ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ನೆಲದಿ ಶಾಂತಿ ಮಂತ್ರ, ಫಲಿಸೀತೆ ತಂತ್ರ?

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ತಮ್ಮ ಜಿಗುಟು ನಿರ್ಧಾರಗಳ ಮೂಲಕ ವಿವಾದಕ್ಕೆ ಕಾರಣವಾಗುತ್ತಾ, ಆಡಿದ ಮಾತಿಗೆ ಬೆನ್ನು ತಿರುಗಿಸಿ ತೀರ್ಮಾನ ಕೈಗೊಂಡು ಅಚ್ಚರಿ ಮೂಡಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ತಮ್ಮ ಮೊದಲ ಅಧ್ಯಕ್ಷೀಯ ವಿದೇಶ ಪ್ರವಾಸದ ವಿಷಯದಲ್ಲಿ ವಿಶ್ಲೇಷಕರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ಮೆಕ್ಸಿಕೊ ಮೇಲೆ ಮುನಿಸಿಕೊಂಡಿರುವುದರಿಂದ ಮೊದಲು ಕೆನಡಾಕ್ಕೆ ಭೇಟಿ ಕೊಡಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಈ ಹಿಂದಿನ ನಾಲ್ವರು ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಮೊದಲು ಭೇಟಿ ಕೊಟ್ಟದ್ದು ನೆರೆರಾಷ್ಟ್ರ ಮೆಕ್ಸಿಕೊ ಅಥವಾ ಕೆನಡಾಕ್ಕೆ. ಆದರೆ ಟ್ರಂಪ್ ಮೊದಲ ಪ್ರವಾಸದಲ್ಲೇ ಉದ್ದ ಜಿಗಿತ ಮಾಡಿದ್ದಾರೆ, ರಿಯಾದ್, ಜೆರುಸೆಲೆಮ್, ಬೆತ್ಲೆಹೆಮ್, ವ್ಯಾಟಿಕನ್, ಬ್ರಸೆಲ್ಸ್ ಹೀಗೆ ಒಂದು ಸುತ್ತು ಬಂದಿದ್ದಾರೆ.

ಟ್ರಂಪ್ ತಮ್ಮ ಒಂಬತ್ತು ದಿನಗಳ ಮೊದಲ ಅಧ್ಯಕ್ಷೀಯ ವಿದೇಶ ಪ್ರವಾಸದಲ್ಲಿ ಸಾಧಿಸಲು ಹೊರಟಿದ್ದೇನು ಎಂದು ನೋಡಿದರೆ ಮುಖ್ಯವಾಗಿ ಕಾಣುವುದು ಎರಡು ಸಂಗತಿಗಳು. ಒಂದು - ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರುವುದು. ಎರಡು- ಭಯೋತ್ಪಾದನೆ ವಿರುದ್ಧ ಸಂಘಟಿತ ಧ್ವನಿ ಮೊಳಗಿಸುವುದು. ಟ್ರಂಪ್ ಸೌದಿಗೆ ಹೊರಟಾಗ ಕೆಲವು ಪ್ರಶ್ನೆಗಳು ಎದ್ದಿದ್ದವು. ಮುಸ್ಲಿಂ ರಾಷ್ಟ್ರದಲ್ಲಿ ಟ್ರಂಪ್ ನಡವಳಿಕೆ ಹೇಗಿರುತ್ತದೆ, ಮಧ್ಯಪ್ರಾಚ್ಯದ ವಿಷಯದಲ್ಲಿ ಒಬಾಮ ಧೋರಣೆಯಿಂದ ಟ್ರಂಪ್ ಹಿಂದೆ ಸರಿಯಲಿದ್ದಾರೆಯೆ ಎಂಬ ಅನುಮಾನ ಕಾಡಿತ್ತು. ಆದರೆ ಟ್ರಂಪ್ ಹಿಂದಿನ ಅಧ್ಯಕ್ಷರ ಧೋರಣೆ ಕುರಿತು ಚಕಾರ ಎತ್ತಲಿಲ್ಲ. ಟ್ರಂಪ್ ಪ್ರವಾಸದುದ್ದಕ್ಕೂ ಹಗುರವಾಗಿ ಮಾತನಾಡಿದ್ದು, ಸಿದ್ಧಪಡಿಸಿದ ಭಾಷಣಗಳಿಂದ ಆಚೀಚೆ ಸರಿದಿದ್ದು ಕಾಣಲಿಲ್ಲ.

ಮೊದಲಿಗೆ, 50ಕ್ಕೂ ಅಧಿಕ ಮುಸ್ಲಿಂ ರಾಷ್ಟ್ರಗಳ ನಾಯಕರು ಭಾಗಿಯಾಗಿದ್ದ ಅರಬ್-ಇಸ್ಲಾಮಿಕ್-ಅಮೆರಿಕನ್ ಶೃಂಗಸಭೆಯಲ್ಲಿ ಟ್ರಂಪ್ ಮಹತ್ವದ ಭಾಷಣ ಮಾಡಿದರು. 1982ರಲ್ಲಿ ಅಂದಿನ ಅಧ್ಯಕ್ಷ ರೊನಾಲ್ಡ್ ರೇಗನ್ ಲಂಡನ್ನಿನಲ್ಲಿ ಮಾಡಿದ್ದ ಭಾಷಣಕ್ಕೆ ಇದನ್ನು ಹೋಲಿಸಲಾಯಿತು. ರೇಗನ್ ತಾವು ಅಧಿಕಾರ ಹಿಡಿದ ಎರಡು ವರ್ಷಗಳ ತರುವಾಯ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದರು. ಅಂದು ರೇಗನ್ ಲಂಡನ್ನಿನ ವೆಸ್ಟ್ ಮಿನ್ಸ್ಟರ್ ರಾಯಲ್ ಗ್ಯಾಲರಿಯಲ್ಲಿ ‘ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಶ್ಚಿಮದ ದೇಶಗಳು ಒಂದಾಗಿ ಕಮ್ಯುನಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ’ ಎಂದು ಕರೆ ನೀಡಿದ್ದರು. ರೇಗನ್ ಭಾಷಣ ಪಶ್ಚಿಮ ದೇಶಗಳ ಸ್ನೇಹ ಕೂಟ ರಚನೆಗೆ ನಾಂದಿಯಾಗಿತ್ತು.

ಇದೀಗ, ಭಯೋತ್ಪಾದನೆಯ ವಿರುದ್ಧ ಮಾಡಿದ ಭಾಷಣದಲ್ಲಿ ಕೆಲವು ಸಂಗತಿಗಳನ್ನು ಟ್ರಂಪ್ ನೇರವಾಗಿ ಆಡಿದ್ದಾರೆ. ‘ಇದೊಂದು ಐತಿಹಾಸಿಕ ಸವಾಲು. ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಮಟ್ಟಹಾಕಬೇಕಿದೆ. ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು, ನಾಗರಿಕ ಸಮಾಜ ನಿರ್ಮಿಸುವುದು. ಮತ್ತೊಂದು, ದುಷ್ಟ ಪ್ರಪಂಚದಲ್ಲಿ ನರಳುವುದು. ಅಮೆರಿಕ ನಿಮ್ಮ ಜೊತೆ ನಿಲ್ಲಲಿದೆ. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳು ಅಮೆರಿಕದ ಸಹಾಯಕ್ಕೆ ಕಾಯಬೇಕಿಲ್ಲ. ನೀವುಗಳೇ ಒಂದಾಗಿ, ಉಗ್ರರ ವಿರುದ್ಧ ಸಮರ ಸಾರಬೇಕಿದೆ. ನಮ್ಮ ಭವಿಷ್ಯ, ಮುಂದಿನ ಪೀಳಿಗೆಯ ಬದುಕು ಹೇಗಿರಬೇಕು ಎಂಬುದನ್ನು ಮಧ್ಯಪ್ರಾಚ್ಯ ರಾಷ್ಟ್ರಗಳು ತುರ್ತಾಗಿ ನಿರ್ಧರಿಸಬೇಕು’. ಹೀಗೆ ಟ್ರಂಪ್ ಸ್ನೇಹ ಹಸ್ತ ಚಾಚುತ್ತಲೇ, ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆಯನ್ನು ಅದರ ಉಗಮ ಸ್ಥಾನದಲ್ಲೇ ಖಂಡಿಸಿದ್ದು, ಮೂಲೋತ್ಪಾಟನೆಗೆ ಕರೆಕೊಟ್ಟಿದ್ದು ಮೆಚ್ಚುವಂತಹ ವಿಷಯ. ಟ್ರಂಪ್ ಮಾತಿನಲ್ಲಿ ಕಂಡ ಒಂದು ಬದಲಾವಣೆ ಎಂದರೆ ಇದುವರೆಗೂ ‘ಇಸ್ಲಾಮಿಕ್ ಭಯೋತ್ಪಾದನೆ’ ಎಂದು ಕರೆಯುತ್ತಿದ್ದ ಟ್ರಂಪ್ ಸೌದಿಯಲ್ಲಿ ಕೇವಲ ‘ಭಯೋತ್ಪಾದನೆ’ ಎಂಬ ಪದ ಬಳಸಿದರು. ತಮ್ಮ ಈ ಭಾಷಣ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಮುಖ್ಯ ತಿರುವಾಗಲಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಅದು ಹೇಗೆ ಎಂದು ಕಾದು ನೋಡಬೇಕು.

ಟ್ರಂಪ್ ತಮ್ಮ ಮಾತಿನ ಮೂಲಕ ರವಾನಿಸಿದ ಸಂದೇಶ ಸ್ಪಷ್ಟವಾಗಿದೆ. ಚುನಾವಣಾ ಪೂರ್ವದ ತಮ್ಮ ಭಾಷಣಗಳಲ್ಲಿ, ಜಗತ್ತಿನ ತಲೆಬೇನೆಯನ್ನು ಅಮೆರಿಕ ಕಟ್ಟಿಕೊಂಡು ಅದರ ನಿವಾರಣೆಗೆ ತನ್ನ ಸಂಪನ್ಮೂಲಗಳನ್ನು ವ್ಯಯಿಸಬಾರದು ಎನ್ನುವುದು ಟ್ರಂಪ್ ವಾದವಾಗಿತ್ತು. ಮಿತ್ರ ರಾಷ್ಟ್ರಗಳ ರಕ್ಷಣೆಗೆ ಅಮೆರಿಕ ಬದ್ಧ, ಆದರೆ ಪುಕ್ಕಟೆಯಾಗಲ್ಲ ಎಂಬುದನ್ನು ಟ್ರಂಪ್ ಹಲವು ಬಾರಿ ಹೇಳಿದ್ದರು. ತಮ್ಮ ಈ ಭಾಷಣದಲ್ಲಿ ಅದನ್ನೇ ‘ಅಮೆರಿಕದ ಸಹಾಯಕ್ಕೆ ನೀವು ಕಾಯಬೇಕಿಲ್ಲ’ ಎಂದು ಮತ್ತೊಂದು ಬಗೆಯಲ್ಲಿ ಹೇಳಿದ್ದಾರೆ. ಜಾಗತಿಕ ಭಯೋತ್ಪಾದನೆಯ ವಿಷಯದಲ್ಲಿ ಮಧ್ಯಪ್ರಾಚ್ಯ ಸಮಸ್ಯೆಯ ಮೂಲ ಮತ್ತು ಉತ್ತರ ಎಂದು ಟ್ರಂಪ್ ಭಾವಿಸಿದಂತಿದೆ. ಉಗ್ರ ನಿಗ್ರಹಕ್ಕೆ ಮುಸ್ಲಿಂ ರಾಷ್ಟ್ರಗಳು ನೇತೃತ್ವ ವಹಿಸಬೇಕು ಎಂಬುದು ಅವರ ಮಾತಿನ ಇಂಗಿತ.

ಇನ್ನು, ಟ್ರಂಪ್ ಭೇಟಿ ಕೇವಲ ಭಾಷಣಕ್ಕೆ ಸೀಮಿತವಾಗಿರಲಿಲ್ಲ. ಶಸ್ತ್ರಾಸ್ತ್ರ ಖರೀದಿ, ಬಂಡವಾಳ ಹೂಡಿಕೆ ಕುರಿತು ಕೆಲವು ಒಪ್ಪಂದಗಳಾಗಿವೆ. ಸೌದಿ ಅರೇಬಿಯಾ ಮತ್ತು ಅಮೆರಿಕ 11 ಸಾವಿರ ಕೋಟಿ ಡಾಲರ್ (ಅಂದಾಜು ₹7.15 ಲಕ್ಷ ಕೋಟಿ) ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ ಮಾಡಿವೆ. ಇದರಿಂದ ಭಯೋತ್ಪಾದನೆಯ ವಿರುದ್ಧ ಹೋರಾಡಲು ಸೌದಿಗೆ ಮತ್ತಷ್ಟು ಶಕ್ತಿ ಒದಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಜಾಗತಿಕ ರಾಜಕೀಯದ ಇತಿಹಾಸ ಬಲ್ಲವರಿಗೆ ಭಯೋತ್ಪಾದನೆಯನ್ನು ಪೋಷಿಸಿ ಬೆಳೆಸುತ್ತಿರುವ ರಾಷ್ಟ್ರಗಳಲ್ಲಿ ಸೌದಿ ಪ್ರಮುಖ ರಾಷ್ಟ್ರ ಎಂಬುದು ತಿಳಿದಿದೆ. ಅಮೆರಿಕವನ್ನು ಹೆಚ್ಚು ಕಾಡಿದ ಬಿನ್ ಲಾಡೆನ್ ಸೌದಿ ಮೂಲದವನು, 9/11 ಘಟನೆಗೆ ಕಾರಣರಾಗಿದ್ದ ಉಗ್ರರಲ್ಲಿ 15 ಉಗ್ರರು ಸೌದಿಯಿಂದ ಬಂದವರೇ ಆಗಿದ್ದರು ಎನ್ನುವುದನ್ನು ಅಮೆರಿಕ ಮರೆಯಿತೇ? ಹಾಗಾಗಿ ಈ ಹೆಚ್ಚುವರಿ ಶಸ್ತ್ರಗಳು ಯಾರ ಕೈ ಸೇರಲಿವೆ, ಹೇಗೆ ಬಳಕೆಯಾಗಲಿವೆ ಬಲ್ಲವರಾರು. ಮೇಲಾಗಿ, ಇಂಧನಕ್ಕಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳ ಗೆಳೆತನ ಬಯಸುವ, ‘ತೈಲ- ಶಸ್ತ್ರಾಸ್ತ್ರ’ ಕೊಡುಕೊಳ್ಳುವಿಕೆಗೆ ಮುಂದಾಗುವ ಅಮೆರಿಕದ ಧೋರಣೆ ಹೊಸದಲ್ಲ. ಈಗ ಆದ ಒಡಂಬಡಿಕೆ ಅದನ್ನು ಮೀರಿದ್ದೇ?

ಅಂದಹಾಗೆ, ಶೃಂಗಸಭೆಯಲ್ಲಿ ಜಾಗತಿಕ ಭಯೋತ್ಪಾದನೆಯ ಹೊರತಾಗಿ, ಇರಾನ್ ವಿರುದ್ಧ ಟೀಕಾಪ್ರಹಾರ ಕೇಳಿಬಂತು. ಟ್ರಂಪ್ ತಮ್ಮ ಭಾಷಣದಲ್ಲಿ ಇರಾನ್ ವಿಷಯ ಪ್ರಸ್ತಾಪಿಸಿ ‘ಲೆಬನಾನ್, ಇರಾಕ್ ಮತ್ತು ಯೆಮನ್‌ಗಳಲ್ಲಿ ಉಗ್ರರನ್ನು ಇರಾನ್ ಪೋಷಿಸುತ್ತಿದೆ. ಇರಾನ್ ಬೆಂಬಲದಿಂದ ಸಿರಿಯಾದ ಅಸಾದ್ ಆಡಳಿತ ನಡೆಸಿರುವ ದುಷ್ಕೃತ್ಯಗಳ ಬಗ್ಗೆ ಮಾತಿನಲ್ಲಿ ವಿವರಿಸುವುದು ಕಷ್ಟ’ ಎಂದರು. ಈ ಮಾತಿಗೆ ಅಲ್ಲಿ ನೆರೆದಿದ್ದ ಸುನ್ನಿ ಮುಸ್ಲಿಂ ಮುಖಂಡರು ಹೌದೌದೆಂದು ಗೋಣು ಅಲ್ಲಾಡಿಸಿದ್ದಾರೆ. ಸಮಾನ ಶತ್ರುವಾದ ಇರಾನ್ ವಿರುದ್ಧ ಅಮೆರಿಕ ಮತ್ತು ಸುನ್ನಿ ರಾಷ್ಟ್ರಗಳು ಮಾತಿನ ಮಳೆಗರೆಯುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅಮೆರಿಕ ಮತ್ತು ಇರಾನ್ ಇತಿಹಾಸದುದ್ದಕ್ಕೂ ಹಾವು ಮುಂಗುಸಿಯಂತೆಯೇ ವರ್ತಿಸಿವೆ. ಒಬಾಮ ಅವಧಿಯಲ್ಲಿ ಮಾತ್ರ ಇರಾನ್ ನೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವತ್ತ ಅಮೆರಿಕ ಹೆಜ್ಜೆ ಇಟ್ಟಿತ್ತು. ಮುಖ್ಯವಾಗಿ ಅಣು ಒಪ್ಪಂದಕ್ಕೆ ಇರಾನ್ ಮನವೊಲಿಸಲು ಒಬಾಮ ಮತ್ತು ಜಾನ್ ಕೆರ್ರಿ ಜೋಡಿ ಸಾಕಷ್ಟು ಶ್ರಮಿಸಿತು. ಸೌಮ್ಯವಾದಿ, ಅಭಿವೃದ್ಧಿಪರ ಎನಿಸಿಕೊಂಡಿದ್ದ ಹಸನ್ ರೌಹಾನಿ ಚುನಾವಣೆಯಲ್ಲಿ ಗೆಲ್ಲುವಂತೆ ಅಮೆರಿಕ ನೋಡಿಕೊಂಡಿತ್ತು. ಆದರೆ ಅಮೆರಿಕ ಇರಾನ್ ಜೊತೆ ಹಸ್ತಲಾಘವ ಮಾಡಿದಾಗ ಸೌದಿ ಕಳವಳಗೊಂಡಿತ್ತು. ಏಷ್ಯಾದ ದಿಗ್ಗಜ ರಾಷ್ಟ್ರಗಳಾದ ಚೀನಾ, ಭಾರತ ಮತ್ತು ಜಪಾನ್ ಜೊತೆಗೆ ತನ್ನ ಸಂಬಂಧ ಗಟ್ಟಿಗೊಳಿಸಿಕೊಳ್ಳುವತ್ತ ಮುಖ ಮಾಡಿತ್ತು. ಒಬಾಮರ ಇರಾನ್ ಓಲೈಕೆ ಇಸ್ರೇಲಿನ ಸಿಟ್ಟಿಗೆ ಕಾರಣವಾಗಿದ್ದೂ ದಿಟ. ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅಮೆರಿಕದ ಕಾಂಗ್ರೆಸ್ಸಿನಲ್ಲಿ ತಮ್ಮ ಸಿಟ್ಟನ್ನು ಜಾಹೀರು ಮಾಡಿದ್ದರು. ಹಾಗಾಗಿಯೇ ಉಭಯ ರಾಷ್ಟ್ರಗಳೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವನ್ನು ಬಯಸಿದ್ದವು.

ಅದುಬಿಡಿ, ರಿಯಾದ್ ಬಳಿಕ ಭೇಟಿಗೆ ಇಸ್ರೇಲನ್ನು ಟ್ರಂಪ್ ಜಾಣತನದಿಂದ ಆರಿಸಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಸುನ್ನಿ ಮುಸ್ಲಿಂ ಮತ್ತು ಯಹೂದಿ ರಾಷ್ಟ್ರದ ನಡುವೆ ಇರುವ ಒಡಕಿಗೆ ಟ್ರಂಪ್ ತೇಪೆ ಹಚ್ಚಲು ಮುಂದಾಗಿದ್ದಾರೆ. ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಸ್ನೇಹ ಅಲ್ಲದಿದ್ದರೂ, ಹಗೆ ಆರುವಂತೆ ಮಾಡಿದರೆ, ಆ ಭಾಗದಲ್ಲಿ ಶಾಂತಿ ನೆಲೆಸುತ್ತದೆ. ಟ್ರಂಪ್ ಶಾಂತಿ ಪತಾಕೆ ಹಿಡಿಯುತ್ತಿದ್ದಂತೆಯೇ, ಈ ಮೊದಲು ಗಡಿ ವಿಚಾರದಲ್ಲಿ ಇಸ್ರೇಲ್‌ನೊಂದಿಗೆ ತಕರಾರು ತೆಗೆದಿದ್ದ ‘ರಬ್ ಲೀಗ್’ ಇದೀಗ 1967ರ ಗಡಿ ಒಪ್ಪಂದವನ್ನು ಪುರಸ್ಕರಿಸುವುದಾಗಿ ಹೇಳಿದೆ. ‘ಇಸ್ರೇಲನ್ನು ನಾಶ ಮಾಡುತ್ತೇವೆ’ ಎಂಬುದನ್ನು ಪುನರುಚ್ಚರಿಸುತ್ತಿದ್ದ ಹಮಾಸ್, ಆ ವಾಕ್ಯವನ್ನು ಕೈ ಬಿಟ್ಟಿದೆ.

ಇನ್ನು, ಇಸ್ರೇಲ್ ಭೇಟಿಯ ವೇಳೆ ಯಹೂದಿಗಳು ಅಪೇಕ್ಷಿಸಿದಂತೆಯೇ ಟ್ರಂಪ್ ನಡೆದುಕೊಂಡಿದ್ದಾರೆ. ಇಸ್ರೇಲ್ ಅಂಗಳದಲ್ಲಿ ನಿಂತು ಇರಾನನ್ನು ಟೀಕಿಸಿದ್ದಾರೆ, ಇದುವರೆಗೆ ಅಮೆರಿಕದ ಅಧ್ಯಕ್ಷರು ಭೇಟಿಕೊಡದ ಜೆರುಸೆಲೆಮ್‌ನ ವಿವಾದಿತ ಪ್ರದೇಶದಲ್ಲಿರುವ ಪಶ್ಚಿಮ ಗೋಡೆ ಮುಟ್ಟಿ ಪ್ರಾರ್ಥಿಸಿ ಬಂದಿದ್ದಾರೆ. ಅಮೆರಿಕದ ಅಧಿಕಾರಿಗಳು ಈ ಭೇಟಿಗೆ ಸಮ್ಮತಿಸಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಾರಣವಿಷ್ಟೇ, ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ನಡುವಿನ ತಕರಾರಿಗೆ ಜೆರುಸೆಲೆಮ್ ಮುಖ್ಯ ಕಾರಣ. 1967ರ ಆರು ದಿನಗಳ ಯುದ್ಧದಲ್ಲಿ ಜೆರುಸೆಲೆಮ್ ಅನ್ನು ವಶಪಡಿಸಿಕೊಂಡ ದಿನದಿಂದ, ಅದು ಸಂಪೂರ್ಣವಾಗಿ ತನಗೆ ಸೇರಿದ್ದು ಎಂದು ಇಸ್ರೇಲ್ ವಾದಿಸುತ್ತದೆ, ಆದರೆ ಪ್ಯಾಲೆಸ್ಟೀನ್ ಇಸ್ರೇಲ್ ಒಡೆತನವನ್ನು ಒಪ್ಪುವುದಿಲ್ಲ. ಪೂರ್ವ ಜೆರುಸೆಲೆಮ್ ತನಗೆ ಸೇರಿದ್ದು, 1967ರ ಹಿಂದಿನ ಗಡಿ ರೇಖೆಯನ್ನು ಇಸ್ರೇಲ್ ಗೌರವಿಸಬೇಕು ಎನ್ನುತ್ತದೆ. ಹಾಗಾಗಿ ಜಗತ್ತಿನ ಬಹುತೇಕ ದೇಶಗಳು ಜೆರುಸೆಲೆಮ್ ಅನ್ನು ಇಸ್ರೇಲಿನ ರಾಜಧಾನಿ ಎಂದು ಅನುಮೋದಿಸಿಲ್ಲ, ತಮ್ಮ ರಾಜತಾಂತ್ರಿಕ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಿಲ್ಲ. ಈ ಹಿಂದೆ ನೆತನ್ಯಾಹು ಅಮೆರಿಕಕ್ಕೆ ಭೇಟಿಕೊಟ್ಟಾಗ, ಅವರನ್ನು ಖುಷಿಪಡಿಸಲೋ ಎಂಬಂತೆ ಟ್ರಂಪ್ ‘ಅಮೆರಿಕದ ರಾಜತಾಂತ್ರಿಕ ಕಚೇರಿಯನ್ನು ಜೆರುಸೆಲೆಮ್‌ಗೆ ಸ್ಥಳಾಂತರಿಸುತ್ತೇವೆ’ ಎಂದಿದ್ದರು. ಅದಕ್ಕೆ ಪೀಠಿಕೆಯಾಗಿ ಜೆರುಸೆಲೆಮ್‌ಗೆ ಭೇಟಿ ನೀಡಿದರೆ? ನೋಡಬೇಕು. 

ಟ್ರಂಪ್ ಪ್ರವಾಸವನ್ನು ಭಾರತದ ದೃಷ್ಟಿಯಿಂದ ನೋಡುವುದಾದರೆ, ಇಸ್ಲಾಮಿಕ್ ರಾಷ್ಟ್ರಗಳ ಸಭೆಯಲ್ಲಿ ಮಾತನಾಡುವಾಗ ಟ್ರಂಪ್, ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರ ಎಂದು ಭಾರತದ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆಗ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಮೊದಲ ಸಾಲಿನಲ್ಲೇ ಕುಳಿತಿದ್ದರು ಎಂಬುದು ಇಲ್ಲಿ ಮುಖ್ಯ. ಇದು ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸಲು ಪ್ರಯತ್ನಿಸುತ್ತಿರುವ ಭಾರತಕ್ಕೆ ದೊರೆತ ಸಣ್ಣ ಯಶಸ್ಸು ಎನ್ನಲಡ್ಡಿಯಿಲ್ಲ. ಆದರೆ ಹೆಚ್ಚು ಹಿಗ್ಗುವಂತಿಲ್ಲ. ಈ ಹಿಂದಿನ ಅಮೆರಿಕ ಅಧ್ಯಕ್ಷರು ಭಾರತ-ಪಾಕಿಸ್ತಾನದ ವಿಷಯದಲ್ಲಿ ಗೋಡೆಯ ಮೇಲೆ ದೀಪ ಇಟ್ಟಂತೆಯೇ ವರ್ತಿಸಿದ್ದಾರೆ. ಭಾರತ-ಪಾಕಿಸ್ತಾನದ ವಿಷಯದಲ್ಲಿ ಟ್ರಂಪ್ ನಿಲುವು ಏನು ಎನ್ನುವುದು ಇನ್ನೂ ಅನಾವರಣಗೊಂಡಿಲ್ಲ.

ಒಟ್ಟಾರೆಯಾಗಿ, ಟ್ರಂಪ್ ತಮ್ಮ ಮೊದಲ ಅಧ್ಯಕ್ಷೀಯ ವಿದೇಶ ಪ್ರವಾಸದ ಮೂಲಕ ಮೂರು ಪ್ರಮುಖ ಮತ ಕೇಂದ್ರಗಳನ್ನು ಹಾದು ಬಂದಂತಾಗಿದೆ. ಈ ಮೂರೂ ಕೇಂದ್ರಗಳು ಐಎಸ್ ಮತ್ತು ಇರಾನ್ ಅಣ್ವಸ್ತ್ರ ಯೋಜನೆಯನ್ನು ವಿರೋಧಿಸುತ್ತಿವೆ ಎನ್ನುವುದನ್ನು ಗಮನಿಸಬೇಕು. ಈ ಮೂಲಕ ಟ್ರಂಪ್, ಐಎಸ್ ಮತ್ತು ಇರಾನ್ ಗುರಿಯಾಗಿಸಿಕೊಂಡು ಬಾಣ ಹೂಡಿದ್ದಾರೆ. ಅದು ಗುರಿ ತಲುಪುತ್ತದೆಯೋ, ಶಿಯಾ ರಾಷ್ಟ್ರಗಳ ವೈರತ್ವ ಅಮೆರಿಕಕ್ಕೆ ತಿರುಗು ಬಾಣವಾಗುತ್ತದೆಯೋ ಅರಿಯುವುದಕ್ಕೆ ಸಮಯ ಬೇಕು. ಟ್ರಂಪ್ ಸೌದಿ ಭೇಟಿಯ ಕುರಿತು ಸಂಪಾದಕೀಯ ಬರೆದಿರುವ ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್’, ‘ಟ್ರಂಪ್ ಇನ್ನು ಹೆಚ್ಚೆಂದರೆ 8 ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷರಾಗಿರಬಹುದು. ಆದರೆ ಉಗ್ರರ ಬೇರುಗಳು ಆ ನಂತರವೂ ಉಳಿಯಬಲ್ಲಷ್ಟು ಆಳಕ್ಕೆ ಇಳಿದಿವೆ. ಸೌದಿ ‘ಇಸ್ಲಾಮಿಕ್ ಮಿಲಿಟರಿ ಕೂಟ’ದ ಅಡಿಯಲ್ಲಿ ಸುನ್ನಿ ರಾಷ್ಟ್ರಗಳನ್ನು ಒಟ್ಟಾಗಿಸುತ್ತಿದೆ. ಇರಾನ್ ಶಿಯಾ ಮುಸ್ಲಿಮರ ಗುಂಪು ಬಳಸಿ ಮಧ್ಯಪ್ರಾಚ್ಯದಲ್ಲಿ ತನ್ನ ಪ್ರಭಾವ ಬೆಳೆಸಲು ನೋಡುತ್ತಿದೆ. ಈ ಗುಂಪುಗಾರಿಕೆಯಿಂದ ಯಾವ ಲಾಭವೂ ಇಲ್ಲ. ಭಯೋತ್ಪಾದನೆಯನ್ನು ಬುಡಸಮೇತ ಕಿತ್ತು ಹಾಕಬೇಕಾದರೆ, ಆ ದುಷ್ಟ ಶಕ್ತಿಗಳ ವಿರುದ್ಧ ಮುಸ್ಲಿಂ ರಾಷ್ಟ್ರಗಳೇ ಸೆಟೆದು ನಿಲ್ಲಬೇಕು, ಹೋರಾಟದ ನೇತೃತ್ವ ವಹಿಸಬೇಕು’ ಎಂದಿದೆ. ಈ ಮಾತೇನೋ ದಿಟ. ಆದರೆ ಕಾರ್ಯಸಾಧುವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT