ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿನ ಸೇತುವೆ ನಮಗೆ ಬೇಡ ಎನ್ನೋಣ

Last Updated 27 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಕ್ಟೋಬರ್ 16ರ ಭಾನುವಾರ ಬೆಂಗಳೂರಿನಲ್ಲಿ ನಡೆದ ಜನರ ಪ್ರತಿಭಟನೆಯಲ್ಲಿ ನಾನೂ ಭಾಗವಹಿಸಿದ್ದೆ. ಯೌವನದ ದಿನಗಳಲ್ಲಿ ಧರಣಿಗಳು ಮತ್ತು ಪ್ರತಿಭಟನಾ ರ‍್ಯಾಲಿಗಳಲ್ಲಿ ನಾನು ಭಾಗವಹಿಸುವುದು ಸಾಮಾನ್ಯವಾಗಿತ್ತು. ಆದರೆ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ನನ್ನ ನಿಲುವುಗಳ ಅಭಿವ್ಯಕ್ತಿಯು ಬರಹಗಳು ಮತ್ತು ಉಪನ್ಯಾಸಗಳಿಗೆ ಸೀಮಿತವಾಗಿತ್ತು.

ನಗರದ ಹೃದಯ ಭಾಗದಲ್ಲಿ ಕುರೂಪಿಯೂ ಅಯೋಗ್ಯವೂ ಆದ ಉಕ್ಕಿನ ಬೃಹತ್ ಮೇಲ್ಸೇತುವೆ ನಿರ್ಮಾಣದ ಯೋಜನೆ ಜಾರಿಗೊಳಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರ ನಾನು ನನ್ನ ಆರಾಮದಾಯಕ ಸ್ಥಿತಿಯಿಂದ ಹೊರಗೆ ಬರುವಂತೆ ಮಾಡಿತು. ಬೆಳೆದು ನಿಂತಿರುವ ಎಂಟು ನೂರು ಮರಗಳನ್ನು, ಹಲವು ಪಾರಂಪರಿಕ ಕಟ್ಟಡಗಳನ್ನು ಯೋಜನೆಯು ನಾಶ ಮಾಡುತ್ತದೆ ಮತ್ತು ಹಲವು ಸುಂದರ ರಸ್ತೆಗಳು ಮತ್ತು ವಠಾರಗಳನ್ನು ವಿರೂಪಗೊಳಿಸುತ್ತದೆ, ಅವುಗಳಿಗೆ ಹಾನಿ ಉಂಟು ಮಾಡುತ್ತದೆ.

ವಿಮಾನ ನಿಲ್ದಾಣಕ್ಕೆ ಬೇಗನೆ ತಲುಪುವಂತೆ ಮಾಡುವುದು ಯೋಜನೆಯ ಉದ್ದೇಶ ಎಂದು ಹೇಳಿಕೊಳ್ಳಲಾಗಿದೆ. ಆದರೆ ಈ ಉದ್ದೇಶ ಈಡೇರಿಕೆಗೆ ಕಡಿಮೆ ವಿನಾಶಕಾರಿಯಾದ ಹಲವು ಆಯ್ಕೆಗಳಿವೆ ಎಂದು ಸಂಚಾರ ಪರಿಣತರು ಹೇಳುತ್ತಾರೆ.

ನಗರದಿಂದ ವಿಮಾನ ನಿಲ್ದಾಣಕ್ಕೆ ನೇರ ಮೆಟ್ರೊ ಸಂಪರ್ಕ ಅಂತಹ ಒಂದು ಆಯ್ಕೆ. ಅಥವಾ ಉಕ್ಕಿನ ಸೇತುವೆಗೆ ವಿನಿಯೋಗಿಸುವ ಹಣದಲ್ಲಿ ಈ ಮಾರ್ಗದಲ್ಲಿ ನಾಲ್ಕು ಸಾವಿರ ಬಸ್‌ಗಳನ್ನು ಹಾಕುವುದಕ್ಕೆ ಸಾಧ್ಯ ಇದೆ. ಇದರಿಂದ ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳಿಗೆ ಇರುವ ಬೇಡಿಕೆಯನ್ನು ತಗ್ಗಿಸಬಹುದು.

ಈ ಪರ್ಯಾಯಗಳಿಂದ ಆಗುವ ಸಾಮಾಜಿಕ ಮತ್ತು ಪಾರಿಸರಿಕ ಹಾನಿ ಅತ್ಯಂತ ಕಡಿಮೆ; ಜತೆಗೆ ಇದು ನಗರದ ಜನರಿಗೂ ಹೆಚ್ಚು ಉಪಯುಕ್ತ. ಕಾರುಗಳುಳ್ಳ ಶ್ರೀಮಂತರಿಗಾಗಿ ಉಕ್ಕಿನ ಸೇತುವೆ ನಿರ್ಮಿಸಲಾಗುತ್ತಿದೆ; ಆದರೆ ಇದು ಅವರಿಗೂ ಹೆಚ್ಚಿನ ಪ್ರಯೋಜನ ಉಂಟು ಮಾಡುವುದಿಲ್ಲ. ಯಾಕೆಂದರೆ ಇದು ಸಂಚಾರ ದಟ್ಟಣೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವ ಕೆಲಸವನ್ನಷ್ಟೇ ಮಾಡುತ್ತದೆ.

ಭಾರತದ ಅತ್ಯುತ್ತಮ ತಾಂತ್ರಿಕ ವಿಶ್ವವಿದ್ಯಾಲಯವಾದ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿದೆ. ಇಲ್ಲಿನ ಸಂಚಾರ, ಪರಿಸರ ಮತ್ತು ಇಂಧನ ಪರಿಣತರಲ್ಲಿ ಕೆಲವರು ಈ ಕ್ಷೇತ್ರಗಳಲ್ಲಿ ಜಗತ್ತಿನಲ್ಲಿಯೇ ಅಗ್ರಗಣ್ಯರು. ಇವರ ಜತೆಗೆ ಕರ್ನಾಟಕ ಸರ್ಕಾರ ಯಾಕೆ ಸಮಾಲೋಚನೆ ನಡೆಸಿಲ್ಲ? ಯಾಕೆಂದರೆ, ಕಡಿಮೆ ವಿನಾಶಕಾರಿಯಾದ, ಹೆಚ್ಚು ಉತ್ತಮವಾದ, ಪರಿಣಾಮಕಾರಿಯಾದ ಹಾಗೂ ಅಗ್ಗದ ಪರ್ಯಾಯಗಳನ್ನು ಅವರು ಸೂಚಿಸುತ್ತಿದ್ದರು.

ಯೋಜನೆ ಅನುಷ್ಠಾನಗೊಳ್ಳುವ ಸಮಯವೂ ಅನುಮಾನಕ್ಕೆ ಎಡೆ ಮಾಡಿಕೊಡುವಂತೆ ಇದೆ. ಕರ್ನಾಟಕ ಸರ್ಕಾರ ಹೇಳಿಕೊಳ್ಳುತ್ತಿರುವಂತೆ ಯೋಜನೆಯ ಬಗ್ಗೆ 2010ರಷ್ಟು ಹಿಂದೆಯೇ ಚಿಂತನೆ ಆರಂಭವಾಗಿತ್ತು ಎಂದಾದರೆ, ಅದರ ಅನುಷ್ಠಾನಕ್ಕೆ ಈಗ ಅವಸರ ಮಾಡುತ್ತಿರುವುದು ಯಾಕೆ? ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆಗಳು ಹತ್ತಿರದಲ್ಲಿವೆ.

ಈ ಚುನಾವಣೆಯ ಖರ್ಚಿಗೆ ಈ ಯೋಜನೆಯಿಂದ ದೊರೆಯುವ ಲಂಚದ ಹಣವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಬೇಕಾದ ಅಗತ್ಯ ಇದೆಯೇ? ಅಥವಾ, ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯವಷ್ಟೇ ಇದೆ. ಸೋಲುವ ಸಾಧ್ಯತೆ ಇದೆ ಎಂದು ಅರಿವಾಗಿರುವ ಕಾಂಗ್ರೆಸ್‌ನ ಸಚಿವರು ಮತ್ತು ಶಾಸಕರು ಖಾಲಿ ಜೇಬಿನಲ್ಲಿ ಅಧಿಕಾರದಿಂದ ಕೆಳಕ್ಕೆ ಇಳಿಯಲು ಸಿದ್ಧರಿಲ್ಲವೇ?

ಯೋಜನೆಗೆ ಸಂಬಂಧಿಸಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಅರಿತುಕೊಂಡ ಬೆಂಗಳೂರಿನ ನಾಗರಿಕರು ಅಕ್ಟೋಬರ್ 16ರ ಭಾನುವಾರ ಯೋಜನೆ ವಿರುದ್ಧ ಪ್ರತಿಭಟಿಸಲು ಬೀದಿಗಿಳಿದರು. ಯೋಜನೆ ಆರಂಭವಾಗುವ ಸ್ಥಳವಾದ ಚಾಲುಕ್ಯ ಹೋಟೆಲ್ ವೃತ್ತದಿಂದ ಅದರ ಮೊದಲ ಹಂತ ಕೊನೆಯಾಗುವ ಬಳ್ಳಾರಿ ರಸ್ತೆ ಮತ್ತು ಸಿ.ವಿ.ರಾಮನ್ ರಸ್ತೆ ಸಂಧಿಸುವ ಮೇಖ್ರಿ ವೃತ್ತದವರೆಗೆ ಜನರು ಕೈಯಲ್ಲಿ ಯೋಜನೆ ‘ಬೇಡ’ ಎಂಬ ಫಲಕಗಳನ್ನು ಹಿಡಿದು ಮಾನವ ಸರಪಣಿ ನಿರ್ಮಿಸಿದರು.

ಕೋಲ್ಕತ್ತದಂತಲ್ಲದ ಬೆಂಗಳೂರು, ಧರಣಿಗಳು ಮತ್ತು ರಸ್ತೆತಡೆಗಳು ಸಾಮಾನ್ಯವಾಗಿ ನಡೆಯುವ ನಗರ ಅಲ್ಲ. ಕೋಲ್ಕತ್ತದ ಜನರು ಬಹುಶಃ ಸ್ವಲ್ಪ ಅತಿಯಾಗಿಯೇ ಪ್ರತಿಭಟನೆಗಳನ್ನು ನಡೆಸುತ್ತಾರೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಬೆಂಗಳೂರು ವಲಸಿಗರ ನಗರ ಮತ್ತು ಈ ನಗರಕ್ಕೆ ಕ್ರಾಂತಿಕಾರಿ ಸಾಮಾಜಿಕ ಚಳವಳಿಗಳ ಪರಂಪರೆಯೂ ಇಲ್ಲ. ಬಹುಶಃ ಹಾಗಾಗಿ ಇಲ್ಲಿನ ಜನರು ಪ್ರತಿಭಟಿಸುವುದೇ ಇಲ್ಲ ಎನ್ನಬಹುದು. ಆ ಕಾರಣಕ್ಕಾಗಿಯೇ ಅಕ್ಟೋಬರ್ 16ರಂದು ಸೇರಿದ್ದ ಜನರ ಪ್ರಮಾಣ ಮೆಚ್ಚುಗೆ ಮೂಡಿಸುವಂತಹುದು.

ಎಂದಿನಂತೆ ಆ ರಾತ್ರಿಯೂ ನಾನು ಕೈಯಲ್ಲೊಂದು ಪುಸ್ತಕ ಹಿಡಿದು ಮಲಗಿಕೊಂಡೆ. ಆ ರಾತ್ರಿ ನನ್ನ ಕೈಯಲ್ಲಿದ್ದ ಪುಸ್ತಕ ನ್ಯೂಯಾರ್ಕ್‌ನ ಗೌರವಾನ್ವಿತ ಲೇಖಕ ಪೀಟ್ ಹ್ಯಾಮಿಲ್ ಅವರ ಪ್ರಬಂಧಗಳ ಸಂಕಲನವಾದ ‘ಪೀಸ್‌ವರ್ಕ್’. ಕಾಕತಾಳೀಯ ಎಂದರೆ, ಈ ಪುಸ್ತಕದಲ್ಲಿದ್ದ ಮೊದಲ ಎರಡು ಲೇಖನಗಳು ‘ಡೆವಲಪರ್‌ಗಳು’ ಎಂದು ಕರೆದುಕೊಳ್ಳುವ ಜನರು ಲೇಖಕನ ಹುಟ್ಟೂರಿನ ಪಾರಂಪರಿಕ ರಚನೆಗಳನ್ನು ನಾಶ ಮಾಡಿದ್ದರ ಬಗ್ಗೆ ಇವೆ. ತಾನು ಬೆಳೆದ ನ್ಯೂಯಾರ್ಕ್ ನಗರ ಈ ಹೊತ್ತಿಗೆ ‘ದೂಳು, ಪ್ರಗತಿ, ಅಪಘಾತ ಮತ್ತು ದುರಾಸೆಯ ಬೀಡಾಗಿತ್ತು’ ಎಂದು ಅತ್ಯಂತ ಹೃದಯಸ್ಪರ್ಶಿಯಾಗಿ ಹ್ಯಾಮಿಲ್ ಬರೆಯುತ್ತಾರೆ. ‘ಒಂದು ನಗರವೆಂದರೆ ಅದು ಅಲ್ಲಿನ ವಾಸ್ತುಶಿಲ್ಪವಷ್ಟೇ ಅಲ್ಲ. 

ಇನ್ನೂ ಸಾಕಷ್ಟು ಕಾಲ ಬಾಳಿಕೆ ಬರುವ ರೀತಿಯಲ್ಲಿ ಆ ನಗರ ತನ್ನ ಭೂತಕಾಲವನ್ನು ತೋರ್ಪಡಿಸುತ್ತಿರುವುದನ್ನು ನಾಶ ಮಾಡುವುದು ಎಂದರೆ ಅದು ಇತಿಹಾಸದ ಮೇಲೆ ನಡೆಸುವ ದೌರ್ಜನ್ಯ. ಇಲ್ಲಿ (ನ್ಯೂಯಾರ್ಕ್ ನಗರದಲ್ಲಿ) ಬೆಳೆಯುತ್ತಾ ನೀವು ಒಂದು ಕಹಿ ಪಾಠ ಕಲಿಯುತ್ತೀರಿ. ಹಳೆಯದಾಗಿದೆ ಎಂಬ ಅಪರಾಧಕ್ಕಾಗಿ ಅದನ್ನು ಯಾವಾಗೆಲ್ಲ ಕೆಡವಲಾಗಿದೆಯೋ ಅದರ ಬದಲಿಗೆ ನಿರ್ಮಾಣವಾಗಿರುವುದು ಎಣೆ ಇಲ್ಲದಷ್ಟು ಕೆಟ್ಟದಾಗಿದೆ’.

ಜಗತ್ತಿನ ವಿವಿಧ ಭಾಗಗಳಲ್ಲಿ (ವಿಶೇಷವಾಗಿ ಪಶ್ಚಿಮದ ದೇಶಗಳಲ್ಲಿ) ಇರುವಂತಹುದೇ ಬೃಹತ್‌ ಕಟ್ಟಡಗಳು ನಮ್ಮಲ್ಲೂ ಇರಬೇಕು ಎಂಬ ಹುಚ್ಚುತನದಿಂದಾಗಿಯೇ ಒಂದು ಕಾಲದಲ್ಲಿ ಬೃಹತ್‌ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು. ಇದಕ್ಕೆ ಒಂದು ನಿದರ್ಶನ ಬೆಂಗಳೂರಿನ ಪಬ್ಲಿಕ್‌ ಯುಟಿಲಿಟಿ ಕಟ್ಟಡ. 1970ರ ದಶಕದಲ್ಲಿ ನಿರ್ಮಾಣವಾದ ಈ ಕಟ್ಟಡ ನ್ಯೂಯಾರ್ಕ್‌ನ ಎಂಪೈರ್‌ ಸ್ಟೇಟ್‌ ಕಟ್ಟಡಕ್ಕೆ ನಮ್ಮ ಉತ್ತರ. ಆದರೆ ಇಂದಿಗೂ ಈ ಕಟ್ಟಡದ ಅರ್ಧದಷ್ಟು ಭಾಗ ಖಾಲಿ ಇದೆ.  ಬೆಂಕಿ ಅವಘಡ ಸಂಭವಿಸಿದರೆ ಪಾರಾಗುವುದಕ್ಕೆ ಅಲ್ಲಿ ಯಾವುದೇ ವ್ಯವಸ್ಥೆ ಇಲ್ಲ ಎಂಬುದು ಇದಕ್ಕೆ ಕಾರಣ.

ಇತ್ತೀಚಿನ ದಶಕಗಳಲ್ಲಿ ಹುಚ್ಚುತನಕ್ಕೆ ಬದಲಾಗಿ ವಂಚನೆಯ ಉದ್ದೇಶ ಭಾರತದ ಬೃಹತ್‌ ಯೋಜನೆಗಳ ಹಿಂದಿನ ಪ್ರೇರಕ ಶಕ್ತಿ. ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ವಿಮಾನ ನಿಲ್ದಾಣ, ಹೆದ್ದಾರಿ, ಜಲ ವಿದ್ಯುತ್‌ ಯೋಜನೆ ಮುಂತಾದವುಗಳ ನಿರ್ಮಾಣಕ್ಕೆ ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ನೀಡುವಾಗ ಯೋಜನಾ ಮೊತ್ತದ ಗಣನೀಯವಾದ ಒಂದು ಭಾಗವು ಯೋಜನೆಯ ಹಿಂದೆ ಇರುವ ರಾಜಕಾರಣಿಗಳು ಅಥವಾ ಪಕ್ಷಕ್ಕೆ ಹೋಗುತ್ತದೆ. ಇದು ಗುಟ್ಟು ಮತ್ತು ವಂಚನೆಯ ಕಾರ್ಯಾಚರಣೆ ಆಗಿರುವುದರಿಂದ ಈ ಹಣದ ನಿಖರ ಮೊತ್ತ ಎಷ್ಟು ಎಂಬುದು ತಿಳಿಯುವುದಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಈ ಲಂಚದ ಪ್ರಮಾಣವು ಶೇ 20ಕ್ಕಿಂತ ಹೆಚ್ಚಿರುತ್ತದೆ. ಕೆಲವು ಪ್ರಕರಣಗಳಲ್ಲಿಯಂತೂ ಶೇ 50ರಷ್ಟೂ ಇರುತ್ತದೆ.

ಭಾರತದಲ್ಲಿ ಮೂಲಸೌಕರ್ಯ ನಿರ್ಮಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಒಂದು ಅಲಿಖಿತ ನಿಯಮ ಇದೆ. ಅದೆಂದರೆ, ಯೋಜನೆ ದೊಡ್ಡದಾದಷ್ಟೂ ನೀಡಬೇಕಾದ ಲಂಚದ ಪ್ರಮಾಣವೂ ಹೆಚ್ಚು. ಬೆಂಗಳೂರು ಉಕ್ಕಿನ ಸೇತುವೆಯ ಮೂಲ ಅಂದಾಜು ವೆಚ್ಚ ₹ 1,200 ಕೋಟಿ ಆಗಿತ್ತು; ಸ್ವಲ್ಪ ಸಮಯದ ನಂತರ ಅದು ₹ 1,700 ಕೋಟಿಗೆ ಏರಿಕೆಯಾಯಿತು. ಈ ಅಂಕಣ ಬರೆಯುವ ಹೊತ್ತಿಗೆ ಮತ್ತೂ ₹ 500 ಕೋಟಿ ಏರಿಕೆಯಾಗಿದೆ ಎಂಬ ಸುದ್ದಿ ಬರುತ್ತಿದೆ. ಈಗ ಉಕ್ಕಿನ ಮೇಲ್ಸೇತುವೆಯ ವೆಚ್ಚ ಮೂಲ ಅಂದಾಜಿಗಿಂತ ₹ 1000 ಕೋಟಿ ಹೆಚ್ಚಳವಾಗಿದೆ. ಇದರಿಂದಾಗಿ ಯೋಜನೆಯ ಹಿಂದೆ ಇರುವವರಿಗೆ ದೊರೆಯುವ ಮೊತ್ತ ಕನಿಷ್ಠ ₹ 200 ಕೋಟಿಯಷ್ಟು ಹೆಚ್ಚಾಗುತ್ತದೆ.

ಯೋಜನೆ ಅನುಷ್ಠಾನಕ್ಕೆ ತೋರುತ್ತಿರುವ ಅನಗತ್ಯ ಆತುರವು ಅನುಮಾನವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆರೋಪದ ಕಾರಣಕ್ಕಾಗಿ ಕೆಲವು ಕಾಲ ಸಂಪುಟದಿಂದ ಹೊರಗೆ ಉಳಿಯಬೇಕಾಗಿ ಬಂದಿದ್ದ ವಿವಾದಾತ್ಮಕ ಸಚಿವರೊಬ್ಬರು ಮತ್ತೆ ಸಚಿವರಾದ ಮೇಲೆ ಯೋಜನೆ ಅನುಷ್ಠಾನದ ನಿರ್ಧಾರ ಕೈಗೊಂಡಿರುವುದು ಕೂಡ ಅನುಮಾನವನ್ನು ಹೆಚ್ಚಿಸಿದೆ. ಈ ಸಚಿವರಿಂದ ಯಾರೂ ಹೆಚ್ಚೇನನ್ನೂ ನಿರೀಕ್ಷಿಸಲಾಗದು. ಆದರೆ ಮುಖ್ಯಮಂತ್ರಿ ಬಗ್ಗೆ ಜನರಿಗೆ ಹೆಚ್ಚಿನ ನಿರೀಕ್ಷೆ ಇತ್ತು.

2013ರ ಮೇಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ರಾಜ್ಯದಾದ್ಯಂತ ಜನರಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಅವರೊಬ್ಬ ಸಭ್ಯ ಹಿನ್ನೆಲೆಯ, ತಳಮಟ್ಟದ ನಾಯಕ. ಸಂಪೂರ್ಣವಾಗಿ ಸ್ವಂತ ಪ್ರಯತ್ನದಿಂದ ಮೇಲೇರಿದವರು. ಬಳ್ಳಾರಿ ಗಣಿ ಮಾಫಿಯಾವನ್ನು ತನ್ನೊಳಗೆ ಇರಿಸಿಕೊಂಡಿದ್ದ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ಅವರು ಬಹಳ ಎಚ್ಚರಿಕೆಯ ನಿಗಾ ಇರಿಸಿದ್ದರು.

ಇದೆಲ್ಲಕ್ಕಿಂತ ಮುಖ್ಯವಾಗಿ, ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಗಾಂಧಿ ಕುಟುಂಬ ಆಸ್ಥಾನದ ಸದಸ್ಯರಾಗಿದ್ದವರಲ್ಲ. ತಮಗೆ ಹೆಚ್ಚು ನಿಷ್ಠರಾಗಿದ್ದವರನ್ನು ಮುಖ್ಯಮಂತ್ರಿಯಾಗಿಸಬೇಕು ಎಂಬ ಬಯಕೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಯಾಕೆಂದರೆ ಚುನಾವಣಾ ಪ್ರಚಾರದ ಮುನ್ನೆಲೆಯಲ್ಲಿ ಇದ್ದವರು ಸಿದ್ದರಾಮಯ್ಯ. ಅಷ್ಟೇ ಅಲ್ಲದೆ, ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಹುದ್ದೆಯ ಹಕ್ಕು ತಮ್ಮದು ಎಂಬುದನ್ನು ಅವರು ಅತ್ಯಂತ ಅಧಿಕಾರಯುತವಾಗಿಯೇ ಹೇಳಿದ್ದರು.

ದುರಂತವೆಂದರೆ ಅಧಿಕಾರ ವಹಿಸಿಕೊಂಡ ನಂತರ ಸಿದ್ದರಾಮಯ್ಯ ಬೇರೆಯೇ ವ್ಯಕ್ತಿಯಾಗಿ ಬದಲಾದರು. ಪ್ರತಿಪಕ್ಷದಲ್ಲಿದ್ದಾಗ ರಾಜ್ಯದಾದ್ಯಂತ ನಡೆಸಿದ ಪಾದಯಾತ್ರೆ ಸಂದರ್ಭದಲ್ಲಿ ತೋರಿದ ಚೈತನ್ಯ ಮತ್ತು ಹುಮ್ಮಸ್ಸು ಅಧಿಕಾರಕ್ಕೇರಿದಾಗ ಆಲಸ್ಯ ಮತ್ತು ಅಸಡ್ಡೆಯಾಗಿ ಬದಲಾಯಿತು. ಗ್ರಾಮೀಣ ಬದುಕಿನಿಂದ ಬಂದ ಮುಖ್ಯಮಂತ್ರಿ ನೀರಾವರಿ ಮತ್ತು ಕೃಷಿ ಯೋಜನೆಗಳಿಗೆ ಮಹತ್ವ ನೀಡುತ್ತಾರೆ ಎಂದು ಜನ ನಿರೀಕ್ಷಿಸಿದ್ದರು; ಅಂತಹುದೇನನ್ನೂ ಅವರು ಮಾಡಲಿಲ್ಲ. ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳನ್ನು ಹೆಚ್ಚು ವಾಸಯೋಗ್ಯ ಮಾಡುವ ವಿಷಯದಲ್ಲಿಯೂ ಅವರು ಯಾವುದೇ ಆಸಕ್ತಿ ತೋರಲಿಲ್ಲ.

ಮೂರೂವರೆ ವರ್ಷದ ಆಡಳಿತದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಇಬ್ಬರು ಸಚಿವರ ಆಣತಿಗೆ ಕುಣಿಯುತ್ತಿರುವಂತೆ ಕಾಣಿಸುತ್ತಿದೆ. ಈ ಸಚಿವರ ಅಧಿಕೃತ ಖಾತೆಗಳು ಯಾವುವೇ ಇರಲಿ, ಅವರು ‘ವಿಶೇಷ ಹಿತಾಸಕ್ತಿ’ಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಒಂದು ಕಾಲದಲ್ಲಿ ಯಡಿಯೂರಪ್ಪ ಅವರಿಗೆ ರೆಡ್ಡಿ ಸೋದರರಿದ್ದಂತೆ ಸಿದ್ದರಾಮಯ್ಯ ಅವರಿಗೆ ಈ ಇಬ್ಬರಿದ್ದಾರೆ.

ಈ ಸಹವಾಸ ಮತ್ತು ತಮ್ಮದೇ ಅದಕ್ಷತೆಯಿಂದಾಗಿ ಮುಖ್ಯಮಂತ್ರಿ ಹಿಂದೆ ಹೊಂದಿದ್ದ ವಿಶ್ವಾಸಾರ್ಹತೆಯನ್ನು ಈಗ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ವೃತ್ತಿ ಬದುಕಿಗೆ ನಮ್ಮ ಹಿಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ವೃತ್ತಿ ಬದುಕಿನ ಜತೆ ದಟ್ಟ ಸಾದೃಶ್ಯ ಕಾಣಿಸುತ್ತಿದೆ. ಅಧಿಕಾರಕ್ಕೆ ಬಂದಾಗ ಸಿಂಗ್‌ ಹಾಗೆಯೇ ಸಿದ್ದರಾಮಯ್ಯನವರ ಬಗ್ಗೆ ಕೂಡ ಒಳ್ಳೆಯ ಮತ್ತು ಸಮರ್ಥ ವ್ಯಕ್ತಿ ಎಂಬ ಭಾವನೆ ಇತ್ತು. ಆದರೆ ಅಧಿಕಾರದಿಂದ ಕೆಳಗಿಳಿಯುವ ಹೊತ್ತಿಗೆ ಈ ಒಳ್ಳೆಯ ಹೆಸರು ಛಿದ್ರವಾಗಿದೆ.

ಈ ಮಧ್ಯೆ, ಅವಧಿ ಪೂರ್ಣಗೊಳ್ಳುವ ಹೊತ್ತಿಗೆ ನಮ್ಮ ಮುಖ್ಯಮಂತ್ರಿ ಬೆಂಗಳೂರು ನಗರದ ನಿವಾಸಿಗಳಿಗೆ ಉಕ್ಕಿನ ಮೇಲ್ಸೇತುವೆ ಎಂಬ ವಿಷಯುಕ್ತ ವಿದಾಯದ ಕೊಡುಗೆ ನೀಡಲು ಮುಂದಾಗಿದ್ದಾರೆ. ಇದು ನಗರದಲ್ಲಿ ಬೆಳೆದು ನಿಂತ ಎಂಟು ನೂರು ಮರಗಳನ್ನು ಬಲಿ ಪಡೆಯಲಿದೆ. ಆದರೆ ಸಂಚಾರ ಸಮಸ್ಯೆಯನ್ನು ಮಾತ್ರ ಹಾಗೆಯೇ ಉಳಿಸಲಿದೆ.

ಹಾಗಾದರೆ, ಉಕ್ಕಿನ ಸೇತುವೆಯಿಂದ ಆಗುವ ಪ್ರಯೋಜನ ಏನು?– ಖಂಡಿತವಾಗಿಯೂ ಅದು ಕಾಂಗ್ರೆಸ್‌ ಪಕ್ಷ ಹಾಗೂ ಅದರ ಮುಖಂಡರ ಜೇಬು ತುಂಬಿಸಲಿದೆ. ಮೂರ್ಖತನ ಮತ್ತು ವಂಚನೆಯಿಂದ ಕೂಡಿದ ಈ ಯೋಜನೆಗೆ ಅಕ್ಟೋಬರ್‌ 16ರಂದು ಪ್ರತಿಭಟನೆ ಸಂದರ್ಭದಲ್ಲಿ ಯುವತಿಯೊಬ್ಬರು ಹಿಡಿದುಕೊಂಡಿದ್ದ ಫಲಕದಲ್ಲಿದ್ದ ವಾಕ್ಯ ಅತ್ಯಂತ ಸಮರ್ಪಕವಾಗಿ ಹೊಂದಿಕೆಯಾಗುತ್ತದೆ. ಆ ವಾಕ್ಯ ಹೀಗಿತ್ತು: THOU SHALL NOT STEEL (ಕದಿಯದಿರಿ ಎಂಬರ್ಥದಲ್ಲಿ ಬಳಸಲಾಗಿದೆ). ಆದರೆ, ಬೇಸರ ಮತ್ತು ಜುಗುಪ್ಸೆ ಹುಟ್ಟಿಸುವ ವಿಚಾರವೆಂದರೆ ಅವರು ಕದಿಯದಿರುವಂತೆ ಕಾಣಿಸುತ್ತಿಲ್ಲ.​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT