ ನೋವು ಬರಬಾರದು. ಹಾಗೆ ತಿಳಿಹೇಳಿ ನೀವು ಬರೆಯಿರಿ’ ಎಂದರು ಆ ತಾಯಿ. ಬರವಣಿಗೆಗೆ ಇಂಥ ಜವಾಬ್ದಾರಿಯೂ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಮರು ವಾರ ಬರೆದೆ. ಆ ತಾಯಿ ಮತ್ತೆ ಕರೆ ಮಾಡಿದರು. ಅವರಿಗೆ ಏನೋ ಒಂದಷ್ಟು ಸಮಾಧಾನ ಆದಂತಿತ್ತು. ಹಾಗೆಂದು ಹೀಗೆ ಎದೆಯುದ್ದ ಬೆಳೆದ ಖೋಡಿ ಮಕ್ಕಳು ನೇಣಿಗೆ ಕೊರಳು ಒಡ್ಡುವುದನ್ನು ತಡೆಯಲು ನನಗೆ ಸಾಧ್ಯವಾಯಿತೇ? ಅದು ಬರವಣಿಗೆಗೆ ಇರುವ ಸಾಧ್ಯತೆ ಮತ್ತು ಮಿತಿ.

ಪತ್ರಿಕೆಯಲ್ಲಿ ಕೆಲಸ ಮಾಡುವವರನ್ನು ಸಿನಿಕರು ಎನ್ನುತ್ತಾರೆ. ಅವರ ವೃತ್ತಿಯೇ ಅಂಥದು. ಬರೀ ನಕಾರಾತ್ಮಕವಾದುದನ್ನು ಬರೆದು ಬರೆದು ಅವರು ಸಿನಿಕರಾಗುತ್ತಾರೋ ಏನೋ? ಆದರೆ, ಅವರು ಅಷ್ಟು ಸಿನಿಕರು ಆಗಬೇಕಿಲ್ಲ. ಬರವಣಿಗೆಗೆ ಸಮಾಜದ ಓರೆ ಕೋರೆಗಳನ್ನು ಸರಿ ಮಾಡುವ ಒಂದು ಶಕ್ತಿ ಇದೆ ಎಂದು ನನಗೆ ಅನಿಸಿದೆ. ಸಂಪೂರ್ಣ ಸರಿ ಮಾಡಲಾಗದೇ ಇದ್ದರೂ ಕೆಲವು ತಿದ್ದುಪಡಿ (correction)ಗಳನ್ನಾದರೂ ಅದು ಮಾಡುತ್ತದೆ ಎಂದು ಅಂದುಕೊಂಡಿದ್ದೇನೆ.

ಪ್ರಭುತ್ವವನ್ನೇ ತೆಗೆದುಕೊಳ್ಳೋಣ. ಹೇಳುವವರು ಕೇಳುವವರು ಯಾರೂ ಇಲ್ಲದೇ ಇದ್ದರೆ ಅವರ ನಡವಳಿಕೆಗೆ, ನಿರ್ಧಾರಗಳಿಗೆ ಅಂಕುಶ ಹಾಕುವವರು ಯಾರು? ಯಾವ ಆಸೆ, ಆಮಿಷಗಳೂ ಇಲ್ಲದೇ ಬರೆಯುತ್ತಾರೆ ಎನ್ನುವವರ ಬರವಣಿಗೆಗೆ ಇನ್ನೂ ಹೆಚ್ಚಿನ ಮೌಲ್ಯ ಇರುವಂತೆ ಕಾಣುತ್ತದೆ. ಮನೆಯಲ್ಲಿ ಹಿರಿಯರು ಏನಾದರೂ ಅಂದಾರು ಎನ್ನುವ ಹೆದರಿಕೆ ನಮಗೆ

ಇರುತ್ತದಲ್ಲ ಹಾಗೆ. ಪ್ರಭುತ್ವದಲ್ಲಿ ಇರುವವರು ಕೆಡುಕರು ಆಗುವುದನ್ನು ತಡೆಯುವುದು ಮಾಧ್ಯಮದ ಕೆಲಸ. ಮಾಧ್ಯಮದಲ್ಲಿ ಇರುವವರು ಪ್ರಭುತ್ವದ ಜೊತೆಗೆ ಸಲುಗೆಯಿಂದ ಇರಬಾರದು, ಮತ್ತು ಪ್ರಭುತ್ವದ ಕೇಡುಗಳನ್ನು ಕಂಡೂ ಕಾಣದಂತೆಯೂ ಇರಬಾರದು.

ರಾಜ್ಯದಲ್ಲಿ ಈಗಿನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬರವಣಿಗೆ ಎದುರಿಸಿದ ಸವಾಲುಗಳು ವಿಚಿತ್ರವಾಗಿದ್ದುವು. ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡು ಇಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಇಲ್ಲಿ ಚುನಾವಣೆ ನಡೆದ ಮೇಲೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಭರ್ಜರಿ ಜಯಗಳಿಸಿ ಅಧಿಕಾರಕ್ಕೆ ಬಂತು. ನರೇಂದ್ರ ಮೋದಿಯವರು ಒಂದು ರೀತಿ ಅಭಿಪ್ರಾಯ ‘ವಿಭಜನೆ’ ಮಾಡಿ, ಇನ್ನೊಂದು ರೀತಿ ‘ಕ್ರೋಡೀಕರಣ’ ಮಾಡಿ ಅಧಿಕಾರ ಹಿಡಿದರು. ಅದರಿಂದ ಇನ್ನೊಂದು ಪರಿಣಾಮವೇನಾಯಿತು ಎಂದರೆ ಬುದ್ಧಿಜೀವಿಗಳು ಎಂದುಕೊಂಡವರು ಒಂದೊಂದು ಕಡೆ ಬೆಸಗೊಂಡರು. ಆದರೆ, ಮಾಧ್ಯಮದಲ್ಲಿ ಇದ್ದವರು ಹಾಗೆ ಯಾವುದೋ ಒಂದು ಕಡೆ ವಾಲಲು ಆಗುವುದಿಲ್ಲ. ವೈಯಕ್ತಿಕವಾಗಿ ಅವರ ರಾಜಕೀಯ ನಿಲುವುಗಳು ಏನೇ ಇದ್ದರೂ, ಒಂದು ಮಾಧ್ಯಮದಲ್ಲಿ ಕೆಲಸ ಮಾಡುವಾಗ ತಕ್ಕಡಿಯನ್ನು ಕೈಯಲ್ಲಿ ಹಿಡಿದುಕೊಂಡೇ ಕೆಲಸ ಮಾಡಬೇಕಾಗುತ್ತದೆ; ಸಮತೋಲ ಕಾಯ್ದುಕೊಳ್ಳಬೇಕಾಗುತ್ತದೆ. ನನ್ನ ಪತ್ರಿಕೆ ನನಗೆ ಕಲಿಸಿದ್ದು ಈ ಸಮತೋಲವನ್ನು. ಅವರ ತಪ್ಪನ್ನು ಅವರ ಮುಖಕ್ಕೆ ಹಿಡಿಯುವುದು ಎಷ್ಟು ಮುಖ್ಯವೋ ಇವರ ತಪ್ಪನ್ನು ಇವರ ಮುಖಕ್ಕೆ ಹಿಡಿಯುವುದೂ ಅಷ್ಟೇ ಮುಖ್ಯ. ನಮ್ಮ ಬರವಣಿಗೆಯಿಂದ ಅವರಿಗೆ ಬೇಸರವಾಗಬೇಕು; ಸಿಟ್ಟು ಬರಬೇಕು. ನಾವು ಅವರ ವಿರುದ್ಧ ಇದ್ದೇವೆ ಎಂದು ಅವರಿಗೆ ಯಾವಾಗಲೂ ಅನಿಸಬೇಕು. ಏಕೆಂದರೆ ಮಾಧ್ಯಮ ಜನರ ಒಳಿತನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು, ಪ್ರಭುತ್ವದಲ್ಲಿ ಇರುವವರು ದುಷ್ಟರಾಗದಂತೆ ತಡೆಯಬೇಕು. ಬುದ್ಧಿಜೀವಿಗಳು ಎಂದುಕೊಂಡವರು ತಮ್ಮ ಅನುಕೂಲಕ್ಕಾಗಿ ಪ್ರಭುತ್ವದಲ್ಲಿ ಇದ್ದವರನ್ನು ‘ಪ್ರಗತಿಪರರು’ ಎಂದೋ ಅಥವಾ ಇನ್ನೇನೊ ಕಾರಣ ಕೊಟ್ಟೋ ಅವರಿಗೆ ಹತ್ತಿರವಾಗಲು ಬಯಸಬಹುದು. ಮಾಧ್ಯಮ ಮತ್ತು ರಾಜಕೀಯದವರ ನಡುವಣ ಅಂತರ ಎಷ್ಟು ಇರಬೇಕು ಎಂದರೆ ‘ಹತ್ತಿರ ಹೋದರೆ ಸುಟ್ಟು ಬಿಡಬಹುದು’ ಎನ್ನುವಷ್ಟು ಇರಬೇಕು. ಅದು ಇಬ್ಬರಿಗೂ ಇರಬೇಕಾದ ಪರಸ್ಪರರ ಬಗೆಗಿನ ಎಚ್ಚರ!

ಆದರೆ, ಜನರು ವಿಚಿತ್ರ. ಅದರಲ್ಲಿ ಯುವಜನರು ಇನ್ನೂ ವಿಚಿತ್ರ. ಅವರಿಗೆ ‘ರಾಜಕೀಯ’ ಎಂದರೆ ಏನೋ ಅಲರ್ಜಿ. ‘ನೀವು ರಾಜಕೀಯ ಬರೆಯಬೇಡಿ ಸರ್‌, ನಮಗೆ ಉಪಯೋಗ ಆಗುವ ಸಂಗತಿ ಕುರಿತು ಬರೆಯಿರಿ’ ಎಂದು ನನಗೆ ಹೇಳಿದ ಯುವಕ–ಯುವತಿಯರಿಗೆ ಲೆಕ್ಕವಿಲ್ಲ. ಅವರಿಗೆ ಹಾಗೆ ಏಕೆ ಅನಿಸುತ್ತದೆ ತಿಳಿಯದು. ಭಾಷೆಯ ಬಗೆಗೆ, ಸಾಹಿತ್ಯದ ಬಗೆಗೆ, ನೀರಿನ ಜಗಳಗಳ ಬಗೆಗೆ, ನನ್ನ ವೈಯಕ್ತಿಕ ಜೀವನದ ಘಟನೆಗಳ ಬಗೆಗೆ, ಕೃಷಿಯ ಬಗೆಗೆ, ಸಿನಿಮಾಗಳ ಬಗೆಗೆ, ನಾಟಕಗಳ ಬಗೆಗೆ, ವ್ಯಕ್ತಿಗಳ ಬಗೆಗೆ ಬರೆದಾಗಲೆಲ್ಲ ನನಗೆ ಬಂದ ಪ್ರತಿಕ್ರಿಯೆ ಅಭೂತಪೂರ್ವವಾಗಿ ಇರುತ್ತಿತ್ತು. ಓದುಗರು ಎಷ್ಟು ವಿಚಿತ್ರ ಎಂದರೆ ಅವರು ನಾನು ಯಾವಾಗಲೋ ಬರೆದ ಇಂಥ ಅಂಕಣದ ವಾಕ್ಯಗಳನ್ನು ನನಗೇ ನೆನಪಿಸುತ್ತಿದ್ದರು. ಮಮತಾ ಬ್ಯಾನರ್ಜಿ ಬಗೆಗೆ, ‘ಜಿಂದಗಿ ನ ಮಿಲೇಗಿ ದುಬಾರ’ ಸಿನಿಮಾ ಬಗೆಗೆ, ‘ಲಂಚ್‌ ಬಾಕ್ಸ್’ ಸಿನಿಮಾ ಕುರಿತು ಎಷ್ಟೋ ವರ್ಷಗಳ ಹಿಂದೆ ಬರೆದ ಅಂಕಣಗಳನ್ನು ನೆನಪಿಸುವವರು ಇಂಥವರು. ಇವು ನಾನು ಬರೆದ ಅತ್ಯುತ್ತಮ ಬರವಣಿಗೆ ಅಲ್ಲದೇ ಇದ್ದಾಗಲೂ! ಕಲಬುರ್ಗಿಯವರು ನಿಧನರಾದ ನಂತರ ಬರೆದ ಅಂಕಣವನ್ನು ನೆನಪಿಸುವವರು ಈಗಲೂ ಬಹಳ ಮಂದಿ ಇದ್ದಾರೆ. ಯಾರಿಗೆ ಯಾವುದು ಏಕೆ ಇಷ್ಟವಾಗುತ್ತದೆ ಎಂದು ಹೇಳುವುದು ಕಷ್ಟ.

ಒಂದು ಬರವಣಿಗೆಗೆ ನೆನಪಿನಲ್ಲಿ ಉಳಿಯುವ ಗುಣ ಬರುವುದು ಹೇಗೆ? ಪತ್ರಕರ್ತರಿಗೆ ವಿಷಯದ ಆಳ ಜ್ಞಾನ ಎಷ್ಟು ಮುಖ್ಯವೋ ಭಾಷೆಯ ಬನಿಯೂ ಅಷ್ಟೇ ಮುಖ್ಯ. ಎರಡಕ್ಕೂ ಓದು ಬಹಳ ಮುಖ್ಯ. ನಾನೇನು ಪತ್ರಕರ್ತ ಆಗಬೇಕು ಎಂದುಕೊಂಡವನು ಅಲ್ಲ. ಚಿಕ್ಕವನಿದ್ದಾಗಿನಿಂದಲೂ ಓದುವ ಹುಚ್ಚು ಇತ್ತು. ಪಠ್ಯಪುಸ್ತಕಗಳ ಒಳಗೆ ಕಾದಂಬರಿಗಳನ್ನು ಇಟ್ಟುಕೊಂಡು ಓದುತ್ತಿದ್ದೆ. ಶಿವರಾಮ ಕಾರಂತರು ನನ್ನ ಪ್ರೀತಿಯ ಲೇಖಕರು. ಮಾಸ್ತಿ, ಅನಂತಮೂರ್ತಿ, ಲಂಕೇಶ ಮತ್ತು ಕಂಬಾರರ ಗದ್ಯ ಮತ್ತು ಒಳನೋಟಗಳು ನನಗೆ ಕಲಿಸಿದ್ದು ಬಹಳ. ಕುವೆಂಪು ಮತ್ತು ಹಾ.ಮಾ.ನಾಯಕರು ಕನ್ನಡದ ಪ್ರೀತಿ ಕಲಿಸಿದರು. ಕಲಬುರ್ಗಿಯವರು ಬರವಣಿಗೆಗೆ ಅತ್ಯಗತ್ಯವಾದ ಸಂಕ್ಷಿಪ್ತತೆ (brevity)ಯ ಮಹತ್ವ ಕಲಿಸಿದರು. ಇವರನ್ನೆಲ್ಲ ನಾನು ಇಲ್ಲಿ ಅನೇಕ ಕಾರಣಗಳಿಗಾಗಿ ನೆನಪಿಸಿಕೊಳ್ಳಬೇಕು. ಆದರೆ, ಇಲ್ಲಿ ಪಟ್ಟಿ ಮಾಡಲು ಆಗದ ಲೇಖಕರ ಓದು ಕೊಟ್ಟ ಅನುಭವವೇನು ಸಣ್ಣದಲ್ಲ. ಎಲ್ಲ ಓದೂ ಒಂದಲ್ಲ ಒಂದು ಪಾಠವನ್ನು ಕಲಿಸುತ್ತದೆ. ಅದು ಒಳಗೆ ಇಳಿಯುವ ಬಗೆಯನ್ನು, ಒಳಗೆ ಇಳಿದು ಬೆಳೆದು ನಿಲ್ಲುವ ಬಗೆಯನ್ನು ಬಣ್ಣಿಸುವುದು ಹೇಗೆ ಸಾಧ್ಯ? ಅದೆಲ್ಲ ಗಾಢ ನೆನಪಾಗಿ, ವಾಕ್ಯಗಳಾಗಿ, ಒಳನೋಟಗಳಾಗಿ, ಜೀವನಪ್ರೀತಿಯಾಗಿ, ದಿಟ್ಟತನವಾಗಿ ಪ್ರತಿ ಬರವಣಿಗೆಯಲ್ಲಿ ನನ್ನ ಕೈ ಹಿಡಿದಿದೆ. ಹುಡುಗನಾಗಿದ್ದಾಗ ಹಾಗೆಲ್ಲ ಓದಿರದೇ ಇದ್ದಿದ್ದರೆ ಈಗ ನನಗೆ ಹೀಗೆ ಬರೆಯಲು ಆಗುತ್ತಿರಲಿಲ್ಲ. ಇದು ಮುಂದಿನ ಪೀಳಿಗೆಯ ಪತ್ರಕರ್ತರಿಗೆ ಒಂದು ಪಾಠ. ಅವರು ಚೆನ್ನಾಗಿ ಓದಬೇಕು. ಅಂದರೆ ಮಾತ್ರ ಚೆನ್ನಾಗಿ ಬರೆಯಲು ಬರುತ್ತದೆ. ಚೆನ್ನಾಗಿ ಓದದವರು ಚೆನ್ನಾಗಿ ಬರೆಯಲಾರರು. ಚೆನ್ನಾಗಿ ಬರೆಯುವುದಕ್ಕೆ ಓದುವುದನ್ನು ಬಿಟ್ಟು ಇನ್ನೊಂದು ಸಿದ್ಧ ಸೂತ್ರ ಎಂಬುದು ಯಾವುದೂ ಇಲ್ಲ.

ಬರವಣಿಗೆಯ ಉದ್ದೇಶವೇನು ಎಂದರೆ ಸಮಾಜದಲ್ಲಿ ಕೇಡು ಇರದಂತೆ ನೋಡಿಕೊಳ್ಳುವುದು. ಆದರೆ. ಜೀವನ ಹೇಗಿರುತ್ತದೆ ಎಂದರೆ ಇಲ್ಲಿ ಕೆಟ್ಟುದಕ್ಕೆ ಕೊನೆ ಇರುವ ಹಾಗೆ ಒಳ್ಳೆಯದಕ್ಕೂ ಕೊನೆ ಇರುತ್ತದೆ. ಭೂಮಿಯ ಮೇಲೆ ಯಾವುದೂ ಚಿರಂಜೀವಿ ಅಲ್ಲವೇನೋ? ಎಲ್ಲದಕ್ಕೂ ಒಂದು ದಿನ ಕೊನೆ ಎಂಬುದು ಬಂದೇ ಬರಬೇಕು. ಎಲ್ಲದಕ್ಕೂ ಒಂದು ಅವಧಿ ಎಂದು ಇರುವಂತೆ ಕಾಣುತ್ತದೆ. ಅವಧಿ ಮುಗಿದ ನಂತರ ಹೊರಡುತ್ತ ಇರಬೇಕು. ಹಾಗೆ ಹೊರಡದೇ ಇದ್ದರೆ ಹೊಸದಕ್ಕೆ ಅವಕಾಶ ಸಿಗುವುದಿಲ್ಲ. ಹಳೆಯ ಎಲೆ ಉದುರಬೇಕು. ಅಲ್ಲಿಯೇ ಹೊಸ ಎಲೆ ಚಿಗುರಬೇಕು. ಇದು ಬದುಕು ಕಲಿಸುವ ಪಾಠ.

...ಇಷ್ಟು ವರ್ಷ ನನಗೆ ಅನಿಸಿದ್ದನ್ನು, ನನ್ನ ಹಾಡುಪಾಡುಗಳನ್ನು ಬರೆಯಲು ಅವಕಾಶ ಕೊಟ್ಟ ನನ್ನ ಸಂಪಾದಕರಿಗೆ ಕೃತಜ್ಞತೆಯ ನಮಸ್ಕಾರ; ಓದಿದ ನಿಮಗೆ ಸಲಾಮು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT