ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಕೃಷ್ಟ ಇರಾನಿಯನ್ ಸಿನಿಮಾ ನೆನಪಿಸುವ `ಹಿಂಗ್ಲಿಶ್' ಚಿತ್ರ

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

`ಶಿಪ್ ಆಫ್ ಥೀಸಿಯಸ್' ಎಂಬ ಹೆಸರಿನ ಚಿತ್ರ ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಲ್ಟಿಪ್ಲೆಕ್ಸ್ ಸಿನಿಮಾ ಅನ್ನುತ್ತಾರಲ್ಲ, ಇದು ಅಂಥದ್ದು. ಕರ್ನಾಟಕದ ಇತರ ಊರುಗಳಲ್ಲಿ ಇದು ಬಿಡುಗಡೆ ಆಗುವುದು ಅಸಂಭವ. ಭಾರತದ ಐದಾರು ನಗರಗಳಲ್ಲಿ ಮಾತ್ರ ಪ್ರದರ್ಶನವಾಗುತ್ತಿರುವ ಈ ಚಿತ್ರದ ನಿರ್ದೇಶಕ ಆನಂದ್ ಗಾಂಧಿ ಈ ಹಿಂದೆ `ಸಾಸ್ ಬಹು' (ಅತ್ತೆ ಸೊಸೆ ಜಗಳದ) ಹಿಂದಿ ಧಾರಾವಾಹಿಗಳಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದರು. 33 ವರ್ಷ ವಯಸ್ಸು. ಇದು ಅವರ ಮೊದಲ ಪೂರ್ಣ ಪ್ರಮಾಣದ ಚಿತ್ರ. ನಟ ನಟಿಯರ ಪೈಕಿ ಕೂಡ ಯಾರೂ ಅಂತ ಪ್ರಸಿದ್ಧರಲ್ಲ.

ಶುಕ್ರವಾರ ರಾತ್ರಿ ನಾನು ಈ `ಹಿಂಗ್ಲಿಶ್' ಚಿತ್ರವನ್ನು ಪಿ.ವಿ.ಆರ್‌ನಲ್ಲಿ ನೋಡಿದಾಗ ಹಾಲ್ ತುಂಬಿತ್ತು. (ಈ ಚಿತ್ರದಲ್ಲಿ ಒಂದು ಪಾತ್ರ ಕನ್ನಡ ಮಾತಾಡುವ ಆಕ್ಟಿವಿಸ್ಟ್ ಅಜ್ಜಿ. ಚಿತ್ರದ ಒಂದು ದೃಶ್ಯದಲ್ಲಿ ಕನ್ನಡ ಮಾತು ಕೇಳಿಬರುತ್ತದೆ). ಕಡಿಮೆ ವೆಚ್ಚದಲ್ಲಿ ಚಿತ್ರ ನಿರ್ಮಿಸಿರುವ ತಂಡ ಪ್ರಚಾರಕ್ಕೆ ಏನೇನೂ ದುಡ್ಡು ಖರ್ಚು ಮಾಡಿಲ್ಲ. ಆದರೂ ಚಿತ್ರದ ಬಗ್ಗೆ ಒಳ್ಳೆಯ ಮಾತು ಕೇಳಿ ಜನ ನೆರೆದಿದ್ದರು. ಅಲ್ಲಲ್ಲಿ ಡಾಕ್ಯುಮೆಂಟರಿಯಂತಿರುವ ನಿರೂಪಣೆಯನ್ನು ಒಪ್ಪಿ ಪೂರ್ಣ ಚಿತ್ರ ನೋಡಿದರು.

ನಿಮಗೆ ನೆನಪಿರಬಹುದು. ದೀಪಾ ಮೆಹ್ತಾ ಚಿತ್ರವೊಂದರ ಸಲಿಂಗ ಕಾಮವನ್ನು ಸೂಚಿಸುವ ದೃಶ್ಯ ಬಂದಾಗ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಜನ ಕೂಗಿ, ಶಿಳ್ಳೆ, ಕೇಕೆ ಹಾಕುತ್ತಿದ್ದರು. ಚಾಪ್ಲಿನ್ ಎಂದಿನಂತೆ ಚೇಷ್ಟೆ ಮಾಡದೆ ಸಹಜವಾಗಿ ನಟಿಸಿದ ಚಿತ್ರ ಒಂದು ತೆರೆಕಂಡಾಗ ಪ್ರೇಕ್ಷಕರು ಅಂದಿನ ಗ್ಯಾಲಕ್ಸಿ ಚಿತ್ರಮಂದಿರಕ್ಕೆ ಕಲ್ಲು ತೂರಿದ್ದರು. ಆದರೆ `ಶಿಪ್ ಆಫ್ ಥೀಸಿಯಸ್' ಚಿತ್ರದ ವಿಭಿನ್ನ ನಿರೂಪಣೆಯನ್ನು ಪ್ರೇಕ್ಷಕರು ತಾಳ್ಮೆಯಿಂದ, ಆಸಕ್ತಿಯಿಂದ ನೋಡುತ್ತಿದ್ದಾರೆ. ಇದರ ಯಶಸ್ಸು ಹೊಸ ವರಸೆಯ ಚಿತ್ರ ಮಾಡಲು ಹೊರಟವರಿಗೆ ಹುರುಪು ತುಂಬೀತು.

ಹೋದ ವರ್ಷ ನಾನು ಮುಂಬೈಯಲ್ಲಿ ನೋಡಿದ ಚಿತ್ರ `ಜಿಂದಗಿ ನಾ ಮಿಲೇಗಿ ದೊಬಾರಾ'. ಒಳ್ಳೆಯ ಚಿತ್ರ ಎಂದು ಪತ್ರಿಕೆಗಳು, ಪಿಕ್ಚರ್ ನೋಡಿದವರು ಹೊಗಳುತ್ತಿದ್ದರು. ಮೂರು ಜನ ಸ್ನೇಹಿತರಲ್ಲಿ ಒಬ್ಬನಿಗೆ ಮದುವೆ ನಿಶ್ಚಯವಾಗಿರುತ್ತದೆ. ಮದುವೆಗೆ ಮುನ್ನ ಮೂವರೂ ಸೇರಿ ಒಂದು ಟ್ರಿಪ್ ಮಾಡಬೇಕು ಎಂದು ಸ್ಪೇನ್ ದೇಶಕ್ಕೆ ತೆರಳುತ್ತಾರೆ. ಅವರ ತುಂಟಾಟ, ಪ್ರೀತಿಯ ಹುಡುಕಾಟ, ಹೊಸ ಯುಗದ ಏಳು ಬೀಳನ್ನು ನಗರ ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೋರಿಸಲು ಯತ್ನಿಸಿದ ಚಿತ್ರ ಅದು.

ನಿರ್ದೇಶಕಿ ಜೋಯಾ ಅಖ್ತರ್. ಅದು ಸ್ಮಾರ್ಟ್ ಚಿತ್ರವೇ ಹೊರತು ಉತ್ತಮ ಚಿತ್ರವಲ್ಲ ಎಂದು ನನಗೆ ಆಗ ಅನ್ನಿಸಿತ್ತು. ನನ್ನ ಅಸಮಾಧಾನಕ್ಕೆ ಕಾರಣ ನಾನು ನೋಡಲು ಪ್ರಾರಂಭಿಸಿದ್ದ ಇರಾನ್ ಪ್ರದೇಶದ ಚಿತ್ರಗಳಿರಬಹುದು. ಬೋಮಾನ್ ಗೊಬಾಡಿ ರೀತಿಯ ನಿರ್ದೇಶಕರ ಸರಳ, ಸೂಕ್ಷ್ಮ ನಿರೂಪಣೆ ವಿಸ್ಮಯ ಹುಟ್ಟಿಸುತ್ತದೆ. ಅಲ್ಪಸಂಖ್ಯಾತರ ಭಾಷೆಯಲ್ಲಿ, ಚಿತ್ರಮಂದಿರವೇ ಇಲ್ಲದ ಪ್ರದೇಶದಲ್ಲಿ ಕೂಡ ಚಿತ್ರ ತೆಗೆಯಬಹುದು ಎಂದು ಇಂಥ ನಿರ್ದೇಶಕರು ತೋರಿಸಿ ಕೊಟ್ಟಿದ್ದರು.

`ಜಿಂದಗಿ ನಾ ಮಿಲೇಗಿ ದೊಬಾರಾ' ಚಿತ್ರಕ್ಕೆ ಹೋಲಿಸಿದರೆ `ಶಿಪ್ ಆಫ್ ಥೀಸಿಯಸ್' ನಿಜಕ್ಕೂ ಸೂಕ್ಷ್ಮ ಚಿತ್ರ. ಕುರುಡಿಯೊಬ್ಬಳು ಫೋಟೋಗ್ರಾಫರ್ ಆಗಿ ತೆಗೆಯುವ ಚಿತ್ರಗಳು ಎಲ್ಲರ ಮೆಚ್ಚುಗೆ ಗಳಿಸುತ್ತವೆ. ಅರಬ್ ಮೂಲದ ಇವಳು ಮುಂಬೈನ ಚಿತ್ರಗಳನ್ನು ಶಬ್ಧ ಕೇಳಿ ಸೆರೆ ಹಿಡಿಯುತ್ತಾಳೆ. ಅವಳಿಗೆ ಅಪರೇಷನ್ ಆಗಿ ದೃಷ್ಟಿ ಹಿಂತಿರುಗಿ ಬರುತ್ತದೆ. ಆಮೇಲೆ ಅವಳು ಸೆರೆಹಿಡಿಯುವ ಚಿತ್ರಗಳು ಅವಳ ಮನಸ್ಸಿಗೆ ಏಕೋ ಇಷ್ಟವಾಗುವುದಿಲ್ಲ. ಮತ್ತೆ ಕಣ್ಣು ಕಟ್ಟಿಕೊಂಡು ತನ್ನ ಹಳೆಯ ಕಲಾವಂತಿಕೆಯನ್ನು ಪಡೆಯಲು ಪ್ರಯತ್ನಿಸುತ್ತಾಳೆ. ಒಬ್ಬ ಆಧುನಿಕ, ಇಂಗ್ಲಿಷ್ ಮಾತಾಡುವ ಸಂತ ಜೈನ ಧರ್ಮವನ್ನು ಹೋಲುವ ಒಂದು ಧರ್ಮವನ್ನು ಪಾಲಿಸುತ್ತಿರುತ್ತಾನೆ.

ಪ್ರಾಣಿಗಳನ್ನು ಹಿಂಸೆ ಮಾಡಿ ಫಾರ್ಮಾ ಕಂಪನಿಗಳು ಔಷಧಿ ತಯಾರಿಸುತ್ತವೆ ಎಂದು ನೊಂದುಕೊಂಡು ನ್ಯಾಯಾಲಯದಲ್ಲಿ ಕೇಸ್ ಹಾಕಿರುತ್ತಾನೆ. ತನಗೆ ಲಿವರ್ ತೊಂದರೆಯಾಗಿ ಪ್ರಾಣಕ್ಕೆ ಕುತ್ತು ಬಂದಾಗಲೂ ಔಷಧಿ ಬೇಡ ಎನ್ನುತ್ತಾನೆ. ಮೂರನೇ ಮುಖ್ಯ ಪಾತ್ರ ಒಬ್ಬ ಸ್ಟಾಕ್ ಬ್ರೋಕರ್. ದುಡ್ಡೇ ಅವನ ಜೀವನದ ಕೇಂದ್ರಬಿಂದು. ಕರುಣೆ, ದಯೆಯಲ್ಲಿ ನಂಬಿಕೆ ಇರುವವನು. ಅವನನ್ನು ಸರಿ ತಪ್ಪಿನ ಪ್ರಶ್ನೆಗಳು ತುಂಬ ಕಾಡುತ್ತವೆ. ಕನ್ನಡತಿ ಅಜ್ಜಿ ಆಸ್ಪತ್ರೆಯಲ್ಲಿದ್ದಾಗ ಆಕೆಯ ಜೊತೆ ವಾದದಲ್ಲಿ ತೊಡಗುತ್ತಾನೆ. ಅವನಿಗೆ ಮೂತ್ರಪಿಂಡ ಕಸಿ ಆಗಿರುತ್ತದೆ. ಅದೇ ಹೊತ್ತಿಗೆ ಮೂತ್ರಪಿಂಡ ಹಗರಣ ಬಯಲಾಗುತ್ತದೆ. ತನ್ನ ಕಿಡ್ನಿ ಕಳ್ಳ ಮಾರಿರಬಹುದೆಂದು ದುಗುಡಗೊಂದು ಕಿಡ್ನಿ ದಾನಿಯನ್ನು ಹುಡುಕಲು ಹೊರಡುತ್ತಾನೆ. ಈ ಪತ್ತೇದಾರಿ ಅವನನ್ನು ಸ್ವೀಡನ್‌ನ ಸ್ಟಾಕ್ಹೋಮ್ ನಗರಕ್ಕೆ ಕರೆದೊಯ್ಯುತ್ತದೆ. ಈ ಮೂರೂ ಕಥೆಯನ್ನು ನವಿರಾದ ಸಮಾಪ್ತಿಗೆ ಆನಂದ್ ಗಾಂಧಿ ತರುತ್ತಾರೆ.

ಸಂಬಂಧಿಕರೊಬ್ಬರನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದಾಗ ಈ ಕಥೆಯ ಮೂಲ ಸ್ವರೂಪ ಆನಂದ್ ಗಾಂಧಿಯವರಿಗೆ ಹೊಳೆಯಿತಂತೆ. ನಂತರ ಸ್ನೇಹಿತರ ಜೊತೆ ಕೂತು ಕಥೆ, ಚಿತ್ರಕಥೆಯನ್ನು ಮುಗಿಸಿದ್ದಾರೆ. ಚಿತ್ರ ತಯಾರಿಸಲು ಮೂರು ವರ್ಷ ಹಿಡಿದಿದೆ. ಕ್ಯಾನನ್ ಸ್ಟಿಲ್ ಕ್ಯಾಮೆರಾದ ವೀಡಿಯೊ ಸೌಲಭ್ಯವನ್ನು ಬಳಸಿದ್ದರಿಂದ ಕೂಡ ನಿರ್ಮಾಣ ಖರ್ಚು ಕಡಿಮೆಯಾಗಿದೆ.

ಒಂದು ಹಡಗಿನ ಒಂದೊಂದೇ ಭಾಗವನ್ನು ಬದಲಾಯಿಸುತ್ತಾ ಬಂದಾಗ ಕೊನೆಗೆ ಉಳಿಯುವುದು (ಅಥವಾ ಮೂಡುವುದು) ಅದೇ ಹಡಗೋ ಅಥವಾ ಬೇರೆ ಯಾವುದೋ ಹಡಗೋ ಎಂಬ ಕ್ಲಾಸಿಕ್ ತಾತ್ವಿಕ ಪ್ರಶ್ನೆಗೆ ಈ ಚಿತ್ರ ಉತ್ತರಗಳನ್ನು ಹುಡುಕುತ್ತದೆ ಎಂದು ನಿರ್ಮಾಪಕರು ಹೇಳುತ್ತಾರೆ. ಆನಂದ್ ಗಾಂಧಿ ತಾವು ಬರೆದ ಟೆಲಿವಿಷನ್ ಧಾರಾವಾಹಿಗಳ ಬಗ್ಗೆ ಅಸಹ್ಯ ಪಟ್ಟುಕೊಂಡು ಕೊನೆಗೆ ಇಂಥ ಹೆಮ್ಮೆ ಪಡುವ ಚಿತ್ರವೊಂದನ್ನು ಮಾಡಿದ್ದಾರೆ.

ಅಲ್ಲಲ್ಲಿ ಮಾತು ಮೊಟಕುಗೊಳಿಸಬಹುದಾಗಿತ್ತು ಎಂದು ಅನಿಸಿದರೂ ಇದು ಒಳ್ಳೆಯ ಚಿತ್ರ. ಭಾರತೀಯ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣದ ಜೀವನದ ತುಣುಕುಗಳನ್ನು ಹಿಡಿದಿಟ್ಟಿದೆ. ಉತ್ಕೃಷ್ಟ ಇರಾನಿಯನ್ ಚಿತ್ರಗಳ ಅನುಭವವನ್ನು ನೆನಪಿಸುವ, ಕನ್ನಡ ನಿರ್ದೇಶಕರಿಗೆ ಸ್ಫೂರ್ತಿಯಾಗಬಹುದಾದ ಸಿನಿಮಾ ಇದು. ಈ ವಾರ ಚಿತ್ರ ನೋಡುವ ಪ್ಲಾನ್ ಇದ್ದರೆ `ಶಿಪ್ ಆಫ್ ಥೀಸಿಯಸ್' ನೋಡಿ ಬನ್ನಿ.

ರಾಜಕಾರಿಣಿಗಳ ಆಹಾರ
ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಪ್ರಕಾರ ಮುಂಬೈಯಲ್ಲಿ ರೂ.12ಕ್ಕೆ ಒಳ್ಳೆ ಊಟ ಸಿಗುತ್ತದಂತೆ. ಇನ್ನೊಬ್ಬ ಸಂಸದನ ಪ್ರಕಾರ, ಇದೇ ಊಟಕ್ಕೆ ರೂ.5 ಸಾಕಂತೆ. ಹೀಗೇಕೆ ಈ ರಾಜಕೀಯದವರು ಬಡಬಡಿಸುತ್ತಿದ್ದಾರೆ? ಎಲ್ಲವನ್ನೂ ಅಗ್ಗವಾಗಿ, ಸಹಾಯಧನದಿಂದ ಪಡೆಯುವ ಅವರಿಗೇನು ನಿಜ ಜಗತ್ತಿನ ಬೆಲೆಗಳ ಅರಿವೇ ಇಲ್ಲವೇ? ನನ್ನ ಹಳೆಯ ಸಹೋದ್ಯೋಗಿಯೊಬ್ಬರು ಬರೆದರು:

`ಮುಂಬೈಯಲ್ಲಿ ಭಿಕ್ಷೆ ಬೇಡುತ್ತಿದವನಿಗೆ ಮೊಸರನ್ನ ಕೊಡಿಸಿದೆ, ರೂ. 60 ಖರ್ಚಾಯಿತು'. ಟ್ವಿಟ್ಟರ್‌ನಲ್ಲಿ ರಮೇಶ್ ಶ್ರೀವಾಸ್ತವ್ ಎಂಬುವರ ಒಂದು ಜೋಕ್: ಏನಪ್ಪಾ ರಾಜ್ ಬಬ್ಬರ್ , ಮುಂಬೈಯಲ್ಲೂ ಪಾರ್ಲಿಮೆಂಟ್ ಕ್ಯಾಂಟೀನ್ ಶಾಖೆ ಏನಾದರೂ ಇದೆಯಾ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT