ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಂಡ ಊಟಕ್ಕೆ ಹೋಟೆಲಿನಲ್ಲಿ ಒತ್ತೆಯಾಳು!

ಅಕ್ಷರ ಗಾತ್ರ

`ನೋಡೋಣ... ನಿಮ್ಮಲ್ಲಿ ರಾಜನ ಪ್ರವೇಶ ಹೇಗೆ, ತೋರಿಸು'. ನಾನು ತೈ ತೈ ಪ್ರವೇಶ ಜಿಗಿಯುತ್ತ ಬಂದೆ. ಬಿ.ವಿ. ಕಾರಂತರಿಗೆ ಕುಣಿತದ ಗಾಂಭೀರ್ಯವನ್ನು ನೋಡಿ ಸಂತೋಷವಾಗಿರಬೇಕು. ಆದರೆ, `ನಮಗೆ ಸದ್ಯಕ್ಕೆ ಅಷ್ಟೆಲ್ಲ ಬೇಡ... ಇಷ್ಟು ಸಾಕು' ಎಂದು ಕುಣಿತದ ಯಾವುದೋ ಹಂತದಲ್ಲಿ ನನ್ನ ಕೈ ಹಿಡಿದು ನಿಲ್ಲಿಸಿದರು.

ಹೀಗೆ, ವೀರಾವೇಶದ, ಲಾಲಿತ್ಯಪೂರ್ಣವಾದ, ಸ್ತ್ರೀವೇಷಕ್ಕೊಪ್ಪುವ, ಬಣ್ಣದ ವೇಷಕ್ಕೆ ಹೊಂದುವ ಹೆಜ್ಜೆಗಳನ್ನು ನನ್ನಿಂದ ಕುಣಿಸಿದರು. ಪೇತ್ರಿ ಮಂಜುನಾಥ ಪ್ರಭುಗಳು ಪೂರಕವಾಗಿ ಮದ್ದಲೆ ನುಡಿಸುತ್ತಿದ್ದರು. ಸ್ವತಃ ಕಾರಂತರೇ ಜತೆಯಲ್ಲಿದ್ದು ಹೇಳುತ್ತಿದ್ದುದರಿಂದ ನನಗೆ ಎಲ್ಲಿಲ್ಲದ ಧೈರ್ಯ ಬಂದಿತ್ತು. ಮೊದಲೇ ಹಿಂದಿಯಲ್ಲಿ ನಮ್ಮ ಪರಿಚಯವನ್ನು ಮತ್ತು ಯಕ್ಷಗಾನದ ಹಿನ್ನೆಲೆಯನ್ನು ಅವರು ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಹೇಳಿದ್ದರು. ಕಾರಂತರ ಉಪಸ್ಥಿತಿಯಲ್ಲಿ ಎನ್‌ಎಸ್‌ಡಿಯಲ್ಲಿ ನಮ್ಮದು ಮೊದಲ ಕ್ಲಾಸು. ನಾನು ಸಂಪ್ರದಾಯದ ಹೆಜ್ಜೆಗಳನ್ನು ಹಾಕುವ ಉತ್ಸಾಹ ತೋರಿಸಿದಾಗಲೆಲ್ಲ `ಅಷ್ಟೆಲ್ಲ ನಮ್ಮ ನಾಟಕಕ್ಕೆ ಬೇಡ' ಎಂದು ಹೇಳಿ ಕೆಲವು ಅಂಶಗಳನ್ನಷ್ಟೇ ಆರಿಸಿಕೊಂಡರು.

ಮರುದಿನ ನಮಗೆ ನಾಟಕದ ಸ್ಕ್ರಿಪ್ಟ್‌ನ ಚಿತ್ರವೊಂದು ಕಲ್ಪನೆಗೆ ನಿಲುಕಿತು. ಏನು ಕಲಿಸಬೇಕೆಂದು ಸ್ಪಷ್ಟವಾಗತೊಡಗಿತು. ಸಾಂಪ್ರದಾಯಿಕ ಕಲೆಯೊಂದನ್ನು ಆಯಾ ಕಾಲದ ಅಗತ್ಯಕ್ಕೆ ಅನುಸರಿಸಿ ಹೇಗೆ ಗ್ರಹಿಸಬೇಕು ಮತ್ತು ಬಳಸಬೇಕು ಎಂಬುದರ ಬಗ್ಗೆ ಸಿಕ್ಕಿದ ಮೊದಲ ಮಾರ್ಗದರ್ಶನವಿದು!

ನಾವು ಸಹಾಯಕರಾಗಿ ದುಡಿಯುತ್ತಿದ್ದುದು ಭಾರತದ ರಂಗಭೂಮಿಯ ಇತಿಹಾಸದಲ್ಲಿ ಪ್ರಮುಖವೆನಿಸಲಿರುವ ನಾಟಕವೊಂದಕ್ಕೆ ಎಂಬ ಅರಿವು ಆಗ ಇರಲಿಲ್ಲ. ಬಿ.ವಿ. ಕಾರಂತರು ಯಕ್ಷಗಾನದ ಹೆಜ್ಜೆಗಳನ್ನು ಬಳಸಿ ರಂಗಕ್ಕೆ ತಂದ ಷೇಕ್ಸ್‌ಪಿಯರನ `ಮ್ಯಾಕ್‌ಬೆತ್' ನಾಟಕದ ಹಿಂದಿ ಭಾಷಾಂತರ `ಬರ್ನಮ್ ವನ'ವನ್ನು ನಾಟಕಪ್ರಿಯರು ಎಂದೆಂದಿಗೂ ನೆನಪಿಟ್ಟುಕೊಳ್ಳುವಂತಾಯಿತ್ತಲ್ಲವೆ? ನೆನಪಿಗಾಗಿ ಬಿ.ವಿ. ಕಾರಂತರ ಜೊತೆಗಿನ ಒಂದೇ ಒಂದು ಫೋಟೊ ನನ್ನ ಬಳಿ ಇಲ್ಲ. ಪ್ರಸ್ತುತ ಭೋಪಾಲದ ಭಾರತ ಭವನದಲ್ಲಿರುವ ರಘುವೀರ ಹೊಳ್ಳರು `ಬರ್ನಮ್ ವನ'ದ ಕೆಲವು ಫೋಟೊಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವುಗಳನ್ನು ನೋಡಿದಾಗಲೆಲ್ಲ ಕಾರಂತರ ಮುಖ ಕಂಡಂತಾಗಿ ರೋಮಾಂಚನವಾಗುತ್ತದೆ.

ಬರ್ನಮ್ ವನದೊಂದಿಗೆ ಎನ್‌ಎಸ್‌ಡಿಯ ನಾಟಕ ತಂಡವು ಭಾರತ ಯಾತ್ರೆಗೆ ಹೊರಟಾಗ ನಾನೂ ಮಂಜುನಾಥ ಪ್ರಭುಗಳೂ ಜೊತೆಯಾದೆವು. ಆ ತಂಡ ಕರ್ನಾಟಕದ ಪ್ರವಾಸಕ್ಕೆ ಬಂದಾಗ ಈ ಹಿಂದೆ ಇದೇ ನಾಟಕದಲ್ಲಿ ಸಹಾಯಕರಾಗಿ ಭಾಗವಹಿಸಿ ಅನುಭವವಿದ್ದ ಬಿರ್ತಿ ಬಾಲಕೃಷ್ಣರನ್ನು ಕೂಡ ಕರೆಸಿಕೊಳ್ಳಲಾಯಿತು. ಹಾಗೊಮ್ಮೆ ನಾಟಕ ತಿರುಗಾಟದೊಂದಿಗೆ ಉಡುಪಿಗೂ ಬಂದಿದ್ದೆವು. ಧಾರವಾಡಕ್ಕೆ ಬಂದಾಗ ಅಲ್ಲಿನ ಜೀವ ವಿಮಾ ನಿಗಮದ ಅಧಿಕಾರಿಯಾಗಿದ್ದ ಉಡುಪಿಯ ಕಲಾಪೋಷಕ ವಿಶ್ವಜ್ಞ ಶೆಟ್ಟರಿಗೆ ನಮ್ಮನ್ನು ನೋಡಿ ತುಂಬ ಸಂತೋಷವಾಯಿತು. ಬಿಡುವಿನ ವೇಳೆಯಲ್ಲಿ ನಮ್ಮನ್ನು ಒಂದೆಡೆ ಸೇರಿಸಿ ಒಂದು ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದರು. ವೇಷ ಧರಿಸದೆ ನಾನು ಹೆಜ್ಜೆ ಹಾಕಿದೆ. ಬಿರ್ತಿ ಬಾಲಕೃಷ್ಣರವರು ಮದ್ಲೆ ನುಡಿಸಿದರು. ಪೇತ್ರಿ ಮಂಜುನಾಥ  ಪ್ರಭುಗಳು ಭಾಗವತಿಕೆ ಮಾಡಿದರು. ಧಾರವಾಡದಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದ ಕರಾವಳಿಯ ಸಹೃದಯರು ಆ ಸಣ್ಣ ಹಾಲ್‌ನಲ್ಲಿ ತುಂಬಿದ್ದರು.

ಅಂದಿನ ಪ್ರಾತ್ಯಕ್ಷಿಕೆಯನ್ನು ನೋಡಿ ಕಲಾಪ್ರೇಮಿಗಳು ಮನಸೋತದ್ದಕ್ಕೆ ಸಾಕ್ಷಿಯಾಗಿ ಅಲ್ಲಿ ಸಂಗ್ರಹವಾದ 1800 ರೂಪಾಯಿಗಳನ್ನು ವಿಶ್ವಜ್ಞ ಶೆಟ್ಟರು ನಮಗೆ ನೀಡಿದರು. 1979ರಲ್ಲಿ ಅದೇನು ಸಣ್ಣ ಮೊತ್ತವೆ!

ಧಾರವಾಡದ ಪೇಟೆಯಲ್ಲಿ ಜೇಬನ್ನೂ ಹೃದಯವನ್ನೂ ತುಂಬಿಕೊಂಡು ಪುಳಕಿತನಾಗಿ ನಿಂತಿದ್ದೆ.

***

ಜೇಬನ್ನೆಲ್ಲ ತಡಕಾಡಿದರೂ ಹೊಟೇಲಿನವರ ಬಿಲ್ ಕೊಡುವುದರ ಅರ್ಧ ಭಾಗದಷ್ಟೂ ಇರಲಿಲ್ಲ. ಆಗ ಎಟಿಎಂ ಸೌಲಭ್ಯವಿರಲಿಲ್ಲ ನೋಡಿ. ಸಾಲ ಕೇಳುವುದಾದರೂ ಯಾರಲ್ಲಿ? ಕೇಳುವುದಕ್ಕೆ ಸ್ವಾಭಿಮಾನವೂ ಅಡ್ಡಬಂದಿತ್ತು. ಏನು ಮಾಡುವುದೆಂದು ನಮ್ಮ ಯಕ್ಷಗಾನ ತಂಡದವರು ಯೋಚಿಸುತ್ತ ನಿಂತಿದ್ದರು.

ಉಡುಪಿ ಮೂಲದವರೊಬ್ಬರು ಬೆಳಗಾವಿಯಲ್ಲಿ ಏನೋ ವ್ಯವಹಾರ ನಡೆಸುತ್ತಿದ್ದರು. `ನಿಮ್ಮ ಹವ್ಯಾಸಿ ಯಕ್ಷಗಾನ ತಂಡದ ಪ್ರದರ್ಶನವನ್ನು ಬೆಳಗಾವಿಯಲ್ಲಿ ಏರ್ಪಡಿಸೋಣವೆ?' ಎಂದು ಕೇಳಿದಾಗ ಬೇಡ ಎನ್ನುವುದುಂಟೆ? ಗುರುಗಳಾದ ಗುಂಡಿಬೈಲ್ ನಾರಾಯಣ ಶೆಟ್ಟರು ತಾವೇ ಭಾಗವತರಾಗಿ ಬರಲು ಒಪ್ಪಿಕೊಂಡರು. ಪರವೂರಿನ ಪಯಣವೆಂದರೆ ಅಪರೂಪದ ಅನುಭವ. ನಮ್ಮ ತಂಡ ಉತ್ಸಾಹದಿಂದಲೇ ಹೊರಟಿತ್ತು. ಬೆಳಗಾವಿ, ಧಾರವಾಡಗಳಲ್ಲಿ ಅಲ್ಲಿನ ಕಲಾಪೋಷಕರ ಸಹಾಯ ಪಡೆದು, ಪ್ರದರ್ಶನ ನೀಡಿ ಬೆಳಗಾವಿಗೆ ಮುಟ್ಟಿದೆವು. ಅಲ್ಲಿ ಒಂದು ಹೊಟೇಲಿನಲ್ಲಿ ನಮಗೆ ಊಟ-ತಿಂಡಿಯ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸಂಜೆ ಒಂದು ಸಭಾಂಗಣದಲ್ಲಿ ಯಕ್ಷಗಾನ ಪ್ರದರ್ಶನ. ಪ್ರದರ್ಶನ ಮುಗಿದಾಗ ನಮ್ಮನ್ನು ಆಹ್ವಾನಿಸಿದ ಪುಣ್ಯಾತ್ಮನ ಸುಳಿವಿಲ್ಲ.

ನಾಳೆಯಾದರೂ ಬಂದಾನೆಂದು ಕಾದದ್ದೇ ಬಂತು. ಮರುದಿನ ಸಂಜೆಯಾಗುತ್ತಲೇ ಸಭಾಂಗಣದವರು ನಮ್ಮನ್ನೂ ನಮ್ಮ ಆಟದ ಸಾಮಾನುಗಳನ್ನೂ ಹೊರಗೆ ಹಾಕಿದರು. ಯಕ್ಷಗಾನದ ಪೆಟ್ಟಿಗೆ, ಗಂಟು, ಕಿರೀಟ, ಬಿಲ್ಲು ಬಾಣ ಗದೆಗಳೊಂದಿಗೆ ನಾವು ಬೀದಿ ಬದಿಯಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂತು. ಊರಿಗೆ ಮರಳಿ ಬರುವುದಕ್ಕೂ ದುಡ್ಡಿರಲಿಲ್ಲ. ನಮ್ಮ ತಂಡದವರೊಬ್ಬರು ಜಟಕಾ ಗಾಡಿಯಲ್ಲಿ ನಮ್ಮ ಆತಿಥೇಯನ ವಿಳಾಸ ಹುಡುಕಿ ಹೋದರೆ ಅವನ ಮನೆಗೂ ಬೀಗ! ಆಮೇಲೆ ತಿಳಿಯಿತು, ಆತ ಇಂಥ ವ್ಯವಹಾರಗಳಲ್ಲಿ ನಿಸ್ಸೀಮನೆಂದು. ಹೇಗೆ ಊರಿಗೆ ಮರಳುವುದು ಎಂದು ಚಿಂತಿಸುತ್ತ ಕುಳಿತಿರುವಾಗಲೇ ನಾವು ಊಟ-ತಿಂಡಿ ಸೇವಿಸಿದ್ದ ಹೊಟೇಲಿನ ಮೇನೇಜರ್ ಮತ್ತೊಬ್ಬ ಸಹಾಯಕ ಬಿಲ್ ಹಿಡಿದುಕೊಂಡು ಬಂದರು. ನಾವು ನಮ್ಮನ್ನು ಆಹ್ವಾನಿಸಿದ ಮಹಾಶಯನ ಸೂಚನೆಯ ಮೇರೆಗೆ ಆ ಹೊಟೇಲಿನಲ್ಲಿ ಉಂಡಿದ್ದಲ್ಲವೆ? `ಅವನಲ್ಲಿಯೇ ದುಡ್ಡು ಕೇಳಿ' ಎಂದೆವು. `ಅವನಿಲ್ಲ. ಅವನು ಸಿಗುವ ಲಕ್ಷಣವೂ ಇಲ್ಲ. ಹಾಗಾಗಿ, ನಿಮ್ಮನ್ನೇ ಹಿಡಿದಿದ್ದೇವೆ' ಎಂದ ಹೊಟೇಲಿನ ಮೇನೇಜರ್. `ನೀವು ದುಡ್ಡು ಕೊಡದೇ ಹೋದರೆ ನಿಮ್ಮ ಕಿರೀಟ-ಆಯುಧಗಳನ್ನೆಲ್ಲ ಒಯ್ಯುತ್ತೇವೆ' ಎಂಬ ಬೆದರಿಕೆಯನ್ನೂ ಹಾಕಿದರು.

ಅಷ್ಟರಲ್ಲಾಗಲೇ ನಮ್ಮ ತಂಡದವರು ಟ್ರಂಕ್‌ಕಾಲ್ ಮೂಲಕ ಉಡುಪಿಯ ಉದ್ಯಮಿಯೂ ಕಲಾಪೋಷಕರೂ ಆದ ಅಮ್ಮುಂಜೆ ನಾಗೇಶ ನಾಯಕರನ್ನು ಸಂಪರ್ಕಿಸಿದರು. ಅವರಿಂದ ಸಿಪಿಸಿ ಬಸ್‌ನವರಿಗೆ ಫೋನ್ ಮಾಡಿಸಿ, ಉಡುಪಿಯಲ್ಲಿ ಟಿಕೆಟ್ ಹಣದ ಮೊತ್ತವನ್ನು ಪಾವತಿಸುವ ಒಪ್ಪಂದವನ್ನು ಮಾಡಿಸಿ, ಅಷ್ಟೂ ಮಂದಿಗೆ ಟಿಕೆಟ್ ಕೊಡುವ ವ್ಯವಸ್ಥೆಯನ್ನು ಮಾಡಿದ್ದರು. `ಊರಿನಲ್ಲಿ ನಮಗೆ ದುಡ್ಡಿದೆ. ಈಗ ಇಲ್ಲ ಅಷ್ಟೆ. ಏನು ಮಾಡುವುದು! ಅನಿವಾರ್ಯತೆ. ಹೋದ ಬಳಿಕ ಮನಿಯಾರ್ಡರ್ ಮಾಡುತ್ತೇವೆ' ಎಂದು ನಮ್ಮ ತಂಡದವರು ಬಾರಿಬಾರಿಗೆ ಹೇಳಿದರೂ ಹೊಟೇಲಿನ ಮೇನೇಜರ್ ಕೇಳಲಿಲ್ಲ. ಮಾತುಕತೆ ಮುಂದುವರಿದು, ನಮ್ಮ ತಂಡದವರೆಲ್ಲ ಸಿಪಿಸಿ ಬಸ್‌ನಲ್ಲಿ ಮರಳುವುದೆಂದೂ ನನ್ನನ್ನು ಒತ್ತೆಯಾಳಾಗಿ ಹೊಟೇಲಿನಲ್ಲಿಯೇ ಉಳಿಸುವುದೆಂದೂ ತೀರ್ಮಾನವಾಯಿತು. ಮೇನೇಜರ್‌ನೂ ಇದಕ್ಕೆ ಒಪ್ಪಿದ.

ಎಲ್ಲರೂ ನನಗೆ `ಟಾ ಟಾ' ಹೇಳಿ ಹೊರಡಲನುವಾದರು. ಇದ್ದಕ್ಕಿದ್ದಂತೆಯೇ ಒಂಟಿಯಾದೆ ಎನಿಸಿ ವಸ್ತುತಃ ಅತ್ತುಬಿಟ್ಟೆ.ಮುಂದೇನು ಮಾಡುವುದು! ಮೆಲ್ಲನೆ ಮೇನೇಜರನನ್ನೂ ಅವನ ಸಹಾಯಕನನ್ನೂ ಅನುಸರಿಸಿದೆ. ಹೊಟೇಲಿಗೆ ಕರೆತಂದು ಅಡುಗೆ ಮನೆಯಲ್ಲಿ ಕೂರಿಸಿದರು. ಒಮ್ಮೆ ಸುತ್ತ ಕಣ್ಣು ಹಾಯಿಸಿದೆ. ಅಲ್ಲಿಲ್ಲಿ ಹೊಟೇಲುಗಳಲ್ಲಿ ದೋಸೆ ಹಿಟ್ಟು ಅರೆದು ಅನುಭವವಿರುವ ನನಗೆ ಅದೇನೂ ಅಪರಿಚಿತ ಜಾಗವಾಗಿ ಕಾಣಿಸಲಿಲ್ಲ. ಅಷ್ಟರಲ್ಲಿ ಹೊಟೇಲಿನ ಓನರನೇ ಬಂದ. ನನ್ನನ್ನು ನೋಡಿದವನೇ `ಇವನಾರವ?' ಎಂದು ವಿಚಾರಿಸಿದ. ಮೇನೇಜರ್ ನಡೆದ ಘಟನೆಯನ್ನು ಹೇಳಿದ. ಓನರನಿಗೆ ಕೆಂಡಾಮಂಡಲ ಸಿಟ್ಟು ಬಂತು. `ಈ ಸಂಗತಿ ಪೊಲೀಸರಿಗೆ ಗೊತ್ತಾದರೆ ನಾವೆಲ್ಲರೂ ಜೈಲಿಗೆ ಹೋಗಬೇಕಾಗುತ್ತದೆ. ಕೂಡಲೇ ಇವನನ್ನು ಇವನ ಜನಗಳ ಬಳಿಯಲ್ಲಿ ಬಿಟ್ಟು ಬನ್ನಿ' ಎಂದು ಕೂಗಾಡಿಬಿಟ್ಟ.

ಮೇನೇಜರನೂ ಮತ್ತೊಬ್ಬನೂ ನನ್ನನ್ನು ಕರೆದುಕೊಂಡು ಬಸ್ಸು ನಿಲ್ದಾಣದ ಕಡೆಗೆ ಓಡಿದರು. ಅಷ್ಟರಲ್ಲಿ ಸಿಪಿಸಿ ಬಸ್ ಅಲ್ಲಿಂದ ಹೊರಟಾಗಿತ್ತು. ನಾನು ಮಾತ್ರ ನಿಶ್ಚಿಂತನಾಗಿ ಅವರ ಹಿಂದೆ ಸಾಗುತ್ತಿದ್ದೆ. ಈಗ ಚಿಂತಿಸುವ ಸರದಿ ಅವರದ್ದು. ಒಂದು ವಾಹನವನ್ನೇರಿ, ಅದರಲ್ಲಿ ನನ್ನನ್ನೂ ಕೂಡಿಸಿ ಬಸ್ಸಿನ ಬೆನ್ನು ಹತ್ತಿದರು. ಒಂದು ವೇಳೆ ಬಸ್ಸೂ ಸಿಗದಿದ್ದರೆ, ಇವರು ನನ್ನನ್ನು ಹೊಟೇಲಿಗೂ ಮರಳಿ ಕರೆದೊಯ್ಯದಿದ್ದರೆ ಏನು ಮಾಡುವುದು ಎಂಬ ಭಯದ ಎಳೆಯೊಂದು ಥಟ್ಟನೆ ಮನಸ್ಸಿನಲ್ಲಿ ಮೂಡಲಾರಂಭಿಸಿತು. ನನ್ನನ್ನು ಅಲ್ಲಾಡಿಸಿದರೂ ಉದುರುವುದಕ್ಕೆ ನಾಲ್ಕಾಣೆ ಇರಲಿಲ್ಲ. ಒಂದೆರಡು ಕಿಲೋಮೀಟರ್ ಸಾಗಿದೆವು. ಪುಣ್ಯವಶಾತ್ ಡೀಸೆಲ್ ತುಂಬಿಸಲೊ ಇನ್ಯಾವುದೋ ಕಾರಣಕ್ಕೊ ಬಸ್ಸು ನಿಂತಿತ್ತು.

ಅಬ್ಬಾ! ಬಸ್ ಹತ್ತಿ ನನ್ನವರನ್ನು ಸೇರಿಕೊಂಡೆ.ಊರಿಗೆ ಮರಳಿದ ಮೇಲೆ ಎಲ್ಲರ ಬಸ್ಸು ಟಿಕೆಟಿನ ಹಣವನ್ನು ಗುರುಗಳು ಪಾವತಿಸಿದರು. ಹೊಟೇಲಿನ ಬಿಲ್‌ನ ಮೊತ್ತವನ್ನೂ ಮನಿಯಾರ್ಡರ್ ಮೂಲಕ ರವಾನಿಸುವ ವ್ಯವಸ್ಥೆ ಮಾಡಿದರು.

ಅದಾಗಿ ಮೂರ್ನಾಲ್ಕು ವರ್ಷಗಳ ಬಳಿಕ ಧಾರವಾಡದಲ್ಲಿ ಸಿಕ್ಕ 1800 ರೂಪಾಯಿಗಳಲ್ಲಿ ನನ್ನ ಪಾಲಿಗೆ ಬಂದ ಹಣವನ್ನು ಜೇಬಿನಲ್ಲಿ ತುಂಬಿಸಿ ನಿಂತಿದ್ದಾಗ, ಅಂದು ಬೆಳಗಾವಿಯ ಬಿಸಿಲಲ್ಲಿ ಬರಿಗೈಯಲ್ಲಿ ನಿಂತ ಘಟನೆ ಕಣ್ಣೆದುರು ಬಂತು. ಮೊದಲ ಬಾರಿಗೆ ದುಡ್ಡಿನ ಬೆಲೆ ಗೊತ್ತಾದ ಘಟನೆಯದು.

***

ದುಡ್ಡಿನ ಬೆಲೆ ಗೊತ್ತಿದ್ದುದರಿಂದಲೇ ನನಗೆ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಸಿಕ್ಕಿದ ಒಂದು ಲಕ್ಷವನ್ನೂ ಬಂಗಾರದ ಉಡುಗೊರೆಯನ್ನೂ ನಾನು ಇಟ್ಟುಕೊಳ್ಳಲಿಲ್ಲ. 2010 ಅಕ್ಟೋಬರ್ ತಿಂಗಳ ಕೊನೆಯ ವಾರದ ಒಂದು ದಿನ. ಸಂಸ್ಕೃತಿ ಇಲಾಖೆಯಿಂದ ದೂರವಾಣಿ ಮೂಲಕ ಆಹ್ವಾನ ಬಂದಿದ್ದರೂ ಪತ್ರಿಕೆಯಲ್ಲಿ ಪ್ರಕಟವಾದ ಪ್ರಶಸ್ತಿ ಪುರಸ್ಕೃತರ ಯಾದಿಯಲ್ಲಿ ನನ್ನ ಹೆಸರಿರಲಿಲ್ಲ. ಬೆಂಗಳೂರಿಗೆ ಹೊರಡದೆ ಸುಮ್ಮನಿರುವ ಯೋಚನೆ ಮಾಡಿದ್ದೆ. ಅಲ್ಲದೆ, ನಾನೆಂದಿಗೂ ಇಂಥ ಪ್ರಶಸ್ತಿಯ ಕನಸು ಕಂಡವನೂ ನಾನಲ್ಲ.

`ಶ್ಶ್ ಮಾತನಾಡಬಾರದು... ಸುಮ್ಮನೆ ಬನ್ನಿ' ಸಚಿವರಾದ ಡಾ. ವಿ.ಎಸ್. ಆಚಾರ್ಯರು ದೂರವಾಣಿ ಮೂಲಕ ಆದೇಶದ ಧ್ವನಿಯಲ್ಲಿ ಹೇಳಿದ ಮಾತನ್ನು ಕೇಳಿದಾಗ, `ಛೆ! ಎಲ್ಲಿಯೋ ಈ ಧ್ವನಿಯನ್ನು ಕೇಳಿರಬೇಕಲ್ಲ...' ಅನ್ನಿಸಿತು.

ಹೌದು, ಗುರುಗಳಾದ ಗುಂಡಿಬೈಲ್ ನಾರಾಯಣ ಶೆಟ್ಟರ ಮನೆಯ ಮಾಳಿಗೆಯಲ್ಲಿ ಕೇಳಿದ ಧ್ವನಿ. ರಾತ್ರಿ 12 ಗಂಟೆಯ ಬಳಿಕ ನಡೆಯುವ ಸಭೆಯದು. ಒಳಗೆ ಅವರ ಗುಸು ಗುಸು ಮಾತು. ಹೊರಗೆ ನಮ್ಮದು ಗುಸು ಗುಸು. ಒಳಗಿನಿಂದ ಗದರುವಿಕೆ : `ಶ್ಶ್ ಮಾತನಾಡಬೇಡಿ'. ನಾರಾಯಣ ಶೆಟ್ಟರ ಚಿಕ್ಕ ತಂದೆ ಒಬ್ಬರಿದ್ದರು. ಮೆಟ್ಕಲ್ ಕೃಷ್ಣಯ್ಯ ಶೆಟ್ಟರು. ಆ ಕಾಲಕ್ಕೆ ಆರ್ಥಿಕವಾಗಿ ಬಲಾಢ್ಯರಾಗಿ, ಸಹೃದಯ ಕಲಾಪೋಷಕರಾಗಿ ಹೆಸರುವಾಸಿಯಾಗಿದ್ದರು. ಗುಂಡಿಬೈಲ್ ನಾರಾಯಣ ಶೆಟ್ಟರಿಗೆ ಎಂದಾದರೊಮ್ಮೆ ಭಾಗವತಿಕೆ ಮಾಡುವ ಲಹರಿ ಮೂಡಿದರೆ ಆ ಸಂಜೆ ಅವರ ಮನೆಯಂಗಳದಲ್ಲಿ ಇಲ್ಲವೇ ಅವರ ಚಿಕ್ಕಪ್ಪ ಮೆಟ್ಕಲ್ ಕೃಷ್ಣಯ್ಯ ಶೆಟ್ಟರ ಮನೆಯಂಗಳದಲ್ಲಿ ರಂಗಸ್ಥಳ ಎದ್ದು ನಿಲ್ಲುತ್ತಿತ್ತು. ಆ ಕಾಲದ ಘಟಾನುಘಟಿ ಕಲಾವಿದರೆಲ್ಲ ಚೌಕಿಯಲ್ಲಿ ಹಾಜರಾಗುತ್ತಿದ್ದರು. ಮೆಟ್ಕಲ್ ಕೃಷ್ಣಯ್ಯ ಶೆಟ್ಟರ ಆಳವಾದ ಯಕ್ಷಗಾನ ಜ್ಞಾನ ಇವತ್ತಿಗೂ ನನಗೆ ವಿಸ್ಮಯ. ಅದೇ ತಾಳದ ಅದೇ ಹೆಜ್ಜೆ ಪುರುಷವೇಷಕ್ಕೆ ಮತ್ತು ಸ್ತ್ರೀವೇಷಗಳಿಗೆ ಅನುಗುಣವಾಗಿ ಹೇಗೆ ಬದಲಾಗುತ್ತದೆ ಎಂಬ ಸೂಕ್ಷ್ಮವನ್ನು ಹೇಳಿಕೊಟ್ಟ ಗುರುಗಳು ಅವರು.

ಆದರೆ, ನಾನೂ ಗೆಳೆಯ ರಘು ಶೆಟ್ಟರೂ ಆ ರಾತ್ರಿಗಳಲ್ಲಿ ಬನ್ನಂಜೆಯಿಂದ ಮೆಟ್ಕಲ್ ಕೃಷ್ಣಯ್ಯ ಶೆಟ್ಟರ ಮನೆಯ ಕಡೆಗೆ ಹೆಜ್ಜೆ ಸಪ್ಪಳವಿಲ್ಲದೆ ಸಾಗುತ್ತಿದ್ದೇವೆಂದರೆ ಅದಕ್ಕೆ ಕಾರಣ ಬೇರೆಯೇ ಇತ್ತು.

ಅಲ್ಲೊಂದು ಕಡೆ ಕತ್ತಲಲ್ಲಿ ಮೆಟ್ಕಲ್ ಕೃಷ್ಣಯ್ಯ ಶೆಟ್ಟರ ಮಗ ಕರಂಬಳ್ಳಿ ಸಂಜೀವ ಶೆಟ್ಟರು ನಿಂತಿರುತ್ತಿದ್ದರು. ಕರಂಬಳ್ಳಿ ಸಂಜೀವ ಶೆಟ್ಟರ ಬಗ್ಗೆ ಕರಾವಳಿಯ ಎಲ್ಲರಿಗೂ ಗೊತ್ತು. ಆವಾಗಿನ ಜನಸಂಘದ ನಿಷ್ಠಾವಂತ ಕಾರ್ಯಕರ್ತ. ಮುಂದೊಂದು ದಿನ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಎಂ.ಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಫಕ್ಕನೆ ಗುರುತು ಸಿಕ್ಕದಂಥ ಚಹರೆಯಲ್ಲಿದ್ದ ಕರಂಬಳ್ಳಿ ಸಂಜೀವ ಶೆಟ್ಟರನ್ನು ಮೆಲ್ಲನೆ ಕರೆತಂದು ಗುಂಡಿಬೈಲ್ ನಾರಾಯಣ ಶೆಟ್ಟರ ಅರೆಗತ್ತಲ ಮಹಡಿಯ ಮೇಲೆ ತಂದು ಬಿಡುತ್ತಿದ್ದೆವು. ಆಗ ಅಲ್ಲಿ ಡಾಕ್ಟರ್ ವಿ.ಎಸ್. ಆಚಾರ್ಯರೂ ಹಾಜರ್. ಉಡುಪಿಯ ಮತ್ತೊಂದಿಷ್ಟು ಮಂದಿ ಹಿರಿಯರೆಲ್ಲ ಸೇರಿದಾಗ ಮಧ್ಯರಾತ್ರಿ ದಾಟುತ್ತಿತ್ತು. ಗಂಭೀರವಾದ ಚರ್ಚೆ ಸಾಗುತ್ತಿತ್ತು. ನಾವು ರಾತೋರಾತ್ರಿ ಪೋಸ್ಟರ್ ಹಚ್ಚಲು, ಮನೆಮನೆಗೆ ಕರಪತ್ರಗಳನ್ನು ಹಂಚಲು ನೆರವಾಗುತ್ತಿದ್ದೆವು. ಮುಂದೆ ಡಾಕ್ಟರ್ ಆಚಾರ್ಯರು ಬಂಧನಕ್ಕೊಳಗಾದರು.

ಕರಂಬಳ್ಳಿ ಸಂಜೀವ ಶೆಟ್ಟರು ತಪ್ಪಿಸಿಕೊಂಡು ಭೂಗತರಾದರು. ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿ ಇಂಥ ಪದಗಳನ್ನು ಬಿಟ್ಟರೆ ನನಗೆ ಬೇರಾವ ಸಂಗತಿಯೂ ಗೊತ್ತಿರಲಿಲ್ಲ. ಒಂದೂವರೆ ತರಗತಿ ಕಲಿತವನಿಗೆ ಇದಕ್ಕಿಂತ ಹೆಚ್ಚಿನದ್ದು ಗೊತ್ತಾಗುವುದಾದರೂ ಹೇಗೆ? ಗುರುಗಳ ಮನೆಯಲ್ಲಿ ನಡೆಯುವ ಕಲಾಪಗಳಾದ ಕಾರಣ ನಿಷ್ಠೆಯಿಂದ ಕಾರ್ಯಕರ್ತನಾಗಿಯಷ್ಟೇ ದುಡಿಯುತ್ತಿದ್ದೆ. ಡಾಕ್ಟರ್ ಆಚಾರ್ಯರು ನನ್ನನ್ನೂ ನಾನು ಅವರನ್ನೂ ಹತ್ತಿರದಿಂದ ಕಂಡದ್ದು ಅದೇ ಮಾಳಿಗೆಯ ಮೇಲೆ.

ಹಾಗಾಗಿ, ಇವತ್ತು ಅವರ ಮಾತನ್ನು ಮೀರುವ ಹಾಗಿಲ್ಲ. ಗೆಳೆಯರೂ ಯಕ್ಷಗಾನದ ಕಲೆ-ಕಲಾವಿದರ ಬಗ್ಗೆ ಕಾಳಜಿಯುಳ್ಳವರೂ ಆಗಿರುವ ಮುರಲಿ ಕಡೆಕಾರ್ ಸ್ವತಃ ನನ್ನನ್ನು ಬೆಂಗಳೂರಿಗೆ ಕರೆದೊಯ್ಯಲು ಸಿದ್ಧರಾಗಿದ್ದರು. ನನಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕೆಂದು ಪರೋಕ್ಷವಾಗಿ ಶ್ರಮಿಸಿದ ಸನ್ಮಿತ್ರ ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರಿಗೂ `ಆಗದು' ಎನ್ನುವಂತಿರಲಿಲ್ಲ.

ಹೇಗೂ ಪ್ರಶಸ್ತಿ ಸ್ವೀಕರಿಸಿಯಾಯಿತು. ಅದರ ಜೊತೆಗೆ ಬಂದ ಒಂದು ಲಕ್ಷ ರೂಪಾಯಿಯನ್ನು ನಮ್ಮ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಬಳಸುವುದೆಂದು ಅಲ್ಲಿಯೇ ಸಂಕಲ್ಪಿಸಿದೆ. ಪ್ರಶಸ್ತಿಯ ಜೊತೆಗೆ ಉಡುಗೊರೆಯಾಗಿ ಸಿಕ್ಕಿದ ಬಂಗಾರದ ಮೌಲ್ಯವನ್ನು `ಯಕ್ಷಗಾನ ಕಲಾರಂಗ'ಕ್ಕೂ ನನ್ನ ಬಾಲ್ಯದಲ್ಲಿ ಮಾತೃವಾತ್ಸಲ್ಯದ ಮಡಿಲು ಚಾಚಿದ ಮಹಿಳೆಯೊಬ್ಬರಿಗೂ ನೀಡಿದೆ.

ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತನಾದಾಗ ಉಡುಪಿಯ `ಯಕ್ಷಗಾನ ಕಲಾರಂಗ' ಸಂಸ್ಥೆಯವರು ನನ್ನನ್ನು ಅಭಿನಂದಿಸಲು ಆಹ್ವಾನಿಸಿದ್ದರು. ದೇಶದ ಮತ್ತು ರಾಜ್ಯದ ಕೆಲವೆಡೆ ಅಸಂಘಟಿತ ಕಲಾವಿದರಿಗಾಗಿ ಗುಂಪು ವಿಮೆ, ಆರೋಗ್ಯ ವಿಮೆಗಳಂಥ ಸೌಲಭ್ಯಗಳನ್ನು ಕೊಡಿಸುವ ಬಗ್ಗೆ ಪ್ರಸ್ತಾವನೆಗಳು ನಡೆಯುತ್ತಿರುವ ಎಷ್ಟೋ ವರ್ಷಗಳಿಗಿಂತ ಮೊದಲೇ ಯಕ್ಷಗಾನ ಕಲಾವಿದರಿಗೆ ವಿಮಾ ಸೌಲಭ್ಯಗಳನ್ನು ನೀಡಿರುವ ಹಿರಿಮೆಯ ಸಂಸ್ಥೆ `ಯಕ್ಷಗಾನ ಕಲಾರಂಗ'ವಾದುದರಿಂದ ಮತ್ತು ಅದರ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರಲ್ಲನೇಕರು ನನ್ನ ಆತ್ಮೀಯರಾದುದರಿಂದ ನಾನು ಅವರ ಸಂಮಾನಕ್ಕೆ ತಲೆಬಾಗಿಸಿದೆ. ಅಲ್ಲೇ ಮುಂದಿದ್ದ ಓಣಿಯಲ್ಲಿ ನಾನು ಬಾಲ್ಯದಲ್ಲಿ ಕಿತ್ತಲೆ ಕದ್ದು ಓಡಿದ ಹೆಜ್ಜೆಗಳು ಮಾಸಿಹೋಗಿದ್ದರೂ ಆ ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿ ಮತ್ತೆ ಅವು ಮೂಡಿದಂತಾಗಿ ತಲ್ಲಣಿಸಿಬಿಟ್ಟೆ.

***

ತಲ್ಲಣಿಸದೆ ಇದ್ದೀತೆ ಮನ, ಆ ಸಂಜೆ ಗುರು ವೀರಭದ್ರ ನಾಯಕರು ಮೂಡಿಸಿದ `ಮಂಡಲ' ಕುಣಿತದ ಹೆಜ್ಜೆಗಳು ಸುರುಳಿ ಸುರುಳಿಯಾಗಿ ಸ್ಮೃತಿಯಲ್ಲಿ ಸುತ್ತುತ್ತಿರುವಾಗ!

ಕೆಸುವಿನ ಕಾಂಡವನ್ನು ನೀಟಾಗಿ ಕತ್ತರಿಸಿ ಅದರೊಳಗೆ ತಂಬಾಕು ಸುರಿದು, ತುಟಿಗಿಟ್ಟು ದಮ್ ಎಳೆಯಲಾರಂಭಿಸಿದರೆ ಸುರುಳಿ ಸುರುಳಿಯಾಗಿ ಹೊಮ್ಮುವ ಹೊಗೆ! ಹೋ... ಯಕ್ಷಗಾನದಲ್ಲಿ ಅಪರೂಪವಾಗಿರುವ `ಮಂಡಲ' ಕುಣಿತದ ಲಹರಿಗೆ ಸಿದ್ಧಗೊಳ್ಳುತ್ತಿದೆ ಆ ಮುಸ್ಸಂಜೆ...
(ಸಶೇಷ)
ಚಿತ್ರಗಳು: ರಘುವೀರ ಹೊಳ್ಳ
ನಿರೂಪಣೆ : ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT